Tuesday, 25 October 2016

ಮೊನ್ನೆ ಸುಳ್ಯದಿಂದ ಮೈಸೂರಿಗೆ ಬರ್ತಾ ಇದ್ವಿ. ನನಗೆ ಟ್ರಾವೆಲಿಂಗ್ sickness .. ಬಸ್ ಹತ್ತಿದ ಕೂಡ್ಲೇ ಕಣ್ಣು ಮುಚ್ಚಿ ಕೂತ್ಬಿಡ್ತೀನಿ .. ಆವತ್ತು ಹಾಗೆ ಮಂಜು ಭುಜದ ಮೇಲೆ ತಲೆಯಿಟ್ಟು ಕಣ್ಣು ಮುಚ್ಚಿದ್ದೆ . ಹಿಂದೆಯಿಂದ ಒಂದು ಹೆಣ್ಣು ಮಗಳ ದನಿ 'ಹಲೋ , ಹಲೋ , ಅವ್ರಿಗೆ ಹೇಳಿ ದಫನ್ ಮಾಡ್ಬೇಡ ಅಂತ ಈಗ ಸುಳ್ಯ ಬಿಟ್ಟೀವಿ. ೫ ಗಂಟೆ ಹೊತ್ಗೆ ಆಲ್ಲಿರ್ತೀವಿ.. ಹಲೋ .. ' ಮೂಗೊರೆಸುವ ಸದ್ದು. ಪಾಪ ಯಾರೋ ಅವರ ಕಡೆಯವರು ತೀರಿಹೋಗಿರ್ಬೇಕು..ಪಕ್ಕದಲ್ಲಿ ಒಂದ್ ೩-೪ ವರ್ಷದ ಮಗು, ಮಗುವಿನ ಪಕ್ಕ ಒಬ್ಬ ವ್ಯಕ್ತಿ , ಪ್ರಾಯಶಃ ಅವಳ ಗಂಡನಿರಬೇಕು ಅಂದುಕೊಂಡೆ (ಆಮೇಲೆ ಅವನು ಗಂಡನೇ ಅಂತ ಅವ್ರ ಮಾತುಗಳಿಂದ ಖಾತ್ರಿಯಾಯ್ತು). ಪಾಪ ಅನಿಸ್ತು.
(ನಾನು ೬ನೇ ತರಗತಿಯಲ್ಲಿರುವಾಗ ಅಜ್ಜಿ ತೀರಿಹೋಗಿದ್ರು . ತಿಪಟೂರಿನಲ್ಲಿ ಇದ್ದ ಚಿಕ್ಕಮ್ಮ ಕೊಳ್ಳೇಗಾಲಕ್ಕೆ ಬರುವ ತನಕ ಮಣ್ಣು ಮಾಡದೆ ಕಾಯ್ತಾ ಇದ್ದದ್ದು ನೆನಪಿಗೆ ಬಂತು. ಸಂಜೆ ೬ ಗಂಟೆಗೆ ಬಂದ ಚಿಕ್ಕಮ್ಮ 'ಅಮ್ಮ, ನಿನ್ನ ಮೊಕ ನೋಡೋಕೆ ಆಗುತ್ತಾ ಇಲ್ವೋ ಅಂದ್ಕೊಂಡಿದ್ದೆ' ಅಂತ ಅತ್ತದ್ದು ಈಗಲೂ ನೆನಪು.. ಆಗೆಲ್ಲ ಈಗಿನ ಹಾಗೆ ಮೊಬೈಲ್ ಎಲ್ಲಿದ್ವು, ಟೆಲಿಗ್ರಾಂ ಕಳಿಸ್ತಾ ಇದ್ರು . ಹೊರಟ್ರು ಅಂತ ಟ್ರಂಕ್ ಕಾಲ್ ಮಾಡಿದರೆ ಇಷ್ಟ್ ಹೊತ್ತಿನ ಬಸ್ಸು ಒಂದಷ್ಟು ಹೆಚ್ಚುಕಡಿಮೆ ಇಷ್ಟ್ ಹೊತ್ತಿಗೆ ಬರುತ್ತೆ ಅನ್ನೋ ಭರವಸೆಯಿಂದ ಕಾಯ್ತಾ ಇದ್ದದ್ದು ನೋಡಿದ ನೆನಪಿದೆ)
ಸುಳ್ಯ ಬಿಟ್ಟು ಹೊರಟ ಮೇಲೆ ನಡುವೆ ಮತ್ತೆರಡು ಬಾರಿ ಯಾರಿಗೂ ಕರೆ ಮಾಡಿದ್ಲು ಆ ಹೆಣ್ಣು ಮಗಳು. ನಡುನಡುವೆ ಗಂಡನ್ನ ಬೈತಾ ಇದ್ಲು. 'ಮಗುಗೆ ಬಿಸ್ಕೆಟ್ ತನ್ರಿ ಅಂದ್ರೆ ಹಂಗೆ ಬಂದ್ರಲ್ಲ' ಅಂತ ಅಲವತ್ತು ಕೊಳ್ತಾ ಇದ್ಲು. ಮಡಿಕೇರಿ ಬಂತು. ಮತ್ತೆ ಯಾರಿಗೂ ಕರೆ ಮಾಡಿದ್ಲು 'ಬರ್ತೀವಿ ದಫನ್ ಮಾಡ್ಬೇಡಿ' ಅಂದ್ಲು.. ಗಂಡನಿಗೆ ಮಗುವಿಗೆ ನೀರು ಮತ್ತೆ ಬಿಸ್ಕತ್ ತರೋಕೆ ಹೇಳಿದ್ಲು. ಒಂದಷ್ಟು ದುಡ್ಡು ಕೊಟ್ಟಳು ಅನಿಸುತ್ತೆ. ಆ ಮನುಷ್ಯ ಇಳಿದು ಹೋದ.. ಹಿಂದೆ ಸೀಟ್ನಲ್ಲಿ ಇದ್ದ ವ್ಯಕ್ತಿಯೊಬ್ಬ ಅವರ ಸೀಟ್ಗೆ ಬಂದ.. ಈಕೆ ಶುರು ಮಾಡಿದ್ಲು 'ನೋಡಣ್ಣ ಹಂಗೆ..ಹಿಂಗೇ , ನಂಗೆ ಅಲ್ಲಿ ಖರ್ಚಿಗೆ ಕಾಸು ಬೇಡ್ವಾ ಎಲ್ಲ ಇವನ್ಗೆ ಕೊಟ್ರೆ.. ಮಗುಗೆ ಏನೂ ತರ್ಲಿಲ್ಲ .. ಕೊಟ್ಟ ದುಡ್ಡು ಮಡಿಕಂಡವ್ನೆ. ನಾನು ವಾಪಸ್ಸು ಬರೋದು ಹೆಂಗೆ ' ಅವ್ನು ಏನೋ ಗುಸುಗುಸು ಅಂದ . ಅಷ್ಟ್ರಲ್ಲಿ ಗಂಡ ಅನಿಸಿಕೊಂಡವನು ಬಂದ ಏನು ತಂದ್ನೋ ಬಿಟ್ನೋ ಮತ್ತೆ ಆಕೆ ಪೇಚಾಡಲು ಶುರು ಮಾಡಿದ್ಲು.. ನಾ ಮಂಜುಗೆ ಹೇಳ್ದೆ 'ಬ್ಯಾಗ್ ಅಲ್ಲಿ ಸ್ನಾಕ್ಸ್ ಇದ್ಯಲ್ಲ ಕೊಟ್ಬಿಡು ಮಂಜು , ಪಾಪ ಮಗು ತಿನ್ಲಿ' ಮಂಜು ಹೇಳಿದ್ರು 'ತಾಯಿ,ನಿಂಗೆ ಇವೆಲ್ಲ ಗೊತ್ತಾಗೋದಿಲ್ಲ ಸುಮ್ನೆ ಕಣ್ ಮುಚ್ಚಿಕೊಂಡಿರೋ ಹಂಗೆ ಕಿವಿನೂ ಮುಚ್ಚಿಕೊಂಡು ದೇವ್ರು ಕುಂತಗೆ ಕೂತ್ಕೋ , ಆ ಮಗ ಎಣ್ಣೆ ಹಾಕಿದ್ದಾನೆ, ನಾನೇನಾದ್ರೂ ಕೊಡೋಕೆ ಹೋದ್ರೆ ಅವ್ನ ಬಾಯಲ್ಲಿ ನಾ ಅರ್ಚನೆ ಮಾಡಿಸ್ಕೊಬೇಕಾಗುತ್ತೆ' ಅಂದ್ರು ... ಆ ಹೆಣ್ಣು ಮಗಳು 'ಅವ್ನ ಆ ಕಡೆ ಕೂತ್ಕೊಳೋಕೆ ಹೇಳು ಅಣ್ಣ, ನೀ ಈ ಕಡೆ ಬಾ, ಅಂತ 'ಅಣ್ಣ ' ಅಂತ ಅನಿಸಿಕೊಳ್ತಾ ಇದ್ದ ವ್ಯಕ್ತಿಗೆ ಹೇಳ್ತಾ ಇದ್ದದ್ದು ಕೇಳಿಸ್ತು. ಅಣ್ಣನ ನಡವಳಿಕೆ 'ಅಣ್ಣನ' ತರ ಇರ್ಲಿಲ್ಲ ... ಹುಣಸೂರಿಗೆ ಬರೋ ಅಷ್ಟ್ರಲ್ಲಿ ಆಕೆ ಮತ್ತೊಂದೆರಡು ಕರೆಗಳನ್ನ ಮಾಡಿದ್ಳು. ಹುಣಸೂರಲ್ಲಿ ಆ ಅಣ್ಣ ಒಂದಷ್ಟು ದುಡ್ಡು ಕೊಟ್ಟು ಗಂಡನಿಗೆ ಹಾರ ತರೋಕೆ ಹೇಳ್ದ. ಇಳಿದು ಹೋದ ಆ ಮನುಷ್ಯ ಬರಲು ಸಮಯ ತೆಗೆದುಕೊಂಡಾಗ ಡ್ರೈವರ್ ಹಾಗು ನಿರ್ವಾಹಕ ಕೂಡ ರೇಗಿಯೇ ಬಿಟ್ರು 'ಬಸ್ ಹತ್ತಿದಾಗಿನಿಂದ ಬರಿ ಇದೇ ಆಯ್ತು ಹದವಾಗಿ ಇರೋಕೆ ಬರೋಲ್ವಾ'.....
ಬಸ್ ಹತ್ತಿದಾಗ ಇದ್ದ 'ಪಾಪ ಯಾರೋ ಸಂಕಟ ಪಡುತ್ತಾ ಇದ್ದಾರೆ' ಅನ್ನೋ ಅನುಕಂಪ ಇಳಿಯೋ ಹೊತ್ತಿಗೆ ರೇಜಿಗೆ ಅನಿಸಿಬಿಟ್ಟಿತ್ತು .. ಯಾಕೋ ಇಳಿವಾಗ ಕೂಡ ಅವರ ಮುಖ ನೋಡಬೇಕು ಅನಿಸಲಿಲ್ಲ .. ಆ ಮಗುವಿನ ಮುಖ ನೋಡಿದೆ.. ಪುಟ್ಟ ಮುದ್ದು ಹೆಣ್ಣು ಕೂಸು .... ಎಲ್ಲೋ ಮನಸ್ಸು 'ದೇವರೇ' ಅಂತ ಚೀರಿತು ...
ಮಗ ಕಾರ್ ನಿಲ್ಲಿಸ್ಕೊಂಡು ಕಾಯ್ತಾ ಇದ್ದ. ಮುಖ ನೋಡಿ 'ಸುಸ್ತಾಯ್ತಾ ಮಾ' ಅಂದ .. ಭದ್ರವಾಗಿ ಅವ್ನ ಭುಜ ಹಿಡಿದು 'ಇಲ್ಲ ಮಗ' ಅಂದೆ...
ಅಸಹಾಯಕತೆಯೋ, ಅನಕ್ಷರತೆಯೋ, ಅಗತ್ಯವೋ ..... ಗೊತ್ತಿಲ್ಲ . ಆದರೆ ವಾಸ್ತವ ಮಾತ್ರ ಕಠಿಣ

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...