Tuesday, 8 September 2015

ಕುರುಕ್ಷೇತ್ರ ಯುದ್ದ ಮುಗಿದು ಅದೆಷ್ಟೋ ವರ್ಷಗಳ ನಂತರ, ಎಲ್ಲಾ ತಣ್ಣಗಾಗಿ ಅವರವರ ಕೆಲಸದಲ್ಲಿ ಇದ್ದಾಗ , ಕೃಷ್ಣ ಏಕಾಂತದಲ್ಲಿದ್ದಾಗ ಒಂದು ದಿನ ಅರ್ಜುನ ಬರ್ತಾನೆ.
'ಬಾ ಅರ್ಜುನ ಏನ್ ವಿಷ್ಯ ' ಅಂತಾನೆ ಕೃಷ್ಣ.
ಅರ್ಜುನ "ದೇವ ನಿನ್ನ ಹತ್ತಿರ ಕೇಳಬೇಕು ಅಂತ ಅದೆಷ್ಟೋ ಪ್ರಶ್ನೆಗಳು ವರುಷಗಳಿಂದ ಹಾಗೆ ಇದೆ. ಈವತ್ತು ನನಗೆ ಉತ್ತರ ಬೇಕು " ಅಂತಾನೆ .
ಕೃಷ್ಣ 'ಅದೇನು ಕೇಳು ಪಾರ್ಥ ' ಅಂತಾನೆ .
ಅರ್ಜುನ ಶುರು ಮಾಡ್ತಾನೆ  "ಪರಮಾತ್ಮ,, ನೀನು ನಮಗೆ ಅತ್ಯಂತ ಆಪ್ತನಾಗಿದ್ದೆ.ನಾವೂ ನಿನ್ನನ್ನು ತುಂಬಾ ನಂಬಿದ್ದೆವು. ಆದರೆ ಬಹಳಷ್ಟು ಸಾರಿ ಬೇಕೆಂದಾಗ ನೀನು ನಮ್ಮ ಕೈ ಹಿಡಿಯಲಿಲ್ಲ . ಧರ್ಮರಾಯ ಜೂಜಾಡುವುದ ತಪ್ಪಿಸಬಹುದಿತ್ತು , ನೀ ತಪ್ಪಿಸಲಿಲ್ಲ. ದಾಳ ನಮ್ಮ ಕಡೆ ಉರುಳಿಸಲು ಯತ್ನಿಸಲೂ ಇಲ್ಲ.ಅಣ್ಣ ಸೋಲುತ್ತಾ ತಮ್ಮ೦ದಿರ , ಹೆಂಡತಿಯ ಪಣ ಇಡುವಾಗ ಕೂಡ ನೀ ಅಡ್ಡ ಬರಲಿಲ್ಲ. ದ್ರೌಪದಿ ನಿನ್ನ ಅಣ್ಣ ಅಂತ ಅದೆಷ್ಟು ಪ್ರೀತಿಸ್ತಾ ಇದ್ಲು; ಆದರು ನೀ ಅವಳ ವಸ್ತ್ರಾಪಹರಣ ಆಗೋವರೆಗೂ ನೀ ಸಹಾಯಕ್ಕೆ ಬರಲಿಲ್ಲ . ಸಭೆಯಲ್ಲಿ ಅವಳ ಎಳೆದಾಡಿದಾಗಲೂ ನಿನಗೆ ಕನಿಕರ ಬರಲಿಲ್ಲ ... ನಾವು ನಿನ್ನನ್ನ ಗೆಳೆಯ ಅಂತ ನಂಬುತ್ತಲೇ ಬಂದೆವು . ನೀನು ಯಾವ ಆಪತ್ಭಾಂಧವ?? ನಾವು ನಾಚಿ ತಲೆ ತಗ್ಗಿಸಿದಾಗ ಕೂಡ ಬರದವ  !!!?"
ಕೃಷ್ಣ ನಕ್ಕು ಬಿಡ್ತಾನೆ ... ಅರ್ಜುನ ಅವನನ್ನೇ ನೋಡ್ತಾನೆ ವಿಸ್ಮಯದಿಂದ .."ಪಾರ್ಥ, ದುರ್ಯೋಧನನಿಗೆ ಜೂಜು ಅಂದ್ರೆ ಏನು ಅಂತ ಕೂಡ ತಿಳಿದಿರಲಿಲ್ಲ. ಅದಕ್ಕೆ ಅವನು ತನ್ನ ಸೋದರಮಾವನನ್ನ ಕೂರಿಸಿಕೊಂಡ . ಆ ಕಾಲಕ್ಕೆ ಶಕುನಿ ದೊಡ್ಡ ಪಗಡೆ ಆಟಗಾರ . ನಿಮಗೆ ತಿಳಿದಂತೆ ನನಗೂ ಪಗಡೆ ಅಂದ್ರೆ ಪ್ರಾಣ , ಅವರು ಶಕುನಿಯನ್ನ ಕರೆದಂತೆ ನೀವೂ ನನ್ನನ್ನು ಕರೆಯಬಹುದಿತ್ತು, ಶಕುನಿ ನನ್ನ ಮುಂದೆ ಗೆಲ್ಲುತ್ತಲೇ ಇರಲಿಲ್ಲ!! ಆದರೆ ಧರ್ಮರಾಯ ದುರಭಿಮಾನಿ , ನಾನೇ ಗೆಲ್ಲಬಲ್ಲೆ ಅಂತ ಆಡುತ್ತಲೇ ಹೋದ . ಸೋಲುವಾಗ ಕೂಡ ಅವನು ಮನದಲ್ಲೇ 'ಇದು ಕೃಷ್ಣನಿಗೆ ತಿಳಿಯದೆ ಹೋಗಲಿ, ನಮ್ಮ ಬಗ್ಗೆ ಏನು ತಿಳಿದಾನು ನಾ ಹೀಗೆ ಸೋತಾಗ' ಅನ್ನುತ್ತಲೇ ಇದ್ದ, ನಾನಾದರು ಈಗ ಕರಿತಾನೆ ಆಗ ಕರಿತಾನೆ ಯಾರಾದ್ರೂ ಒಬ್ಬರು ಕರೆದರೂ ಸಾಕು ಅಂತ ಕಾಯುತ್ತಲೇ ಇದ್ದೆ. ಯಾರೂ ಕರೆಯಲಿಲ್ಲ. ಇನ್ನು ದ್ರೌಪದಿ ಕೂಡ ಕೋಪ ಅಹಂ ಇಂದ ನನ್ನನ್ನ ಕರೆಯಲೇ ಇಲ್ಲ , ನಿಮ್ಮೆಲ್ಲರಿಂದ ಸಹಾಯ ಬರದಿದ್ದಾಗ ಮಾತ್ರ 'ಅಣ್ಣ' ಅಂತ ನನ್ನ ಕರೆದಳು. ತಕ್ಷಣ ಬಂದು ವಸ್ತ್ರ ನೀಡಿದೆ . ಅರ್ಜುನ, ನಾ ಯಾವಾಗ್ಲೂ ಅಲ್ಲೇ ಇದ್ದೆ ನೀವೇ ನನ್ನ ಕರೆಯಲಿಲ್ಲ, ಕರೆದಾಗೆಲ್ಲ ಬಂದಿದ್ದೇನೆ " ಅಂದ
"ಹಾಗಾದ್ರೆ ಕರೆಯದೆ ಇದ್ರೆ ನಿನ್ನವರಿಗೆ ನೀನು ಸಹಾಯವನ್ನೇ ಮಾಡೋದಿಲ್ವ ಕೃಷ್ಣ!!!??"
"ಅರ್ಜುನ, ಮನುಷ್ಯ ಹಾಗು ಅವನಿಗೆ ಸಂಭವಿಸೋ ಎಲ್ಲಾ ಘಟನೆಗಳೂ ಅವನದೇ ಕ್ರಿಯೆಗಳ, ಒಳ್ಳೆತನ ಕೆಟ್ಟತನ , ದುರಭಿಮಾನ , ಹೊಂದಾಣಿಕೆ, ಪ್ರೀತಿ, ಸ್ವಾರ್ಥ, ಆಸೆ, ಹಾಗು ಅವನದೇ ಸ್ವಭಾವಗಳ  ಪ್ರತಿಫಲ . ನನಗೆ ಯಾವುದನ್ನು ನಡೆಸೋ ಹಾಗು ನಿಲ್ಲಿಸೋ ಹಕ್ಕಿಲ್ಲ . ಎಲ್ಲಕ್ಕೂ ಸಾಕ್ಷಿಯಾಗಿರುತ್ತೇನೆ ಅಷ್ಟೇ" ಅಂದ
'ಅದರಿಂದ ನಮಗೇನು ಉಪಯೋಗ ಪರಮಾತ್ಮ , ನಾವು  ನಮ್ಮದೇ ಕೆಟ್ಟ ಸ್ವಾರ್ಥ, ಮೋಸಗಳಿಂದ ಕಡೆಗೆ ಕುರುಕ್ಷೀತ್ರಗಳಿಗೆ ದಾರಿ ಮಾಡುತ್ತೀವಲ್ಲ , ಅದಕ್ಕೂ ನೀ ಮೂಕ ಸಾಕ್ಷಿ ಆಗಿರೋದಾದರೆ ಮತ್ತೆ ನೀ ಯಾಕೆ!!?"
ಕೃಷ್ಣ ನಕ್ಕ" ಅರ್ಜುನ, ನಾ ಇದ್ದೀನಿ ಅಂತ ಎಲ್ಲಾರಿಗೂ ಅರಿವಿದ್ದ ಮೇಲೆ ಯಾರೂ ಇಂತಹ ಕುಕೃತ್ಯಗಳ ಮಾಡೋದಿಲ್ಲ . ನನ್ನನ್ನ ಮರೆತಾಗಲೇ ಅಥವ ಮರೆತಂತೆ ನಟಿಸಿದಾಗಲೇ ಇವೆಲ್ಲಾ ಘಟಿಸೋದು' ಅಂದ !!!!!
ಹೌದೇನೋ ಅಲ್ವೇ 

Saturday, 5 September 2015

ಈ ಗೌರಿ ಹಬ್ಬ ಅಂದ್ರೆ ಹೆಣ್ಣು ಮಕ್ಕಳಿಗೆ ಎಂತ ಸಂಭ್ರಮ ಅಂತೀರಾ , ಗಂಡ ಎಷ್ಟೇ ಚೆನ್ನಾಗಿ ನೋಡಿ ಕೊಂಡ್ರು ಅಮ್ಮನ ಮನೆಯ ಸ್ವಾತಂತ್ರ್ಯ (!) ಸಿಗೋಲ್ಲ ಬಿಡ್ರಿ . ಅತ್ತೆ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಅಂತ ಅಲ್ಲ ಈ 'small famili nuclear famili ಅಲ್ಲಿ ಇರೋ ಹೆಣ್ಣು ಮಕ್ಕಳಿಗೆ ಕೂಡ ಅಮ್ಮನ ಮನೆ ಅಂದ್ರೆ ಅಮ್ಮನ ಮನೇನೆ . ... ಅಮ್ಮ ಅಂದ್ರೆ ಅಮ್ಮನೇ ಅಲ್ವೇ....
ಅದು ಬಿಡಿ ಈ ಗೌರಿ ಅಂದ್ರೆ ಬಿಟ್ಟುಹೋದ ಬಂಧ ಕೂಡ ಬೆಸೆಯುತ್ತೆ ಅಂತ ಇದ್ರು ಅತ್ತೆ , ಯಾವುದೊ ಕಾರಣಕ್ಕೆದೂರಾದ ಬಂಧುತ್ವ ಏನಿಲ್ಲ ಅಂದ್ರು ಗೌರಿ ಹಬ್ಬದ ಬಳೆಗೆ ದುಡ್ಡು ಕೊಡೋಕೆ ಹತ್ತಿರ ಆಗುತ್ತೆ .. ನೆನಪುಗಳ ಹಸಿರಾಗಿಸುತ್ತೆ .. ಕಣ್ಣುಗಳ ತುಂಬಿಸಿ ಮನಸ್ಸನ್ನ ಹಗುರಾಗಿಸುತ್ತದೆ ....
ಬಳೆಗೆ ದುಡ್ಡು ಕೊಡೋಕೆ ಮೈದುನ ಬಂದಿದ್ದ ,ಬಹಳ ದಿನಗಳಿಂದ ಬಂದಿರಲಿಲ್ಲ ಅಂತ ಚೆಂದ ಬೈದೆ. ಬೈಸಿಕೊಂಡ ಮೇಲೆ ಪಕ್ಕ ಕೂತು ಕೈ ಹಿಡಿದು 'ಆಯ್ತಾ ಅತ್ಗೆ , ಈಗ ನಾನು ಹೇಳ್ಲಾ ' ಅಂತ ಅವನ ಮನದ ಮಾತು ಹಂಚಿಕೊಂಡ , ಇನ್ಯಾರ ಹತ್ತಿರ ಹೇಳಲಿ ಅಂತ ಮೌನವಾದ... ಇಬ್ಬರು ಹೊಟ್ಟೆ ತುಂಬಾ ಮಾತಾಡಿ ಮನದ ಭಾರ ಇಳಿಸಿಕೊಂಡೆವು........ ಮೈದುನ ಮಗ ಕೂಡ ಅಂತಾರೆ .... ಮಗ, ಅಣ್ಣ, ತಮ್ಮ, ಗೆಳೆಯ, ಎಲ್ಲಾ ಒಂದೇ .. ಸಂತಸದ ಹಂಚಿವಿಕೆಗೆ , ದುಃಖದ ಇಳಿಸುವಿಕೆಗೆ ..
...ಬಹುಶಃ ನಮ್ಮ ಭಾರತೀಯ ಸಂಸ್ಕೃತಿ ಹೀಗೆ ಏನೋ ... ಒಂದು ಹಬ್ಬ, ಒಂದು ಸಮಾರಂಭ, ಒಂದು ದೇವರ ಕಾರ್ಯ .... ಇವೆಲ್ಲ ಮನಸ್ಸುಗಳ (ಮರು)ಬೆಸೆಯುವಿಕೆಗೆ ಹಾದಿಯಾಗಿ ಹೋಗುತ್ತವೆ ... ಅದಕ್ಕೆ ಏನೋ Indian Culture and heritage ಅನ್ನೋದು ಅಷ್ಟೊಂದು ಹೆಮ್ಮೆ ತರುವುದು .........felt like sharing
'ಕ್ಷಮಿಸು 'ಎಂದು 
ಅದೆಷ್ಟು ಸುಲಭವಾಗಿ ಹೇಳಿ 
ನಾ ಕೈ ಒರೆಸಿಕೊಂಡು ಬಿಟ್ಟಿದ್ದೆ ಅಲ್ಲವೇ ಗೆಳೆಯ ......... 
ಕ್ಷಮಿಸಲು ನೀನು 
ಅದೆಷ್ಟು ದೊಡ್ಡ (ಗಟ್ಟಿ) ಮನಸ್ಸು ಮಾಡಿದ್ದೆ ನನಗರಿವಿದೆ ..... 
ಆದರೂ
ಗೆದ್ದ ನಗುವೂ ಅಲ್ಲದ ಸೋತ ಬೇಸರವೂ ಅಲ್ಲದ
ಕ್ಷಮಿಸು ಎಂದು ಕೇಳಿಸುವ ಪರಿಸ್ಥಿತಿಯ
ಬಗ್ಗೆ ಬಲು ತಿರಸ್ಕಾರವಿದೆ ನನಗೆ ..............

Friday, 4 September 2015

ಕಲಾಂ ಸರ್ ಇನ್ನಿಲ್ಲ. ಸ್ವಾಮಿ ವಿವೇಕಾನಂದ ಅವರನ್ನ ಬಿಟ್ಟು ಮನಕ್ಕೆ ತುಂಬಾ ಸ್ಫೂರ್ತಿ ನೀಡಿದ ವ್ಯಕ್ತಿ ಅಂದ್ರೆ ಕಲಾಂ ಸರ್ . ಅವರನ್ನ ಮತ್ತೆ ರಾಷ್ಟ್ರಪತಿ ಹುದ್ದೆಗೆ ಆರಿಸಲಿ ಅಂತ ಹರಕೆ ಕೂಡ ಹೊತ್ತ ಮೂರ್ಖ ಮನಸ್ಸು ನಮ್ಮ ಕೆಲವರದು . ಆದರೆ ಇಂದಿನ ಭಾರತಕ್ಕೆ ಅವರಂತಹ ರಾಷ್ಟ್ರಪತಿ ಬೇಕಿರಲಿಲ್ಲವೇನೋ,ಹರಕೆ ಹಾರೈಕೆ ಫಲಿಸಲೇ ಇಲ್ಲ. 
ಬದುಕಲ್ಲಿ ಕರ್ತವ್ಯಕ್ಕೆ ಇರೋ ನಾ ಮಹತ್ವ ಅರಿತದ್ದು ಕಲಾಂ ಸರ್ ಅವರಿಂದಲೇ . ಕೈಲಾಗುವಾಗ ಅಂದಿನ ಕೆಲಸ ಮುಗಿಸಬೇಕು. ನಾಳೆ ನನ್ನ ಅರ್ಧ ಉಳಿದ ಕೆಲಸದಿಂದ ಮತ್ಯಾರಿಗೋ ತೊಂದರೆಯಾಗೋದು ಬೇಡ ಎಂದು ಕಲಿತದ್ದು ಅವರ ಮಾತುಗಳಿಂದಲೇ. ದೇಶ ಅಂದ್ರೆ ಅಭಿಮಾನದ ಬೀಜ ಬಿತ್ತಿದ್ದು ವಿವೇಕಾನಂದರಾದರೆ ಅದು ಮರವಾಗೋದಕ್ಕೆ ನೀರೆರೆದದ್ದು ಈ ಕಲಾಂ ಸರ್ .
ಕಲಾಂ ಸರ್ ಅವರನ್ನ ಒಮ್ಮೆ ಒಬ್ಬ ಸಂದರ್ಶಕ ಕೇಳಿದರಂತೆ ;ನಿಮ್ಮ ಅತಿ ಮೆಚ್ಚಿನ ಆವಿಷ್ಕಾರ ಯಾವುದು ಅಂತ .. ಎಲ್ಲಾ ಊಹಿಸಿದ್ದು ಕ್ಷಿಪಣಿಗಳ ಬಗ್ಗೆ ಹೇಳುತ್ತಾರೆ ಎಂದು . ಆದ್ರೆ ಕಲಾಂ ಸರ್ ಹೇಳಿದ್ದೆ ಬೇರೆ . 'ಒಮ್ಮೆ ನಾನೊಂದು ಆಸ್ಪತ್ರೆಗೆ ಆಸ್ಪತ್ರೆಗೆ ಬೇಟಿಯಿತ್ತಾಗ , ಅಲ್ಲಿನ ಮಕ್ಕಳಿಗೆ prosthetic(ಕೃತಕ ಕಾಲುಗಳನ್ನ)ಅಳವಡಿಸಲಾಗಿತ್ತು. ಆ ಸುಮಾರು ೪ ಕೆಜಿ ತೂಕದ ಕಾಲು ಎಳೆದುಕೊಂಡು ಮಕ್ಕಳು ಓಡಾಡುವುದ ಕಂಡಾಗ ಅಲ್ಲಿನ ವೈದ್ಯರನ್ನ ಕೇಳಿದೆ . ಅವರು' ಸದ್ಯಕ್ಕೆ ಇರೋದು ಇಂತಹದೆ ಸರ್' ಎಂದರು . ನಮ್ಮ ರಾಕೆಟ್ ತಂತ್ರಜ್ಞಾನ ಉಪಯೋಗಿಸಿ ಸುಮಾರು ೪೦೦ ಗ್ರಾಂ ತೂಕದ ಕಾಲುಗಳನ್ನ ನಮ್ಮ ಟೀಂ ತಯಾರು ಮಾಡಿದ್ವಿ . ಈಗ ಆ ಮಕ್ಕಳು ಆಟ ಆಡ್ತಾರೆ , ಸೈಕಲ್ ಕೂಡ ತುಳಿತಾರೆ ' ಅಂತ ಹೇಳೋವಾಗ ಅವರ ಕಣ್ಣಲ್ಲಿ ಇದ್ದದ್ದು ಬರಿ ಮುಗ್ದಮಗುವಿನ ನಗು ಅಂತೆ .
ಮೊದಲೆಲ್ಲ ಕಾಂಪೌಂಡ್ ಗೋಡೆಗಳ ಮೇಲೆ ಗಾಜಿನ ಚೂರುಗಳನ್ನ ಹಾಕ್ತ ಇದ್ರು . ಯಾರೂ ಬರದೆ ಇರ್ಲಿ ಅನ್ತ. ಅದರ ಬಗ್ಗೆ ಕೂಡ ಅವರಿಗೆ ಸಹಮತ ಇರಲಿಲ್ಲ DRDO ಗೋಡೆಯ ಮೇಲೆ ಗಾಜಿನ ಚೂರುಗಳನ್ನ ಹಾಕೋಕೆ ಬಿಡದ ಅವರು ಕೊಟ್ಟ ಕಾರಣ 'ಹಕ್ಕಿಗಳು ಹೆದರುತ್ತವೆ !"..
ಕಲಾಂ ಮಾನವೀಯ ಮುಖದ ಬಗ್ಗೆ ನೂರಾರು ಕಥೆಗಳಿವೆ . ಆದರೆ ಕಲಾಂ ಸರ್, ನೀವು ನೆನಪಾಗೋದು ನಿಮ್ಮ ಮಾನವೀಯತೆ ಹಾಗು ದೇಶಪ್ರೇಮದ ಪ್ರತೀಕವಾಗಿ .
rather than verbal tribute I promise you to pay my tribute by my making my Kids good citizens and patriotic ... Thanks for building our nation as a Strong One Sir.........


ಸೂರ್ಯ ಮುಳುಗಿತೆ ??
ಇಲ್ಲವಲ್ಲ
ಮನದಲ್ಲಿ ಅವರು ಹಚ್ಚಿದ ಹಣತೆ ಇದೆಯಲ್ಲ ..
ತಮವ ಬೆದರಿಸಲು ..
ಇರವ ಬೆಳಗಿಸಲು ...
ಒಬ್ಬ ಶಿಷ್ಯ ಗುರುವಿಗೆ "ಗುರುಗಳೇ, ಒಬ್ಬ ವ್ಯಕ್ತಿ ಆಶ್ರಮಕ್ಕೆ ಒಂದು ಹಸು ದಾನ ಮಾಡಿದ್ದಾರೆ "
ಗುರು: ಒಳ್ಳೆಯದಾಯ್ತು ಮಗು , ಆಶ್ರಮವಾಸಿಗಳಿಗೆ ಹಾಲು ಸಿಕ್ಕಂತಾಯ್ತು " ಅಂತಾನೆ 
ಒಂದಷ್ಟು ದಿನ ಕಳೆದ ಮೇಲೆ ಶಿಷ್ಯ ಬಂದು: ಗುರುಗಳೇ, ಆವತ್ತು ಹಸು ಬಿಟ್ಟು ಹೋಗಿದ್ದ ವ್ಯಕ್ತಿ ಈವತ್ತು ಮತ್ತೆ ವಾಪಸ್ ತೆಗೆದುಕೊಂಡ್ ಹೋದ್ರು"
ಗುರು: ಒಳ್ಳೆಯದಾಯ್ತು ಮಗು , ಆಶ್ರಮವಾಸಿಗಳಿಗೆ ಹಸುವಿನ ಕೆಲಸ ತಪ್ಪಿತು ' ಅಂತಾನೆ ... 
ಪರಿಸ್ಥಿತಿಗೆ ತಕ್ಕಂತೆ ಮನಸ್ಥಿತಿ ಹೊಂದಿಸಿಕೊಳ್ಳೋ ಕಲೆ ಹೇಳಿಕೊಟ್ಟ ಅನೇಕ ಮಾನಸಗುರುಗಳಿಗೆ ನಮನ ...... :))))))
ಪುಟ್ಟ ಶಾಲೆ ಇಂದ ಬಂದ..ಅಮ್ಮ ಅಡುಗೆ ಮನೆಯಲ್ಲಿ ಇದ್ಲು.ನಾಳೆ ಅವನ ಹುಟ್ಟುಹಬ್ಬ.ಅಮ್ಮನ ಬಳಿ ಹೋದ."ಅಮ್ಮ ನನ್ನ birthdayಗೆ ನಾಳೆ ಸೈಕಲ್ ಕೊಡಿಸು "ಅಂತ ದುಂಬಾಲು ಬಿದ್ದ.ಅಮ್ಮ ಹೇಳಿದಳು'ಹೋಗಿ ಕೃಷ್ಣನ್ನ ಕೇಳು.ನೀನು ಮಾಡಿದ ತಪ್ಪನೆಲ್ಲ ಒಂದು ಕಾಗದದಲ್ಲಿ ಬರೆದು, ಕ್ಷಮಿಸು ಅಂತ ಕೇಳಿಕೊಂಡು ಮತ್ತೆ ಮಾಡೋಲ್ಲ ಅಂತ ಕೇಳಿಕೊಂಡು ಬರಿ.ಕೃಷ್ಣ ತಪ್ಪದೆ ನೀನು ಕೇಳಿದೆಲ್ಲ ಕೊಡಿಸ್ತಾನೆ"ಅಂದ್ಲು..
ಪುಟ್ಟ ರೂಮ್ಗೆ ಹೋದ,ಪೇಪರ್ ಪೆನ್ನು ತಗೊಂಡ, ಬರೆಯೋಕೆ ಶುರು ಮಾಡಿದ..
"ಕೃಷ್ಣ ನಾನು ಇವತ್ತು ಏನೂ ತಪ್ಪು ಮಾಡಿಲ್ಲ.ನಾಳೆ ನನ್ನ ಹುಟ್ಟುಹಬ್ಬ ನನಗೆ ಸೈಕಲ್ ಕೊಡಿಸು"..
ಬರಿತಾ ಬರಿತಾ ಶಾಲೆಯಲ್ಲಿ ಅವನು ಮಾಡಿದ ತರ್ಲೆ ನೆನಪಾಯ್ತು,ಪತ್ರ ಹರಿದ ಮತ್ತೆ ಬರೆಯೋಕೆ ಶುರು ಮಾಡಿದ."ಕೃಷ್ಣ ಈವತ್ತು ಟೀಚರ್ ಗೆ ತೊಂದ್ರೆ ಕೊಟ್ಟೆ..ನನ್ನ ಕ್ಷಮಿಸು ಮತ್ತೆ ತಪ್ಪು ಮಾಡೋಲ್ಲ ಸೈಕಲ್ ಕೊಡಿಸು.."
ಅಷ್ಟರಲ್ಲಿ ದಾರಿಯಲ್ಲಿ ಬರ್ತಾ ಬೀದಿ ಬದಿಯ ನಾಯಿಗೆ ತೊಂದ್ರೆ ಕೊಟ್ಟಿದ್ದು ನೆನಪಾಯ್ತು.ಮತ್ತೆ ಪತ್ರ ಹರಿದ.ಇನ್ನೊ0ದು ಶುರು ಮಾಡಿದ....
ಅಮ್ಮ ಮಗನ ಸದ್ದು ಕೇಳದೆ ಅವನ ರೂಂ ಕಡೆ ಇಣುಕಿ ನೋಡಿದ್ಲು.ಮಗ ಬರಿತಾನೆ ಇದ್ದ..ನಸುನಕ್ಕು ಒಳ ಹೋದಳು...
ಅಷ್ಟರಲ್ಲಿ ಪುಟ್ಟ ಒಡ್ಡಿ ಬಂದ.
ಸ್ವಲ್ಪ confused ಆಗಿ ಕಂಡ.
"ಅಮ್ಮ ನಾನು ದೇವಸ್ಥಾನಕ್ಕೆ ಹೋಗ್ಬರ್ತೀನಿ " ಅಂದ...
ಅಮ್ಮ ಮಗನ ಮಾತು ಕೇಳಿ ಖುಷಿಯಾದ್ಲು..."ಹೂ " ಅಂದ್ಲು...
ಪುಟ್ಟ ದೇವಸ್ಥಾನಕ್ಕೆ ಓಡಿದ.ದೇವಸ್ಥಾನದ ಒಳಗೆ ಯಾರು ಕಾಣಲಿಲ್ಲ...
ಕೃಷ್ಣನ ಮುಂದೆ ಕುಳಿತ,.ಥಟ್ ಅಂತ ರಾದೆಯ ವಿಗ್ರಹ ತೆಗೆದು ಕೊಂಡ."ಕೃಷ್ಣ, ನನಗೆ ಪತ್ರಗಿತ್ರ ಎಲ್ಲ ಬರೆಯೋಕೆ ಬರೋಲ್ಲ...ನಿನ್ನ girlfriendನ ಕಿಡ್ನಾಪ್ ಮಾಡಿದ್ದೀನಿ...ಸೈಕಲ್ ತಂದು ಕೊಟ್ಟು ಅವಳನ್ನ ಬಿಡಿಸಿ ಕೊಂಡುಹೋಗು"!!!!!!!!!!
ಪುಟ್ಟಿ ಶಾಲೆಗೆ ತಯಾರಾಗ್ತಾ ಇದ್ಲು . ಜಡೆ ಹಾಕ್ತಾ ಇದ್ದೆ. ಸುಮ್ನೆ ಜಡೆ ಹಾಕಿಸಿಕೊಳ್ತಾ ಇದ್ಲು . (ಸುಮ್ನೆ ಕೂತು ಜಡೆ ಹಾಕಿಸಿಕೊಳ್ಳೋ ಜಾಯಮಾನವೇ ಅಲ್ಲ ಅವಳದು . ಜಡೆ ಹೀಗಿದೆ ಹಾಗಿದೆ ಅಂತಲೋ , ಶಾಲೆಯಲ್ಲಿ ಹುಡುಗರ ಇವಳು ಕೆಣಕಿದ್ದೋ , ಇವಳನ್ನ ಅವರು ರೇಗಿಸಿದ್ದೋ.. ಏನೋ ಒಂದು ಹೇಳ್ತಾನೆ ಇರ್ಬೇಕು ಇಲ್ಲಾ ಅಂದ್ರೆ ನನಗೇ 'ಇದ್ಯಾಕ್ ಹಿಂಗೆ ಈವತ್ತು " ಅನಿಸೋ ಹಾಗೆ) ಕೇಳ್ದೆ 'ಇದ್ಯಾಕೆ ಮಗ ಏನೂ ಮಾತಾಡ್ತಾ ಇಲ್ಲ ?' 'ಏನಿಲ್ಲ ಮಾ, ಎಲ್ಲಾ ಅಕ್ತಂಗೀರು ಹೋದ್ರಲ್ಲ ಅದಕ್ಕೆ ಬೇಜಾರು ಅಷ್ಟೆ' ಮೊನ್ನೆ ಎಲ್ಲಾ ಎರಡುಮೂರು ದಿನ ರಜಾ ಅಂತ ಎಲ್ಲಾ ಇಲ್ಲೇ ಇದ್ರು .. ಒಂದೆರಡು ದಿನ ರಜ ಇದ್ರೆ ಎಲ್ಲರೂ ಒಂದೆಡೆ ಸೇರೋದು ವಾಡಿಕೆ .. ಮಕ್ಕಳಿಗೂ ಸಂಭ್ರಮ . ಅದೇನ್ ತಿನ್ತಾವೋ, ಅದೇನ್ ಮಾತಾಡ್ತಾವೋ , ಅದೇನ್ ಆಟ ಆಡ್ತಾವೋ, ನಗ್ತಾವೋ, ಕಚ್ಚಾಡ್ತಾವೋ..exhibition ಹಾಗೆ ಎಲ್ಲಿಲ್ಲಿ ಇಟ್ಟ ವಸ್ತುಗಳೆಲ್ಲ ಅಲ್ಲಲ್ಲೇ ಒಂದು ಇಂಚೂ ಕದಲದ ಹಾಗಿದ್ದ ಮನೆ ಒಂದೆರಡು ದಿನದಲ್ಲಿ ಅದೆಲ್ಲಿದೆ ಅಂತ ಹುಡುಕೋ ಹಾಗೆ .. ಮಕ್ಕಳ ನಗು , ತರ್ಲೆ, ಅಣ್ಣ ತಮ್ಮಂದಿರ ಗೊರಕೆ ಸದ್ದ ನಡುವೆಯೇ ರಾತ್ರಿ ೧೨-೧ ಘಂಟೆವರೆಗೂ ಅಮ್ಮನೋ ಅತ್ತೆಯೋ ಬೈಯೋವರೆಗೂ ನಮ್ಮ ಮಾತುಗಳು, ಒಂದು ಸಣ್ಣ ಸುತ್ತಾಟ , ಹಚ್ಚಿದ ಸ್ಟವ್ ಆರದ ಹಾಗೆ ಏನಾದ್ರೂ ಮಾಡಿ ತಿನ್ನೋ ಆಟ .. ಮೆಕ್ಯಾನಿಕಲ್ ಜೀವನದ ನಡುವಿನ ಟಾನಿಕ್ .. ಇವೆಲ್ಲದರ ನಡುವೆ ಮಕ್ಕಳು ಒಂದು ಮಾತು ಕೇಳಿದ್ರು "ದೊಡ್ಡಮ್ಮ ಎಲ್ಲಾ ಒಟ್ಟಿಗೆ ಇದ್ರೆ ಎಷ್ಟ್ ಚೆಂದ ಅಲ್ವ !!??' "ಹ್ಞೂ ಮಗ " ಅಂದೆ ಅಷ್ಟೇ ... ಆದರೆ ಆ ಪ್ರಶ್ನೆಗೆ ಉತ್ತರವಿರಲಿಲ್ಲ ನನ್ನ ಬಳಿ..ಮುಂದೆಂದೋ ದೊಡ್ಡವರಾದ ಮೇಲೆ ಅವರಿಗೇ ತಿಳಿಯಬಹುದೇನೋ ... ಆದರೂ ಬಂಧುತ್ವಕ್ಕೆ ಅರ್ಥ ಕೊಡೋ ಒಂದು ಸಣ್ಣ "being together' ಮನೆ(ನ)ಗಳ ನಡುವೆ ಬೆಸುಗೆಯ ಬಿಗಿ ಮಾಡಿದರೆ ಅದೆಷ್ಟ ಚೆಂದ ....... ನೀಲಿ ಬಾನಿನ ಹಾಗೆ :)) Life is beautiful with all errs..
ಪ್ರೀತಂ ನಮ್ಮ ಮನೆ ಹತ್ತಿರದ ಹುಡುಗ. ಕಾರ್ತಿಯ ಗೆಳೆಯ. ಸುಮಾರು ೧೦ ವರ್ಷಗಳ ಗೆಳೆತನ ಇಬ್ಬರದು. ಶಾಲೆ ಬೇರೆಯಾದ್ರು ಸಂಜೆ ಮನೆಗೆ ಬಂದ ಕೂಡ್ಲೆ ಅವ್ನು 'ಕಾರ್' ಅಂತಲೋ ಇಲ್ಲ ಇವನು 'ಪೀಚ್ ' ಅಂತಲೋ ಒಬ್ಬರನ್ನೊಬ್ಬರು ಮಾತನಾಡಿಸದೆ ಇದ್ರೆ ಸಮಾಧಾನವೇ ಇರೋದಿಲ್ಲ ಹಾಗಿದ್ರು . ಹತ್ತನೇ ತರಗತಿ ಆದ ಮೇಲೆ ಅವನು ಡಿಪ್ಲಮೋ ಸೇರಿದ . ಇವನು ಪಿಯು ಸೇರಿದ . ಮತ್ತೆ ಕಾರ್ತಿ CET ಬರೆದಾಗ,ಮಂಡ್ಯದಲ್ಲಿ ಎಂಜಿನಿಯರಿಂಗ್ ಸೀಟ್ ಸಿಕ್ಕಾಗ ಪ್ರೀತಂ 'ಆಂಟಿ ಕಾರ್ತಿನ ಹಾಸ್ಟೆಲ್ ಗೆ ಹಾಕ್ಬೇಡಿ ' ಅಂತೆಲ್ಲ ಹೇಳ್ತಾ ಇದ್ದ . ಹೋದ ತಿಂಗಳು ಅವನು ಡಿಪ್ಲಮೋ CET ಬರೆದ . ಹಾಸನದ ಕಾಲೇಜಲ್ಲಿ ಸೀಟ್ ಸಿಕ್ತು . ಹಾಸನದಲ್ಲಿ ಅವನ ಅಜ್ಜಿ ಮನೆ ಇದೆ . ಮೊನ್ನೆ ಮೊನ್ನೆ ಹಾಸನದ ಕಾಲೇಜ್ಗೆ ಹೋಗಿ ಸೇರಿದ .
ಬೆಳಿಗ್ಗೆ ಮಗನೊಟ್ಟಿಗೆ ದೇವಸ್ತಾನಕ್ಕೆ ಹೋಗಿದ್ದೆ . ಎಂದಿನಂತೆ ಮಕ್ಕಳ ಹೆಸರಲ್ಲಿ ಅರ್ಚನೆಗೆ ಹೇಳಿದೆ . ಮಗ ಪ್ರೀತಂ ಹೆಸರೂ ಸೇರಿಸಿದ . ಮನೆಗೆ ಹಿಂದಿರುಗುವಾಗ ಹೇಳ್ದ 'ಅಮ್ಮ ಪ್ಲೀಸ್ ಅಮ್ಮ ಶನಿವಾರ ಪ್ರೀತಂ ನೋಡ್ಕೊಂಡ್ ಬರ್ತೀನಿ , ಮಗ ದಿನಾ ನನಗೆ ರೋಶನ್ ಗೆ ೫-೬ ಸಾರಿ ಫೋನ್ ಮಾಡ್ತಾನೆ . ಏನ್ ಮಾಡ್ತಿದ್ದೀಯ ಕಾರ್ ಅಂತಾನೆ . ಅಳುನೆ ಬರುತ್ತೆ ಅಮ್ಮ . ಅವನೂ ಹಂಗೆ ಅಳೋ ಹಂಗೇ ಮಾತಾಡ್ತಾನೆ .ಇನ್ನ ಮೂರು ವರ್ಷ ಹೆಂಗಿರೋದು ಗೊತ್ತಿಲ್ಲ ' ಅಂದ .
ಮನಸ್ಸೆಲ್ಲ ಆ ನೀಲಿ ಬಾನಂತೆ , ಈ ಮಕ್ಕಳು ದೂಡ್ಡವರಾಗೋದೆ ಬೇಡ . ಸ್ವಾರ್ಥ, ಮೋಸ, ವಂಚನೆಗಳಿಂದ ದೂರ ಹೀಗೆ ಇದ್ದುಬಿಡಲಿ ಅನ್ನೋ ಹಾಗೆ .... :)))
ಅಪರೂಪಕ್ಕೆ ಟಿವಿ ನೋಡ್ತಾ ಇದ್ದೆ . ಯಾವುದೊ ಚಾನೆಲ್ ಅಲ್ಲಿ ಕಪಿಲ್ ದೇವ್ ಬಗ್ಗೆ ಹೇಳ್ತಾ ಇದ್ರು . ಆ ಕಾಲಕ್ಕೆ ಕಪಿಲ್ ದೇವ್ ಅಂದ್ರೆ ಅದೆಷ್ಟು ಹುಚ್ಚು ಅಂದ್ರೆ ಕಾಲೇಜ್ಗೆ ಕದ್ದು ಮುಚ್ಚಿಪುಟ್ಟ transistor ಬ್ಯಾಗ್ ಅಲ್ಲಿ ಇಟ್ಟು ಒಂದು ಬೆಲ್ ಆದ ಒಡನೆ commentary ಕೇಳೋ ಅಷ್ಟು ... ಆ ವೇಗ ಹೆಚ್ಚಿಸುತ್ತಾ ಬಂದು ಬೌಲ್ ಮಾಡೋ ರೀತಿ ಅದೆಷ್ಟು ಚೆಂದ ಅಂದ್ರೆ , ಬೌಲ್ ಮಾಡಿದಾಗೆಲ್ಲ ಒಂದು ವಿಕೆಟ್ ಸಿಗಲಿ ಅಂತ ಬಯಸೋ ಹುಚ್ಚುತನ, ಅವನು ವಿಕೆಟ್ ಬಳಿ ನಿಂತರೆ ಒಂದು ಸಿಕ್ಸರ್ ಬರಲಿ ಅಂತ ಕಾಯೋ ಹುಚ್ಚುತನ .. ಪೇಪರ್ ಅಲ್ಲಿ ಬರೋ ಅವನ ಫೋಟೋನ ಪುಸ್ತಕಕ್ಕೆ ಅಟ್ಟೆ ಹಾಕೋ ಹುಚ್ಚುತನ .. ನಾ ಅವನ ಫ್ಯಾನ್ ಅಂತ ಗೊತ್ತಿದ್ದೂ ಬೇಕಂತಲೇ 'ಅವನೊಬ್ಬ ಕಪಿಲ್ ದೇವ್ ಅಂತೆ ಕಪಿ ದೇವ್' ಅಂತ ರೇಗಿಸ್ತಾ ಇದ್ದ ತಮ್ಮ .. ಅದೆಷ್ಟು ಚೆಂದ ಆಗಿನ ಆಟಗಾರರ ಸಮರ್ಪಣ ಭಾವ .. ಅದ್ಯಾಕೋ ಈಗಿನ ಆಟಗಾರರ ಆಟ ಮೆಚ್ಚುತ್ತೇನಾದರೂ ಲೆಜೆಂಡ್ ಅಂತ ಅನಿಸಿಕೊಳ್ಳೋರು ಕೈ ಬೆರಳಲ್ಲಿ ಏಣಿಸಬಹುದೇನೊ .. ಸಿನಿ ತಾರೆಯರಿಗೂ ಈಗಿನ ಆಟಗಾರರಿಗೂ ಅಂತಹ ವ್ಯತ್ಯಾಸಾನೆ ಕಾಣೋದಿಲ್ಲ ಅನಿಸೋ ಹಾಗೆ .. A legend is a legend ...ಅಂದು ಇಂದು ಮುಂದು ಅನಿಸೋ ಹಾಗೆ ...
ನಾವು ಈಗಿರೋ ಮನೆಗೆ ಬಂದು ೧೦ ವರ್ಷ ..ಚೆಂದದ ಪುಟ್ಟ ಮನೆ, ಚೆಂದದ ಬಡಾವಣೆ ..ಅದ್ ಹೇಗೆ ೧೦ ವರ್ಷ ಆಯ್ತೋ ಗೊತ್ತಿಲ್ಲ ಅನಿಸೋ ಹಾಗೆ . ಇರೋ ಮನೆಗಳವರೆಲ್ಲ ಮನೆಯ ಮುಂದೆ ಒಂದಷ್ಟು ಗಿಡಗಳನ್ನ ಹಾಕಿಕೊಂಡಿದ್ದಾರೆ .. ಮನೆಯ ಹತ್ತಿರ ಇರೋ ಗ್ರಾಮೀಣ ಭಾಗದಿಂದ ಹಸುಗಳನ್ನ ಮೇಯೋಕೆ ಬಿಟ್ ಬಿಡ್ತಾರೆ .. ಹಸುಗಳಿಗೆ ಊಟ ಸಿಕ್ಕರೆ ಸಾಕು ಅನ್ನೋ ಹಾಗೆ ಆಗಿರುತ್ತದೇನೋ . ಪಾಪ ಸಿಕ್ಕ ಹಸುರಿಗೆಲ್ಲ ಬಾಯಿ ಹಾಕೋ ಆಸೆ .ಮನೆಯವರಿಗೆ ತಾವು ಹಾಕಿದ ಗಿಡದ ಮೇಲೆ ಆಸೆ. ಒಂದು ದೊಡ್ಡ ದೊಣ್ಣೆ ಹಿಡಿದು ಕೆಲವೊಮ್ಮೆ ಹೆದರಿಸಿ ಕೆಲವೊಮ್ಮೆ ಹೊಡೆದು ಓಡಿಸ್ತಾರೆ . ಅದೇನ್ ಹಸುವಿನ ಯಜಮಾನನ ತಪ್ಪೋ , ಇಲ್ಲಾ ರಸ್ತೆಯಲ್ಲಿ ಗಿಡ ಹಾಕಿ ಹಸುವಿಗೆ ಹೊಡೆಯೋರ ತಪ್ಪೋ , ಇಲ್ಲ ಏನೂ ಗೊತ್ತಿಲ್ಲದೇ ಹಸುರು ಕಂಡ ಕೂಡಲೇ ಬಾಯೋ ಹಾಕೋ ಹಸುವಿನ ತಪ್ಪೋ, ಗೊತ್ತಾಗೋದಿಲ್ಲ .. ನಾನೂ ಒಂದಷ್ಟು ಹೂವಿನ ಗಿಡ ಹಾಕಿದ್ದೀನಿ , ನೀರೂ ಹಾಕ್ತೀನಿ , ಆದ್ರೆ ಹಸು ಬಂದ್ರೆ ನಮ್ಮ ಮನೆಯಲ್ಲಿ ಯಾರೂ ಓಡಿಸೋದಿಲ್ಲ . ತಿಂದರೆ ತಿನ್ನಲಿ ಅನ್ಕೊಂಡ್ ಸುಮ್ಮನಾಗ್ತೀವಿ. ಈ ಮನೆಗೆ ಬಂದ ಹೊಸದರಲ್ಲಿ ಬಕೆಟ್ ಅಲ್ಲಿ ನೀರು ಇಡ್ತಾ ಇದ್ವಿ . ಅಕ್ಕಪಕ್ಕದವರು ಬೈಕೊಳ್ತಾ ಇದ್ರು . ಈಗ ಬೇಸಿಗೆಯಲ್ಲಿ ಬಿಟ್ಟು ಬೇರೆ ಸಮಯದಲ್ಲಿ ನೀರಿಡೋದಿಲ್ಲ.. ಇದು ಪೀಠಿಕೆ
ವಿಷ್ಯ ಏನಪ್ಪಾ ಅಂದ್ರೆ , ಶುಕ್ರವಾರ ಪೂಜೆಗೆ ತಂದ ಹಣ್ಣೆಲ್ಲಾ ಕಳಿತಿತ್ತು ಅಂತ ಬೆಳಿಗ್ಗೆ ಬೆಳಿಗ್ಗೆ ಎಂದಿನಂತೆ ಬಂದ ಹಸುಗೆ ಕೊಡೋಕೆ ಹೋದೆ . ಆಗಷ್ಟೇ ಮುಂದಿನ ಮನೆಯಾತ ದೊಡ್ಡ ದೊಣ್ಣೆಯಿಂದ ಹೂಡೆದಿದ್ರು . ಆ ಕಡೆ ಮನೆಯಿಂದ ಮತ್ತೊಬ್ಬರು ಓಡಿಸ್ತಾ ಇದ್ರು .. ದಿನಾ ಕೈಯಿಂದಲೇ ಹಣ್ಣು ತಿಂದು ಹೋಗ್ತಾ ಇದ್ದ ಹಸು ಈವತ್ತು ಇನ್ನೇನು ತಿವಿದೆ ಬಿಟ್ಟಿತು ಅನ್ನೋ ಹಾಗೆ ಬೆದರಿಹೋಯ್ತು . ಹಣ್ಣು ಅಲ್ಲೇ ಹಾಕಿ ಒಳಗೆ ಬಂದೆ. ಮತ್ತೆ ಮಂಜು ಹೇಳಿದ್ದು 'ಬುದ್ದಿ ಇರೋ ಮನುಷ್ಯನೇ ಎಷ್ಟೋ ಸಮಯದಲ್ಲಿ ತಿಳಿದೂತಿಳಿದೂ ಅಕಾರಣವಾಗಿ ನೋಯಿಸ್ತಾನೆ . ಇನ್ನು ಬುದ್ದಿ ಇರದ ಪ್ರಾಣಿ ಬೆದರಿ ತನ್ನ ರಕ್ಷಣೆಗೆ ಅಂತ ಹಾಗೆ ಆಡಿದೆ, ಹೆದರಕೊ ಬೇಡ .. ಗೊತ್ತಾಯ್ತಲ್ಲ ಇನ್ ಮೇಲೆ ಹಣ್ಣು ಇಟ್ಟು ಬಂದ್ ಬಿಡು ಅದೇ ತಿನ್ಕೊಂಡ್ ಹೋಗ್ಲಿ, etc, etc '...
ನಿಜವೇನೋ .. ಬುದ್ದಿ ಇರೋ ಮನುಷ್ಯನ ಎಷ್ಟೋ ತಪ್ಪುಗಳನ್ನ ಕ್ಷಮಿಸೋ ನಾವು ಪ್ರಾಣಿಗಳ ಮೇಲೆ ಪ್ರತಾಪ ತೋರಿಸೋದು ಅದೆಷ್ಟ್ ಸರಿನೋ ಗೊತ್ತಿಲ್ಲ ...ಮನಸ್ಸು ಮೋಡ ಕವಿದ ಬಾನು ..
ಅವನು ಅವಳು 
ಎಣ್ಣೆ ಮತ್ತು ಬತ್ತಿಯಂತೆ 
ಒಬ್ಬರೊಡನೆ ಒಬ್ಬರು ಬೆರೆತು ಬದುಕಿದರೆ 
ಹಣತೆ ಬೆಳಗುವಂತೆ ... 
ಬೆರೆ(ಅರಿ)ಯದೇ ಹೋದರೆ 
ಬತ್ತಿ ಬತ್ತಿಯಂತೆ.... ಎಣ್ಣೆ ಎಣ್ಣೆಯಂತೆ
ಹಣತೆ ಬರಿದಾದಂತೆ .......


ನೀನಿಲ್ಲದಾಗ 
ಬರುವ ಈ ಮಳೆ ಹನಿ 
ಮನಸ್ಸಿನ ಗೋಡೆಗಳ 
ಹಸಿಯಾಗಿಸಿ 
ಹೋಗುವುದೇಕೆ ನಲ್ಲ ....:))))

Thursday, 3 September 2015

ಹಿಡಿದ ಹಾವನ್ನು 
ಬುಟ್ಟಿಯಲ್ಲಿ ಮುಚ್ಚಿಟ್ಟ 
ಹಾವು ಹಿಡಿವಾತ ......... 
'ನೀ ಯಾಕೆ ಬೇಕು ಈ ಜಗದಲ್ಲಿ ಇಂದು 
ಹೊರಟುಬಿಡು ಆ ಕಾಡಿನ ಮೂಲೆಗೆ ... 
ನೀ ಕಚ್ಚಿದರೆ ಏರುವ ವಿಷಕ್ಕಿಂತ
ಮನುಜ ಕಕ್ಕುವ
ಮಾತುಗಳೇ ಹೆಚ್ಚು ಕಾರ್ಕೋಟಕ '
ಎಂದು ಪಿಸುನುಡಿದದ್ದು
ವಿಪರ್ಯಾಸವೇನಲ್ಲ ............
ಒಂದು ಕಥೆ :
ಪರಶುರಾಮ ಕ್ಷತ್ರಿಯರ ಮೇಲಿನ ಕೋಪಕ್ಕೆ ತಾನು ಕ್ಷತ್ರಿಯರಿಗೆ ವಿದ್ಯಾದಾನ ಮಾಡುವುದಿಲ್ಲ ಅಂತ ಶಪಥ ತೊಟ್ಟಿರುತ್ತಾನೆ . ಕರ್ಣ ಬ್ರಾಹ್ಮಣನ ವೇಷದಲ್ಲಿ ಬಂದು ಪರಶುರಾಮನ ಬಳಿ ಶಸ್ತ್ರ ವಿದ್ಯೆ ಕಲಿತಾ ಇರ್ತಾನೆ. ... ಒಂದ್ ದಿನ ಪರಶುರಾಮ ಕರ್ಣನ ತೊಡೆಯ ಮೇಲೆ ತಲೆ ಇಟ್ಟು ಮಲಗಿರ್ತಾನೆ ಒಂದು ಗುಂಗುರು ಹುಳು ಕರ್ಣನ ತೊಡೆಯ ಕಚ್ಚುತ್ತಾ ಇರುತ್ತೆ , ಗುರು ಎಚ್ಚರಗೊಂಡಾನು ಎಂದು ಕರ್ಣ ಅಲುಗಾಡುವುದೂ ಇಲ್ಲ ತೊಡೆಯಿಂದ ರಕ್ತ ಸುರಿಯುತ್ತಾ ಇರುತ್ತದೆ . ಪರಶುರಾಮ ಎಚ್ಚರಗೊಂಡಾಗ ಕರ್ಣನ ತೊಡೆಯಲ್ಲಿ ರಕ್ತ ಕಂಡು ' ನೀನು ನನಗೆ ಸುಳ್ಳು ಹೇಳಿ ವಿಧ್ಯೆ ಕಲಿತಾ ಇದ್ದೀಯ , ನೀನು ಖಂಡಿತ ಬ್ರಾಹ್ಮಣ ಅಲ್ಲ, ನೀನು ಕಲಿತ ವಿದ್ಯೆ ನಿನ್ನ ಸಮಯಕ್ಕೆ ಆಗದೆ ಇರಲಿ' ಅಂತ ಶಾಪ ಕೊಡ್ತಾನೆ .. ಮತ್ತೆ ಕರ್ಣ ತನ್ನ ಹುಟ್ಟಿನ ಬಗ್ಗೆ ತನಗೆ ಅರಿವಿಲ್ಲ ಎಂಬುದ ತಿಳಿಸಿದಾಗ ಮರುಕಗೊಂಡು ಶಿವ ಧನುಸ್ಸು ನೀಡುತ್ತಾನೆ ....ಇದು ಕಥೆ
'ನೀನು ದೊಡ್ಡವಳು ಸೋತು ಬಿಡು ಏನಾಗುತ್ತೆ 'ಅನ್ನೋ ಅಮ್ಮ .. 'ನೀನು ತಪ್ಪು ಮಾಡಿಲ್ಲ ಗೊತ್ತು ಆದರೂ ಅವರು ದೊಡ್ಡವರು ನೀನು ಚಿಕ್ಕವಳು ಅಲ್ವ ಸೋತು ಬಿಡು' ಅನ್ನೋ ಗಂಡ ;' ಅಯ್ಯೋ ಬಿಡಿ ಅಕ್ಕ ನೀವು ಸೋತರೆ ಅದು ಗೆದ್ದಂತೆ ಅಂತ ನಂಗೆ ಗೊತ್ತು ' ಅನ್ನೋ ವಾರಗಿತ್ತಿ ; 'ಬಿಟ್ ಬಿಡಮ್ಮ ಯಾಕೆ ತಲೆ ಕೆಡಿಸಿಕೊಳ್ತೀಯ ನೀನು ಏನು ಅನ್ನೋದು ನಮಗೆ ಗೊತ್ತು ' ಅನ್ನೋ ಮಕ್ಕಳು ; 'ಅದೆಲ್ಲ ಒಂದ್ ವಿಷ್ಯನಾ ಮರೆತುಬಿಡು , ನೀನು ಏನು ಅನ್ನೋದು ಗೊತ್ತು ' ಅನ್ನೋ ಗೆಳತಿಯರು... 'ಇದೊಂದು ಹೆಲ್ಪ್ ಪ್ಲೀಸ್ ' ಅನ್ನೋ ಬಂಧುಗಳು .. ಪ್ರತೀ ಹೆಜ್ಜೆಯಲ್ಲೂ ಪ್ರೀತಿಗಾಗಿ (!) ಸೋಲುತ್ತಾ , ಮನೆಯ ನೆಮ್ಮದಿಗಾಗಿ (!) ಗುಟ್ಟುಗಳ ಒಡಲೊಳಗೆ ಬಚ್ಚಿಡುತ್ತಾ ,....ಕೆಲವರ ತಪ್ಪ ಮುಚ್ಚಿಟ್ಟು , ಕೆಲವರಿಗೆ ಕಣ್ಣಿಗೆ ಒಳ್ಳೆಯವಳಾಗಿ , ಕೆಲವರ ಕಣ್ಣಿಗೆ ಕೆಟ್ಟವಳಾಗಿ , ... ಕೆಲವರ ಬದುಕಿಗೆ ಆಸರೆಯಾಗಿ, ಕೊನೆಗೊಮ್ಮೆ ಯಾರಿಗೂ ಹೇಳದೆ ಕೇಳದೆ ಹೊರಟು ಬಿಡುವುದೇ ಜೀವನದ ಸಾರ್ಥಕ್ಯವೇ ?????
ಮೇಲಿನ ಕಥೆಗೂ ನಂತರದ ಬರಹಕ್ಕೂ ಸಂಬಂಧ ಏನು ಅಂದ್ರಾ........ ಕೆಲವೊಮ್ಮೆ ಹಾಗೆ ಆಗುತ್ತೆ ..... ಕಷ್ಟ ಸಹಿಷ್ಣುತೆ ಕೂಡ ಸಂಕಷ್ಟಕ್ಕೆ ದೂಡುತ್ತದೆ .. ..ಪ್ರೀತಿ, ನೆಮ್ಮದಿ, ಸಾರ್ಥಕ ಅನ್ನೋ ನೆಪದಲ್ಲಿ ಆತ್ಮಾಭಿಮಾನಕ್ಕೆ ಧಕ್ಕೆ ಆಗುತ್ತದೆ .... But Still, the Life moves on for the sake of the Family, for the sake of the secured life, and for the sake of Social Respect(be it a man or woman)............Some say it, same cry and forget it, some just get Adjusted for it...... and Life Goes onnnnnnnnn...............Felt like sharing.....
Zindagi.................................ಬದುಕು ...........Life......
ಬರುವಿಕೆ ಹೋಗುವಿಕೆ 
ಬದುಕಿನ ನಿಯಮ ಗೆಳೆಯ 
ಹೋದವರು ಬರುವರೋ ಇಲ್ಲವೋ ಅರಿಯೆ 
ಬಸಿರಿನ ಬಂಧುತ್ವವಿರಲಿ, ಉಸಿರಿನ ಬಂಧನವಿರಲಿ ... 
ಬಂದವರೆಲ್ಲ ಹೋಗಲೇಬೇಕೆಂದು ಅರಿವಿದೆ ಗೆಳೆಯ ......
ಅದಕ್ಕೆ ನಾ ನಿಶ್ಚಲೆ
ಆ ಹಿಮಪರ್ವತದ ಹಾಗೆ
ಕರಗಿಯೂ ಕರಗದ ಹಾಗೆ .......

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...