Tuesday, 25 October 2016

ದಸರಾ ಅಂದ್ರೆ ನಾವ್ ಮೈಸೂರಿನವರಿಗೆ ಒಂದ್ ತರ ಸಂಭ್ರಮ . ಪ್ರತಿ ವರ್ಷ ನೋಡಿದರೂ ಮತ್ತೆ ಈ ವರ್ಷ ಕೂಡ ಹೊಸದೇನೂ ಇರಬೇಕು ಅನಿಸೋ ಅಷ್ಟು ಉತ್ಸಾಹ .. ಓದುವಾಗ ಮೆಡಿಕಲ್ ಕಾಲೇಜ್ ಅಲ್ಲಿ ಕುಳಿತು ನೋಡಿದ ದಸರ ಬಿಟ್ರೆ ಮದ್ವೆ ಆದ ಮೇಲೆ ದಸರ ಜಂಬೂ ಸವಾರಿಗೆ ಅಂತ ಹೋಗೇ ಇರಲಿಲ್ಲ. ಈ ಬಾರಿ ಮಂಜು ಹೇಳಿದ್ರು 'ನಿನ್ನ ದಸರಾಗೆ ಕರ್ಕೊಂಡ್ ಹೋಗ್ತೀನಿ ಅಂತ .. 'ಅಯ್ಯೋ ಆ ರಶ್ ನನಗೆ ಆಗೋದಿಲ್ಲ ತಲೆ ನೋವು ಬಂದ್ಬಿಡುತ್ತೆ ಅಷ್ಟೇ' ಅಂದೆ . 'ನೀ ಸುಮ್ನೆ ಬಾ, ನಾ ಕರ್ಕೊಂಡ್ ಹೋಗ್ತೀನಿ' ಅಂದ್ರು. 
ಮಳೆಯಲ್ಲಿ ನೆನೆಯುತ್ತಾ ಅಲ್ಲೆಲ್ಲೋ ಗಾಡಿ ನಿಲ್ಲಿಸಿ ನಡೆಯುತ್ತಾ ಸಯ್ಯಾಜಿ ರಾವ್ (ರಾಜ ಪಥ!! ) ರಸ್ತೆಯಲ್ಲಿನಡೆಯುತ್ತಾ ಹೋದ್ವಿ.. ಮಳೆಯಲ್ಲೂ ಅದೇನ್ ಜನ .. "ಮೂರು ದಿನದ ಹಿಂದೇನೆ ಜಾಗ ಆಕಿವ್ನಿ .. ಈಗೇನ್ ನೀ ಬಂದು ತಳ್ಳಾಡ್ತೀಯ' ಅನ್ನೋ ಹೆಂಗಸರು , ಸೆಲ್ಫಿ ತೆಗೆದುಕೊಳ್ಳೋ ಹೆಣ್ ಐಕ್ಳು, ಹುಡುಗಿಯರನ್ನ ಕಿಚಾಯಿಸೋ ಗಂಡ್ ಐಕ್ಳು , ಅಪ್ಪನ ಹೆಗಲೇರಿದ ಚಿಣ್ಣರು, ಕೈಗೆ ಸಿಗದ ಮಕ್ಕಳನ್ನ ಬೈಯ್ಯೋ ಅಮ್ಮಂದಿರು, ಉಸ್ ಅಂತ್ಲೆ ಅಂಬಾರಿ ಬರೋ ವರೆಗೂ ಕಾಯ್ತಾ ಇದ್ದ ಹಿರಿಯರು, ಒಂದಷ್ಟು ವಿದೇಶಿಯರು, ನಮ್ಮ ಪೊಲೀಸರು , ಮಟ ಮಟ ಮಧ್ಯಾಹ್ನವೇ 'ಕುಡಿದು' ಬಂದು ಬೈಸಿಕೊಳ್ತಾ ಇದ್ದವರು , ಸಿಕ್ಕಿದ್ದೇ ಚಾನ್ಸ್ ಅಂತ ಹೆಚ್ಚು ಬೆಲೆ ಹೇಳಿ ತಿಂಡಿತಿನಿಸು ಮಾರ್ತಾ ಇದ್ದವರು, ಲಾರಿಗಳನ್ನ ನಿಲ್ಲಿಸಿಕೊಂಡು 'ಒಂದು ಸೀಟ್ಗೆ ೫೦ ರೂಪಾಯಿ' ಅಂತ ದುಡ್ಡು ಗಳಿಸೋ ಲಾರಿಯವರು, ಪ್ರತಿಯೊಂದು ಸ್ತಬ್ಧಚಿತ್ರ ಬಂದಾಗ ಉದ್ಗಾರಗಳು, ಒಂದು ಕುಣಿತ ಹಾಕಿ ಮುಂದೆ ಹೋಗ್ರಣೋ ಅಂತ ಕೇಕೆ ಹಾಕೋ ಪಡ್ಡೆಗಳು, ಹೆಂಡತಿಯ ರಕ್ಷಣೆಗೆ ಅಂತ್ಲೆ ಹೆಂಡತಿಯ ಹೆಗಲ ಸುತ್ತಾ ಕೈ ಹಾಕಿ ಕರೆದುಕೊಂಡು ಹೋಗೋ ಪತಿದೇವರುಗಳು, ಹಸಿರು ದಸರ ಅಂತಲೇ ಪೊಲೀಸರ ಸೈಕಲ್ ಸವಾರಿ, ಅಂಬಾರಿ ಬಂದ ಒಡನೆ 'ಚಾಮುಂಡಿಗೆ ಜೈ, ಅಮ್ಮನಿಗೆ ಜೈ' ಅಂತ ಭಕ್ತಿಯಿಂದ ಕಣ್ಣು ತುಂಬಿಕೊಂಡವರು, ಅಂಬಾರಿ ಹೋದ ಕೂಡಲೇ ಬನ್ನಿಮಂಟಪದ ಕಡೆ ದೌಡಾಯಿಸೋರು, .. ಅಹ್ ಮೈಸೂರು ದಸರಾ ಎಷ್ಟೊಂದು ಸುಂದರ..
ನಾಜೂಕಾಗಿ ಒಂದೆಡೆ ಕುಳಿತು sophisticated ಆಗಿ ಮೈಗೆ ಕೈ ತಾಗಿಸಿಕೊಳ್ಳದೆ ಚಪ್ಪಾಳೆ ಹೊಡೆಯಲೂ ಕೂಡ ಕಾಸು ಬೇಕು ಅನ್ನೋ ಅಥವ ಅವಮಾನ ಅನ್ನೋ ಅಥವಾ ಸೋಮಾರಿತನ ತೋರುವ ಜನಗಳ ನಡುವಿನ ದಸರಾಕ್ಕಿಂತ ತುಂಬಾ ಭಿನ್ನವಾದ 'ಜನರ ದಸರ' ನೋಡಿದೆ...
THe best part was ಅರ್ಜುನ ತನ್ನ ಗಜ ಗಾಂಭೀರ್ಯದೊಡನೆ ತಾಯಿ ಚಾಮುಂಡೇಶ್ವರಿಯ ಹೊತ್ತು ಸಾಗಿದ ಪರಿ ಮತ್ತು ಮಳೆಯಲ್ಲಿ ಕೂಡ ತನ್ನ ನಗುವನ್ನ ಎರಚುತ್ತಾ ಸಾಗಿದ ತಾಯಿ ಚಾಮುಂಡಿ .....
(ವಾಪಸ್ಸು ಬಂದ ಮೇಲೆ ನನ್ ಐಕ್ಳು 'ಮುಗಿತಾ ಜಾಲಿ ಬರ್ಡ್ಸ್ ದಸರ ' ಅಂದ್ವು... ನನ್ ಗಂಡ ಹೇಳಿದ್ದು 'ಅಯ್ , ದಸರಾ ಮುಗಿದ್ರೇನು ದೀಪಾವಳಿ ಬಂತಲ್ಲ " )
ದಸರಾ ಮುಗಿತಾ? ಇಲ್ಲವಲ್ಲ ಹಿಂಗ್ ಹೋಗಿ ಮತ್ ಹಾಂಗ್ ಬಂದ್ಬಿಡುತ್ತೆ :))))))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...