Saturday 16 April 2016

ಅದೊಂದು ನದಿ . ನದಿಯ ಎರಡೂ ಬದಿಯಲ್ಲಿ ಪುಟ್ಟ ಹಳ್ಳಿಗಳು. ಆ ಹಳ್ಳಿಗಳ ಜನಗಳ ಜೀವಾಳ ಆ ನದಿ. ಬದುಕು ಹೀಗೆ ಸಾಗ್ತಾ ಇತ್ತು...
ಎರಡೂ ಹಳ್ಳಿಯ ಇಬ್ಬರು ಹೆಣ್ಣು ಮಕ್ಕಳು ಒಂದು ನಿರ್ದಿಷ್ಟ ಸಮಯಕ್ಕೆ ನದಿಯ ತಟದಲ್ಲಿ ಕೂರ್ತ ಇದ್ರು. ಒಬ್ಬ ಹೆಣ್ಣು ಮಗಳು ನಸುನಗುತ್ತಾ ಕಾಲುಗಳನ್ನ ನೀರಲ್ಲಿ ಇಳಿಬಿಟ್ಟು ಏನೋ ಮಾತಾಡುತ್ತ ಇದ್ರೆ, ಇನ್ನೊಬ್ಬಳು ಹಾಗೆ ಮೌನವಾಗಿ ನದಿಯ ನೋಡುತ್ತಾ ಕಾಲುಗಳನ್ನ ನೀರಲ್ಲಿ ಇಳಿಬಿಟ್ಟು ಕೂರ್ತಾ ಇದ್ಲು, ಮಾತು ಇಲ್ಲ ನಗುವೂ ಇಲ್ಲ....
ಇಬ್ಬರೂ ಒಬ್ಬರನ್ನೊಬ್ಬರು ನೋಡುತ್ತಾ ಇದ್ರು , ಸ್ವಲ್ಪ ಹೊತ್ತು ಕೂತು, ಮತ್ತೆ ಅವರಷ್ಟಕ್ಕೆ ಅವರು ಹಿಂದಕ್ಕೆ ಹೋಗ್ತಾ ಇದ್ರು. ಇದು ದಿನ ನಿತ್ಯದ ಕಥೆಯಾಗಿತ್ತು. ......
ಒಂದ್ ದಿನ ಇಬ್ಬರಿಗೂ ಮಾತಾಡಬೇಕೆನಿಸಿತು .
ಎಂದೂ ನಗದಾಕೆ ಮತ್ತೊಬ್ಬಳನ್ನ ಕೇಳಿದ್ಲು 'ಅಕ್ಕ ದಿನಾ ಬರ್ತೀಯಲ್ಲ ,ಈ ನದಿಯ ಹತ್ರ ಏನ್ ಮಾತಾಡ್ತೀಯ ?' ಅವಳು ಹೇಳಿದಳು, 'ನನ್ನ ನಲ್ಲ ಕಿವುಡ ಹಾಗು ಮೂಕ ಗೆಳತಿ ' .
ಇವಳಿಗೆ ಆಶ್ಚರ್ಯ , 'ಮತ್ತೆ ನಿನ್ನ ಪ್ರೀತಿ ಹೀಗೆ ಹೇಳ್ತೀಯ'.
"ಪ್ರೀತಿಗೆ ಮಾತೇ ಬೇಕಿಲ್ಲ. ನಾವಿಬ್ಬರೂ ಹಾಗೆ ಒಬ್ಬರನ್ನೊಬ್ಬರು ತುಂಬಾನೇ ಪ್ರೀತಿಸ್ತೀವಿ . ಹೇಳದೆ ಎಲ್ಲವನ್ನು ಹೇಳಿಬಿಡ್ತಾನೆ ಅವನು. ನಾನೂ ಹಾಗೆ. ಆದರೂ , ಹೇಳದೆ ಉಳಿದ ಎಷ್ಟೂ ಮಾತುಗಳನ್ನ ಹೇಳಿಯೇ ತೀರಬೇಕು ಅನಿಸುತ್ತದೆ ಗೆಳತಿ . ಅದಕ್ಕೆ ಇಲ್ಲಿ ಬರ್ತಿನಿ. ಇವಳು, ಈ ನದಿಯ, ಹತ್ರ ಎಲ್ಲಾ ಹೇಳ್ತೀನಿ, ಅವಳೂ ಎಲ್ಲಾ ಕೇಳ್ತಾಳೆ, ಕೇಳಿದ್ದರ ಕುರುಹಾಗಿ ನೀರಲ್ಲಿ ಇಳಿಬಿಟ್ಟ ಪಾದಗಳಿಗೆ ಅಲೆಗಳಿಂದ ಸಾಂತ್ವಾನ ಹೇಳಿಸುತ್ತಾಳೆ , ನಾನು ಎಲ್ಲ ಹೇಳಿಕೊಂಡ ಸಮಾಧಾನದಿಂದ ನಗುತ್ತ ಹೋಗುತ್ತೇನೆ " ಅಂದ್ಲು .
'ಸರಿ ಅಕ್ಕ, ನೀನು ಯಾಕೆ ಮೌನಿ? ನೀ ಇಲ್ಲಿ ಬಂದು ಕೂರೋದು ಯಾಕೆ?' ಅಂದ್ಲು.
ಮೊದಲ ಬಾರಿ ಆ ಮೌನಿಯ ಮೊಗದಲ್ಲಿ ನಗು ಕಾಣಿಸಿತು.
"ನನ್ನ ನಲ್ಲ ಕೂಡ ಕಿವುಡ ಮೂಕನೆ ಕಣೆ ಆದರೆ ದೈಹಿಕವಾಗಿ ಅಲ್ಲ, ಭಾವನಾತ್ಮಕವಾಗಿ. ಅವನು ಎಂದೂ ನನ್ನ ಪ್ರೀತಿ ಬಗ್ಗೆ ಕೇಳೋದಿಲ್ಲ, ತನ್ನ ಪ್ರೀತಿಯ ಬಗ್ಗೆ ಹೇಳೋದಿಲ್ಲ . ಬದುಕಿನ ಅಗತ್ಯಗಳನ್ನೆಲ್ಲಾ ನೀಡುವ ಅವನು ನನ್ನ ಭಾವನೆಗಳ ಅಗತ್ಯಗಳಿಗೆ ಕಿವಿಗೊಡಲಾರ . ಅದಕ್ಕೆ ಇಲ್ಲಿ ಬಂದು ಇವಳ ಹತ್ರ ಎಲ್ಲಾ ಹೇಳ್ತೀನಿ . ನೀನು ಹೇಳೋಹಾಗೆ ಇವಳು ಎಲ್ಲಾ ಕೇಳಿ ನನ್ನ ಜೊತೆ ತನ್ನ ಕಣ್ಣಿ ಹರಿಸುತ್ತಾಳೆ, ನನ್ನ ಜೊತೆ ನಗ್ತಾಳೆ , ನಾನು ಯಾವತ್ತು ಒಂಟಿ, ಪ್ರೀತಿ ಸಿಗದವಳು ಅಂತ ಅನಿಸೋಕೆ ಬಿಡೋದೇ ಇಲ್ಲ ಅವಳು . ಇವಳು ಕಿವುಡಿ ಅಲ್ಲ ಕಣೆ " ಅಂದ್ಲು ........
ನದಿ ಹರಿಯುತ್ತಲೇ ಇತ್ತು, ಇವರ ನಗು ಅಳು ಹೊತ್ತು.......
(ನನ್ನ ಗೆಳತಿಯೊಬ್ಬಳು ಕಳಿಸಿದ ಒಂದು ಇಂಗ್ಲಿಷ್ ಕಥೆಯ ಸಂಕ್ಷಿಪ್ತಾನುವಾದ ಇದು. ಯಾಕೋ ಹಂಚಿಕೊಳ್ಳಲೇ ಬೇಕು ಅನಿಸಿತು)

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...