Tuesday 25 October 2016

ಮನೆಯ ಪಕ್ಕ ಒಂದು ಹಿರಿಯ ಗಂಡಹೆಂಡತಿ ಇದ್ದಾರೆ. ಮಕ್ಕಳಿಲ್ಲ . ಗಂಡ ಹಾಲು ಒಕ್ಕೂಟದಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ.. ಅಷ್ಟು ವಯಸ್ಸಾಗಿದ್ದರೂ ಒಂದಿಬ್ಬರು ಮಕ್ಕಳಿಗೆ ಪಾಠ ಹೇಳಿಕೊಡ್ತಾರೆ . ಆ ಹಿರಿಯ ಮಹಿಳೆ ಮನೆಯಲ್ಲೇ ಕುಳಿತು ಒಂದಷ್ಟು ಮಣಿ ಸರ, ಗೆಜ್ಜೆ ವಸ್ತ್ರಗಳನ್ನ ಮಾಡ್ತಾರೆ . ಈಗ್ಲೂ ದಸರೆಯಲ್ಲಿ ರಾಜರಾಣಿ ಗೊಂಬೆಗೆ ಅಲಂಕಾರ ಮಾಡಿಕೊಡ್ತಾರೆ. ಕಾಂಪೌಂಡ್ ಹೊರಗೆ ಗಿಡ ಹಾಕಿದರೆ ಹಸುಗಳನ್ನ "ಹೊಡೆದು" ಓಡಿಸಬೇಕಲ್ಲ ಎಂದು ಹಸುಗಳು ತಿನ್ನದೇ ಉಳಿಸುವ (ದೊಡ್ಡ ಪತ್ರೆ, ತುಳಸಿ) ಗಿಡಗಳನ್ನ ಹಾಕಿದ್ದಾರೆ. ಗಂಡನೋ ಹೆಂಡತಿಯೋ ಅವರ ಆರೋಗ್ಯದ ಆಧಾರದ ಮೇಲೆ ಯಾರೋ ಒಬ್ಬರು ಬಾಗಿಲು ಗುಡಿಸಿ, ಒಂದು ಸಣ್ಣ ಬಕೆಟ್ ಅಲ್ಲಿ ನೀರು ಹಿಡಿದು ಚುಮುಕಿಸಿದರೆ ಆಕೆ ರಂಗೋಲಿ ಹಾಕ್ತಾರೆ. ಮತ್ತೊಂದು ಬಕೆಟ್ ನೀರು ಗಿಡಗಳಿಗೆ ಹಾಕ್ತಾರೆ (ನಮ್ಮ ಕಡೆ ಕೆಲವರು ಪೈಪ್ ಹಿಡಿದು ನೀರು ಹಾಕೋಕೆ ಶುರು ಮಾಡಿದ್ರೆ ಕಾವೇರಿ ಬಾಗಿಲಲ್ಲೇ ಹರೀತಾಳೆ). ಪ್ರತಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಮಾಡ್ಕೊಂಡು ಹೋಗ್ತಾರೆ. 'ಸುನೀತಾ , ಆಮೇಲೆ ಬಂದು ಕುಂಕುಮ ತಗೊಂಡ್ ಹೋಗಿ ಅಂತ ಕರೀತಾರೆ' . ಎಂದೂ ಯಾರು ದೂರುವಂತೆ ನಡೆದುಕೊಂಡಿಲ್ಲ ಮತ್ತೊಬ್ಬರನ್ನು ದೂರೋದು ಇಲ್ಲ .ವಾರಕ್ಕೆರಡು ಬಾರಿ ಮನೆಗೆ ಅಂತ ಮಾರ್ಕೆಟ್ ಇಂದ ಹೂ ತಂದಾಗ ಒಂದು ಹಿಡಿ ಹೂ ಕೊಟ್ರೆ ಆ ಹಿರಿಯಾಕೆ ಖುಷಿಯಿಂದ 'ರೇಟ್ ಕಮ್ಮಿ ಇದ್ದಾಗ ನಮಗೂ ಒಂದ್ ಕಾಲ್ ಕೆಜಿ ತಂದ್ ಬಿಡ್ರಪ್ಪಾ ' ಅಂತಾರೆ. ಅವರಷ್ಟಕ್ಕೆ ಅವರು 'ಸುಂದರವಾಗಿ' ಬದುಕುತ್ತಾ ಇದ್ದಾರೆ.ನೋಡಿದವರು "ಬದುಕಲು ಕಲಿಯಿರಿ" ಅನ್ನೋವಂತೆ ಬದುಕುತ್ತಾ ಇದ್ದಾರೆ.
ಮನೆಯ ಮುಂದಿನ ರಸ್ತೆ ಒಂದಷ್ಟು ದಿನಗಳಿಂದ ಹಳ್ಳ ಬಿದ್ದಿತ್ತು , ಅದ್ಯಾಕೋ ಗೊತ್ತಿಲ್ಲ ಸರಿ ಮಾಡಿಸಿದಷ್ಟು ನಮ್ಮ ಒಂದೆರಡು ಮನೆಗಳ ಮುಂದೆ ಯಾವಾಗ್ಲೂ ಹಳ್ಳವೆ ! ವಾಕಿಂಗ್ ಹೋಗಿ ಹಾಲು ತರುವಾಗೆಲ್ಲಾ ಹಾದಿಬದಿಯಲ್ಲಿ ಕಾಣೋ ದೊಡ್ಡ ಕಲ್ಲು ಗಾರೆಯ ತುಂಡುಗಳನ್ನ ಕೈಲಿ ಹಿಡಿದು ತಂದು ಆ ಹಳ್ಳಕ್ಕೆ ಹಾಕ್ತಾ ಇದ್ರು ಆ ಹಿರಿಯ. ಆ ಹೊತ್ತಲ್ಲಿ ಬಾಗಿಲಿಗೆ ನೀರು ಹಾಕುವ ನಾನು 'ಅಯ್ಯೋ ಅಂಕಲ್ , ಎಷ್ಟ್ ಹಾಕಿದ್ರು ಅಷ್ಟೇ ಬಿಡಿ ನಮ ರೋಡು ಉದ್ದಾರ ಆಗೋದಿಲ್ಲ' ಅಂತ ಹೇಳ್ತಾ ಇದ್ದೆ . ಅವರೂ ನಗ್ತಾ ಸಾಗ್ತಾ ಇದ್ರು . ಈಗ ಹಳ್ಳ ತುಂಬಿದೆ ..! ಅಷ್ಟೆಲ್ಲ ನೀರು ನಿಲ್ಲೋದಿಲ್ಲ ..
ಆದ್ರೂ ಅವರ ಬದುಕಿನ ಬಗ್ಗೆ ಅವರ ಆಸಕ್ತಿ, ಶಿಸ್ತು , ಬದುಕನ್ನ ನೋಡುವ ಆಪ್ಟಿಮಿಸಂ.. "ಬದುಕಿಗೆ ಗುರಿ ಬೇಕು ನಮ್ಮ ಮಕ್ಕಳ್ಳನ್ನ ಚೆನ್ನಾಗಿ ಬೆಳೆಸೋದೇ ನಮ್ಮ ಗುರಿ ಅಂತ ಸ್ಲೋಗನ್ ಹೇಳ್ಕೊಳ್ತಾ ಬದುಕುವುದಕ್ಕೆ ಯಾವುದೋ ಒಂದು ಆಸರೆ ಬೇಕು, ಗುರಿ ಬೇಕು ' ಅಂತ ಅಂದ್ಕೊಳ್ತಾ ಒಂದು false ಭ್ರಮೆಯಲ್ಲಿ ಬದುಕುವ ನಮಗೆ (ನನಗೆ ನನ್ನ ಗಂಡನಿಗೆ), ನಮ್ಮಂಥವರಿಗೆ ಬದುಕಲು ಕಲಿಯಿರಿ ಎಂದು ಹೇಳುವಂತೆ .... ಬದುಕೋದಕ್ಕೆ ಕಾರಣವೇನು ಬೇಡ ಚೆನ್ನಾಗಿ ಬದುಕೋದೇ ಒಂದು ಖುಷಿ ಅನಿಸೋ ಹಾಗೆ ...
ಮನಸ್ಸು ನೀಲಿನೀಲಿ ...ಒಂದೆರಡು ಹನಿ ಬಿದ್ದರೆ ಸಾಕು ಕಾಮನಬಿಲ್ಲನ್ನು ಮೂಡಿಸುವೇ ಎನ್ನುವ ಸೂರ್ಯಕಿರಣದಂತೆ

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...