Monday 27 July 2015

ಅದೆಷ್ಟು ಬಾರಿ 
ಬಿದ್ದಲ್ಲೇ ಬಿದ್ದು ಒಡೆದು ಹೋಗುವೆ ಹುಚ್ಚು ಮನವೇ ...... 
ಕಲೆಗಳು ಮಾಗುವ ಮೊದಲೇ ಮೂಡುವ ಹಸಿ ಗಾಯಗಳು 
ಕಣ್ಣಿಗೆ ಕಾಣುವಂತಿದ್ದರೆ 
ಬೀಳದಂತೆ ಎಚ್ಚರಿಸುತ್ತಿದ್ದೆನೇನೋ .......
'ಅಮ್ಮ, ಅವ್ಳೇ ಫಸ್ಟ್ ಮಾತಾಡಿಸಿದ್ದು ನಾನಲ್ಲ , ನಾ ಹೇಳಲಿಲ್ವ ನಾ ಸೋಲೋದಿಲ್ಲ ಅಂತ' ಮಗಳು ನಗುತ್ತಾ ಹೇಳಿದಾಗ ಮನಸ್ಸು ಎತ್ತಲೋ ಹೋಯಿತು ... ಚಿಕ್ಕವಳಿದ್ದಾಗ 'ನಾ ತಪ್ಪೇ ಮಾಡಿಲ್ಲ , ನಾ ಯಾಕೆ ಸೋಲಲಿ , ನಾ ಯಾಕೆ ಫಸ್ಟ್ ಮಾತಾಡಲಿ .......' ಅನ್ನೋ ಹಠ ಈಗೆಲ್ಲ ಇಲ್ಲವೇ ಇಲ್ಲ!! ಪರಿಸ್ಥಿತಿಗೆ ಅನುಗುಣವಾಗಿ ಸೋಲೋದಕ್ಕೆ ಮನಸ್ಸು ಹೊಂದಿಕೊಂಡು ಬಿಟ್ಟಿದೆ....ಅಮ್ಮ, ತಮ್ಮ, ಅತ್ತೆ, ಗಂಡ, ಮಕ್ಕಳು, ಮೈದುನಂದಿರು , ಕೆಲವು ಗೆಳೆಯ ಗೆಳತಿಯರು ....'ನನ್ನ'ನ್ನ ಸೋಲಿಸಿದ ಪಟ್ಟಿಗೆ ಸೇರುತ್ತಾರೆ ....ಅವರು ದೊಡ್ಡವರು ಅಲ್ವ ಅವರ ಹತ್ರ ಏನ್ ನಿನ್ನ ಹಠ ಅಂತ ಒಮ್ಮೆ, ನೀ ದೊಡ್ಡವಳು ಅಲ್ವ ಸಣ್ಣವರ ಹತ್ರ ಏನು ನಿನ್ನ ಹಠ ಅಂತ ಮತ್ತೊಮ್ಮೆ, ನಿನ್ನವರೆ ಅಲ್ವ ಅವರ ಬಳಿ ಏನು ನಿನ್ನ ಹಠ ಅಂತ ಇನ್ನೊಮ್ಮೆ ... ಹೀಗೆ ಸೋಲುತ್ತಾ ಹೋಗುವ ಮನಸ್ಸು ಪ್ರೀತಿಯ ಗೆದ್ದ ಮೇಲೆ ಎಲ್ಲೋ ಒಂದು ಕಡೆ ನಾ ಸೋತಿಲ್ಲ ಅನ್ನೋ ಹಂತ ತಲುಪಿದೆ ! ಕೆಲವೊಮ್ಮೆ ಇಗೋಗೆ ಏಟಾಗಿದ್ದು ನಿಜವಾದರೂ ಅದು ನನ್ನ uprise ಗೆ ಕಾರಣವಾಗಿದ್ದು ಹೌದು !!!
ಗೆದ್ದ ಗೆಲುವೆಲ್ಲ ಗೆಲುವಲ್ಲ ........ ಸೋತ ಸೋಲೆಲ್ಲ ಸೋಲೂ ಅಲ್ಲ ಅನ್ನೋ ಅಮ್ಮನ ಮಾತು ಯಾವಾಗ್ಲೂ ಮನಸ್ಸಲ್ಲಿ ಎವರ್ಗ್ರೀನ್ .... ಆಗೆಲ್ಲ ಮನಸ್ಸು ಮತ್ತದೇ ನೀಲಿ ನೀಲಿ ಬಾನು ......ಹಾಗೆ ಸುಮ್ಸುಮ್ನೆ ಬರೆಯ ಬೇಕು ಅನಿಸಿತು ಪುಟ್ಟಿಯ ಮಾತಿಂದ ...... :)))))
ಕರಿ ಮೋಡ ಸುರಿಸುವ ಬಿರುಮಳೆ
ಬಿಳಿ ಮೋಡ ಸುರಿಸುವ ತುಂತುರು ಹನಿ 
ಎರಡೂ ನಿರಭ್ರ ನಿರ್ಮಲ ...
ಮತ್ತೆ ನಾನೇಕೆ ಹೀಗೆ 
ಹೀಗೊಮ್ಮೆ ಹಾಗೊಮ್ಮೆ ...... 
ವರುಣನನ್ನ ವರುಷಗಳಿಂದ ಪ್ರೀತಿಸಿದರೂ
ಕಲಿಯಲಾರದೆ ಹೋದೆ ಪಾಠ .......
ಕತ್ತಲ ದಿಟ್ಟಿಸುತ್ತಾ ಕುಳಿತ ಮನದಲ್ಲಿ ನುಗ್ಗಿ ಬರುತ್ತಿದ್ದ ಭಾವಗಳ ಅಲೆಯಲ್ಲಿ ತೇಲಲಾರೆ ಎಂಬಂತೆ ಮುಳುಗಿದ್ದಳು ..ಅವನ ಕೈ ಹಿಡಿದಿದ್ದ ತನ್ನ ಕೈಯಲ್ಲಿ ಅವನ ಕೈ ಇದೆಯೇನೋ ಎಂಬಂತೆ ನೋಡುತ್ತಲೇ ಇದ್ದಳು ... ನಿನ್ನ ಬದುಕಿನ ಹೊತ್ತಿಗೆಯಲ್ಲಿ ನನ್ನದೂ ಒಂದು ಪುಟ್ಟ ಪುಟ ಇದೆಯಲ್ಲವೇ ಎಂದು ಕೇಳಬೇಕೆಂದುಕೊಂಡ ಮಾತು ಮರೆತೇಬಿಟ್ಟಿದ್ದಳು ....ಮರೆತೂ ಮರೆಯಲಾರೆ ಎಂಬಂತೆ... ಮತ್ತೆಂದೂ ಸಿಗದೇನೋ ಎಂಬಂತೆ . ಮತ್ತೆ ನಾ ನಿನ್ನ ಹುಡುಕಲಾರೆ ..ಇನ್ನೆಂದೂ ಹುಡುಕಲಾರೆ ಇಲ್ಲೇ ಮನದಾಳದಲ್ಲೇ ಹುದುಗಿರುವ ನಿನ್ನ ಮತ್ತೆಂದೂ ನಾ ಹುಡುಕಲಾರೆ ....ಎಂಬಂತೆ ಕಣ್ಣ ಹನಿಯೊಂದು ಕಣ್ಣ ತುದಿಯಲ್ಲೇ ಇಂಗಿಹೋಯ್ತು .... ಅವಳ ಕಣ್ಣ ಹನಿ ನೋಡಲಾರದ ಕತ್ತಲು ಮತ್ತಷ್ಟು ಗಾಢವಾಯ್ತು ..........


ITI ಓದಿದವರಿಗೆ ಕೆಲ್ಸ ಸಿಗೋದು(ಕೊಡೋದು) ಸುಲಭ , ಅದೇ ಈ MBA M Tec ಮಾಡಿದವರಿಗೆ ಸಿಗೋದು ಕಷ್ಟ ಕಣೆ ಅಂದ ಒಂದು ಶಾಲೆ ನಡೆಸುತ್ತ ಇರೋ ಗೆಳೆಯ .. ನಿಜವೇ , ಸಣ್ಣ ಪುಟ್ಟ ಓದಿಗೆ ಈಗ ಹೇಗಾದ್ರು ಕೆಲ್ಸ ಸಿಗುತ್ತೆ.. ಸಿಗುತ್ತೆ ಅನ್ನೋದಕ್ಕಿಂತ ಅವರಿಗೆ ತಿಳಿದ ಯಾವ ಕೆಲಸ ಆದ್ರೂ ಮಾಡಬಹುದು ... ಆದರೆ ಅದೆಷ್ಟೋ ವರುಷಗಳನ್ನ invest ಮಾಡಿ ಅದೆಷ್ಟೋ ದುಡ್ಡು ಖರ್ಚು ಮಾಡಿ , ಅದಕ್ಕೆ ತಕ್ಕಕೆಲ್ಸ ಸಿಗದೇ ಇದ್ರೆ ಬಲು ಹಿಂಸೆ ಅನಿಸಿಬಿಡುತ್ತದೆ.. ತಮ್ಮ ವಿದ್ಯೆಗೆ ತಕ್ಕ ಕೆಲಸ ಸಿಗದ ಮಕ್ಕಳು ಕೆಲವೊಮ್ಮೆ ಡಿಪ್ರೆಸ್ ಕೂಡ ಆಗ್ತಾರೆ , ಮನೆಯಲ್ಲಿ ಅಪ್ಪ ಅಮ್ಮ ಕೂಡ ತುಂಬಾ ಅಪೇಕ್ಷೆ ಇಟ್ಟು ಓದಿಸಿದ ಮಗ/ಳು ಹೀಗೆ ಮನೆಯಲ್ಲೇ ಉಳಿದರಲ್ಲ ನೋಯುತ್ತಾರೆ .. ಕಣ್ಣ ಮುಂದೆಯೇ ಕೆಲವು ಪೋಷಕರ ಮಕ್ಕಳ ಸಂಕಟ ಕಂಡಾಗ ಯಾಕೋ ತುಂಬಾ ಹಿಂಸೆ .. ಕೆಲವು ಕಡೆ ಓದಿದ್ದಾರೆ ಅಂತಲೇ ಕೆಲಸ ಕೊಡದೆ ಉಳಿದಾಗ ಆ ಮಕ್ಕಳ ಮನಸಲ್ಲಿ ಮೂಡೋ ಅಸಹನೆ ಹೇಳಲು ಅಸಾಧ್ಯ ...ಕ್ಯಾಂಪಸ್ ಸೆಲೆಕ್ಷನ್ ಇರೋ ಕಾಲೇಜ್ ಹುಡುಕು ಅಂತ ಹೇಳೋ ಅನೇಕರಿಗೆ ಕ್ಯಾಂಪಸ್ ಸೆಲೆಕ್ಷನ್ ಇರೋ ಕಾಲೇಜ್ಗಳಲ್ಲಿ ಕೊಡಬೇಕಾದ ಹಣದ ಬಗ್ಗೆ ಅರಿವು ಕಡಿಮೆ .... ಸರಕಾರೀ ಕಾಲೇಜ್ಗಳಲ್ಲಿ ಸಹ ಬಲು ಚೆಂದ ಓದೊ ಹುಡುಗರು ಇರ್ತಾರೆ ... ಸರಕಾರೀ ಕಾಲೇಜ್ಗಳಲ್ಲಿ ಸಹ ಕ್ಯಾಂಪಸ್ ಸೆಲೆಕ್ಷನ್ ಯಾಕೆ ಇಡಬಾರದು??... ಹಾಗೆ ಆದರೆ ಅದೆಷ್ಟೋ ಮಕ್ಕಳ ಭವಿಷ್ಯ ಬರೆದಂತೆ ಆಗುತ್ತದೆ ...ಬೇಡದ ಸಲ್ಲದ ರಾಜಕೀಯ ಮಾಡೋ ನಾಯಕರು ಇಂತಹ ಸಣ್ಣ ಪುಟ್ಟ ವಿಷಯಗಳ ಕಡೆ ಗಮನಿಸಿದ್ರೆ ಅದೆಷ್ಟೋ ಜನಕ್ಕೆ ಉಪಯೋಗವಾಗುತ್ತೆ .......
ಇಬ್ಬರು MBA ಓದಿರೋ ಮಕ್ಕಳು ಒಂದು ಸಣ್ಣ Montessori ಅಲ್ಲಿ ಬರಿ ೭ ಸಾವಿರಕ್ಕೆ ಕೆಲ್ಸಕ್ಕೆ ಒಪ್ಪಿಕೊಂಡರು ಅನ್ನುವಾಗ ಯಾಕೋ ....................
ಸೋದರತ್ತೆಗೆ ತಮ್ಮ ಮಗನಿಗೆ ಸೋದರ ಸೊಸೆಯನ್ನ ತರಬೇಕು ಅನ್ನೋ ಅದಮ್ಯ ಆಸೆ .. ಒಂದು ಕಾಲದಲ್ಲಿ ಏನೂ ಸರಿ ಇಲ್ಲದೆ ಇದ್ದಾಗ ತಿರುಗಿ ಕೂಡ ನೋಡದ ಅತ್ತೆ, ಸೋದರಸೊಸೆ ಚೆಂದ ಓದಿ ಚೆಂದ ಇದ್ದಾಳೆ ಎನಿಸಿದಾಗ ಅವಳನ್ನ ತಮ್ಮ ಮಗನಿಗೆ ಮದುವೆಗೆ ಕೇಳಿದರು .. ನಾದಿನಿ 'ಅವಳ ಓದು ಮುಗಿಯಲಿ ಅತ್ತಿಗೆ . ಆಮೇಲೆ ಅವಳ ಇಷ್ಟ' ಎಂದಾಗ ಸೊಸೆ ತನ್ನ ಮಾತು ತೆಗೆಯಲಾರಳು ಎನಿಸಿ ಸುಮ್ಮನಾದರು . ಆದರೆ ಸೋದರಸೊಸೆ ಮತ್ಯಾರನ್ನೊ ಪ್ರೀತಿಸಿ ಅವನನ್ನೇ ಮದುವೆಯಾಗ ಹೊರಟಾಗ ಕೋಪ ಮಾಡಿಕೊಂಡು ಮತ್ತೆ ಮಾತುಬಿಟ್ಟರು. ಒಂದಷ್ಟು ವರುಷಗಳು ಕಳೆದ ಮೇಲೆ ಮಾವ ತೀರ ಹುಷಾರು ತಪ್ಪಿದಾಗ ಮತ್ತೆ ಕುಟುಂಬಗಳು ಒಂದಷ್ಟು ಹತ್ತಿರವಾದವು . ಮಾವ ತೀರಿಹೋದರು . ಅತ್ತೆ ಒಂದಷ್ಟು ಕುಗ್ಗಿಹೋದರು .. ಮಾವ ಸತ್ತ ಒಂದು ವರ್ಷಕ್ಕೆ ಮಗ ರಸ್ತೆ ಅಪಘಾತದಲ್ಲಿ ತೀರಿಹೋದ. ಸೋದರಸೊಸೆಯ ಕಂಡ ಒಡನೆ ಅವಳನ್ನ ತಬ್ಬಿ ಅತ್ತ ಸೋದರತ್ತೆ 'ನೀ ಮದುವೆ ಆಗಿದ್ದರೆ ನನ್ನ ಮಗ ಸಾಯ್ತಾ ಇರಲಿಲ್ಲ !!!ನಿನ್ನ ಮಾಂಗಲ್ಯ ಅವನನ್ನ ಉಳಿಸಿಕೊಳ್ತಾ ಇತ್ತು ' ಅಂತ ಅತ್ತಾಗ ಅದ್ಯಾಕೋ ದಿಗ್ಬ್ರಮೆ... ನೋವು .... ಅಲ್ಲೇ ಇದ್ದ ಮತ್ತೊಬ್ಬ ಸೋದರತ್ತೆ ಆ ಹುಡುಗಿಯ ತಬ್ಬಿ ಆಚೆ ಕರೆದುಕೊಂಡು 'ಸುಮ್ಮನೆ ಬೇಡದ್ದು ತಲೆ ಕೆಡಿಸಿಕೊಳ್ಳಬೇಡ ತಾಯಿ , ಅವಳು ನೋವಲ್ಲಿ ಇದ್ದಾಳೆ ಏನೋ ಮಾತಾಡ್ತಾಳೆ ..ನಿನ್ನ ಮದುವೆ ಆದಾಗ ಹೀಗೆ ಆಗಿದ್ದರೆ ನಿನ್ನ ಕಾಲುಗುಣ ಅಂತ ಇದ್ರು ... ನೀ ಚೆನ್ನಾಗಿದ್ದೀಯ, ಬಂದಿದ್ದೀಯ ,ಅದೇನು ನಿನ್ನ ಕೆಲಸ ಮುಗಿಸಿ ಹೋಗು' ಅಂದ್ರು ......
ಇಂದಿಗೂ ಅರಿವಿಲ್ಲ ನನಗೆ ಯಾವುದು ಸರಿ ಅಂತ .. ಆ ಅತ್ತೆ ಹೇಳಿದ್ದಾ!? ಇಲ್ಲ ಈ ಅತ್ತೆ ಹೇಳಿದ್ದು ಸರಿಯ ಅಂತ .. ಆದರು ಮಾವನ ಮಗ ಒಳ್ಳೆ ಗೆಳೆಯನಾಗಿದ್ದ ಅವನ ಕಳೆದುಕೊಂಡ ನೋವು ಇನ್ನು ಇದೆ ... ಈ ತಿಂಗಳಿಗೆ ಅವನನ್ನ ಕಳೆದುಕೊಂಡು ೮ ವರ್ಷ .... ಅದ್ಯಾಕೋ ನೆನಪಾದ .............
ಅವಳು ಹೇಳಿದ ಕಥೆ ..... 
ನನಗೇ ತಿಳಿಯದೆ ತುಂಬಾ ಪ್ರೀತಿಸಿಬಿಟ್ಟೆ ಅವನನ್ನ .. ಎಂದೂ ಯಾರನ್ನೂ ಹಚ್ಚಿಕೊಳ್ಳದ ನಾ ಅವನ ಗೆಳೆತನ ಬಯಸಿದೆ, ಅವನ ಸಾಂಗತ್ಯ ಅರಸಿದೆ . ಅವನು ಬರುವ ಎಂದೊಡನೆ ಮನದ ತುಂಬಾ ಬಾನ ನೀಲಿ .. ಅವ ಬಂದ, ನನಗಾಗಿ ಅದೆಷ್ಟೇ ಶ್ರಮವಾದರೂ ಬಂದ ..ಅದೆಷ್ಟು ಮಾತು ... ಆಡಿದ ಅಷ್ಟೆಲ್ಲಾ ಮಾತುಗಳು ಮನದ ಹೊತ್ತಿಗೆಯಲ್ಲಿ ಅಳಿಸಲಾರದೆ ಉಳಿದುಬಿಟ್ಟವು .. ಮತ್ತೆ ಅವನು ಹೋಗಲೇಬೇಕಿತ್ತು.......ಹೊರಟ ... ಆಡದೆ ಉಳಿದ ಮಾತು ಮೌನದ ಮೊರೆ ಹೊಕ್ಕಿತು ...ಮೌನ ಬದುಕಿನ ಅದೆಷ್ಟೋ ವರುಷಗಳವರೆಗು ಯಾರಿಗೂ ಕಾಣದ ಕಂಬನಿಯಾಗೆ ಉಳಿದುಹೋಯ್ತು .......ಹಾಗೆ ಹಾಗೇ ಉಳಿದುಬಿಟ್ಟೆವು ಭೂಮಿಬಾನಿನಂತೆ ... ಕ್ಷಿತಿಜದ ಅಂಚಲ್ಲಿ ತಾಕಿಯೂ ತಾಕದಂತೆ .......
ಪುಟ್ಟಿನ ರಜ ಅಂತ ಒಂದೆರಡು ದಿನ ಮೈದುನನ ಮನೆಗೆ ಕಳಿಸಿದ್ವಿ . ಈವತ್ತು ಬಂದ್ಲು . ಬಂದ ಮೇಲೆ 'mom, ನಿನ್ನ ಸಕ್ಕತ್ ಬೈಕೊಂಡೆ ಕಣೆ ಕುಳ್ಳಿಮಾ' ಅಂದ್ಲು . ಇವಳದ್ದು ಇದ್ದಿದ್ದೆ ಎಲ್ಲೂ ಹೋಗೋದಿಲ್ಲ , ಕಳಿಸಿದ ಸಿಟ್ಟಿಗೆ ಹೇಳ್ತಾ ಇದ್ದಾಳೆ ಅಂತ 'ಅದ್ಯಾಕ್ ಮಗ ' ಅಂದೆ 'ಅಲ್ಲ ಕಣಮ್ಮ ಚಿಕ್ಕಪ್ಪನ ಮನೆಯಲ್ಲಿ ಬೇರೆ ಬಕೆಟ್ಗೆ ನೀರು ಮಿಕ್ಸ್ ಮಾಡಿಕೊಂಡು ಸ್ನಾನ ಮಾಡಬೇಕು , ನನಗೆ ನೀ ಅದೆಲ್ಲ ಹೇಳೇ ಕೊಟ್ಟಿಲ್ಲ , wat maa uu , ಆಮೇಲೆ ಆಂಟಿ ಬಂದು 'ಅಷ್ಟೂ ಬರೋಲ್ವಾ ಪುಟ್ಟಿ ಅಂತ"ನೀರು ಮಿಕ್ಸ್ (ತೋಡಿ) ಮಾಡಿಕೊಟ್ರು " ಅಂದ್ಲು !!!!!!!!!!!!!!!.......ಹಂಡೆ ಓಲೆ ಅಂದ್ರೆ ಏನೂ ಅಂತಲೇ ಮರೆತು ಹೋಗ್ತಾರೇನೋ ಇಂದಿನ generationuuuuu.............!!!!
ಈ ಫೇಸ್ಬುಕ್ ಅನ್ನೋ ಫೇಸ್ಬುಕ್ ಯಾರಿಗೆ ಏನೋ ಗೊತ್ತಿಲ್ಲ ಆದರೆ ತುಂಬಾನೇ home-tied ಆಗಿದ್ದ ನನಗೆ ಒಂದಷ್ಟು ಒಳ್ಳೆ ಗೆಳೆತನಗಳನ್ನ ಕೊಟ್ಟಿದೆ . ಕೆಲವಂತೂ ಅದೆಷ್ಟೋ ವರುಷಗಳ ಬಂಧುತ್ವವೇನೋ ಅನ್ನೋ ಅಷ್ಟು . ಕೆಲವು ಹಿರಿಯರು ಕೆಲವು ಕಿರಿಯರು ಮನೆಗೆ ಸಹ ಬಂದುಹೋಗೊ ಅಷ್ಟು ಆತ್ಮೀಯರಾಗಿದ್ದಾರೆ . ಒಂದು ಕಾಲದಲ್ಲಿ ನನ್ನ ಗಂಡ 'ಮೊಬೈಲ್ ತಗೋಳೋದಿಲ್ಲ ಕಣಮ್ಮ , ನನ್ನ ಫ್ರೆಂಡ್ಸ್ ಫೋನ್ ಮಾಡಿದ್ರೆ ನೀ ಬೇಸರ ಮಾಡಿಕೊಳ್ತೀಯ , ಅಷ್ಟು ಫ್ರೆಂಡ್ಸ್ ನನಗೆ ' ಅಂತ ಇದ್ದವನು ಈಗ ' ಮಗ ಇವಳಿಗೆ ಸೆಲ್ ಕೊಡಿಸಿದ್ದೆ ತಪ್ಪು ನೋಡು, ನನಗಿಂತ ಜಾಸ್ತಿ ಫ್ರೆಂಡ್ಸ್ ಇವಳಿಗೆ ಇದ್ದಾರೆ "ಅನ್ನೋ ಹಾಗೆ ಫೇಸ್ಬುಕ್ ಗೆಳೆತನ ನೀಡಿದೆ , Not that ಕೆಟ್ಟ ಅನುಭವಗಳೇ ಇಲ್ಲ ಅಂತಲ್ಲ . ಕೆಲವನ್ನು ಹಿರಿಯ ಕಿರಿಯ ಮಿತ್ರರು ಮತ್ತೆ ಕೆಲವನ್ನ ನಾನೇ ಬಗೆಹರಿಸಿಕೊಂಡಿದ್ದೇನೆ.
ಇಷ್ಟೆಲ್ಲಾ ಪೀಠಿಕೆ ಯಾಕೆ ಅಂದ್ರ? ಈ ಫೇಸ್ಬುಕ್ ಒಬ್ಬ ಚೆಂದದ ಮಗನಂತ ಗೆಳೆಯನನ್ನ ಕೊಟ್ಟಿದೆ . ಅದೆಷ್ಟು ಮುಗ್ದ ಚೆಂದ ಅಂದ್ರೆ... i simply admire him. ಒಬ್ಬ ಇಂಜಿನಿಯರ್ ಹುಡುಗ ೨೦-೨೫ ಸಾವಿರ ಸಂಬಳ ತೆಗೆಯೋ ಹುಡುಗ , ಬೆಂಗಳೂರಿನಿಂದ ಅವರ ಅಮ್ಮ ಕೊಟ್ರು ಅಂತ ಉಪ್ಪಿನಕಾಯಿ, ತೊಕ್ಕು ಎಲ್ಲ ಕವರ್ ಅಲ್ಲಿ ಹಿಡಿದು ಬೆಳಿಗ್ಗೆಯಿಂದ ಸಂಜೆಯವರೆಗೂ ಮೈಸೂರಿನ ಅವನ ಕೆಲಸ ಮುಗಿಸಿ , ಸಂಜೆ ಮಳೆಯಲ್ಲಿ ಮನೆಗೆ ಬಂದು 'ಇದು ನೋಡು ನಿನಗೆ ' ಅಂತ ತಂದಾಗ ಮನಸ್ಸು ಆ ಸುರಿದ ಮಳೆಯ ನಂತರದ ಬಾನಿನಂತೆ ... ಇನ್ನು ಸ್ಕೂಲ್ ಕಾಲೇಜ್ ಹೋಗೊ ನನ್ನ ಮಕ್ಕಳು ಸಹ ಹಾಗೆ ಹಿಡಿದು ತರೋದಿಲ್ಲವೇನೋ :)))Feeling Loved and blessed:)))
ನನ್ನ ಮೊಬೈಲ್ ಮಕ್ಕಳು ತೆಗೆದುಕೊಂಡು pattern lock ಜಾಮ್ ಮಾಡಿ ಬಿಟ್ಟಿದ್ರು. ಮಗ ಬೈದ 'ಒಂದು ಮೊಬೈಲ್ ಇಟ್ಕೊಳ್ಳೋಕೆ ಬರೋಲ್ಲ ಏನಮ್ಮ್ಮ ...." ಸುಮ್ಮನೆ ಕೇಳಿಸಿಕೊಂಡೆ , ಅವನೇ ಸರಿ ಮಾಡಿ ಕೊಟ್ಟ.... 
ಮೊದಲೆಲ್ಲ ಒಂದು ಸಣ್ಣ ಕಾರಣಕ್ಕೆ ಸಿಟ್ಟುಗೊಳ್ಳುತ್ತಿದ್ದ ನಾನು ಈಗ 'ಯಾರಾದ್ರೂ ಸರಿ ಮಾಡಿಕೊಡ್ರೋ' ಅಂದೆನೇ ಹೊರತು ಹಾಗೆ ಮಾಡಿದ್ದು ಯಾರು ಅಂತಲೇ ಆಗಲಿ , ಯಾಕೆ ಅಂತಲೇ ಆಗಲಿ ಕೇಳಲಿಲ್ಲ ... ನನಗೇ ಆಶ್ಚರ್ಯ ಬಹುಶಃ,ನನ್ನ ಮನಸ್ಸು ತುಂಬಾ ರೋಸಿರಬೇಕು... ಇಲ್ಲಾ ತುಂಬಾ ಸಮಾಧಾನ ಕಲಿತಿರಬೇಕೆನೊ ...... ಇಲ್ಲಾ ಪ್ರಾಯಶಃ ನನ್ನ ಇಮೇಜ್ ಉಳಿಸಿಕೊಳ್ಳೋ ಯತ್ನವಾ?.... ಇಲ್ಲಾ ಮತ್ತೊಬ್ಬರ (ಮೈದುನ) ಮನೆಯಲ್ಲಿ ಅನಾವಶ್ಯಕ ಗೊಂದಲ ಏಕೆ ಎಂದೋ ..ಇಲ್ಲಾ ವಯಸ್ಸಿನ ಪ್ರಭಾವವ ... ಅಥವ 'ಏನ್ ಮಹಾ ಆಯ್ತು ಬಿಡು ಅನ್ನೋ ' ಮನೋಭಾವವ ??? .......ಗೊತ್ತಿಲ್ಲ ... ಆದರೂ ಅದೇಕೋ ಮನಸ್ಸು ಶಾಂತ ... ಸೋತ ಸೋಲು ಗೆದ್ದ ಗೆಲುವು ಎರಡೂ ನನ್ನದಲ್ಲದ ಹಾಗೆ........ ಮಳೆಯ ನಂತರದ ಆಗಸದ ಹಾಗೆ ......
ಸುಮಾರು ವರ್ಷಗಳ ಹಿಂದೆ ನನ್ನ ಜೊತೆ ಆಡಿ ಬೆಳೆದ ಗೆಳೆಯನೊಬ್ಬ ಮೊನ್ನೆ ಫೋನ್ ಮಾಡಿದ್ದ . ಅವನು ಈಗ ಉತ್ತರ ಭಾರತದಲ್ಲಿ ಕೆಲಸ ಮಾಡ್ತಾ ಇದ್ದಾನೆ .. ಅವನೊಬ್ಬ ಸರ್ಜನ್ .. ಮೊನ್ನೆ ಮೊನ್ನೆ ಭೂಕಂಪ ಆಗಿದ್ದಾಗ 'all r safe' ಅಂತ ಮೆಸೇಜ್ ಕಳಿಸಿದ್ದವನು ಒಂದೆರಡು ದಿನಗಳ ಹಿಂದೆ ಕರೆ ಮಾಡಿದ್ದ .. ಭೂಕಂಪವಾದ ದಿನ OTಅಲ್ಲಿ ಇದ್ವಿ ಸುನಿ . ಜೊತೆಗೆ ಒಂದಷ್ಟು ಡಾಕ್ಟರಗಳು, ನರ್ಸ್ಗಳೂ ಕೂಡ ಇದ್ದರು , ಭೂಮಿ ಕಂಪಿಸಿದಂತೆ ಅನಿಸಿದಾಗ ಆಸ್ಪತ್ರೆಯಲ್ಲಿ ಇದ್ದವರೆಲ್ಲ ಹೊರಗೆ ಓಡಿದ್ರು .. But v were in a dilemma... ಪೇಷಂಟ್ ಗೆ anesthesia ಕೊಟ್ಟಿದ್ದಿವಿ , ಅವನಿಗೆ ಜ್ಞಾನ ಇಲ್ಲ ಹೊರಗೆ ಹೇಗೆ ಹೋಗೋದು ಅನಿಸಿ ಆದದ್ದು ಆಗ್ಲಿ ಅಂತ ನಾನು, ನನ್ನ ಟೀಂ, ಸಿಸ್ಟರ್s, ಎಲ್ಲ ಒಳಗೆ ಉಳಿದ್ವಿ ... ದೇವರನ್ನ ಬೇಡೋದು ಬಿಟ್ಟು ಬೇರೇನೂ ತೋಚಲಿಲ್ಲ ಸುನಿ. But Nothing went wrong!!thank God" ಅಂದ . ಕಡೆಗೊಂದು ಮಾತು ಸೇರಿಸಿದ 'ಇಷ್ಟೆಲ್ಲಾ ಮಾಡಿದ್ರೂ ನಾವು ಎಲ್ಲೂ ನ್ಯೂಸ್ ಆಗೋದಿಲ್ಲ , ಕಾರಣವೇ(ವಾಸ್ತವವೇ) ತಿಳಿಯದ ಜನರ ಆಕ್ರೋಶಕ್ಕೂ ಗುರಿ ಆಗ್ತೀವಿ ಕಣಮ್ಮ ' ಅಂದ ...........
I just want to say....ಯಾರನ್ನೇ ಆಗಲಿ blame ಮಾಡುವ ಮೊದಲು ವಸ್ತು ಸ್ಥಿತಿ ಅರಿತರೆ ಒಳ್ಳೆಯದೇನೋ ..ashte.........................
ಕಥೆ ಹೇಳಿ ಬಹಳ ದಿನಗಳಾಗಿತ್ತು ಅಲ್ವೇ !!
ಇಲ್ಲೊಂದು ಕಥೆ ಇದೆ ಹಂಚಿಕೊಳ್ಳುವಂತಾದ್ದು...
ಒಂದೂರು. ಆ ಊರಲ್ಲಿ ಒಂದು ವಿಚಿತ್ರ ಕಾನೂನು. ಅಲ್ಲಿಯ ರಾಜನನ್ನ ವರ್ಷಕ್ಕೊಮ್ಮೆ ಬದಲಿಸುವ ಕಾನೂನು. ಆ ದಿನ ಯಾರು ಅರಮನೆಯ ಮುಂದೆ ಮೊದಲು ಕಾಣಸಿಗುವರೋ ಅವರೇ ಅಲ್ಲಿನ ರಾಜ. ಹಿಂದಿನ ರಾಜನನ್ನ ದೂರದ ಕಾಡಿನ ಮಧ್ಯೆ ಬಿಟ್ಟು ಬರೋದು. ಅವನು ಹಸಿವಿಗೋ ಕ್ರೂರ ಮೃಗಗಳ ದಾಳಿಗೋ ಸಿಕ್ಕಿ ಸಾಯೋದು ..ಹೀಗೆ ನಡೀತಾ ಇತ್ತು . ಹೀಗೆ ರಾಜನಾಗೊ ಆಸೆಗೆ ಸಿಕ್ಕಿ ಸತ್ತವರೆಷ್ಟೋ ಗೊತ್ತಿಲ್ಲ ....ಮತ್ತೆ ಕೆಲವರು ಆ ಉಸಾಬರಿಯೇ ಬೇಡ ಅನ್ನೋ ಹಾಗೆ ಇದ್ದರು.
ಒಂದ್ ಸಾರಿ ಇದ್ಯಾವುದೂ ತಿಳಿಯದ ಪರ ಊರಿನ ಹುಡುಗನೊಬ್ಬ ಅಲ್ಲಿಗೆ ಬಂದ . ಆ ದಿನ ಅಲ್ಲಿನ ರಾಜನ ಕಡೆಯ ದಿನ . ಸರಿ ಇವನು ಬಂದ ಕೂಡಲೇ ಇವನನ್ನ ಅರಮನೆಗೆ ಕರೆದುಕೊಂಡು ಹೋಗಿ ರಾಜನನ್ನಾಗಿ ಮಾಡಿದರು. ಇವನಿಗೊ ಆಶ್ಚರ್ಯ. ಕೇಳಿಯೇ ಬಿಟ್ಟ "ಹಿಂದಿನ ರಾಜ ಎಲ್ಲಿ?' ಮಂತ್ರಿ 'ಹೀಗ್ ಹೀಗೆ ' ಅಂತ ಹೇಳಿದ. ಇವನಿಗೆ ಸ್ವಲ್ಪ ಭಯವಾಯ್ತು . ಆದರೂ ಸಾವರಿಸಿಕೊಂಡು 'ನನ್ನ ಆ ಕಾಡಿನ ಮಧ್ಯೆ ಒಮ್ಮೆ ಕರೆದುಕೊಂಡು ಹೋಗಿ' ಅಂದ. ಸರಿ ಕರೆದುಕೊಂಡು ಹೋದರು. ಅವ ಎಲ್ಲಾ ನೋಡಿದ . ಬಂದ ಮೇಲೆ ಮಂತ್ರಿಗೆ ಹೇಳಿದ 'ಆ ಕಾಡಿನ ನಡುವೆ ಒಂದು ಅರಮನೆ ಕಟ್ಟಿಸಿ ಹಾಗು ಕಾಡಿಗೆ ಹೋಗುವ ಹಾದಿಯಲ್ಲಿ ಅಲ್ಲಲ್ಲಿ ಒಂದಷ್ಟು ತಂಗುದಾಣ ಕಟ್ಟಿಸಿ ಹಾಗೂ ಬಾವಿ ತೋಡಿಸಿ ' ಅಂದ. ಮತ್ತೆ ಒಂದು ವರ್ಷ ಹಾಗೆ ಚೆಂದ ರಾಜ್ಯ ಆಳಿದ. ಒಂದು ವರ್ಷ ಆಯ್ತು. ಇವನೂ ಹೊರಡಲು ತಯಾರಾದ. ಮಂತ್ರಿ ಹೇಳಿದ 'ಮಹಾಪ್ರಭು, ಇನ್ನು ಮುಂದೆ ನೀವೇ ನಮ್ಮಮಹಾರಾಜರು .. ಇಲ್ಲಿಯವರೆಗೆ ಇದ್ದವರೆಲ್ಲ ಒಂದಷ್ಟು ದಿನ ರಾಜ ಅನ್ನೋ ಅಹಂನಿಂದ, ಒಂದಷ್ಟು ದಿನ ಮೋಜಿನಿಂದ, ಸ್ವಾರ್ಥದಿಂದ, ಕಡೆ ಕಡೆಗೆ ಸಾವು ಬಂತಲ್ಲಾ ಅನ್ನೋ ಭಯದಿಂದ ಬದುಕಿದರು . ಆದರೆ ಮುಂದಾಲೋಚನೆಯಿಂದ ನಿಮ್ಮನ್ನ ನೀವು ಕಾಪಾಡಿಕೊಂಡಿದಲ್ಲದೆ ನಮ್ಮನ್ನು ಚೆಂದ ನೋಡಿಕೊಂಡ್ರಿ .. ಇನ್ನೂ ನಮ್ಮ ರಾಜ್ಯಕ್ಕೆ ಭಯ ಇಲ್ಲ.. ನಿಮ್ಮನ್ನ ಬದಲಿಸೋ ಅಗತ್ಯ ಇಲ್ಲ ' ಅಂದನು.
ಇದು ಕಥೆ .....
ಮತ್ತೇನು ಹೇಳೋ ಅಗತ್ಯ ಇಲ್ಲ ಅಲ್ಲವೇ.......
ಪುಟ್ಟಿನ tutionಯಿಂದ ಕರ್ಕೊಂಡ್ ಬರಬೇಕಿತ್ತು. ಹಾಗೆ ಕೆಲ್ಸ ಸ್ವಲ್ಪಇತ್ತು ಅಂತ ಮಂಜು, ಕಾರ್ತಿ , ನಾನು ಮೂವರು ಹೊರಟ್ವಿ . ಕೆಲಸ ಮುಗಿಸಿ ಅವಳ tution ಸೆಂಟರ್ ಹತ್ತಿರ ಬಂದ್ರೂ ಅವಳಿನ್ನು ಹೊರಗೆ ಬಂದಿರಲಿಲ್ಲ . ಮಂಜು ನಾನು ಹೊರಗೆ ಮಾತಾಡ್ತಾ ನಿಂತಿದ್ವಿ ..ಕುಲಪುತ್ರ ಡ್ರೈವರ್ ಜಾಗದಲ್ಲಿದ್ದ . 
ಅಷ್ಟರಲ್ಲಿ ಒಂದು ಫೋನ್ ಬಂತು ಅವನಿಗೆ ..... 
'ಹೇಳ್ ಮಚ್ಚಿ'
'____"
'ಏ ಸಕತ್ easy ಮಚ್ಚಿ , ಈರುಳ್ಳಿ, ಬೆಳ್ಳುಳ್ಳಿ, ಜಿಂಜರ್ , ಕೊತ್ತಂಬರಿ ಎಲ್ಲಾ ಮಿಕ್ಸಿಗೆ ಹಾಕ್ಕೋ , ಆಮೇಲೆ ಆಯಿಲ್,ತುಪ್ಪ ಹಾಕಿ ಅದೇ ಅದೇನೋ ಪಲಾವ್ ಮಸಾಲೆ ಇರುತ್ತಲ್ಲ ಅದೆಲ್ಲ ಹಾಕು ಮಚ್ಚಿ, ಫ್ರೈ ಆದ ಮೇಲೆ ಮಿಕ್ಸಿಲಿ ಇರೋದೆಲ್ಲ ಹಾಕು, ಸ್ವಲ್ಪ ನೀರ್ ಹಾಕು ಉಪ್ಪ್ ಹಾಕಿ ಅಕ್ಕಿ ಹಾಕು ಕುಕ್ಕರ್ ಕವರ್ ಮಾಡು ಅಷ್ಟೇ"
'____'
ಏ , questions ಎಲ್ಲಾ ಕೇಳ್ಬೇಡ '
ಅಷ್ಟರಲ್ಲಿ ಪುಟ್ಟಿ ಬಂದ್ಳು
'ಸರಿ ಸಿಗ್ತೀನಿ ಬೈ"
ಮಂಜು ಕೇಳಿದ್ರು 'ಅದ್ಯಾರ್ ಮಗನೆ"
'ಏ ಫ್ರೆಂಡ್ ಅಪ್ಪ'
ಸರಿ ಹೊರಟ್ವಿ ..
ಮತ್ತೆ ಮಗನ ಫೋನ್ 'ಅಪ್ಪ ಸ್ವಲ್ಪ ರಿಸೀವ್ ಮಾಡು'
ಮಂಜು ಹಲೋ ಅನ್ನೋಷ್ಟರಲ್ಲಿ 'ಲೋ, ಪುದಿನ ಇದೆ ಕಣೋ' ಅಂತಂತೆ ಒಂದು ಹುಡುಗಿಯ ವಾಯ್ಸ್ ...
ಅಪ್ಪ ಮಗನ ಕಿವಿ ಹತ್ತಿರ ಸೆಲ್ ಹಿಡಿದ್ರೆ 'ಅದೇನೆನಿದೆ ಎಲ್ಲಾ ಹಾಕು ಮಚ್ಚಿ, ಖಾಲಿ ಆಗಿಲ್ಲ ಅಂದ್ರೆ ನಾಳೆ ಮಂಡ್ಯಕ್ಕೆ ತಗೊಂಡ ಬಾ ಎಲ್ಲಾ ಮುಗಿಸೋವಾ ಬೈ ಕಣೆ '
ಇವನು ಮಂಡ್ಯಕ್ಕೆ ಇಂಜಿನಿಯರ್ ಆಗೋಕೆ ಹೋಗ್ತಾನೋ ಕುಕರಿ ಕ್ಲಾಸ್ ತೆಗೆದಿದ್ದಾನೋ??!!!
But the way they spoke ಹುಡುಗಹುಡುಗಿ ಅನ್ನೋ prejudice ಇಲ್ಲದೆ was great.........::)))))
ನೆನ್ನೆ ಸಂಜೆ ಶಾಲೆಯಿಂದ ಬಂದ ಪುಟ್ಟಿ ಸ್ವಲ್ಪ ಸಪ್ಪೆ ಇದ್ಲು . 'ಯಾಕ್ ಮಗ ಏನಾಯ್ತು?' ಅಂದೆ , 'ಏನಿಲ್ಲಾ ಮಾ , __ ಇದ್ಲಲ್ಲ ಅವಳು ಈವತ್ತು ಬೇರೆ ಫ್ರೆಂಡ್ಸ್ ಹತ್ರ ನಾ ಯಾವಾಗ್ಲೋ ಅವಳ ಹತ್ತಿರ ಹೇಳಿದ್ದ 'ನನ್ನ ವಿಷ್ಯ (!!)' ಎಲ್ಲಾ ಹೇಳ್ತಾ ಇದ್ಲಮ್ಮ , ಎಷ್ಟ್ ಫ್ರೆಂಡ್ ಗೊತ್ತ ನಾನೂ ಅವ್ಳು , ಅವ್ಳೇ ಹಿಂಗೆಲ್ಲ ಮಾಡ್ತಾಳೆ , ಅದ್ಕೆ ಯಾರು ಫ್ರೆಂಡ್ಸ್ ಬೇಡ ಅಂತ determine ಮಾಡಿಬಿಟ್ಟಿದ್ದೀನಿ .......' ಹೇಳ್ತಾನೆ ಹೋದ್ಲು ..'ಹೋಗ್ಲಿ ಬಿಡು ಮಗ , ಏನ್ ಗೊತ್ತಾ ಫ್ರೆಂಡ್ಸ್ ಬೇಡ ಅನ್ನೋದು ತಪ್ಪು ...ನಮ್ಮ ಲಿಮಿಟ್ಸ್ ಅಲ್ಲಿ ನಾವಿದ್ರೆ ಚೆಂದ ಫ್ರೆಂಡ್ಸ್ ಆಗಿದ್ದಾಗ ಕೂಡ ಎಷ್ಟ್ ಬೇಕೋ ಅಷ್ಟೇ ಹೇಳಬೇಕು ಮಗ . ಅತಿಯಾದರೆ ಯಾವುದು ಚೆನ್ನಾಗಿರಲ್ಲ. ....etc, etc 'ಅಂದೆ . ಬೇಸರದಲ್ಲಿ ಇದ್ದದ್ದಕ್ಕೋ ಏನೋ ಸುಮ್ಮನೆ ಕೇಳ್ತಾ ಇದ್ಲು ... ಬೆಳಿಗ್ಗೆ ಎದ್ದು ಸ್ಕೂಲ್ಗೆ ತಯಾರಿ ನಡೆಸ್ತಾ ಇದ್ಲು .. ನಾ ಮತ್ತೆ ಸಪ್ಪೆ ಇದ್ದಾಳೆ ಅಂತ ನೆನ್ನೆ ಹೇಳಿದ್ದೆ ಹೇಳೋಕೆ ಹೋದೆ ...' ಏ ಹೋಗಮ್ಮ , ಅವಳು ರಾತ್ರಿನೇ ಮೆಸೇಜ್ ಮಾಡಿದ್ಲು .. ನಾವೇನು ಸಿಟ್ಕೊಂಡು ಮಾತಾಡಿಸಲ್ಲ ಅನ್ಕೊಂಡಾ V r friends u kno !!!!!! ಹೋಗ್ತಾ ಮೋರ್ ಹತ್ರ ಗಾಡಿ ನಿಲ್ಸು ... ಒಂದೆರಡು ಡೈರಿ ಮಿಲ್ಕ್ ತಗೋಬೇಕು ..................!!!'
ಕೆಲವೊಮ್ಮೆ ಕೆಲವು ಮಾತುಗಳು ಎಂಥಹ ಬಿಗು ವಾತಾವರಣವನ್ನೂ ತಿಳಿಗೊಳಿಸುತ್ತದೆ ... ನೆನ್ನೆ ಹಾಗೆ ಮಂಜು ತಂದೆಯ ವರ್ಷಾಬ್ಡಿ ... ಡ್ಯೂಟಿ ಮುಗಿದ ಮೇಲೆ ಮಕ್ಕಳನ್ನ ಮನೆಯಲ್ಲೇ ಬಿಟ್ಟು ಮಂಜು ನಾನು ಅತ್ತೆ ಮನೆಗೆ ಹೋದ್ವಿ ..... ಅತ್ತೆ ಎಂದಿನಂತೆ ಗಂಡನ ನೆನಪಲ್ಲಿ ಸ್ವಲ್ಪ ಎಮೋಷನಲ್ ಆಗಿದ್ರು ... 
ಮಂಜು 'ಇದ್ಯಾಕಕ್ಕ ಹಿಂಗಿದ್ದೀಯ ' .... 'ಏನಿಲ್ಲ ಕಣೋ ನಿಮ್ಮಪ್ಪ ನೆನಪಾದ್ರು ' ... 'ನೀನೊಂದು ಈಗ ಬರ್ತಾ ಆ ಕಡೆಯಿಂದಾನೆ(ಸ್ಮಶಾನ) ಬಂದೆ .. ಯಾವ್ದೋ ನ್ಯೂ admissionuu, (ಸ್ಮಶಾನದಲ್ಲಿ ಹಳ್ಳ ತೊಡ್ತಾ ಇದ್ರು ). ರಾತ್ರಿ ಮಾವ ಅವರಿಗೆಲ್ಲ ಕ್ಲಾಸ್ ತಗೊಳ್ತಾರೆ ಬಿಡು ... ಹೆಂಗು ITI ಲೆಕ್ಚರರ್ ಅಲ್ವ ..ಹೊಸದಾಗಿ ಬಂದವರಿಗೆಲ್ಲ ಫೈಲ್ (metal filing) ಮಾಡೋಕೆ ಕೊಡ್ತಾರೆ ಬಿಡು , ನೀ ಯಾಕ್ ಟೆನ್ಶನ್ ಆಗ್ತೀಯ ... ' 
ಒಂದ್ ಕ್ಷಣದಲ್ಲಿ ಮನೆಯ ವಾತಾವರಣ ಬದಲಾಗಿ ಹೋಯ್ತು ... ಮಕ್ಕಳೆಲ್ಲ 'ಹೋ ' ಅಂತ ನಗೋಕೆ ಶುರು ಮಾಡಿದ್ರು ... and HIS sense of Humor has kept me smiling and healthy always:)))))
ನಾವು ಈಗಿರೋ ಮನೆಗೆ ಬಂದು ಸುಮಾರು ಹತ್ತು ವರ್ಷ ಆಯ್ತು . ಇಲ್ಲಿಯವರೆಗೂ ನೀರಿಗೆ ಕೈ ಬೆರಳಿನಲ್ಲಿ ಎಣಿಸೋ ಅಷ್ಟ್ ಸಾರಿ ಮಾತ್ರ ತೊಂದರೆ ಆಗಿದೆ. ಹಾಗಾದಾಗ corporaterಗೆ ಒಂದ್ ಫೋನ್ ಮಾಡಿದ್ರೆ ಲಾರಿ ಅಲ್ಲಿ ಕಳಿಸಿಬಿಡ್ತಾರೆ . ಹಾಗಾಗಿ ನೀರಿಗೆ ಬರ ಅನ್ನೋದು ಇಲ್ಲ . ರೋಡ್ ಅಲ್ಲಿ drainage ಇಲ್ಲ . ಬೆಳಿಗ್ಗೆ ಎದ್ರೆ ಇಡೀ ರಸ್ತೆ ಬಾಗಿಲು ತೊಳೆದ ನೀರಿನಿಂದ ಮಿನಿ ಕಾವೇರಿಯಂತೆ ಹರಿಯುತ್ತದೆ . ಪೈಪ್ ಹಿಡಿದು ನಿಂತರೆ ಕಿಟಕಿ ಬಾಗಿಲು ಬಿಟ್ಟು ಗೋಡೆಯನ್ನೂ ತೊಳೆದು ಬಿಡ್ತಾರೆ ... ಬಂದ ಹೊಸದರಲ್ಲಿ ನನಗೂ ಬಹಳ ಬೇಸರ ಅಗ್ತಾ ಇತ್ತು ಇಷ್ಟೊಂದ್ ನೀರು ವೇಸ್ಟ್ ಅಲ್ವ ಅಂತ ಒಂದೆರಡು ಸಲ ನಮ್ಮ ಮನೆ ಮುಂದೆ ನೀರು ನಿಲ್ಲುತ್ತದೆ , ಎಲ್ಲರಿಗೂ ತೊಂದರೆ ಅಲ್ವ ಅಂತ ಹೇಳಿಯೂ ಇದ್ದೆ.. .ನನ್ನ ಒಂದ್ ತರ ವಿಚಿತ್ರವಾಗಿ ನೋಡಿದ್ರು 'ಆರು ಹೆತ್ತೋಳಿಗೆ ಮೂರು ಹೆತ್ತೋಳು ಹೇಳೋಕೆ ಬಂದ್ಲಾ !!? ಅನ್ನೋ ಹಾಗೆ. ಮಂಜು ನನ್ನನ್ನೇ ಬೈದ್ರು .. ನೀನೇನು ೨೪ ಘಂಟೆ ರಸ್ತೆ ಅಲ್ಲೇ ಇರೋ ಹಾಗೆ , ಸುಮ್ಮನೆ ಇದ್ದು ಬಿಡು ಅಂತ ... ಈಗ ಅಭ್ಯಾಸ ಆಗಿಬಿಟ್ಟಿದೆ .ಒಮ್ಮೊಮ್ಮೆ ಅನಿಸುತ್ತದೆ .. ಒಂದ್ ನಾಲ್ಕ್ ದಿನ ನೀರ್ ಬರಬಾರದು ಆಗ ನೀರಿನ "ಬೆಲೆ' ತಿಳಿಯುತ್ತದೆ ಅಂತ ... ಈ ತರದ ಜನರ ನಡುವೆಯೂ ಒಂದಷ್ಟು ಹಿರಿಯ ತಲೆಗಳಿರುವ ಮನೆಯವರು ಮೊದಲೇ ಕಸ ಗುಡಿಸಿ ಅಮೇಲೆ ಸ್ವಲ್ಪ ನೀರು ಬಾಗಿಲಿಗೆ ಹಾಕಿ ಒಂದ್ ರಂಗೋಲೆ ಹಾಕಿ ಬಿಡ್ತಾರೆ .... ಏನೇ ಹೇಳಿ ಹಿರಿ ತಲೆಗಳಿಗೆ ಇರೋ ಅಷ್ಟು ಯಾವುದೇ ವಸ್ತುವಿನ ಬೆಲೆ ಬಹಳಷ್ಟು namma ಇಂದಿನ ಜನರೇಶನ್ ಜನಕ್ಕೆ ಇರೋದಿಲ್ಲ ... ವಿಪರ್ಯಾಸ ಅಂದ್ರೆ ಅವರ ಕಾಲದಲ್ಲಿ ಅವರೆಲ್ಲ ಯಾವುದಕ್ಕೂ ಕಡಿಮೆ (ಬರ) ಇಲ್ಲದೆ ಬದುಕಿದವರು .. ಆದರೂ ಈಗಲೂ ಕೂಡ ಹಿತಮಿತವಾಗೆ ಬದುಕುತ್ತಾರೆ ...... ಬದುಕುವುದು ಹೀಗೆ ಅಂತ ತಿಳಿಸುತ್ತಾರೆ ........
ಒಂದು ಅಜ್ಜಿ ತಾತ .. ಸುಮಾರು ೧೦ ವರ್ಷದಿಂದ ನೋಡ್ತಾನೆ ಬಂದಿದ್ದೀನಿ.... ತಾತ ___ ಕೆಲ್ಸದಿಂದ ನಿವೃತ್ತರಾಗಿ ಮನೆಯಲ್ಲೇ ಸಣ್ಣ ಪುಟ್ಟ ಓಡಾಟ , ಮನೆಗಳನ್ನ ತೋರಿಸೋದು , ಇತ್ಯಾದಿ ಮಾಡಿದ್ರೆ ಅಜ್ಜಿ ಮಗನ ಜೊತೆ ಸಾಂಬಾರ್ ಪುಡಿ ಮಾಡಿ ಮಾರೋ ಕೆಲ್ಸ ಮಾಡ್ತಾ ಇತ್ತು. ಸೊಸೆ ಎಲ್ಲೋ ಕೆಲಸಕ್ಕೆ ಹೋಗ್ತಾ ಇದ್ಲು . ಮಗ ರಾತ್ರಿ ಪಾಳಿಯಲ್ಲಿ ಯಾವ್ದೋ ಸ್ಕೂಲ್ ನೋಡಿಕೊಳ್ಳೋ ಕೆಲ್ಸ ಕೂಡ ಮಾಡ್ತಾ ಇದ್ದ. ಇದ್ದ ಒಬ್ಬ ಮಗಳನ್ನ ಕೇರಳದ ಊರಿಗೆ ಮದ್ವೆ ಮಾಡಿ ಕೊಟ್ಟಿದ್ರು ... ಒಂದ್ ದಿನಾ ಕೂಡ ಕುಳಿತ ಜೀವವೇ ಅಲ್ಲ ಆ ಅಜ್ಜಿ .. ಮನೆಯ ಎಲ್ಲಾ ಕೆಲಸದ ಜೊತೆ ಸಾಂಬಾರ್ ಪುಡಿ ಮಾಡೋಕೆ ಮಗನಿಗೆ ಸಾಥ್ ನೀಡ್ತಾ ಇತ್ತು. ಬೆಳಿಗ್ಗೆ ನಾ ಏಳ್ತಾ ಇದ್ದಿದ್ದೆ ಆ ಅಜ್ಜಿ ಕಸ ಗುಡಿಸೋ ಸದ್ದಿಗೆ .. ನೆನ್ನೆ ಅಜ್ಜಿ ಕಾಣಲಿಲ್ಲ . ಏನೋ ಹುಷಾರಿಲ್ಲವೇನೋ ಅನ್ಕೊಂಡೆ . ಬೆಳಿಗ್ಗೆ ಮಂಜು ಡ್ಯೂಟಿಗೆ ಹೊರಟಾಗ ಗೇಟ್ ಹಾಕಿ ಒಳಬರುವಾಗ ಸೊಸೆ ಕಸಗುಡಿಸ್ತಾ ಇದ್ಲು . ಕೇಳಿದೆ 'ಅಜ್ಜಿಗೆ ಹುಷಾರಿಲ್ವ " .. ಮಗ ಹೇಳಿದ 'ಇಲ್ಲ __ ಆಸ್ಪತ್ರೆಗೆ ಸೇರಿಸಿದ್ದೀವಿ . ಶುಗರ್ ಜಾಸ್ತಿ ಆಗಿದೆ ಅಂದ್ರು ... ಒಳಗೇ ರಕ್ತದಲ್ಲಿ ಏನೋ ಆಗಿದೆ ಅಂತೆ ..etc, etc ' ಅಂದ . ರಿಪೋರ್ಟ್ ಕೊಟ್ಟ .. ನೋಡಿದೆ. 'ಸಂಜೆ ಮಂಜು ಬಂದ ಮೇಲೆ ಹೋಗಿ ಬರ್ತೀವಿ ಅಂದೆ . .....
ಇಲ್ಲಿ ನಾ ಹೇಳೋಕೆ ಹೊರಟಿರೋದೆ ಬೇರೆ .. ಅಜ್ಜಿ ಇರೋವರೆಗೂ ಒಂದೂ ಕೆಲಸಕ್ಕೆ ಚ್ಯುತಿ ಇಲ್ಲದಂತೆ ಹೋಗ್ತಾ ಇದ್ದ ಮನೆ , ಅವಳ absence ಅಲ್ಲಿ ಅವಳ presenz ಹುಡುಕ ತೊಡಗಿತು. ಮಗನಿಗೆ ತನ್ನ ಸಾಂಬಾರ್ ಪುಡಿಯ ಕೆಲಸಕ್ಕೆ , ಸೊಸೆ ಕೆಲಸಕ್ಕೆ ಹೋಗೋಕೆ ಮೊದಲು ಆಗ್ತಾ ಇದ್ದ ಆಗಬೇಕಾದ ಕೆಲಸಗಳಿಗೆ, ಮೊಮ್ಮಗನ ಕಾಲೇಜ್ಗೆ ಎಲ್ಲದರಲ್ಲೂ ಅವಳ ಇಲ್ಲದಿರುವಿಕೆ ಕಾಣತೊಡಗಿತು . ಬಹುಶಃ ಎಲ್ಲಕ್ಕಿಂತ ಹಿಂಸೆ ಪಟ್ಟ ಜೀವ ಅಂದ್ರೆ ತಾತ .. ಬೆಳಿಗ್ಗೆ ಎದ್ದಾಗಿಂದ ಸಂಜೆವರೆಗೂ ಮಾತಾಡ್ತಾನೋ, ಬೈಸಿಕೊಳ್ತಾನೋ, ಕಣ್ಣ ಮುಂದೆ ಕಾಣ್ತಾ ಇದ್ದ ಮಡದಿ; ಕುಡಿದು ಬಂದಾಗ, ಕೆಮ್ಮುವಾಗ, ಊಟಕ್ಕಿಟ್ಟು ಬೈತಾನೋ ಅಳ್ತಾನೋ ಬೆನ್ನಿಗೆ ಬೆನ್ನಾಗಿ ನಿಂತ ಅಜ್ಜಿ ಇಲ್ಲದ್ದು ತಾತನಿಗೆ ಹಿಂಸೆ ಅನಿಸಿಬಿಟ್ಟಿತು .. ಮಗ ಸೊಸೆಯನ್ನ ತನ್ನ ಹೆಂಡತಿಯ ಸ್ಥಿತಿಗೆ ಅವರೇ ಕಾರಣ ಅನ್ನೋ ಹಾಗೆ ಬೈತಾ ಅಸಹಾಯಕನಾಗಿದ್ದ...
ಇರೋವರೆಗೆ ಯಾರಿಗೂ ಕಾಣದ , ಯಾರಿಗೂ ಹೇಳದೆ ತನ್ನ ನೋವನ್ನ ತಾನೇ ನುಂಗಿಕೊಂಡು ಎಲ್ಲರಿಗೂ ಆಸರೆಯಾಗೋ ಅನೇಕ ಜೀವಿಗಳು ನಮ್ಮ ಜೊತೆಯಲ್ಲೇ ಇರ್ತಾರೆ ಮೌನ ಮಂದಾಕಿನಿಯ ಹಾಗೆ ... ಅವರು ಹೇಳೋದಿಲ್ಲ ಅಂತ ಅವರು ಅಳೋದಿಲ್ಲ ಅಂತ ಅವರನ್ನ ಸುಮ್ಮನೆ ನಿರ್ಲಕ್ಷಿಸುತ್ತಾ ಹೋಗುತ್ತೇವೆ ....... ಅವರ ಇಲ್ಲದಿರುವಿಕೆ ಅರಿವಿಗೆ ಬಂದಾಗ ಅವರ ಇರುವಿಕೆಯ ಮಹತ್ವ ತಿಳಿಯುತ್ತದೆ . ಅಷ್ಟರಲ್ಲಿ .......... ಕಾಲ ಇರೋದಿಲ್ಲ ......... ಯಾಕೋ ಆ ತಾತ ಅಂತಹ ಅನೇಕ ಅಸಹಾಯಕರನ್ನ ಕಣ್ಣ ಮುಂದೆ ತಂದಿತು . ಅಜ್ಜಿ ಅಲ್ಲೆಲ್ಲೋ ಬಾನಲ್ಲಿ ತೇಲೋ ಮಳೆ ಸುರಿಸೋ ಮೋಡದಂತೆ ..............
ಸುಮಾರು ೨೫ ವರ್ಷಗಳ ಹಿಂದೆ ಮೈಸೂರಿನ ಸಯ್ಯಾಜಿ ರಾವ್ ರಸ್ತೆಯ 'ಹೋಟೆಲ್ ಪರಾಸ್ ' ಅಂದ್ರೆ ತುಂಬಾನೇ ಫೇಮಸ್ಸು . ಮಂಜು ನಾನು ಆಗ ಇನ್ನು ಓದ್ತಾ ಇದ್ವಿ.. ಆಗ ನಾವಿಬ್ಬರು ಒಳ್ಳೆ ಗೆಳೆಯರಾಗಿದ್ವಿ ಅಷ್ಟೇ .. ವಾರಕ್ಕೆ ಒಂದು ದಿನ ಕಾಲೇಜ್ ಮುಗಿದ ಮೇಲೆ ಅಲ್ಲಿ ಹೋಗಿ ಒಂದಷ್ಟು ಹೊತ್ತು ಕೂತು 'ಕಷ್ಟಸುಖ' ಮಾತಾಡಿ ಮತ್ತೆ ನಮ್ಮ ನಮ್ಮ ದಾರಿ ಹಿಡಿತಾ ಇದ್ವಿ , ಮತ್ತೆ ಒಂದು ವರ್ಷದ ನಂತರ ಪ್ರೇಮಿಗಳಾಗಿ ಹೋಗಿ ಕೂರ್ತಾ ಇದ್ವಿ .. (ಅದೇನ್ ಮಾತಾಡ್ತಾ ಇದ್ವೋ ಗೊತ್ತಿಲ್ಲ , ಅಂದು ಶುರು ಮಾಡಿದ ಮಾತು ಇಂದೂ ಮುಗಿದಿಲ್ಲ !!)... ಮತ್ತೆ ಯಾವಾಗ್ಲೋ ಒಮ್ಮೊಮ್ಮೆ ಹೋದದ್ದು ಬಿಟ್ರೆ ಅಲ್ಲಿಗೆ ಹೋಗೆ ಇರಲಿಲ್ಲ . ಮೈಸೂರು ಬೆಳಿತು... ಬೇಕಾದಷ್ಟು ಹೋಟೆಲ್ಗಳು ಬಂದ್ವು .. ಮಕ್ಕಳು ಕೂಡ 'ಅದೇನ್ ಅದೂ ಒಂದು ಹೋಟೆಲಾ' ಅಂತಾರೆ ಅಂತ ಅಲ್ಲಿಗೆ ಹೋಗೆ ಇರಲಿಲ್ಲ .. ನೆನ್ನೆ ಯಾಕೋ ಬಹಳ ವರ್ಷಗಳ ನಂತರ ಪಾರಸ್ ಗೆ ಹೋಗಬೇಕು ಅಂತ ಮಂಜು ಕರ್ಕೊಂಡ್ ಹೋದ್ರು .. ಕಾಲಕ್ಕೆ ತಕ್ಕಂತೆ ಸ್ವಲ್ಪ ಬದಲಾದ ಜಾಗ ...ಮಂಜು 'ಏನಮ್ಮ, ನಿನ್ fav ಮಸಾಲೆ ಪುರಿ ಹೇಳಲಾ' ಅಂದ್ರು .. ಸುಮ್ಮನೆ ನಕ್ಕು ಬಿಟ್ಟೆ. ಅಂದು ನಾವು ಹೋಗುತ್ತಿದ್ದಾಗ ಇದ್ದ ಒಬ್ಬ ಸರ್ವರ್ ಈಗಲೂ ಇದ್ದಾರೆ.. ವಿಶ್ವಾಸದಿಂದ ಮಾತಾಡಿಸಿದರು .. ಅವರ ಮಕ್ಕಳಿಗೆ ಮದುವೆ ಮಾಡಿದ್ದು ಹೇಳಿದ್ರು , ಮತ್ತೊಬ್ಬಳು M Comಮಾಡ್ತಾ ಇರೋದನ್ನ parttime ಕೆಲಸ ಮಾಡೋದನ್ನ ಹೇಳಿದ್ರು ..ನಮ್ಮ ಮಕ್ಕಳ ಬಗ್ಗೆ ಕೇಳಿದ್ರು ...ಮನಸ್ಸು ಒಂದ್ ತರ ನೀಲಿ ನೀಲಿ .. ಬರುವಾಗ ಮಂಜು ಹೇಳಿದ್ದು 'ಸರ್, ಮೊಮ್ಮಕ್ಕಳನ್ನ ಕರ್ಕೊಂಡ್ ಬನ್ನಿ ಸರ್ ಮನೆಗೆ ' ಅದಕ್ಕೆ ಅವರು ಕೊಟ್ಟ ಉತ್ತರ 'ಸರ್ ನೀವು ಮೊಮ್ಮಕಳನ್ನ ಕರ್ಕೊಂಡ್ ಬರಬೇಕು ಸರ್ ನಮ್ಮ ಹೋಟೆಲ್ಗೆ "....:)))))))))
ಈ ಆಷಾಡದ ಮಳೆಯ
ತುಂಟತನಕ್ಕೆ ಮಿತಿಯೇ ಇಲ್ಲ ನಲ್ಲ ..
ಒಂದೆರಡು ಹನಿಯುದುರಿಸಿ 
ನೆನಪುಗಳ 'ನೆನೆಸಿ' ಒಣಗುವ ಮೊದಲೇ ಹೊರಟುಬಿಡುತ್ತವೆಯಲ್ಲ.... :))))


ಈ ಆಷಾಡದ ಮಳೆಗೆ 
ನಿನ್ನ ನೆನಪಿನ ಹೊತ್ತಗೆ 
ಬೇಡವೆಂದರೂ ಪುಟ ತಿರುಗಿಸಿ 
ನನ್ನ ಕೆಣಕುವುದು ಏಕೆ ನಲ್ಲ ..... :))))
ಮೆಟ್ಟಿಲುಗಳ ಮೇಲೆ ಕುಳಿತು ಚಂದಿರ ಮೂಡುವುದ ದಿಟ್ಟಿಸುತ್ತಿದ್ದಾಳೆ ಅವಳು... 
ಅಮವಾಸೆಯ ಮರುದಿನದ ಬಾಲಚಂದಿರ ಕಂಡೂ ಕಾಣದಂತೆ ನಗುತ್ತಿದ್ದಾನೆ... 
ಚಂದಿರನಿಗೊಂದು ಗುಟ್ಟು ಹೇಳಿ ಅವನಿಗೆ ಹೇಳಿಬಿಡು ಎನ್ನುತ್ತಾಳೆ...
ಅದೆಷ್ಟೋ ವರುಷಗಳಿಂದ ಚಂದಿರ ಇವರಿಬ್ಬರ ರಾಯಭಾರಿಯಾಗಿದ್ದಾನೆ.. 
ಇಲ್ಲಿ ಕಂಡ ಚಂದಿರ ಅಲ್ಲೂ ಮಿನುಗುತ್ತಾನೆ ...
ಗುಟ್ಟನೆಲ್ಲ ಒಳಗೆ ಇಟ್ಟು ನಗುತ್ತಾನೆ ಅವರಿಬ್ಬರಿಗೆ ಮಾತ್ರ ಹೇಳುವಂತೆ :)))))..
ಚಿಕ್ಕವರಿದ್ದಾಗ ಸಿನಿಮಾ ನೋಡೋದೇ ವಾರಾಂತ್ಯದ ಮನೋರಂಜನೆ .. ಈಗಿನ ಹಾಗೆ ಅದೆಷ್ಟೋ ಸಿನಿಮಾಗಳು ಬರ್ತಾ ಇರ್ಲಿಲ್ಲ .. ಸಿನಿಮಾಗೆ ಹೋಗೋದೇ ಒಂದು ದೊಡ್ಡ ವಿಷ್ಯ ಅನ್ನೋ ಹಾಗೆ ಎಲ್ಲರಿಗೂ ಹೇಳ್ತಾ ಇದ್ವಿ .. ರಾಜಕುಮಾರ್ ಅಂದ್ರೆ ಬಹಳನೇ ಇಷ್ಟ .. ಯಾವುದೇ ಸಿನಿಮಾಕ್ಕೆ ಕರ್ಕೊಂಡ್ ಹೋಗದೆ ಇದ್ರೂ ಪರವಾಗಿಲ್ಲ ಆದ್ರೆ ರಾಜಕುಮಾರ್ ಸಿನಿಮಾ ತಪ್ಪಿಸ್ತಾ ಇರಲಿಲ್ಲ..ಅದು ಬಿಟ್ರೆ ತುಮಕೂರಿನ ಗುಬ್ಬಿ ವೀರಣ್ಣ ನಾಟಕ ಮಂಡಳಿಯಲ್ಲಿ ಬರ್ತಾ ಇದ್ದ ನಾಟಕಗಳು, ವರ್ಷಕ್ಕೆ ಒಮ್ಮೆ ಇಡೋ ಗಣಪತಿಯ ಪೆಂಡಾಲ್ ನಲ್ಲಿ ನಡೆಯೋ ಕಾರ್ಯಕ್ರಮಗಳು , ಗೂಳೂರಿನ ಗಣಪತಿ ,ಸಿದ್ದಗಂಗೆಯ ಶಿವರಾತ್ರಿ ಜಾತ್ರೆ ಇವೇ ನಮಗೆ ಸಂಭ್ರಮ ತರೋ ಮನೋರಂಜನೆಗಳಾಗಿದ್ವು ..
ಬಹುಶಃ ೧೯೮೫ ಅನಿಸ್ತದೆ .. ಆಗಷ್ಟೇ ಬಿಡುಗಡೆ ಆಗಿದ್ದ 'ಕವಿರತ್ನ ಕಾಳಿದಾಸ' ಸಿನಿಮಾ ನೋಡಲೇ ಬೇಕು ಅಂತ ಹಠ ಮಾಡಿ ಅಮ್ಮನ್ನ ಹೊರಡಿಸಿದ್ದೆ .. ಆಗೆಲ್ಲ ಮಧ್ಯಾಹ್ನ ೩ ಗಂಟೆಗೆ ಚಿತ್ರ ಶುರು ಅಗ್ತಾ ಇತ್ತು . ತುಮಕೂರಿನ ಮಾರುತಿ ಚಿತ್ರಮಂದಿರ..ಒಂದು ಗಂಟೆಗೆ ಹೋದ್ರೂ ಟಿಕೆಟ್ ಸಿಗಲಿಲ್ಲ .. ನನ್ನ ಸಪ್ಪೆ ಮೂತಿ ನೋಡಲಾಗದೆ ಪಾಪ ಅಮ್ಮ ಜೀವನದಲ್ಲಿ ಮೊದಲ ಸಲ ಬ್ಲಾಕ್ ಅಲ್ಲಿ ಟಿಕೆಟ್ ತಗೊಂಡ್ರು .. ನನಗೆ ನೆನಪಿರೋ ಹಾಗೆ ೩೦ ರೂಪಾಯಿ ಕೂಟ್ಟರು ಅನಿಸುತ್ತೆ ಒಂದು ಟಿಕೆಟ್ಗೆ .. ಇನ್ನ ಸಮಯ ಇತ್ತು ಅಂತ ಅಲ್ಲೇ ತಿನ್ನೋಕೆ ಕೊಡಿಸಿ ಇನ್ನೇನು ಸಿನಿಮ ಶುರು ಆಗುತ್ತೆ ಅನ್ನೋವಾಗ ಬಾಗಿಲ ಬಳಿ ಹೋದ್ವಿ .. ಭಯಂಕರ ಜನ... ಅಮ್ಮ ಟಿಕೆಟ್ ಕೊಟ್ಳು ಬಾಗಿಲ ಹತ್ತಿರ .. ಅವನು ಮುಖ ನೋಡಿದ.. 'ನೋಡೋಕೆ ಓದಿದವರ ಹಂಗೆ ಕಾಣ್ತೀರ ಮೋಸ ಯಾಕ್ರಮ್ಮ ಮಾಡ್ತೀರ 'ಅಂದ . ಅಮ್ಮ 'ಯಾಕಪ್ಪ ಏನ್ ಆಯ್ತು?? ".. 'ನೆನ್ನೆ ಮ್ಯಾಟಿನಿ ಟಿಕೆಟ್ ಈವತ್ತು ತಂದ ಕೊಡ್ತಾ ಇದ್ದಿರಲ್ಲಮ್ಮ !!'ಅಂದ .. ನಾವು ಪೆಚ್ಚುಪೆಚ್ಚು .. ಪಾಪ ಅಮ್ಮ ಅದ್ಯಾಕೆ ದುಡ್ಡು ಇಟ್ಟಿದ್ರೋ ಏನೋ, ಅದೇ ಕೊನೆ ನಾ ಇನ್ಯಾವತ್ತು ಸಿನಿಮಾಕ್ಕೆ ಹಠ ಮಾಡಲಿಲ್ಲ ...!!


ಮಗರಾಯ ಬಾಹುಬಲಿ ಸಿನೆಮಾಗೆ DRC ಅಲ್ಲಿ ಮೊದಲೇ ಬುಕ್ ಮಾಡಿ ಹೋದ ... ಇದೆಲ್ಲ ನೆನಪಿಗೆ ಬಂತು . :)))
ಮೊನ್ನೆ ಎರಡು ದಿನ ರಜ ಅಂತ ಎಲ್ಲಾ ಅತ್ತೆ ಮನೆಗೆ ಹೋಗಿದ್ವಿ .. ಒಂದಷ್ಟು ಜನ ಸೇರಿದರೆ ಮಾತಿಗೇನು ಕೊರತೆ ಬರದು .. ..ಅತ್ತೆ ಅವರ ಕಾಲದ ಕಥೆ ಶುರು ಮಾಡಿದ್ರು ..'ನನ್ನ ಮಕ್ಳು ಅವರ ಅಪ್ಪ ಅಂದ್ರೆ ಅದೆಷ್ಟ್ ಹೆದರ್ತಾ ಇದ್ರೂ ಅಂದ್ರೆ, ಏನೇ ಕೇಳಬೇಕು ಅಂದ್ರೂ ನನ್ನೇ ಕೇಳಿ , ನಾ ಈಸ್ಕೊಡ್ತಾ ಇದ್ದೆ. ಈಗ್ನವೂ ನಿಮ್ ಮಕ್ಳು ನೋಡು ಅಪ್ಪ ಅಂದ್ರೆ ಭಯನೇ ಇಲ್ಲ . ಒಂದ್ ಸಾರಿ ಅವರಪ್ಪನ ಜೊತೆ ಒಂದು ಸರ್ಕಸ್ಗೆ ಹೋಗಿ ನನ್ ಮಕ್ಳು ಪಾಪ ಅಳ್ತಾ ಬಂದವ್ರೆ ' ...

ಮಂಜು ಕಥೆ ಮುಂದುವರೆಸಿದ್ರು 'ಮೂರು ಮಕ್ಕಳನ್ನು ಅಪರೂಪಕ್ಕೆ ಸರ್ಕಸ್ಗೆ ಕರ್ಕೊಂಡ್ ಹೋದ್ರ, ನಮಗೇ ಅದೇನ್ ಸಂಭ್ರಮ ಅಂತೀಯ . ಸರಿ ಮಾವ (ಅವರಪ್ಪನ್ನ ಮಕ್ಕಳು ಮಾವ ಅಂತಾನೆ ಕರಿತಾ ಇದ್ರು ) ನೀವ್ ನೋಡ್ತಾ ಇರಿ ಅಂತ ಹೊರಗೆ ಹೋಗಿದ್ರು . ಯಾರೋ ಒಬ್ಬ ಬಂದು ಪಾಪ್ಕಾರ್ನ್ ತಂದ..ಮುಂದೆ ಹಿಡಿದಾಗ, ಒಳಗೆ ಬಂದ್ರೆ ಇದ್ದನ್ನೂ ಅವ್ರೆ ಕೊಡ್ತಾರೇನೋ ಅಂತ ಈಸ್ಕೊಂಡ್ವಿ.. ಇನ್ನೊಬ್ಬ ಒಂದು ಐಸ್ ಕ್ರೀಂ ತಂದ, ಈಸ್ಕೊಂಡ್ವಿ.. ಮತ್ತೆ ಒಬ್ಬ ಚಾಕ್ಲೇಟ್ ತಂದ ಅದನ್ನೂ ಈಸ್ಕೊಂಡ್ವಿ... ಮೊದಲು ಐಸ್ ಕ್ರೀಂ ತಿಂದ್ಬಿಡೋಣ ಕಣೋ ಕರಗೋಗುತ್ತೆ ಅಂತ ಮೂರು ಜನ ಅಣ್ಣ ತಮ್ಮ ತಿನ್ನೋಕೆ ಶುರು ಮಾಡಿದ್ವಿ .. ಅದೇನ್ ಖುಷಿ ಗೊತ್ತಾ , ಸರ್ಕಸ್ ನೋಡ್ತಾ ಪಾಪ್ಕಾರ್ನ್ ಬಿಚ್ಚಿದ್ವಿ .. ಇನ್ನು ತಿಂತಾ ಇದ್ವಿ ಹೊರಗೆ ಹೋಗಿದ್ದ ಮಾವ ಬಂದ್ರು .. ಮಕ್ಕಳು ತಿನ್ನೋದನ್ನ ನೋಡಿ 'ಕಾಸ್ ಯಾರ್ ಕೊಟ್ರು ?' ಅಂದ್ರು .. 'ಇದಕ್ಕೆ ಕಾಸು ಕೊಡಬೇಕಾ?' ಅಂತ ಹೆದರಿ ಮುಖ ನೋಡ್ಕೊಂಡ್ವಿ . ಕೊಟ್ಟು ಹೋಗಿದ್ದವರ ಕರೆದು ಬೈದ ಮಾವ ಇನ್ನ ಕೈಯಲ್ಲೇ ಇದ್ದ ಚಾಕ್ಲೇಟ್ ವಾಪಸ್ ಕೊಡಿಸಿದ್ರು .. ಸರ್ಕಸ್ ಮುಗಿಸಿ ಮನೆಗೆ ಹೋಗೊ ಅಷ್ಟರಲ್ಲಿ ಸಹಸ್ರ ನಾಮಾವಳಿ ಆಗಿತ್ತು ..ಮತ್ತೆ ಮಾವನ ಜೊತೆ ನಾವ್ ಹೊರಗೆ ಹೋಗಿದ್ದೇ ಇಲ್ಲ '.

ಅತ್ತೆ ಹೇಳಿದ್ರು 'ಆವತ್ತು ನಮಗೆ ಕಾಲ ಹಂಗೆ ಇತ್ತು ಕಣ್ ಮಗ ಮೂರು ಮಕ್ಕಳನ್ನ ಸಾಕೋದಕ್ಕೆ ಅದೆಷ್ಟ್ ಕಷ್ಟ ಪಟ್ಟಿದ್ದೀನಿ ಗೊತ್ತಾ "....
ಈಗ್ಲೂ ನಾನೇನಾದ್ರು ಫೈವ್ ಸ್ಟಾರ್ ತಗೊಂಡ್ ಹೋಗಿ ಕೊಟ್ರೆ ಮಂಜು ಕಣ್ಣಲ್ಲಿ ಅದೇನೋ ಒಂದು ಮಿಂಚು ಮಿಂಚಿ ಮರೆಯಾಗುತ್ತೆ .... ಬಹುಶಃ ಒಂದು ಚಾಕ್ಲೇಟ್ಗೆ ಹಾತೊರೆದ ಬಾಲ್ಯದ ನೆನಪಾಗುತ್ತದೆಯೇನೋ ... 


ಸುಮ್ನೆ ಹಂಚಿಕೊಳ್ಳಬೇಕು ಅನಿಸ್ತು ..
ಒಂದು ಸಣ್ಣ ಹೋಟೆಲ್ . ಒಬ್ಬ ವ್ಯಕ್ತಿ ಬಂದು ಟೀ ಕುಡಿತಾನೆ . ಸ್ವಲ್ಪ ಕುಡಿದು ಮತ್ತೆಲ್ಲ ಅಲ್ಲೇ ಬಿಟ್ಟು ದುಡ್ಡು ಕೊಟ್ಟು ಹೊರಡುತ್ತಾನೆ . ಮತ್ತೊಬ್ಬ ವ್ಯಕ್ತಿ ಅಲ್ಲೇ ಇದ್ದವನು ಅದನ್ನು ನೋಡುತ್ತಾನೆ. ಎಷ್ಟ್ ಟೀ ದಂಡ ಆಯ್ತಲ್ಲ ಅಂತ ಮರುಗುತ್ತಾನೆ .. ಟೀ ದಂಡ ಆಗುತ್ತದೆ ಅಂತ ಅವನು ಕುಡಿಯೋದಿಲ್ಲ .. ಯಾಕೆ ಅಂದ್ರೆ ಅವನಿಗೆ ಪ್ರೆಸ್ಟೀಜ್ ಇದೆ...ಮತ್ತೆ ಏನೂ ಮಾಡದೆ ಮರುಗುತ್ತಲೇ ಇರುತ್ತಾನೆ.. ಮತ್ತೊಬ್ಬ ವ್ಯಕ್ತಿ ಬರುತ್ತಾನೆ ಉಳಿದ ಟೀ ನೋಡುತ್ತಾನೆ ಸ್ವಲ್ಪವೂ ಬೇಸರಿಸದೆ ಎಂಜಲು ಅಂತ ಕೂಡ ಅನ್ನದೆ ಅದನ್ನ ಕುಡಿದು ಹೊರಟೇ ಬಿಡುತ್ತಾನೆ .. ಮೊದಲು ಕುಡಿದವ ದುಡ್ಡು ಹೆಚ್ಚಾದವ ...ಕಡೆಗೆ ಕುಡಿದವ ಬಡತನದವ.. ಮಧ್ಯೆ ನೋಡುತ್ತಾ ಮರುಗುತ್ತಾ ಕುಳಿತವ ಮಧ್ಯಮ ವರ್ಗದವರ ಪ್ರತಿನಿಧಿ .. ಇಲ್ಲಿ ಟೀ ಅನ್ನೋದು ಒಂದು ಪ್ರತೀಕ ಅಷ್ಟೇ .. ಅದು ಹಣ ಆಗಿರಬಹುದು, ದಾನ ಆಗಿರಬಹುದು, ಮತ್ತೊಂದು ಆಗಿರಬಹುದು ..ಮೊದಲಿಬ್ಬರು ಹೇಗೋ ಹೊಟ್ಟೆ ತುಂಬಿಸಿಕೊಂಡರೆ .. ಈ ಮಧ್ಯಮ ವರ್ಗದವರು ತಮ್ಮತನವನ್ನೂ ಬಿಡದೆ .. ತಮ್ಮದೇ ego ಇ(ಕಟ್ಟಿ)ಟ್ಟುಕೊಂಡು, ಹೊಟ್ಟೆ ತುಂಬಾ ತಿನ್ನದೇ , ತಿನ್ನುವವರ ನೋಡುತ್ತಾ , ನಾಳೆಗೆ ನಾಳೆಗೆ ಅಂತ ಮರುಗಿ, ಮನಸಾಕ್ಷಿಗೆ (!!)ಮೆಚ್ಚುವಂತೆ ನಡೆದೆ ಎಂದುಕೊಂಡು ಬದುಕುವವರು. ಕಡೆಗೊಮ್ಮೆ ಯಾರಿಗೂ ಕಾಣದೆ ಮರೆಯಾಗಿ ಹೋಗುವವರು .....
ಅಲ್ಲೆಲೋ ಒಂದು ಕಡೆ ಎಲೆಕ್ಷನ್ ನಡಿತಾ ಇದೆ .. ಅಲ್ಲಿ ನಡೆಯೋ ಹಣ ಚೆಲ್ಲಾಟದ ಬಗ್ಗೆ ನಡೆದ ಮಾತುಗಳು ....
ಒಂದಷ್ಟು ಕಥೆಗಳು ಅದೆಷ್ಟು ಪ್ರಭಾವ ಬೀರುತ್ವೆ ಅಂದ್ರೆ ಓದಿದ್ದು ಖಂಡಿತಾ ಹಂಚಿಕೊಳ್ಳಲೇ ಬೇಕು ಅನ್ನೋ ಅಷ್ಟು ... ಇಲ್ಲೊಂದು ಅಂತಹದೇ ಕಥೆ ಇದೆ ..ಗೆಳೆಯರೊಬ್ಬರು ಕಳಿಸಿದ್ದು. ಅದರ ಅನುವಾದ ಇದು .. ಒಂದ್ ಸಾರಿ ಓದಿಬಿಡಿ ..
ಶಿವ ಪಾರ್ವತಿ ಅವರ ಮಕ್ಕಳ ಜೊತೆ ಕೈಲಾಸದಲ್ಲಿ ಸಂತಸವಾಗಿ ಇರ್ತಾರೆ . ಎಲ್ಲಾ ಕಡೆ ಪ್ರೀತಿ, ನೆಮ್ಮದಿ, ನಗುವಿನ ಹೊಳೆಯೇ ಇರುತ್ತದೆ. ಧರ್ಮ ಇನ್ನು ತಲೆ ಎತ್ತಿ ಮೆರೆಯುತ್ತಾ ಇರ್ತಾನೆ. ಭೂಮಿ ಸಮೃದ್ಧವಾಗಿರುತ್ತದೆ .
ಆದರೆ ಸಿಕ್ಕೆಲ್ಲಾ ಉಪಯೋಗಿ ವಸ್ತುಗಳನ್ನ ಮನುಷ್ಯ ಬೇಕಾಬಿಟ್ಟಿ ಉಪಯೋ(ಬೋ!!!)ಗಿಸಿ ಭೂಮಿ ಮೇಲೆ ಮಳೆ ಇಲ್ಲದಂತೆ ಆಗುತ್ತದೆ .. ವರುಣ ವಾಯು ಕೋಪಿಸಿಕೊಂಡುಬಿಡ್ತಾರೆ .. ಭೂಮಿ ಮೇಲೆ ಬರ ಶುರುವಾಗಿ ಬಿಡುತ್ತದೆ. ಪ್ರಾಣಿ ಪಕ್ಷಿಗಳಿಗೆ ಆಹಾರ ಇಲ್ಲದಂತಾಗುತ್ತದೆ .. ಎಲ್ಲೆಲ್ಲು ಹಾಹಾಕಾರ .. ಇತ್ತ ಕೈಲಾಸದಲ್ಲೂ ಹಾಗೆ ಆಗುತ್ತದೆ . ಹಸಿವೆ ತಾಳದ ಶಿವನ ಸರ್ಪ ವಾಸುಕಿ ಗಣಪನ ಇಲಿಯನ್ನ ಹಿಡಿದು ನುಂಗಿಬಿಡುತ್ತದೆ . ಇದನ್ನ ಕಂಡ ಕಾರ್ತಿಕೇಯನ ನವಿಲು ಸರ್ಪವನ್ನ ಹಿಡಿದು ತಿಂದುಬಿಡುತ್ತದೆ , ನವಿಲನ್ನ ಪಾರ್ವತಿಯ ಸಿಂಹ ತಿಂದುಬಿಡುತ್ತದೆ ... ಪಾರ್ವತಿಯ ಮಾತೃ ಹೃದಯ ಮಕ್ಕಳ ಈ ಪರಿಯ ದೌರ್ಜನ್ಯ ಕಂಡು ಮರುಗುತ್ತದೆ . ಪಾರ್ವತಿಯ ನೋವಿಗೆ ಶಿವನ ತಪಸ್ಸು ಭಂಗವಾಗುತ್ತದೆ ..
ಶಿವ 'ದೇವಿ , ಹಸಿವಿನ ತೃಪ್ತಿ ಒಂದೇ ಧರ್ಮ ಕಾಪಾಡುವ ಸಾಧನ .. ಭೂಮಿಯಲ್ಲಿ ನೆಮ್ಮದಿ ಬೇಕೆಂದರೆ ಮೊದಲು ಹಸಿವು ತೃಪ್ತವಾಗಬೇಕು ' ಅಂತಾನೆ
'ಆದರೆ ...ಈ ಪರಿಯ ಹಾಹಾಕಾರ , ನಾ ನೋಡಲಾರೆ .' ಅಂತಾಳೆ ಪಾರ್ವತಿ.
ಶಿವ ಹೇಳ್ತಾನೆ 'ಪಾರ್ವತೀ, ಹಸಿವು ಪ್ರಕೃತಿದತ್ತ .. ಬರ ಮಾನವ ನಿರ್ಮಿತ .... ಇದನ್ನ ಎಲ್ಲಿಯರೆಗೂ ಮಾನವ ಅರಿಯನೋ ಅಲ್ಲಿಯವರೆಗೂ ಈ ಪ್ರಕೃತಿ ಮುನಿಸು ಅತಿವೃಷ್ಟಿ ಅನಾವೃಷ್ಟಿ ಇದ್ದೇ ಇರುತ್ತದೆ .. 'ಬುದ್ದಿ 'ಇರುವ ಮಾನವನಿಗೆ ಹೇಳುವವರಾರು ಹೇಳು '.... ಪಾರ್ವತಿ ನಿರುತ್ತರಳಾಗ್ತಾಳೆ ...
ಹೌದು ಅಲ್ವೇ , ಹಸಿವು ಪ್ರಕೃತಿದತ್ತ , ಬರ ಮಾನವ ನಿರ್ಮಿತ .... ಪರಿಹಾರ ......!!!!???
ಒಬ್ಬ ಕವಿಯ, ಲೇಖಕನ, ಸಾಹಿತಿಯ ಧನ್ಯತೆ ಎಲ್ಲಿ ಸಿಗಬಹುದು..?ಮೆಚ್ಚುಗೆ, ಕೀರ್ತಿ,ಹಣ...???
೧೯೨೦ ರಲ್ಲಿ ಕವಿ ಟಾಗೋರ್ ಇಂಗ್ಲೆಂಡ್ ಅಲ್ಲಿ ಇದ್ದರು. ಒಂದು ಪತ್ರ ಅವರಿಗೆ ಬಂತು..ಅದು ಇಂಗ್ಲಿಷ್ ಮಹಿಳೆಯೊಬ್ಬಳ ಪತ್ರ......ಒಕ್ಕಣೆ ಹೀಗಿತ್ತು.......
ಪ್ರಿಯ ರವಿಂದ್ರನಾಥ್ ಸರ್,
ನೀವು ಲಂಡನ್ನಲ್ಲಿ ಇದ್ದೀರಂತೆ , ನಿಮಗೆ ಪತ್ರ ಬರೆಯಬೇಕೆಂದು ಬಹಳ ದಿನಗಳಿಂದ ಅನ್ಕೊಂಡೆ . ಧೈರ್ಯ ಬಂದಿರಲಿಲ್ಲ..ಆದ್ರೆ ಈವತ್ತು ಬರೆಯಲೇಬೇಕು ಎಂದು ಬರೆಯುತ್ತ ಇದ್ದೇನೆ ..ಈ ಪತ್ರ ನಿಮ್ಮ ಕೈ ಸೇರಿದರೆ ನನ್ನ ಪುಣ್ಯ. ಯಾಕೆ ಅಂದ್ರೆ ನಿಮ್ಮ ವಿಳಾಸ ಕೊಡ ನಂಗೆ ಸರಿಯಾಗಿ ಗೊತ್ತಿಲ್ಲ..ನಿಮ್ಮ ಹೆಸರಿನ ಬಲದಿಂದ ಸೇರುತ್ತೆ ಅನ್ನೋ ನಂಬಿಕೆಯಿಂದ ಬರಿತಾ ಇದ್ದೇನೆ..
ಎರಡು ವರ್ಷದ ಹಿಂದೆ ನನ್ನ ಮಗ ಯುದ್ಧ ಭೂಮಿಗೆ ಹೊರಟಿದ್ದ . ಆಗ ನಾವಿಬ್ಬರು ಮುಳುಗೋ ಸೂರ್ಯನ ಸಮಕ್ಷಮದಲ್ಲಿ ಸಾಗರವ ನೋಡುತ್ತಾ ಮೌನವೇ ಮಾತಾಗಿ ನಿಂತಿದ್ದೆವು. .ಆಗ ನನ್ನ ಕವಿಮಗ ತನಗೆ ತಾನೆ ಎಂಬಂತೆ ಈ ಮಾತು ಹೇಳಿದ "When I go from hence ,let this be my parting words"
ಯುದ್ದಕ್ಕೆ ಹೋದ..ಅವನು ಮತ್ತೆ ಬರಲಿಲ್ಲ....
ಬಂದಿದ್ದು ಅವನ ಪಾಕೆಟ್ ಬುಕ್. ತೆರೆದು ನೋಡಿದೆ. ಅಕ್ಕರೆಯಿಂದ ಬರೆದ ಅದೇ ವಾಕ್ಯ ನನ್ನ ಸೆಳೆಯಿತು. ಕೆಳಗೆ ನಿಮ್ಮ ಹೆಸರು ಇತ್ತು....ನನಗೆ ನನ್ನ ಮಗನ ಮನಸೂರೆಗೊಂಡ ಈ ಕವನ ಇಡಿಯಾಗಿ ಓದೋ ಆಸೆ ದಯವಿಟ್ಟು ಆ ಕವಿತೆ ಇರೋ ಪುಸ್ತಕದ ಹೆಸರ ತಿಳಿಸುವಿರಾ?......ಹೀಗಂತ ಕೇಳೋದು ತಪ್ಪು ಅಲ್ಲ ತಾನೇ.?"
ಪತ್ರ ಬರೆದ ಮಹಿಳೆ ಸುಸಾನ್ ಓವೆನ್ ಅನ್ನುವವರು ..ವಿಖ್ಯಾತ ಕವಿ ವಿಲ್ಫ್ರೆಡ್ ಓವೆನ್ (Wilfred Oven)ನ ತಾಯಿ........(ಈ ಮೇಲಿನ ಪದ್ಯದ ಸಾಲು ಟಾಗೋರ್ ರ ಗೀತಾಂಜಲಿಯದು )
ಓದಿದ ಟಾಗೋರ್ ರ ಸ್ತಂಭಿಭೂತರಾದರು .
ಒಬ್ಬ ಕವಿಗೆ ಇದಕ್ಕಿಂತ ಮತ್ತೇನು ಬೇಕು ಅಲ್ವ ....
Felt Like sharing:))))
ಒಂದು watsap ಕಥೆ ಬಂದಿತ್ತು ...
ಅದರ ಭಾವಾನುವಾದ ಇದು ...
ಅಮ್ಮ ಮಗನಿಗೆ ಒಂದು ಕಾಗದ ಬರಿತಾಳೆ :
ಕಂದ ,
ನೀವಿಬ್ಬರು ಚೆನ್ನಾಗಿದ್ದೀರಾ ಅಂತ ನಂಬಿದ್ದೇನೆ . ಇದೇನು ನಮ್ಮಮ್ಮ ಇಮೇಲ್ ಬರೆಯುತ್ತಿದ್ದಾಳೆ ಅಂತ ಆಶ್ಚರ್ಯ ಆಯ್ತಾ? ಏನಿಲ್ಲ ಮಗ ಬರೀಬೇಕು ಅನಿಸ್ತು ಅದಕ್ಕೆ ಬರಿತಾ ಇದ್ದೀನಿ , ನಿನಗೆ ಬುದ್ದಿ ತಿಳಿದಾಗಿನಿಂದ ನೀ ಜಾಣನಾಗೆ ಇದ್ದೆ ಅದಕ್ಕೆ ನಿನಗೆ ಏನೂ ಹೇಳೋ ಪ್ರಮೇಯ ಇರಲಿಲ್ಲ . ಈವತ್ತು ಒಂದ್ ಮಾತು ಹೇಳ್ತೀನಿ ಓದಿ ಬಿಡು ಪ್ಲೀಸ್ . ನೆನ್ನೆ ನಿನ್ನಪ್ಪ, ನಾನು ನಿಮ್ಮಮನೆಗೆ ಬಂದಾಗ ತುಂಬಾ ಖುಷಿ ಆಯ್ತು . ನಿನ್ನ ಹೆಂಡತಿ ನಿಜಕ್ಕೂ ಒಳ್ಳೆ ಹುಡುಗಿ ನಿಮ್ಮಿಬ್ಬರ ಹೊಂದಾಣಿಕೆ ಎಷ್ಟ್ ಚೆಂದ . ಹೀಗೆ ಇರಿ ಇಬ್ರು.
ಈಗ ನಾ ಹೇಳೋಕೆ ಹೊರಟಿದ್ದು ಏನು ಗೊತ್ತಾ ? ತುಂಬಾ ಸಣ್ಣ ವಿಷ್ಯ , ಆದ್ರೆ ಪದೇ ಪದೇ ನಡೆದರೆ ಗಂಡಹೆಂಡಿರ ಮಧ್ಯೆ ಅಂತರ ತರುತ್ತದೆ . ನಿನ್ನ ಹೆಂಡತಿ ಮಾಡಿದ ಆಕಾರವೇ ಇಲ್ಲದ ಚಪಾತಿಯ ಬಗ್ಗೆ ನೀ ಹಾಸ್ಯ ಮಾಡಿ ನಕ್ಕೆ, ನಿನ್ನ ಜೊತೆ ಅಪ್ಪ ಕೂಡ ನಕ್ಕರು. ಪಾಪ ಆ ಹುಡುಗಿ ಕಣ್ಣು ತುಂಬಿಕೊಂಡಳು .. ಬಹುಶಃ ರಾತ್ರಿ ಅತ್ತಳು ಅನಿಸುತ್ತದೆ , ಬೆಳಿಗ್ಗೆ ಅವಳ ಕಣ್ಣು ಬಾಡಿತ್ತು. ಮಗ, ನನಗೆ ಆಕಾರವೇ ಇಲ್ಲದ ಚಪಾತಿ ಅಂದ್ರೆ ಬೇಸರ ಇಲ್ಲ. ಅದು ನನ್ನ ಅಡುಗೆಮನೆಯ ಮೊದಲ ದಿನಗಳನ್ನ ನೆನಪಿಸುತ್ತದೆ .ಕಲಿಯುವಿಕೆಯ ಆನಂದ ನೆನಪಿಗೆ ಬರುತ್ತದೆ ಅಮ್ಮನಿಗೆ ಕಚೇರಿಯಲ್ಲಿ ಕೆಲಸ ಜಾಸ್ತಿ ಇದ್ದಾಗ ಅಪ್ಪ ಮಾಡುತ್ತಾ ಇದ್ದ ಚಪಾತಿ ನೆನಪಿಗೆ ಬರುತ್ತದೆ, ಅಪ್ಪನಿಗೆ ನಮ್ಮ ಮೇಲಿದ್ದ ಪ್ರೀತಿಯ ರೂಪ ನೆನಪಾಗುತ್ತದೆ . ನೀ ನನ್ನ ಒಡಲಲ್ಲಿ ಇದ್ದಾಗ ಅಡುಗೆಯ ವಾಸನೆಗೆ ವಾಕರಿಸುತ್ತಿದ್ದ ನನಗಾಗಿ ನಿನ್ನಪ್ಪ ಮಾಡುತ್ತಿದ್ದ ಚಪಾತಿ ನೆನಪಿಸುತ್ತದೆ, ಹೆಂಡತಿ ಮತ್ತು ಇನ್ನು ಹುಟ್ಟದ ಕಂದನ ಬಗ್ಗೆ ಇದ್ದ ಅಕ್ಕರೆ ನೆನಪಿಸುತ್ತದೆ . ನಾ ಚಪಾತಿ ಮಾಡುವಾಗ ನೀ ನಿನ್ನ ಪುಟ್ಟ ಕೈಯಲ್ಲಿ ಹಠ ಮಾಡಿ ಒತ್ತಿ ಕೊಡುತ್ತಿದ್ದ ಚಪಾತಿ ಎಷ್ಟ್ ಚೆಂದ ಇರ್ತಿತ್ತು ಗೊತ್ತ !!
ಮಾತುಗಳು ಜಗವ ಸುಂದರ ಮಾಡುತ್ತವೆ . ಅದೇ ಮಾತುಗಳು ಜನರ ದೂರ ಮಾಡುತ್ತವೆ . ಮಗ, ಅವಳೂ ನಿನ್ನಷ್ಟೇ ಓದಿದ್ದಾಳೆ . ನೀ ಓದಿದಷ್ಟೇ ವರ್ಷ ಅವಳೂ ಓದಿದ್ದಾಳೆ .. ಹಾಗಾದ್ರೆ ಅವಳು ಅಡುಗೆಯಲ್ಲೂ ನುರಿತಳಾಗೋಕೆ ಸಮಯ ಎಲ್ಲಿತ್ತು ಮಗ? ಸಣ್ಣ ವಿಷ್ಯ ಅಲ್ವಾ ? ಅತ್ತೆ ಬೈದರೆ ಬೇಸರ ಅಲ್ಲ, ಓರಗಿತ್ತಿ ನಕ್ಕರೆ ಬೇಸರ ಅನ್ನೋ ಹಾಗೆ , ಒಬ್ಬರನ್ನ ಹಾಗೆ ವ್ಯಂಗ್ಯ ವಾಡೋದು ತಪ್ಪು ಮಗ . ಕಲಿತಾಳೆ ಬಿಡು . ಅವಳಿಗೆ ಪ್ರೀತಿಯ ಜೊತೆಗೆ ಗೆಳೆತನ, ಒಂದಷ್ಟು ಸಹಾಯ ನೀಡು .. ಖುಷಿ ಆಗ್ತಾಳೆ . ಇದು ಎಲ್ಲರಿಗೂ ತಿಳಿದ ಆದರೆ ಅರಿವಿಗೆ ತೆಗೆದುಕೊಳ್ಳದ ಸಣ್ಣ ಸಂಸಾರದ ಗುಟ್ಟು . ಒಂದು ಸಣ್ಣ ಮೆಚ್ಚುಗೆ ಪ್ರೀತಿಯ ಇಮ್ಮಡಿಸುತ್ತದೆ ..
ಇದು ನನ್ನ ಅನುಭವದ ಮಾತು ...
ನಿನ್ನ ಪ್ರೀತಿಯ
ಅಮ್ಮ.
ಯಾಕೋ ಹಂಚಿಕೊಳ್ಳಬೇಕು ಅನಿಸಿತು .. ಮತ್ತೇನು ಹೇಳೋದು ಬೇಡ ಅಂತ ಕೂಡ ಅನಿಸಿತು... ಮನಸ್ಸು ಮಳೆಯ ನಂತರದ ಆಗಸದಂತೆ ..:)))

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...