Friday 29 May 2015

ಕಥೆ ಹೇಳಿ ಬಹಳ ದಿನಗಳಾಗಿತ್ತು ಅಲ್ವೇ !!
ಇಲ್ಲೊಂದು ಕಥೆ ಇದೆ ಹಂಚಿಕೊಳ್ಳುವಂತಾದ್ದು...
ಒಂದೂರು. ಆ ಊರಲ್ಲಿ ಒಂದು ವಿಚಿತ್ರ ಕಾನೂನು. ಅಲ್ಲಿಯ ರಾಜನನ್ನ ವರ್ಷಕ್ಕೊಮ್ಮೆ ಬದಲಿಸುವ ಕಾನೂನು. ಆ ದಿನ ಯಾರು ಅರಮನೆಯ ಮುಂದೆ ಮೊದಲು ಕಾಣಸಿಗುವರೋ ಅವರೇ ಅಲ್ಲಿನ ರಾಜ. ಹಿಂದಿನ ರಾಜನನ್ನ ದೂರದ ಕಾಡಿನ ಮಧ್ಯೆ ಬಿಟ್ಟು ಬರೋದು. ಅವನು ಹಸಿವಿಗೋ ಕ್ರೂರ ಮೃಗಗಳ ದಾಳಿಗೋ ಸಿಕ್ಕಿ ಸಾಯೋದು ..ಹೀಗೆ ನಡೀತಾ ಇತ್ತು . ಹೀಗೆ  ರಾಜನಾಗೊ ಆಸೆಗೆ ಸಿಕ್ಕಿ ಸತ್ತವರೆಷ್ಟೋ ಗೊತ್ತಿಲ್ಲ ....ಮತ್ತೆ ಕೆಲವರು ಆ ಉಸಾಬರಿಯೇ ಬೇಡ ಅನ್ನೋ ಹಾಗೆ ಇದ್ದರು.
ಒಂದ್ ಸಾರಿ ಇದ್ಯಾವುದೂ ತಿಳಿಯದ ಪರ  ಊರಿನ ಹುಡುಗನೊಬ್ಬ  ಅಲ್ಲಿಗೆ ಬಂದ . ಆ ದಿನ ಅಲ್ಲಿನ ರಾಜನ ಕಡೆಯ ದಿನ .  ಸರಿ ಇವನು ಬಂದ ಕೂಡಲೇ ಇವನನ್ನ ಅರಮನೆಗೆ ಕರೆದುಕೊಂಡು ಹೋಗಿ ರಾಜನನ್ನಾಗಿ ಮಾಡಿದರು. ಇವನಿಗೊ ಆಶ್ಚರ್ಯ. ಕೇಳಿಯೇ ಬಿಟ್ಟ "ಹಿಂದಿನ ರಾಜ ಎಲ್ಲಿ?' ಮಂತ್ರಿ 'ಹೀಗ್ ಹೀಗೆ ' ಅಂತ ಹೇಳಿದ. ಇವನಿಗೆ ಸ್ವಲ್ಪ ಭಯವಾಯ್ತು . ಆದರೂ ಸಾವರಿಸಿಕೊಂಡು 'ನನ್ನ ಆ ಕಾಡಿನ ಮಧ್ಯೆ ಒಮ್ಮೆ ಕರೆದುಕೊಂಡು ಹೋಗಿ' ಅಂದ. ಸರಿ ಕರೆದುಕೊಂಡು ಹೋದರು. ಅವ ಎಲ್ಲಾ ನೋಡಿದ . ಬಂದ ಮೇಲೆ ಮಂತ್ರಿಗೆ ಹೇಳಿದ 'ಆ ಕಾಡಿನ ನಡುವೆ ಒಂದು ಅರಮನೆ ಕಟ್ಟಿಸಿ   ಹಾಗು ಕಾಡಿಗೆ ಹೋಗುವ ಹಾದಿಯಲ್ಲಿ ಅಲ್ಲಲ್ಲಿ ಒಂದಷ್ಟು ತಂಗುದಾಣ ಕಟ್ಟಿಸಿ  ಹಾಗೂ ಬಾವಿ ತೋಡಿಸಿ ' ಅಂದ.  ಮತ್ತೆ ಒಂದು ವರ್ಷ ಹಾಗೆ ಚೆಂದ ರಾಜ್ಯ ಆಳಿದ. ಒಂದು ವರ್ಷ ಆಯ್ತು. ಇವನೂ ಹೊರಡಲು ತಯಾರಾದ. ಮಂತ್ರಿ ಹೇಳಿದ 'ಮಹಾಪ್ರಭು, ಇನ್ನು ಮುಂದೆ  ನೀವೇ  ನಮ್ಮಮಹಾರಾಜರು .. ಇಲ್ಲಿಯವರೆಗೆ ಇದ್ದವರೆಲ್ಲ  ಒಂದಷ್ಟು ದಿನ ರಾಜ ಅನ್ನೋ ಅಹಂನಿಂದ, ಒಂದಷ್ಟು ದಿನ ಮೋಜಿನಿಂದ, ಸ್ವಾರ್ಥದಿಂದ, ಕಡೆ ಕಡೆಗೆ ಸಾವು ಬಂತಲ್ಲಾ ಅನ್ನೋ ಭಯದಿಂದ ಬದುಕಿದರು . ಆದರೆ ಮುಂದಾಲೋಚನೆಯಿಂದ ನಿಮ್ಮನ್ನ ನೀವು ಕಾಪಾಡಿಕೊಂಡಿದಲ್ಲದೆ ನಮ್ಮನ್ನು ಚೆಂದ ನೋಡಿಕೊಂಡ್ರಿ .. ಇನ್ನೂ ನಮ್ಮ ರಾಜ್ಯಕ್ಕೆ ಭಯ ಇಲ್ಲ.. ನಿಮ್ಮನ್ನ ಬದಲಿಸೋ ಅಗತ್ಯ ಇಲ್ಲ ' ಅಂದನು......
ಇದು ಕಥೆ .....ಮತ್ತೇನು ಹೇಳೋ ಅಗತ್ಯ ಇಲ್ಲ ಅಲ್ಲವೇ  ...............

Saturday 16 May 2015

ಹೀಗೊಂದು ಕಥೆ
ನನಗೇ ತಿಳಿಯದೆ ತುಂಬಾ ಪ್ರೀತಿಸಿಬಿಟ್ಟೆ ನಿನ್ನನ್ನ .. ಎಂದೂ ಯಾರನ್ನೂ ಹಚ್ಚಿಕೊಳ್ಳದ ನಾ ನಿನ್ನ ಗೆಳೆತನ ಬಯಸಿದೆ, ನಿನ್ನ ಸಾಂಗತ್ಯ ಅರಸಿದೆ .  ನೀ ಬರುವೆ ಎಂದೊಡನೆ ಮನದ ತುಂಬಾ ಬಾನ ನೀಲಿ .. ನೀ ಬಂದೆ, ನನಗಾಗಿ ಅದೆಷ್ಟೇ  ಶ್ರಮವಾದರೂ ನೀ ಬಂದೆ ..ಅದೆಷ್ಟು ಮಾತು ... ಆಡಿದ ಅಷ್ಟೆಲ್ಲಾ  ಮಾತುಗಳು ಮನದ ಹೊತ್ತಿಗೆಯಲ್ಲಿ ಅಳಿಸಲಾರದೆ ಉಳಿದುಬಿಟ್ಟವು ..  ಮತ್ತೆ ನೀ ಹೋಗಲೇಬೇಕಿತ್ತು....  ನೀ ಹೊರಟೆ ... ಆಡದೆ ಉಳಿದ ಮಾತು ಮೌನದ ಮೊರೆ ಹೊಕ್ಕಿತು ...ಮೌನ ಬದುಕಿನ ಅದೆಷ್ಟೋ ವರುಷಗಳವರೆಗು ಯಾರಿಗೂ ಕಾಣದ ಕಂಬನಿಯಾಗೆ ಉಳಿದುಹೋಯ್ತು .......ಹಾಗೆ ಹಾಗೇ ಉಳಿದುಬಿಟ್ಟೆವು ಭೂಮಿಬಾನಿನಂತೆ ... ಕ್ಷಿತಿಜದ ಅಂಚಲ್ಲಿ ತಾಕಿಯೂ ತಾಕದಂತೆ ....... 

Friday 15 May 2015

ಸೋದರತ್ತೆಗೆ ತಮ್ಮ ಮಗನಿಗೆ ಸೋದರ ಸೊಸೆಯನ್ನ ತರಬೇಕು ಅನ್ನೋ ಅದಮ್ಯ ಆಸೆ .. ಒಂದು ಕಾಲದಲ್ಲಿ ಏನೂ ಸರಿ ಇಲ್ಲದೆ ಇದ್ದಾಗ ತಿರುಗಿ ಕೂಡ ನೋಡದ ಅತ್ತೆ, ಸೋದರಸೊಸೆ ಚೆಂದ ಓದಿ ಚೆಂದ ಇದ್ದಾಳೆ ಎನಿಸಿದಾಗ ಅವಳನ್ನ ತಮ್ಮ ಮಗನಿಗೆ ಮದುವೆಗೆ ಕೇಳಿದರು .. ನಾದಿನಿ 'ಅವಳ ಓದು ಮುಗಿಯಲಿ ಅತ್ತಿಗೆ . ಆಮೇಲೆ ಅವಳ ಇಷ್ಟ' ಎಂದಾಗ ಸೊಸೆ ತನ್ನ ಮಾತು ತೆಗೆಯಲಾರಳು ಎನಿಸಿ ಸುಮ್ಮನಾದರು . ಆದರೆ ಸೋದರಸೊಸೆ ಮತ್ಯಾರನ್ನೊ ಪ್ರೀತಿಸಿ ಅವನನ್ನೇ ಮದುವೆಯಾಗ ಹೊರಟಾಗ ಕೋಪ ಮಾಡಿಕೊಂಡು ಮತ್ತೆ ಮಾತುಬಿಟ್ಟರು. ಒಂದಷ್ಟು ವರುಷಗಳು ಕಳೆದ ಮೇಲೆ ಸೋದರಮಾವ ತೀರ ಹುಷಾರು ತಪ್ಪಿದಾಗ ಮತ್ತೆ ಕುಟುಂಬಗಳು ಒಂದಷ್ಟು ಹತ್ತಿರವಾದವು . ಮಾವ ತೀರಿಹೋದರು . ಅತ್ತೆ ಒಂದಷ್ಟು ಕುಗ್ಗಿಹೋದರು .. ಮಾವ ಸತ್ತ ಒಂದು ವರ್ಷಕ್ಕೆ ಮಗ ರಸ್ತೆ ಅಪಘಾತದಲ್ಲಿ ತೀರಿಹೋದ. ಸೋದರಸೊಸೆಯ ಕಂಡ ಒಡನೆ ಅವಳನ್ನ ತಬ್ಬಿ ಅತ್ತ ಸೋದರತ್ತೆ 'ನೀ ಮದುವೆ ಆಗಿದ್ದರೆ ನನ್ನ ಮಗ ಸಾಯ್ತಾ ಇರಲಿಲ್ಲ !!!ನಿನ್ನ ಮಾಂಗಲ್ಯ ಅವನನ್ನ ಉಳಿಸಿಕೊಳ್ತಾ ಇತ್ತು ' ಅಂತ ಅತ್ತಾಗ ಅದ್ಯಾಕೋ ದಿಗ್ಬ್ರಮೆ... ನೋವು .... ಅಲ್ಲೇ ಇದ್ದ ಮತ್ತೊಬ್ಬ ಸೋದರತ್ತೆ ಆ ಹುಡುಗಿಯ ತಬ್ಬಿ ಆಚೆ ಕರೆದುಕೊಂಡು 'ಸುಮ್ಮನೆ ಬೇಡದ್ದು ತಲೆ ಕೆಡಿಸಿಕೊಳ್ಳಬೇಡ ತಾಯಿ , ಅವಳು ನೋವಲ್ಲಿ ಇದ್ದಾಳೆ ಏನೋ ಮಾತಾಡ್ತಾಳೆ ..ನಿನ್ನ ಮದುವೆ ಆದಾಗ ಹೀಗೆ ಆಗಿದ್ದರೆ ನಿನ್ನ ಕಾಲುಗುಣ ಅಂತ ಇದ್ರು ... ನೀ ಚೆನ್ನಾಗಿದ್ದೀಯ, ಬಂದಿದ್ದೀಯ ,ಅದೇನು ನಿನ್ನ ಕೆಲಸ ಮುಗಿಸಿ ಹೋಗು' ಅಂದ್ರು ......
ಇಂದಿಗೂ ಅರಿವಿಲ್ಲ ನನಗೆ ಯಾವುದು ಸರಿ ಅಂತ .. ಆ ಅತ್ತೆ ಹೇಳಿದ್ದಾ!? ಇಲ್ಲ ಈ ಅತ್ತೆ ಹೇಳಿದ್ದು ಸರಿಯ ಅಂತ .. ಆದರು ಮಾವನ ಮಗ ಒಳ್ಳೆ ಗೆಳೆಯನಾಗಿದ್ದ ಅವನ ಕಳೆದುಕೊಂಡ ನೋವು ಇನ್ನು ಇದೆ ... ಈ ತಿಂಗಳಿಗೆ ಅವನನ್ನ ಕಳೆದುಕೊಂಡು ೮ ವರ್ಷ .... ಅದ್ಯಾಕೋ ನೆನಪಾದ .............

Wednesday 13 May 2015

ಕತ್ತಲ ದಿಟ್ಟಿಸುತ್ತಾ ಕುಳಿತ ಮನದಲ್ಲಿ ನುಗ್ಗಿ ಬರುತ್ತಿದ್ದ ಭಾವಗಳ ಅಲೆಯಲ್ಲಿ ತೇಲಲಾರೆ ಎಂಬಂತೆ ಮುಳುಗಿದ್ದಳು ..ಅವನ ಕೈ ಹಿಡಿದಿದ್ದ ತನ್ನ ಕೈಯಲ್ಲಿ ಅವನ ಕೈ ಇದೆಯೇನೋ  ಎಂಬಂತೆ  ನೋಡುತ್ತಲೇ ಇದ್ದಳು ... ನಿನ್ನ ಬದುಕಿನ ಹೊತ್ತಿಗೆಯಲ್ಲಿ ನನ್ನದೂ ಒಂದು ಪುಟ್ಟ ಪುಟ ಇದೆಯಲ್ಲವೇ ಎಂದು ಕೇಳಬೇಕೆಂದುಕೊಂಡ ಮಾತು ಮರೆತೇಬಿಟ್ಟಿದ್ದಳು ....ಮರೆತೂ ಮರೆಯಲಾರೆ ಎಂಬಂತೆ... ಮತ್ತೆಂದೂ ಸಿಗದೇನೋ ಎಂಬಂತೆ . ಮತ್ತೆ ನಾ ನಿನ್ನ ಹುಡುಕಲಾರೆ ..ಇನ್ನೆಂದೂ ಹುಡುಕಲಾರೆ ಇಲ್ಲೇ ಮನದಾಳದಲ್ಲೇ ಹುದುಗಿರುವ ನಿನ್ನ ಮತ್ತೆಂದೂ ನಾ ಹುಡುಕಲಾರೆ ....ಎಂಬಂತೆ ಕಣ್ಣ ಹನಿಯೊಂದು ಕಣ್ಣ ತುದಿಯಲ್ಲೇ  ಇಂಗಿಹೋಯ್ತು .... ಅವಳ ಕಣ್ಣ ಹನಿ ನೋಡಲಾರದ ಕತ್ತಲು ಮತ್ತಷ್ಟು ಗಾಢವಾಯ್ತು .......... 

Thursday 7 May 2015




ಎಷ್ಟೊಂದು ವರ್ಷಋತುಗಳು ಕಳೆದುಹೋಯ್ತು
ವರುಷಗಳ ಸಾಂಗತ್ಯದಲ್ಲಿ ಗೆಳೆಯ .....
ಒಮ್ಮೊಮ್ಮೆ ಬಿರುಮಳೆಯೊಂದು ಇಳೆಯ ತಣಿಸಿದಂತೆ
ಒಮ್ಮೆ ತುಂತುರುಹನಿಯಾಗಿ ಭುವಿಗಿಳಿದಂತೆ ..
ಕೆಲವೊಮ್ಮೆ  ತಿಳಿಮೋಡ ಸಾಗಿಹೋದಂತೆ ...
ಇನ್ನೊಮ್ಮೆ ಅಲುಗದೆ ನಿಂತ ಸಲಿಲದಂತೆ...
ಮತ್ತೊಮ್ಮೆ ಹರಿವ ನದಿಯಂತೆ ....
ಎಂದೋ ಒಮ್ಮೆ ಭೋರ್ಗರೆವ ಜಲಪಾತದಂತೆ ...
ಬರಿದಾಗದ ಝಾರಿಯಂತೆ ......
ಕಂಡೂಕಾಣದಂತೆ .....
ಕಾಣದೆಯೂ ಕಂಡಂತೆ .....
ಸುಪ್ತ ಮಂದಾಕಿನಿಯಂತೆ ........
ಅದೆಷ್ಟು ವರುಷಗಳು ಸಾಗಿಹೋದವು ಗೆಳೆಯ
ಮೌನ ಸಾಂಗತ್ಯದಲ್ಲಿ  .....

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...