Monday, 14 November 2016

ಈವತ್ತು ಪೂರ ಖಾನದಾನ್ ಒಟ್ಟಿಗೆ ಸೇರೊದು ಅಂತ ಪ್ಲಾನ್ ಆಗಿತ್ತು . ಬೆಳಿಗ್ಗೆ ಬೆಳಿಗ್ಗೆ ಅತ್ತೆಗೆ ವಾರಗಿತ್ತಿಯರಿಗೆ ಕರೆ ಮಾಡಿ ಮಂಜು ಬರ್ತಾರೆ ಕರ್ಕೊಂಡ್ ಹೋಗೋಕೆ ರೆಡಿ ಆಗಿರಿ ಅಂತ ಹೇಳಿ ಮುಗಿಸಿದೆ . ಇದ್ದಬದ್ದ ಆಪೀಸ್ ಕೆಲಸ ಬೇಗ ಮುಗಿಸೋಣ ಅದಕ್ಕೆ ಮೊದಲು ಮಂಜುಗೆ ಕರೆ ಮಾಡಿಬಿಡೋಣ ಅಂತ ಮಾಡಿದೆ. ಮೊಬೈಲ್ ಅಲ್ಲಿ ಇರೋ ಅಂಕಿ, ಇನ್ನೇನು ನಂಬರ್ ಒತ್ತೊದಲ್ಲ ಏನಲ್ಲ ಅಂತ ಎಂದಿನಂತೆ ಕರೆ ಕೊಟ್ಟೆ. ಒಂದಷ್ಟು ರಿಂಗ್ ಆದ ನಂತರ 'ಹಲೋ ಹೇಳಿ' ಅಂತ ಹೇಳ್ತು ಒಂದು ಹೆಣ್ಣು ದನಿ . ಬೆಚ್ಚಿ ಬಿದ್ದ ಹಾಗೆ ಆಯ್ತು . ಒಂದು ಕ್ಷಣ ಏನೇನೋ ಯೋಚನೆ, ಯಾಕೆ ಏನಾಯ್ತು ಮಂಜುಗೆ ಅಂತೆಲ್ಲ.. ಮತ್ತೆ 'ಮಂಜು' ಅಂದೆ . 'ಯಾರು ಹೇಳಿ' ಅಂದ್ರು . ನಾನು ಸಾರೀ ಮಾ , ರಾಂಗ್ ನಂಬರ್ ಅನಿಸುತ್ತೆ ಸಾರಿ ' ಅಂತ ಕಟ್ ಮಾಡಿದೆ. ಎಲ್ಲೋ ಏನೋ ತಪ್ಪಾಗಿ ರಾಂಗ್ ನಂಬರ್ಗೆ ಹೋಗಿದೆ ಅಂತ ಹೇಳಿ ಮತ್ತೆ ಕರೆ ಮಾಡಿದೆ . ಮತ್ತೆ ಅದೇ ಹೆಣ್ಣು ದನಿ !!. 'ಏನ್ ಹೇಳಿ" ಅಂದ್ರು . ಯಾಕೋ ಸರಿ ಇಲ್ಲ ಅಂತ ಮತ್ತೆ ಕ್ಷಮೆ ಕೇಳಿ ಲ್ಯಾಂಡ್ಲೈನ್ ಇಂದ ಕರೆ ಮಾಡಿದೆ . ಮತ್ತೆ ಆ ಸಂಖ್ಯೆಗೇ ಹೋಗಬೇಕೆ ... ಅದೇ ಹೆಣ್ಣು ಮಗಳ ದನಿ... ನಾ ಮಾತಾಡಲೇ ಇಲ್ಲ ಮಾತಾಡಿದ್ರೆ ಎಲ್ಲಿ ಏನು ಆಟ ಆಡ್ತಾ ಇದ್ದಾರೆ ಅಂತ ತಿಳಿತಾರೋ ಅಂತ ಹಾಗೆ ಫೋನ್ ಕಟ್ ಮಾಡಿ ಸುಮ್ಮನಾಗಿಬಿಟ್ಟೆ . ಮಂಜುನೆ ಮಾಡಿದಾಗ ಮಾತಾಡಿದ್ರೆ ಆಯ್ತು ಬಿಡು ಅಂತ . ....
ಎಷ್ಟೋ ಸಾರಿ ನನಗೇ ಹಾಗೆ ಕೆಲವೊಮ್ಮೆ ಕರೆ ಬಂದಾಗ, ಅದೆಷ್ಟ್ ಸಾರಿ ಬೈಕೊಂಡಿದ್ದೆ . ಯಾವೋ ತರಲೆಗಳು ಬೇಕ್ಬೇಕಂತ ತಲೆ ತಿಂತಾವೆ ಅಂತೆಲ್ಲ ಬೈಕೊಳ್ತಾ ಇದ್ದೆ .. ಅಲ್ಲಾ , ಅಲ್ಪಸ್ವಲ್ಪ ತಿಳಿದಿರೋ ನನ್ನಿಂದ ಹಿಂಗೆಲ್ಲ ತಪ್ಪಾಗುತ್ತೆ ಅಂದ್ರೆ , ಪಾಪ ಏನೂ ತಿಳಿದೇ ಏನೋ ಅರ್ಜೆಂಟ್ ಅಂತ ಕರೆ ಮಾಡಿ ನನ್ನ ನಂಬರ್ಗೆ ಬಂದಿರಬಹುದೆಂದು ಅಂದುಕೊಳ್ಳದೆ 'ನೋಡ್ಕೊಂಡ್ ಫೋನ್ ಮಾಡೋದಲ್ವ' ಅಂತ ರೇಗಿದ್ದು ಕೂಡ ಇದೆ !!! ಅನುಭವಿಸಿದ್ರೆ ಮಾತ್ರ ಅರಿವಾಗೋದು ಅನ್ನೋದು ನಿಜವೇನೋ .....!!!!.

Tuesday, 25 October 2016

ಲಕ್ಷ್ಮಿ ತನ್ನ ಪೂಜೆಯಿಂದ ತುಂಬಾ ಪ್ರಸನ್ನಗೊಂಡಿದ್ದಳು. ಜೊತೆಗೆ ಒಂದಷ್ಟು ಅಹಂ, ಜಂಬ ಕೂಡ ... 
ಗಂಡನಿಗೆ ಹೇಳಿದ್ಳು 'ನೋಡಿದ್ರಾ, ನಾ ಅಂದ್ರೆ ಹೆಂಗೆ, ನಾನು ಅಂದ್ರೆ ಬೇಡ ಅನ್ನೋರೇ ಇಲ್ಲ, ಪೂಜೆ, ಸೇವೆ, ನೈವೇದ್ಯ ಎಲ್ಲಾ ನೋಡಿದ್ರಾ? ದೇವಾನುದೇವತೆಗಳಲ್ಲಿ ನಾನೇ ಶ್ರೇಷ್ಠಳು!' 
ವಿಷ್ಣು ನಕ್ಕ .. 
'ಅದ್ಯಾಕೆ ಆ ನಗು? ನನ್ನ ಮಾತಲ್ಲಿ ನಂಬಿಕೆ ಇಲ್ವಾ ?ಅಲ್ಲಿ ನೋಡಿ ಭೂಮಿಯಲ್ಲಿ' ಅಂದ್ಳು 
ಅವಳು ಹೇಳಿದ್ದು ಯಾವುದು ಸುಳ್ಳಿರಲಿಲ್ಲ . ಭೂಮಿ ತುಂಬಾ ಅವಳಿಗಾಗಿ ನೈವೇದ್ಯ, ಹರಕೆ, ವೈಭವ ಓಹ್ ... ಅವಳನ್ನ ಬೇಡ ಎನ್ನುವವರೇ ಇಲ್ಲ .. ವಿಷ್ಣು ಕೂಡ ಹೆಂಡತಿಯ ಕಡೆ ಅಭಿಮಾನದಿಂದ ನೋಡಿದ . 
ಆದ್ರೂ ಆ ಅಹಂ...
ಹೆಂಡತಿಗೆ ಅಲ್ಲೊಂದು ಕಡೆ ನೋಡಲು ಹೇಳಿದ . ಅಲ್ಲೊಬ್ಬ ವ್ಯಕ್ತಿ ಸತ್ತಿದ್ದ.. "ಇವನಿಗೂ ನಿನ್ನ ಅಗತ್ಯ ಇದೆಯೇ ಪ್ರಿಯೆ ?" ಎಂದ
ಲಕ್ಷ್ಮಿ ಒಂದು ಕ್ಷಣ ವಿಚಲಿತಳಾದಳು .. ಮತ್ತೆ ಸ್ತಬ್ದಳಾದಳು ...
"ನಾನು" ಇರೋವರೆಗೂ ಮಾತ್ರ ನಿನ್ನ ಅಗತ್ಯ ಲಕ್ಷ್ಮಿ .. 'ನಾನು' ಅಂದ್ರೆ ಒಳಗಿನ ಉಸಿರು , 'ನಾನು' ಅಂದ್ರೆ ಜೀವಾತ್ಮ ........ ಮತ್ತೆ 'ನಾನು' ಅಂದ್ರೆ ಸ್ವಾರ್ಥ ಕೂಡ!!ಅಂದ .
ನೆನ್ನೆ ಮನೆಗೆ ಬಂದ ಹಿರಿಯರೊಬ್ಬರು ಹೇಳಿದ ಕಥೆ ...
ಹಂಚಿಕೊಳ್ಳಬೇಕು ಅನಿಸ್ತು
ಮುಡಿ ತೊಳೆದು ಸಿಕ್ಕಾದ ಜಡೆಯ ಬಿಡಿಸುವಂತೆ 
ಬದುಕ ಸಿಕ್ಕುಗಳ ಬಿಡಿಸುವಂತಾಗಿದ್ದರೆ ....... 
ಅಂದಾಗುತ್ತಿರಲ್ಲ 
ಮಹಾಭಾರತ ರಾಮಾಯಣಗಳು .... 
ಇಂದು ನಡೆಯುತ್ತಿರಲಿಲ್ಲ 
ಅದರ ಮುಂದುವರಿದ ಭಾಗಗಳು ಮತ್ತದರ ಉಪಕಥೆಗಳು ....
ಫೇಸ್ಬುಕ್ ಸೇರಿದ ಹೊಸದು. ಇಲ್ಲಿಯ ಫಾರ್ಮಾಲಿಟಿಸ್ಗಳು/ಔಪಚಾರಿಕತೆ ಗೊತ್ತಿಲ್ಲದ ಕಾಲ.. ಮೊದ್ಲೇ ಒಂದ್ ತರ ಬಾಳೆಹಣ್ಣಿನ ಗುಡಾಣದಲ್ಲಿ ಬೆಳೆದವಳು. ಪ್ರಪಂಚಕ್ಕೆ ತೆರೆದುಕೊಂಡಿರುವುದು ಕಡಿಮೆಯೇ. ಒಂಚ್ಚುರು ಚೆನ್ನಾಗಿ ಮಾತಾಡಿದ್ರೆ ಸಾಕು 'ಓಹ್ , ತುಂಬಾ ಒಳ್ಳೆಯವರು' ಅಂದ್ಕೊಳ್ತಾ ಇದ್ದೆ ಕೇಳೋದೇ ಸಾಕು ಅಂತ ಪೂರಾ bio-data ಕೊಟ್ಬಿಡ್ತಾ ಇದ್ದೆ ..ಅದೇನ್ ಪುಣ್ಯವೋ ಇಲ್ಲ ದೇವ್ರ ದಯೆನೋ ಏನೋ ಕಷ್ಟಕ್ಕೆ ಸಿಕ್ಕಿಕೊಂಡಿದ್ದು ಕಡಿಮೆಯೇ.. ಕೆಲವೊಂದು ಅನಪೇಕ್ಷಿತ ಸಣ್ಣ ಪುಟ್ಟ ಮುಜುಗರಗಳಿಗೆ ಒಳಗಾಗಿದಾಗ ಬೆನ್ನ ಹಿಂದೆಯೇ ಇದ್ದು ಜೊತೆ ನೀಡಿದ ಆಪತ್ಬಾಂಧವರು ಇಂದಿಗೂ ಅದೇ ಆತ್ಮೀಯತೆ ಉಳಿಸಿಕೊಂಡಿರುವುದು ಒಂದು ವರವೇನೋ ಎನ್ನುವಂತೆ...
ಮೊನ್ನೆ ಮೊನ್ನೆ ಗೆಳತಿಯೊಬ್ಬರು ಮೆಸೇಜ್ ಮಾಡಿ 'ನಿನಗೆ __ ಗೊತ್ತಾ ?' ಅಂದ್ರು. 'ಹ್ಮ್ , ಮೊದಲೊಮ್ಮೆ ಗೆಳೆಯರಾಗಿದ್ರು , ಒಂದೆರಡು ಬಾರಿ ಮಾತು ಕೂಡ ಆಡಿದ್ದೆ ,ಒಮ್ಮೆ ಮನೆಗೆ ಕೂಡ ಬಂದಿದ್ರು... ಈಗ ಇಲ್ಲ" ಅಂದೆ. 'ನನ್ನ ಹತ್ತಿರ ಮಾತಾಡ್ತಾ ಇರುವಾಗ ಹಾಗೆ ನಿನ್ನ ವಿಷ್ಯ ಬಂತು 'ಒಂದ್ ತರ ಅವರಿಗೆ(!) ಅಹಂಕಾರ ಜಾಸ್ತಿ ಅಂತ ಒಂದೆರಡು ಮಾತು ಹೇಳಿದ್ರು ಸುನಿ ' ಅಂದ್ರು ಆ ಗೆಳತಿ ... ನಕ್ಕು ಬಿಟ್ಟೆ..
ನನಗೆ ಯಾರ ಸರ್ಟಿಫಿಕೇಟ್ನಿಂದ ಖುಷಿ ಅಥವಾ ಬೇಸರ ಆಗೋದಿಲ್ಲ , ಕೆಲವೊಂದು ವಿಷಯಗಳನ್ನ ಹೇಳದೆ ಉಳಿದರೆ ಚೆಂದ.. ಹೇಳಿದರೆ ಮೊದಲು ನನ್ನ ವ್ಯಾಲ್ಯೂ ಕಡಿಮೆಯಾಗುತ್ತದೆ ('ಯಾಕೆ ಏನೂ ಗೊತ್ತಿಲ್ಲದವಳೇನ್ರಿ , ಊರಿಗೇ ಬುದ್ದಿ ಹೇಳ್ತಾಳೆ!!! ) ಅನ್ನೋದು ತಿಳಿಯದ ವಿಷಯವೇನಲ್ಲ ನನಗೆ..ಅತ್ತೆಯ ಮನೆಯಲ್ಲಿ ಬದುಕನ್ನ ಗೆದ್ದು ಸೈ ಅನಿಸಿಕೊಂಡವಳು ! :) ನಾನು ನನ್ನದೇ ಪರಿಧಿಯೊಳಗೆ ನನ್ನ ಮನೆ/ಮನಸ್ಸಿಗೆ ಮೋಸ ಮಾಡಿಕೊಳ್ಳದೆ ಮತ್ಯಾರಿಗೂ ನೋವಾಗದಂತೆ ಬದುಕಲು ಕಲಿತವಳು.. And i am happy.. ಇರುವ ಇರವ ಬೆಳಗುವ ಪರಿ ಕಲಿತಿದ್ದೇನೆ and it is enof... ಮತ್ತೊಬ್ಬರಿಗೆ ಹೇಳೋ ಅಷ್ಟು ದೊಡ್ಡವಳಲ್ಲ ಆದ್ರೆ ಹೇಳಿಸಿಕೊಳ್ಳೋ ಅಷ್ಟು ಚಿಕ್ಕವಳು rather ಸಣ್ಣವಳು/ಸಣ್ಣತನ ಕೂಡ ಅಲ್ಲ .... ಮತ್ತೊಬ್ಬರ ಬಗ್ಗೆ ಮಾತನಾಡುವಾಗ ಸಣ್ಣತನ ಬೇಡ....
I have lived my life, I've loved it, I've lost, I've missed, I've been hurt, I've trusted, I've made mistakes, but most of all, I've learned and keep learning.........:)))))
ಮಗಳ ಮದುವೆ ಫಿಕ್ಸ್ ಆಗಿತ್ತು . ಮುದ್ದಿನ ಮಗಳ ಮದುವೆ ಅವನಿಗೆ ಖುಷಿಯೇ ಆದರೂ ಅವಳು ತಮ್ಮನ್ನು ಬಿಟ್ಟು 'ಬೇರೆ' ಮನೆಗೆ ಹೋಗಿ ಸೇರುವುದು ಅವನಿಗೆ ನೋವು ತರುವ ವಿಷಯವಾಗಿತ್ತು .. 
ಹಾಗೆ ಮನೆಯ ಮುಂದಿನ ಗಿಡಗಳ ನೋಡುತ್ತಾ ಕುಳಿತ್ತಿದ್ದ ಅವನಿಗೆ ಮಗಳು ಕಾಫಿ ತಂದು ಕೊಟ್ಟಳು. ಕೊಟ್ಟು ಅಪ್ಪನ ಪಕ್ಕ ಹೆಗಲಿಗೆ ತಲೆಯಿಟ್ಟು ಕೂತಳು. ಅಪ್ಪ ತನ್ನ ತಲೆಯ ಅವಳ ತಲೆಗೆ ಒರಗಿಸಿದ. 
'ಖುಷಿಯಾಗಿದ್ದೀಯ ಮಗ ' ಅಂದ.. 'ಹ್ಮ್ , ಅಪ್ಪ ' ಅಂದ್ಲು.
ಒಂದಷ್ಟು ಹೊತ್ತಾದ ಮೇಲೆ 'ಅಪ್ಪ , ಇಲ್ಲಿ ಮುಂದೆ ಇದೆಯಲ್ಲ ಈ ದಾಳಿಂಬೆ ಮರ ಅದನ್ನ ಕಿತ್ತು ಹಿಂದೆ ಹಾಕೋಣವಾ ಅಪ್ಪ ' ಅಂದ್ಲು. 
ಅಪ್ಪ ಸ್ವಲ್ಪ ಚಕಿತನಾದ ' ಮಗ ಅದು ನಾಲ್ಕು ವರ್ಷದ ಗಿಡ ಮಗ. ಇನ್ನೇನು ಹಣ್ಣು ಬಿಡುತ್ತೆ . ಅದನ್ನ ಹಾಗೆ ಸ್ಥಳಾಂತರಿಸಿದರೆ ಹೊಸ ಮಣ್ಣು, ಹೊಸ ಜಾಗಕ್ಕೆ ಹೊಂದಿಕೊಳ್ಳೋಕೆ ತಡವಾಗುತ್ತೆ , ಕೆಲವೊಮ್ಮೆ ಗಿಡ ಹೊರಟು ಹೋಗುತ್ತೆ' ಅಂದ..
ಸುಮ್ಮನಿದ್ದ ಮಗಳು 'ಬರಿ ನಾಲ್ಕು ವರ್ಷದ ಗಿಡ ಸ್ಥಳಾಂತರ ಮಾಡಲು ಹೆದರುತ್ತೀಯಲ್ಲ ಅಪ್ಪ , ೨೨ ವರ್ಷ ನಿನ್ನ ಜೊತೆ ಇದ್ದ ನನ್ನನ್ನು ಹೇಗೆ ಕಳುಹಿಸುತ್ತೀಯಾ " ಅಂದ್ಲು !
ಅಪ್ಪ ಕಣ್ಣ ತುಂಬಾ ನೀರು ತುಂಬಿ ಉತ್ತರಿಸದೆ ಉಳಿದುಬಿಡುತ್ತಾನೆ .....
ಕಥೆ ಓದಿದ ಮೇಲೆ ........ ಏನೋ ಒಂದು ತರ ಮೂಕಭಾವ ... ಮನಸ್ಸು ಒದ್ದೆ ಒದ್ದೆ ....
felt like translating and sharing after reading....
ನೆನ್ನೆ ಕೃತಿ ಕಾಲೇಜ್ ಅಲ್ಲಿ ಪೇರೆಂಟ್ಸ್ ಮೀಟಿಂಗ್ ಇತ್ತು. ಹೊಸದಾಗಿ ಕಾಲೇಜ್ ಮೆಟ್ಟಲು ಹತ್ತಿದ್ದಕ್ಕೊ, ಇಲ್ಲ ಆಟಆಟ ಅಂತ ಥ್ರೋಬಾಲ್ ಅಲ್ಲಿ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಸಂಭ್ರಮಕ್ಕೋ, ಇಲ್ಲಾ ಮೊಬೈಲ್ ಅಲ್ಲಿ ಸಿನಿಮಾ ನೋಡೋ ಹುಚ್ಚಿಗೋ, ಅಂತೂ ಸ್ವಲ್ಪ ಕಡಿಮೆ ಅಂಕಗಳು ಬಂದಿದ್ವು. ಸರಿ ಒಂದಷ್ಟು ಬುದ್ದಿ ಹೇಳಿದೆ. 
ಸಂಜೆ ಕಾರ್ತಿ ಬಂದ .ಅವನಿಗೂ ಅವಳ ಅಂಕಗಳನ್ನ ಹೇಳಿದ್ಳು. ಅವ್ನು ಅವನ ಎಂದಿನ ಧಾಟಿಯಲ್ಲಿ 'ಬಿಡ್ ಕೃತಿ ಟೆನ್ಶನ್ ಮಾಡ್ಕೋಬೇಡ , ನಿನಗೆ ಇಷ್ಟೇ ಸಾಕು ಅಂತ ಅನಿಸಿದರೆ ಫೈನ್, ನಿನಗೆ ದೊಡ್ಡ ಏಮ್ ಇದ್ರೆ ಚೆನ್ನಾಗಿ ಓದು, ಆಟ ಇಷ್ಟ ಇದ್ರೆ ಕಂಟಿನ್ಯೂ ಮಾಡು ಅಷ್ಟೇ , ...ಇತ್ಯಾದಿ ' ಕಥೆ ಓದಿದ. ಅವನ ಮೇಲು ಸ್ವಲ್ಪ ರೇಗಿದೆ 'ಓದು ಅನ್ನೋದು ಬಿಟ್ಟು ಬರಿ ಸಿನಿಮ ಡೈಲಾಗ್ ಹೇಳು, ನಿನ್ ತರ ಅವ್ಲೂ ಮಂಡ್ಯಕ್ಕೆ ಅಪ್ ಅಂಡ್ ಡೌನ್ ಮಾಡ್ಬೇಕಾಗುತ್ತೆ ಕಡಿಮೆ ತೆಗೆದ್ರೆ ' ಅಂದೆ . 'ಮಾಡ್ಲಿ ಬಿಡು ಸ್ವಂತ ಬದುಕೋಕೆ ಕಲಿತಾಳೇ' ಅಂದ. 'ನಿಂದು ಬರೇ ವಿತಂಡ ವಾದ 'ಅಂತ ಬೈದು ಸುಮ್ಮನಾದೆ.
ಮಂಜು ಬಂದ ಮೇಲೆ ಕೇಳಿದ್ರು 'ಏನ್ ಮಗ್ಲೆ, ಎಲ್ಲಾ ಔಟ್ ಆಫ್ ಔಟಾ ?' 'ಇಲ್ಲ ಅಪ್ಪ , ಕಮ್ಮಿ ಬಂದಿದೆ ' ಅಂದ್ಳು ಮೆಲ್ಲಗೆ. ಮಂಜು ಇನ್ನು ಮಾತು ಶುರು ಮಾಡೇ ಇಲ್ಲ .. 'ನಾ ಎಲ್ಲಾ ಹೇಳಿದ್ದೀನಿ ಬಿಡಪ್ಪ, ನೀ ಇನ್ನೊಂದ್ ಸಾರಿ ಯಾಕೆ ಹೇಳ್ತೀಯ, ಪಾಪ ಓದ್ತಾಳೆ , ಒಂಚೂರು ಅಡ್ಜಸ್ಟ್ ಆಗೋಕೆ ಟೈಮ್ ಬೇಕು. ನಿಮ್ ಖಾಂದಾನ್ ಅಲ್ಲೇ ಯಾರೂ ತೆಗೆದಿಲ್ಲ ಅಷ್ಟ್ ಮಾರ್ಕ್ಸ್ ತೆಗಿತಾ ಇದ್ದಾಳಲ್ವಾ ಬಿಡು . ನನ್ ತಂಗಿಗೆ ನಾ ಹೇಳ್ಕೊಳ್ತೀನಿ , ನಾ ಓದಿಸ್ತೀನಿ ' ಅಂದ ಕಾರ್ತಿ. ಮಂಜು ಬಿಟ್ಟ ಕಣ್ಣು ಬಿಟ್ಟಂತೆ ಕೂತಿದ್ರು ..
ಈ ಅಣ್ಣತಮ್ಮಂದಿರಿಗೆ ತಾವು ಎಷ್ಟೇ ಕಿತ್ತಾಡಿದ್ರೂ ಬೈದ್ರೂ ತಮ್ಮ ಅಕ್ಕ ತಂಗಿಯರನ್ನ ಯಾರೂ ಬೈಬಾರದು ಅನ್ನೋ ಅಷ್ಟು possessiveness ... ಹಿಂದೆಲ್ಲ ಭಾನುವಾರದ ಸುತ್ತಾಟಕ್ಕೆ ಬಲಮುರಿ ಅಲ್ಲೆಲ್ಲಾ ಹೋದಾಗ ನೀರಲ್ಲಿ ಇಳಿದು ಆಟ ಆಡೋವಾಗ ತಮ್ಮ ಅಥವ ಕಸಿನ್ಸ್ ಅವರ ಶರ್ಟ್ ಬಿಚ್ಚಿಕೊಟ್ಟು ಹಾಕೊಳ್ಳೋಕೆ ಹೇಳ್ತಾ ಇದ್ದದ್ದು ನೆನಪಿಗೆ ಬಂತು !ಕಣ್ಣಲ್ಲಿ ಒಂದು ಹನಿ ನೀರು ಬಿದ್ರೆ ನೋಡೋಕೆ ಹಿಂಸೆ ಪಡ್ತಾ ಇದ್ರು.. .
ಮದ್ವೆ ಆದ ಮೇಲೆ ಅವರದೇ ಸಂಸಾರ ತಾಪತ್ರಯಗಳಲ್ಲಿ ಸಿಲುಕಿ ಅದ್ಯಾಕೋ ಬಹಳಷ್ಟು ಸಾರಿ ಅನಿವಾರ್ಯವಾಗಿ ಅನುದ್ದೇಶಪೂರ್ವಕವಾಗಿ ಈ ಅಣ್ತಮ್ಮ೦ದಿರು ಒಂದಷ್ಟು ದೂರ ಸರಿತಾ ಹೋಗ್ತಾರೆ ... ಆದ್ರೂ ಮನಸ್ಸಿನ ತುಂಬೆಲ್ಲಾ ಇರೋ ಆ ಪ್ರೀತಿ ಮಸುಕಾಗೋದೇ ಇಲ್ಲ ..ಆದ್ರೂ ಕಳೆದುಹೋದ ದಿನಗಳ ಅರಸುವಂತೆ ....
ಒಂದು ಜಾನಪದ ಮಾತಿನಂತೆ 'ಹೊಳೆದಂಡೆಯ ಗರಿಕೆ ಹಂಗ ಬೆಳೆಯಲಿ ತವರು ....... ಅನ್ನೋ ಹಂಗೆ ....
ಮನಸ್ಸು ನೀಲಿನೀಲಿ ...ಆ ಬಾನಿನಂತೆ ...
ಓದುವಿಕೆ ಮನುಷ್ಯನನ್ನ ಬಹಳ ಬದಲಾಯಿಸುತ್ತದೆ. ಬಹಳ ಚಿಕ್ಕವಳಿದ್ದಾಗಲೇ ಓದುವಿಕೆ ಶುರು ಮಾಡಿದವಳು ನಾನು. ಬಹುಶಃ ಈ ಓದುವ ಹುಚ್ಚು ಅಮ್ಮನೇ ಕಲಿಸಿದ್ದು .. ತುಂಬಾ ಚಿಕ್ಕವರಿದ್ದಾಗ ಅನುಪಮ ನಿರಂಜನ ಅವರ 'ದಿನಕ್ಕೊಂದು ಕಥೆ' (೧೨ ಪುಸ್ತಕಗಳು ಅನ್ನುವ ನೆನಪು)ಮತ್ತು ಕಾಮಿಕ್ಸ್ ತಂದುಕೊಡ್ತಾ ಇದ್ರು. ಆಗೆಲ್ಲ ಬೀದಿಯಲ್ಲಿ ಇದ್ದ ಒಂದಾರು ಮನೆಯಲ್ಲಿ ಒಂದೊಂದು ಮನೆಯವರು ಒಂದೊಂದು ನಿಯತಕಾಲಿಕ ತರಿಸಿದರೆ ಆ ಮನೆಯಿಂದ ಈ ಮನೆಗೆ ಈ ಮನೆಯಿಂದ ಆ ಮನೆಗೆ 'ಅದು' ಓಡಾಡಿ almost ಎಲ್ಲರೂ ಎಲ್ಲವನ್ನು ಓದ್ತಾ ಇದ್ರು . ಸುಧಾ, ತರಂಗ, ಪ್ರಜಾಮತ, ಮಂಗಳ, ವಾರಪತ್ರಿಕೆ, ಕಸ್ತೂರಿ , ಮಯೂರ ಇವನ್ನೆಲ್ಲ ನೋಡಿದ್ರೆ ಈಗ್ಲೂ ಮನ ನೆನಪುಗಳ ಮಯೂರ ನರ್ತನ ಆಡುತ್ತದೆ. ಹಾಗೆ ಅದರಲ್ಲಿ ಬರ್ತಾ ಇದ್ದ ಧಾರಾವಾಹಿಗಳನ್ನ ಕತ್ತರಿಸಿ ಪುಸ್ತಕ ಮಾಡಿ ಇಡ್ತಾ ಇದ್ರು . ಅಮ್ಮ ಬೈತಾಳೆ ಅಂತ ಪುಸ್ತಕಗಳ ನಡುವೆ ಕಥೆ ಪುಸ್ತಕ ಇಟ್ಟು ಓದಿದ ನೆನಪು. ಇಷ್ಟ್ ಓದಿದ್ರೆ ಬೇಗ ಕನ್ನಡಕ ಹಾಕೋ ಬೇಕಾಗುತ್ತೆ ಅಂತ ಇದ್ರು ಚಿಕ್ಕಮ್ಮ. ಹೈಸ್ಕೂಲಿಗೆ ಬಂದ ಮೇಲೆ ಕಥೆಗಳನ್ನ ಓದುವುದಕ್ಕೆ ಶುರು ಮಾಡಿದ್ದು . ಸಾಯಿಸುತೆ, ಉಷಾ ನವರತ್ನ ರಾಮ್, ಹೆಚ್ ಜಿ ರಾಧಾದೇವಿ, ಅನುಪಮಾ ನಿರಂಜನ, ಹೀಗೆ ಬಹಳಷ್ಟು ಲೇಖಕಿಯರನ್ನ ಓದಿದೆ.. ನಡುವೆ ತ್ರಿವೇಣಿ ಹಾಗು ಎಂ ಕೆ ಇಂದಿರಾ ಅವರ ಕೆಲವು ಪುಸ್ತಕಗಳನ್ನ ಕೂಡ ಓದಿದೆ. ಈ ಹೊತ್ತಲ್ಲೇ ಯೆಂಡಮೂರಿ ಕಾದಂಬರಿಗಳು ಜನಪ್ರಿಯವಾಗ್ತಾ ಇದ್ವು . ತುಳಸಿ, ಆನಂದೋಬ್ರಹ್ಮ, ಅಂತಿಮ ಹೋರಾಟ, ಕಪ್ಪಂಚು ಬಿಳಿ ಸೀರೆ , ದುಡ್ಡು ದುಡ್ಡು ದುಡ್ಡು ... ಪತ್ರಿಕೆ ಬಂದ ಕೂಡಲೇ ಓದಿ ಮುಂದಿನ ಸಂಚಿಕೆಯಲ್ಲಿ ಬರಬಹುದಾದ ಸನ್ನಿವೇಶಗಳ ಬಗ್ಗೆ ಚರ್ಚಿಸುತ್ತ ಇದ್ವಿ ಕೂಡ . ಓಹ್ ಅದರಲ್ಲಿನ ಕೆಲವು ಹೆಣ್ಣು charecters (ಹಾಗೆ ಹೆಸರುಗಳೂ ಕೂಡ ) ಅದೆಷ್ಟು ಮನಸ್ಸಿನ ಮೇಲೆ ಅಚ್ಚಾಗ್ತಾ ಇದ್ವು ಅಂದ್ರೆ, ಕೆಲವರೆಲ್ಲ ನನ್ನ ಆದರ್ಶವಾಗ ತೊಡಗಿದರು.. ಪ್ರಾಯಶಃ ಇಂದಿಗೂ ಕೆಲವು ಪಾತ್ರಗಳಲ್ಲಿ ಕಂಡ ಸ್ವಾಭಿಮಾನ, ಮತ್ತೊಬ್ಬರಿಗೆ(ಗಂಡನಿಗೆ ಕೂಡ) ಒತ್ತಾಸೆಯಾಗಿ ನಿಲ್ಲುವ ಛಲ, ಮಕ್ಕಳನ್ನ ಬೆಳೆಸುವ ಪರಿ, ಒಂದಷ್ಟು ತರ್ಲೆ ಇವೆಲ್ಲ ಎಲ್ಲೋ ಒಂದೆಡೆ ಮನದಲ್ಲಿ ಹಾಗೆ ಉಳಿದು ಬದುಕಲ್ಲಿ ಅಳವಡಿಸಿಕೊಂಡಿದದ್ದು ಇದೆ...
ಹಿರಿಯರೊಬ್ಬರ ಗೋಡೆಯ ಮೇಲೆ ಅವರು ಹಂಚಿಕೊಳ್ಳೋ ಯೆಂಡಮೂರಿ quotes ಇವೆಲ್ಲ ನೆನಪಿಸಿತು
ಈಗ್ಲೂ ಮಂಜು ಟಿವಿ ನೋಡ್ತಾ ಇದ್ರೆ , ನಾ ಪಕ್ಕ ಕುಳಿತು ಏನಾದ್ರೂ ಓದ್ತಾ ಇರ್ತೀನಿ , (ಆದ್ರೆ ಈಗ ಓದುವ ಪುಸ್ತಕಗಳು ಬದಲಾಗಿವೆ ಅಷ್ಟೇ . ಏನಿಲ್ಲ ಅಂದ್ರೆ ಕೃತಿಯ ಕನ್ನಡ ಅಥವಾ ಇಂಗ್ಲಿಷ್ ಪುಸ್ತಕ ಆದರು ಸರಿ!) ಕರೆಂಟ್ ಹೋದಾಗ ಒಂದು ಸಲ ಹುಸಿಕೆಮ್ಮು ಕೆಮ್ಮಿದ್ರೆ ಮಂಜು ನಗ್ತಾರೆ 'ಆಯ್ತ್ ಬುಡವ್ವ ನಿಮ್ ಪುಸ್ತಕಾನೇ ಗ್ರೇಟು , ನಮ್ ಟಿವಿ ಸರಿಯಿಲ್ಲ ಬುಡು' ಅಂತಾರೆ
ಒಳ್ಳೆಯ ಓದುವಿಕೆ ಬದುಕಿಗೆ ಬಣ್ಣ ತರಬಲ್ಲದು ..
ಸುಂಸುಮ್ನೆ ಹಂಚಿಕೋಬೇಕು ಅನಿಸ್ತು
ಮೊನ್ನೆ ಸುಳ್ಯದಿಂದ ಮೈಸೂರಿಗೆ ಬರ್ತಾ ಇದ್ವಿ. ನನಗೆ ಟ್ರಾವೆಲಿಂಗ್ sickness .. ಬಸ್ ಹತ್ತಿದ ಕೂಡ್ಲೇ ಕಣ್ಣು ಮುಚ್ಚಿ ಕೂತ್ಬಿಡ್ತೀನಿ .. ಆವತ್ತು ಹಾಗೆ ಮಂಜು ಭುಜದ ಮೇಲೆ ತಲೆಯಿಟ್ಟು ಕಣ್ಣು ಮುಚ್ಚಿದ್ದೆ . ಹಿಂದೆಯಿಂದ ಒಂದು ಹೆಣ್ಣು ಮಗಳ ದನಿ 'ಹಲೋ , ಹಲೋ , ಅವ್ರಿಗೆ ಹೇಳಿ ದಫನ್ ಮಾಡ್ಬೇಡ ಅಂತ ಈಗ ಸುಳ್ಯ ಬಿಟ್ಟೀವಿ. ೫ ಗಂಟೆ ಹೊತ್ಗೆ ಆಲ್ಲಿರ್ತೀವಿ.. ಹಲೋ .. ' ಮೂಗೊರೆಸುವ ಸದ್ದು. ಪಾಪ ಯಾರೋ ಅವರ ಕಡೆಯವರು ತೀರಿಹೋಗಿರ್ಬೇಕು..ಪಕ್ಕದಲ್ಲಿ ಒಂದ್ ೩-೪ ವರ್ಷದ ಮಗು, ಮಗುವಿನ ಪಕ್ಕ ಒಬ್ಬ ವ್ಯಕ್ತಿ , ಪ್ರಾಯಶಃ ಅವಳ ಗಂಡನಿರಬೇಕು ಅಂದುಕೊಂಡೆ (ಆಮೇಲೆ ಅವನು ಗಂಡನೇ ಅಂತ ಅವ್ರ ಮಾತುಗಳಿಂದ ಖಾತ್ರಿಯಾಯ್ತು). ಪಾಪ ಅನಿಸ್ತು.
(ನಾನು ೬ನೇ ತರಗತಿಯಲ್ಲಿರುವಾಗ ಅಜ್ಜಿ ತೀರಿಹೋಗಿದ್ರು . ತಿಪಟೂರಿನಲ್ಲಿ ಇದ್ದ ಚಿಕ್ಕಮ್ಮ ಕೊಳ್ಳೇಗಾಲಕ್ಕೆ ಬರುವ ತನಕ ಮಣ್ಣು ಮಾಡದೆ ಕಾಯ್ತಾ ಇದ್ದದ್ದು ನೆನಪಿಗೆ ಬಂತು. ಸಂಜೆ ೬ ಗಂಟೆಗೆ ಬಂದ ಚಿಕ್ಕಮ್ಮ 'ಅಮ್ಮ, ನಿನ್ನ ಮೊಕ ನೋಡೋಕೆ ಆಗುತ್ತಾ ಇಲ್ವೋ ಅಂದ್ಕೊಂಡಿದ್ದೆ' ಅಂತ ಅತ್ತದ್ದು ಈಗಲೂ ನೆನಪು.. ಆಗೆಲ್ಲ ಈಗಿನ ಹಾಗೆ ಮೊಬೈಲ್ ಎಲ್ಲಿದ್ವು, ಟೆಲಿಗ್ರಾಂ ಕಳಿಸ್ತಾ ಇದ್ರು . ಹೊರಟ್ರು ಅಂತ ಟ್ರಂಕ್ ಕಾಲ್ ಮಾಡಿದರೆ ಇಷ್ಟ್ ಹೊತ್ತಿನ ಬಸ್ಸು ಒಂದಷ್ಟು ಹೆಚ್ಚುಕಡಿಮೆ ಇಷ್ಟ್ ಹೊತ್ತಿಗೆ ಬರುತ್ತೆ ಅನ್ನೋ ಭರವಸೆಯಿಂದ ಕಾಯ್ತಾ ಇದ್ದದ್ದು ನೋಡಿದ ನೆನಪಿದೆ)
ಸುಳ್ಯ ಬಿಟ್ಟು ಹೊರಟ ಮೇಲೆ ನಡುವೆ ಮತ್ತೆರಡು ಬಾರಿ ಯಾರಿಗೂ ಕರೆ ಮಾಡಿದ್ಲು ಆ ಹೆಣ್ಣು ಮಗಳು. ನಡುನಡುವೆ ಗಂಡನ್ನ ಬೈತಾ ಇದ್ಲು. 'ಮಗುಗೆ ಬಿಸ್ಕೆಟ್ ತನ್ರಿ ಅಂದ್ರೆ ಹಂಗೆ ಬಂದ್ರಲ್ಲ' ಅಂತ ಅಲವತ್ತು ಕೊಳ್ತಾ ಇದ್ಲು. ಮಡಿಕೇರಿ ಬಂತು. ಮತ್ತೆ ಯಾರಿಗೂ ಕರೆ ಮಾಡಿದ್ಲು 'ಬರ್ತೀವಿ ದಫನ್ ಮಾಡ್ಬೇಡಿ' ಅಂದ್ಲು.. ಗಂಡನಿಗೆ ಮಗುವಿಗೆ ನೀರು ಮತ್ತೆ ಬಿಸ್ಕತ್ ತರೋಕೆ ಹೇಳಿದ್ಲು. ಒಂದಷ್ಟು ದುಡ್ಡು ಕೊಟ್ಟಳು ಅನಿಸುತ್ತೆ. ಆ ಮನುಷ್ಯ ಇಳಿದು ಹೋದ.. ಹಿಂದೆ ಸೀಟ್ನಲ್ಲಿ ಇದ್ದ ವ್ಯಕ್ತಿಯೊಬ್ಬ ಅವರ ಸೀಟ್ಗೆ ಬಂದ.. ಈಕೆ ಶುರು ಮಾಡಿದ್ಲು 'ನೋಡಣ್ಣ ಹಂಗೆ..ಹಿಂಗೇ , ನಂಗೆ ಅಲ್ಲಿ ಖರ್ಚಿಗೆ ಕಾಸು ಬೇಡ್ವಾ ಎಲ್ಲ ಇವನ್ಗೆ ಕೊಟ್ರೆ.. ಮಗುಗೆ ಏನೂ ತರ್ಲಿಲ್ಲ .. ಕೊಟ್ಟ ದುಡ್ಡು ಮಡಿಕಂಡವ್ನೆ. ನಾನು ವಾಪಸ್ಸು ಬರೋದು ಹೆಂಗೆ ' ಅವ್ನು ಏನೋ ಗುಸುಗುಸು ಅಂದ . ಅಷ್ಟ್ರಲ್ಲಿ ಗಂಡ ಅನಿಸಿಕೊಂಡವನು ಬಂದ ಏನು ತಂದ್ನೋ ಬಿಟ್ನೋ ಮತ್ತೆ ಆಕೆ ಪೇಚಾಡಲು ಶುರು ಮಾಡಿದ್ಲು.. ನಾ ಮಂಜುಗೆ ಹೇಳ್ದೆ 'ಬ್ಯಾಗ್ ಅಲ್ಲಿ ಸ್ನಾಕ್ಸ್ ಇದ್ಯಲ್ಲ ಕೊಟ್ಬಿಡು ಮಂಜು , ಪಾಪ ಮಗು ತಿನ್ಲಿ' ಮಂಜು ಹೇಳಿದ್ರು 'ತಾಯಿ,ನಿಂಗೆ ಇವೆಲ್ಲ ಗೊತ್ತಾಗೋದಿಲ್ಲ ಸುಮ್ನೆ ಕಣ್ ಮುಚ್ಚಿಕೊಂಡಿರೋ ಹಂಗೆ ಕಿವಿನೂ ಮುಚ್ಚಿಕೊಂಡು ದೇವ್ರು ಕುಂತಗೆ ಕೂತ್ಕೋ , ಆ ಮಗ ಎಣ್ಣೆ ಹಾಕಿದ್ದಾನೆ, ನಾನೇನಾದ್ರೂ ಕೊಡೋಕೆ ಹೋದ್ರೆ ಅವ್ನ ಬಾಯಲ್ಲಿ ನಾ ಅರ್ಚನೆ ಮಾಡಿಸ್ಕೊಬೇಕಾಗುತ್ತೆ' ಅಂದ್ರು ... ಆ ಹೆಣ್ಣು ಮಗಳು 'ಅವ್ನ ಆ ಕಡೆ ಕೂತ್ಕೊಳೋಕೆ ಹೇಳು ಅಣ್ಣ, ನೀ ಈ ಕಡೆ ಬಾ, ಅಂತ 'ಅಣ್ಣ ' ಅಂತ ಅನಿಸಿಕೊಳ್ತಾ ಇದ್ದ ವ್ಯಕ್ತಿಗೆ ಹೇಳ್ತಾ ಇದ್ದದ್ದು ಕೇಳಿಸ್ತು. ಅಣ್ಣನ ನಡವಳಿಕೆ 'ಅಣ್ಣನ' ತರ ಇರ್ಲಿಲ್ಲ ... ಹುಣಸೂರಿಗೆ ಬರೋ ಅಷ್ಟ್ರಲ್ಲಿ ಆಕೆ ಮತ್ತೊಂದೆರಡು ಕರೆಗಳನ್ನ ಮಾಡಿದ್ಳು. ಹುಣಸೂರಲ್ಲಿ ಆ ಅಣ್ಣ ಒಂದಷ್ಟು ದುಡ್ಡು ಕೊಟ್ಟು ಗಂಡನಿಗೆ ಹಾರ ತರೋಕೆ ಹೇಳ್ದ. ಇಳಿದು ಹೋದ ಆ ಮನುಷ್ಯ ಬರಲು ಸಮಯ ತೆಗೆದುಕೊಂಡಾಗ ಡ್ರೈವರ್ ಹಾಗು ನಿರ್ವಾಹಕ ಕೂಡ ರೇಗಿಯೇ ಬಿಟ್ರು 'ಬಸ್ ಹತ್ತಿದಾಗಿನಿಂದ ಬರಿ ಇದೇ ಆಯ್ತು ಹದವಾಗಿ ಇರೋಕೆ ಬರೋಲ್ವಾ'.....
ಬಸ್ ಹತ್ತಿದಾಗ ಇದ್ದ 'ಪಾಪ ಯಾರೋ ಸಂಕಟ ಪಡುತ್ತಾ ಇದ್ದಾರೆ' ಅನ್ನೋ ಅನುಕಂಪ ಇಳಿಯೋ ಹೊತ್ತಿಗೆ ರೇಜಿಗೆ ಅನಿಸಿಬಿಟ್ಟಿತ್ತು .. ಯಾಕೋ ಇಳಿವಾಗ ಕೂಡ ಅವರ ಮುಖ ನೋಡಬೇಕು ಅನಿಸಲಿಲ್ಲ .. ಆ ಮಗುವಿನ ಮುಖ ನೋಡಿದೆ.. ಪುಟ್ಟ ಮುದ್ದು ಹೆಣ್ಣು ಕೂಸು .... ಎಲ್ಲೋ ಮನಸ್ಸು 'ದೇವರೇ' ಅಂತ ಚೀರಿತು ...
ಮಗ ಕಾರ್ ನಿಲ್ಲಿಸ್ಕೊಂಡು ಕಾಯ್ತಾ ಇದ್ದ. ಮುಖ ನೋಡಿ 'ಸುಸ್ತಾಯ್ತಾ ಮಾ' ಅಂದ .. ಭದ್ರವಾಗಿ ಅವ್ನ ಭುಜ ಹಿಡಿದು 'ಇಲ್ಲ ಮಗ' ಅಂದೆ...
ಅಸಹಾಯಕತೆಯೋ, ಅನಕ್ಷರತೆಯೋ, ಅಗತ್ಯವೋ ..... ಗೊತ್ತಿಲ್ಲ . ಆದರೆ ವಾಸ್ತವ ಮಾತ್ರ ಕಠಿಣ
ಪುಟ್ಟಿ ಈಗ ಕಾಲೇಜು ಹುಡುಗಿ. ಆದ್ರೂ ಆ ವಟವಟ ನಿಲ್ಲಿಸಿಲ್ಲ. ಶಾಲೆಯಲ್ಲಿ ಹೇಗೆ ಜಗಳ ಆಡ್ತಾ ಇದ್ದಳೋ ಹಂಗೆ ಇಲ್ಲೂ ಹುಡುಗರ ಜೊತೆ ಜಗಳ ಆಡ್ತಾಳೆ. ಕಿರಿಕ್ ಮಾಡ್ತಾಳೆ. 'ಮಗ ಈಗ ಕಾಲೇಜ್ ಅಲ್ವ ಸ್ವಲ್ಪ ಡಿಸೆಂಟ್ ಆಗಿರಬಾರ್ದ' ಅಂದ್ರೆ 'ಈ ಡಿಸೆಂಟ್ ಅಂದ್ರೆ ಏನ್ ಹೇಳು' ಅಂತಾಳೆ . 'ಸ್ವಲ್ಪ ತಾಳ್ಮೆಯಿಂದ ಹೊಂದಿಕೊಂಡು ಹೋಗ್ಬೇಕು. ಚಿಕ್ಕಚಿಕ್ಕ ವಿಷ್ಯಕ್ಕೆ ಜಗಳ ಮಾಡಿಕೊಳ್ಳಬಾರದು' ಅಂದ್ರೆ 'ಮಾ, ನಿನಗೆ ಚಿಕ್ಕ ವಿಷ್ಯ ಆದ್ರೆ ನನಗೆ ನನ್ನ ಪ್ರೆಸ್ಟಿಜ್(!?) ವಿಷ್ಯ ' ಅಂತಾಳೆ... ಮಾತನ್ನ ಒಂಚ್ಚೂರು ಸೆನ್ಸರ್ ಮಾಡೋದಿಲ್ಲ. 
ಕಾಲೇಜಿಂದ ಬಂದಿದ್ದೆ ಹಾಲು ಕುಡಿತಾ ಅಂದಿನ ಪ್ರವರ ಶುರು ಮಾಡಿದ್ರೆ ಮಂಜು 'ಮಗ ಸಾಕು ನಿಲ್ಸು' ಅನ್ನೊವರೆಗೂ ಹೇಳ್ತಾನೆ ಇರ್ತಾಳೆ. ಸಂಜೆಯಲ್ಲಿ ಬರಿ ಆ ದಿನದ ಪಾಠ, ತಮಾಷೆ, ಜಗಳ, ಆಟದ ಕಥೆ ಹೇಳಿದ್ರೆ ಬೆಳಿಗ್ಗೆ ಬೆಳಿಗ್ಗೆ ಎದ್ದು ತಿಂಡಿ ತಿಂತಾ ಇರೋವಾಗ (ಅಣ್ಣ ಅಪ್ಪ ಇಲ್ಲದೆ ಇರೋವಾಗ) 'ಪರ್ಸನಲ್ ' ಕಥೆಗಳನ್ನ ಹೇಳ್ತಾಳೆ. ಗೆಳತಿಯರ ಬಗ್ಗೆ , ಗೆಳೆಯರ ಬಗ್ಗೆ , ಅದ್ಯಾರೋ ಯಾರನ್ನೋ ಪ್ರೊಪೋಸ್ ಮಾಡಿದ ಬಗ್ಗೆ .. ಇನ್ಯಾರೋ ಇನ್ಯಾರಿಗೋ ಮೆಸೇಜ್ ಹಾಕಿ ಸಿಕ್ಕಿಕೊಂಡ ಬಗ್ಗೆ... ಇತ್ಯಾದಿ ಇತ್ಯಾದಿ..ನಾನು ಅವಳಿಗೆ ದೋಸೆನೋ, ಚಪಾತಿನೋ, ಪೂರಿನೋ ಹಾಕ್ತಾ, ಬಾಕ್ಸ್ ತಯಾರು ಮಾಡುತ್ತಾ ಕೇಳ್ತಾ ಇರ್ತೀನಿ, ನಗ್ತಾ ಇರ್ತೀನಿ . ಒಮ್ಮೊಮ್ಮೆ ಬೈತೀನಿ
ಬೆಳಿಗ್ಗೆ ಕೂಡ ಹಾಗೆ ಶುರು ಮಾಡಿದ್ಲು."ಮಾ, ___ ಹಿಂಗೆಲ್ಲ ಹೇಳಿದ್ಲು" 'ಅದೇನ್ ಮಕ್ಲೊ ಕಾಣೆ..ನನ್ ಮಗನಿಗೂ ನಿಂಗೂ ಬರಿ ೪ ವರ್ಷ ವ್ಯತ್ಯಾಸ. ನನ್ ಮಗ ಒಂದು ದಿನ ಕೂಡ ಇಂತ ಮಾತೆಲ್ಲ ಆಡಿಲ್ಲ. ನೀವೇನ್ ಮಹರಾಯ್ತಿ ಇನ್ನು ನೆಟ್ಟಗೆ ಚೂಡಿದಾರ್ ಪ್ಯಾಂಟ್ ಕಟ್ಟೋಕೆ ಬರೋಲ್ಲ ಆಗ್ಲೇ ಇವೆಲ್ಲ' ಅಂತ ಬೈದೆ....
'ಲೋ ಮಾ, ನಿನ್ ಮಗ ಆಡಿದ್ರು ಹೇಳಿಲ್ಲವೇನೋ ಬಿಡು, ಅವನು ಚೈಲ್ದು!! ನಾವ್ ಗೊತ್ತಲ್ಲ ಏನಿದ್ರು ಸ್ಟ್ರೈಟ್ ಫಾರ್ವಾರ್ಡ್ಯೂ .. ನಾ ಯಾರ್ನಾದ್ರು ಲವ್ ಮಾಡಿದ್ರೆ ಕರ್ಕೊಂಡ್ ಬಂದು ನಿನ್ ಮುಂದೆ ನಿಲ್ಲಿಸ್ತೀನಿ , ಸ್ವಲ್ಪ ತಮ್ಮ ಬುದ್ದಿ ತಮ್ಮ ಗಂಡ ಅವ್ರ ಪೇಶೆನ್ಸ್ ಎಲ್ಲಾ ಕಲಿಸಿಬಿಡಿ !!ಇಲ್ಲಾ ಅಂದ್ರೆ ಪಾಪ ಅವ್ನ ಕಥೆ ಬಿರ್ಯಾನಿ ಅಷ್ಟೇ !!!'
ಅದೆಷ್ಟ್ ಜನ್ಮದ ಪುಣ್ಯದ ಫಲನೋ ಇಂತಹ ಪುಣ್ಯಾತಗಿತ್ತಿಗೆ ಅಮ್ಮನಾಗೋದು :)))))
ಕೃಷ್ಣ ಯುದ್ಧ ಬೇಡಾ ಅನ್ನೋರ ಬಯಕೆಯಂತೆ ತನ್ನ ಅಂತಿಮ ಪ್ರಯತ್ನವಾಗಿ ಶಾಂತಿಸಂಧಾನಕ್ಕೆ ಹೊರಡುತ್ತಾನೆ. 
ದ್ರೌಪದಿ ತನಗಾದ ಅವಮಾನವನ್ನ ಮನದಲ್ಲಿ ಇಟ್ಟು ಕೇಳ್ತಾಳೆ 'ಅಣ್ಣ ಹಾಗಾದ್ರೆ ಈ ಯುದ್ಧ ನಡೆಯೋದಿಲ್ವ ' 
'ತಂಗಿ , ಈ ವಿಷಯದಲ್ಲಿ ನೀ ನನಗಿಂತ ಹೆಚ್ಚು ದುರ್ಯೋಧನನ ಮೇಲೆ ಭರವಸೆ ಇಡಬಹುದು, ನಾ ಇನ್ನು ಹತ್ತು ಸಂಧಾನ ನಡೆಸಿದರೂ ಅವನು ಯುದ್ಧ ನಿಲ್ಲಿಸುವ ಮನಸ್ಥಿತಿಯಲ್ಲಿ ಇಲ್ಲ " ಅಂತಾನೆ .... 
ಇದು ಕಥೆ ... 
ಯುದ್ಧ ಬೇಡಾ ಅನ್ನೋರಿದ್ದಾರೆ.... ಅವರಿಗಾಗಿ ಸಂಧಾನಗಳು ನಡೆದಿವೆ .. ದೇಶಕ್ಕಾದ ಅಪಮಾನಕ್ಕೆ ಪ್ರತಿಕಾರ ತೆಗೆದುಕೊಳ್ಳಬೇಕು ಎಂದು ಹಂಬಲಿಸೋ ಮನಸ್ಸುಗಳಿವೆ .. ದೇಶದ ಹಿರಿಯನೇ ಸಂಧಾನಕ್ಕೆ ಹೋದರೂ ಕಡೆಗಣಿಸೋ ದುರ್ಯೋಧನನಂತಹ ಪಾಕ್ ಕೂಡ ಇದೆ .....
It is not a favor for war But ...stil ..... ತಾಯ್ನಾಡಿನ ಮೇಲೆ ದೌರ್ಜನ್ಯ ಸಹಿಸಲು ಸಾಧ್ಯವಿಲ್ಲವೇನೋ
ಸಾಮಾನ್ಯವಾಗಿ ಮನೆಗೆ ಊರಿಂದ/ಮಂಜು ಕಡೆಯ ನೆಂಟರು ಯಾರಾದ್ರು ಬಂದ್ರೆ .. ನಾ ಅಡಿಗೆ ಮಾಡುವಾಗ ಮಂಜು ನನ್ ಜೊತೆ ಅಡುಗೆಮನೆಯ ಒಳಗೆ ಹೊರಗೆ ಓಡಾಡುತ್ತಾರೆ .. ಮೊದ್ಲೆಲ್ಲಾ ತುಂಬಾನೇ ಮುಜುಗರ ಅನಿಸ್ತಾ ಇತ್ತು .. ಒಂದೆರಡು ಬಾರಿ ರೇಗಿಯೂ ರೇಗಿದ್ದೆ "ಯಾಕೆ ನನಗೆ ಅಡುಗೆ ಮಾಡೋಕೆ ಬರೋದಿಲ್ಲ ಅಂತ ಅಂದ್ಕೊಂಡು ಹಿಂಗೆ ಆಡ್ತೀಯಾ' ಅಂತ . ಆಗ ಮಂಜು ಹೇಳಿದ್ದು 'ಅಯ್ ನಮ್ ಕಡೆವು ಒಂದ್ ತರ .. ಎಲ್ಲಾದ್ರಲ್ಲೂ ತಪ್ಪು ಕಂಡಿಹಿಡಿತಾರೆ ..ಏನೂ ಸಿಗಲಿಲ್ಲ ಅಂದ್ರೆ ಗಸಗಸೆ ಹೆಚ್ಚಾಯ್ತು ಅಂತಲಾದ್ರೂ ಅಂತಾರೆ .. ನಾ ನಿನ್ ಜೊತೆ ಇದ್ರೆ ನಾನೇ ಹಾಕಿದ್ದು ಅಂತೀನಿ , ಆಗ ಏನೂ ಅನ್ನದೆ ತಿಂತಾರೆ .. ನಮ್ ಕಥೆ ಬಿಡು ತಾಯಿ.. ಬಿರ್ಯಾನಿ ಮಾಡಿದ್ರು ನಾವೇ ತಿನ್ನೋದು ನೆನ್ನೆಯ ಅನ್ನಕ್ಕೆ ಚಿತ್ರಾನ್ನ ಕಲೆಸಿದ್ರು ನಾವೇ ತಿನ್ನೋದು' (ನನ್ ಗೆಳೆಯ ಗೆಳತಿಯರು ಬಂದ್ರೆ ನೀ ಮಾತಾಡಮ್ಮ ನಾ ಟೀ ಮಾಡ್ತೀನಿ ಅಂತ ಹೇಳೋ ಸಹೃದಯಿ ...) ಮದುವೆಯಾದ ಹೊಸದರಲ್ಲಿ ಬೆನ್ನ ಹಿಂದೆ ನಿಂತವ ...ಈಗ್ಲೂ ಬೆನ್ನು ಬಿಡದೆ ನಿಂತವ್ನೆ :))))
ನೆನ್ನೆ ಹಿರಿಯರೊಬ್ಬರು ಮನೆಗೆ ಬಂದಿದ್ರು .. ಮಂಜು ನನ್ನ ಹಿಂದೆ ಇದ್ದದ್ದು ನೋಡಿ 'ಇನ್ನು ಅವ್ಳ ಹಿಂದೆ ಸುತ್ತುತೀಯೇನೋ ' ಅಂದ್ರು .. 'ಮಂಜು 'ಇನ್ಯಾರ ಹಿಂದೆ ಸುತ್ಲಿ ಮಾವ ... !!!' ಅಂದ್ರು .... ಎಲ್ಲರಂತವನಲ್ಲ ನನ ನಲ್ಲ :)))))))
ದಸರಾ ಅಂದ್ರೆ ನಾವ್ ಮೈಸೂರಿನವರಿಗೆ ಒಂದ್ ತರ ಸಂಭ್ರಮ . ಪ್ರತಿ ವರ್ಷ ನೋಡಿದರೂ ಮತ್ತೆ ಈ ವರ್ಷ ಕೂಡ ಹೊಸದೇನೂ ಇರಬೇಕು ಅನಿಸೋ ಅಷ್ಟು ಉತ್ಸಾಹ .. ಓದುವಾಗ ಮೆಡಿಕಲ್ ಕಾಲೇಜ್ ಅಲ್ಲಿ ಕುಳಿತು ನೋಡಿದ ದಸರ ಬಿಟ್ರೆ ಮದ್ವೆ ಆದ ಮೇಲೆ ದಸರ ಜಂಬೂ ಸವಾರಿಗೆ ಅಂತ ಹೋಗೇ ಇರಲಿಲ್ಲ. ಈ ಬಾರಿ ಮಂಜು ಹೇಳಿದ್ರು 'ನಿನ್ನ ದಸರಾಗೆ ಕರ್ಕೊಂಡ್ ಹೋಗ್ತೀನಿ ಅಂತ .. 'ಅಯ್ಯೋ ಆ ರಶ್ ನನಗೆ ಆಗೋದಿಲ್ಲ ತಲೆ ನೋವು ಬಂದ್ಬಿಡುತ್ತೆ ಅಷ್ಟೇ' ಅಂದೆ . 'ನೀ ಸುಮ್ನೆ ಬಾ, ನಾ ಕರ್ಕೊಂಡ್ ಹೋಗ್ತೀನಿ' ಅಂದ್ರು. 
ಮಳೆಯಲ್ಲಿ ನೆನೆಯುತ್ತಾ ಅಲ್ಲೆಲ್ಲೋ ಗಾಡಿ ನಿಲ್ಲಿಸಿ ನಡೆಯುತ್ತಾ ಸಯ್ಯಾಜಿ ರಾವ್ (ರಾಜ ಪಥ!! ) ರಸ್ತೆಯಲ್ಲಿನಡೆಯುತ್ತಾ ಹೋದ್ವಿ.. ಮಳೆಯಲ್ಲೂ ಅದೇನ್ ಜನ .. "ಮೂರು ದಿನದ ಹಿಂದೇನೆ ಜಾಗ ಆಕಿವ್ನಿ .. ಈಗೇನ್ ನೀ ಬಂದು ತಳ್ಳಾಡ್ತೀಯ' ಅನ್ನೋ ಹೆಂಗಸರು , ಸೆಲ್ಫಿ ತೆಗೆದುಕೊಳ್ಳೋ ಹೆಣ್ ಐಕ್ಳು, ಹುಡುಗಿಯರನ್ನ ಕಿಚಾಯಿಸೋ ಗಂಡ್ ಐಕ್ಳು , ಅಪ್ಪನ ಹೆಗಲೇರಿದ ಚಿಣ್ಣರು, ಕೈಗೆ ಸಿಗದ ಮಕ್ಕಳನ್ನ ಬೈಯ್ಯೋ ಅಮ್ಮಂದಿರು, ಉಸ್ ಅಂತ್ಲೆ ಅಂಬಾರಿ ಬರೋ ವರೆಗೂ ಕಾಯ್ತಾ ಇದ್ದ ಹಿರಿಯರು, ಒಂದಷ್ಟು ವಿದೇಶಿಯರು, ನಮ್ಮ ಪೊಲೀಸರು , ಮಟ ಮಟ ಮಧ್ಯಾಹ್ನವೇ 'ಕುಡಿದು' ಬಂದು ಬೈಸಿಕೊಳ್ತಾ ಇದ್ದವರು , ಸಿಕ್ಕಿದ್ದೇ ಚಾನ್ಸ್ ಅಂತ ಹೆಚ್ಚು ಬೆಲೆ ಹೇಳಿ ತಿಂಡಿತಿನಿಸು ಮಾರ್ತಾ ಇದ್ದವರು, ಲಾರಿಗಳನ್ನ ನಿಲ್ಲಿಸಿಕೊಂಡು 'ಒಂದು ಸೀಟ್ಗೆ ೫೦ ರೂಪಾಯಿ' ಅಂತ ದುಡ್ಡು ಗಳಿಸೋ ಲಾರಿಯವರು, ಪ್ರತಿಯೊಂದು ಸ್ತಬ್ಧಚಿತ್ರ ಬಂದಾಗ ಉದ್ಗಾರಗಳು, ಒಂದು ಕುಣಿತ ಹಾಕಿ ಮುಂದೆ ಹೋಗ್ರಣೋ ಅಂತ ಕೇಕೆ ಹಾಕೋ ಪಡ್ಡೆಗಳು, ಹೆಂಡತಿಯ ರಕ್ಷಣೆಗೆ ಅಂತ್ಲೆ ಹೆಂಡತಿಯ ಹೆಗಲ ಸುತ್ತಾ ಕೈ ಹಾಕಿ ಕರೆದುಕೊಂಡು ಹೋಗೋ ಪತಿದೇವರುಗಳು, ಹಸಿರು ದಸರ ಅಂತಲೇ ಪೊಲೀಸರ ಸೈಕಲ್ ಸವಾರಿ, ಅಂಬಾರಿ ಬಂದ ಒಡನೆ 'ಚಾಮುಂಡಿಗೆ ಜೈ, ಅಮ್ಮನಿಗೆ ಜೈ' ಅಂತ ಭಕ್ತಿಯಿಂದ ಕಣ್ಣು ತುಂಬಿಕೊಂಡವರು, ಅಂಬಾರಿ ಹೋದ ಕೂಡಲೇ ಬನ್ನಿಮಂಟಪದ ಕಡೆ ದೌಡಾಯಿಸೋರು, .. ಅಹ್ ಮೈಸೂರು ದಸರಾ ಎಷ್ಟೊಂದು ಸುಂದರ..
ನಾಜೂಕಾಗಿ ಒಂದೆಡೆ ಕುಳಿತು sophisticated ಆಗಿ ಮೈಗೆ ಕೈ ತಾಗಿಸಿಕೊಳ್ಳದೆ ಚಪ್ಪಾಳೆ ಹೊಡೆಯಲೂ ಕೂಡ ಕಾಸು ಬೇಕು ಅನ್ನೋ ಅಥವ ಅವಮಾನ ಅನ್ನೋ ಅಥವಾ ಸೋಮಾರಿತನ ತೋರುವ ಜನಗಳ ನಡುವಿನ ದಸರಾಕ್ಕಿಂತ ತುಂಬಾ ಭಿನ್ನವಾದ 'ಜನರ ದಸರ' ನೋಡಿದೆ...
THe best part was ಅರ್ಜುನ ತನ್ನ ಗಜ ಗಾಂಭೀರ್ಯದೊಡನೆ ತಾಯಿ ಚಾಮುಂಡೇಶ್ವರಿಯ ಹೊತ್ತು ಸಾಗಿದ ಪರಿ ಮತ್ತು ಮಳೆಯಲ್ಲಿ ಕೂಡ ತನ್ನ ನಗುವನ್ನ ಎರಚುತ್ತಾ ಸಾಗಿದ ತಾಯಿ ಚಾಮುಂಡಿ .....
(ವಾಪಸ್ಸು ಬಂದ ಮೇಲೆ ನನ್ ಐಕ್ಳು 'ಮುಗಿತಾ ಜಾಲಿ ಬರ್ಡ್ಸ್ ದಸರ ' ಅಂದ್ವು... ನನ್ ಗಂಡ ಹೇಳಿದ್ದು 'ಅಯ್ , ದಸರಾ ಮುಗಿದ್ರೇನು ದೀಪಾವಳಿ ಬಂತಲ್ಲ " )
ದಸರಾ ಮುಗಿತಾ? ಇಲ್ಲವಲ್ಲ ಹಿಂಗ್ ಹೋಗಿ ಮತ್ ಹಾಂಗ್ ಬಂದ್ಬಿಡುತ್ತೆ :))))))
ರಿಯರೊಬ್ಬರು ಹೇಳಿದ ಪತಿಪತ್ನಿಯರ ನಡುವಿನ ನಂಬಿಕೆಯ ಬಗ್ಗೆ ಗೆಳೆತನದ ವಿಶ್ವಾಸದ ಬಗ್ಗೆ ಹೇಳಿದ ಕಥೆ .. ಹಂಚಿಕೊಳ್ಳಬೇಕು ಅನಿಸ್ತು 
ಒಮ್ಮೆ ಕರ್ಣ ಹಾಗು ದುರ್ಯೋಧನನ ಪತ್ನಿ ಭಾನುಮತಿ ಅವಳ ಅಂತಃಪುರದಲ್ಲಿ ಪಗಡೆ ಆಡ್ತಾ ಇರ್ತಾರೆ . ಭಾನುಮತಿ ಸೋಲ್ತಾ ಇರ್ತಾಳೆ. ಕರ್ಣ ಆಟದಲ್ಲಿ ಮೇಲುಗೈ ಸಾಧಿಸ್ತಾ ಇರ್ತಾನೆ .. ಅಷ್ಟ್ರಲ್ಲಿ ದುರ್ಯೋಧನ ಅಂತಃಪುರಕ್ಕೆ ಬರ್ತಾನೆ. ಗಂಡ ಬಂದನಲ್ಲ ಎಂದು ಭಾನುಮತಿ ಏಳೋಕೆ ಹೋಗ್ತಾಳೆ .. ಬಾಗಿಲಿಗೆ ಬೆನ್ನು ಹಾಕಿ ಕುಳಿತ ಕರ್ಣ ಸೋಲುವ ನೆಪಕ್ಕೆ ಆಟದಿಂದ ಹೊರ ಹೋಗುತ್ತಾ ಇದ್ದಾಳೆ ಇವಳು ಎಂದುಕೊಂಡು ಸ್ವಾಭಾವಿಕವಾಗಿ ಕೈ ಹಿಡಿದು ಎಳೆಯೋಕೆ ಹೋಗ್ತಾನೆ .. ಭಾನುಮತಿಯ ಕೈ ಸಿಗದೇ ಅವಳ ಮುತ್ತಿನ ಹಾರ ಕೈಗೆ ಸಿಕ್ಕಿ ಮುತ್ತುಗಳೆಲ್ಲಾ ಚಲ್ಲಾಪಿಲ್ಲಿಯಾಗಿ ಹೋಗುತ್ತವೆ .. ಕ್ಷಮೆಕೇಳಲು ಎದ್ದ ಕರ್ಣನಿಗೆ ಹಿಂದೆ ನಿಂತ ದುರ್ಯೋಧನ ಕಾಣ್ತಾನೆ .. ಅಚಾತುರ್ಯದಿಂದ ಹಾರ ಕಿತ್ತುದ್ದಲ್ಲದೆ ಅಪಾರ್ಥಕ್ಕೆಡೆ ಮಾಡಿಕೊಡುವಂತ ಪರಿಸ್ಥಿತಿಯಿಂದ ಭಾನುಮತಿ ಹಾಗು ಕರ್ಣ ಇಬ್ಬರೂ ಮುಜುಗರಕ್ಕೆ ಒಳಗಾಗುತ್ತಾರೆ .... ದುರ್ಯೋಧನ 'ಮುತ್ತುಗಳ ಆಯ್ದರೆ ಮಾತ್ರ ಸಾಕೆ ಇಲ್ಲಾ ಹಾರವನ್ನೂ ಕಟ್ಟಿಕೊಡಬೇಕೆ ಮಹಾರಾಣಿ ' ಎಂದಂದು ಪರಿಸ್ಥಿತಿಯ ತಿಳಿಯಾಗಿಸುತ್ತಾನೆ .. ಕರ್ಣನ ಹೆಗಲ ಮೇಲೆ ಕೈ ಹಾಕಿ ನಗುತ್ತಾನೆ ....
ನಂಬಿಕೆ ವಿಶ್ವಾಸಗಳ ಮೇಲೆ ಕಟ್ಟಿದ ಸಂಬಂಧಗಳು ಬೃಹತ್ ವೃಕ್ಷಗಳಂತೆ ...... ಕಥೆ ಕೇಳಿದ ಮನಸ್ಸು ಆ ಮರದಂತೆ ಹಸಿರಸಿರು
ಮನೆಯ ಪಕ್ಕ ಒಂದು ಹಿರಿಯ ಗಂಡಹೆಂಡತಿ ಇದ್ದಾರೆ. ಮಕ್ಕಳಿಲ್ಲ . ಗಂಡ ಹಾಲು ಒಕ್ಕೂಟದಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ.. ಅಷ್ಟು ವಯಸ್ಸಾಗಿದ್ದರೂ ಒಂದಿಬ್ಬರು ಮಕ್ಕಳಿಗೆ ಪಾಠ ಹೇಳಿಕೊಡ್ತಾರೆ . ಆ ಹಿರಿಯ ಮಹಿಳೆ ಮನೆಯಲ್ಲೇ ಕುಳಿತು ಒಂದಷ್ಟು ಮಣಿ ಸರ, ಗೆಜ್ಜೆ ವಸ್ತ್ರಗಳನ್ನ ಮಾಡ್ತಾರೆ . ಈಗ್ಲೂ ದಸರೆಯಲ್ಲಿ ರಾಜರಾಣಿ ಗೊಂಬೆಗೆ ಅಲಂಕಾರ ಮಾಡಿಕೊಡ್ತಾರೆ. ಕಾಂಪೌಂಡ್ ಹೊರಗೆ ಗಿಡ ಹಾಕಿದರೆ ಹಸುಗಳನ್ನ "ಹೊಡೆದು" ಓಡಿಸಬೇಕಲ್ಲ ಎಂದು ಹಸುಗಳು ತಿನ್ನದೇ ಉಳಿಸುವ (ದೊಡ್ಡ ಪತ್ರೆ, ತುಳಸಿ) ಗಿಡಗಳನ್ನ ಹಾಕಿದ್ದಾರೆ. ಗಂಡನೋ ಹೆಂಡತಿಯೋ ಅವರ ಆರೋಗ್ಯದ ಆಧಾರದ ಮೇಲೆ ಯಾರೋ ಒಬ್ಬರು ಬಾಗಿಲು ಗುಡಿಸಿ, ಒಂದು ಸಣ್ಣ ಬಕೆಟ್ ಅಲ್ಲಿ ನೀರು ಹಿಡಿದು ಚುಮುಕಿಸಿದರೆ ಆಕೆ ರಂಗೋಲಿ ಹಾಕ್ತಾರೆ. ಮತ್ತೊಂದು ಬಕೆಟ್ ನೀರು ಗಿಡಗಳಿಗೆ ಹಾಕ್ತಾರೆ (ನಮ್ಮ ಕಡೆ ಕೆಲವರು ಪೈಪ್ ಹಿಡಿದು ನೀರು ಹಾಕೋಕೆ ಶುರು ಮಾಡಿದ್ರೆ ಕಾವೇರಿ ಬಾಗಿಲಲ್ಲೇ ಹರೀತಾಳೆ). ಪ್ರತಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಮಾಡ್ಕೊಂಡು ಹೋಗ್ತಾರೆ. 'ಸುನೀತಾ , ಆಮೇಲೆ ಬಂದು ಕುಂಕುಮ ತಗೊಂಡ್ ಹೋಗಿ ಅಂತ ಕರೀತಾರೆ' . ಎಂದೂ ಯಾರು ದೂರುವಂತೆ ನಡೆದುಕೊಂಡಿಲ್ಲ ಮತ್ತೊಬ್ಬರನ್ನು ದೂರೋದು ಇಲ್ಲ .ವಾರಕ್ಕೆರಡು ಬಾರಿ ಮನೆಗೆ ಅಂತ ಮಾರ್ಕೆಟ್ ಇಂದ ಹೂ ತಂದಾಗ ಒಂದು ಹಿಡಿ ಹೂ ಕೊಟ್ರೆ ಆ ಹಿರಿಯಾಕೆ ಖುಷಿಯಿಂದ 'ರೇಟ್ ಕಮ್ಮಿ ಇದ್ದಾಗ ನಮಗೂ ಒಂದ್ ಕಾಲ್ ಕೆಜಿ ತಂದ್ ಬಿಡ್ರಪ್ಪಾ ' ಅಂತಾರೆ. ಅವರಷ್ಟಕ್ಕೆ ಅವರು 'ಸುಂದರವಾಗಿ' ಬದುಕುತ್ತಾ ಇದ್ದಾರೆ.ನೋಡಿದವರು "ಬದುಕಲು ಕಲಿಯಿರಿ" ಅನ್ನೋವಂತೆ ಬದುಕುತ್ತಾ ಇದ್ದಾರೆ.
ಮನೆಯ ಮುಂದಿನ ರಸ್ತೆ ಒಂದಷ್ಟು ದಿನಗಳಿಂದ ಹಳ್ಳ ಬಿದ್ದಿತ್ತು , ಅದ್ಯಾಕೋ ಗೊತ್ತಿಲ್ಲ ಸರಿ ಮಾಡಿಸಿದಷ್ಟು ನಮ್ಮ ಒಂದೆರಡು ಮನೆಗಳ ಮುಂದೆ ಯಾವಾಗ್ಲೂ ಹಳ್ಳವೆ ! ವಾಕಿಂಗ್ ಹೋಗಿ ಹಾಲು ತರುವಾಗೆಲ್ಲಾ ಹಾದಿಬದಿಯಲ್ಲಿ ಕಾಣೋ ದೊಡ್ಡ ಕಲ್ಲು ಗಾರೆಯ ತುಂಡುಗಳನ್ನ ಕೈಲಿ ಹಿಡಿದು ತಂದು ಆ ಹಳ್ಳಕ್ಕೆ ಹಾಕ್ತಾ ಇದ್ರು ಆ ಹಿರಿಯ. ಆ ಹೊತ್ತಲ್ಲಿ ಬಾಗಿಲಿಗೆ ನೀರು ಹಾಕುವ ನಾನು 'ಅಯ್ಯೋ ಅಂಕಲ್ , ಎಷ್ಟ್ ಹಾಕಿದ್ರು ಅಷ್ಟೇ ಬಿಡಿ ನಮ ರೋಡು ಉದ್ದಾರ ಆಗೋದಿಲ್ಲ' ಅಂತ ಹೇಳ್ತಾ ಇದ್ದೆ . ಅವರೂ ನಗ್ತಾ ಸಾಗ್ತಾ ಇದ್ರು . ಈಗ ಹಳ್ಳ ತುಂಬಿದೆ ..! ಅಷ್ಟೆಲ್ಲ ನೀರು ನಿಲ್ಲೋದಿಲ್ಲ ..
ಆದ್ರೂ ಅವರ ಬದುಕಿನ ಬಗ್ಗೆ ಅವರ ಆಸಕ್ತಿ, ಶಿಸ್ತು , ಬದುಕನ್ನ ನೋಡುವ ಆಪ್ಟಿಮಿಸಂ.. "ಬದುಕಿಗೆ ಗುರಿ ಬೇಕು ನಮ್ಮ ಮಕ್ಕಳ್ಳನ್ನ ಚೆನ್ನಾಗಿ ಬೆಳೆಸೋದೇ ನಮ್ಮ ಗುರಿ ಅಂತ ಸ್ಲೋಗನ್ ಹೇಳ್ಕೊಳ್ತಾ ಬದುಕುವುದಕ್ಕೆ ಯಾವುದೋ ಒಂದು ಆಸರೆ ಬೇಕು, ಗುರಿ ಬೇಕು ' ಅಂತ ಅಂದ್ಕೊಳ್ತಾ ಒಂದು false ಭ್ರಮೆಯಲ್ಲಿ ಬದುಕುವ ನಮಗೆ (ನನಗೆ ನನ್ನ ಗಂಡನಿಗೆ), ನಮ್ಮಂಥವರಿಗೆ ಬದುಕಲು ಕಲಿಯಿರಿ ಎಂದು ಹೇಳುವಂತೆ .... ಬದುಕೋದಕ್ಕೆ ಕಾರಣವೇನು ಬೇಡ ಚೆನ್ನಾಗಿ ಬದುಕೋದೇ ಒಂದು ಖುಷಿ ಅನಿಸೋ ಹಾಗೆ ...
ಮನಸ್ಸು ನೀಲಿನೀಲಿ ...ಒಂದೆರಡು ಹನಿ ಬಿದ್ದರೆ ಸಾಕು ಕಾಮನಬಿಲ್ಲನ್ನು ಮೂಡಿಸುವೇ ಎನ್ನುವ ಸೂರ್ಯಕಿರಣದಂತೆ
ಮೊನ್ನೆ ಮಧ್ಯಾಹ್ನ ಕಾರ್ತಿ ಫೋನ್ ಮಾಡ್ದ 'ಅಮ್ಮ, ವಾಟರ್ ಟ್ಯಾಂಕ್ ಹತ್ತಿರ ಇದ್ದೀನಿ ಬಾ ಪಿಕ್ ಮಾಡೋಕೆ ' ಸರಿ ಗಾಡಿ ತಗೊಂಡು ಹೊರಟೆ . ಹೈ ಟೆನ್ಶನ್ ರಸ್ತೆಗೆ ಬಂದು ಎಂದಿನಂತೆ ನನ್ನದೇ ಲಹರಿಯಲ್ಲಿ ಗಾಡಿ ಓಡಿಸ್ತಾ ಇದ್ದೆ .. ಹಿಂದೆಯಿಂದ ಜೋರು ಹಾರ್ನ್ ಕೇಳಿಸ್ತು, ಕನ್ನಡಿಯಲ್ಲಿ ತುಂಬಾ ಹತ್ತಿರಾನೆ ಒಬ್ಬ ವ್ಯಕ್ತಿ ನನ್ನ ಹಿಂದೇನೆ ಇರೋದು ಕಾಣಿಸ್ತು. ನಾ ಪಕ್ಕಕ್ಕೆ ತಗೊಂಡಷ್ಟು ಆ ವ್ಯಕ್ತಿ ಕೂಡ ಹತ್ತಿರಾನೆ ಬರ್ತಾ ಇರೋದು ಅರಿವಿಗೆ ಬರ್ತಾ ಇತ್ತು. ಮೊದ್ಲೇ ಗಾಡಿ ಓಡಿಸುವಾಗ ಸ್ವಲ್ಪ ಟೆನ್ಶನ್ ಪಾರ್ಟಿ ನಾನು ..ತೀರಾ ಪಕ್ಕಕ್ಕೆ ತಗೊಂಡು ಹೋದೆ ಮತ್ತು ಗಾಡಿ ಸ್ಲೋ ಮಾಡಿದೆ .. (ನಮ್ಮೂರಲ್ಲಿ ಸರಗಳ್ಳತನ ತುಂಬಾನೇ ಹೆಚ್ಚಾಗಿದೆ.. ಹಿಂದೆಯಿಂದ ಬಂದು ಮಹಿಳೆಯರ ಸರ ಕಿತ್ತುಕೊಂಡು ಹೋಗೋದು ಕೆಲವರಿಗೆ ಜೀವನಾಧಾರವಾಗಿ ಬಿಟ್ಟದೆ ಹಾಗು ಹೆಣ್ಣು ಮಕ್ಕಳಿಗೆ ಜೀವಕ್ಕೆ ಎರವಾಗಿ ಬಿಟ್ಟಿದೆ :( . ಓಡಿಸುವ ಗಾಡಿಯನ್ನ ನಿಲ್ಲಿಸುವುದೇ ಅಪಾಯ ಅನಿಸೋ ಹಾಗೆ .... ಆದ್ರೂ ಒಂದೊಂದೇ ರೂಪಾಯಿ ಕೂಡಿಟ್ಟು ಆಸೆಯಿಂದ ಮಾಡಿಸಿಕೊಳ್ಳು ಒಡವೆಯನ್ನ ಕ್ಷಣಮಾತ್ರದಲ್ಲಿ ಕಸಿದುಕೊಂಡು ಹೋಗುವ ಇಂತಹವರು ಒಂದಷ್ಟು ಕಷ್ಟ ಪಟ್ಟು ದುಡಿದರೆ ಆಗದೆ ಎನಿಸುತ್ತದೆ. ಮಂಜು ಹೇಳ್ತಾರೆ 'ಇದಕ್ಕೂ ಕಷ್ಟ ಪಡಬೇಕು ಕಣ್ ತಾಯಿ!!' ಅಂತ .. ನಡೆದೇ ಹೊರಡಲಿ , ಗಾಡಿಯಲ್ಲೇ ಹೊರಡಲಿ ಹೆಣ್ಣು ಮಕ್ಕಳು ಒಡವೆ ಹಾಕಲು ಹೆದರುವ ಸ್ಥಿತಿ ಬಂದು ಬಿಟ್ಟಿದೆ.. ಪಕ್ಕದಲ್ಲಿ ಹೋದರೂ ಸಂಶಯದಿಂದ ನೋಡೋ ಹಾಗೆ ಆಗಿಬಿಟ್ಟಿದೆ )
ಗಾಡಿ ಸ್ಲೋ ಮಾಡಿ ಆ ವ್ಯಕ್ತಿಯನ್ನೇ ಪ್ರಶ್ನಾರ್ಥಕವಾಗಿ ನೋಡಿದೆ . ಇಲ್ಲಿ ಪ್ರಶ್ನಾರ್ಥಕ ಅಂದ್ರೆ ಗೊತ್ತಲ್ಲ (ಯಾಕೋ ಹುಡುಗ ಮೈಯಾಗೆ ಹೆಂಗಾಗೈತೆ ...:) :)ಅನ್ನೋ ಹಾಗೆ ) ಸುಮ್ನೆ ನೋಡ್ತಾನೆ ಇದ್ದ .. ನಾನು ನೋಡಿದೆ . ಮೊದ್ಲೇ ನಂಗೆ ಸ್ವಲ್ಪ amnesia. ಆಗಾಗ ಸಿಗೋರೆ ನೆನಪಿರೋದಿಲ್ಲ . ತಲೆಯಲ್ಲಿ recap ಆಗೋಕೆ ಶುರುವಾಯ್ತು . 'ಮಂಜು ಫ್ರೆಂಡಾ?, ನನ್ನ ಫ್ರೆಂಡಾ? ಕಾರ್ತಿ ಅಥವಾ ಕೃತಿಯ ಗೆಳೆಯ/ತಿರ ತಂದೆನಾ ? 'ಹಾಗೆ rewind ಆಗ್ತಾ ಆಗ್ತಾ ತಲೆಗೆ ಮಿಂಚ್ ಹೊಳೆಯಿತು "ಹೇ , ನೀನು, ___ ಅಲ್ವ ?" ಈಗ ನಕ್ಕ ಅವನು.
"ಅಯ್ಯೋ ಹೆಂಗಿದಿಯೋ , ಎಷ್ಟ್ ವರ್ಷ ಆಯ್ತೋ ನಿನ್ನ ನೋಡಿ , ಇದೇನೋ ಇಲ್ಲಿ , ನನ್ನ ಹೆಂಗೆ ಗುರುತಿಸಿದೆ ಅದೂ ಗಾಡಿ ಓಡಿಸ್ತಾ , ಇನ್ನೂ ಹೆಣ್ಣು ಮಕ್ಕಳನ್ನ ನೋಡೋದು ಬಿಟ್ಟಿಲ್ಲ ಅಲ್ವ ..ಮನೆಗೆ ನಡಿ, ಒಂದ್ ೫ ನಿಮಿಷ ಇಲ್ಲೇ ಇರು ಮಗನ್ನ ಕರ್ಕೊಂಡ್ ಬಂದ್ ಬಿಡ್ತೀನಿ ಮನೆಗೆ ಹೋಗೋಣ... " ಆಗ್ಲೂ ನನ್ನ ಉತ್ಸಾಹ ಕಮ್ಮಿ ಆಗೋವರೆಗೂ ನಗ್ತಾ ಇದ್ದ ಅವ್ನು .. ಆಮೇಲೆ ಹೇಳ್ದ 'ಸ್ವಲ್ಪ ನಿಲ್ಸು ಮಾರಾಯ್ತಿ . ನಿನ್ನ ಗುರುತು ಹಿಡಿಯೋದೇನು ಕಷ್ಟಾ ? ಹಂಗೆ ಗುಂಡಗುಂಡಗೆ ಇದ್ದೀಯ ಈಗ್ಲೂ , ಸರಿ ನಿನ್ ನಂಬರ್ ಕೊಡು , ಡ್ಯೂಟಿಗೆ ಹೋಗ್ತಾ ಇದೀನಿ , ಸಂಜೆ ಕಾಲ್ ಮಾಡ್ತೀನಿ , ನಮ ಮನೇನೂ ಇಲ್ಲೇ ....Etc etc.." ಅಂದ 'ಹೂ೦, ಮಗ ಕಾಯ್ತಾನೆ 'ಅಂತ ನಂಬರ್ ಕೊಟ್ಟು ನಾನೂ ಹೊರಟೆ.
ಮನೆಗೆ ಬರ್ತಾ ಕಾರ್ತಿಗೆ ಹೇಳ್ದೆ ಹಿಂಗ್ ಹಿಂಗೆ ಅಂತ, ಮನೆಗೆ ಬಂದು ಕೃತಿಗೆ ಹೇಳ್ದೆ , ಆಮೇಲೆ ಮಂಜುಗೆ ಹೇಳ್ದೆ ...ಮಂಜು 'ಮಗ ಇನ್ ಒಂದಾಲ್ಕು ದಿನ ಅವ್ನದೆ ಕಥೆ ಹೇಳ್ತಾಳೆ ನಿಮ್ಮಮ್ಮ ' ಅಂದ್ರೆ ಮಗರಾಯ 'ನೀ ಕೇಳಿಸ್ಕೊ ಅಪ್ಪ, ಕಟ್ಕೊಂಡಿದ್ದೀಯಲ್ಲ " ಅಂತ ಕಣ್ಣು ಮಿಟುಕಿಸಿದ !!!
ಕೆಲವು ಬಾಲ್ಯದ ಗೆಳೆತನಗಳೇ ಹಾಗೆ ವರುಷಗಳ ನಂತರವೂ ಮೊಗದಲ್ಲಿ ನಗುವನ್ನ ಮನದಲ್ಲಿ ಹಸಿರನ್ನ ತರಿಸೋ ಹಾಗೆ ..... :)))

Saturday, 30 July 2016

ಏನ ಹೇಳಲಿ ಈ ಅನುಬಂಧದ ಬಗೆ...
ಪ್ರೀತಿ- ಕಲಹ,
ನಗು -ಅಳು
ಜೀವ-ಭಾವ,
ಸುಖ- ದುಖ
ಹಂಚಿಕೊಂಡೆವು ನಮ್ಮೊಳಗೇ...
ನೀ ಅತ್ತಾಗ ನನ್ನ ಕಣ್ಣಲಿ ಕಂಬನಿ
ನಾ ನಕ್ಕಾಗ ನಿನ್ನ ತುಟಿಯಲ್ಲಿ ನಗೆಯ ಇಬ್ಬನಿ..
ಬರಿ ಪ್ರೀತಿ ಮಾತ್ರವೇ ಇರಲಿಲ್ಲ ನಮ್ಮಲಿ..
ನೀ ಹೊಡೆದ ಪೆಟ್ಟಿನ ಗುರುತು ಇದೆ ಇನ್ನೂ ನನ್ನ ಹಣೆಯಲ್ಲಿ...
ನಾ ನನ್ನ ಕನಸ ಹಂಚಿಕೊಂಡೆ ನಿನ್ನೊಡನೆ...
ನೀ ನಿನ್ನ ಗುಟ್ಟ ಬಿಟ್ಟು ಕೊಟ್ಟೆ ನನ್ನೊಡನೆ...
ದಿನಗಳೆದಂತೆ,
ನಮ್ಮ ನಡುವೆ ಹೊಸ ಬಂಧ, ಬಂಧುಗಳು ..
ನನ್ನ ನಾ ಕೇಳಿಕೊಂಡೆ
ಎಲ್ಲಿ ಹೋದವು ಆ ದಿನಗಳು...
ಎಷ್ಟು ದೂರ ಇದ್ದರೇನು....
ಎಷ್ಟು ದಿನಗಳಾದರೇನು
ಮರೆಯಲಾದೀತೇ ಆ ಮಧುರ ನೆನಪುಗಳನ್ನು
ತೊರೆಯಲಾದೀತೇ ನಮ್ಮ ಬಂಧವನ್ನು
ಬೇಡಿ, ಹುಡುಕಿ ಪಡೆದ ಗೆಳೆತನವಲ್ಲ ಇದು...
ತೊಟ್ಟಿಲಿನಿಂದ ಗೋರಿಯವರೆಗೆ...
ತಾಯ ಗರ್ಭದಿಂದ ಭೂತಾಯಿಯ ಗರ್ಭದವರೆಗೆ...
ಬೇಡದೆಯೇ , ಹುಡುಕದೆಯೇ ಒಲಿದು ಬಂದ
ಒಡಹುಟ್ಟುವಿಕೆ...
ಏನ ಹೇಳಲಿ ಈ ಅನುಬಂಧದ ಬಗೆ...
ನ್ನ ಫ್ರೆಂಡ್ ಇದ್ದಾರೆ..ಡಾ. ಕಿಶೋರ್ ಅಂತ, ಮಾಲ್ಡಿವ್ಸ್ ನವರು...ಒಂದು ಸಣ್ಣ ಕಥೆ ಕಳಿಸಿದ್ದರು....ಅದರ ಅನುವಾದ...
ವರುಷಗಳ ಹಿಂದೆ ಮಾಲ್ಡಿವ್ಸ್ ದ್ವೀಪ ಚೆಂದದ ಗಿಡಮರಗಳಿಂದ ತುಂಬಿ ನಳನಳಿಸುತ್ತ ಇತ್ತು...
ಸುಂದರ ದ್ವೀಪಕ್ಕೆ ಆಗಾಗ ಕಿನ್ನರಿಯರು, ಗಂಧರ್ವರು ಬಂದು ಹೋಗುತ್ತಾ ಇದ್ದರು...
ಸುಂದರ ಕಡಲ ಕಿನಾರೆಗೆ ಪ್ರತಿ ಹುಣ್ಣಿಮೆಯ ರಾತ್ರಿ ಕಿನ್ನರಿಯೋಬ್ಬಳು ಬಂದು ಸಮಯ ಕಳೆದು ಹೋಗುತ್ತಾ ಇದ್ದಳು...
ಪಕ್ಕದ ರಾಜ್ಯದ ರಾಜ್ಕುಮಾರನೋಬ್ಬನ ಹಡಗು ಅಲೆಗಳ ಹೊಡೆತಕ್ಕೆ ಸಿಕ್ಕಿ ಮುಳುಗಿ ಹೋಯಿತು..ರಾಜಕುಮಾರ ಸಾಗರ ಕಿನಾರೆಗೆ ಬಂದು ಬಿದ್ದ....
ಅಂದು ರಾತ್ರಿ ಅಲ್ಲಿಗೆ ಬಂದ ಕಿನ್ನರಿ ರಾಜಕುಮಾರನ ನೋಡಿದಳು...ಆತನೂ ಅವಳ ನೋಡಿದ ...ಇಬ್ಬರು ಪ್ರೀತಿಯ ಬಲೆಯಲ್ಲಿ ಬಿದ್ದರು ..ಬೆಳದಿಂಗಳು ಅವರ ಪ್ರೀತಿಗೆ ಸಾಕ್ಷಿಯಾಯಿತು......
ಬೆಳಗಿನ ರವಿ ಕಿರಣ ಅವನ ಕಣ್ಣ ತೆರೆಸುವ ಹೊತ್ತಿಗೆ ಕಿನ್ನರಿ ಮಾಯವಾಗಿದ್ದಳು...ರಾಜಕುವರ ಅವಳಿಗಾಗಿ ಹುಡುಕಿದ ..ಆಕೆ ಸಿಗಲೇ ಇಲ್ಲ......ಮನದ ತುಂಬಾ ಭರವಸೆಯ ಹೊತ್ತ ಅವನು ಅಲ್ಲೇ ಸಿಗುವ ಹಣ್ಣು ಹಂಪಲು ತಿಂದು ಬದುಕ ಸಾಗಿಸಿದ್ದ....
ಅಂದು ಹುಣ್ಣಿಮೆ....ರಾತ್ರಿಯಾಗುತ್ತಿದಂತೆ ಕಿನ್ನರಿ ಸಾಗರ ಗರ್ಭದಿಂದ ಬಂದಳು..ರಾಜಕುವರನ ಸಂಭ್ರಮಕ್ಕೆ ಮಿತಿಯೇ ಇರಲಿಲ್ಲ....ಕಿನ್ನರಿ ಕೂಡ ಅರ್ಪಣಾ ಭಾವದಿಂದಲೇ ಬಂದಿದ್ದಳು.....ಮತ್ತೊಂದು ಹುಣ್ಣಿಮೆಯ ಸುಂದರ ರಾತ್ರಿ....ಬೆಳದಿಂಗಳ ಸಾಕ್ಷಿ............ಬೆಳಕಿನ ಕಣ್ಣು ತೆರೆವ ಹೊತ್ತಿಗೆ ಕಿನ್ನರಿ ಹೋಗೆ ಬಿಟ್ಟಿದ್ದಳು.....
ಹಗಲು ರಾತ್ರಿ....ಮತ್ತೊಂದು ಹುಣ್ಣಿಮೆ....ಅದೇ ಬೆಳದಿಂಗಳು ..ಅದೇ ಅಲೆಗಳು ....ಅದೇ ಪ್ರೀತಿ...!!!!ಸುಂದರ ದಿನಗಳು....
ಒಂದು ದಿನ ರಾಜಕುಮಾರನ ಹುಡುಕ್ಕುತ್ತ ಬಂದ ಹಡಗು ಅವನ ಹಿಂಜರಿಕೆಯ ವಿರೋಧದ ನಡುವೆಯೂ ಅವನನ್ನ ಅವನ ರಾಜ್ಯಕ್ಕೆ ಕರೆದೊಯ್ದಿತ್ತು....
ಹುಣ್ಣಿಮೆಯ ರಾತ್ರಿ ಇನಿಯನ ಅರಸುತ್ತಾ ಬಂದ ಕಿನ್ನರಿಗೆ ಬರಿದಾದ ಕಡಲ ಕಿನಾರೆ ದಂಗುಬಡಿಸಿತ್ತು...ಅವನಿಗಾಗಿ ಹುಡುಕಿಯೇ ಹುಡುಕಿದಳು....ಬದುಕೇ ಬರಿದ್ದಾಯ್ತೆ ????
ಬೆಳಕು ಮೂಡುವ ವೇಳೆಗೆ ಹೊರಡುವ ಸಮಯ ಸನಿಹವಾದಂತೆ ಕಣ್ಣಿಂದ ಒಂದು ಪುಟ್ಟ ಹನಿ ಜಾರಿ ಬಿತ್ತು...ಬೀಳುವ ಮೊದಲೇ ರವಿಯ ಕಿರಣ ಸೋಕಿ ಸುಂದರ ಸುಮವಾಯ್ತು...ಆ ಹೂವು ಅವನಿಗಾಗಿ ಹುಡುಕುವಂತೆ ಹಗಲಿರುಳು ಕಾಯ್ದು ಬಾಡುತ್ತಿತ್ತು....
ಮತ್ತೊಂದು ಹುಣ್ಣಿಮೆ...ಮತ್ತೆ ಕಿನ್ನರಿಯ ಹುಡುಕಾಟ....ಅವಳ ಕಣ್ಣ ಹನಿ ....ಇನ್ನೊಂದು ಸುಮಾ....
ಮತ್ತೊಂದು ಹುಣ್ಣಿಮೆ...............ಇನ್ನೊಂದು ಸುಂದರ ಹೂ..
ನಲ್ಲನ ಹುಡುಕುತ್ತಾ ಕಿನ್ನರಿ ಇಂದಿಗೂ ಕಡಲ ತದಿಗೆ ಬರುತ್ತಾಳೆ.....ಪ್ರೀತಿಯ ಅರ್ಥ ತಿಳಿಸಿದ ಅವನಿಗಾಗಿ ಕಣ್ಣ ಹನಿ ಮಿಡಿಯುತ್ತಾಳೆ...ಸುಂದರ ಹೂವೊಂದು ಅರಳುತ್ತದೆ ....
ಇದು ಇಂದಿಗೂ ನಡೆದೇ ಇದೆ....
ಇಬ್ಬರನ್ನೂ ನೋಡದ ಜನ ಆ ಪ್ರೀತಿಯ ಹೂವ ನೋಡುತ್ತಾರೆ....ಸೌಂದರ್ಯವ ಸವಿಯುತ್ತಾರೆ....ಹೆಪ್ಪುಗಟ್ಟಿದ ಪ್ರೀತಿಯ ದನಿ ಕೇಳಿದಂತೆ ಮನವರಳಿಸುತ್ತಾರೆ ......
"ಪ್ಹಾಲುಮ....ಸುಂದರ ಒಂಟಿ ಹೂವು" ಆ ಹೂವಿನ ಹೆಸರು ......:))))ಫಾಲುಮಾ......ಕಣ್ಣ ಹನಿಯ ಹೂವು ..:))
ಅದೊಂದು ಸಂಸಾರ...ಅಪ್ಪಅಮ್ಮ, ಮಗ ಸೊಸೆ, ಮೊಮ್ಮಗ..ಎಲ್ಲವೂ ಚೆಂದ ಅನ್ನೋ ಹಾಗೆ ಬದುಕು ನಡಿತಾ ಇತ್ತು....
ಇದ್ದಕ್ಕಿದ್ದ ಹಾಗೆ ಒಂದು ದಿನ ಮಗ ಖಾಯಿಲೆ ಬಿದ್ದ...ಸ್ವಲ್ಪ ಕಾಲ ಬಹಳ ಹಿಂಸೆ ಅನುಭವಿಸಿದ...ಕಡೆಗೆ ಒಮ್ಮೆ ಸತ್ತೂ ಹೋದ...
ಕುಟುಂಬಕ್ಕೆ ದಿಕ್ಕೇ ತೋಚದಂತೆ ಆಯಿತು ..ಎಲ್ಲಾ ಗೋಳಾಡುತ್ತಾ ಕುಳಿತರು..
ಅಪ್ಪ ಹೇಳಿದ.."ನಿನ್ನ ಬದಲು ವಯಸ್ಸಾದ ನಾನೇ ಹೋಗಬಾರದಿತ್ತೇ."ಅಮ್ಮ ಕೂಡ ಹಾಗೆ ಅತ್ತಳು...ಹೆಂಡತಿ ಮಗ ಕೂಡ ತುಂಬಾನೇ ಸಂಕಟಪಟ್ಟರು..
ಆ ಹಾದಿಯಲ್ಲಿ ಒಬ್ಬ ಸಾಧು ಬಂದ ...ಈ ಗದ್ದಲ ಕೇಳಿ ಬಂದು ಸಂತೈಸಿದ ..ಹುಟ್ಟು ಸಾವಿನ ಬಗ್ಗೆ ಲೆಕ್ಕ ಹೇಳಿದ....ಅವರ ಸಂಕಟ ಕಮ್ಮಿಯಾಗದಿದ್ದಾಗ, ಒಂದು ಬಟ್ಟಲು ನೀರು ತೆಗೆದುಕೊಂಡ...ಹೇಳಿದ.."ನಿಮ್ಮಲ್ಲಿ ಯಾರಾದ್ರೂ ಈ ನೀರು ಕುಡಿದರೆ ನಾ ಅವನ ಬದುಕಿಸಬಲ್ಲೆ...ಆದರೆ ನೀರು ಕುಡಿದವರು ಸಾಯುತ್ತಾರೆ ".
ಎಲ್ಲಾ ಮುಖ ಮುಖ ನೋಡಿಕೊಂಡರು...ಅಳು ನಿಂತಂತೆ ಕಂಡಿತು...
ಸಾಧು ಅಪ್ಪನ ಮುಖ ನೋಡಿದ..ಅಪ್ಪ ಹೇಳಿದ.."ಅಯ್ಯೋ ನಾನು ಸತ್ತೂ ಹೋದರೆ ವಯಸ್ಸಾದ ನನ್ನ ಹೆಂಡತಿಯ ಯಾರು ನೋಡಿಕೊಳ್ತಾರೆ"....
ಸಾಧು ಅಮ್ಮನ ಕಡೆ ನೋಡಿದ.."ನನ್ನ ಮಗಳು ಮುಂದಿನ ತಿಂಗಳು ಬಾಣಂತನಕ್ಕೆ ಬರುವವಳಿದ್ದಾಳೆ..ಅವಳಿಗೆ ..ನನ್ನ ಗಂಡನಿಗೆ ದಿಕ್ಕು ಯಾರು" ಅಂದ್ಲು...
ಸಾಧು ಈಗ ಸೊಸೆ ಕಡೆ ನೋಡಿದ.."ಅವನಿಲ್ಲದೆ ಬದುಕು ನನಗೆ ಕಷ್ಟಾನೆ..ಆದ್ರೆ ನಾನು ಸತ್ತೂ ಹೋದರೆ ನನ್ನ ಮಗನ ಕಥೆ ????" ಅಂದ್ಲು....ಇನ್ನು ಪುಟ್ಟ ಮೊಮ್ಮಗನ ಕಡೆ ಸಾಧು ತಿರುಗುವ ಮುನ್ನ ಸೊಸೆ ಹುಡುಗನ್ನ ಬಾಚಿ ತಬ್ಬಿಕೊಂಡಳು ಎಲ್ಲಿ ಸಾಧು ಅವನನ್ನ ಕಿತ್ತು ಕೊಳ್ತಾನೋ ಎಂಬಂತೆ...
ಈಗ ನಕ್ಕ ಸಾಧು, ಹೇಳಿದ..."ಸಾವು ಅನ್ನೋದು ಹಾಗೆ...ನಮ್ಮ ಕಾಲ ಮುಗಿದ ಮೇಲೆ ನಾನು ಹೋಗಲೇ ಬೇಕು...ಮುಂದಿನ ಕೆಲಸ ಮಾಡಿ"ಅಂದ .....
ಕ್ಷಣಗಳಲ್ಲಿ ದಾರಿಯ ತಿರುವಿನಲ್ಲಿ ಕಾಣದಂತೆ ಹೊರಟು ಹೋದ...
"ಆಗಮನ...ನಿರ್ಗಮನ...ಎರಡು ಕಾಣದ ಕೈಗಳಲ್ಲಿ ಇವೆಯಂತೆ...ಅವನಿಗೆ ಇಷ್ಟ ಆದಾಗ ಹೂ ಅರಳಿಸುವನಂತೆ...ಅವನಿಗೆ ಇಷ್ಟ ಆದಾಗ ಹೂವು ಎಷ್ಟೇ ಸುಂದರವಾಗಿದ್ದರು ಕಿತ್ತು ಕರೆದೊಯ್ವನಂತೆ.......
Love Lasts As Long As Life Exists
The Rest Is Only Memories Of Happy Times..!!!!!
ನೆನ್ನೆ ಬೇಸರಗೊಂಡಿದ್ದ ನನಗೆ ನನ್ನ ಅತಿ ಆತ್ಮೀಯ ಹಿರಿಯ ಮಿತ್ರರೊಬ್ಬರ Mail kathe....ಅವರಿಗೆ ನನ್ನ ಮನದಾಳದ ನಮನ...:))))


ಕಾಯದ ಹೊರತು ಹಾಲು ಕೆನೆಗಟ್ಟದಲ್ಲ..
ಬೇಯಿಸದ ಹೊರತು ಮಡಕೆ ಕಳೆಗಟ್ಟದಲ್ಲ ..
ಕಾಯದ ಹಾಲಿಗೂ ಬೇಯದ ಮಡಿಕೆಗೂ ಬಾಳುವ ಬಲವೇ ಇಲ್ಲ..…
ಕ್ರಮಿಸದ ಹೊರತು ಪಯಣ ಮುಗಿಯದಲ್ಲ ..
ಶ್ರಮಿಸದ ಹೊರತು ಬದುಕು ಬನವಾಗದಲ್ಲ …
ಕ್ರಮಿಸದ ಹಾಡಿಗೂ , ಶ್ರಮಿಸದ ಬದುಕಿಗೂ ಗುರಿ ಗುಡಿ ಇಲ್ಲವಲ್ಲ ...:)))
ಹಾಗೆ ಸುಮ್ಮನೆ...:))))
ಓದೋದು ......ಕಥೆ ಪುಸ್ತಕ ಅಂದ ಕೊಡಲೇ ನೆನಪಾಗೋದು...ಪಾಠದ ಪುಸ್ತಕದ ಮಧ್ಯೆ ಇಟ್ಟು ಕದ್ದು ಓದುತ್ತ ಇದ್ದ ಪುಸ್ತಕಗಳು....ಸುಮಾರು ೬-೭ನೆ ತರಗತಿಯಲ್ಲಿ ಶುರುವಾದ ಓದುವ ಹುಚ್ಚು ಇನ್ನು ಬಿಟ್ಟಿಲ್ಲ....ಇಂತದೆ ಅಂತ ಏನು ಅಲ್ಲದೆ ಇದ್ರೂ....ಸಿಕ್ಕಿದ ಎಲ್ಲ ಓದುವ ಹಂಬಲ....ಏನೂ ಇಲ್ಲದೆ ಇದ್ರೆ ಮಗಮಗಳ ಇಂಗ್ಲಿಷ್, ಕನ್ನಡ , ಹಿಂದಿ ಸಂಸ್ಕೃತ ಪಾಠದ ಪುಸ್ತಕಗಳನ್ನಾದರು ತಿರುಗಿಸುವ ಹುಚ್ಚು...ಅಮ್ಮನಿಗೆ ಏನಿಲ್ಲ ಅಂದ್ರು ಕಡೆಗೆ ಕಡಲೆಕಾಯಿ ಕಟ್ಟಿ ಕೊಟ್ಟ ಪೇಪರ್ ಆದರು ಆದೀತು ಅಂತ ನಗ್ತಾರೆ ನನ್ನ ಮಕ್ಕಳು...ಮಂಜು ಟಿವಿ ನೋಡೋವಾಗ ನಾನು ಬಳಿಯಲ್ಲೇ ಕುಳಿತು ಏನಾದ್ರೂ ಓದುತ್ತ ಇರ್ತೀನಿ....ಕರೆಂಟ್ ಹೋದಾಗ whistle ಹೊಡಿತೀನಿ...ನೋಡಪ್ಪ ನಿನ್ನ ಫ್ರೆಂಡ್ (ಟಿವಿ) ಕೈ ಕೊಟ್ಟ...ನನ್ನ ಗೆಳೆಯ ನೋಡು ಯಾವತ್ತೂ ನನ್ನ ಜೊತೇನೆ ಇರ್ತಾನೆ ಅಂತ ನಗ್ತೀನಿ...ನಿಜ ...ಓದುವಿಕೆ ondu ಹವ್ಯಾಸ ಅಂದ್ರೆ ಹವ್ಯಾಸ... ಹುಚ್ಚು ಅಂದ್ರೆ ಹುಚ್ಚು...ಪುಸ್ತಕಗಳು ನಮ್ಮ ಆತ್ಮೀಯ ಮಿತ್ರರು....ದೇಶ ಸುತ್ತು ಕೋಶ ಓದು ಅಂತಾರೆ....ಹಿರಿಯರು...ಓದುವ ಅಭ್ಯಾಸ ಮಾಡಿಕೊಳ್ಳೋಣ....ಓದಿದ ನಂತರವೆ ಮೆಚ್ಚುಗೆ ಕೊಡೋಣ ...ಇಲ್ಲ ಅಂದ್ರೆ ದಯವಿಟ್ಟು ಸುಮ್ಮನೆ ಲೈಕ್ ಹಾಕೋದು ಬೇಡ ...ಅದು ಬರವಣಿಗೆಗೆ ಬರಹಗಾರರಿಗೆ ಅಪಮಾನ ಮಾಡಿದಂತೆ....ವಿಮರ್ಶೆ ಅಂದ್ರೆ ಬರಿ ತಪ್ಪು ಹುಡುಕೋದೇ ಅಲ್ಲ...ಇಲ್ಲ ಬರಿ ಹೊಗೊಳೋದೇ ಅಲ್ಲ...ವಿಮರ್ಶೆ ಇನ್ನೊಬ್ಬರ ಮನ ನೋಯದಂತೆ ಇರಬೇಕು...ರಾಜಕೀಯ...ಜಾತಿ ಮತಗಳ ಹೊರತಾದ ಚರ್ಚೆ ಆದರೆ ಗುಂಪು ಸುಂದರವಾಗಿ ಇರಬಲ್ಲುದು....ಓದುಗ ಯಾವತ್ತೂ ದೊರೆನೇ...ಅವನಿಗೆ ಅವನ ಇಷ್ಟದ ಸಾಹಿತ್ಯ ಓದುವ ಸ್ವಾತಂತ್ಯ ಇದೆ....ಚರ್ಚಿಸುವ ಹಕ್ಕಿದೆ .....ಅಂತಹ ಹವ್ಯಾಸ ಬೆಳೆಸಿಕೊಳ್ಳೋಣ.....

Wednesday, 13 July 2016

ಬೆಳಿಗ್ಗೆ ಬೆಳಿಗ್ಗೆ ಕಸದ ಗಾಡಿಯವನು ಬಂದಿದ್ದ. ದಿನ ಬಿಟ್ಟು ದಿನ ಬರುವ ಅವನ ಆಟೋ ಅದೆಷ್ಟು ತುಂಬಿ ಹೋಗಿರುತ್ತದೆ ಅಂದ್ರೆ, ಅರ್ಧ ಕಸ ದಾರಿಯಲ್ಲೇ ಚೆಲ್ಲಿ ಹೋಗೊ ಅಷ್ಟು .... ನಾವು ಸಣ್ಣವರಿದ್ದಾಗ ಕಸ ಒಂದು ಸಮಸ್ಯೆನೇ ಆಗಿರಲಿಲ್ಲ . ಹಾಲು ಹಾಕೋಕೆ ಬರ್ತಾ ಇದ್ದ ರಂಗಪ್ಪ ಒಂದು ಬಕೆಟ್ ಇಟ್ಟಿದ್ದ.. ನಮ್ಮ ಹಾಗೆ ಅವನು ಹಾಲು ಹಾಕೋ ಒಂದಷ್ಟು ಮನೆಯವರೆಲ್ಲ ಆ ಬಕೆಟ್ಗೆ ತರಕಾರಿ ಸಿಪ್ಪೆ, ಅಕ್ಕಿ ತೊಳೆದ ನೀರು, ಅಡುಗೆ ಮನೆಯ ತ್ಯಾಜ್ಯ ಎಲ್ಲಾ ಹಾಕ್ತಾ ಇದ್ರು .. ಅವನು ಹಾಲು ಕರೆಯೋ ಅಷ್ಟರಲ್ಲಿ ಹಸು ನೆಮ್ಮದಿಯಾಗಿ ಅದೆಲ್ಲ ಕುಡಿದು ನಿಂತಿರ್ತಾ ಇತ್ತು.. ಹರಿದ ಪೇಪರ್ ಇತ್ಯಾದಿ ಕಸ ಒಲೆ ಸೇರ್ತಾ ಇತ್ತು...ಇನ್ನ ಒಲೆಯ ಬೂದಿ ಗಿಡದ ಮೇಲೆ ಎರಚಿದರೆ ಹುಳ ಬರೋದಿಲ್ಲ ಅಂತ ಮತ್ತೆ ಪಾತ್ರೆ ತೊಳೆಯೋದಕ್ಕೆ ಉಪಯೋಗಿಸ್ತಾ ಇದ್ರು . ಮನೆಯ ಸಾಮಾನು ತರೋಕೆ ಒಂದು ಚೀಲ ಇರ್ತಾ ಇತ್ತು , ಪೇಪರ್ ಕವರ್ ಅಲ್ಲಿ ಕಟ್ಟಿಕೊಡ್ತಾ ಇದ್ದ. ಬಟ್ಟೆ ಅಂಗಡಿಯಲ್ಲಿ ಕೂಡ ಒಂದು ಖಾಕಿ ಬಣ್ಣದ ಕವರ್ಗೆ ಬಟ್ಟೆ ಹಾಕ್ತಾ ಇದ್ರು . ಅದನ್ನ ಬಹಳಷ್ಟು ಸಾರಿ ಪುಸ್ತಕಕ್ಕೆ wrapper ಹಾಕಿದ್ದೂ ಇದೆ. ನಾವು ಬೇರೆ ಊರಿಗೆ ಬಂದ ಮೇಲೆ ಅಲ್ಲಿ ಹಸುವಿನ ಹಾಲಿನ ಬದಲು ಡೈರಿ ಹಾಲು ತರುವುದಕ್ಕೆ ಶುರು ಮಾಡಿದಾಗ ಅಮ್ಮ ತರಕಾರಿ ತ್ಯಾಜ್ಯನ ಗಿಡಗಳಿಗೆ ಹಾಕ್ತ ಇದ್ಲು.. ಉಳಿದ (ಉಳಿ(ಸಿ)ದರೆ!!!) ಅನ್ನ ಇತ್ಯಾದಿ ಬಾಗಿಲ ಬಳಿಯ ಕಲ್ಲ ಮೇಲೆ ಹಾಕಿದ್ರೆ ರಸ್ತೆಯ ನಾಯಿ ಬಂದು ತಿನ್ಕೊಂಡ್ ಹೋಗ್ತಾ ಇತ್ತು .. ಈಗ ಅಡುಗೆ ಮನೆಯ ವೇಸ್ಟೇ ಎಷ್ಟು ಅಂದ್ರೆ ಹಾಕೋದಕ್ಕೆ ಗಿಡಗಳೇ ಇಲ್ಲ .. ಇರೋ ಒಂದೆರಡು ಕುಂಡಗಳಿಗೆ ಅಷ್ಟೆಲ್ಲ ಹಿಡಿಯೋ ಜಾಗ ಇಲ್ಲ .. ಇನ್ನ ಮನೆಮನೆಯಲ್ಲೂ ಒಂದೊಂದು ನಾಯಿ ಬೊಗಳೋದಕ್ಕೆ ಬೀದಿಯಲ್ಲಿ ನಾಯಿಗಳೇ ಬರೋದಿಲ್ಲ ಉಳಿದದ್ದು ಹಾಕೋದಕ್ಕೆ !! ಪೇಪರ್ ತರದ ಕಸ ಹಾಕೋದಕ್ಕೆ ಒಲೆನೇ ಇಲ್ಲಾ !! ಇನ್ನ ಮನೆ ಸಾಮಾನು ತಂದ ಆ ಪ್ಲಾಸ್ಟಿಕ್ ಕವರ್ ಈ ಕಸ ಹಾಕೋಕೆ ಉಪಯೋಗಿಸ್ತಾರೆ..ಪುಟ್ಟಿ ಡ್ರಾಪ್ ಮಾಡೋಕೆ ಹೋದಾಗ ದಾರಿಯಲ್ಲಿ ಹಸು ಕಸದ ಜೊತೆ ಪ್ಲಾಸ್ಟಿಕ್ ಕೂಡ ತಿಂತಾ ಇತ್ತು .. !!! ಹಾಗಾದರೆ civilization ಅನ್ನೋ ನೆಪದಲ್ಲಿ ನಮ್ಮನ್ನ ನಾವು ಎತ್ತ ಕೊಂಡೊಯ್ಯುತ್ತಾ ಇದ್ದೇವೆ !!?? Feeling ಒಂದಷ್ಟು ದಿನಗಳಾದ ಮೇಲೆ ಮನುಷ್ಯರಿಗಿಂತ ಸಮಸ್ಯೆಗಳೇ ಹೆಚ್ಚಾಗಿ ಬಿಡುತ್ತದೆಯೇ ?!

Saturday, 16 April 2016

'ಇನ್ನೇನು ಅಷ್ಟೆಲ್ಲಾ ಕಷ್ಟ ಪಟ್ಟು ಅಷ್ಟು ದೂರದಿಂದ ಬಂದ್ರು ಸಿಕ್ಕೋದು ಒಂದು ಕಪ್ಪು ಚಹಾ ನಿನ್ನ ಅರ್ಧ ಘಂಟೆ.....' ಕೋಪಗೊಂಡ ಗೆಳೆಯ 
'ಆ ಅರ್ಧ ಘಂಟೆ ನನ್ನ ಬದುಕಿನ ಸುಂದರ ಕ್ಷಣಗಳು , ನಿನ್ನ ಕೋಪ , ನಿನ್ನ ಪ್ರೀತಿಯಷ್ಟೇ ಇಷ್ಟ ನನಗೆ , ಮತ್ಯಾವಾಗ ಬರ್ತೀಯಾ ?!!??' 
'ನಾ ಬರೋದಿಲ್ಲ'
'ಹೌದಾ ......!!!'
'..."
ಈ ಜಗಳ ಅವನು ಬಂದು ಹೋದಾಗೆಲ್ಲ ನಿರಂತರ ...ಅವನು ಬರುವುದ ನಿಲ್ಲಿಸಲಾರ... ಅದೆಷ್ಟೋ ವರುಷಗಳ ಮೊಹರು ಇದೆ ಅವರ ಗೆಳೆತನದ ಮೇಲೆ...... ಗೆಳೆತನ ಅಂದ್ರೆ ಹಾಗೆ ........ ಇದ್ದೂ ಇಲ್ಲದ ಹಾಗೆ ಇಲ್ಲದೆಯೂ ಇದ್ದ ಹಾಗೆ .............
ನಿನ್ನೂರ 
ಮಲ್ಲಿಗೆಯ ಮಾಲೆ 
ಇಲ್ಲಿ ಕಂಪ ಬೀರುವಾಗ 
ಅದೇಕೋ 
ಕಾವೇರಿ ನೆನಪಾಗುತ್ತಾಳೆ ಗೆಳತಿ 
ಅಲ್ಲೆಲ್ಲೋ ಹುಟ್ಟಿ
ಮತ್ತೆಲ್ಲೋ ಹರಿದು
ಅಲ್ಲೆಲ್ಲಾ ಹಸಿರ ಪಸರಿಸಿ
ನಗುವ ಚೆಲ್ಲಿ ಸಾಗರನ ಸೇರುವಾಗ
ಹೆಣ್ಣ ನೆನಪಿಸುತ್ತಾಳೆ ಗೆಳತಿ .......
ಎಲ್ಲಿಯ ನಿನ್ನೂರ ಮಲ್ಲಿಗೆ , ಎಲ್ಲಿಯ ಕಾವೇರಿ , ಎಲ್ಲಿಯ ಹೆಣ್ಣು ಎನಿಸಿ
ನನ್ನದು ಹುಚ್ಚುತನ ಎನಿಸಿ ನಸುನಗೆ ಉಕ್ಕುವಾಗ ..........
ನಿನ್ನೂರ ಮಲ್ಲಿಗೆ ಮತ್ತದೇ ನಗೆಯ ಬೀರಿ
ಎಲ್ಲಾ ಒಂದೇ ಎನ್ನುವಂತೆನಿಸುತ್ತದೆ ಗೆಳತಿ ...
ನಿನ್ನೂರ ಮಲ್ಲೆ, ನನ್ನೂರ ಕಾವೇರಿ,
ನೀನೂ ನಾನೂ ,
ಮತ್ತೆಲ್ಲಾ ಮರೆತು ನಗುವ ಹೆಣ್ಣು ಜೀವಗಳು ......
ಅದೇ ಕಂಪಲ್ಲವೇ ಗೆಳತಿ ............. :)))
'ಇವನು ನನ್ನ ಫಸ್ಟ್ ಫ್ರೆಂಡ್ ಕಣ್ ಮಗ ಮತ್ತು ಬೆಸ್ಟ್ ಫ್ರೆಂಡ್ ಕೂಡ '.... ಆ ಕಿವಿಯಿಂದ ಈ ಕಿವಿಯವರೆಗೆ ನಗುತ್ತ ಮಕ್ಕಳ ಹತ್ತಿರ ಹೇಳಿದೆ .... ಅವನೂ ಅಷ್ಟೇ ಸಂತಸದಿಂದ ನಕ್ಕ.
ಕೈ ಹಿಡಿದು ಕೊಂಡ್ವಿ , ಹರಟಿದ್ವಿ , ಮಾತಾಡ್ತಾ ಮಾತಾಡ್ತಾ ಮಕ್ಕಳಿಗೆ ಹೇಳಿದೆ 'ಅಪ್ಪಂಗೆ (ಮಂಜುಗೆ) ಎರಡನೇ ಸಾರಿ ಕಾಲು ಏಟಾದಾಗ ಇವನು ಅವತ್ತು ಆಂಬುಲೆನ್ಸ್ ಕಳಿಸದೆ ಇದಿದ್ದರೆ , ನೆನಪಿಸಿಕೊಳ್ಳೋದಕ್ಕೂ ಭಯ ಆಗುತ್ತೆ . ಅಂದಿನ ನೆನಪಾದಾಗ ನಿನ್ನದೇ ನೆನಪು ಕಣೋ ಪ್ರತಾಪ್... ಹೇಗೆ ಮರೆಯೋಕೆ ಆಗುತ್ತೆ ನೀನು ಮಾಡಿದ ಸಹಾಯ 'ಅಂದೆ . (ಆಗ ಕಾವೇರಿ ಗಲಾಟೆ ಸಮಯ. ಮಂಜುಗೆ ಎರಡನೇ ಸಾರಿ ಅದೇ ಕಾಲಿಗೆ ಏಟಾದಾಗ ಇಲ್ಲಿನ ಡಾಕ್ಟರ 'ಬೆಂಗಳೂರಿನ Manipal northsideಗೆ ಹೊರಟುಬಿಡಿ. ಹೇಗೂ ಅವರೇ ಅಲ್ವ ನಿಮ್ಮನ್ನ ಮೊದಲು ನೋಡಿದ್ದು . ಅದೇ best 'ಅಂದ್ಬಿಟ್ರು ..ಆಂಬುಲೆನ್ಸ್ಗಳು ಸಿಗದೇ ಅಂದಿನ ಪರದಾಟ ನೆನೆದಾಗ ಈಗಲೂ ಭಯ ಅನಿಸುತ್ತದೆ. ಖಾಸಗಿ ಗಾಡಿಗಳನ್ನ ಬಿಡುತ್ತಲೇ ಇರಲಿಲ್ಲ. ಬಸ್ ಇಲ್ಲ, ಟ್ರೈನ್ ಇಲ್ಲ, ಮಾಡಿದ ಫೋನ್ಗಳಿಗೆ ಲೆಕ್ಕವೇ ಇಲ್ಲ!!! ಅವತ್ತೇ ನನಗೆ ತಿಳಿದಿದ್ದು ದುಡ್ಡು ಅನ್ನೋದು ಎಷ್ಟು ಅನುಪಯುಕ್ತ ಆಗಿಬಿಡಬಲ್ಲದು ಅಂತ )
ಗೆಳೆಯ ನುಡಿದ, 'ಒಯ್ ನೀನೊಂದು, ನನ್ನ ನೆನಪಿಸಿಕೊಳ್ಳೋಕೆ , ಮಕ್ಕಳಿಗೆ ಹೇಳೋಕೆ ಇದೇ ವಿಷ್ಯನಾ ನಿನಗೆ ಸಿಗೋದು?? ನೀನು ತಂದು ಕೊಡುತ್ತಿದ್ದ ಕೊಬ್ಬರಿ ಮಿಠಾಯಿ , ನಾನು ತಂದುಕೊಡುತ್ತಿದ್ದ ಆ binaca tooth paste ಒಳಗಿನ ಗೊಂಬೆ, ಅಮ್ಮನ ಮಗ್ಗುಲಲ್ಲಿ ಇಬ್ಬರೂ ಮಲಗಿ ಕಥೆ ಕೇಳಿದ್ದು , ನಿನ್ನ ಮೊಗ್ಗಿನ ಜಡೆ ಎಳೆದು ಜಡೆ ಕೈಗೆ ಬಂದಾಗ ನೀನು ಅತ್ತಿದ್ದು, ನಾನು ಜಡೆನ ಅಂಟಿಸ್ತೀನಿ ಅಮ್ಮನಿಗೆ ಹೇಳಬೇಡ ಅಂತ ಗೊಗರೆದಿದ್ದು , ಇವೆಲ್ಲ ನೆನಪಿಸಿಕೊಳ್ಳೋದು ಬಿಟ್ಟು ಏನೇನೋ ಹೇಳ್ತಿಯ ನೀನು....ಬದಲಾಗೋದಿಲ್ಲ ಬಿಡು ನೀನು' ಅಂದ .
ನಿಜ ಗೆಳೆಯ, ಅಷ್ಟೆಲ್ಲಾ ಪ್ರೀತಿ, ನಂಬಿಕೆ, ವಿಶ್ವಾಸದ ಗೆಳೆತನದ ನಡುವೆ ಇದೂ ನೆನಪಿಸಿಕೊಳ್ಳದೆ ಹೋದರೆ, ನಾನು 'human' ಅನ್ನಿಸಿಕೊಳ್ಳೋದಿಲ್ಲಾ ಅಲ್ವೇ.!!! ಏನೇ ಹೇಳು ,ನಿನ್ನನ್ನು ಹೀಗೂ ನೆನಪಿಸಿಕೊಂಡರೆ ನನಗೆ ಖುಷಿ .. .ನಿನ್ನಂತವರ ಸಂಖ್ಯೆ ಸಹಸ್ರವಾಗಲಿ ....:)))
ಅದೊಂದು ನದಿ . ನದಿಯ ಎರಡೂ ಬದಿಯಲ್ಲಿ ಪುಟ್ಟ ಹಳ್ಳಿಗಳು. ಆ ಹಳ್ಳಿಗಳ ಜನಗಳ ಜೀವಾಳ ಆ ನದಿ. ಬದುಕು ಹೀಗೆ ಸಾಗ್ತಾ ಇತ್ತು...
ಎರಡೂ ಹಳ್ಳಿಯ ಇಬ್ಬರು ಹೆಣ್ಣು ಮಕ್ಕಳು ಒಂದು ನಿರ್ದಿಷ್ಟ ಸಮಯಕ್ಕೆ ನದಿಯ ತಟದಲ್ಲಿ ಕೂರ್ತ ಇದ್ರು. ಒಬ್ಬ ಹೆಣ್ಣು ಮಗಳು ನಸುನಗುತ್ತಾ ಕಾಲುಗಳನ್ನ ನೀರಲ್ಲಿ ಇಳಿಬಿಟ್ಟು ಏನೋ ಮಾತಾಡುತ್ತ ಇದ್ರೆ, ಇನ್ನೊಬ್ಬಳು ಹಾಗೆ ಮೌನವಾಗಿ ನದಿಯ ನೋಡುತ್ತಾ ಕಾಲುಗಳನ್ನ ನೀರಲ್ಲಿ ಇಳಿಬಿಟ್ಟು ಕೂರ್ತಾ ಇದ್ಲು, ಮಾತು ಇಲ್ಲ ನಗುವೂ ಇಲ್ಲ....
ಇಬ್ಬರೂ ಒಬ್ಬರನ್ನೊಬ್ಬರು ನೋಡುತ್ತಾ ಇದ್ರು , ಸ್ವಲ್ಪ ಹೊತ್ತು ಕೂತು, ಮತ್ತೆ ಅವರಷ್ಟಕ್ಕೆ ಅವರು ಹಿಂದಕ್ಕೆ ಹೋಗ್ತಾ ಇದ್ರು. ಇದು ದಿನ ನಿತ್ಯದ ಕಥೆಯಾಗಿತ್ತು. ......
ಒಂದ್ ದಿನ ಇಬ್ಬರಿಗೂ ಮಾತಾಡಬೇಕೆನಿಸಿತು .
ಎಂದೂ ನಗದಾಕೆ ಮತ್ತೊಬ್ಬಳನ್ನ ಕೇಳಿದ್ಲು 'ಅಕ್ಕ ದಿನಾ ಬರ್ತೀಯಲ್ಲ ,ಈ ನದಿಯ ಹತ್ರ ಏನ್ ಮಾತಾಡ್ತೀಯ ?' ಅವಳು ಹೇಳಿದಳು, 'ನನ್ನ ನಲ್ಲ ಕಿವುಡ ಹಾಗು ಮೂಕ ಗೆಳತಿ ' .
ಇವಳಿಗೆ ಆಶ್ಚರ್ಯ , 'ಮತ್ತೆ ನಿನ್ನ ಪ್ರೀತಿ ಹೀಗೆ ಹೇಳ್ತೀಯ'.
"ಪ್ರೀತಿಗೆ ಮಾತೇ ಬೇಕಿಲ್ಲ. ನಾವಿಬ್ಬರೂ ಹಾಗೆ ಒಬ್ಬರನ್ನೊಬ್ಬರು ತುಂಬಾನೇ ಪ್ರೀತಿಸ್ತೀವಿ . ಹೇಳದೆ ಎಲ್ಲವನ್ನು ಹೇಳಿಬಿಡ್ತಾನೆ ಅವನು. ನಾನೂ ಹಾಗೆ. ಆದರೂ , ಹೇಳದೆ ಉಳಿದ ಎಷ್ಟೂ ಮಾತುಗಳನ್ನ ಹೇಳಿಯೇ ತೀರಬೇಕು ಅನಿಸುತ್ತದೆ ಗೆಳತಿ . ಅದಕ್ಕೆ ಇಲ್ಲಿ ಬರ್ತಿನಿ. ಇವಳು, ಈ ನದಿಯ, ಹತ್ರ ಎಲ್ಲಾ ಹೇಳ್ತೀನಿ, ಅವಳೂ ಎಲ್ಲಾ ಕೇಳ್ತಾಳೆ, ಕೇಳಿದ್ದರ ಕುರುಹಾಗಿ ನೀರಲ್ಲಿ ಇಳಿಬಿಟ್ಟ ಪಾದಗಳಿಗೆ ಅಲೆಗಳಿಂದ ಸಾಂತ್ವಾನ ಹೇಳಿಸುತ್ತಾಳೆ , ನಾನು ಎಲ್ಲ ಹೇಳಿಕೊಂಡ ಸಮಾಧಾನದಿಂದ ನಗುತ್ತ ಹೋಗುತ್ತೇನೆ " ಅಂದ್ಲು .
'ಸರಿ ಅಕ್ಕ, ನೀನು ಯಾಕೆ ಮೌನಿ? ನೀ ಇಲ್ಲಿ ಬಂದು ಕೂರೋದು ಯಾಕೆ?' ಅಂದ್ಲು.
ಮೊದಲ ಬಾರಿ ಆ ಮೌನಿಯ ಮೊಗದಲ್ಲಿ ನಗು ಕಾಣಿಸಿತು.
"ನನ್ನ ನಲ್ಲ ಕೂಡ ಕಿವುಡ ಮೂಕನೆ ಕಣೆ ಆದರೆ ದೈಹಿಕವಾಗಿ ಅಲ್ಲ, ಭಾವನಾತ್ಮಕವಾಗಿ. ಅವನು ಎಂದೂ ನನ್ನ ಪ್ರೀತಿ ಬಗ್ಗೆ ಕೇಳೋದಿಲ್ಲ, ತನ್ನ ಪ್ರೀತಿಯ ಬಗ್ಗೆ ಹೇಳೋದಿಲ್ಲ . ಬದುಕಿನ ಅಗತ್ಯಗಳನ್ನೆಲ್ಲಾ ನೀಡುವ ಅವನು ನನ್ನ ಭಾವನೆಗಳ ಅಗತ್ಯಗಳಿಗೆ ಕಿವಿಗೊಡಲಾರ . ಅದಕ್ಕೆ ಇಲ್ಲಿ ಬಂದು ಇವಳ ಹತ್ರ ಎಲ್ಲಾ ಹೇಳ್ತೀನಿ . ನೀನು ಹೇಳೋಹಾಗೆ ಇವಳು ಎಲ್ಲಾ ಕೇಳಿ ನನ್ನ ಜೊತೆ ತನ್ನ ಕಣ್ಣಿ ಹರಿಸುತ್ತಾಳೆ, ನನ್ನ ಜೊತೆ ನಗ್ತಾಳೆ , ನಾನು ಯಾವತ್ತು ಒಂಟಿ, ಪ್ರೀತಿ ಸಿಗದವಳು ಅಂತ ಅನಿಸೋಕೆ ಬಿಡೋದೇ ಇಲ್ಲ ಅವಳು . ಇವಳು ಕಿವುಡಿ ಅಲ್ಲ ಕಣೆ " ಅಂದ್ಲು ........
ನದಿ ಹರಿಯುತ್ತಲೇ ಇತ್ತು, ಇವರ ನಗು ಅಳು ಹೊತ್ತು.......
(ನನ್ನ ಗೆಳತಿಯೊಬ್ಬಳು ಕಳಿಸಿದ ಒಂದು ಇಂಗ್ಲಿಷ್ ಕಥೆಯ ಸಂಕ್ಷಿಪ್ತಾನುವಾದ ಇದು. ಯಾಕೋ ಹಂಚಿಕೊಳ್ಳಲೇ ಬೇಕು ಅನಿಸಿತು)

Tuesday, 12 April 2016

'ಇವತ್ತು ರಜ ಹಾಕ್ತಾ ಇಲ್ವಾ ' ಗಂಡ ಎಂದಿನಂತೆ ಎದ್ದು ತಯಾರಾಗುತ್ತಿದದ್ದನ್ನ ನೋಡಿ ಮುಖ ಸಪ್ಪೆ ಆಗಿತ್ತು 'ಹ್ಞೂ ಮತ್ತೆ ನನಗೂ ವಯಸಾಯ್ತಲ್ಲ .. ಈಗೆಲ್ಲ ರಜ ಯಾಕೆ ಹಾಕ್ತೀಯ ಹೇಳು .. ನಿನಗೆ ನನ್ನ ಕಂಡ್ರೆ ಇಷ್ಟಾನೇ ಇಲ್ಲಾ' ........ etc, etc ...... ' ಪುಣ್ಯಾತ್ಮ ಎಂದಿನಂತೆ ಅದೇ ನಗು ಮುಖದ ಗಂಡ ...'ಒಂದ್ ನಿಮಿಷದಲ್ಲಿ ಅದೆಷ್ಟು ಯೋಚಿಸುತ್ತೆ ನಿನ್ನ ಪುಟ್ಟ ಮನಸ್ಸು ಮಹರಾಯ್ತಿ .......ನಿಮ್ಮ ಅಮ್ಮ ಬರ್ತಾರೆ, ನಿನಗೆ ಒಂದಷ್ಟು ಫೋನ್ ಬರ್ತಾ ಇರುತ್ತೆ, ನೀ ನನ್ನ ಜೊತೆ ಇದ್ರೆ ಫೋನ್ ಬಂದಾಗೆಲ್ಲ ನಿನಗೆ ಕಂಫರ್ಟಬಲ್ ಅನಿಸೊದಿಲ್ಲ ಸುನಿ ... ಗಂಡ ರಜ ಹಾಕಿಕೊಂಡು ಇದ್ದಾನೆ .ಅವನಿಗೆ ನಾ ನ್ಯಾಯ ಒದಗಿಸಿಲ್ಲ ಅನ್ನೋ ಫೀಲ್ ನಿನಗೆ ಬರ್ತಾ ಇರುತ್ತೆ ..ಈ ಕಡೆ ಆ ಫೋನ್ ಕೂಡ ಸರಿಯಾಗಿ ಎಂಜಾಯ್ ಮಾಡೋದಿಲ್ಲ ... ನೀ ಹಾಗೆ ಅಂತ ನನಗೆ ಗೊತ್ತು ...... ಅದಕ್ಕೆ ಆರಾಮವಾಗಿ ಇರು... ಒಂದು ದಿನ ಹೆಚ್ಚಿಸಿ ಹುಟ್ಟಿದ ದಿನ ಮಾಡಿದರೆ ಆಯಸ್ಸು ಜಾಸ್ತಿ ಅಂತೆ ... ' ಅಂತ ನಕ್ಕ ...ಅಷ್ಟಿಲ್ಲದೆ ಎಲ್ಲರಂತವನಲ್ಲ ನನ ನಲ್ಲ ಅಂತರೆಯೇ ..........:)))))Life is just understanding......alve
ಮೊನ್ನೆ ರಾತ್ರಿ ಗಂಡ ಮಗಳ ಹಾರೈಕೆಯಿಂದ ಮೆಸೇಜ್ ಗಳಿಂದ ಶುರುವಾದ ಹಾರೈಕೆಗಳು ಹೊಟ್ಟೆ ತುಂಬುವಷ್ಟಾಯ್ತು.. .ಗಂಡ ನೀ ನಿನ್ನ ಕೆಲ್ಸ ಮಾಡಿಕೋ , ನಾನೂ ಈವತ್ತು ಡ್ಯೂಟಿ ಹೋಗ್ತೀನಿ , ಇಲ್ಲದೆ ಇದ್ರೆ ನಿನಗೂ ನಿನ್ನ ಫ್ರೆಂಡ್ಸ್ ಜೊತೆ ಮಾತಾಡೋಕೆ comfortable ಆಗಿರೋಲ್ಲ, ನನಗೂ ಕಷ್ಟ ಅನಿಸುತ್ತೆ ' ಅಂತ ಹೊರಟಾಗ ಸಣ್ಣ ಸಣ್ಣ ಅರ್ಥ ಮಾಡಿಕೊಳ್ಳುವಿಕೆ ಬದುಕಲ್ಲವೇ ಅನಿಸಿತು..ಅತ್ತೆ, ಅಮ್ಮ, ತಮ್ಮ, ಮಕ್ಕಳು, ಗೆಳೆಯಗೆಳತಿಯರು, ಸೋದರ ಮಾವ, ಮಕ್ಕಳ ಗೆಳೆಯ ಗೆಳತಿಯರು, ಫೇಸ್ಬುಕ್ ಹಿರಿಯರು, ಫೇಸ್ಬುಕ್ ಆಚೆಯ ಗೆಳೆಯರು, ಅದೆಷ್ಟು ಜನರು ನನ್ನ ಜೊತೆ :)))... ಅತ್ತೆ ಕರೆ ಮಾಡಿ' ಹುಟ್ಟುಹಬ್ಬದ ಶುಭಾಶಯಗಳು ಮಗ , ಎರಡು ವರ್ಷ ಅವನ ಜೊತೆ ಜಗಳ ಆಡಿ ಮಾತಾಡಿಲ್ಲ ಅಂದ್ರೆ ನಿನ್ನ ಬರ್ತ್ಡೇ ನೆನಪಲ್ಲಿ ಇಲ್ಲ ಅಂದ್ ಕೊಂಡ್ಯ .... ' ಅಂದಾಗ , ಸೋದರಮಾವ 'ರವೆ ಉಂಡೆ ಕಳಿಸ್ತಿನಿ ಚಿನ್ನಕ್ಕ 'ಅಂದಾಗ , ಅಮ್ಮ 'ನಿನ್ ತಮ್ಮ ಇಲ್ಲ , ನೀ ಬರಲ್ಲ ಅಂದ್ರೆ ನಾನೇ ಬಸ್ ಅಲ್ಲಿ ಬಂದ್ ಹೋಗ್ತೀನಿ ಮಗ ' ಅಂದಾಗ , ನನಗೆ ಈಗ ಇವರೆಲ್ಲರ ತೊಡೆಯ ಮೇಲೆ ತಲೆಯಿಟ್ಟ ನೆನಪು ... ಎಲ್ಲರ ವಿಷೆಸ್ ಬಂದರೂ, ನನ್ನ ಮಗ ನನಗೆ ವಿಶ್ ಮಾಡಲೇ ಇಲ್ಲ ಅನ್ನೋ ನೋವು.. ಮೊನ್ನೆ ಬೈದಿದ್ದೆ ಅನ್ನೋ ಸಿಟ್ಟಿಗೇನೋ ಬೆಳಿಗ್ಗೆ ತಿಂಡಿ ತಿನ್ನುವಾಗ ಕೂಡ ಒಂದೇ ಉಸಿರಿಗೆ ತಿಂದು , ಬೈದಿದ್ದ ಸಿಟ್ಟಿಗೆ ಡ್ರಾಪ್ ಕೂಡ ಮಾಡಿಸಿಕೊಳ್ಳದೆ ಹೊರಟಾಗ ನೋವಾಗಿದ್ದು ನಿಜ ,.. ಗಂಡ ಬಂದಾಗ 'ಕಾರ್ತಿ ನನಗೆ ವಿಶ್ ಮಾಡ್ಲೇ ಇಲ್ಲಾ ಮಂಜು, ಇನ್ ಅವನು ವಿಶ್ ಮಾಡಿದ್ರೆ ಮಾಡದೆ ಇದ್ರೆ ಕೂಡ ನಂಗೆ ಏನೂ ಅನಿಸೊದಿಲ್ಲ ಬಿಡು ' ಅಂತ ಕಣ್ಣು ತುಂಬಿಕೊಂಡಾಗ , ಮಗಳು 'ಇದು ಇನ್ನ ಚೈಲ್ಡ್ ಕಣಪ್ಪ, ' ಅಂದ್ರೆ ..ಗಂಡ ಬೈದ 'ಸ್ವಲ್ಪ ಸೆನ್ಸಿಟಿವಿಟಿ ಕಡಿಮೆ ಮಾಡ್ಕೋ , ಸಣ್ಣ ಸಣ್ಣ ವಿಷ್ಯಕ್ಕೆ ಯಾಕೆ ಹೀಗೆ, ಬಂದ್ ಹೇಳ್ತಾನೆ ಬಿಡು , ಅವನು ನನ್ ಮಗ' ಅಂದ .. ಸಂಜೆ ಅತ್ತೆ ಮನೆ, ಅಮ್ಮನ ಮನೆ, ದೇವಸ್ತಾನ ಎಲ್ಲ ಸುತ್ತಿ ಬರುವಾಗ ಮಗ ಎರಡು ಸಾರಿ ಫೋನ್ ಮಾಡಿದ್ದ 'ಎಲ್ಲಿದ್ದಿ ಅಮ್ಮ, ಮನೆಯಲ್ಲಿ ಏನೂ ಮಾಡಿ ಇಟ್ಟಿಲ್ಲ'ಅಂದಾಗ, ಮನಸ್ಸಿಗೆ ಮತ್ತೆ ಒಂದ್ ತರ .. ಪುಟ್ಟಿಗೆ ಅವನಿಗೆ ಎರಡು ಚಪಾತಿ ಮಾಡಿ ಕೊಡೋಕೆ ಹೇಳಿ ಫೋನ್ ಮಾಡಿದೆ ... ಮನೆಗೆ ಬಂದಾಗ ; ಶುಕ್ರವಾರ ಬಾಗಿಲು ಹಾಕಿದಂತೆ ಇದೆ ದೀಪ ಹಚ್ಚಿದಂತೆ ಕಾಣಲಿಲ್ಲ .. ಯಾಕೋ ಸೋತಂತೆ .. ಗಂಡ ಬಾಗಿಲು ತಳ್ಳಿದಾಗ ಸಣ್ಣಗೆ ಬೆಳಕಲ್ಲಿ ಸಣ್ಣಗೆ ಹ್ಯಾಪಿ ಬರ್ತ್ಡೇ ಹಾಡು , ಒಂದು ಪುಟ್ಟ ಕೇಕ್ ಕನ್ನಡ ಅಕ್ಷರಗಳಲ್ಲಿ ಬರೆದದ್ದು ... 'maa, how can i forget yr b'day maa? ಆ ಬಡ್ಡಿಮಗ ರಾತ್ರಿ ಕೇಕ್ ಕೊಡಲಿಲ್ಲ ಬೆಳಿಗ್ಗೆ ನಿನ್ ಮುಂದೆ ಇದ್ರೆ ,ನಿನ್ ಜೊತೆ ಮಾತಾಡಿದ್ರೆ ,ನಿನ್ ಹತ್ರ ಡ್ರಾಪ್ ತಗೊಂಡ್ರೆ ಎಲ್ಲಿ ವಿಷೆಸ್ ಹೇಳಿಬಿಡ್ತಿನೋ ಅಂತ ಹಾಗೆ ಹೋದೆ ....etc, etc. '.. ಆಮೇಲೆ ಇದ್ದಿದ್ದೆ ನಾ ಅತ್ತಿದ್ದು ಅವನು ತಬ್ಬಿ ಸಮಾಧಾನ ಮಾಡಿದ್ದು ಆಮೇಲೆ ಪಾರ್ಟಿ ನೆಪದಲ್ಲಿ ಅದೆಷ್ಟೋ ದುಡ್ಡು ಖರ್ಚು ಮಾಡಿಸಿದ್ದು .... .... ಇಷ್ಟೆಲ್ಲಾ ಆದ ಮೇಲೆ ಅಪ್ಪ ಮಗಳ ಡೈಲಾಗ್ 'ಚೆನ್ನಾಗಿ ನಾಟಕ ಆಡಿತೀರ ಅಮ್ಮ ಮಗ ........ ':))) Don kno how long Bt stil, i remain blesed and loved.. thanks again :)))

Friday, 11 March 2016

ಹೀಗೊಂದು ಕಥೆ.... 
ಒಂದು ರೈಲಿನ ಫಸ್ಟ್ ಕ್ಲಾಸ್ ಬೋಗಿಯಲ್ಲಿ ಒಬ್ಬ ಶ್ರೀಮಂತ ತನ್ನ ಹೆಂಡತಿ ಮಗುವಿನ ಜೊತೆ ಹೋಗ್ತಾ ಇದ್ದ. ಜೊತೆಗೆ ಒಂದಿಬ್ಬರು ಆಳುಗಳು ಕೂಡ. ಸಿರಿವಂತನಾದರೂ ಸಂಯಮಿ, ವಿಚಾರವಂತ. ತನ್ನ ಸಹಪ್ರಯಾಣಿಕರ ಜೊತೆ ಹೊಂದಿಕೊಂಡು ಪ್ರಯಾಣ ಮುಂದುವರೆಸಿದ್ದ. ಸುಮಾರು ನಡು ರಾತ್ರಿ, ರೈಲು ಕಾಡುಕಣಿವೆಗಳ ನಡುವೆ ಸಾಗ್ತಾ ಇತ್ತು. ಮಗು ಎಚ್ಚರಗೊಂಡಿತು. ಶ್ರೀಮಂತನ ಹೆಂಡತಿ ಮಗುವನ್ನ ಕಿಟಕಿಯ ಬಳಿ ಕುಳಿತು ರಮಿಸುತ್ತಾ ಬಾಟಲಿಯಲ್ಲಿ ಹಾಲು ಕುಡಿಸ ತೊಡಗಿದಳು. ಕೈ ಕಾಲು ಆಡಿಸುತ್ತಾ ಹಾಲು ಕುಡಿಯುತ್ತಿದ್ದ ಮಗುವಿನ ಕೈ ತಗುಲಿ ಬಾಟಲಿ ಕಿಟಕಿಯಿಂದ ಹೊರಗೆ ಬಿದ್ಹೊಯ್ತು !! ಮಗು ಅಳೋಕೆ ಶುರು ಮಾಡ್ತು!! ಶ್ರೀಮಂತ ತಕ್ಷಣ ಚೈನ್ ಎಳೆದ. ಗಾಡಿ ನಿಲ್ತು. ಅವನು ಅವನ ಆಳುಗಳು ಹಳಿಗಳ ಬಳಿ ಹಿಂದಕ್ಕೆ ಹೋಗಿ ಬಾಟಲಿ ಹುಡುಕಿ ತಂದ್ರು. ತೊಳೆದು ಬಾಟಲಿಯಲ್ಲಿ ಮಗುವಿಗೆ ಹಾಲು ಹಾಕಿ ಕೊಟ್ರು. ಅಷ್ಟರಲ್ಲಿ ಅಲ್ಲಿಗೆ ಬಂದ ರೈಲು ಅಧಿಕಾರಿ ಅನಗತ್ಯವಾಗಿ ಸಣ್ಣ ವಿಷಯಕ್ಕೆ ತೊಂದರೆ ಕೊಟ್ಟ ಎಂಬ ತಪ್ಪಿಗೆ ಒಂದಷ್ಟು ಫೈನ್ ಹಾಕಿ ದುಡ್ಡು ವಸೂಲಿ ಮಾಡಿ ಹೋದರು. ಸಹಪ್ರಯಾಣಿಕನೊಬ್ಬ ಹೇಳ್ದ 'ದುಡ್ಡಿರೋರೆ ಹೀಗೆ, ಅರ್ಥವೇ ಆಗೋದಿಲ್ಲ ಹಣದ ಮದ..ಒಂದೈವತ್ತು ರೂಪಾಯಿ ಕೂಡ ಬಾಳದ ಆ ಬಾಟ್ಲಿಗೆ ಸುಮ್ಸುಮ್ನೆ ಅಷ್ಟೊಂದೆಲ್ಲ ದಂಡ ಕಟ್ತಾರೆ. ಹೋದರೆ ಹೋಯ್ತು ಅಂತ ಸುಮ್ಮನಿದಿದ್ರೆ ಆಗ್ತಾ ಇತ್ತು' ಅಂದ. ಆ ಸಿರಿವಂತ ಒಂದು ಕಟ್ಟು ಹಣ ತೆಗೆದ ಆ ಪ್ರಯಾಣಿಕನ ಮುಂದೆ ಹಿಡಿದು 'ಸರ್, ಇದರಲ್ಲಿ ೫೦೦೦ ಇದೆ. ಹೋಗಿ ಒಂದು nipple ತಂದ್ಬಿಡಿ ಮತ್ತೆ' ಅಂದ. 'ಹಣ ಎಷ್ಟು ಹೋಯ್ತು, ಎಷ್ಟು ಬಂತು ಅನ್ನೋದು ಮುಖ್ಯವಲ್ಲ, ಆ ಹೊತ್ತಿನ ಉಪಯೋಗ ಅಷ್ಟೇ ಮುಖ್ಯ! ನನ್ನ ಮಗುವಿಗೆ ಈ ಸರಿ ರಾತ್ರಿಯಲ್ಲಿ ಈ ಕಾಡಿನ ನಡುವೆ nippleಸಿಗೋದು ಎಷ್ಟು ದುರ್ಲಭ ಅಲ್ವೇ . ಅದಕ್ಕೆ ಹಾಗೆ ಮಾಡಿದೆ .. ಹಣದ ಮದ ಅಲ್ಲ ' ಅಂದ ...
ಮೊನ್ನೆ ಅನಗತ್ಯ ಅಗತ್ಯಗಳ ವಿಷಯದ ಬಗ್ಗೆ ನಾನು ಮಂಜು ಮಾತಾಡ್ತಾ ಇದ್ದಾಗ ಮಂಜು ಹೇಳಿದ ಕಥೆ :)))
ಪುಟ್ಟಿ ಹೇರ್ ಡ್ರೆಸ್ ಮಾಡಿಸಬೇಕು ಅಂದ್ಲು..ಅದೇನೋ ಲೇಸರ್ ಕಟಿಂಗ್ ಅಂತೆ !! ಸರಿ ಅಂದೆ , ಅವರಪ್ಪ 'ತುಂಬಾ ಶಾರ್ಟ್ ಬೇಡ . ಹೆಣ್ಣುಮಗಳಿಗೆ ಜಡೆ ಸ್ವಲ್ಪ ಉದ್ದ ಇದ್ರೆ ಚೆಂದ.. ' ಅಂದ್ರು. ಸರಿ ಕರ್ಕೊಂಡ್ ಹೋಗಿ ಟ್ರಿಮ್ ಮಾಡಿಸಿಕೊಂಡು ಬಂದೆ . ಮಗ ಬಂದ 'ಏನೇ ಪುಟ್ಟಿ ಅವತ್ತಿಂದ ಹೇಳ್ತಾ ಇದ್ಯಲ್ಲ ತಲೆಕೂದ್ಲು ಕಟ್ ಮಾಡಿಸ್ದಾ' ಅಂದ.'ಹೊಂ ಕಣೋ ಕಾರ್ತಿ, ನೋಡು' ಅಂತ ಮುಂದೆ ನಿಂತ್ಳು.. '೨೫೦ ರೂಪಿಸ್ ಗೊತ್ತ , ಚೆನ್ನಾಗಿಲ್ವಾ ಕಾರ್ತಿ' ... '೨೫೦ ರೂಪಿಸಾ, ನಾ ೪ ತಿಂಗಳು ಕಟಿಂಗ್ ಮಾಡಿಸ್ತಾ ಇದ್ದೆ ಕಣೆ. ಅಪ್ಪ ಆಗಿದ್ರೆ ೫ ತಿಂಗ್ಳು ಕಟಿಂಗ್ ಮಾಡಿಸ್ತಾ ಇತ್ತು. ನೀವ್ ಹುಡುಗೀರ್ಗೆ ಬುದ್ದಿನೇ ಇಲ್ಲ ಕಣೆ, ಸುಮ್ಸುಮ್ನೆ ದುಡ್ಡು ಖರ್ಚು ಮಾಡ್ತೀರಾ' 'ಹೋಗೋಲೋ , ನಿನ್ ಹೆಂಡ್ತಿ ಬಂದಾಗ ಇದೆಲ್ಲ ಹೇಳ್ಕೋ , ಅಪ್ಪ ಬಂದಾಗ ಹಿಂಗೆಲ್ಲ ಹೇಳಿ ಬೈಸಿದ್ರೆ ನಾ ಇನ್ ಮೇಲೆ ನಿನ್ ತಲೆಗೆ ಎಣ್ಣೆ ಹಾಕಿ ಕೊಡೋದಿಲ್ಲ ಅಷ್ಟೇ'...' ಲೇ ಪುಟ್ಟಿ ಸ್ವಲ್ಪ ಎಣ್ಣೆ ಹಾಕೇ .. ಪ್ಲೀಸ್ ಕಣೆ ಈವತ್ತು ಬಿಸಿಲಲ್ಲಿ ವಾಲಿಬಾಲ್ ಆಡಿ ತಲೆ ಎಲ್ಲ ಡ್ರೈ ಆಗೋಗಿದೆ ಹೆಣ್ ಮಕ್ಳೇ ಚೆಂದ ಕಣೆ "..
ನಾವು ಚಿಕ್ಕವರಿದ್ದಾಗ ಶಾಲೆಗೇ ಹೋಗುವಾಗ ನಡೆದೇ ಹೋಗ್ತಾ ಇದ್ದಿದ್ದು. ಕೆಲವು ಸಾರಿ ಅಪ್ಪನ ಸ್ಕೂಟರ್ ಅಥವಾ ಮಾಮನ ಸೈಕಲ್ ಕೂಡ ನಮ್ಮನ್ನ ಹೊತ್ತೊಯ್ಯುತ್ತಿತ್ತು . (ಮತ್ತೊಂದಷ್ಟು ದೊಡ್ಡವರಾದ ಮೇಲೆ ನಮಗೆ ಒಂದು ಪುಟ್ಟ ಸೈಕಲ್ ಕೊಡಿಸಿದರು. ಬಹುತೇಕ ನನ್ನ ಪ್ರೌಡಶಾಲೆ ಮತ್ತು ಪದವಿಪೂರ್ವ ಕಲಿಕೆಯೆಲ್ಲ ಸೈಕಲ್ ಅಲ್ಲೇ ಕಳೆಯಿತು. ಆದ್ರೂ ಶಾಲೆ ಮುಗಿಯೋದನ್ನೇ ಕಾಯ್ತಾ ಇದ್ದು ಗೆಳೆಯಗೆಳತಿಯರ ಜೊತೆ ಹರಟೆ ಹೊಡೆಯುತ್ತಾ ಒಬ್ಬೊಬ್ಬರ ಮನೆಯ ಮುಂದೆ ಒಂದೆರಡು ನಿಮಿಷ ಕಳೆದು ಮತ್ತೆ ಮನೆ ಸೇರೋವಾಗ ಇದ್ದ ಸಂತಸ ಪ್ರಾಯಶಃ ಹೇಳಲಸಾಧ್ಯ.) ತುಂಬಾ ದೂರ ಇರೋ ಕೆಲವು ಮಕ್ಕಳು ಜಟಕಾದಲ್ಲಿ ಬರ್ತಾ ಇದ್ರು ಮತ್ತೊಂದಷ್ಟು ಅನುಕೂಲವಾಗಿರೋ ಮಂದಿ ಆಟೋದಲ್ಲಿ ಕಳಿಸ್ತ ಇದ್ರು. ಇಷ್ಟೆಲ್ಲದರ ನಡುವೆ ಒಂದಷ್ಟು ಜನ ಹೆಂಗಸರು (ಶಾಂತ ಆಂಟಿ, ಸರಳಕ್ಕ, ಹೀಗೆ ) ಒಂದಷ್ಟು ಮಕ್ಕಳ ಕರೆದುಕೊಂಡು ಅವರ ಶಾಲೆಯ ಬ್ಯಾಗು ಮತ್ತು ಊಟ ಹೊತ್ತುಬಂದು ಶಾಲೆಯ ಬಳಿ ಬಿಟ್ಟು ಹೋಗ್ತಾ ಇದ್ರು ಮತ್ತೆ ಸಂಜೆ ಬಂದು ಕರೆದುಕೊಂಡು ಹೋಗ್ತಾ ಇದ್ರು. ಕೆಲವರು ಮಧ್ಯಾಹ್ನದ ಊಟವನ್ನ ಕೂಡ ಬಿಸಿಬಿಸಿಯಾಗಿ ಅದೇ ಹೆಂಗಸರ ಬಳಿ ಕಳಿಸ್ತಾ ಇದ್ರು. ಆ ಹೆಂಗಸರು ಎಲ್ಲ ಮಕ್ಕಳ ಬ್ಯಾಗು ಹೊತ್ತು ನಡೆಯೋದು ನೋಡೋವಾಗ ಒಮ್ಮೊಮ್ಮೆ ಪಾಪ ಅನಿಸ್ತ ಇರ್ತಿತ್ತು. ಅವರಿಗೆ ಒಂದಷ್ಟು ಸಂಬಳ ನೀಡಲಾಗುತ್ತಿತ್ತು.
ಇದೆಲ್ಲ ಈಗ್ಯಾಕೆ ನೆನಪಾಯ್ತು ಅಂದ್ರ? ನನ್ನ ಮಕ್ಕಳನ್ನ ನಾನೇ ಡ್ರಾಪ್ ಮಾಡೋದು, ಒಂದಷ್ಟು ದಿನ ವ್ಯಾನ್ ಹೇಳಿದ್ದೆವು . ಇವರ ಸ್ಪೋರ್ಟ್ಸ್, extra curricular activities ಮುಗಿಸೋವರೆಗೂ ವ್ಯಾನ್ ಅವರು ಕಾಯೊಕೆ ಆಗದಿದ್ದಾಗ ನಾವೇ ಡ್ರಾಪ್ ಮಾಡೋಕೆ ಶುರು ಮಾಡಿದ್ವಿ ಮೊನ್ನೆ ಪುಟ್ಟಿ ಡ್ರಾಪ್ ಮಾಡೋಕೆ ಹೋದಾಗ ಒಂದು ಮಾರುತಿ ವ್ಯಾನ್ ಅನ್ನ ಒಂದ್ ಹೆಣ್ಣು ಮಗಳು ಡ್ರೈವ್ ಮಾಡ್ತಾ ಮಕ್ಕಳನ್ನ ಪಿಕ್ ಇದ್ರು .ಸುಮ್ಮನೆ ಹಾಗೆ 'ಹಾಯ್' ಅಂತ ಹೇಳಿ ಮಾತನಾಡಿಸಿದೆ. ' ಅಪ್ಪನ ಮನೆಯಲ್ಲೇ ಡ್ರೈವಿಂಗ್ ಕಲಿತ್ತಿದ್ದೆ ಮೇಡಂ, ನನ್ನ ಮಕ್ಕಳನ್ನ ಮಾತ್ರ ಡ್ರಾಪ್ ಮಾಡ್ತಾ ಇದ್ದೆ. ಹೆಂಗೂ ನಾನು ಕೆಲಸ ಮಾಡ್ತಾ ಇಲ್ಲ ಹಂಗೆ ಬರೋ ದಾರಿಯಲ್ಲಿ ಒಂದಷ್ಟು ಮಕ್ಕಳನ್ನ ಕೂರಿಸಿಕೊಂಡು ಬಂದ್ರೆ ಮಕ್ಕಳ ಖರ್ಚಿಗೆ ಕಾಸಾಗುತ್ತೆ ಅಂತ ೨-೩ ವರ್ಷದಿಂದ ಹೀಗೆ ಮಾಡ್ತಾ ಇದ್ದೆ ಅಷ್ಟೇ. ಇನ್ನೇನು ಈ ವರ್ಷ ಮಗಳಿಗೆ ಈ ಶಾಲೆ ಮುಗಿತದೆ ನೋಡೋಣ. ಮಕ್ಕಳು ಚಿಕ್ಕವರಿದ್ದಾಗ ಅವರ ಫ್ರೆಂಡ್ಸ್ ನಮ್ಮ ಗಾಡಿಯಲ್ಲಿ ಬಂದ್ರೆ ಖುಷಿ ಪಡ್ತಾ ಇದ್ರು. ಈಗ ಅವರಮ್ಮ "ವ್ಯಾನ್ ಆಂಟಿ" ಅಂದ್ರೆ ನೊಂದ್ಕೊಳ್ತಾರೆನೋ !ಎಷ್ಟು ದಿನ ನಡೆಯುತ್ತದೋ ಅಷ್ಟ್ ದಿನ ಮಾಡ್ತೀನಿ. ಆಮೇಲೆ ಮಾಡೋಲ್ಲ ಮೇಡಂ. ನಮ್ಮ ಮನೆಯವರೂ __ ಫ್ಯಾಕ್ಟರಿಲಿ ಕೆಲಸ ಮಾಡ್ತಾರೆ . ಕೊರತೆ ಅಂತೇನಿಲ್ಲ . ಮಕ್ಕಳಿಗೆ ಬೇಸರ ಆಗೋದಾದ್ರೆ ನಾ ಯಾಕೆ ಮಾಡ್ಲಿ! ' ಅಂದ್ರು.
ಅದ್ಯಾಕೋ ಮನಸ್ಸು ನಡು ಮಧ್ಯಾಹ್ನದ ಆಗಸ ..ಪ್ರಖರ ಬೆಳಕಿದ್ದರೂ ಸುಡು ಬಿಸಿಲ ಬೇಗೆಯಂತೆ ..... ಅಂದಿನ ಸರಳಕ್ಕ ಇಂದಿನ ಈ ಹೆಣ್ಣು ಮಗಳು ಅಂದಿನ ನನ್ನ ಅಮ್ಮ, ಇಂದಿನ ನಾನು ....ಕಾಲ ಬದಲಾದರೂ ಹೆಣ್ಣು ಅಂದಿಗೂ ಇಂದಿಗೂ ಎಲ್ಲಾ ಬಲಹೀನತೆಯ ನಡುವೆಯೂ ಸಬಲೆಯೆ ಎನ್ನುವಂತೆ, ಆದರೂ ಪ್ರೀತಿ, ಭಾವನೆಗಳ ಮುಂದೆ ಅಬಲೆಯಾಗುವಳೇನೋ ಅನಿಸುವಂತೆ .. But Still am always proud of being a woman...:))
ಮೊನ್ನೆ ಹೋದ ಶನಿವಾರ ದೇವಸ್ಥಾನಕ್ಕೆ ಹೋಗಿದ್ದೆ. ೯ನೆ ತಾರೀಕು ಗ್ರಹಣ ಅಂತ ಬರೆದಿದ್ರು. ಒಂದಷ್ಟು ರಾಶಿಯ ಹೆಸರು ಹಾಕಿ ದೋಷ, etc, etc ಬರೆದು ದೋಷ ಪರಿಹಾರಕ್ಕೆ ಶಾಂತಿ ಪೂಜೆ,ಇತ್ಯಾದಿ ಇತ್ಯಾದಿ ಬರೆದಿದ್ದರು. ದೇವರು ಅನ್ನೋ ಶಕ್ತಿಯನ್ನ ತುಂಬಾನೇ ನಂಬುವ ನನಗೆ ಈ ಗ್ರಹಣ ದೋಷ-ಪರಿಹಾರ ಅಂತದರಲ್ಲಿ ನಂಬಿಕೆ ಇಲ್ಲ. ಅದೊಂದು ಪ್ರಾಕೃತಿಕ ವಿದ್ಯಾಮಾನ ಅಂತ ಅರಿವಿದೆ. ದಿನಾ ದೇವರಿಗೆ ಹೂ ಹಾಕಿ ಪೂಜೆ ಮಾಡುವುದು, ಮನಸ್ಸಾದಾಗ ದೇವಸ್ಥಾನಗಳಿಗೆ ಹೋಗೋದು, ನನ್ನ ಇಷ್ಟದ ಕೆಲಸಗಳು. ಅದು ನನ್ನ ಖುಷಿಗಾಗಿ. ಅದೇನೋ ಒಂದ್ ತರ ಸೆಕ್ಯೂರ್ ಅನಿಸುತ್ತದೆ. ಮನಸ್ಸಿಗೆ ಶಾಂತಿ ಅನಿಸುತ್ತದೆ. 
ಆದರೂ ದೇವಸ್ಥಾನದಲ್ಲಿ ಕುಳಿತಾಗ ಕಣ್ಣಿಗೆ ಕಾಣುವ ಈ ಗ್ರಹಣ ದೋಷ-ಪರಿಹಾರ ಇತ್ಯಾದಿಗಳ ಪೋಸ್ಟರ್ರಲ್ಲಿ ನನ್ನ ರಾಶಿ ಕಂಡರೆ ಏನೂ ಅನಿಸದ ನನಗೆ... ಅಪ್ಪಿತಪ್ಪಿ ಮಂಜುವಿನ ಅಥವಾ ಮಕ್ಕಳ ರಾಶಿ ಅಲ್ಲಿ ಕಂಡರೆ ಅದ್ಯಾಕೋ ಒಂದ್ ತರ ತಲ್ಲಣ ಅನಿಸಿಬಿಡುತ್ತದೆ!! ಅವರ ಹೆಸರಲ್ಲಿ ಒಂದಷ್ಟು ಕಾಣಿಕೆ ಹಾಕಿ ಒಳ್ಳೆಯದು ಮಾಡಪ್ಪ ಅಂತ ಕೇಳಿ, ಒಂದು ಅರ್ಚನೆಯನ್ನೂ ಮಾಡಿಸಿ ಬಿಡುತ್ತೇನೆ !!! ಹಾಗೆ ಮಾಡಿದರೆ ಏನೋ ಒಂದ್ ತರ ಸೆಕ್ಯೂರ್ ಅನಿಸೋ ಹಾಗೆ!!
ಮನಸ್ಸಿನ ಈ ವೈಪರಿತ್ಯದ ಬಗ್ಗೆ ನನಗೆ ಅಚ್ಚರಿ ! ನನ್ನ ರಾಶಿಯ ದೋಷದ ಬಗ್ಗೆ ಇರದ ಕಾಳಜಿ ಅಥವ ಭಯ ಅದ್ಯಾಕೆ or rather ಅದ್ಹೇಗೆ ನಾವು ಪ್ರೀತಿಸುವವರ ರಾಶಿಯ ದೋಷದ ಬಗ್ಗೆ ಉಕ್ಕಿ ಬರುತ್ತದೆ ? ಹಾಗಾದರೆ ನನ್ನದು ಮೂಢನಂಬಿಕೆಯಾ ? ಅಥವ ನನಗೆ ಏನೂ ಆಗದು ಅನ್ನೋ ವಿಶ್ವಾಸವೋ? ಅಥವ ನನಗೆ ಏನಾದ್ರೂ ಪರವಾಗಿಲ್ಲ ಅನ್ನೋ taken for granted ಫೀಲಾ?? ಅಥವ ಏನೇ ಅದರೂ ನಾನೇ ನೋಡಬೇಕು, ನೋಡಿಕೊಳ್ಳಬೇಕು ಅನ್ನೋ ಸ್ವಾರ್ಥವೋ? ಅಥವಾ ಅವರಿಗೆ ಏನಾದ್ರೂ ಆದ್ರೆ ನೋಡೋ ಶಕ್ತಿ ಇಲ್ಲ ಅನ್ನೋ ನನ್ನ ದೌರ್ಬಲ್ಯವೋ !? ಗೊತ್ತಿಲ್ಲ ... ಆದರು ಒಂದಷ್ಟು ಕಾಣಿಕೆ ಹಾಕಿ ಒಳ್ಳೆಯದು ಮಾಡಪ್ಪ ಅಂತೀನಿ... ಆಮೇಲೆ ಮನಸ್ಸು ಒಂದ್ ತರ ನೀಲಿ ಬಾನಿನಂತೆ.. ಏನೂ ಆಗೋದೇ ಇಲ್ಲ ಅನ್ನುವಂತೆ . ಅವರು safe ಅನಿಸೋ ಹಾಗೆ!
ಓ ಮನಸ್ಸೇ ನೀನೆಷ್ಟು ವಿಚಿತ್ರ !!
ಬೆಳಿಗ್ಗೆ ಬೆಳಿಗ್ಗೆ ಡೈನಿಂಗ್ ರೂಂ ಅಲ್ಲಿ ಟ್ಯೂಬ್ ಪಕಪಕ ಅಂತಾ ಇತ್ತು. ಪುಟ್ಟಿಗೆ ಹೇಳ್ದೆ ಮೇಲೆ ರೂಂ ಅಲ್ಲಿ ಇರೋ ಟ್ಯೂಬ್ ತಂದುಕೊಡು ಮಗ, ಅದನ್ನೇ ಹಾಕ್ತೀನಿ ಸಂಜೆ ಬೇರೆ ತಂದ್ರಾಯ್ತು' ಅಂತ 'ಎಲ್ಲ ನನ್ನ ಕೈಲೇ ಮಾಡ್ಸು, ನಿನ್ ಮಗ ಮಲಗಿರಲಿ ' ಅಂತ ಗೊಣಗ್ತಾನೆ ಹೋದ್ಲು!! ತಂದು ಕೊಟ್ಳು. ಫಿಟ್ ಮಾಡಿದೆ .
ಪುಟ್ಟಿನ ಡ್ರಾಪ್ ಮಾಡೋಕೆ ಹೋಗ್ತಾ ಇದ್ದೆ ಎಂದಿನಂತೆ 'peak hour'.. ಎಂದಿನ ಅದೇ ಮುಖಗಳು, ಮುಗುಳ್ನಗೆಗಳು, ಕೈ ತೋರಿಸಿ ಶಾಲೆಯ ರಸ್ತೆಯಲ್ಲಿ ಗಾಡಿ ತಿರುಗಿಸುವಾಗ ಮುಂದೆ ಬಂದ ಇನ್ನೊಂದು ಗಾಡಿಯ ಪರಿಚಿತ ವ್ಯಕ್ತಿ 'ನೀವೇ ಫಸ್ಟ್ ಹೋಗಿ ಮ್ಯಾಮ್ , ಹ್ಯಾಪಿ ವುಮನ್'ಸ ಡೇ" ಅಂದ್ರು . ನಕ್ಕು ಗಾಡಿ ತಿರುಗಿಸಿದೆ..
ನಾ ಹುಟ್ಟಿದಾಗ ಅಪ್ಪ 'ಮಹಾಲಕ್ಷ್ಮಿ ಹುಟ್ಟಿದ್ಳು' ಅಂದ್ರಂತೆ , ಅಮ್ಮ ನನ್ನನ್ನ- ತಮ್ಮನನ್ನ ಹೆಣ್ಣು ಗಂಡು ಎಂದು ಬೇದ ತೋರಿಸಲೇ ಇಲ್ಲ .ಸೈಕಲ್ ಏರಿದರೆ ಸಿದ್ದಗಂಗೆ ಮಠ, ಗೂಳೂರು, ದೇವರಾಯನದುರ್ಗಾ ಸುತ್ತಿ ಬರ್ತಾ ಇದ್ವು . ಪ್ರೊಫೆಷನಲ್ ಕೋರ್ಸ್ಗೆ ಮೈಸೂರಲ್ಲಿ ಸೀಟ್ ಸಿಕ್ಕಾಗ ಕೂಡ ಅಮ್ಮ ಹಿಂಜರಿಕೆಯಿಲ್ಲದೆ ಕಳಿಸಿದ್ಲು..
ಗ್ಯಾಸ್ ಮುಗಿದಾಗ ಮತ್ತೊಂದು ಸಿಲಿಂಡರ್ ಮತ್ತೆ ಹಾಕೋದಕ್ಕಾಗಲಿ , ಐರನ್ ಬಾಕ್ಸ್ ಪಿನ್ ಸರಿಮಾಡೋದಕ್ಕಾಗಲಿ, ಮಕ್ಕಳ ಮೀಟಿಂಗ್ಗಾಗಲಿ, ಬಿಲ್ಲುಗಳನ್ನ ಕಟ್ಟೋದಕ್ಕಾಗಲಿ ನಾನು ಹೇಗೆ ಹಿಂಜರಿವುದಿಲ್ಲವೋ ಹಾಗೆ ಅಡುಗೆ ಮಾಡೋದಕ್ಕಾಗಲಿ, ಮನೆ ಕ್ಲೀನ್ ಮಾಡೋದಕ್ಕಾಗಲಿ ಮಂಜು ಎಂದೂ ಹಿಂದೆಮುಂದೆ ನೋಡಿಲ್ಲ .. ಮಂಜು ನಾನು ಅಫೀಷಿಯಲ್ ಕೆಲಸಗಳಿದ್ದರೆ ಜೊತೆಯಲ್ಲೇ ಹೋಗೋದು -ವ್ಯವಹಾರ ಇಬ್ಬರಿಗೂ ತಿಳಿದಿದ್ದರೆ ಒಳ್ಳೆಯದು ಎಂದು...
ಇನ್ನು ಪುಟ್ಟಿ ಬಯಸಿ ಬಯಸಿ ಪಡೆದ ಹೆಣ್ಣು ಮಗಳು ..
ನನ್ನ ಸುತ್ತ ಇರೋ ಯಾರೂ ಹೆಣ್ಣು ಅಂತ ಹೀಗಳೆದಿಲ್ಲ , ಬದಲಿಗೆ ಗೌರವಿಸಿದ್ದಾರೆ (And i know not all are treated this way (((...)
ಇವರಿಬ್ಬರು ನನ್ನ ವಾರಗಿತ್ತಿಯರು ... And i confidently say that we have held our head up-high taking pride in taking care of the the kids and family with all love and affection:)))
ಅಭಿಮಾನ, ಗೌರವದಿಂದ ಬದುಕೋ ಪ್ರತಿ ಹೆಣ್ಣಿಗೂ ನಮನ .. She does not need a day... she needs a place and she will show who she is...:)))))) And for me, i am proud of being a woman..........I also thank each and everyone for making me feel proud:)))))

Sunday, 6 March 2016

ಒಂದೆರಡು ಕವಿತೆಗಳು

ಕವಿತೆಯಾಗುವ
ಬಯಕೆಯಿತ್ತು ಗೆಳತಿ ....
ಕಥೆಯಾಗುವ ಆಸೆಯಿರಲಿಲ್ಲ ...
ಎಂದ ಅವಳ ಕಂಗಳಲ್ಲಿ
ಕವಿತೆ ಕರಗಿ ಕಥೆ ಮಡುಗಟ್ಟಿತ್ತು ....


ಪ್ರೀತಿ ಸಿಗದೆಂದು ಅರಿತ ಮೇಲು
ಪ್ರೀತಿಸುವುದು
ರಾಧೆಯಾದಂತೆ ಅಲ್ಲವೇ ನಲ್ಲ
ಮನದ ನೋವಿಗೆ ಮುಸುಕೆಳೆದು
ಮೊಗದಲ್ಲಿ ನಲಿವ ಅರಳಿಸುವ
ಕಲೆ ಬಲ್ಲವಳವಳು
ನೀನೆ ಅವಳಿಗೆಲ್ಲ....:


ಶಿಶಿರದಲ್ಲಿ ಎಲೆಗಳ ಉದುರಿಸಿ
ವಿರಹಿಯಂತೆ ನಿಂತಿದ್ದ
ಮನೆಯ ಮುಂದಿನ ಹೊಂಗೆ
ಈಗ
ಹಸಿರುಟ್ಟು
ಅಣಿಯಾಗುತ್ತಿದ್ದಾಳೆ
ಅಭಿಸಾರಿಕೆಯಂತೆ ...............
ವಸಂತನೆಂಬ ಇನಿಯನ
ಆಗಮನಕೆ ....

ಮೊನ್ನೆ ಮೊನ್ನೆ ನೆಟ್ಟ
ಪುಟ್ಟ ಬೀಜದ ಬಸಿರಿನಿಂದ
ಇಂದಾಗಲೇ ಮೊಳಕೆಯೊಡೆದ ಹಸಿರು....
ಅಷ್ಟು ಪುಟ್ಟ ಬೀಜದ ಒಡಲೊಳಗೆ
ಆ ಬೃಹತ್ ವೃಕ್ಷದ ಉಸಿರು
ಅಡಗಿಸಿದ ನಿನ್ನ ರಹಸ್ಯವನ್ನೊಮ್ಮೆ
ಹೇಳಿ ಬಿಡೇ ಪ್ರಕೃತಿ.....!!

Wednesday, 2 March 2016

ಯಾವುದೇ ವಸ್ತು ಬಹಳಷ್ಟು ಕಾಲ ಉಪಯೋಗಿಸದೆ ಇರಿಸಿದರೆ ಹಾಳುಗುತ್ತದೆ (With exceptions). ಮಾನವನ ದೇಹದಲ್ಲಿ ಕೂಡ ಹಾಗೆ ಕೆಲವು vestigial organs ಇವೆ. ಅಪೆಂಡಿಕ್ಸ್ ಅದಕ್ಕೆ ಒಂದು ಉದಾಹರಣೆ. (ಸಣ್ಣ ಕರುಳು ಹಾಗು ದೊಡ್ಡ ಕರುಳಕೂಡಿಸುವ ಒಂದು ಪುಟ್ಟ ಚೀಲ). ಮಾನವನ ವಿಕಾಸವಾದ ಹಾಗೆ, ಆಹಾರ ಪದ್ಧತಿ ಬದಲಾದ ಹಾಗೆ ಅದರ ಅಗತ್ಯ ನಶಿಸುತ್ತ ಹೋಯ್ತು... ಅದು ಅನಗತ್ಯವಾಗುತ್ತಾ ಹೋಗುವುದರ ಜೊತೆಗೆ ಕೆಲವೊಮ್ಮೆ ಅನಾರೋಗ್ಯಕ್ಕೂ ಈಡು ಮಾಡುವ ಅಂಗ ಎನಿಸಿಕೊಂಡು ಬಿಟ್ಟಿತು!!
ಮಾನವನ ಮಿದುಳು ಕೂಡ ಹಾಗೆ. ಒಂದಷ್ಟು ದಿನ ಉಪಯೋಗಿಸದೆ ಬಿಟ್ಟರೆ, ಅಥವ ಒಂದಷ್ಟು ವಿಷಯಕ್ಕೆ ಮೌಲ್ಡ್ ಆಗಿಬಿಟ್ಟರೆ ಮತ್ಯಾವುದಕ್ಕೂ ತೆರೆದುಕೊಳ್ಳೋದನ್ನ ನಿಲ್ಲಿಸಿ ಬಿಡುತ್ತದೆ. ಹೊಸ ವಿಷಯಗಳಿಗೆ ಮನಸ್ಸನ್ನ ತೆರೆದುಕೊಳ್ತಾ ಹೋದ್ರೆ ಮನಸ್ಸು ಕೂಡ ದೇಹದಂತೆ ಪ್ರೌಢವಾಗುತ್ತಾ ಹೋಗುತ್ತದೆ . ಗೌರವಾರ್ಹ ಎನಿಸಿಕೊಳ್ಳುತ್ತದೆ. ದೇಹಕ್ಕೆ ವಯಸ್ಸಾದ ಹಾಗೆ ಮಿದುಳಿಗೂ ವಯಸ್ಸಾಗುತ್ತದೆ. ವಯಸ್ಸಾದ ಹಾಗೆ ದೇಹಕ್ಕೆ ಹೇಗೆ ಆರೈಕೆ ನೀಡುತ್ತೆವೆಯೋ ಹಾಗೆಯೇ ಮನಸ್ಸಿಗೆ ಕೂಡ ಆರೈಕೆ ನೀಡುವ ಅಗತ್ಯ ಇದೆ . ಜಾಗೃತಗೊಳಿಸುವ ಅಗತ್ಯವಿದೆ. ಬಹುಷಃ ಒಳ್ಳೆಯ ಓದುವಿಕೆಯಿಂದ ಹಾಗು ಪ್ರಕೃತಿಯ ಒಡನಾಟದಲ್ಲಿ ಸಿಗುವ ಮಾನಸಿಕ ಆರೋಗ್ಯ ಮತ್ತೆಲ್ಲೂ ಸಿಗದೇನೋ. ದಿನಕ್ಕೆ ಹತ್ತಿಪ್ಪತ್ತು ನಿಮಿಷಗಳ ಏಕಾಂತ, ಒಂದರ್ಧ ಅಥವ ಒಂದು ಗಂಟೆಯ ಓದು ದಿನಚರಿಯ ಭಾಗವಾದರೆ ನಿಜಕ್ಕೂ ಯಾವುದೇ ಔಷಧಗಳ ಅಗತ್ಯ ಬೀಳದೇನೋ ..A Dose of self awareness and cognition can make us grow with elegance-both physically and emotionally ........
ಪುಟ್ಟಿಬೆಳಿಗ್ಗೆ ಬೆಳಿಗ್ಗೆ ಪಾಠ ಓದ್ತಾ vestigial organs ಅಂದ್ರೆ ಏನಮ್ಮ ಅಂದ್ಲು... ಅನುಪಯುಕ್ತವಾದ ಅಂಗ ಅಂತ ಹೇಳೋಕೆ ಯಾಕೋ ಸರಿ ಅನಿಸಲಿಲ್ಲ ....ಉಪಯೋಗಿಸದೆ ಉಪಯುಕ್ತವಲ್ಲದಂತಾದ ಆರ್ಗನ್ ಮಗ ಅಂದೆ ... and then the story turned towards the brain ashte:))))))))))
ಒಂದೂರು. ಅಲ್ಲಿ ಒಬ್ಬ ರಾಜ. ಅವನು ಪ್ರೀತಿಯಿಂದ ಒಂದು ಗಿಡುಗ ಹಕ್ಕಿಯ ಸಾಕಿರ್ತಾನೆ . ತುಂಬಾ ಪ್ರೀತಿಸ್ತಾ ಇರ್ತಾನೆ. ಅದೂ ಕೂಡ ಇವನನ್ನ ಅಷ್ಟೇ ಪ್ರೀತಿಸ್ತಾ ಇರ್ತದೆ. ಒಂದು ದಿನ ರಾಜ ಬೇಟೆಗೆ ಹೋಗ್ತಾನೆ. ಎಂದಿನ ಅದೇ ಕಾಡು ಹಾದಿ. ಒಂದಷ್ಟು ದೂರ ಹೋದ ಮೇಲೆ ಎಲ್ಲಾ ಕಥೆಗಳಲ್ಲಿ ಆಗುವಂತೆ ರಾಜ ಹಾದಿ ತಪ್ಪಿ ಎಲ್ಲರಿಂದ ಬೇರೆ ಆಗ್ತಾನೆ. ಹಕ್ಕಿ ಮಾತ್ರ ಅವನೊಟ್ಟಿಗೆ ಉಳಿತದೆ. ಹಾಗೆ ಹಾದಿ ಹುಡುಕ್ತಾ ಹುಡುಕ್ತಾ ರಾಜನಿಗೆ ದಣಿವಾಗಿ ಬಾಯಾರುತ್ತಾನೆ. ಪ್ರೀತಿಯ ಹಕ್ಕಿಗೆ ಹೇಳ್ತಾನೆ 'ಎಲ್ಲಾದರು ನೀರು ಇದ್ಯಾ ನೋಡು ಇಲ್ಲಾ ಅಂದ್ರೆ ಈ ಬಾಯಾರಿಕೆಯಿಂದ ನಾ ಸತ್ ಹೋಗ್ತೀನಿ". ಸರಿ ಹಕ್ಕಿ ನೀರು ಹುಡುಕೋದಕೆ ಹಾರುತ್ತೆ. ರಾಜ ಹಾಗೆ ಬರ್ತಾ ಇರುವಾಗ ಒಂದೆಡೆ ಬಂಡೆಯ ಸಂಧಿಯಿಂದ ಹನಿ ನೀರು ತೊಟ್ತಾ ಇರುತ್ತೆ. ರಾಜ ಅಲ್ಲೇ ಇದ್ದ ಒಂದು ಎಲೆಯನ್ನ ಒಂದು ಸಣ್ಣ ಬಟ್ಟಲಂತೆ ಮಾಡಿ ಆ ನೀರನ್ನ ಹಿಡಿಯುತ್ತಾನೆ. ಒಂದಷ್ಟು ಸಂಗ್ರಹಿಸಿ ಇನ್ನೇನು ಕುಡಿಯಬೇಕೆಂದಾಗ ಅವನ ಪಕ್ಷಿಮಿತ್ರ ಆ ಎಲೆಯನ್ನ ಬಡಿದು ಬೀಳಿಸುತ್ತಾನೆ!! "ನಾ ಸಾಯೊ ಅಷ್ಟು ಬಾಯರಿರುವಾಗ ನಿನ್ನದೇನು ಹುಡುಗಾಟ' ರಾಜ ಬೈತಾನೆ. ಮತ್ತೆರಡು ಬಾರಿ ಹಿಡಿದು ಕುಡಿಯಲು ಹೋದಾಗ ಮತ್ತೆ ಇದೇ ಆದಾಗ ರಾಜ ಬಾಯರಿದ್ದ ಸಂಕಟದ ಜೊತೆಗೆ ಹಕ್ಕಿಯ ವರ್ತನೆಗೆ ಕೋಪಗೊಂಡು ಖಡ್ಗ ಬೀಸುತ್ತಾನೆ. ಹಕ್ಕಿ ಗಾಯಗೊಂಡು ಕೆಳಗೆ ಬೀಳುತ್ತದೆ!! ಹಕ್ಕಿ ಬಿದ್ದಾಗ ಅದು ಬೀರಿದ ನೋಟಕ್ಕೆ ನೊಂದ ರಾಜ ಇದ್ಯಾಕೆ ಹೀಗೆ ಅಡ್ತು, ತಾಳು ನೀರಿನ ಒರತೆ ಯಾವುದು ನೋಡೋಣ' ಅಂತ ಬಂಡೆಯನ್ನೇರಿ ಹೋಗ್ತಾನೆ. ಅಲ್ಲೊಂದು ವಿಷಸರ್ಪ ವಿಷವನ್ನ ಕಕ್ಕುತ್ತಾ ಕುಳಿತಿರುತ್ತದೆ !!! ರಾಜ ತನ್ನ ನಡವಳಿಕೆ ತಾನೇ ನೊಂದು ನಾಚಿ ಹಕ್ಕಿಯ ಬಳಿ ಕ್ಷಮೆ ಯಾಚಿಸುತ್ತಾನೆ ... ಇದು ಕಥೆ..ಓದಿದ ಮೇಲೆ ಹಂಚಿಕೊಳ್ಳಬೇಕು ಅನಿಸ್ತು
ಕೆಲವೊಮ್ಮೆ ಅದೆಷ್ಟೇ ತಿಳುವಳಿಕೆ ಇದ್ರೂ, ಅದೆಷ್ಟೇ ದೊಡ್ದವರಾದ್ರು , ಸಣ್ಣ ಸಣ್ಣ ಮಾತುಗನ್ನ ವಿಷಯಗಳನ್ನ ಅರ್ಥ ಮಾಡಿಕೊಳ್ಳೋಕೆ ಸೋತು ಹೋಗ್ತೀವಿ .. ದುಡುಕಿ ಮತ್ತೆ ಹಿಂದಕ್ಕೆ ಬರಲಾರದ ಹಾದಿ ತಲುಪಿಬಿಡ್ತೀವಿ ಅಥವ ಹಿಂದಕ್ಕೆ ಪಡೆಯಲಾಗದ ಗೆಳೆತನವನ್ನ ಕಳೆದುಕೊಂಡು ಬಿಡ್ತೀವಿ ಅಲ್ವೇ ...
ಅಮ್ಮನಾಗುವುದೆಂದರೆ.. 
ಹೇಳದಿದ್ದರೂ ಅರಿತು, 
ಕೇಳದಿದ್ದರೂ ನೀಡಿ,
ಅಳುವಿಗೆ ಹೆಗಲಾಗಿ 
ನಗುವಿಗೆ ದರ್ಪಣವಾಗಿ 
ಸೋತಾಗ ಸೆರಗಿನಾಸರೆಯಿತ್ತು
ಗೆದ್ದಾಗ ಒಟ್ಟಿಗೆ ಬೀಗಿ
ಹಾದಿ ತಪ್ಪಿದಾಗ ಬೈದು
ಬೈಸಿಕೊಂಡರೂ ಅವಳೇ ಸೋತು..
ಸೋತರೂ ಸೋಲದಂತೆ .
ನೊಂದರೂ ನೋಯದಂತೆ ..
ಬೊಗಸೆ ಬರಿದಾಗದಂತೆ
ಪ್ರೀತಿ ಒಸರುತ್ತಲೇ ..ಒಸರುತ್ತಲೇ .
ಅಮ್ಮನಾಗಿಬಿಡುವುದು ... !!!
ಚಿಕ್ಕವರಿದ್ದಾಗ ಬಸ್, ರೈಲು, ಅಥವಾ ಕಾರಲ್ಲಿ ಹೋಗೋವಾಗ ಗಿಡಮರಗಳು, ರಸ್ತೆ , ಅಲ್ಲೆಲೋ ಕಾಣುವ ವಿಂಡ್ಮಿಲ್, ಎಲ್ಲಾ ಹಿಂದಕ್ಕ್ಕೆ ಹೋದಂತೆ ಅನಿಸ್ತಾ ಇತ್ತು. ಹಾಗೆಲ್ಲ ಅದು ಹಿಂದೆ ಹೋದಂತೆ ಅದೇನೋ ವಿಸ್ಮಯ !! ಅದ್ಯಾಕೆ ಹಾಗೆ ಹಿಂದಕ್ಕೆ ಹೋಗ್ತಾ ಇದೆ ಅಂತ. 'ನಾವ್ ಮುಂದಕ್ಕೆ ಹೋಗ್ತಾ ಇದೀವಲ್ಲ ಅದಕ್ಕೆ ಹಾಗೆ ಅನಿಸುತ್ತೆ ಮಗ ' ಅಂತ ಅಮ್ಮ ಹೇಳಿದ್ರೂ ಅದೇನೋ ಅರ್ಥವಾಗದಂತೆ. ಒಂದಷ್ಟು ದೊಡ್ಡವರಾಗಿ ವಿಜ್ಞಾನ ಓದ್ತಾ ಓದ್ತಾ ಮನಸ್ಸು ಅದಕ್ಕೆ ತೆರದುಕೊಳ್ತಾ ಹೋಯ್ತು.
ಚಾಮುಂಡಿ ಬೆಟ್ಟಕ್ಕೆ ಹೋಗ್ತಾ, ಕಾರ್ ಡ್ರೈವ್ ಮಾಡ್ತಾ ಮಾಡ್ತಾ, ಮಂಜು ಅಂದೆಂದೋ ಲೂನಾದಲ್ಲಿ ಚಾಮುಂಡಿಬೆಟ್ಟಕ್ಕೆ ಕರ್ಕೊಂಡು ಹೋಗಿದ್ದನ್ನ ಸ್ವಾರಸ್ಯವಾಗಿ ರೋಮ್ಯಾಂಟಿಕ್ ಆಗಿ ಹೇಳ್ತಾ ಇದ್ರೆ ಬೆಟ್ಟದಿಂದ ಇಳಿಯುವಾಗ ಸಿಗುವ ಅದೇ ಗಿಡಮರಗಳಂತೆ ಹಿಂದಕ್ಕೆ ಹೋದ ಕೆಲವು ಸಮಯಗಳೂ ಬರುವಂತಿದ್ದರೆ ಎನಿಸಿದ್ದು ಸುಳ್ಳಲ್ಲ !! And then he said 'ನಾ ರೆಡಿ !!ಲೂನದಲ್ಲಿ ತಾನೇ ಕರ್ಕೊಂಡ್ ಹೋಗ್ತೀನಿ ಬಿಡು!! ಆಗ ಕೂಡ ಎಲ್ರೂ 'ಇದೇನ್ ಹಿಂಗ್ ಸುತ್ತುತ್ತವೆ ಇವೆರಡು ಅಂತ ನಮ್ಮನ್ನೇ ನೋಡ್ತಿದ್ರು !! ಈಗ್ಲೂ ನಮ್ಮನ್ನೇ ನೋಡ್ತಾರೆ ಇವ್ರಿಗೇನ್ ಬಂತು "ಈಗ" ಲೂನಾದಲ್ಲಿ ಸುತ್ತೋಕೆ ಅಂತ'!!! And I smile as ever:)))))))))))))
ಮನೆ ಅಂದ ಮೇಲೆ ಮಾತು ಬರುತ್ತೆ ಹೋಗುತ್ತೆ . ಸಣ್ಣ ಮಾತುಗಳು ಅತ್ತೆ ಸೊಸೆಯರ ನಡುವೆ ಇದ್ದೆ ಇರುತ್ತದೆ ..ಅದಕ್ಕೆ ನಮ್ಮ ಮನೆಯೂ ಹೊರತಲ್ಲ...ಬಹಳಷ್ಟು ಸಾರಿ ನಾವು ಮೂರೂ ಜನ ಸೊಸೆಯಂದಿರು ಅಯ್ಯೋ ಅವರ ಬುದ್ದಿ ಗೊತ್ತಲ್ಲ ಮತ್ತ್ಯಾಕೆ ಹೆಚ್ಚು ತಲೆ ಕೆಡಿಸಿಕೊಳ್ಳೋದು ಅಂತ ಸುಮ್ಮನಾಗಿ ಬಿಡ್ತೀವಿ , ಆದ್ರೂ ಕೆಲವೊಮ್ಮೆ ಮನಸ್ಸಿನ ಪರಿಸ್ಥಿತಿಗೆ ಅನುಗುಣವಾಗಿ ಕೆಲವೊಮ್ಮೆ ವಯಸ್ಸಿಗೆ ಬಂದ ಮಕ್ಕಳಿರುವ ನಾವು ಅನಿಸಿಕೊಳ್ಳೋದಾ ಅನ್ನೋ ಸಿಟ್ಟಿಗೆ ಏನಾದ್ರು ಅಂದು ಬಿಡೋದು ಉಂಟು . ಮೊನ್ನೆ ಅತ್ತೆ ಬಂದಿದ್ರು ಏನೋ ಸಣ್ಣ ಪುಟ್ಟ ಮಾತುಗಳು ಬಂದ್ವು ಅಲ್ಲಿ ಅಂತ ಬೇಸರಗೊಂಡಿದ್ದರು.. ಅವರಮ್ಮನಿಗೆ ಒಂದಷ್ಟು ಸಮಾಧಾನ ಬುದ್ದಿ ಹೇಳಿದ ಮೇಲೆ , ಅತ್ತೆ ಮಲಗಲು ಹೋದ ಮೇಲೆ ಮಂಜು ಹೇಳಿದ್ರು "ಅವ್ರ ಕಥೆ ಗೊತ್ತಲ್ವ ಸುನಿ ನಿನಗೆ.. ೨೫ ವರ್ಷದಿಂದ ನೋಡ್ತಾನೆ ಬಂದಿದ್ದೀಯ, ನಿಮ್ಮ ಮೂರು ಜನರ(ವಾರಗಿತ್ತಿಯರು) ಬಗ್ಗೆ ಒಂದ್ ಮಾತು ಇಲ್ಲ .. ನಮಗೆಲ್ಲ ತಾಯಂದಿರು ನೀವು...'
ಹಾಗೆ ಮಾತಾಡ್ತಾ ಮಾತಾಡ್ತಾ .... 'ದಿನಾ ಅದೇ ಬಾವಿಯಲ್ಲಿ ನೀರ್ ತೆಗಿತಾ ಇದ್ರೆ ಬಾವಿಯ ಆಳ ಗೊತ್ತಿರುತ್ತದೆ ಕಣಮ್ಮ! ಹಗ್ಗ ಇಷ್ಟಕ್ಕೆ ನಿಂತರೆ ಬಿಂದಿಗೆ ಮುಳುಗುತ್ತೆ ,ನೀರು ಸಿಗ್ತದೆ ಅಂತ ! ಹೊಸದಾಗಿ ಬಾವಿ ಹತ್ರ ಬಂದವ್ರಿಗೆ ನೀರಿನ ಆಳ ತಿಳಿಯೋದಿಲ್ಲ ! ನೀನೂ ತಿಳ್ಕೋ ಬದುಕೋದು ಹೇಗೆ ಅಂತ !! ನಿನ್ ಮಕ್ಕಳು ನಿನ್ನನ್ನ ಹುಟ್ಟಿದಾಗಿಂದ ನೋಡಿರ್ತಾರೆ. ನೀ ಬೇಸರಗೊಂಡು ಮಾತಾಡಿದ್ರೆ ನಿನ್ ಮಕ್ಕಳಿಗೆ ನಮ್ಮಮ್ಮ ಹಿಂಗೆ ಅಂತ ಗೊತ್ತಿರುತ್ತೆ ಆದ್ರೆ ಸೊಸೆ ಅಥ್ವ ಅಳಿಯ ನಿನ್ನ ಆಗಷ್ಟೇ ನೋಡ್ತಾ ಇರ್ತಾರೆ, ಅವ್ರು ಬೇರೆ ಕಡೆಯಿಂದ ಬಂದು ನಿನ್ನ ಮನೆಗೆ ಸೇರ್ತಾರೆ... ಮಾತಾಡುವಾಗ ಸ್ವಲ್ಪ ತಡೆದು ಮಾತನಾಡು.. ಅಷ್ಟರಲ್ಲಿ ನಿನಗೇ ಗೊತ್ತಾಗಿರುತ್ತೆ ಆ ಮಾತು ಅಗತ್ಯನಾ ಇಲ್ವಾ ಅಂತ .. 'ನನ್ನ' ಮನೆ ಇದು 'ಹೀಗೆ' ಇರಬೇಕು ಅಂತ ಅನ್ಕೊಬೇಡ..!!! ನಿನ್ನ ಕಾಲ, ನಿನ್ನ ಬದುಕು, ನೀ ಬದುಕ ನೋಡೋ ರೀತಿಯಲ್ಲೇ ಎಲ್ಲಾರೂ ನೋಡಬೇಕು ಅಂದಾಗಲೇ ಇದೆಲ್ಲ ಬರೋದು.... ಅಂತೆಲ್ಲ ಹೇಳ್ತಾ ಹೋದ್ರು !!! "ಅಯ್ಯೋ ಶಿವ, ಒಂದ್ ಪುಸ್ತಕ ಓದೋದಿಲ್ಲ(ಓದಿಲ್ಲ) ಆದ್ರೂ ಈ ಪಾಟಿ ಬುದ್ದಿ ಎಲ್ಲಿರುತ್ತೋ ಕಾಣೆ'!!!
ಮನಸ್ಸು ಒಮ್ಮೆಮ್ಮೆ ಮಳೆಯ ನಂತರ ಮೂಡೋ ಕಾಮನಬಿಲ್ಲಿನ ಚಿತ್ತಾರದ ಬಾನಿನಂತೆ... ಪಾಠ ಕಲಿಯೊದಕ್ಕೆ ಪುಸ್ತಕವೇಕೆ ಇಂತಹ ಜೀವದ ಗೆಳೆಯನಿದ್ದರೆ ಅನ್ನೋ ಹಾಗೆ :))))
'ಹಿಂದೆ ನಾನೊಬ್ಳು ಅಮ್ಮ ಅಂತ ಕೂತಿದ್ದೀನಿ ಅನ್ನೋ concern ಇಲ್ಲ ಅಲ್ವ... ಹೆಂಗ್ ಗಾಡಿ ಓಡಿಸ್ತೀಯ ನೋಡು ..ಯಾವ್ದೋ ಹುಡುಗಿನ ಕೂರಿಸಿಕೊಂಡು ಓಡಿಸೋ ಹಂಗೆ ...ನನ್ ಗಂಡ ಕುಡಿದ ನೀರು ಅಲುಗೋದಿಲ್ಲ ಹಂಗ್ ಕರ್ಕೊಂಡ್ ಹೋಗ್ತಾನೆ ಗೊತ್ತಾ "
ಮಾ, ಹುಡುಗಿ ಕೂತ್ರೆ ಹಿಂಗೆಲ್ಲ ಓಡಿಸೋದಿಲ್ಲ ಅದು responsibility .. ನೀ ಕೂತ್ರೆ ಅದು confidence... ಬೇಕಾದ್ರೆ ಅಪ್ಪನ್ನ ಕೇಳು(!!!) ನೀ ಆರಾಮಾಗಿ ಕೂತ್ಕೋ" 
ಎಂತಹ ಮಗ ಹುಟ್ಬಿಟ್ಟ ಶಿವನೇ
ನನಗೆ ಒಂದ್ ತರ amnesia.ಜೊತೆಗೆ ಒಂದಷ್ಟು ಸಂಕೋಚ .. ಗುರುತು ಹಿಡಿಯೋದು ಸ್ವಲ್ಪ ನಿಧಾನ . ಮಂಜುಗೆ ಫ್ರೆಂಡ್ಸ್ ಹೇಳ್ತಾರೆ 'ಅಕ್ಕ ಸಿಕ್ಕಿದ್ರು ಮಂಜಣ್ಣ , ಅದ್ಯಾಕೋ ನಾ ನಕ್ಕರೂ ನಗಲಿಲ್ಲ ' ಮಂಜು 'ಅಯ್ಯೋ ಅವ್ಳು ಹಂಗೆ , ನಾ ಇಲ್ಲದಿದ್ದರೆ ಅವ್ಳು ಅವಳದೇ ಲೋಕದಲ್ಲಿ ಇರ್ತಾಳೆ ಬಿಡಣ್ಣ " ಅಂತ ಹೇಳಿ ಮನೆಗೆ ಬಂದು ಇಂತಹವರು ಸಿಕ್ಕಿದ್ರು , ನಿನ್ನ ನೋಡಿದ್ರಂತೆ, ಹೇಳ್ತಾ ಇದ್ರು ಅಂತ ಹೇಳಿದಾಗ 'ಹೊಂ ಅದ್ಯಾರೋ ನಕ್ರು ಮಂಜು ನನಗೆ ತಕ್ಷಣ ಗುರುತು ಸಿಗಲಿಲ್ಲ ನೋಡು' ಅಂದ್ರೆ ನಿನ್ನ ಕಥೆ ಹೊಸದ ಅನ್ನೋ ಹಾಗೆ ಲುಕ್ ಕೊಟ್ಟು ಸುಮ್ಮನಾಗ್ತಾರೆ ಮಂಜು. ಮೊದಲೆಲ್ಲ ತಪ್ಪು ತಿಳಿತಾ ಇದ್ದವರಿಗೆ ಈಗ ಗೊತ್ತಾಗಿಬಿಟ್ಟಿದೆ ಇವ್ಳಿಗೆ ಹಿಂಗ್ ಒಂದ್ ಕಾಯಿಲೆ ಅಂತ!! ಜಾಸ್ತಿ ತಪ್ಪು ತಿಳಿಯೋದಿಲ್ಲ !!
ಮೊನ್ನೆ ಶನಿವಾರ ಕಾರ್ತಿ 'ಮಾ, ಟ್ಯಾಂಕ್ ಹತ್ತಿರ ಬಾ ಪಿಕ್ ಮಾಡೋಕೆ " ಅಂತ ಫೋನ್ ಮಾಡ್ದ . ನಾ ಹೋದೆ. ಬಸ್ ನಿಲ್ತು. ನಾ ನಿಂತಿದ್ದೆ . ಸರಿ ಒಂದ್ ಹುಡುಗ ನನ್ನ ಕಡೆ ನೋಡಿ ನಗ್ತಾ ಬರ್ತಾ ಇದ್ದ. ಎಂದಿನ ಹಾಗೆ ನನ್ನದು ಬ್ಲಾಂಕ್ ಲುಕ್. ಅವನ ಪಕ್ಕ ಕಾರ್ತಿ ಕೂಡ ಇದ್ದಿದ್ದು ರಸ್ತೆ ತಿರುವಿನಲ್ಲಿ ಇದ್ದ ನನಗೆ ಕಾಣ್ತಾ ಇರಲಿಲ್ಲ . ಒಂದಷ್ಟು ಮುಂದೆ ಬಂದ ಮೇಲೆ ಆ ಹುಡುಗ ಕಾರ್ತಿ ಜೊತೆನೇ ಬರ್ತಾ ಇದದ್ದು ಗೊತ್ತಾಯ್ತು. ಅಷ್ಟರಲ್ಲಿ ಆ ಹುಡುಗ ಆ ಕಡೆ ರಸ್ತೆ ದಾಟಿ ಆಗ್ಹೋಯ್ತು . ಮಗನ ಜೊತೆ ವಾಪಸ್ ಬರ್ತಾ 'ಮಗ ಆ ಹುಡುಗ ನಗ್ತಾ ಬಂತು ನನಗೆ ಗುರ್ತೆ ಸಿಗಲಿಲ್ಲ! ಯಾರ್ ಮಗ ಅದು? ಪಾಪ ಏನ್ ತಿಳ್ಕೊಳ್ತೋ ಏನೋ' ಅಂದೆ 'ಅದು ಆಕಾಶ್ ಅಲ್ವ ಮಾ, ಮೊನ್ನೆ ನೀನೆ ಒಬ್ಬಟ್ಟು ಹಾಕಿ ಕೊಟ್ಟಿದ್ದಲ್ಲ ಅವ್ನು ಮನೆಗೆ ಬಂದಾಗ " ಅಂದ. ನೆನಪಿಗೆ ಬರಲಿಲ್ಲವಾದ್ರು ಸಾರಿ ಹೇಳ್ಬಿಡು ಮಗ ಗೊತ್ತಾಗಲಿಲ್ಲ ಅಂದೆ. 'ಅಯ್ಯೋ ಬಿಡಮ್ಮ ನನ್ ಫ್ರೆಂಡ್ಸ್ ಹಂಗೆಲ್ಲ ಅಂದ್ಕೊಳ್ಳೋದಿಲ್ಲ ' ಅಂದ 'ಅದ್ಯಾಕೋ ಮರೆವು ಮಗ. ಒಂದೊಂದ್ ಸಾರಿ ಬೇಜಾರ ಆಗುತ್ತೆ ಈ ಮರೆವಿನ ಮೇಲೆ .. ಅದೆಷ್ಟ ತಪ್ಪು ತಿಳಿತಾರೋ ಅಲ್ವ" 'ಮಾ, ಅದು ಕಾಯಿಲೆ ಅಲ್ಲ ಮಾ boon!! ಮನಸ್ಸಿಗೆ ಏನ್ ಇಷ್ಟ ಅಷ್ಟನ್ನ ಮಾತ್ರ ಉಳಿಸಿಕೊಂಡು ಉಳಿದದ್ದನ್ನ ಮರೆತು ಬಿಡೋ boon ! PCನಲ್ಲಿ ಅನಗತ್ಯ ಮೆಮೊರಿ ತುಂಬ್ತಾ ಹೋದ್ರೆ PC ಸ್ಲೋ ಆಗೋದಿಲ್ವ ಡಿಲೀಟ್ ಮಾಡಿದ್ರೆ ಚೆನ್ನಾಗ್ ಕೆಲಸ ಮಾಡೋದಿಲ್ವ ಹಂಗೆ ಬೇಡದ್ದು ತುಂಬಿಕೊಂಡರೆ ಭಾರ ಜಾಸ್ತಿ ಆಗುತ್ತೆ!! ಯಾರೋ ಮಾತಾಡಿಸಿಲ್ಲ ಅಂದ್ರೆ ಒಹ್ ಇವ್ರು ಅವ್ರಲ್ವ ನನ್ನ ಮಾತೇ ಅಡ್ಸಿಲ್ಲ ನೋಡು ಅಂತ ನೊಂದ್ಕೊತೀಯ ..ಈಗ ಅವೆಲ್ಲ ತಲೆನೋವೇ ಇಲ್ಲ ..! ಸುಮ್ಸುಮ್ನೆ ಅದ್ಯಾಕ್ ಟೆನ್ಶನ್ ಮಾಡ್ಕೊತೀಯ ಸುಮ್ನಿರು !!!!!! :))))))
ಹೀಗೊಂದು ವಾಟ್ಸಪ್ ಕಥೆಯ ಭಾವಾನುವಾದ ... ಹಂಚಿಕೊಳ್ಳಬೇಕು ಅನಿಸ್ತು :)))))
ಪುಟ್ಟನಿಗೆ ಹೂಗಳು ಅಂದ್ರೆ ಪ್ರಾಣ. ಅದರಲ್ಲೂ ಗುಲಾಬಿ ಅಂದ್ರೆ ತುಂಬಾನೇ ಇಷ್ಟ. ಹೂ ಅಂಗಡಿಯಲ್ಲಿ ಸಾಲಕ್ಕೆ ಹೂ ತಂದು ಸರ್ಕಲ್ಗಳ ಬಳಿ , ರಸ್ತೆಯ ಬದಿಯಲ್ಲಿ ಮಾರಿ ಒಂದಷ್ಟು ದುಡ್ಡು ತಂದು ಅಮ್ಮನಿಗೆ ಕೊಡ್ತಾ ಇದ್ದ. 
ಆವತ್ತು ಕೂಡ ಅಂಗಡಿಯ ಬಳಿ ಹೋದಾಗ ಯಾರೋ ಮಾತಾಡ್ತಾ ಇದ್ರು . ನಾಳೆ ವ್ಯಾಲೆಂಟಿನ್ ಡೇ ಕಣೋ ಮಗ , ೩ ರೂಪಾಯಿ ಗುಲಾಬಿ 10-20 ರೂಪಾಯಿಗೆ ಹೋಗ್ತದೆ! ಒಳ್ಳೆ ಕಮಾಯಿ ನಾಳೆ' ಮರುದಿನ ಎಂದಿನಂತೆ ಪುಟ್ಟ ಅಂಗಡಿಯವನ ಬಳಿ ಹೋಗಿ ದಿನಕ್ಕಿಂತ ಹೆಚ್ಚು ಹೂ ಪಡೆದಾಗ ಅಂಗಡಿಯಾತ ರೇಗಿಸಿದ 'ಏನ್ ಪುಟ್ಟ ನೀ ಯಾರಿಗೆ ಕೊಡ್ತೀಯ ಇಷ್ಟೊಂದು ಹೂವ ತಗೊಂಡ್ ಹೋಗ್ತಾ ಇದ್ದೀಯ!' ನಸುನಾಚಿದ ಪುಟ್ಟ 'ಹೋಗಣ್ಣೊ' ಅಂತ ಹೂ ಪಡೆದು ಓಡಿದ. ಅಂದು ಹೂವು ಎಂದಿಗಿಂತ ಹೆಚ್ಚೇ ಮಾರಾಟವಾಯ್ತು . ಪುಟ್ಟ ಅಂಗಡಿಯಾತನಿಗೆ ಹೂವಿನ ದುಡ್ಡು ಕೊಟ್ಟು, ಮೇಲೆ ಉಳಿದ ದುಡ್ಡನ್ನ ತೆಗೆದುಕೊಂಡು 'ಅಣ್ಣೋ , ಆ ಗುಲಾಬಿ ಕೊಡು " ಅಂದ. ನಕ್ಕ ಹೂವಿನವ ಒಂದೆರಡು ಹೂ ಕೊಟ್ಟು ಕಳಿಸಿದ. ಪುಟ್ಟ ಮನೆಗೆ ಹೋಗ್ತಾ ಬಟ್ಟೆ ಅಂಗಡಿಗೆ ಹೋದ . ಅಂಗಡಿಯವ ಕೇಳಿದ 'ಏನ್ ಪುಟ್ಟ ಬೆಳಿಗ್ಗೆನೆ ಹೂವಿನ ದುಡ್ಡು ಕೊಟ್ನಲ್ಲ" ಪುಟ್ಟ 'ಅಣ್ಣ, ಆ ಗುಲಾಬಿ ಬಣ್ಣದ ಅಂಗಿ ಎಷ್ಟು' ಅಂದ 'ಯಾಕೋ ಪುಟ್ಟ , __ ರೂಪಾಯಿ , ನೀ ಬೇಕಾದ್ರೆ ಒಂದ್ ೫೦ ರೂಪಾಯಿ ಕಮ್ಮಿ ಕೊಡು' ಅಂದ. ಪುಟ್ಟ ಆ ಅಂಗಿಯನ್ನ ಪ್ಯಾಕ್ ಮಾಡಿಸಿಕೊಂಡು ಮನೆಗೆ ಓಡಿದ . 'ಅಮ್ಮೋ, ಪುಟ್ಟಿ ಎಲ್ಲಿ ' ಇಲ್ಲೇ ಎಲ್ಲೋ ಅಡ್ತಾವ್ಲೇ ಕಣ್ಲ ಮಗ, ಯಾಕ್ಲಾ ' ಅಂದ್ಲು ಅಮ್ಮ. ಪುಟ್ಟಿನ ಹುಡುಕಿಕೊಂಡ್ ಬಂದ ಪುಟ್ಟ ದಡಬಡ ಅವಳ ಅಂಗಿ ತೆಗೆದು ತಂದಿದ್ದ ಹೊಸ ಅಂಗಿ ಹಾಕಿಸಿ ಅಮ್ಮನಿಗೆ ತಾ ತಂದ ಗುಲಾಬಿ ಕೊಟ್ಟು 'Yappy valentine's day ' ಅಂದ ನಗುತ್ತಾ . ಹಂಗಂದ್ರೆನ್ಲ ಮಗ ಅಂದ ಅಮ್ಮನ ಕಣ್ಣಲಿ ಖುಷಿ ಕಂಡರೆ.. ಪುಟ್ಟಿ ಹೊಸ ಅಂಗಿಯನ್ನ ತೊಟ್ಟು ನಗ್ತಾ ಇತ್ತು :))))
'ಅಕ್ಕ ನೀವು ಹೇಗೆ Valentine's Day ಮಾಡ್ತೀರ" ಅಂತ ಒಂದ್ ಪುಟ್ಟ ಹುಡುಗಿ ಕೇಳಿದಳು'...
"ಮಂಜು ಈವತ್ತು ಯಾಕೋ ಕೆಲ್ಸ ಮಾಡೋಕೆ ಬೇಜಾರು!"
'ಎಷ್ಟ್ ಆಗುತ್ತೆ ಅಷ್ಟ್ ಮಾಡಿ ಉಳಿದದ್ದು ಆಫೀಸ್ನಲ್ಲಿ ಹೇಳಿಬಿಡು ಜಾಸ್ತಿ ಟೆನ್ಶನ್ ಮಾಡಿಕೊ ಬೇಡ. ಆದ್ರೆ 11ಗಂಟೆಗೆ ಬರ್ತೀನಿ , ಇಲ್ಲ ಅಂದರೆ 3ಗಂಟೆಗೆಲ್ಲ ಬಂದ್ಬಿಡ್ತೀನಿ. ಏನಾದ್ರೂ ಬರ್ಕೊತಾ, ಓದ್ತಾ ಇರು, ಏನೂ ಮಾಡೋಕೆ ಹೋಗ್ ಬೇಡ,..ಆಮೇಲೆ ಎಲ್ಲಾದರು ಕರ್ಕೊಂಡ್ ಹೋಗ್ತೀನಿ"
"ಈವತ್ತು ಒಬ್ರು ಫ್ರೆಂಡ್ ಬರ್ತಾರೆ, ನಾ ಅವರನ್ನ ನೋಡೋಕೆ ಹೋಗಬೇಕು ಮಂಜು ".
"೩ ಗಂಟೆ ಮೇಲೆ ಎಲ್ಲಿಗೆ ಬೇಕಾದರು ಕರ್ಕೊಂಡ್ ಹೋಗ್ತೀನಿ ಆಯ್ತಾ ಮಹರಾಯ್ತಿ , ಮುಖ ಹಂಗೆ ಸಪ್ಪೆ ಮಾಡ್ಕೋ ಬೇಡ ."
"ಒಂದು ಬುಕ್ ರಿಲೀಸ್ , ನಾ ಹೋಗ್ ಬೇಕಲ್ಲಾ ... "
'ಯಾರಾದ್ರೂ ಜೊತೆ ಇದ್ರೆ ಹೋಗು ಇಲ್ಲ ಅಂದ್ರೆ ನಾನೇ ಬರಬೇಕ ಹೇಳು".
"ಈವತ್ತು ಕೆಲಸ ಜಾಸ್ತಿ ಮಂಜು "
'ಟೆನ್ಶನ್ ಬೇಡ, ಸಂಜೆ ನಾನೇ ಏನಾದ್ರೂ ಕುಕ್ ಮಾಡ್ತೀನಿ ಬಿಡು"....
'ಮಗಳಿಗೆ ಹುಷಾರಿಲ್ಲ, ಡಾಕ್ಟರ್ ತೋರಿಸೋಕೆ ನಾ ಇರಬೇಕೇನಮ್ಮ "
'ಬೇಡ ಮಂಜು, ಇದೇನು ದೊಡ್ಡ ವಿಷ್ಯ ನಾ ಕರ್ಕೊಂಡ್ ಹೋಗ್ತೀನಿ ಬಿಡು '
'ಮಗನ ಕಾಲೇಜ್ ಪೇರೆಂಟ್ಸ್ ಮೀಟಿಂಗ್ ಅಂತೆ'
' ನಾ ಹೋಗ್ತೀನಿ ಬಿಡಪ್ಪ ನೀ ಯಾಕೆ ರಜ ಹಾಕ್ತತೀಯ "
'ಆ ನೀರಿನ ಬಿಲ್ ಸ್ವಲ್ಪ ಕ್ಲಾರಿಫಯ್ ಮಾಡಬೇಕಲ್ಲಮ್ಮ '
' ನಾ ಹೋಗ್ತೀನಿ ಬಿಡು ಮಂಜು"
ಬದುಕಿನ ಕಪ್ಪು ಬಿಳುಪಿನ ಅನೇಕ ಪುಟಗಳನ್ನ ತಿರುಗಿಸಿ, ಬಣ್ಣದ ಪುಟಗಳನ್ನ ನೋಡಿ, ಏಳುಬೀಳುಗಳ ದಾಟಿ... ಬದುಕಿನ ಈ ಹಂತದಲ್ಲಿರುವಾಗ.... ..
ಪ್ರೀತಿ ಅಂದ್ರೆ ಬರೀ ಅರಿತುಕೊಳ್ಳುವಿಕೆ ಮತ್ತು ಹಂಚಿಕೊಳ್ಳುವಿಕೆ ಅಷ್ಟೇ ....
ಜಗಳವೇ ಇಲ್ಲ , ಭಿನ್ನಾಭಿಪ್ರಾಯವೇ ಇಲ್ಲಾ ಅಂತಲ್ಲ ....ಎಲ್ಲದರ ನಡುವೆಯೂ being for HIM or for Her
ನನಗೆ ಪ್ರತಿ ದಿನವೂ Valentine's Day...ಮೇಲೆ ಹೇಳಿದ ರೀತಿಯಲ್ಲೇ
ನಾ ಅವನಿಗೆ ... ಅವನು ನನಗೆ smile emoticon
ಅಂದು ಸಣ್ಣವಳಿದ್ದಾಗ 
ಕಾಲಿಗೆ ಚುಚ್ಚಿದ್ದ ಸಣ್ಣ ಮುಳ್ಳ ತೆಗೆಯಲು 
ಅಮ್ಮನ ಸೆರಗಿನೊಳಗೆ ಕೈ ಹಾಕಿ
ಸರದಲ್ಲಿ ಚುಚ್ಚಿದ್ದ ಪಿನ್ನು ಹುಡುಕಿದರೆ
ಮಗಳ ಮುದ್ದು ಕಾಲು ನೋಯುವುದೆಂದು 
ಕಣ್ಣ ಹನಿ ಬೀಳುವ ಮೊದಲೇ
ಅವಳ ಮನವ ಎತ್ತಲೋ ತಿರುಗಿಸಿ
ಕಾಲಿನ ಮುಳ್ಳು ತೆಗೆಯುತ್ತಿದಳು ಅಮ್ಮ ..
ಈಗಲೂ ಹಾಗೆ .....
ಮನೆಗೆ ಹೋದ ಮಗಳ
ಕಣ್ಣ ಹನಿ ಬೀಳುವ ಮೊದಲೇ
ಅವಳ ಮನವ ಎತ್ತಲೋ ತಿರುಗಿಸಿ
ಮನದ ಮುಳ್ಳು ತೆಗೆಯುತ್ತಾಳೆ ಅಮ್ಮ
ಅಮ್ಮನ ಸೆರಗಲ್ಲಿ ,ಸರದಲ್ಲಿ
ಈಗಲೂ ಪಿನ್ನುಗಳು ಸಿಗುತ್ತವೆ
ಮುಳ್ಳು ತೆಗೆವ ಪಿನ್ನು .....
ಅಮ್ಮ ಹಾಗೆ ಇದ್ದಾಳೆ ...
ಈಗಲೂ....ಹಾಗೆಯೇ ......
ಪುಟ್ಟಿ SSLC ಪರೀಕ್ಷೆ ಬರಿತಾ ಇದ್ದಾಳೆ. ಡಿಸೆಂಬರ್ ಕಳೆದದ್ದೇ ಕಳೆದದ್ದು,ಒಂದಾದ ಮೇಲೆ ಒಂದು ಟೆಸ್ಟ್, prepಪರೀಕ್ಷೆಗಳು ಒಟ್ಟು ೫ prepಗಳು . ಶಾಲೆಯದು, ತಾಲೂಕು ಮಟ್ಟದ್ದು, ಜಿಲ್ಲ ಮಟ್ಟದ್ದು !! ಮುಖ್ಯ ಪರೀಕ್ಷೆಗೆ ಮೊದಲು ಇನ್ನು ಎರಡು ಪರೀಕ್ಷೆ ಇದೆ ಅಮ್ಮ ಅಂತ ಪುಟ್ಟಿ ಹೇಳೋವಾಗ ಅದ್ಯಾಕೋ ಬೇಸರ. ಕಾರ್ತಿಗೆ ಇದ್ದದ್ದು ಮೂರು preparatoryಗಳು , ಒಂದು ಬೋರ್ಡ್ದು ಮತ್ತೆರಡು ಶಾಲೆಯದು..ಮಂಜುಗೆ ಈ ಬಗ್ಗೆ ಹೇಳಿದ್ರೆ ನೀರಿನ ಹರಿವಿನ ಹಾಗೆ ನಾವೂ ಹರಿಬೇಕು ಅಂತಾರೆ. ನನ್ನ ಮಗಳಿಗೆ ಮಾತ್ರ ಎಕ್ಸಾಮ್ ಬೇಡ ಅಂದ್ರೆ ಆಗುತ್ಯೇ ಅಂತಾರೆ. ಇವೆಲ್ಲದರ ಜೊತೆಗೆ prepಪರೀಕ್ಷೆಯ ಪ್ರಶ್ನೆಪತ್ರಿಕೆ (!!) ಔಟ್ ಆಗಿದೆ ಅಂತ ಅವಳ ಶಾಲೆಯ ಮಕ್ಕಳು ಅವಳಿಗೆ ಮೆಸೇಜ್ ಹಾಕಿದಾಗ ಅದ್ಯಾಕೋ ವ್ಯವಸ್ಥೆಯ ಬಗ್ಗೆ ಬೇಸರ. ಅಗತ್ಯ ಇಲ್ಲದೆ ಮಕ್ಕಳನ್ನ ಇಷ್ಟೆಲ್ಲಾ stressಗೆ ಗುರಿ ಮಾಡುತ್ತೆವೇನೋ ಅನಿಸೋ ಹಾಗೆ. ಎಲ್ಲೋ ಒಂದು ಕಡೆ ಮಕ್ಕಳು ಕೂಡ ರೋಬೋಟ್ ಗಳಂತೆ ಅಗ್ತಾ ಇದ್ದಾರೆ ಅನಿಸೋ ಹಾಗೆ .. ನಾ SSLC ಬರೆದಾಗ ಒಂದೇ preparatory.. ಮಕ್ಕಳಿಗೆ ಉತ್ತರ ಬರೆಯೋ ಸಮಯದ ಬಗ್ಗೆ, ಪ್ರಶ್ನೆಪತ್ರಿಕೆಯ ಬಗ್ಗೆ ಹಾಗು ಪಬ್ಲಿಕ್ ಪರೀಕ್ಷೆ ಹೇಗಿರುತ್ತದೆ ಅಂತ ಅನುಭವ ಆಗಲಿ ಅಂತ ಮಾಡ್ತಾ ಇದ್ರು. ಮತ್ತೆಲ್ಲ ಪರೀಕ್ಷೆ ಅಂದ್ರೆ ನಮಗೆ ಒಂದು ಸಣ್ಣ ಹಬ್ಬದ ಹಾಗೆ . ಇಂಕು ಹಾಕೋದ್ರಿಂದ ಹಿಡಿದು, ಪೆನ್ಸಿಲ್ಲು, ಸ್ಕೇಲು, ರಬ್ಬರ್, ಕಂಪಸ್ಸು , 'ರಟ್ಟು' (ರಟ್ಟು ಅಂದ್ರೆ ಮಗ್ಳು ನಗ್ತಾಳೆ! ಮಾ ಅದು ಎಕ್ಸಾಮ್ ಪ್ಯಾಡ್ ಅಂತ) ಇತ್ಯಾದಿ ಇತ್ಯಾದಿ ಹೊಂದಿಸಿಕೊಂಡು ಹಾಲ್ ಟಿಕೆಟ್ ಹತ್ತ್ ಸಾರಿ ಜೋಪಾನ ಮಾಡಿ ... ಪರೀಕ್ಷೆ ದಿನ ಅಮ್ಮನಿಗೆ ಒಂದು ನಮಸ್ಕಾರ ಮಾಡಿ ಸೈಕಲ್ ಏರಿದರೆ ಮತ್ತೆಲ್ಲ ಬರೀ ಎಷ್ಟ್ ಅಡಿಷನಲ್ ಶೀಟ್ ತಗೊಂಡೆ, ಇದು ಸರಿನಾ , ಎಷ್ಟ್ ಮಾರ್ಕ್ಸ್ ಬರುತ್ತೆ ಅನ್ನೋ ಮಾತಷ್ಟೇ...
ಈಗ ಆ ಟ್ಯೂಷನ್ಬಗೆ ಹೋದ್ರೆ ಪ್ರಶ್ನೆ ಪತ್ರಿಕೆ ಸಿಗುತ್ತೆ , ಇಲ್ಲಿ ಎಕ್ಸಾಮ್-ಓರಿಎಂಟೆಡ್ ಪಾಠ ಮಾಡ್ತಾರೆ , ಇತ್ಯಾದಿ ಅಂತಹದೇ ಮಾತು .. ಆ ಪರೀಕ್ಷೆ ವ್ಯವಸ್ಥೆ ಇಡಿಯಾಗಿ ಬದಲಾಗಬೇಕೆನೋ ಅನಿಸೋ ಹಾಗೆ .. ಯಾವುದೇ ಅಡಚಣೆ ಇಲ್ಲದೆ ಮು೦ದೂಡಲ್ಪಡದೆ ಒಮ್ಮೆ ಪರೀಕ್ಷೆ ಮುಗಿದರೆ ಸಾಕು ಅನಿಸೋ ಹಾಗೆ ... keeping the fingers crossed and praying is the only way ....ಅನಿಸೋ ಹಾಗೆ..........
ಚಿಕ್ಕವಳಿದ್ದಾಗ ಅಮ್ಮ ಕಥೆ ಹೇಳ್ತಾ ಇದ್ರು . ಒಂದು ಪಕ್ಕ ನಾನು ಒಂದು ಪಕ್ಕ ತಮ್ಮ ಮಲಗಿ ಕಥೆ ಕೇಳ್ತಾ ಇದ್ವಿ. ಏನೇನೋ ಕಥೆಗಳು ಮಹಾಭಾರತ, ರಾಮಾಯಣ ಗಳಿಂದ ಹಿಡಿದು, ಸಾಲೊಮನ್ ಕಥೆಗಳು, ಶಕುಂತಲೆಯ ಕಥೆ, ಈಸೋಪನ ನೀತಿಕಥೆ, ಅಕ್ಬರ್ ಬೀರಬಲ್ ಕಥೆ, ತೆನಾಲಿರಾಮನ ಕಥೆ ಇನ್ನು ಅದೆಷ್ಟೋ ..ನಮ್ಮ ವಯಸ್ಸಿಗೆ ಅನುಗುಣವಾಗಿ ಕಥೆಯನ್ನ ಒಂದಷ್ಟು modify ಮಾಡಿ ಹೇಳ್ತಾ ಇದ್ಲು ಅಮ್ಮ. ದಿನಕೊಂದು ಕಥೆ, ಅಮರಚಿತ್ರ ಕಥೆ, ಬಹದ್ದೂರ್, ಪ್ಯಾಂಟಮ್ , ಹೀಗೆ ಒಂದಷ್ಟು ಚಿತ್ರಕಥೆಗಳ ಪುಸ್ತಕಗಳು . ಓದೋ ಹುಚ್ಚು ಬೆಳೆದಿದ್ದೆ ಆಗ ..ಅದೆಷ್ಟೋ ಕಥೆಗಳ ಪಾತ್ರಗಳಲ್ಲಿ ನಮ್ಮನ್ನೇ ಪಾತ್ರಧಾರಿಗಳಾಗಿಸಿಕೊಂಡು ನಾನು ತಮ್ಮ ಆಟ(ಜಗಳ )ವಾಡಿದ್ದೂ ಉಂಟು
ಅದರಲ್ಲಿ ಒಂದು ಕಥೆ ಇದು. ಒಂದೂರಲ್ಲಿ ಒಬ್ಬ ಗಂಡ ಹೆಂಡತಿ. ಒಬ್ಬರನ್ನ ಕಂಡ್ರೆ ಒಬ್ಬರಿಗೆ ಪ್ರಾಣ. ಇಬ್ಬರು ದಿನ ದುಡಿದು ಬಂದ ಹಣದಲ್ಲಿ ಚೆನ್ನಾಗಿ ಇರ್ತಾರೆ. ಒಂದ್ ಸಾರಿ ಅವ್ರ ಮದ್ವೆ ವಾರ್ಷಿಕೋತ್ಸವ ಬರುತ್ತೆ . ಆಗ ಗಂಡ ಅವನ ಹೆಂಡತಿಯ ಉದ್ದನೆಯ ಜಡೆಗೆ ಒಂದು ಚೆಂದನೆಯ ಮುತ್ತಿನ ಕ್ಲಿಪ್ ತರ್ತಾನೆ . ಇವಳು ಗಂಡನ ಗಡಿಯಾರಕ್ಕೆ ಸ್ಟ್ರಾಪ್ ತರ್ತಾಳೆ . ಇಬ್ಬರು ಬಂದು ಅವರ ಉಡುಗೊರೆಗಳ ತೋರಿಸ್ತಾರೆ. ಹೆಂಡತಿ ತಂದ ಉಡುಗೊರೆ ನೋಡಿ ಗಂಡ ಪೆಚ್ಚದರೆ ಇವನ ಉಡುಗೊರೆ ನೋಡಿ ಇವಳು ಪೆಚ್ಚಾಗುತ್ತಾಳೆ. ಇವಳು ತನ್ನ ಉದ್ದನೆಯ ಜಡೆಯನ್ನ ಮಾರಿ ಗಂಡನಿಗೆ ಗಡಿಯಾರದ ಸ್ಟ್ರಾಪ್ ತಂದಿದ್ದರೆ , ಇವನು ತನ್ನ ಗಡಿಯಾರ ಮಾರಿ ಹೆಂಡತಿ ಎಂದೋ ಆಸೆ ಪಟ್ಟ ಮುತ್ತಿನ ಕ್ಲಿಪ್ ತಂದಿರ್ತಾನೆ .. ಮತ್ತೆ ಇಬ್ಬರು ನಕ್ಕುಬಿಡ್ತಾರೆ .. ಹೀಗೆ ಇನ್ನು ಜಾಸ್ತಿ ಪ್ರೀತಿಯಲ್ಲಿ ಸುಖವಾಗಿ ಇರ್ತಾರೆ ..( ಇದು The Gift of the Magi by O. Henry ಕಥೆ) . ಅಮ್ಮನ ಬಾಯಲ್ಲಿ ಅದೆಷ್ಟೋ ಸಾರಿ ಕೇಳಿದ್ದಿನೋ ಗೊತ್ತಿಲ್ಲ . ಮನಸಲ್ಲೇ ಉಳಿದು ಬಿಟ್ಟಿದೆ .. ಸಂಜೆ ಈ ಹಾಡು ಕೇಳ್ತಾ ಇದ್ದೆ .. ಅಮ್ಮ ಹೇಳಿದ ಕಥೆ ನೆನಪಿಗೆ ಬಂತು Some memories dont die:))))https://www.youtube.com/watch?v=ty55I66-Mrk
ಮೈಸೂರಲ್ಲಿ ಬಿಸಿಲು ಯಾರ ಮೇಲಿನ ಸಿಟ್ಟಿಗೋ ಸುಡುವಂತೆ ಸುಡ್ತಾ ಇದೆ. ಹೊರಗೆ ಹೋಗೋದೇ ಕಷ್ಟ ಅನಿಸೋ ಹಾಗೆ. ಮೊನ್ನೆ ಒಂದಷ್ಟು ಕೆಲಸಗಳು ಇದ್ವು ಅಂತ ಇಬ್ಬರೂ ಹೊರಟ್ವಿ.. ಬೆಳಿಗ್ಗೆ ೧೦ ಗಂಟೆಗೇ ಬಿಸಿಲು..ಅದರ ಮೇಲೆ ಈ ಹೆಲ್ಮೆಟ್ ಬೇರೆ! ಒಂದಷ್ಟು ಆಫೀಸ್ಗಳ ಕೆಲಸ ಮುಗಿಸಿ ಹಾಗೆ ಬಂದು ನಂದಿನಿ ಪಾರ್ಲರ್ ಬಳಿ ಮಜ್ಜಿಗೆ ಕುಡಿದ್ವಿ. ಹಾಗೆ ಒಂದು ಪ್ಯಾಕೆಟ್ ಮೊಸರು ತಗೊಂಡು ದುಡ್ಡು ಕೊಟ್ರೆ ಅಲ್ಲಿನ ಹುಡುಗ ಒಂಚ್ಚೂರು ಚಿಲ್ಲರೆ ಕೊಟ್ಟು ಉಳಿದ ೮ ರೂಪಾಯಿ ಚಿಲ್ಲರೆ ಇಲ್ಲ ಅಂತ ಒಂದು ಕೂಪನ್ ಕೊಟ್ಟ. 'ಈ ಕಡೆ ಬಂದಾಗ ಏನಾದ್ರೂ ತಗೋಳಿ ಸರ್' ಅಂದ. ನನ್ ಗಂಡ 'ಲೋ ಅಣ್ಣ, ಈ ಕಡೆ ಬರೋದು ಮತ್ ಯಾವಾಗ್ಲೋ, ಅದೆಷ್ಟ್ ಇದೆ ಅಷ್ಟೇ ಚಿಲ್ಲರೆ ಕೊಡೊ ಮಹರಾಯ' ಅಂದ್ರು. ಆ ಹುಡುಗ "ಇಲ್ಲ ಸರ್ ಚಿಲ್ಲರೆ ಇಲ್ಲ' ಅಂದ. 'ಸರಿ ಇನ್ನೊಂದು ಮಜ್ಜಿಗೆ ಬರುತ್ತೆ ಅಲ್ವ ಅದ್ನೆ ಕೊಟ್ಬಿಡು' ಅಂತ ಒಂದು ಮಜ್ಜಿಗೆ ತಗೊಂಡ್ರು. ನಾನೂ ಬೈತಾ ಬಂದೆ. 'ಕೆಲಸ ಇಲ್ಲ ನಿನಗೆ, ಮನೇಲೂ ಮೊಸರು ಇತ್ತು , ಜೋರಾಗಿ ಕೇಳಿದ್ರೆ ಚಿಲ್ಲರೆ ಕೊಡ್ತಾ ಇದ್ದ ಯಾರಿಗೋ ಉಪಕಾರ ಮಾಡೋಕೆ ಹೋಗ್ತೀಯ ... etc etc" . 'ಅಯ್ಯೋ ಬಿಡು ತಾಯಿ, ಅದಕ್ಕ್ಯಾಕೆ ಇಷ್ಟ್ ಕೋಪ, ನಾನೇ ಡ್ಯೂಟಿಗೆ ಹೋಗೊ ಮೊದ್ಲು ಕುಡಿದು ಹೋಗ್ತೀನಿ' ಅಂದ್ರು. ಲಾಯಲ್ ವರ್ಲ್ಡ್ ಹತ್ತಿರ ಬಂದ್ವಿ ಸ್ವಲ್ಪ ಸಾಮಾನು ತೆಗೆದುಕೊಳ್ಳೋದಿತ್ತು. ಸರಿ ಗಾಡಿ ನಿಲ್ಸಿ ಹೆಲ್ಮೆಟ್ ಇಟ್ಟು , ಸಾಮಾನು ತೆಗೆದುಕೊಂಡು ಬಂದ್ವಿ. ಯಾವಾಗ್ಲೂ ಇರೋ ಸೆಕ್ಯೂರಿಟಿಯವರು ಹೆಲ್ಮೆಟ್ ಕೊಟ್ರು. 'ಇದ್ಯಾಕ್ ಸರ್ ಈ ಬಿಸ್ಲಾಗೆ ಬರೋಕೋದ್ರಿ ಅಮ್ಮವ್ರನ್ನೂ ಕರ್ಕೊಂಡು ? ಯಾವಾಗ್ಲೂ ಬರಂಗೆ ಸಂಜೆ ಮೇಲೆ ಬಂದಿದ್ರೆ ಆಗ್ತಿತ್ತಲ್ವ " ಅಂದ್ರು. ಮಂಜು 'ಇಲ್ಲ ಕಣಣ್ಣ ಸ್ವಲ್ಪ ಕೆಲ್ಸ ಇತ್ತು, ಹೊರಟು ಬಿಡ್ತಿವಿ ಮನೆಗೆ' ಅಂತ ಗಾಡಿ ಹತ್ತಿರ ಬಂದು ಗಾಡಿಯಲ್ಲಿ ಇದ್ದ ಮಜ್ಜಿಗೆನ ತಗೊಂಡ್ರು .' ಅವ್ರಿಗೆ ಕೊಟ್ಬಿಡ್ತಿನಿ ಸುನಿ' ಅಂದ್ರು.'ಬೇಡ ಮಂಜು, ತಪ್ ತಿಳ್ಕೊಳ್ತಾರೆನೋ' ಅಂದೆ. ಮಂಜು 'ಬಿಸ್ಲು ಕುಡ್ಕೋಳ್ಳಣ್ಣ ' ಅಂತ ಕೊಟ್ಟ ಮಜ್ಜಿಗೆನ ಆ ವ್ಯಕ್ತಿ 'ದಾವ ಆಗ್ಬಿಟ್ಟಿತ್ತು ಸರ್' ಅಂತ ನಗುತ್ತಾ ಕುಡಿದರು. ಮಂಜು ಬಂದು ಗಾಡಿ ತೆಗೆದ ಮೇಲೆ 'ಅಲ್ಲ ಅವ್ರೆನಾದ್ರು ತಗೊಳ್ಳದೆ ತಪ್ಪು ತಿಳ್ಕೊಂಡಿದ್ರೆ ಏನ್ ಮಾಡ್ತಿದ್ದೆ ಮಾರಾಯ' ಅಂದೆ . 'ಎಲ್ಲರೂ ಒಂದೇ ತರ ಇರೋದಿಲ್ಲ ಕಣಮ್ಮ. ಅವರಿಗೆ ಬದುಕು ನಡಿಬೇಕು ಅಷ್ಟೇ. ಅಮೇಲು ಏನಾದ್ರೂ ಅಂದಿದ್ರೆ ಆ ಮಗನ ಮುಂದೆ ನಾನೇ ಕುಡಿದು ಬರ್ತಾ ಇದ್ದೆ ಅಷ್ಟೇ . ದಾಹ ನನಗೂ ಅದೇ ಅವನಿಗೂ ಅದೇ' ಅಂದು ಸ್ವಲ್ಪ ಸುಮ್ಮನಿದ್ದು ಮತ್ತೆ 'ಹಂಗಂತ ಇನ್ ಮೇಲೆ ಎಲ್ಲಾ ಕಡೆ ಚಿಲ್ಲರೆ ಬೇಡ ಅಂತ ಹಿಂಗ್ ಮಾಡ್ಬಿಟ್ಟೀಯ ನಮಗಿಬ್ಬರಿಗೂ ಬರೋದು ತಿಂಗಳಿಗೆ ಒಂದ್ ಸಲ ಮಾತ್ರ ಸಂಬಳ' ಅಂತ ರೇಗಿಸಿದ ಪುಣ್ಯಾತ್ಮ... ಅದೇ ಹುಸಿಕೋಪದ ನಗೆ ತರಿಸಿದ .... ಪುಟ್ಟ ಪುಟ್ಟ ವಿಷಯ ಆದರೆ ಬದುಕಿನ ಅಗಾಧ ಪಾಠ. ... and I have learn a lot from him....:)))
ಹೀಗೊಂದು ಕಥೆ.... 
ಒಂದು ರೈಲಿನ ಫಸ್ಟ್ ಕ್ಲಾಸ್ ಬೋಗಿಯಲ್ಲಿ ಒಬ್ಬ ಶ್ರೀಮಂತ ತನ್ನ ಹೆಂಡತಿ ಮಗುವಿನ ಜೊತೆ ಹೋಗ್ತಾ ಇದ್ದ. ಜೊತೆಗೆ ಒಂದಿಬ್ಬರು ಆಳುಗಳು ಕೂಡ. ಸಿರಿವಂತನಾದರೂ ಸಂಯಮಿ, ವಿಚಾರವಂತ. ತನ್ನ ಸಹಪ್ರಯಾಣಿಕರ ಜೊತೆ ಹೊಂದಿಕೊಂಡು ಪ್ರಯಾಣ ಮುಂದುವರೆಸಿದ್ದ. ಸುಮಾರು ನಡು ರಾತ್ರಿ, ರೈಲು ಕಾಡುಕಣಿವೆಗಳ ನಡುವೆ ಸಾಗ್ತಾ ಇತ್ತು. ಮಗು ಎಚ್ಚರಗೊಂಡಿತು. ಶ್ರೀಮಂತನ ಹೆಂಡತಿ ಮಗುವನ್ನ ಕಿಟಕಿಯ ಬಳಿ ಕುಳಿತು ರಮಿಸುತ್ತಾ ಬಾಟಲಿಯಲ್ಲಿ ಹಾಲು ಕುಡಿಸ ತೊಡಗಿದಳು. ಕೈ ಕಾಲು ಆಡಿಸುತ್ತಾ ಹಾಲು ಕುಡಿಯುತ್ತಿದ್ದ ಮಗುವಿನ ಕೈ ತಗುಲಿ ಬಾಟಲಿ ಕಿಟಕಿಯಿಂದ ಹೊರಗೆ ಬಿದ್ಹೊಯ್ತು !! ಮಗು ಅಳೋಕೆ ಶುರುಮಾಡ್ತು!! ಶ್ರೀಮಂತ ತಕ್ಷಣ ಚೈನ್ ಎಳೆದ. ಗಾಡಿ ನಿಲ್ತು. ಅವನು ಅವನ ಆಳುಗಳು ಹಳಿಗಳ ಬಳಿ ಹಿಂದಕ್ಕೆ ಹೋಗಿ ಬಾಟಲಿ ಹುಡುಕಿ ತಂದ್ರು. ತೊಳೆದು ಬಾಟಲಿಯಲ್ಲಿ ಮಗುವಿಗೆ ಹಾಲು ಹಾಕಿ ಕೊಟ್ರು. ಅಷ್ಟರಲ್ಲಿ ಅಲ್ಲಿಗೆ ಬಂದ ರೈಲು ಅಧಿಕಾರಿ ಅನಗತ್ಯವಾಗಿ ಸಣ್ಣ ವಿಷಯಕ್ಕೆ ತೊಂದರೆ ಕೊಟ್ಟ ಎಂಬ ತಪ್ಪಿಗೆ ಒಂದಷ್ಟು ಫೈನ್ ಹಾಕಿ ದುಡ್ಡು ವಸೂಲಿ ಮಾಡಿ ಹೋದರು. ಸಹಪ್ರಯಾಣಿಕನೊಬ್ಬ ಹೇಳ್ದ 'ದುಡ್ಡಿರೋರೆ ಹೀಗೆ, ಅರ್ಥವೇ ಆಗೋದಿಲ್ಲ ಹಣದ ಮದ..ಒಂದೈವತ್ತು ರೂಪಾಯಿ ಕೂಡ ಬಾಳದ ಆ ಬಾಟ್ಲಿಗೆ ಸುಮ್ಸುಮ್ನೆ ಅಷ್ಟೊಂದೆಲ್ಲ ದಂಡ ಕಟ್ತಾರೆ. ಹೋದರೆ ಹೋಯ್ತು ಅಂತ ಸುಮ್ಮನಿದಿದ್ರೆ ಆಗ್ತಾ ಇತ್ತು' ಅಂದ. ಆ ಸಿರಿವಂತ ಒಂದು ಕಟ್ಟು ಹಣ ತೆಗೆದ ಆ ಪ್ರಯಾಣಿಕನ ಮುಂದೆ ಹಿಡಿದು 'ಸರ್, ಇದರಲ್ಲಿ ೫೦೦೦ ಇದೆ. ಹೋಗಿ ಒಂದು nipple ತಂದ್ಬಿಡಿ ಮತ್ತೆ' ಅಂದ. 'ಹಣ ಎಷ್ಟು ಹೋಯ್ತು, ಎಷ್ಟು ಬಂತು ಅನ್ನೋದು ಮುಖ್ಯವಲ್ಲ, ಆ ಹೊತ್ತಿನ ಉಪಯೋಗ ಅಷ್ಟೇ ಮುಖ್ಯ! ನನ್ನ ಮಗುವಿಗೆ ಈ ಸರಿ ರಾತ್ರಿಯಲ್ಲಿ ಈ ಕಾಡಿನ ನಡುವೆ nippleಸಿಗೋದು ಎಷ್ಟು ದುರ್ಲಭ ಅಲ್ವೇ . ಅದಕ್ಕೆ ಹಾಗೆ ಮಾಡಿದೆ .. ಹಣದ ಮದ ಅಲ್ಲ ' ಅಂದ ...
ಮೊನ್ನೆ ಅನಗತ್ಯ ಅಗತ್ಯಗಳ ವಿಷಯದ ಬಗ್ಗೆ ನಾನು ಮಂಜು ಮಾತಾಡ್ತಾ ಇದ್ದಾಗ ಮಂಜು ಹೇಳಿದ ಕಥೆ :)))
ಪುಸ್ತಕ ಮುಚ್ಚಿಟ್ಟು ಬರಬಾರದೆ ಎಂದ ಆವ.....
ಬರೆದು ಮುಗಿದ ಕೊಡಲೇ ಬಂದು ಬಿಡುವೆ
ಸ್ವಲ್ಪ ಕಾಯಬಾರದೆ ಎಂದಳು ...
ಕಾಯುವ ಕೆಲಸ ಅವನಿಗೂ ಬೇಸರವಂತೆ....
ಕಾಯದೆ ಇದ್ದರೂ ಕೆಲವರ ಕರೆದೊಯ್ಯುವ ..
ಕೆಲವರು ಕಾದು ಕುಳಿತಿದ್ದರೂ ಬರದೆ ಸತಾಯಿಸುವವ ಆವ
ನಾ ಅವನಿಗೆ ಹೆದರಲಾರೆ ಎಂದಳು ಅವಳು.....
ಪದೇ ಪದೇ ಹೊತ್ತಿಗೆ ಮುಚ್ಚಲು ಕರೆ ನೀಡುವವ ..
ಬರವಣಿಗೆ ಮುಗಿಯದೆ ಹೊತ್ತಿಗೆ ಮುಚ್ಚಲಾರಳಿವಳು ಎಂದರಿತು
ಮತ್ತೆ ಗಡುವು ನೀಡಿ ಹೋಗುತ್ತಾನೆ....
ಅವಳು ಮತ್ತೆ ಬರೆಯ ತೊಡಗುತ್ತಾಳೆ
ನಗುತ್ತಾ , ನಗಿಸುತ್ತಾ.........:)))))

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...