Thursday, 13 July 2017

ಮೊನ್ನೆ ಮಂಜು ಡ್ಯೂಟಿಗೆ ಅಕ್ಸೆಸ್ಸ್ ತಗೊಂಡು ಹೋಗಿದ್ರು . ಅತ್ಯಾವಶಕವಾಗಿ ಹೊರಗೆ ಹೋಗಲೇ ಬೇಕಿತ್ತು ಅಂತ ಸ್ಕೂಟಿ ತೆಗೆದುಕೊಂಡು ಹೋದೆ . (ಈ ಸ್ಕೂಟಿ ಒಂದ್ ತರ ಸೈಕಲ್ ಇದ್ ಹಂಗೆ!!) .. ಹೋಗಿ ಕೆಲ್ಸ ಮುಗಿಸಿ ಬರ್ತಾ ಇದ್ದೆ . ಒಂದು ಮಾರುತಿ ವ್ಯಾನು (ಶಾಲಾವಾಹನ ) ಹಿಂದೇನೇ ಬರ್ತಾ ಇತ್ತು .. ಒಂದೇ ಸಮ ಹಾರ್ನ್ ಕೂಡ ಹೊಡಿತಾ ಇದ್ದ ಆ ಚಾಲಕ . ನಾನು ಅತ್ಲಾಗೆ ಮುಂದೆ ಹೋಗ್ತಾನೇನೋ, ಮಕ್ಕಳನ್ನ ಕೂರಿಸಿಕೊಂಡು ಯಾಕ್ ಹಿಂಗ್ ಆಡ್ತಾರೋ ಅಂತ ಬೈಕೊಂಡು ಪಕ್ಕಕ್ಕೆ ಹೋದೆ . ಅವ್ನೂ ಪಕ್ಕನೇ ಬಂದ . ಮೊದ್ಲೇ ನಾ ಸ್ವಲ್ಪ ಟೆನ್ಶನ್ ಪಾರ್ಟಿ. ಗಾಡಿ ಕಲ್ತು/ಓಡಿಸಿ ೨೫ ವರ್ಷ ಆದ್ರೂ ಗಾಡಿ ಓಡಿಸುವಾಗ ಒಂದಷ್ಟು "ಟೆನ್ಶನ್ ಕೈಲಿ ಹಿಡಿದುಕೊಂಡಿರ್ತಿನಿ!!!!" 'ತಥ್ , ಅದೇನ್ ಜನನೋ ಏನೋ , ಸ್ವಲ್ಪನೂ ಬುದ್ದಿನೇ ಇಲ್ಲ " ಅಂದ್ಕೊಂಡು ಗಾಡಿ ನಿಧಾನ ಮಾಡಿ ಗುರಾಯಿಸಿದೆ ....
'ಏನ್ ಮೇಡಂ ಚೆನ್ನಾಗಿದೀರಾ " ಅಂದ್ರು ಆ ಡ್ರೈವ್ ಮಾಡ್ತಾ ಇದ್ದ ವ್ಯಕ್ತಿ .
ತಕ್ಷಣಕ್ಕೆ ಗುರುತು ಸಿಗದೇ ಹೋದ್ರು (ನನಗೆ ಒಂದ್ ತರ ಅಮ್ನೇಶಿಯಾ !!!) ಒಂದೆರಡು ಕ್ಷಣಗಳಲ್ಲಿ ಹೊಳೆಯಿತು ಅವ್ರು ಜಾನ್, ಕಾರ್ತಿ ಸಣ್ಣವನಿದ್ದಾಗ ಅವರ ವ್ಯಾನ್ ಅಲ್ಲೇ ಶಾಲೆಗೆ ಹೋಗ್ತಾ ಇದ್ದ ಅಂತ .!! 'ಓಹ್ ಜಾನ್ , ಹೇಗಿದ್ದೀರಾ, ಮಕ್ಕಳು-ಮನೆಯವ್ರು ಹೇಗಿದ್ದಾರೆ ? ಸಾರಿ ಒಂದ್ ನಿಮಿಷ ಸ್ವಲ್ಪ ಕನ್ಫ್ಯೂಸ್ ಆಯ್ತು ಜಾನ್ ' ಅಂದೆ .
" ಪರವಾಗಿಲ್ಲ ಮೇಡಂ ಎಷ್ಟ್ ದಿನಗಳಾಯ್ತು (ವರುಷಗಳೇ ಆಗಿತ್ತೇನೋ) ನೋಡಿ, ನೋಡಿದೆ ಅಲ್ವ ಅದ್ಕೆ ಮಾತನಾಡಿಸೋಣ ಅಂದ್ಕೊಂಡೆ  ಕಾರ್ತಿ ಹೇಗಿದ್ದಾನೆ ಮೇಡಂ, ಏನ್ ಓದ್ತಾ ಇದ್ದಾನೆ ? " ಅಂದ್ರು ..
" ಇನ್ನು ಕಾರ್ತಿ ಹೆಸ್ರು ನೆನಪಿದ್ಯಾ ಜಾನ್ , ಅವ್ನು ಈಗ ದೊಡ್ಡವನಾಗಿದ್ದಾನೆ ಎಂಜಿನಿಯರಿಂಗ್ ಮಾಡ್ತಾ ಇದ್ದಾನೆ ಮಂಡ್ಯದಲ್ಲಿ .." ಅಂದೆ ..
ಅದ್ ಹೆಂಗೆ ಮರಿಯೊಕ್ಕಾಗುತ್ತೆ ಮೇಡಂ, ಡ್ರೈವರ್ಗೂ ಟೀ ಕುಡಿಸಿ ಕಳಿಸ್ತಾ ಇದ್ದ ಮನೆಯನ್ನ !!" ಅಂದ್ರು ...(ಒಮ್ಮೊಮ್ಮೆ ಕಾರ್ತಿಯನ್ನ ಕೊನೆಯಲ್ಲಿ ಡ್ರಾಪ್ ಮಾಡುವಾಗ ಮಂಜು ಒತ್ತಾಯ ಮಾಡಿ ಟೀ ಕುಡಿಸಿ ಕಳಿಸ್ತಾ ಇದ್ರೂ ಜಾನ್ಗೆ... )
ಅಷ್ಟ್ರಲ್ಲಿ ವ್ಯಾನ್ ಅಲ್ಲಿ ಇದ್ದ ಚಿಲ್ಟಾರಿ ಒಬ್ಬ .. 'I have a friend called kartik' ಅಂದ ಕೆನ್ನೆ ಗಿಂಡಿ ನಕ್ಕೆ
"ಸಾರ್ ಹೇಗಿದ್ದಾರೆ ? ಮಗಳು ಏನ್ ಒದ್ತಾ ಇದ್ದಾಳೆ ?" ಅಂತೆಲ್ಲ ಕೇಳಿದ್ರು .. ಅದಕ್ಕೆ ಉತ್ತರಿಸಿ "ಮನೆಗೆ ಬನ್ನಿ ಜಾನ್ ' ಅಂದೆ ..
"ಬರ್ತೀನಿ ಮೇಡಂ ಸಾರ್ ಗೆ ಕೇಳ್ದೆ ಅಂತ ಹೇಳಿ ' ಅಂದ್ರು "ಥ್ಯಾಂಕ್ಸ್ ಜಾನ್' ಅಂದೆ "ಬರ್ತೀನಿ ಮೇಡಂ " ಅಂತ ಹೊರಟರು ....
ಮನಸ್ಸು ನೀಲಿನೀಲಿ ಆ ಬಾನಿನಂತೆ...)
ಕಿತ್ನಾ ಹಸೀನ್ ಹೈ ಜಿಂದಗಿ ...... ಲೈಫ್ ಐಸ್ ಬ್ಯೂಟಿಫುಲ್...It is in our hands to Make It Beautiful ಅನಿಸೋಹಾಗೆ
ಸುಂಸುಮ್ನೆ ಹಂಚಿಕೊಳ್ಬೇಕು ಅನಿಸ್ತು 
ಭಾನುವಾರ ಅಂದ್ರೆ ನಮ್ ಮನೆದೇವ್ರು ನಾನೂ ಊರು ಸುತ್ತೋಕೆ ಹೋಯ್ತಿವಿ .. ಮಕ್ಕಳು ಮನೆಯಲ್ಲೇ ಇರ್ತಾರೆ . ಆವತ್ತು ರಜ ಅಂತ ತಡವಾಗಿ ಏಳ್ತಾರೆ . ಈ ಮಂಜು ಮನೆಯಲ್ಲಿದ್ರೆ ಮಕ್ಕಳಿಗೆ ಬೇಗ ಏಳಿ ಅಂತ "ಭಜನೆ"ಮಾಡ್ತಾರೆ ಅಂತಲೇ ಸುತ್ತೋಕೆ ಹೋಗೋದು.. (ಇವರಿಗೇನೋ ನಿದ್ರೆ ಬರೋದಿಲ್ಲ ಅವಾದ್ರೂ ಒಂದಷ್ಟು ಮಲಗಲಿ ಅಂತ) 
ನೆನ್ನೆ ಚುಂಚನಗಿರಿಗೆ ಹೋಗೋದು ಅಂತ ನಮ್ ಮನೆದೇವ್ರು ಹೇಳಿದ್ರು ..ಬಸ್ ಅಲ್ಲೇ ಹೋಗೋಣ ಅಂದ್ರು ( ನನಗೆ ಈ ಬಸ್ ಪಯಣ ಅಂದ್ರೆ ಆಗ್ಬರಕ್ಕಿಲ್ಲ .. ಒಸಿ ಹಂಗೆಯಾ ಒಂದ್ ತರಾ nauseated ತರ ).. ಗಾಡಿ ಓಡಿಸ್ತಾ ಇದ್ರೆ ನಿನ್ನ ಮುಖ ನೋಡದೆ ರಸ್ತೆನೇ ನೋಡ್ತಾ ಓಡಿಸಬೇಕು ಅದ್ಕೆ ಕಣಮ್ಮ ಅಂತ ಕಿವಿ ಮೇಲೆ ನಮ್ಮ ಬೃಂದಾವನ ತೋಟವನ್ನೇ ಇಟ್ರು !! ನಾನೂ ಒಂದ್ ಚೂರು ಓಡಿಸ್ತೀನಿ ನಿನಗೆ ಜಾಸ್ತೀ ಆಯಾಸ ಆಗೋದಿಲ್ಲ ಕಣಪ್ಪ ಅಂತ ಮಸ್ಕ ಹೊಡೆದರೆ ....... ನೀ ಗಾಡಿ ಓಡಿಸಿದರೆ ನಾವು ಬಾಲಗಂಗಾಧರಸ್ವಾಮಿನ (ತೀರಿ ಹೋದ ಮಠಾಧೀಶರು) ನೋಡಬೇಕು ಅಷ್ಟೇ , ನಾ ಓಡಿಸಿದರೆ ನಿರ್ಮಲಾನಂದ ಸ್ವಾಮಿಗಳನ್ನ(ಈಗಿನ ಮಠಾಧೀಶರು) ನೋಡಬಹುದು .. Choice is yours ಅನ್ನೋದೇ .... 
ಅದೇನ್ ಪುಣ್ಯ(!!!) ಮಾಡಿ ಕಟ್ಕೊಂಡ್ ಬಿಟ್ನೋ ಕಾಣೆ ))))))))
ಈ ಬಾರಿ ಮದುವೆಗಳು ತುಂಬಾನೇ ಜಾಸ್ತಿ. ಕೆಲವೊಂದು ದಿನಗಳಲ್ಲಿ ಒಂದೇ ದಿನ ೨-೩ ಸಮಾರಂಭಗಳಿಗೆ ಹೋಗಲೇಬೇಕಾದ ಅನಿವಾರ್ಯತೆ. ಮೊನ್ನೆ ನಮ್ಮ ಬೇಕರಿ ಸಂಜಣ್ಣ ಹೇಳ್ತಾ ಇದ್ರೂ 'ಈ ಮದ್ವೆ ಸೀಸನ್ ಮುಗಿದ್ರೆ ಸಾಕು ಅನಿಸಿಬಿಟ್ಟಿದೆ ! 100 ರೂಪಾಯಿ ಮುಯ್ಯಿ ಹಾಕೋಕೆ 1000 ರೂಪಾಯಿ ಖರ್ಚ್ ಮಾಡಿಕೊಂಡು ಹೋಗಿಬರಬೇಕು ನೋಡಿ ಅಕ್ಕ" ಅಂತ 
ನೆನ್ನೆ ಮೊನ್ನೆ ಎರಡು ದಿನ ತುಂಬಾನೇ ಬೇಕಾದವರ ಮನೆಯ ಎರಡು ಮದ್ವೆಗಳು. ಎರಡೂ ತೀರಾನೇ ವಿಭಿನ್ನ ಸಾಂಸಾರಿಕ ಹಿನ್ನಲೆಯುಳ್ಳವರ ಮನೆಗಳ ಮದುವೆ.
ಒಂದು ಮದುವೆ ಛತ್ರದಲ್ಲಿ..ಊರಿನ ನೆಂಟರ ಹುಡುಗನ ಮದುವೆ. ಆತನ ಗೆಳೆಯರು ಕೇಕ್ ತಂದು ಕತ್ತರಿಸಿ (!!) ಅದೆಷ್ಟೋ ಜನ ಕಾಯ್ತಾ ಇದ್ರೂ ಫೋಟೋ ಸೆಷನ್ಸ್ ಗಳನ್ನ ಮಾಡಿಸಿಕೊಂಡು ಕೆಲವರು ಬೇಸತ್ತು ರೇಗಿದ ಮೇಲೆ ಬಂದು ನಿಂತ್ರು . ನಿಲ್ಲೋದೇ ತಡ ಕೆಲವರು ಊಟಕ್ಕೆ ದೌಡಾಯಿಸಿದರೆ ಮತ್ತೊಂದೆಡೆ "ಮುಯ್ಯಿ" ಕೊಡೋರ ಸಾಲು !! (ನನಗೆ ಎರಡೂ ಸ್ವಲ್ಪ ಅಲ್ಲೆರ್ಜಿನೇ . ತುಂಬಾ ಆತ್ಮೀಯರಾದ್ರೆ ನೀರು ಹಾಕುವ ದಿನವೇ ನಾನು ಮಂಜು ಹೋಗಿ ಅದೇನ್ ಕೊಡೋದಿದೆಯೋ ಕೊಟ್ಬಿಡ್ತಿವಿ . ಇಲ್ಲಾ ಅಂದ್ರೆ ಒಂದಷ್ಟು ತಡವಾಗಿಯೇ ಹೋಗಿ ಮಾತನಾಡಿಸಿಕೊಂಡು ಬರೋದು ವಾಡಿಕೆ .. ಇನ್ನು ಊಟದ ಪಜೀತಿಯಂತೂ ಹೇಳೋದೇ ಬೇಡ. ಕೆಲವೊಮ್ಮೆ ನಮ್ಮ ಹಿಂದೆಯೇ ನಿಂತಿರ್ತಾರೆ !! ತಿನ್ನೋಕೆ ಮುಜುಗರ ಆಗೋ ಹಂಗೆ ನಮ್ ಕಡೆಯಂತೂ ಈ ಬೀಗರ ಔತಣಕ್ಕೆ ಮುಗಿ ಬೀಳೋದು ನೋಡಿಯೇ ತಿಳಿಬೇಕು!!) ಮಂಜು "ಜಾಗ ಹಿಡಿದ ಮೇಲೆ" ನಾ ಹೋದೆ .. ಅದೇನ್ ಊಟ ಅಂತೀರಾ ಮೂರು ಪಲ್ಯ , ಕೋಸಂಬರಿ, ಎರಡೆರಡು ಸಿಹಿ, ಇತ್ಯಾದಿ ಇತ್ಯಾದಿ .. ಊರಿನವರು ಕುಳಿತ ಎಲೆಗಳು ಎಲ್ಲಾ ಖಾಲಿಯಾಗಿದ್ರೆ .. ನಮ್ಮ ನಗರ ಮಂದಿ ಕುಳಿತ ಎಲೆಗಳು ಅರೆಬರೆ ತಿಂದು ಉಳಿಸಿದ್ದವು  ಹಾಗೆಂದು ಈ ಹುಡುಗನ ಮನೆಯವರು ತುಂಬಾನೇ ಅನುಕೂಲಸ್ಥರೇನೂ ಅಲ್ಲ . ಖರ್ಚು ಮಾಡೋದು ಹುಡುಗಿಯ ಮನೆಯವರಲ್ವಾ ಅನ್ನೋ ಅಹಂ/ಉದಾಸೀನ ಅಷ್ಟೇ !!!
ಎರಡನೆಯ ಮದುವೆ ಒಂದು ಸ್ಟಾರ್ ಹೋಟೆಲ್ ಅಲ್ಲಿ .ಹುಡುಗಿ ಒಂದು ಒಳ್ಳೆಯ ಕಡೆ ಕೆಲಸದಲ್ಲಿದೆ . ಹುಡುಗ ಕೂಡ ಚೆಂದದ ಕೆಲಸದಲ್ಲಿದ್ದಾನೆ . ದೇವಸ್ಥಾನದಲ್ಲಿ ಮದುವೆ ಮುಗಿಸಿಕೊಂಡು ಹೋಟೆಲ್ ಅಲ್ಲಿ ಊಟಕ್ಕೆ ಹೇಳಿದ್ದಾರೆ .ಮದುವೆ ಮುಗಿದ ಕೂಡಲೇ ಕೊಬ್ಬರಿಸಕ್ಕರೆ ಹಂಚಿ ಸಿಹಿ/ಖುಷಿ ಹಂಚಿಕೊಂಡು ಹೋಟೆಲ್ಗೆ ಬಂದ್ರು . ಊಟ ಕೂಡ ಹಿತಮಿತ . ರುಚಿರುಚಿಯಾದ್ರೂ ಚೆಲ್ಲುವಷ್ಟಲ್ಲ .. ಹುಡುಗ ಹುಡುಗಿ ಹಾಗೂ ಮನೆಯವರಿಗೆ ದುಡ್ಡಿನ ಬೆಲೆ ತಿಳಿದಂತೆ . ಒಂದು ಪಂಕ್ತಿಯವರು ಊಟ ಮಾಡುವಾಗ ಊಟದ ಮನೆಯ ಬಾಗಿಲು ಮುಚ್ಚಿ ಎಲ್ಲಾ ತೆಗೆದು ಶುಚಿ ಮಾಡುವರೆಗೂ-ಮಾಡಿ ಮತ್ತೆ ಕರೆಯುವವರೆಗೂ ಊಟಕ್ಕೆ ಯಾರೂ ಸುಳಿಯಲೇ ಇಲ್ಲ !!
ಮೊದಲೆಲ್ಲಾ ಅಮೆರಿಕನ್ ಕಲ್ಚರ್ ಅಂತ ಅದನ್ನ ಹಿಂಬಾಲಿಸ್ತಾ ಬಹಳ ಮಂದಿ ನಾವುಗಳು(!!) ಈಗ ಮತ್ತೆ ನಮ್ಮದೇ ಸಂಸ್ಕೃತಿ ಚೆಂದ ಎಂದು ಅದನ್ನೇ ಹಿಂಬಾಲಿಸುವ ಹಂತ ತಲುಪಿದ್ದೇವೆ . ಮದ್ವೆ ಆಗೋದು ಒಂದೇ ಸಾರಿ ನಿಜವೇ .. ಆದರೆ ಇಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬುದು ಅರಿವುದು ನಮ್ಮ ಕೈಲೆ ಇದೆ ಅಷ್ಟೇ..
ಆದ್ರೂ ಒಂದಂತೂ ಚೆಂದ ಕಣ್ರೀ. ಎರಡೂ ಮದ್ವೆಯಲ್ಲೂ ಪುಟ್ಟ ಮಕ್ಕಳ ಅಮ್ಮಂದಿರು/ಅಜ್ಜಿಯಂದಿರು ಬಟ್ಟಲಲ್ಲಿ ಅನ್ನ ಹಿಡಿದು ತಮ್ಮ ಚಿಲ್ಟಾರಿಗಳಿಗೆ "ಮಮ್ಮು" ತಿನಿಸ್ತಾ ಇದ್ದದ್ದು  ಒಂದೆಡೆ 'ಲೇ ಅಮ್ಮಿ , ಒಂದ್ ಬಟ್ಲಗೆ ಒಸಿ ಅನ್ನ ಹಾಕೋಡಮ್ಮಿ , ಮಗಿಗೆ ಉಣ್ಣಿಸಿಬುಡ್ತಿನಿ " ಅಂದ್ರೆ ,ಮತ್ತೊಂದೆಡೆ "ಒಂದು ಬೋವೆಲ್ಗೆ ಒಂಚೂರು ವೈಟ್ ರೈಸ್ ಹಾಕಿ ಕೊಡ್ತೀರಾ ಪ್ಲೀಸ್ ಮಗುಗೆ ಊಟ ಮಾಡಿಸೋಕೆ " ಅಂತಿದ್ರು ಅಷ್ಟೇ ))
ಮನಸ್ಸು ನೀಲಿ ನೀಲಿ ಆ ಬಾನಿನಂತೆ ))Feeling ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ )))))
ಮಕ್ಕಳು ಸಣ್ಣವರಿದ್ದಾಗ ಹೊರಗಡೆ ಊಟಕ್ಕೆ ಹೋದ್ರೆ ಬಹಳಷ್ಟು ಸಾರಿ ತೆಗೆದುಕೊಂಡಿದ್ದು ಹೆಚ್ಚಾಗ್ತಾ ಇತ್ತು. ಒಮ್ಮೊಮ್ಮೆ ಚೆನ್ನಾಗಿ ಊಟ ಮಾಡ್ತಾ ಇದ್ದ ಮಕ್ಕಳು ಒಮ್ಮೊಮ್ಮೆ ಬಡಿಸಿಕೊಳ್ಳುವ ಮೊದಲೇ ಬಹಳಷ್ಟು ಉಳಿಸಿಬಿಡ್ತಾ ಇದ್ರು .. ಅದ್ಯಾಕೋ ಅನ್ನ ಎಸೀಬೇಕು ಅಂದ್ರೆ ಸಂಕಟ ಆಗೋಗುತ್ತೆ . ಸರಿ ಬಡಿಸಿಕೊಳ್ಳದೆ ಉಳಿದದ್ದನ್ನ "ಪ್ಯಾಕ್ " ಮಾಡೋಕೆ ಹೇಳ್ತಾ ಇದ್ವಿ .. ಕೆಲವೆಡೆ ಇವ್ಯಾವೋ ಅನ್ನ ಕಾಣದವೇನೋ ಅನ್ನೋ ಲುಕ್ ಕೊಟ್ರೆ ಮಾಮೂಲಾಗಿ ಹೋಗೋ ಕಡೆ ಕಟ್ಟಿ ಕೊಡ್ತಾ ಇದ್ರು .. ಮೊದಮೊದಲು ಮಕ್ಕಳಿಗೆ ಒಂದ್ ತರ ಅನಿಸ್ತಾ ಇತ್ತೇನೋ . uneasy ಆಗಿ ಮುಖ ನೋಡ್ತಾ ಇದ್ರು . ದೊಡ್ಡವರಾದ ಮೇಲೆ ಉಳಿಸೋದು ಕಡಿಮೆಯಾದ್ರೂ ಅಪ್ಪಿ ತಪ್ಪಿ ಹೆಚ್ಚು ಅನಿಸಿದರೆ 'ಅಪ್ಪ, ಪ್ಯಾಕ್ ಮಾಡಿಸಿಬಿಡು" ಅಂತಾರೆ ಯಾವುದೇ ಮುಜುಗರ ಇಲ್ಲದೆ. ಮನೆಯಲ್ಲಿ ಕೂಡ ಎಷ್ಟ್ ಬೇಕೋ ಅಷ್ಟೇ ಹಾಕಿಕೊಂಡು ತಿಂತಾರೆ . ಮದ್ವೆ ಮನೆಗಳಿಗೆ ಹೋದರೆ ಯಾವುದೇ ಇರುಸುಮುರುಸು ಇಲ್ಲದೆ ಬೇಕಿದ್ದನ್ನ ಮಾತ್ರ ಬಡಿಸಿಕೊಳ್ಳುತ್ತಾರೆ ... ಅನ್ನದ ಬೆಲೆ ಅರಿತಂತೆ ಊಟ ಮಾಡುತ್ತಾರೆ .. ಎಲ್ಲೋ ಒಂದು ಕಡೆ ಗೆದ್ದಂತೆ 
ಎಸೆಯದೆ ಉಳಿಸಿದ್ದು ಬೆಳೆದಷ್ಟಕ್ಕೆ ಸಮ ಅನ್ನೋ ಪಾಠ ಕಲಿತಂತೆ 
ಮನಸ್ಸು ನೀಲಿನೀಲಿ ...ಥೇಟ್ ಆ ಬಾನಿನಂತೆ )))))
ನೆನ್ನೆ ಸಂಜೆ ಎಂದಿನಂತೆ ನಮ್ಮನೆ ದೇವ್ರು ನಾನು ಒಂದು ಸಣ್ಣ ರೌಂಡ್ ಹೋಗಿದ್ವಿ . ತರೋಕೆ ಅಂತ ಏನಿಲ್ಲದೆ ಹೋದ್ರು ಪ್ರತಿದಿನ ಸುಂಸುಮ್ನೆ ಹಾಗೆ ಒಂದು ಸಣ್ಣ ಸುತ್ತು ಹಾಕಿ ಬರೋದು ವಾಡಿಕೆ .. ನಾವು ಓಡಾಡುವ ರಸ್ತೆಯಲ್ಲಿ ಸಂಜೆಯಲ್ಲಿ ಕಷ್ಟಸುಖ ಮಾತನಾಡುತ್ತಾ ನಿಲ್ಲೋ ಹೆಣ್ಣುಮಕ್ಕಳು, ಪರಿಚಿತರು 'ಇದೇನ್ ಇವು ದಿನಾ ಊರು ಸುತ್ತುತ್ವೇ! ಇನ್ನ ವಯಸ್ಸಲ್ಲಿ ಇರೋ ಹಂಗೆ ಅಂದ್ಕೊಳ್ತಾರೇನೋ !! ಹಾಗೆ ಸುತೋಕು ಒಂದ್ ಕಾರಣ ಇದೆ ಬುಡಿ . ಮಕ್ಕಳ ಮುಂದೆ ಮಾತನಾಡಲು ಆಗದ ಅವರದೇ ಒಂದಷ್ಟು ವಿಷಯಗಳನ್ನ ಹಾಗು ಮತ್ತೆ ಕೆಲವೊಂದು ಮಾತುಗಳನ್ನ ಮಾತನಾಡಿಕೊಂಡು ಬರ್ತೀವಿ . ನನ್ ಚಿಕ್ ಕೂಸು ಹೇಳ್ತದೆ 'ಅದೇನ್ ನಾಟ್ಕ ಆಡ್ತೀರೋ ಇಬ್ರುವೇ . ಸುತ್ತೋಕೆ ಹೋಗೋಕೆ ಆಸೆ ಅಂದ್ರೆ ನಾವೇನ್ ಬೇಡ ಅಂತೀವಾ ' ಅಂತ!! ಅದ್ಕೆ ನಮ್ಮನೆ ದೇವ್ರು 'ರಸಿಕತೆ ಇಲ್ಲದ ಬಾಳು ಬಾಳಾ ಬಿಡು ಮಗ .. ' ಅಂತ ಅದ್ಯಾವ್ದೋ ಹಳೆ ಸಿನಿಮಾದ ಡೈಲಾಗ್ ಹೊಡೀತಾರೆ. ನಾ ಎಂದಿನಂತೆ 'ಇದಕ್ಕೇನು ಕಮ್ಮಿ ಇಲ್ಲ' ಅಂತ ನಗ್ತೀನಿ . 
ನೆನ್ನೆ ಎಂದಿನಂತೆ ಹೊರಗೆ ಹೋದ್ವಿ . ಮೋರ್ ಹತ್ರ ಹೋದಾಗ ಗೋದಿಹಿಟ್ಟು ಮಾಡಿಸೋಕೆ ಸೋಯಾಕಾಳು ತಂದಿಲ್ಲದೆ ಇದ್ದದ್ದು ನೆನಪಿಗೆ ಬಂತು . ಹೋದ್ವಿ . ತೆಗೆದುಕೊಂಡು ಬಿಲ್ಲಿಂಗ್ ಹತ್ರ ಬಂದ್ವಿ . ಎಂದಿನಂತೆ ಮಂಜುನಾಥ ಪ್ರಭುಗಳು ಸಣ್ಣಗೆ ಹಾಡು ಹೇಳ್ತಾ ಬಿಲ್ ಹಾಕಿಸ್ತಾ ಇದ್ರು . ನಾ ಪಕ್ಕದಲ್ಲೇ ಇದ್ದೆ . ಬಿಲ್ ಮಾಡ್ತಾ ಇದ್ದ ಹುಡುಗ ' ಸಾರ್ ಬಹಳ ಖುಶಿಯಲ್ಲಿದ್ದಾರೆ ' ಅಂದ . 'ಮನೆಯಲ್ಲಿ ಹಾಡೋಕೆ ಆಗೋದಿಲ್ಲ ಕಣಪ್ಪ ಭಯ ಅವ್ರ್ಗೆ ಅದ್ಕೆ ಇಲ್ ಹಾಡಿಕೊಳ್ತಾರೆ ' ಅಂದೆ. ಹುಡುಗ ನಕ್ಕು ಬಿಟ್ಟ . ಮಂಜು 'ಮನೆಯಲ್ಲಿ ಈ ಹಾಡೆಲ್ಲ ಎಲ್ ಹೇಳನ ಮಹರಾಯ , ಮನೆಯಲ್ಲಿ ಬೇರೇನೇ ಹಾಡು ಹೇಳೋದು' ಅಂದ್ರು. 'ಯಾವ್ ಹಾಡು ಸಾರ್' ಅಂದ ಹುಡುಗ .. 'ಓ ನಿಂಗಿನ್ನೂ ಮದ್ವೆ ಆಗಿಲ್ಲ ಅಲ್ವ ಮನೆಯಲ್ಲಿ ಹಾಡೋದು 'ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ' ಅಂತ !!' ಅಂದ್ರು. ಹುಡುಗ ಮತ್ತೆ ನಕ್ಕ. ಪಕ್ಕದಲ್ಲೇ ನಿಂತಿದ್ದ ಹಿರಿಯ ಹೆಣ್ಣುಮಗಳೊಬ್ಬರು 'ಪುಣ್ಯ ಮಾಡಿದ್ದೀಯಾಮ್ಮ , ನಗಿಸೋಕೆ ಅಂತ್ಲೆ ದುಡ್ಡು ಕೊಡೊ ಕಾಲದಲ್ಲಿ ಹೊಟ್ಟೆ ತುಂಬಾ ನಗೋದಕ್ಕೆ ಪುಣ್ಯ ಮಾಡಿರಬೇಕು .. ಹಿಂಗೇ ಇರಿ' ಅಂದ್ರು !! 'ಥ್ಯಾಂಕ್ಸ್ ಅಮ್ಮ' ಅಂದ್ರು ಮಂಜು . 
ಬದುಕು ಬನದಂತೆ .. ಹಸಿರಾಗಿಸಿಕೊಳ್ಳೋದು ಬರಡಾಗಿಸಿಕೊಳ್ಳೋದು ನಮ್ಮದೇ ಆಯ್ಕೆ ಅನಿಸುವಂತೆ 
And I Smile as ever 

Wednesday, 12 July 2017

ಕೆಲವೊಮ್ಮೆ ಹೀಗೂ ಅನಿಸುತ್ತದೆ ಗೆಳೆಯ...ಇಂತಹ ಒಂದು ಸಮಯದಲ್ಲಿ ನೀನು ನನ್ನ ಬಳಿ ಇರಬೇಕೆಂದು...ಕೆಲವೇ ಕ್ಷಣಗಳಾದರೂ ನನ್ನ ತಲೆ ನಿನ್ನ ಎದೆಯ ಮೇಲಾನಿಸಬೇಕೆಂದು ..ನಿನ್ನ ಬಾಹುಗಳು ನನ್ನ ಸುತ್ತುವರಿದಿರಬೇಕೆಂದು...ನಿನ್ನ ಕೈಗಳು ನನ್ನ ಬಿಚ್ಚ್ಚಿ ಬಿದ್ದ ಮುಡಿಯ ಸವರುತ್ತಿರಬೇಕೆಂದು...ನಿನ್ನ ಉಸಿರು ನನ್ನ ನೆತ್ತಿಯ ಸೋಕುತ್ತಿರಬೇಕೆಂದು ..ನಿರಾಳ ನಿಶಬ್ದದ ನಡುವೆ....ಹೇಳದೆಯೂ...ಕೇಳದೆಯೂ ಎಲ್ಲಾ ಮಾತು ಆಡಿದಂತೆ... ಅರಿತಂತೆ ಅನಿಸಿ...ಮನದ ಭಾರವೆಲ್ಲ ಇಳಿದು ಹೋದಂತೆನಿಸಿ...ಮತ್ತೀನು ಬೇಡ ಎಂಬಂತೆ...ಅನಂತದಲ್ಲಿ...ಅನಂತವಾಗಿ...))))
ಒಂದ್ ಕಥೆ 
ಶ್ರೀಮಂತ ಇರ್ತಾನೆ. ತನ್ನ ಸಿರಿವಂತಿಗೆಯ ಮೇಲೆ ಅವನಿಗೆ ಬಹಳಾನೇ ಅಭಿಮಾನ.ತನ್ನ ಇಡೀ ತೋಟ ಸುತ್ತುತ್ತಾ, ತನ್ನ ಬಗ್ಗೆ ತಾನೇ ಹೆಮ್ಮೆ ಪಡೋದು ಅವನ ಹವ್ಯಾಸಗಳಲ್ಲಿ ಒಂದು ! 
ಒಮ್ಮೆ ಹೀಗೆ ಸುತ್ತುವಾಗ ತೋಟದಿಂದ ಸ್ವಲ್ಪ ಮುಂದೆ ಒಂದು ಗುಡಿಸಲಲ್ಲಿ ಒಬ್ಬ ಬಡ ರೈತ ಕುಳಿತಿರ್ತಾನೆ..ತನ್ನ ಕೈಲಿ ಹಿಡಿದ ಮುಸುಕಿನ ಜೋಳವನ್ನ ದೇವರಿಗೆ ಧನ್ಯವಾದ ಹೇಳಿ ತಿಂತಾ ಇರ್ತಾನೆ..ಬಂದ ಸಿರಿವಂತನಿಗೆ ಸಾಮಾನ್ಯ ಔದಾರ್ಯದಿಂದ ಔಪಚಾರಿಕವಾಗಿ 'ತಿನ್ನುವೆಯಾ" ಏನು ಕೇಳುತ್ತಾನೆ .. 
ಶ್ರೀಮಂತ ನಕ್ಕು ಬಿಡ್ತಾನೆ. 'ಅಲ್ಲ ಇರೋದೇ ಒಂದು ಮುಸುಕಿನ ಜೋಳ!! ಅದನ್ನ ನನಗೆ ಬೇಕಾ ಅಂತ ಕೇಳೋದಲ್ಲದೆ ದೇವರಿಗೆ ಕೃತಜ್ಞತೆ ಬೇರೆ ಹೇಳ್ತೀಯಲ್ಲ, ಇನ್ನು ನನ್ನ ಹಾಗಿದ್ದರೆ ದೇವರಿಗೆ ಮಂದಿರವನ್ನೇ ಕಟ್ಟಿಸ್ತಾ ಇದೆಯೇನೋ' ಅಂತಾನೆ.
ರೈತ ಸುಮ್ಮನೆ ನಗ್ತಾನೆ.ಹಾಗೂ ಹೇಳ್ತಾನೆ 'ಈವತ್ತು ನನ್ನ ಕನಸಲ್ಲಿ ದೇವರು ಬಂದಿದ್ದ , ಈ ಕಣಿವೆಯ ಅತಿ ಸಿರಿವಂತ ಸತ್ತು ಹೋಗ್ತಾನೆ ಅಂತ ಹೇಳಿದ" ಅಂತಾನೆ.
ಸಿರಿವಂತ ರೈತನಿಗೆ 'ಕನಸುಗಳು ಅವಿವೇಕಿಗಳಿಗೆ ಮಾತ್ರ ಬೀಳೋದು' ಅಂತ ಸಿಡುಕಿ ಹೇಳಿ ಹೋಗ್ತಾನೆ...
ಆದ್ರೂ ಮನದ ಮೂಲೆಯಲ್ಲೆಲ್ಲೋ ಭಯವಾಗಿ ತನ್ನ ವೈದ್ಯನನ್ನ ಕರೆಯಿಸಿ ಪರೀಕ್ಷೆ ಮಾಡಿಸುತ್ತಾನೆ. ವೈದ್ಯ ಎಲ್ಲಾ ಸರಿಯಿದೆ ಏನೂ ಭಯವಿಲ್ಲ ಅಂತ ಹೇಳ್ತಾನೆ.
ಸಿರಿವಂತ ರಾತ್ರಿ ಇಡೀ ನಿದ್ರೆ ಬಾರದೆ ಹೊರಳಾಡ್ತಾನೆ. ನಸುಕು ಆಗುವುದು ಯಾವಾಗ ಅಂತ ಕಾಯ್ತಾನೆ .ಬೆಳಿಗ್ಗೆ ಬೆಳಿಗ್ಗೆ ಎದ್ದು ರೈತನ ಕನಸಿನ ಬಗ್ಗೆ ತನ್ನಲ್ಲೇ ನಗುತ್ತಾ ಎಂದಿನ ಕೆಲ್ಸ ಶುರು ಮಾಡಲು ಹೊರಡುತ್ತಾನೆ ...
ತೋಟದ ಒಬ್ಬ ಕೆಲಸದವ ಬಂದು 'ಸ್ವಾಮಿ, ನಮ್ಮ ತೋಟದ ಆಚೆ ಮೂಲೆಯಲ್ಲಿದ್ದ ಆ ರೈತ ಸತ್ತು ಹೋದ 'ಅಂತಾನೆ !!!!
ಸಿರಿವಂತನಿಗೆ ಅದ್ಯಾಕೋ ತನ್ನ ಬಗ್ಗೆ ನಾಚಿಕೆ ಎನಿಸುತ್ತದೆ ...
ಸಿರಿವಂತಿಕೆ ಅಂದ್ರೆ ........ ಬರೀ ಹಣವೇ ಅಲ್ಲ!!ಸಿರಿವಂತಿಕೆ ಅಂದ್ರೆ ನಮ್ಮ ಸಹಜೀವಿಗಳ ಜೊತೆ ನಾವು ಹೊಂದಿರೋ ಬಾಂಧವ್ಯ ಕೂಡ ಏನೋ
ಭಾವಾನುವಾದಿಸಿ ಹಂಚಿಕೊಳ್ಳಬೇಕು ಅನಿಸ್ತು ))))

Monday, 10 July 2017

ಬಹಳ ಹಿಂದೆ ಒಂದು ಕಥೆ ಓದಿದ್ದೆ " A Glass of Milk " ಅನ್ನೋ ಇಂಗ್ಲಿಷ್ ಕಥೆ . ಒಬ್ಬ ಪುಟ್ಟ ಹುಡುಗ ಬಡತನದಲ್ಲಿ ಪುಸ್ತಕ ಮಾರಿ ಬದುಕ್ತಾ ಇರ್ತಾನೆ . ಅವನ ಓದಿಗೆ ದುಡ್ಡು ಇರೋದಿಲ್ಲ. ಒಮ್ಮೆ ಹೀಗೆ ಪುಸ್ತಕ ಮಾರೋವಾಗ ಬಹಳ ಆಯಾಸವಾಗಿ ಬಿಟ್ಟಿರುತ್ತಾನೆ . ಒಬ್ಬ ಹೆಣ್ಣು ಮಗಳು ಅವನಿಗೆ ಒಂದು ಲೋಟ ಹಾಲು ಕೊಟ್ಟು ಅವನ ಪುಸ್ತಕ ಕೊಂಡು , ಅವನಿಗೆ ಸಹೃದಯತೆ ತೋರಿರುತ್ತಾಳೆ .. ಮುಂದೆಂದೋ ಒಮ್ಮೆ ಅವಳಿಗೆ ಆರೋಗ್ಯ ತಪ್ಪಿದಾಗ ಅವಳು ಆಸ್ಪತ್ರೆ ಸೇರಿದಾಗ ಒಬ್ಬ ವೈದ್ಯ ಅವಳನ್ನ ಆರೈಕೆ ಮಾಡಿ ಕಷ್ಟ ಕಾಲದಲ್ಲಿ ಸಹಾಯ ಮಾಡ್ತಾನೆ. ಆಸ್ಪತ್ರೆಯ ಬಿಲ್ ಹಣವನ್ನ 'ಒಂದು ಲೋಟ ಹಾಲಿಗೆ " ವಜಾ ಮಾಡಲು ಹೇಳುತ್ತಾನೆ . ಇದು ಕಥೆ..
ಈಗ ಇದು ನೆನಪಾಗಲು ಕಾರಣ ಇಷ್ಟೇ ... ನಮ್ಮ ಜೊತೆ ಬೆಳೆದವರೆಲ್ಲ ಈಗ ದೊಡ್ಡವರಾಗಿದ್ದಾರೆ , ಬೇರೆ ಬೇರೆ ಕಡೆ ಇದ್ದಾರೆ , ನಮಗಿಂತ ಕಿರಿಯರೆಲ್ಲ ದೊಡ್ಡ ಹುದ್ದೆಯಲ್ಲಿದ್ದಾರೆ , ... ಇಷ್ಟು ದಿನ ಗೊತ್ತಾಗದೆ ಇದ್ದಿದ್ದು ಮಗನ admision ಅಂತ ಒಂದೆರಡು ಆಫೀಸ್ ಸುತ್ತುವಾಗ ಗೊತ್ತಾಗ್ತಾ ಇದೆ ... ಮೊನ್ನೆ ಹಾಗೆ ಒಂದು ಆಫೀಸ್ಗೆ ಹೋದಾಗ 'ಏ, ಚಿನ್ನಕ್ಕ ಅಲ್ವ " !! " ಹೇ ___ ನೀನು ಇಲ್ಲಿ so and soನ ಮಹರಾಯ ನಾ ಯಾರೋ ಅನ್ಕೊಂಡಿದ್ದೆ ' ... ಮತ್ತೆಲ್ಲ ಕೆಲಸ ನಿಮಿಷಗಳಲ್ಲಿಮುಗಿದದ್ದು ..!! ಎಂದೋ ಹಂಚಿಕೊಂಡ ಊಟ, ಎಂದೋ ಹೇಳಿಕೊಟ್ಟ ಪಾಠ , ಎಂದೋ ನೀಡಿದ್ದ ಸಾಂತ್ವನ, .... ಮತ್ತೆಂದೋ ಬೆನ್ನ ಹಿಂದೆ ಬರುತ್ತದೆ ... (ಅಪ್ಪ ಅಮ್ಮ ಮಾಡಿದ ಪುಣ್ಯ ಮಕ್ಕಳ ಕಾಯುತ್ತೆ ಅಂತ ಇದ್ರೂ ಅಮ್ಮ) ಸ್ವರ್ಗ ನರಕ ಎಲ್ಲ ಇಲ್ಲೇ ನಾವು ಮಾಡಿದ ಕೆಲಸದಲ್ಲೇ, ನಾವು ನೀಡಿದ ಪ್ರೀತಿಯಲ್ಲೇ ..... and again, as i always say, am blessed..))))

Tuesday, 4 July 2017

ಮೊನ್ನೆ ಒಂದೆರಡು ದಿನ ರಜ ಇತ್ತು ಅಂತ ಎಲ್ಲಾ ಮೈದುನನ ಮನೆಯಲ್ಲಿ ಕ್ಯಾಂಪ್ ಹಾಕಿದ್ವಿ . ಒಟ್ಟೊಟ್ಟಿಗೆ ಒಂದೆರಡು ದಿನ ರಜ ಇದ್ರೆ ಆಗೊಮ್ಮೆ ಈಗೊಮ್ಮೆ ಈ ತರ ಕ್ಯಾಂಪಿನ್ಗಳು ನಡಿತಾವೆ . ಮೊನ್ನೆ ಹೋದಾಗ ಅತ್ತೆ ಬೆಳಿಗ್ಗೆಬೆಳಿಗ್ಗೆ ಎದ್ದು ಹಂಡೆ ಒಲೆ ಉರಿ ಹಾಕ್ಕಿದ್ರು . ಹಂಡೆ ನೀರಲ್ಲಿ ಬಿಸಿಬಿಸಿ ನೀರ್ ಹುಯ್ಕೊಳ್ಳಿ... ದಿನಾ ಆತ್ರಕ್ಕೆ ಆ ಸೋಲಾರ್, ಗ್ಯಾಸ್ ಗೀಸರ್ ನೀರ್ ಹುಯ್ಕೊಳ್ತೀರಾ , ಅದೇನ್ ಸ್ನಾನ ಮಾಡ ಆಟನೋ ಅಂದ್ರು . 
ನನಗಿನ್ನೂ ನೆನಪಿದೆ . ಅಜ್ಜಿ ಮನೆಗೆ ಹೋದಾಗ ಅತ್ತೆ ಬಿಸಿಬಿಸಿ ನೀರು ಎರೆಯುತ್ತಾ ಇದ್ದಿದ್ದು . ದೊಡ್ಡ 'ಕೊಳದಪ್ಪಲೆ' ಹಿಡಿದು ಸಾಕು ಅಂತ ಕಣ್ಣಲ್ಲಿ ನೀರು ತುಂಬೋವರೆಗೂ ಹಾಕ್ತಾ ಇದ್ರು . ಕೆಂಪುಕೆಂಪಾಗಿ ಹೊರ ಬಂದರೆ ದೃಷ್ಟಿ ಆಗ್ಗುತ್ತೆ ಅಂತ ಎಡ ಹುಬ್ಬಿನ ಮೇಲೊಂದು ಒಲೆಯ ಮಸಿ ಹಚ್ತಾ ಇದ್ರು ! ಬಿಸಿಬಿಸಿ ಅನ್ನದ ಮೇಲೆ ಇರೋಬರೋ ಎಲ್ಲಾ ತರಕಾರಿ ಹಾಕಿದ ಸಾಂಬಾರು , ಒಂಚೂರು ತುಪ್ಪ ಹಾಕಿ ತಿಂದ್ರೆ "ಮಲಗಿ ಬಿಡು ರಾಣಿ, ನಿಮ್ ಮಾಮ ಇರ್ತಾರೆ. ಹೊರಗೆ ಬಿಸಿಲಿಗೆ ಹೋಗ್ಬೇಡ ' ಅಂತ ಹೇಳಿ ಕೆಲ್ಸಕ್ಕೆ(ಟೀಚರ್) ಹೋಗ್ತಾ ಇದ್ರು . ಮಂಜು ಹೇಳ್ತಾರೆ "ಹಂಗೆ ತಿಂದುಂಡು ಆರೈಕೆ ಮಾಡಿಸಿಕೊಂಡು ಬೆಳೆದಿದ್ದಕ್ಕೆ ನೀ ಇನ್ನೂ ಹಿಂಗೇ (ಗುಂಡಗುಂಡಗೆ ಅಂತ ಮನಸಲ್ಲಿ ಅಂದ್ಕೊಳ್ತಾರೆ ಜೋರಾಗಿ ಹೇಳಿದ್ರೆ ಎಲ್ಲಿಯ ಗ್ರಹಚಾರ ಅಂತ ಆರೋಗ್ಯವಾಗಿ ಅಂತ ಸೇರಿಸ್ತಾರೆ ಅಷ್ಟೇ!) ಇರೋದು ಆರೋಗ್ಯವಾಗಿ ' ಅಂತ ..
ನಿಜವೇನೋ... ಆ ತ್ರಾಣ, ಶಕ್ತಿ, ದೈಹಿಕ ಹಾಗು ಮಾನಸಿಕ ಸ್ಥಿರತೆ ಎಲ್ಲದಕ್ಕೂ ಗಿಡವಾಗಿದ್ದಾಗ ಮಾಡುವ ಆರೈಕೆಯೇ ಕಾರಣವೇನೋ ಅನಿಸುವಂತೆ ... nostalgic memories......
ಮನಸ್ಸು ನೀಲಿನೀಲಿ ಥೇಟ್ ಆ ಬಾನಿನಂತೆ .. ಅಲ್ಲೆಲ್ಲೋ ಮೇಲೆ ಅತ್ತೆ, ಅಜ್ಜಿ, ಮಾಮ ನಿಂತು ನೋಡಿ ನಕ್ಕಂತೆ
ಈವತ್ತು ಆಷಾಡದ ಮೊದಲ ಶುಕ್ರವಾರ . ನೆನ್ನೆ ಹೂ ತರೋಕೆ ಹೊರಟಿದ್ವಿ . ಪಕ್ಕದ ಮನೆಯ ಹಿರಿಯಾಕೆ ಬಂದು 'ನಮ್ ಮನೆಯವ್ರಿಗೆ ಬೆನ್ನು ನೋವು ಅಂತ ಮಲಗಿದ್ದಾರೆ. ನಮಗೂ ಒಂಚೂರು ಹೂ ತಂದ್ಬಿಡಿ ಮಂಜುನಾಥ್' ಅಂದ್ರು . ಮಂಜು 'ಆಯ್ತ್ ಬಿಡಿ ಅಮ್ಮ, ತರ್ತೀನಿ ' ಅಂದ್ರು .
ಆಷಾಢದಲ್ಲಿ ಹೆಣ್ಣು ದೇವರ ನೋಡು(ಪೂಜಿಸು) ಶ್ರಾವಣದಲ್ಲಿ ಗಂಡು ದೇವ್ರನ್ನ ನೋಡು (ಪೂಜಿಸು) ಅನ್ನೋದು ಒಂದ್ ಪ್ರತೀತಿ ನಮ್ ಕಡೆ..ಅದರಲ್ಲೂ ಮೈಸೂರಲ್ಲಿ ಆಷಾಢ ಅಂದ್ರೆ ಚಾಮುಂಡಿ ಬೆಟ್ಟದ ದೇವಿಗೆ ವಿಜೃಂಭಣೆಯ ಪೂಜೆ . ಸಂಭ್ರಮ ಇದ್ರೂ ಇತ್ತೀಚಿನ ಒಂದಷ್ಟು ವರ್ಷಗಳಲ್ಲಿ ಇದು ಬಹಳ ಹೆಚ್ಚಾಗಿ ಬಿಟ್ಟಿದೆ. ಲಕ್ಷಾಂತರ ಜನ ಚಾಮುಂಡಿಯ ದರ್ಶನಕ್ಕೆ ಬರ್ತಾರೆ . ಬೆಟ್ಟಕ್ಕೆ ಈಗ ಖಾಸಗಿ ವಾಹನ ಕೂಡ ಬಿಡೋದಿಲ್ಲ . ಲಲಿತಾಮಹಲ್ ಬಳಿ ಗಾಡಿ ನಿಲ್ಲಿಸಿ ಅಲ್ಲಿಂದ ಸರಕಾರೀ ವಾಹನದಲ್ಲಿ ಹೋಗಬೇಕು
ಹೂ ತರೋಕೆ ಹೊರಟವಳು ಮತ್ತೇನೋ ಹೇಳ್ತ ಕುಳಿತೆ ಅಲ್ವೇ !...ಸರಿ ಹೂ ತರೋಕೆ ಹೊರಟ್ವಿ . ಅದೇನ್ ರಶ್ ಅಂದ್ರೆ ನಾಳೆಯೇನಾದ್ರು ಲಕ್ಷ್ಮಿ ಪೂಜೆಯೋ ಗೌರಿ ಪೂಜೆಯೋ ಅಂತ ಗೊಂದಲಗೊಳ್ಳುವಷ್ಟು ! ಹೂವಿನ ಬೆಲೆಯೂ ಏರಿಕೆಯಾಗಿತ್ತು . ನಮ್ ಮನೆಯಲ್ಲಿ ವ್ಯಾಪಾರ ಮಾಡೋದು ಮಂಜು . ನಾನು ಪಕ್ಕದಲ್ಲಿರ್ತೀನಿ ಅಷ್ಟೇ ! ನಮಗೆ ಅಂತ ಸೇವಂತಿಗೆ , ಕನಕಾಂಬರ, ಗುಲಾಬಿ ತೆಗೆದುಕೊಂಡ್ವಿ. 'ಪಕ್ಕದ ಮನೆ ಅಮ್ಮ ಹೇಳಿದ್ದಾರಲ್ಲ ಅವ್ರಿಗೂ ಇಲ್ಲೇ ತಗೋಳಪ್ಪಾ' ಅಂದೆ . ನೀ ಒಂದ್ ನಿಂಷ ಇಲ್ಲೇ ನಿಂತಿರು ಬಂದೆ ' ಅಂತ ಹೇಳಿ ಆ ಜನಸಂದಣಿಯೊಳಗೇ ನುಗ್ಗಿ ಹೋಗಿ ಹೂ ತಂದ್ರು .. ನಾ ಒಂಚೂರು ರೇಗಿದೆ . ಇಲ್ಲೇ ತಂದಿದ್ರೆ ಆಗ್ತಾ ಇರ್ಲಿಲ್ವ ಅಂತ . ಮಂಜು ಹೇಳಿದ್ರು 'ನಮಗೆ ಅಂದ್ರೆ ಅಪ್ಪಿತಪ್ಪಿ ಒಂದಷ್ಟು ಹೆಚ್ಚುಕಡಿಮೆಯಾದರೂ ಪರವಾಗಿಲ್ಲ ಕಣಮ್ಮ, ಒಬ್ರು ಒಂದು ಕೆಲಸ ಹೇಳಿದಾಗ ಅದನ್ನ ಸರಿಯಾಗಿ ಮಾಡಬೇಕು. ನಿನಗೆ ಏನ್ ಖುಷಿ ಅನಿಸ್ತೋ ನೀ ತಗೊಂಡೆ . ಅವ್ರಿಗೆ ಇನ್ನೂ ಚೆನ್ನಾಗಿರೋದು ಸಿಗಬಹುದೇನೋ ಅಂತ ಒಳಗೆ ಹೋದೆ ಅಷ್ಟೇ. ನಾಳೆ ನೀನು ಬಾಗಿಲಿಗೆ ಹಾಕಿದ ಹೂವು ಅವರಿಗೆ ತಂದ ಹೂಗಿಂತ ಚೆನ್ನಾಗಿ ಕಂಡ್ರೆ ಅವರು ತಪ್ಪು ತಿಳೀತಾರೆ ಅಲ್ವ. ... ಇತ್ಯಾದಿ ಇತ್ಯಾದಿ ' ಹೇಳಿದ್ರು .
ಮದ್ವೆಯಾಗಿ ಸುಮಾರು ೨೫ ವರ್ಷ ಮತ್ತೆ ಅದಕ್ಕೂ ಮೊದಲು ಒಂದ್ಮೂರು ವರ್ಷ ಒಟ್ಟೊಟ್ಟಿಗೇ ಬೆಳೆದ್ವಿ .. ಈ ಮನುಷ್ಯ ಕಲಿತಾ ಕಲಿತಾ ಪಾಸ್ ಆಗಿ ಮುಂದ್ಮುಂದೆ ಹೋದ್ರೆ, ನಾ ಇನ್ನೂ ಅಲ್ಲೇ ಇದ್ದೀನಿ ಆಗೊಂದು ಈಗೊಂದು ಪಾಠ ಕಲಿತಾ ... 
ಅಂದ್ ಹಾಗೆ ಈವತ್ತು ಆಷಾಡದ ಮೊದಲ ಶುಕ್ರವಾರ ಯಾವುದಾದ್ರೂ ಒಂದು ಹೆಣ್ಣು ದೇವರ ಗುಡಿಗೆ ಹೋಗಿ ಕೈಮುಗಿದ್ರೆ ಒಳ್ಳೆಯದಾಗುತ್ತದಂತೆ 
ದಿನಪತ್ರಿಕೆ ಹಾಕೋಕೆ ಒಬ್ಬ ಹುಡುಗ ಬರ್ತಾ ಇದ್ದ. ೮ನೇ ತರಗತಿ ಹುಡುಗ . ದಿನಾ ನಾ ಬಾಗಿಲಿಗೆ ನೀರು ಹಾಕ್ವಾಗ್ಲೊ ರಂಗೋಲಿ ಹಾಕ್ವಾಗ್ಲೊ ಬರ್ತಾ ಇದ್ದ. ನಾನು ಪೇಪರ್ ಇಸ್ಕೊಂಡ್ 'ಥ್ಯಾಂಕ್ಸ್ ಕಣೋ'ಅಂದ್ರೆ ,ಒಂದು ಚೆಂದದ ನಗೆ ಎಸೆದು ಹೋಗ್ತಾ ಇದ್ದ . ಪರೀಕ್ಷೆ ಆಯ್ತಾ? ಶಾಲೆ ಶುರು ಆಯ್ತಾ ಅಂತ ಕೇಳಿದ್ರೆ ಉತ್ತರಿಸಿ ಹೋಗ್ತಾ ಇದ್ದ. ನಾನು ಪೇಪರ್ ಬಿಲ್ ಕೊಡುವಾಗ ಒಂದ್ ೧೦ ರೂಪಾಯಿಯೋ ೧೫ ರೂಪಾಯಿಯೋ ಚಿಲ್ಲರೆ ಉಳಿದರೆ 'ಇಟ್ಕೊಂಡು ಪೆನ್ನೋ ಬುಕ್ಕೊ ತಗೋಳೋ ಮರಿ' ಅಂತ ಹೇಳ್ತಾ ಇದ್ದೆ . ಮೊದಮೊದಲು ಒಂದಷ್ಟು ಕನ್ಫ್ಯೂಸ್ಡ್ ಆಗಿ ನೋಡಿ ಆಮೇಲೆ ಆಮೇಲೆ ತೆಗೆದುಕೊಳ್ತಾ ಇದ್ದ "ಥ್ಯಾಂಕ್ಸ್ ಆಂಟಿ" ಅಂತಿದ್ದ. ಮತ್ತದೇ ನಗು ಎಸೆದು ಹೋಗ್ತಾ ಇದ್ದ.
ಈಗೊಂದ್ ನಾಲ್ಕು ತಿಂಗಳಿಂದ ಬೇರೆ ಹುಡುಗ ಪೇಪರ್ ಹಾಕ್ತಾ ಇದ್ದ. ಅವ್ನು ಮೊದಲು ಬರ್ತಾ ಇದ್ದವನಿಗಿಂತ ಸ್ವಲ್ಪ ಸಣ್ಣವನೇ ಏನೋ. ಪೇಪರ್ ಸ್ವಲ್ಪ ತಡವಾಗಿ ತರ್ತಾ ಇದ್ದ. ಗೇಟ್ಗೆ ಸಿಗಿಸದೆ ಎಸೆದು ಹೋಗ್ತಾ ಇದ್ದ . ಒಂದೆರಡು ಬಾರಿ ಹೇಳಿದ ಮೇಲೆ ಗೇಟ್ಗೆ ಸಿಕ್ಕಿಸಿ ಹೋಗೋಕೆ ಶುರು ಮಾಡಿದ. ಒಂದೆರಡು ತಿಂಗಳು ಪೇಪರ್ ದುಡ್ಡು ಪೇಪರ್ ಏಜೆಂಟೇ ಬಂದು ತೆಗೆದುಕೊಂಡು ಹೋದ್ರು. ಕಳೆದ ತಿಂಗಳು ಈ ಹುಡುಗನಿಗೆ ದುಡ್ಡು ಕೊಟ್ಟೆ. ಸರಿ ಚಿಲ್ಲರೆ ಒಂದ್ ೧೦ ರೂಪಾಯಿ ಉಳೀತು. "ನೀನೆ ಇಟ್ಕೊಳ್ಳೋ ಪೆನ್ ಏನಾದ್ರೂ ತಗೋ 'ಅಂದೆ. ಮುಖ ನೋಡಿದ,ಆಮೇಲೆ ತೆಗೆದುಕೊಂಡ. ನಡುವೆ ಒಂದು ದಿನ ಕೃತಿಗೆ ತಿಂಡಿ ಮಾಡ್ತಾ ಇದ್ದೆ . ಬೆಲ್ ಮಾಡಿದ ಪೇಪರ್ ಹುಡುಗ 'ಆಂಟಿ,ಈವತ್ತು ನನ್ನ ಹುಟ್ಟಿದ ದಿನ ಒಂದ್ ೧೦ ರೂಪಾಯಿ ಕೊಡಿ' ಅಂದ. ಒಂದ್ ಕ್ಷಣ ರೇಗ್ತು! ಏನ್ ಇವನೇನ್ ನನ್ ಹತ್ತಿರ ಕೊಟ್ಟು ಇಟ್ಟಿದ್ದಾನಾ ಅಂತ . (ಪ್ರೀತಿಯಿಂದ ಕೊಡೋದಕ್ಕೂ ಆನ್ ಡಿಮ್ಯಾಂಡ್ ಕೊಡೋದಕ್ಕೂ ವ್ಯತ್ಯಾಸವಿದೆ). ಹೋಗ್ಲಿ ಹುಟ್ಟಿದ ದಿನ ಅಂತಾನೆ ಅಂತ ಕೊಟ್ಟೆ.ತಿಂಡಿ ತಿನ್ತಾ ಇದ್ದ ಪುಟ್ಟಿ 'ಕುಳ್ಳಿಮಾ, ಅಡ್ವಾಂಟೇಜ್ ತಗೊಳ್ತಾ ಇದ್ದಾನೆ ಅವ್ನು . ಇನ್ಮೇಲೆ ಎಂಟರ್ಟೈನ್ ಮಾಡ್ಬೇಡ.. ಬರ್ತ್ಡೇ ಅಂದ್ರೆ ಫ್ರಿಡ್ಜ್ಯಿಂದ ಒಂದು ಚಾಕಲೇಟ್ ಕೊಟ್ಟಿದ್ರೆ ಆಗ್ತಾ ಇತ್ತು" ಅಂದ್ಳು. 'ಹೋಗ್ಲಿ ಬಿಡ್ ಮಗ ಹತ್ ರೂಪಾಯಿ ತಾನೇ' ಅಂದೆ . 'ನಾ ಕೇಳಿದ್ರೆ ನೂರು ಲೆಕ್ಕ ಕೇಳ್ತೀಯಾ ..ನಿನಗೆ ನನ್ ಮೇಲೆ ಪ್ರೀತಿ ಇಲ್ಲ' ಅಂದ್ಳು. 'ಮರ್ಯಾದೆಯಾಗಿ ತಿಂದು ಎದ್ದೇಳು , ಕಾಲೇಜ್ ಗೆ ಟೈಮ್ ಆಯಿತು' ಅಂದೆ ಮುಖ ಊದಿಸಿಕೊಂಡು ಹೋದ್ಲು. ನೆನ್ನೆ ಈ ಬಾರಿಯ ಪೇಪರ್ ಬಿಲ್ ಕೊಟ್ಟೆ . ಚಿಲ್ಲರೆ ಉಳಿಯಲಿಲ್ಲ. ಆ ಹುಡುಗ ಮುಖ ನೋಡಿದ . 'ಚಿಲ್ರೆ ಇಲ್ಲ ಕಣೋ' ಅಂದೆ. 'ನಾ ಕೊಡ್ತೀನಿ ಕೊಡಿ' ಅಂದ. ಆಶ್ಚರ್ಯವಾಯ್ತು . 'ಮುಂದಿನ ತಿಂಗ್ಳು ಕೊಡ್ತೀನಿ ಬಿಡು' ಅಂದು ಒಳಗೆ ಬಂದೆ . ಬೆಳಿಗ್ಗೆ ಪೇಪರ್ ಗೇಟ್ಗೆ ಸಿಕ್ಕಿಸದೆ ಮೆಟ್ಟಿಲ ಮೇಲೆ ಬಿದ್ದಿತ್ತು !!!
ಅದೆಷ್ಟು ವ್ಯತ್ಯಾಸ ಅಲ್ವೇ ಮನುಷ್ಯರ ನಡುವೆ. ಒಬ್ಬ ಕೊಟ್ಟಿದ್ದಕ್ಕೆ ಕೃತಜ್ಞತೆ ತೋರಿದರೆ , ಮತ್ತೊಬ್ಬ ಅದನ್ನ ಹಕ್ಕು ಎಂಬಂತೆ ತಿಳಿದ ....
ಅದ್ಯಾಕೋ ಒಮ್ಮೊಮ್ಮೆ ಪ್ರೀತಿ/ವಿಶ್ವಾಸ ಕೂಡ ಸಲ್ಲದೇನೋ ಅನಿಸುವಂತೆ.. ಸಲ್ಲುವವರಿಗೆ ಮಾತ್ರ ಸಲ್ಲಿಸಬೇಕು ಅನಿಸುವಂತೆ.. ಆದರೆ ಸಲ್ಲುವವರನ್ನ ಗುರುತಿಸುವುದೆಂತು ಎನ್ನುವಂತೂ ತಿಳಿಯದಂತೆ..
ಮನಸ್ಸು ಅದ್ಯಾಕೋ ಮಡುಗಟ್ಟಿದ ಬಾನಿನಂತೆ ....
ಕಥೆ ಹೇಳಿ ಬಹಳ ದಿನಗಳಾಗಿದ್ದವು ಅಲ್ವೇ !  ಇಲ್ಲೊಂದು ಕಥೆ ಕೇಳಿ. ಗೆಳೆಯರೊಬ್ಬರು ಕಳಿಸಿದ್ದು. ಭಾವಾನುವಾದ ನನ್ನದು ಅಷ್ಟೇ 
ಕಾಲೇಜಿನ ತೋಟದಲ್ಲಿ ಅವ್ನು ಗಿಡಗಳಿಗೆ ಪಾತಿ ಮಾಡ್ತಾ ಇದ್ದ. ಜವಾನ ನಂಜಪ್ಪ ಬಂದು ಕರೆದ "ಗೋಪಾಲ, ಪ್ರಿನ್ಸಿಪಾಲರು ಕರೀತಾವ್ರೆ , ಒಸಿ ಆಫೀಸ್ಗೆ ಹೋಗು' ಅಂದ. ಒಂದು ಕ್ಷಣದಲ್ಲೆ ಗೋಪಾಲ ಬೆವೆತು ಹೋದ..ಪ್ರಿನ್ಸಿಪಾಲಮ್ಮ ಸ್ವಲ್ಪ ಕಟ್ಟುನಿಟ್ಟಿನ ಹೆಂಗಸು. ತನ್ನನ್ನು ಕರೆದಿದ್ದಾರೆಂದರೆ ತನ್ನಿಂದ ಏನಾದ್ರೂ ತಪ್ಪಾಗಿದ್ಯಾ ಎಂದು ಒಂದು ವಾರದ, ಒಂದು ತಿಂಗಳ ಹಿಂದಿನ ಕೆಲಸಗಳನ್ನೆಲ್ಲ ಮನದಲ್ಲೇ ತಿರುಗಿಸಿದ ಗೋಪಾಲ!'ಬೇಗ ಹೋಗೋ ಗೋಪಾಲಿ' ಅಂದ ನಂಜಪ್ಪ. ಜೀವವನ್ನ ಕೈಲಿ ಹಿಡಿದು ಗೋಪಾಲ ಆಫೀಸಿಗೆ ಹೋದ. 'ಅಮ್ಮ, ಹೇಳಿ ಕಳಿಸಿದ್ರಿ" ಅಂದ ಹೆದರುತ್ತಲೇ. ಪ್ರಿನ್ಸಿಪಾಲಮ್ಮ ಎಂದಿನ ಕಠಿಣ ದನಿಯಲ್ಲಿ 'ಅಲ್ಲಿರೋ ಪೇಪರ್ ಎತ್ಕೊಂಡು ಓದು' ಅಂದ್ರು.ಇನ್ನೂ ಹೆದರಿದ ಗೋಪಾಲ 'ಅಮ್ಮ ನನಗೆ ಓದೋಕೆ ಬರಕಿಲ್ರ.ನನ್ನಿಂದೇನಾದ್ರು ತ್ಯಪ್ಪಾಗಿದ್ರೆ ಕ್ಷಮಿಸಿ, ಕೆಲ್ಸದಿಂದ ತೆಗಿಬೇಡಿ, ತಿದ್ಕತೀನಿ.ನನ್ನ ಮೊಗಗೆ ಓದೋಕೆ ಇದಕ್ಕಿಂತ ಬ್ಯಾರೇ ಸಾಲೆ ಸಿಕ್ಕಾಕಿಲ್ಲ' ಅತ್ತೆ ಬಿಟ್ಟ. ಪ್ರಿನ್ಸಿಪಾಲಮ್ಮ 'ಅದ್ಯಾಕ್ ಅಷ್ಟೊಂದೆಲ್ಲಾ ಅಂದ್ಕೊಳ್ತೀಯಾ ?ಸ್ವಲ್ಪ ಇರು' ಅಂತ ಇಂಗ್ಲಿಷ್ ಟೀಚರ್ನ ಕರೆದ್ರು.ಅದನ್ನ ಓದೋಕೆ ಹೇಳಿದ್ರು. ಟೀಚರು ಅದನ್ನ ಓದ್ತಾ ಹಾಗೆ ಅರ್ಥ ಹೇಳುತ್ತಾ ಹೋದ್ರು. 
ಈವತ್ತು ಎಂಟನೇ ತರಗತಿಯ ಮಕ್ಕಳಿಗೆ "ಅಮ್ಮನ ದಿನದ" ಬಗ್ಗೆ ಒಂದು ನಿಬಂಧ ಬರೆಯೋಕೆ ಹೇಳಿದ್ವಿ. ನಿಮ್ಮ ಮಗಳು ಬರೆದ ನಿಬಂಧ ಇದು 
"ನಾ ಒಂದು ಕುಗ್ರಾಮದವಳು. ನಮ್ಮೂರಲ್ಲಿ ಈಗ್ಲೂ ಶಿಕ್ಷಣ ಹಾಗು ವ್ಯದ್ಯಕೀಯ ಸೇವೆ ಸಿಗೋದು ಕಡಿಮೆ. ನಮ್ಮಮ್ಮ ನನ್ನನ್ನ ಹೆತ್ತು ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ತೀರಿ ಹೋದಳು.ನನ್ನನ್ನ ಮೊದಲು ಎತ್ಕೊಂಡಿದ್ದು ಅಪ್ಪ. ಅಪ್ಪನ ಮನೆಯವ್ರು ತಾಯಿನ ತಿಂದ್ಕೊಂಡ ಮಗುವನ್ನ(!) ಆಶ್ರಮಕ್ಕೆ ಬಿಟ್ಟು ಮರುಮದುವೆಯಾಗಲು ಅಪ್ಪನಿಗೆ ಹೇಳಿದ್ರು. ಅಪ್ಪ ನನ್ ಮಗಳೇ ನನಗೆ ಎಲ್ಲ ಎಂದು ಮದುವೆ ಆಗಲು ಒಪ್ಪದೇ ಇದ್ದಾಗ. ಆಸ್ತಿಯಲ್ಲಿ ಕವಡೆ ಕಾಸು ಕೂಡ ಸಿಗದೆಂದು ಹೆದರಿಸಿದರು.ಚಿಂತೆ ಮಾಡದ ಅಪ್ಪ ತನ್ನ ಮನೆ, ತನ್ನವರು, ಆಸ್ತಿ, ಎಲ್ಲವನ್ನ ಬಿಟ್ಟು ಇಲ್ಲಿ ಬಂದು ಈ ಶಾಲೆಯಲ್ಲಿ ಮಾಲಿಯಾಗಿ ಸೇರಿ ನನ್ನನ್ನೂ ಇದೇ ಶಾಲೆಗೆ ಸೇರಿಸಿದ್ರು . ತುಂಬಾ ಪ್ರೀತಿಯಿಂದ ಮಮತೆಯಿಂದ ಸಾಕಿದ್ರು. ಯಾರಾದ್ರೂ ಏನಾದ್ರೂ ತಿನ್ನಲು ಕೊಟ್ರೆ ತನಗದು ಇಷ್ಟ ಇಲ್ಲ ಎಂದು ನನಗೆ ತಂದು ಕೊಡ್ತಾ ಇದ್ರು ಅವರ ಇಷ್ಟವಿಲ್ಲ ಎನ್ನುವುದಕ್ಕೆ ಕಾರಣ ನನಗೆ ಹೆಚ್ಚು ಸಿಗಲಿ ಎನ್ನುವುದು ಎಂದು ನಾ ಬೆಳೆಯುತ್ತಾ ಅರಿವಾಗತೊಡಗಿತು!ತನ್ನಿಂದಾದ ಎಲ್ಲವನ್ನೂ ನನಗಾಗಿ ಮಾಡಿದರು. ಅನ್ನಕ್ಕೆ ದಾರಿ, ವಾಸಕ್ಕೆ ಜಾಗ ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಮಗಳಿಗೆ ಶಿಕ್ಷಣ ನೀಡೋ ಈ ಶಾಲೆ ಅಂದ್ರೆ ಅವರಿಗೆ ಪ್ರಾಣ. 
ಅಮ್ಮ ಅಂದ್ರೆ ಕರುಣೆ,ಮಮತೆ, ಪ್ರೀತಿ, ಭರವಸೆ ಅಂತಾರೆ .ಅದೆಲ್ಲ ನಿಜ ಅಂದ್ರೆ ನನ್ನ ಅಪ್ಪನೇ ನನ್ನ ನಿಜವಾದ ಅಮ್ಮ. ಈ ಜಗದ ಶ್ರೇಷ್ಠ ಅಮ್ಮನಾದ ನನ್ನಪ್ಪನಿಗೆ ನನ್ನ ನಮನ. ಅಮ್ಮನ ಬಗ್ಗೆ ಬರಿ ಅಂದ್ರೆ ಅಪ್ಪನ ಬಗ್ಗೆ ಬರೆದ ನಾನು ಫೇಲಾಗಬಹುದೇನೋ?ಆದರೂ ನನಗೆ ಗೊತ್ತಿರೋ ಅಮ್ಮ ನನ್ನ ಅಪ್ಪನೇ!ಅಮ್ಮನಂತಹ ಅಪ್ಪನಿಗೆ ನಮನ " 
ಟೀಚರ್ರು ಓದುವುದನ್ನ ನಿಲಿಸಿದ್ರು. ಕುಸಿದು ಕುಳಿತ ಗೊಪಾಲ ಬಿಕ್ಕಿಬಿಕ್ಕಿ ಅತ್ತ . ಪ್ರಿನ್ಸಿಪಾಲಮ್ಮ ಅವನಿಗೆ ಕುಡಿಯಲು ನೀರಿತ್ತರು. ಹೇಳಿದ್ರು 'ಗೋಪಾಲ, ನಿನ್ನ ಮಗಳಿಗೆ 10/10 ಅಂಕ ಬಂದಿದೆ. ನಾಳೆ ನಮ್ಮ ಶಾಲೆಯಲ್ಲಿ "ಮಾತೃವಂದನಾ ದಿನ ".ನೀನು ನಾಳೆಯ ಮುಖ್ಯ ಅತಿಥಿ ' ಅಂದರು ಬೆನ್ನು ತಟ್ಟುತ್ತಾ . 
ಗೋಪಾಲ ಮೂಕನಾಗಿ ನಿಂತ ಎಂದಿನಂತೆ..ಅಕಳಂತೆ...ಎಂದಿನಂತೆ 
ಅಮ್ಮ ಅಂದ್ರೆ ಕರುಣೆ,ಮಮತೆ, ಪ್ರೀತಿ, ಭರವಸೆ . ಅಮ್ಮನಂತವರು ಅಂದ್ರೆ ಕೂಡ ಅದೇ ಅಲ್ವೇ .. ಅಪ್ಪನೋ, ಅಕ್ಕನೋ, ಅಣ್ಣನೋ, whoever... ಅಂತಹವರಿಗೆ ಒಂದು ನಮನ 
ಮನಸ್ಸೆಲ್ಲಾ ನೀಲಿನೀಲಿ ಆ ಬಾನಿನಂತೆ ))))

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...