Friday, 24 June 2011

ಮುಂಜಾವು

ನಸುಬೆಳಕಿನ
ತುಸುಕತ್ತಲ ...
ಇಳೆಗೆ ರವಿಯ ಉಸಿರು ಸೋಕೋ ವೇಳೆ

ಮನೆಯ ಮುಂದಿನ ಮರದ ಮೇಲೆ ..
ಪುಟ್ಟ ಹಕ್ಕಿಗಳ ಪ್ರಣಯ ಲೀಲೆ...

ಒಲವಿನ ಅದು..ಚೆಲುವಿನ ಇದು...
ಪಿಸು ಮಾತು...ಒರೆ ನೋಟ
ನಲಿವು, ಆಸೆ, ನಂಬಿಕೆ....
ಉಲ್ಲಾಸದ ಲಹರಿ...
ಪ್ರೇಮದ ಪ್ರತಾಪ...

ಯಾವುದೊ ಕಾಣದ ಸೂತ್ರಕ್ಕೆ ಸಿಕ್ಕಂತೆ
ನಗುತ್ತ ಎದ್ದು ಹೂಯ್ತೊಂದು ಹಕ್ಕಿ...

ಒಡಲೊಳಗೆ ಕದಲುತ್ತ...
ಮನದೊಳಗೆ ಕರಗುತ್ತಾ...
ನಭದಿಂದ ಧರೆಗಿಳಿದ
ಇನ್ನೊಂದು ಹಕ್ಕಿ..
ಕಾಯುತ್ತಿದೆ..
ಮತ್ತೊಂದು ಬೆಳಗಿಗಾಗಿ...
ಅದೇ ಬೆಳಕಿಗಾಗಿ...

ನಾನೂ ಕಾಯುತ್ತಿದ್ದೇನೆ ನಾಳಿನ ಬೆಳಗಿಗಾಗಿ..
ಪುಟ್ಟ ಹಕ್ಕಿಗಳ ಮಿಲನಕ್ಕಾಗಿ..
ಮಧುರ ಚಿಲಿಪಿಲಿಗಾಗಿ..

Saturday, 18 June 2011

ಶಬರಿ


ನಿನ್ನೊಡನೆ ನಾನು..
ನನ್ನೊಡನೆ ನೀನು ..
ಎಂದ ಅವರು ಅವರ ಹಾದಿಯಲ್ಲೇ ..
ಕೊನೆಯವರೆಗೂ ಸಾಗಬೇಕಿತ್ತು

ನಡುವೆ ಹಾದಿ ಕವಲಾಯ್ತು
ಅವನ ಹಾದಿ ಅವನದಾಯ್ತು.
ಅವಳ ದಾರಿ ಅವಳದು
ಬೆಳಕು ಕಳೆದು ಹೋಯ್ತು ..
ಗುರಿ ಮುಟ್ಟುವ ಮೊದಲೆ ಪಯಣ ಕೊನೆಯಾಯ್ತು

ಆಕೆಗೆ ಅವನಲ್ಲಿದ್ದ ಪ್ರೀತಿಯ ಹಂಬಲ
ಅವಳನ್ನು ಶಬರಿಯನ್ನಾಗಿಸಿತು
ವರುಷಗಳುರುಳಿದರೂ
ಕಂಬನಿ ನಿಲ್ಲದಾಯ್ತು
ನೆನಪುಗಳು ಮಾಸದಾಯ್ತು...

ಎಲ್ಲಾ ಕಂಬನಿಗಳಿಗೂ ಅಣೆಕಟ್ಟ ಹುಡುಕಬೇಕು..
ಎಲ್ಲಾ ನೆನಪುಗಳಿಗೂ ಸಮಾಧಿ ಕಟ್ಟಲೆಬೇಕು
ಆದರೆ ಸಮಾಧಿಗೂ ಅಣೆಕಟ್ಟಿಗೂ ಹೊಂದುವ
ಕಲ್ಲು ಅವನಲ್ಲೇ ಉಳಿದು ಹೋಯಿತು
ನನಪುಗಳು ಕಂಬನಿಗಳು ಅವಳ ಸ್ವತ್ತಾದವು
ಆದರು ಅವಳು ಕಾಯುತಿದ್ದಾಳೆ ಶಬರಿಯಾಗಿ..
ಅವನಿಗಾಗಿ..

Thursday, 16 June 2011

ಸುಪ್ತಗಾನ

 ಅಲ್ಲಿ ಮಳೆಯಂತೆ
ಬಿಡದೆ ಸುರಿವ ಮಳೆಯಂತೆ
ಹನಿ ಹನಿಯಲ್ಲೂ ಇಣುಕುತ್ತಿರುವುದು  ನನ್ನ ನೆನಪೇ ಅಂತೆ
 ಮುಸ್ಸಂಜೆ ಮಬ್ಬುಗತ್ತಲಲ್ಲಿ 
ದೇವರಿಗೊಂದು ದೀಪ ಬೆಳಗುವಲ್ಲಿ
ಕಂಡ ನೆರಳಲಿ ಹುಡುಕಿದ್ದು ನನ್ನ ಚಿತ್ರವನಂತೆ ...
ಚಂದ್ರನೇ ಇಲ್ಲದ ಆಗಸದಲ್ಲಿ..
ಸಣ್ಣ ಹನಿ ಬೀಳುವಲ್ಲಿ.
ಧ್ವನಿಸಿದ್ದು  ನನ್ನ ಕಾಲಂದುಗೆಯ ಸದ್ದಂತೆ ..

ಆದರೆ ...
ಇಲ್ಲಿ ಮಳೆ ಇಲ್ಲ ...
ನಸುಗತ್ತಲ ಇಳಿಸಂಜೆಯಲ್ಲಿ..
ದೇವರ ಮುಂದೊಂದು ಹಣತೆ ಬೆಳಗುತ್ತಾ
ಮೋಡದಲ್ಲಡಗಿದ ಚಂದಿರನ ಹುಡುಕುತ್ತ ...
ಮುಂಬಾಗಿಲ ಬಳಿಯ ಹೆಜ್ಜೆಯ ದನಿಗೆ ಕಾಯುತ್ತ...
ನಿನ್ನ ನೆನಪಿಗೊಂದು ರಾಗಮಾಲಿಕೆ ಬರೆಯುತ್ತಿರುವ
ಮನದಲ್ಲಿ ಮಾತ್ರ
ನಿನ್ನ ಸುಪ್ತಗಾನದ ಸದ್ದು....
ಇಳೆಗೆ ಕಳೆಯ ತಂದ ಮಳೆಯ ಸದ್ದು!!!!

Wednesday, 8 June 2011

ಜೀವನ


ಸಾಗರದ ಅಲೆಗಳು...
ಒಂದರ ಹಿಂದೊಂದು..
ಒಂದಕ್ಕೂ ಹೆಸರಿಲ್ಲ..
ಒಂದಕ್ಕೂ ಗುರಿ ಇಲ್ಲ..
ಹಾಗೆ ಬಂದು ಹೀಗೆ ಹೋದ ಅಲೆಗಳು...
ಬರಿಯ ನೀರು ..ಹೆಸರಿಲ್ಲದ ಉಸಿರಿಲ್ಲದ ನೀರು... 

ಬದುಕಿನ ಹೊತ್ತಿಗೆಯಲ್ಲಿ 
ನೂರಾರು ಪುಟಗಳು..
ಹೀಗೆ ಬಂದು ಹಾಗೆ ಹೋದ ಖಾಲಿ ಪುಟಗಳು..
ಕೆಲವಕ್ಕೆ ಬಣ್ಣವಿಲ್ಲ...
ಹಲವಕ್ಕೆ ಪದಗಳಿಲ್ಲ....
ಬರಿಯ ಅಕ್ಷರಗಳು.....ಅರ್ಥವಿಲ್ಲದ ವ್ಯರ್ಥ ಅಕ್ಷರಗಳು... 

ಬಾಳ ಬನದಲ್ಲಿ
ನೂರಾರು ಮರಗಳು..
ಹುಟ್ಟಿ ಮುರುಟಿ ಹೋಗೊ ಸಂಬಂಧಗಳು...
ಕೆಲವಕ್ಕೆ ಒಲವಿಲ್ಲ....
ಉಳಿದವಕ್ಕೆ ಬಲವಿಲ್ಲ..
ಬರಿಯ ಬಂಧಗಳು..ಬೇಡದ ಬಂಧನಗಳು... 

ನೀರಲ್ಲೂ ಜೇನ...ಅಕ್ಷರದಲ್ಲೂ ಹಾಡ.. ಬಂಧನದಲ್ಲೂ ಅನುಬಂಧ 
ಹುಡುಕೋದೆ ಜೀವನ....
ಇದು ಬರಿ ಉಸಿರಲ್ಲ ಗೆಳೆಯ...
ಇದು ಜೀವಾಮೃತ...
ಇದನರಿಯದಿದ್ದರೆ...ಜೀವನ ಅನೃಥ ..

Wednesday, 1 June 2011

ಪಳಿಯುಳಿಕೆಬಾಗಿಲ ಬಳಿ ಕುಳಿತು ಕಾಯುತ್ತಿದ್ದೇನೆ 
ಪ್ರಿಯಾತಿಪ್ರಿಯರು ಬರುವರೆಂದು...
ನಸುನಕ್ಕು ಮಾತಾಡುವರೆಂದು
ದಿನವೊಂದು ಯುಗದಂತಾಗಿ 
ಕ್ಷಣವೊಂದು ತಾಸಾಗಿ ..
ನಗುವೇ ಮರೆತು ಹೋಗಿ...
ಹೊತ್ತು ಕಳೆಯುತಿಲ್ಲ ನನಗೆ...

ಆ ಕಾಲವೊಂದಿತ್ತು...
ಯುಗಗಳೇ ದಿನಗಳಾಗಿ...
ದಿನವೊಂದು ಕ್ಷಣವಾಗಿ...
ಬದುಕೊಂದು ಬನವಾಗಿ ...
ಇಹ ಪರಗಳ ಸುಖವೆಲ್ಲಾ ಸೂರೆಹೋಗಿ..
ಜಗವೆಲ್ಲ ನಾಕವಾಗಿ...

ಈಗ 
ಕಾಯುತ್ತಲಿದ್ದೇನೆ...
ನಾನು ಬಣ್ಣ ತುಂಬಿದ ಜನರಿಗಾಗಿ...
ನನ್ನಿಂದ ಬೆಳಕ ಪಡೆದವರಿಗಾಗಿ..

ಬರುವರೋ ಬಾರದಿರುವರೋ...

ಬಂದರೂ ಬಾರದಿದ್ದರೂ...
ಕಾಯುತ್ತಲೇ ಇರುವೆ ..

ಏಕೆಂದರೆ..
ಇಂದಲ್ಲ ನಾಳೆ ಅವರೇ ಬರುವರೆಂದು ..

ನನಗಾಗಿಯಲ್ಲ....
ನನ್ನಂತೆ.
ನಸುಕು ಸಂಜೆಯಾದಂತೆ...
ವಯಸ್ಸು ಜಾರಿದಂತೆ...
ಬೆನ್ನು ಬಾಗಿದಂತೆ ...
ವೃದ್ಧಾಶ್ರಮಕ್ಕೆ ...
ನನ್ನಂತೆ....ಪಳಿಯುಳಿಕೆಯಾಗಿ......!!

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...