Sunday 24 July 2011

ಜೀವನ

ಸಾಗರದ ಅಲೆಗಳು...
ಒಂದರ ಹಿಂದೊಂದು..
ಒಂದಕ್ಕೂ ಹೆಸರಿಲ್ಲ..
ಒಂದಕ್ಕೂ ಗುರಿ ಇಲ್ಲ..
ಹಾಗೆ ಬಂದು ಹೀಗೆ ಹೋದ ಅಲೆಗಳು...
ಬರಿಯ ನೀರು ..ಹೆಸರಿಲ್ಲದ ಉಸಿರಿಲ್ಲದ ನೀರು...

ಬದುಕಿನ ಹೊತ್ತಿಗೆಯಲ್ಲಿ
ನೂರಾರು ಪುಟಗಳು..
ಹೀಗೆ ಬಂದು ಹಾಗೆ ಹೋದ ಖಾಲಿ ಪುಟಗಳು..
ಕೆಲವಕ್ಕೆ ಬಣ್ಣವಿಲ್ಲ...
ಹಲವಕ್ಕೆ ಪದಗಳಿಲ್ಲ....
ಬರಿಯ ಅಕ್ಷರಗಳು.....ಅರ್ಥವಿಲ್ಲದ ವ್ಯರ್ಥ ಅಕ್ಷರಗಳು...

ಬಾಳ ಬನದಲ್ಲಿ
ನೂರಾರು ಮರಗಳು..
ಹುಟ್ಟಿ ಮುರುಟಿ ಹೋಗೊ ಸಂಬಂಧಗಳು...
ಕೆಲವಕ್ಕೆ ಒಲವಿಲ್ಲ....
ಉಳಿದವಕ್ಕೆ ಬಲವಿಲ್ಲ..
ಬರಿಯ ಬಂಧಗಳು..ಬೇಡದ ಬಂಧನಗಳು...

ನೀರಲ್ಲೂ ಜೇನ...ಅಕ್ಷರದಲ್ಲೂ ಹಾಡ.. ಬಂಧನದಲ್ಲೂ ಅನುಬಂಧ
ಹುಡುಕೋದೆ ಜೀವನ....
ಇದು ಬರಿ ಉಸಿರಲ್ಲ ಗೆಳೆಯ...
ಇದು ಜೀವಾಮೃತ...
ಇದನರಿಯದಿದ್ದರೆ...ಜೀವನ ಅನೃಥ ..

ಮುಂಜಾವು


ನಸುಬೆಳಕಿನ
ತುಸುಕತ್ತಲ ...
ಇಳೆಗೆ ರವಿಯ ಉಸಿರು ಸೋಕೋ ವೇಳೆ

ಮನೆಯ ಮುಂದಿನ ಮರದ ಮೇಲೆ ..
ಪುಟ್ಟ ಹಕ್ಕಿಗಳ ಪ್ರಣಯ ಲೀಲೆ...

ಒಲವಿನ ಅದು..ಚೆಲುವಿನ ಇದು...
ಪಿಸು ಮಾತು...ಒರೆ ನೋಟ
ನಲಿವು, ಆಸೆ, ನಂಬಿಕೆ....
ಉಲ್ಲಾಸದ ಲಹರಿ...
ಪ್ರೇಮದ ಪ್ರತಾಪ...

ಯಾವುದೊ ಕಾಣದ ಸೂತ್ರಕ್ಕೆ ಸಿಕ್ಕಂತೆ
ನಗುತ್ತ ಎದ್ದು ಹೂಯ್ತೊಂದು ಹಕ್ಕಿ...

ಒಡಲೊಳಗೆ ಕದಲುತ್ತ...
ಮನದೊಳಗೆ ಕರಗುತ್ತಾ...
ನಭದಿಂದ ಧರೆಗಿಳಿದ
ಇನ್ನೊಂದು ಹಕ್ಕಿ..
ಕಾಯುತ್ತಿದೆ..
ಮತ್ತೊಂದು ಬೆಳಗಿಗಾಗಿ...
ಅದೇ ಬೆಳಕಿಗಾಗಿ...

ನಾನೂ ಕಾಯುತ್ತಿದ್ದೇನೆ ನಾಳಿನ ಬೆಳಗಿಗಾಗಿ..
ಪುಟ್ಟ ಹಕ್ಕಿಗಳ ಮಿಲನಕ್ಕಾಗಿ..
ಮಧುರ ಚಿಲಿಪಿಲಿಗಾಗಿ..

ಕೇಳ ಬಾರದಿತ್ತೆ ಈ ಪ್ರಶ್ನೆ...??

ಹದಿನಾಲ್ಕು ವರುಷ
ಅಯೋಧ್ಯೆಯ ಸೊಸೆಯಾಗಿ...
ಲಕ್ಷ್ಮಣನ ಸತಿಯಾಗಿ..
ಕಟಾಂಜನದ ಮೇಲೆ ಕೈ ಇಟ್ಟು..
ತವರುಮನೆಯ ಸುಖವ ನೆನೆದುಕೊಂಡೇ..
ಮದುವೆಯ ಮುದದ ನೆನಪಲ್ಲಿ ಮನವ ತಣಿದುಕೊಂಡೆ
ಗಿಳಿ ಗೊರವಂಕಗಳೊಡನೆ ಕನಸ ಹಂಚಿಕೊಂಡೆ...
ಆಗೊಮ್ಮೆ ಈಗೊಮ್ಮೆ ಈ ಮದುವೆಯ ವಜ್ರದುಂಗುರವ ತಿಂದು
ಇಹವ ತೊರೆಯಬೇಕೆಂದುಕೊಂಡೆ..
ಆದರೀ ಉಂಗುರದ ಒಡೆಯನ ಬಿಸುಪು, ನೆನಪೇ ನನ್ನ ಹಿಡಿದಿಟ್ಟಿತ್ತು...
ಹದಿನಾಲ್ಕು ವರ್ಷಗಳ ನಂತರ
ಕಟಾಂಜನದ ಮೇಲೆ ಕೈ ಇಟ್ಟು ಒರಗಿ
ನೋಡುತ್ತಿದ್ದೇನೆ ಲಕ್ಷ್ಮಣನನ್ನು
ಕೊಂಚ ಕೃಶ ಶರೀರ ,ಒಂದಿನಿತೂ ಕುಂದದ ಕಣ್ಣ ಹೊಳಪು
ಇವರೇ ಅಲ್ಲವೇ ನನ್ನ ಕೈ ಹಿಡಿದು ಆಯೋಧ್ಯೆಗೆ ಕರೆತಂದವರು....
ಮೈಯಲ್ಲಿ ಏನೋ ಬಿಗಿತ..
ಕೈಯಲ್ಲಿ ಕಂಪನ..
ಮನದಲ್ಲಿ ತವಕ...
ಗಂಡನನ್ನು ಕಾಯುತ್ತಿರುವ
ಈಗಷ್ಟೇ ಮದುವೆಯಾದ ಹೆಣ್ಣು ನಾನು
ಹದಿನಾಲ್ಕು ವರ್ಷ ಕಳೆದದ್ದು ದೇಹಕ್ಕೆ ಮಾತ್ರ...
ಆದರೆ....
ಲಕ್ಷ್ಮಣನಿಗೆ ರಾಮನ, ಮಹಾಸತಿ ಸೀತೆಯ
ಪ್ರೇಮ, ವಿರಹ, ಮಿಲನಗಳ
ಕಾಡಿನ ಕಥೆ, ವ್ಯಥೆಯದೆ ವಿಷಯ...
ವನವಾಸ ರಕ್ಕಸಯುದ್ಧ ಅವನನ್ನು ಪ್ರೌಡನನ್ನಗಿಸಿದೆ ..
ಅಣ್ಣ ಅತ್ತಿಗೆಯರ ಸೇವೆ, ದೇವರ ಧಾನ್ಯ, ವನವಾಸ ಅವನನ್ನು ನಿರ್ಲಿಪ್ತನನ್ನಾಗಿಸಿದೆ
ಇಂದಿಗಿಂತ ಆ ಕಾಯುತ್ತಿದ್ದ ಹದಿನಾಲ್ಕು ವರ್ಷವೇ ಹಿತ ಎನಿಸುತ್ತಿದೆ..
ಹಿಡಿದಿಡಲಾರದೆ ಕೇಳಿ ಬಿಟ್ಟೆ
"ಈ ಹದಿನಾಲ್ಕು ವರ್ಷ ನನ್ನ ನೆನಪೇ ಆಗಲಿಲ್ಲವೇ ಲಕ್ಷ್ಮಣ "
ಸ್ತಂಭಿಬುತನಾದ ಲಕ್ಷ್ಮಣ .....
ಕಣ್ಣoಚಲ್ಲಿ ನೀರತುಂಬಿ ನಾ ಕೇಳಿದ ಪರಿಗೆ...
ಅವನ ಕಣ್ಣಲ್ಲಿ ಚದಪದಿಕೆಯೇ ...ಇಲ್ಲ ತಪ್ಪಿತಸ್ಥ ಭಾವವೇ...
ಅಯೋಧ್ಯೆಯ ಸೊಸೆಯಾಗಿ...
ಲಕ್ಷ್ಮಣನ ಮಡದಿಯಾಗಿ...
ಸೀತೆಯ ತಂಗಿಯಾಗಿ...
ನಾ ಕೇಳಿದ್ದು ತಪ್ಪೇನೋ ..
ಆದರೆ...ಊರ್ಮಿಳೆಯಾಗಿ, ಹೆಣ್ಣಾಗಿ,ವಿರಹಿಯಾಗಿ
ನಾ ಕೇಳಿದ್ದು ತಪ್ಪೇ......?????

ಅಲೆಯೊಂದರ ಸ್ವಗತ


ಅವನು  ಬಿರುಸಿನ ಕಡಲ ಕಿನಾರೆ...
ಅವನ ಪ್ರೇಮ ಕನ್ನಿಕೆ  ನಾನು...

ಅದೋ ಅಲ್ಲಿರುವ ಅನಂತ ದಿಗಂತದಾಚೆ ನನ್ನ ಉಗಮ....
ಅವನ ಚಿನ್ನದ ಮರಳ ಮಡಿಲಲ್ಲಿ ನನ್ನ ಅವನ ಸಂಗಮ...

ನನ್ನ ಏರು ಉನ್ಮಾದಕ್ಕೆ ಅವನ ಸಂಯಮವೇ ಉತ್ತರ....ನನ್ನ ತುಡುಗುತನಕ್ಕೆ ಅವನ ಘಾಂಬೀರ್ಯದ ಮಂತ್ರ..
ಅವನಿಗಾಗಿ ಕಡಲಾಳದಿಂದ ನಾನು ಹೊತ್ತು ತರುವೆ ಮುತ್ತು..
.ಅದಕ್ಕೂ ಅವನ ಮೌನ  ನಗುವಿನ ಗತ್ತು...

ಕತ್ತಲು ಧರೆಯ ಅಪ್ಪಿದಾಗ....ಅವನು ನಿದ್ರೆಗೆ  ಜಾರಿದಾಗ....
ನಾನು ಹಾಡುತ್ತೇನೆ ಅವನಿಗಾಗಿ......
ಹಾಡಾಗಿ ಬಿಡುತ್ತೇನೆ ಅವನಿಗಾಗಿ....
ನನ್ನ ಹಾಡು ಎಂದು ಮುಗಿಯದ ಹಾಡು....
ನಾನು ಅವನ ಪ್ರೇಮಿ....
ಅವನಿಗಾಗಿ ಹಾಡುತ್ತೇನೆ...
ಅವನು ಮೌನವಾಗೇ ನನಗಾಗಿ ಮಿಡಿಯುತ್ತಾನೆ...

ಹೆಜ್ಜೆ ಗುರುತು

ನೀನಿಟ್ಟ ಮೊದಲ ಹೆಜ್ಜೆ ಗುರುತು
ಮನದಾಳದಲ್ಲಿ ಮಾಸದೆ ಉಳಿದಿದೆ ಒಲವೆ...

ಇಳೆಯ ಸೋಕಿದ ಮೊದಲ ಹನಿಯಾ ತೆರದಿ...
ಹೂವ ಚುಂಬಿಸಿದ ಮುಂಜಾನೆಯ ಇಬ್ಬನಿಯಂದದಿ
ಪುಟ್ಟ ಮಲ್ಲಿಗೆ ಹೂ ಬಿರಿದ ಅಂದದಿ...
ಸದ್ದೇ ಇಲ್ಲದ ಸುಳಿವೇ ನೀಡದ ಹೆಜ್ಜೆಯ ಗೆಜ್ಜೆನಾದ...
ನೂರಾರು ಹೆಜ್ಜೆಗಳ ನಡುವೆಯೂ ಉಲಿಯುತ್ತಲೇ ಇದೆ ....

 ನಿನ್ನ  ಹೆಜ್ಜೆಯ ಗೆಜ್ಜೆದನಿ
ಮೊಗದಲ್ಲೊಂದು ನಗುವ ಮೂಡಿಸಿ...
ಮನದಲ್ಲೊಂದು ಮಿಂಚ  ಹರಿಸಿ...
ತನುವಲ್ಲೊಂದು ಕಂಪನ ತರಿಸಿ..
ಉಲಿಯುತ್ತಲೇ ಇದೆ...

ಉಲಿವ ನಿನ್ನ ಗೆಜ್ಜೆಯೊಡನೆ  ನನ್ನ ಮನದ ಮೌನವೀಣೆ
ಪ್ರೇಮ ಸುಧೆಯ  ಹರಿಸಿದೆ ಎಲ್ಲವನ್ನು ಮರೆಸಿದೆ.
ಹೆಜ್ಜೆಯನ್ನು  ಉಳಿಸಿದೆ ....

Friday 1 July 2011








ಅವಳು 
ಶಕುಂತಲೆ....
ತನ್ನದಲ್ಲದ ತಪ್ಪಿಗೆ..
ಹೆತ್ತವರಿಗೆ ಹೊರೆಯಾಗಿ
ತೊರೆಯಲ್ಪಟ್ಟ ಶಕುಂತಲೆ....
ತನ್ನದಲ್ಲದ ತಪ್ಪಿಗೆ 
ಶಾಪಕ್ಕೆ ಗುರಿಯಾದ ಶಕುಂತಲೆ...
ತನ್ನದಲ್ಲದ ತಪ್ಪಿಗೆ 
ಶಚ್ಚಿತೀರ್ಥದಾಳದಲ್ಲಿ ಉಂಗುರ ಕಳೆದುಕೊಂಡು
ತುಂಬುಸಭೆಯಲ್ಲಿ 
ಪುಟ್ಟ ಕಂದನ ಬಸಿರಲ್ಲಿ ಹೊತ್ತು ..
ಪತಿಯಿಂದ ತ್ಯಕ್ತಳಾದ ಶಕುಂತಲೆ... 

ನಾನು ಶಕುಂತಲೆ..
ಶಚ್ಚಿತೀರ್ಥದ ಮುಂದೆ ನಿಂತಿರುವೆ...
ನನ್ನದಲ್ಲದ ತಪ್ಪಿಗೆ ಪುಟ್ಟ ಕಂದನ ಒಡಲಲ್ಲಿ ಹೊತ್ತು...
ದುಷ್ಯಂತ..ಬರುವನೋ..ಬಾರನೋ ಎಂದಲ್ಲ..
ಶಾಪಹಾಕಿದ ದುರ್ವಾಸರಿಗೆ ಮನದಲ್ಲಿ ಶಪಿಸುತ್ತಲು ಅಲ್ಲ...
ಕಣ್ವನಾಶ್ರಮದೆಡೆಗೆ ಹೋಗಲೋ ಬೇಡವೋ ಎಂದಲ್ಲ...
ಹೆತ್ತು ಪೊರೆಯಲಾರದೆ ಬಿಟ್ಟು ಹೋದ ಹೆತ್ತವರ ಹುಡುಕುತ್ತಲು ಅಲ್ಲ...
ನಾಳೆ ಹುಟ್ಟುವ ನನ್ನ ಕಂದನಿಗೆ ಹೇಗೆ ಬದುಕ ನೀಡಲಿ ಎಂದು....
ನನಗಾದಂತೆ ಅವನಿಗಾಗದಿರಲಿ ಎಂದು..
ನನ್ನದಲ್ಲದ ತಪ್ಪಿಗೆ ನಾನು ನೋವುಡಂತೆ 
ಅವನು ನಲುಗದಿರಲಿ ಎಂದು....
ಧೃಡವಾಗಿ ಬದುಕಾಗಿ....ಬದುಕಲಿಕ್ಕಾಗಿ...
ಏಕೆಂದರೆ....
ನಾನು ಶಕುಂತಲೆ....ಇಂದಿನ ಶಕುಂತಲೆ...

ಇದೆ ಜೀವನ

ನನ್ನೊಳಗೊಂದು ಲೋಕವಿದೆ..
ನನ್ನ ಹೊರಗೊಂದು ಜಗವಿದೆ..
ಅಲ್ಲೊಂದು ತಾಳ...
ಇಲ್ಲೊಂದು ಮೇಳ
ಒಳಗೊಂದು ಅಳುವು
ಹೊರಗೆ ನಲಿವು...
ಒಂದೆಡೆ ಅಸ್ತಮಿಸುವ ಉದಯ...
ಮತ್ತೊಂದೆಡೆ ಉದಯಿಸುವ ಶಶಿ ...
ಹೊರಬೆಳಕಿನಿಂದ ಒಳ ತಮವ ಬೆಳಗಿಸಲೋ...
ಒಳ ಅರಿವೊಡನೆ ಹೊರ ಡಂಬವ ಅಳಿಸಲೋ...
ಅಲ್ಲಿ ಸೊರಗುವ ಬಳ್ಳಿ...
ಇಲ್ಲಿ ಬಿರಿಯುವ ಮೊಗ್ಗು...
ಅತ್ತ ಕಾರ್ಮೋಡ ...
ಇತ್ತ ಮಳೆಗೆ ಬಿರಿದ ಇಳೆ...
ಹೊರಗಿನ ತಾಳಕ್ಕೆ ಒಳಗಿನ ಮೇಳ .....
ಹೊರಗಿನ ತುಡಿತಕ್ಕೆ ಒಳಗಿನ ಬಡಿತ...
ಹೊರ ಲೋಕದ ದನಿಯಿಲ್ಲದೆ ಒಳ ಗೀತೆಗೆ ರಾಗವಿಲ್ಲ
ಹೊರ ನೋಟದ ಮಿಳಿತವಿಲ್ಲದೆ ಒಳಚಿತ್ರದ ಮಿಡಿತವಿಲ್ಲ...
ಇದೆ ಜೀವನ....ಇದುವೇ ಸಂಜೀವನ...

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...