Saturday 30 July 2016

ಏನ ಹೇಳಲಿ ಈ ಅನುಬಂಧದ ಬಗೆ...
ಪ್ರೀತಿ- ಕಲಹ,
ನಗು -ಅಳು
ಜೀವ-ಭಾವ,
ಸುಖ- ದುಖ
ಹಂಚಿಕೊಂಡೆವು ನಮ್ಮೊಳಗೇ...
ನೀ ಅತ್ತಾಗ ನನ್ನ ಕಣ್ಣಲಿ ಕಂಬನಿ
ನಾ ನಕ್ಕಾಗ ನಿನ್ನ ತುಟಿಯಲ್ಲಿ ನಗೆಯ ಇಬ್ಬನಿ..
ಬರಿ ಪ್ರೀತಿ ಮಾತ್ರವೇ ಇರಲಿಲ್ಲ ನಮ್ಮಲಿ..
ನೀ ಹೊಡೆದ ಪೆಟ್ಟಿನ ಗುರುತು ಇದೆ ಇನ್ನೂ ನನ್ನ ಹಣೆಯಲ್ಲಿ...
ನಾ ನನ್ನ ಕನಸ ಹಂಚಿಕೊಂಡೆ ನಿನ್ನೊಡನೆ...
ನೀ ನಿನ್ನ ಗುಟ್ಟ ಬಿಟ್ಟು ಕೊಟ್ಟೆ ನನ್ನೊಡನೆ...
ದಿನಗಳೆದಂತೆ,
ನಮ್ಮ ನಡುವೆ ಹೊಸ ಬಂಧ, ಬಂಧುಗಳು ..
ನನ್ನ ನಾ ಕೇಳಿಕೊಂಡೆ
ಎಲ್ಲಿ ಹೋದವು ಆ ದಿನಗಳು...
ಎಷ್ಟು ದೂರ ಇದ್ದರೇನು....
ಎಷ್ಟು ದಿನಗಳಾದರೇನು
ಮರೆಯಲಾದೀತೇ ಆ ಮಧುರ ನೆನಪುಗಳನ್ನು
ತೊರೆಯಲಾದೀತೇ ನಮ್ಮ ಬಂಧವನ್ನು
ಬೇಡಿ, ಹುಡುಕಿ ಪಡೆದ ಗೆಳೆತನವಲ್ಲ ಇದು...
ತೊಟ್ಟಿಲಿನಿಂದ ಗೋರಿಯವರೆಗೆ...
ತಾಯ ಗರ್ಭದಿಂದ ಭೂತಾಯಿಯ ಗರ್ಭದವರೆಗೆ...
ಬೇಡದೆಯೇ , ಹುಡುಕದೆಯೇ ಒಲಿದು ಬಂದ
ಒಡಹುಟ್ಟುವಿಕೆ...
ಏನ ಹೇಳಲಿ ಈ ಅನುಬಂಧದ ಬಗೆ...
ನ್ನ ಫ್ರೆಂಡ್ ಇದ್ದಾರೆ..ಡಾ. ಕಿಶೋರ್ ಅಂತ, ಮಾಲ್ಡಿವ್ಸ್ ನವರು...ಒಂದು ಸಣ್ಣ ಕಥೆ ಕಳಿಸಿದ್ದರು....ಅದರ ಅನುವಾದ...
ವರುಷಗಳ ಹಿಂದೆ ಮಾಲ್ಡಿವ್ಸ್ ದ್ವೀಪ ಚೆಂದದ ಗಿಡಮರಗಳಿಂದ ತುಂಬಿ ನಳನಳಿಸುತ್ತ ಇತ್ತು...
ಸುಂದರ ದ್ವೀಪಕ್ಕೆ ಆಗಾಗ ಕಿನ್ನರಿಯರು, ಗಂಧರ್ವರು ಬಂದು ಹೋಗುತ್ತಾ ಇದ್ದರು...
ಸುಂದರ ಕಡಲ ಕಿನಾರೆಗೆ ಪ್ರತಿ ಹುಣ್ಣಿಮೆಯ ರಾತ್ರಿ ಕಿನ್ನರಿಯೋಬ್ಬಳು ಬಂದು ಸಮಯ ಕಳೆದು ಹೋಗುತ್ತಾ ಇದ್ದಳು...
ಪಕ್ಕದ ರಾಜ್ಯದ ರಾಜ್ಕುಮಾರನೋಬ್ಬನ ಹಡಗು ಅಲೆಗಳ ಹೊಡೆತಕ್ಕೆ ಸಿಕ್ಕಿ ಮುಳುಗಿ ಹೋಯಿತು..ರಾಜಕುಮಾರ ಸಾಗರ ಕಿನಾರೆಗೆ ಬಂದು ಬಿದ್ದ....
ಅಂದು ರಾತ್ರಿ ಅಲ್ಲಿಗೆ ಬಂದ ಕಿನ್ನರಿ ರಾಜಕುಮಾರನ ನೋಡಿದಳು...ಆತನೂ ಅವಳ ನೋಡಿದ ...ಇಬ್ಬರು ಪ್ರೀತಿಯ ಬಲೆಯಲ್ಲಿ ಬಿದ್ದರು ..ಬೆಳದಿಂಗಳು ಅವರ ಪ್ರೀತಿಗೆ ಸಾಕ್ಷಿಯಾಯಿತು......
ಬೆಳಗಿನ ರವಿ ಕಿರಣ ಅವನ ಕಣ್ಣ ತೆರೆಸುವ ಹೊತ್ತಿಗೆ ಕಿನ್ನರಿ ಮಾಯವಾಗಿದ್ದಳು...ರಾಜಕುವರ ಅವಳಿಗಾಗಿ ಹುಡುಕಿದ ..ಆಕೆ ಸಿಗಲೇ ಇಲ್ಲ......ಮನದ ತುಂಬಾ ಭರವಸೆಯ ಹೊತ್ತ ಅವನು ಅಲ್ಲೇ ಸಿಗುವ ಹಣ್ಣು ಹಂಪಲು ತಿಂದು ಬದುಕ ಸಾಗಿಸಿದ್ದ....
ಅಂದು ಹುಣ್ಣಿಮೆ....ರಾತ್ರಿಯಾಗುತ್ತಿದಂತೆ ಕಿನ್ನರಿ ಸಾಗರ ಗರ್ಭದಿಂದ ಬಂದಳು..ರಾಜಕುವರನ ಸಂಭ್ರಮಕ್ಕೆ ಮಿತಿಯೇ ಇರಲಿಲ್ಲ....ಕಿನ್ನರಿ ಕೂಡ ಅರ್ಪಣಾ ಭಾವದಿಂದಲೇ ಬಂದಿದ್ದಳು.....ಮತ್ತೊಂದು ಹುಣ್ಣಿಮೆಯ ಸುಂದರ ರಾತ್ರಿ....ಬೆಳದಿಂಗಳ ಸಾಕ್ಷಿ............ಬೆಳಕಿನ ಕಣ್ಣು ತೆರೆವ ಹೊತ್ತಿಗೆ ಕಿನ್ನರಿ ಹೋಗೆ ಬಿಟ್ಟಿದ್ದಳು.....
ಹಗಲು ರಾತ್ರಿ....ಮತ್ತೊಂದು ಹುಣ್ಣಿಮೆ....ಅದೇ ಬೆಳದಿಂಗಳು ..ಅದೇ ಅಲೆಗಳು ....ಅದೇ ಪ್ರೀತಿ...!!!!ಸುಂದರ ದಿನಗಳು....
ಒಂದು ದಿನ ರಾಜಕುಮಾರನ ಹುಡುಕ್ಕುತ್ತ ಬಂದ ಹಡಗು ಅವನ ಹಿಂಜರಿಕೆಯ ವಿರೋಧದ ನಡುವೆಯೂ ಅವನನ್ನ ಅವನ ರಾಜ್ಯಕ್ಕೆ ಕರೆದೊಯ್ದಿತ್ತು....
ಹುಣ್ಣಿಮೆಯ ರಾತ್ರಿ ಇನಿಯನ ಅರಸುತ್ತಾ ಬಂದ ಕಿನ್ನರಿಗೆ ಬರಿದಾದ ಕಡಲ ಕಿನಾರೆ ದಂಗುಬಡಿಸಿತ್ತು...ಅವನಿಗಾಗಿ ಹುಡುಕಿಯೇ ಹುಡುಕಿದಳು....ಬದುಕೇ ಬರಿದ್ದಾಯ್ತೆ ????
ಬೆಳಕು ಮೂಡುವ ವೇಳೆಗೆ ಹೊರಡುವ ಸಮಯ ಸನಿಹವಾದಂತೆ ಕಣ್ಣಿಂದ ಒಂದು ಪುಟ್ಟ ಹನಿ ಜಾರಿ ಬಿತ್ತು...ಬೀಳುವ ಮೊದಲೇ ರವಿಯ ಕಿರಣ ಸೋಕಿ ಸುಂದರ ಸುಮವಾಯ್ತು...ಆ ಹೂವು ಅವನಿಗಾಗಿ ಹುಡುಕುವಂತೆ ಹಗಲಿರುಳು ಕಾಯ್ದು ಬಾಡುತ್ತಿತ್ತು....
ಮತ್ತೊಂದು ಹುಣ್ಣಿಮೆ...ಮತ್ತೆ ಕಿನ್ನರಿಯ ಹುಡುಕಾಟ....ಅವಳ ಕಣ್ಣ ಹನಿ ....ಇನ್ನೊಂದು ಸುಮಾ....
ಮತ್ತೊಂದು ಹುಣ್ಣಿಮೆ...............ಇನ್ನೊಂದು ಸುಂದರ ಹೂ..
ನಲ್ಲನ ಹುಡುಕುತ್ತಾ ಕಿನ್ನರಿ ಇಂದಿಗೂ ಕಡಲ ತದಿಗೆ ಬರುತ್ತಾಳೆ.....ಪ್ರೀತಿಯ ಅರ್ಥ ತಿಳಿಸಿದ ಅವನಿಗಾಗಿ ಕಣ್ಣ ಹನಿ ಮಿಡಿಯುತ್ತಾಳೆ...ಸುಂದರ ಹೂವೊಂದು ಅರಳುತ್ತದೆ ....
ಇದು ಇಂದಿಗೂ ನಡೆದೇ ಇದೆ....
ಇಬ್ಬರನ್ನೂ ನೋಡದ ಜನ ಆ ಪ್ರೀತಿಯ ಹೂವ ನೋಡುತ್ತಾರೆ....ಸೌಂದರ್ಯವ ಸವಿಯುತ್ತಾರೆ....ಹೆಪ್ಪುಗಟ್ಟಿದ ಪ್ರೀತಿಯ ದನಿ ಕೇಳಿದಂತೆ ಮನವರಳಿಸುತ್ತಾರೆ ......
"ಪ್ಹಾಲುಮ....ಸುಂದರ ಒಂಟಿ ಹೂವು" ಆ ಹೂವಿನ ಹೆಸರು ......:))))ಫಾಲುಮಾ......ಕಣ್ಣ ಹನಿಯ ಹೂವು ..:))
ಅದೊಂದು ಸಂಸಾರ...ಅಪ್ಪಅಮ್ಮ, ಮಗ ಸೊಸೆ, ಮೊಮ್ಮಗ..ಎಲ್ಲವೂ ಚೆಂದ ಅನ್ನೋ ಹಾಗೆ ಬದುಕು ನಡಿತಾ ಇತ್ತು....
ಇದ್ದಕ್ಕಿದ್ದ ಹಾಗೆ ಒಂದು ದಿನ ಮಗ ಖಾಯಿಲೆ ಬಿದ್ದ...ಸ್ವಲ್ಪ ಕಾಲ ಬಹಳ ಹಿಂಸೆ ಅನುಭವಿಸಿದ...ಕಡೆಗೆ ಒಮ್ಮೆ ಸತ್ತೂ ಹೋದ...
ಕುಟುಂಬಕ್ಕೆ ದಿಕ್ಕೇ ತೋಚದಂತೆ ಆಯಿತು ..ಎಲ್ಲಾ ಗೋಳಾಡುತ್ತಾ ಕುಳಿತರು..
ಅಪ್ಪ ಹೇಳಿದ.."ನಿನ್ನ ಬದಲು ವಯಸ್ಸಾದ ನಾನೇ ಹೋಗಬಾರದಿತ್ತೇ."ಅಮ್ಮ ಕೂಡ ಹಾಗೆ ಅತ್ತಳು...ಹೆಂಡತಿ ಮಗ ಕೂಡ ತುಂಬಾನೇ ಸಂಕಟಪಟ್ಟರು..
ಆ ಹಾದಿಯಲ್ಲಿ ಒಬ್ಬ ಸಾಧು ಬಂದ ...ಈ ಗದ್ದಲ ಕೇಳಿ ಬಂದು ಸಂತೈಸಿದ ..ಹುಟ್ಟು ಸಾವಿನ ಬಗ್ಗೆ ಲೆಕ್ಕ ಹೇಳಿದ....ಅವರ ಸಂಕಟ ಕಮ್ಮಿಯಾಗದಿದ್ದಾಗ, ಒಂದು ಬಟ್ಟಲು ನೀರು ತೆಗೆದುಕೊಂಡ...ಹೇಳಿದ.."ನಿಮ್ಮಲ್ಲಿ ಯಾರಾದ್ರೂ ಈ ನೀರು ಕುಡಿದರೆ ನಾ ಅವನ ಬದುಕಿಸಬಲ್ಲೆ...ಆದರೆ ನೀರು ಕುಡಿದವರು ಸಾಯುತ್ತಾರೆ ".
ಎಲ್ಲಾ ಮುಖ ಮುಖ ನೋಡಿಕೊಂಡರು...ಅಳು ನಿಂತಂತೆ ಕಂಡಿತು...
ಸಾಧು ಅಪ್ಪನ ಮುಖ ನೋಡಿದ..ಅಪ್ಪ ಹೇಳಿದ.."ಅಯ್ಯೋ ನಾನು ಸತ್ತೂ ಹೋದರೆ ವಯಸ್ಸಾದ ನನ್ನ ಹೆಂಡತಿಯ ಯಾರು ನೋಡಿಕೊಳ್ತಾರೆ"....
ಸಾಧು ಅಮ್ಮನ ಕಡೆ ನೋಡಿದ.."ನನ್ನ ಮಗಳು ಮುಂದಿನ ತಿಂಗಳು ಬಾಣಂತನಕ್ಕೆ ಬರುವವಳಿದ್ದಾಳೆ..ಅವಳಿಗೆ ..ನನ್ನ ಗಂಡನಿಗೆ ದಿಕ್ಕು ಯಾರು" ಅಂದ್ಲು...
ಸಾಧು ಈಗ ಸೊಸೆ ಕಡೆ ನೋಡಿದ.."ಅವನಿಲ್ಲದೆ ಬದುಕು ನನಗೆ ಕಷ್ಟಾನೆ..ಆದ್ರೆ ನಾನು ಸತ್ತೂ ಹೋದರೆ ನನ್ನ ಮಗನ ಕಥೆ ????" ಅಂದ್ಲು....ಇನ್ನು ಪುಟ್ಟ ಮೊಮ್ಮಗನ ಕಡೆ ಸಾಧು ತಿರುಗುವ ಮುನ್ನ ಸೊಸೆ ಹುಡುಗನ್ನ ಬಾಚಿ ತಬ್ಬಿಕೊಂಡಳು ಎಲ್ಲಿ ಸಾಧು ಅವನನ್ನ ಕಿತ್ತು ಕೊಳ್ತಾನೋ ಎಂಬಂತೆ...
ಈಗ ನಕ್ಕ ಸಾಧು, ಹೇಳಿದ..."ಸಾವು ಅನ್ನೋದು ಹಾಗೆ...ನಮ್ಮ ಕಾಲ ಮುಗಿದ ಮೇಲೆ ನಾನು ಹೋಗಲೇ ಬೇಕು...ಮುಂದಿನ ಕೆಲಸ ಮಾಡಿ"ಅಂದ .....
ಕ್ಷಣಗಳಲ್ಲಿ ದಾರಿಯ ತಿರುವಿನಲ್ಲಿ ಕಾಣದಂತೆ ಹೊರಟು ಹೋದ...
"ಆಗಮನ...ನಿರ್ಗಮನ...ಎರಡು ಕಾಣದ ಕೈಗಳಲ್ಲಿ ಇವೆಯಂತೆ...ಅವನಿಗೆ ಇಷ್ಟ ಆದಾಗ ಹೂ ಅರಳಿಸುವನಂತೆ...ಅವನಿಗೆ ಇಷ್ಟ ಆದಾಗ ಹೂವು ಎಷ್ಟೇ ಸುಂದರವಾಗಿದ್ದರು ಕಿತ್ತು ಕರೆದೊಯ್ವನಂತೆ.......
Love Lasts As Long As Life Exists
The Rest Is Only Memories Of Happy Times..!!!!!
ನೆನ್ನೆ ಬೇಸರಗೊಂಡಿದ್ದ ನನಗೆ ನನ್ನ ಅತಿ ಆತ್ಮೀಯ ಹಿರಿಯ ಮಿತ್ರರೊಬ್ಬರ Mail kathe....ಅವರಿಗೆ ನನ್ನ ಮನದಾಳದ ನಮನ...:))))


ಕಾಯದ ಹೊರತು ಹಾಲು ಕೆನೆಗಟ್ಟದಲ್ಲ..
ಬೇಯಿಸದ ಹೊರತು ಮಡಕೆ ಕಳೆಗಟ್ಟದಲ್ಲ ..
ಕಾಯದ ಹಾಲಿಗೂ ಬೇಯದ ಮಡಿಕೆಗೂ ಬಾಳುವ ಬಲವೇ ಇಲ್ಲ..…
ಕ್ರಮಿಸದ ಹೊರತು ಪಯಣ ಮುಗಿಯದಲ್ಲ ..
ಶ್ರಮಿಸದ ಹೊರತು ಬದುಕು ಬನವಾಗದಲ್ಲ …
ಕ್ರಮಿಸದ ಹಾಡಿಗೂ , ಶ್ರಮಿಸದ ಬದುಕಿಗೂ ಗುರಿ ಗುಡಿ ಇಲ್ಲವಲ್ಲ ...:)))
ಹಾಗೆ ಸುಮ್ಮನೆ...:))))
ಓದೋದು ......ಕಥೆ ಪುಸ್ತಕ ಅಂದ ಕೊಡಲೇ ನೆನಪಾಗೋದು...ಪಾಠದ ಪುಸ್ತಕದ ಮಧ್ಯೆ ಇಟ್ಟು ಕದ್ದು ಓದುತ್ತ ಇದ್ದ ಪುಸ್ತಕಗಳು....ಸುಮಾರು ೬-೭ನೆ ತರಗತಿಯಲ್ಲಿ ಶುರುವಾದ ಓದುವ ಹುಚ್ಚು ಇನ್ನು ಬಿಟ್ಟಿಲ್ಲ....ಇಂತದೆ ಅಂತ ಏನು ಅಲ್ಲದೆ ಇದ್ರೂ....ಸಿಕ್ಕಿದ ಎಲ್ಲ ಓದುವ ಹಂಬಲ....ಏನೂ ಇಲ್ಲದೆ ಇದ್ರೆ ಮಗಮಗಳ ಇಂಗ್ಲಿಷ್, ಕನ್ನಡ , ಹಿಂದಿ ಸಂಸ್ಕೃತ ಪಾಠದ ಪುಸ್ತಕಗಳನ್ನಾದರು ತಿರುಗಿಸುವ ಹುಚ್ಚು...ಅಮ್ಮನಿಗೆ ಏನಿಲ್ಲ ಅಂದ್ರು ಕಡೆಗೆ ಕಡಲೆಕಾಯಿ ಕಟ್ಟಿ ಕೊಟ್ಟ ಪೇಪರ್ ಆದರು ಆದೀತು ಅಂತ ನಗ್ತಾರೆ ನನ್ನ ಮಕ್ಕಳು...ಮಂಜು ಟಿವಿ ನೋಡೋವಾಗ ನಾನು ಬಳಿಯಲ್ಲೇ ಕುಳಿತು ಏನಾದ್ರೂ ಓದುತ್ತ ಇರ್ತೀನಿ....ಕರೆಂಟ್ ಹೋದಾಗ whistle ಹೊಡಿತೀನಿ...ನೋಡಪ್ಪ ನಿನ್ನ ಫ್ರೆಂಡ್ (ಟಿವಿ) ಕೈ ಕೊಟ್ಟ...ನನ್ನ ಗೆಳೆಯ ನೋಡು ಯಾವತ್ತೂ ನನ್ನ ಜೊತೇನೆ ಇರ್ತಾನೆ ಅಂತ ನಗ್ತೀನಿ...ನಿಜ ...ಓದುವಿಕೆ ondu ಹವ್ಯಾಸ ಅಂದ್ರೆ ಹವ್ಯಾಸ... ಹುಚ್ಚು ಅಂದ್ರೆ ಹುಚ್ಚು...ಪುಸ್ತಕಗಳು ನಮ್ಮ ಆತ್ಮೀಯ ಮಿತ್ರರು....ದೇಶ ಸುತ್ತು ಕೋಶ ಓದು ಅಂತಾರೆ....ಹಿರಿಯರು...ಓದುವ ಅಭ್ಯಾಸ ಮಾಡಿಕೊಳ್ಳೋಣ....ಓದಿದ ನಂತರವೆ ಮೆಚ್ಚುಗೆ ಕೊಡೋಣ ...ಇಲ್ಲ ಅಂದ್ರೆ ದಯವಿಟ್ಟು ಸುಮ್ಮನೆ ಲೈಕ್ ಹಾಕೋದು ಬೇಡ ...ಅದು ಬರವಣಿಗೆಗೆ ಬರಹಗಾರರಿಗೆ ಅಪಮಾನ ಮಾಡಿದಂತೆ....ವಿಮರ್ಶೆ ಅಂದ್ರೆ ಬರಿ ತಪ್ಪು ಹುಡುಕೋದೇ ಅಲ್ಲ...ಇಲ್ಲ ಬರಿ ಹೊಗೊಳೋದೇ ಅಲ್ಲ...ವಿಮರ್ಶೆ ಇನ್ನೊಬ್ಬರ ಮನ ನೋಯದಂತೆ ಇರಬೇಕು...ರಾಜಕೀಯ...ಜಾತಿ ಮತಗಳ ಹೊರತಾದ ಚರ್ಚೆ ಆದರೆ ಗುಂಪು ಸುಂದರವಾಗಿ ಇರಬಲ್ಲುದು....ಓದುಗ ಯಾವತ್ತೂ ದೊರೆನೇ...ಅವನಿಗೆ ಅವನ ಇಷ್ಟದ ಸಾಹಿತ್ಯ ಓದುವ ಸ್ವಾತಂತ್ಯ ಇದೆ....ಚರ್ಚಿಸುವ ಹಕ್ಕಿದೆ .....ಅಂತಹ ಹವ್ಯಾಸ ಬೆಳೆಸಿಕೊಳ್ಳೋಣ.....

Wednesday 13 July 2016

ಬೆಳಿಗ್ಗೆ ಬೆಳಿಗ್ಗೆ ಕಸದ ಗಾಡಿಯವನು ಬಂದಿದ್ದ. ದಿನ ಬಿಟ್ಟು ದಿನ ಬರುವ ಅವನ ಆಟೋ ಅದೆಷ್ಟು ತುಂಬಿ ಹೋಗಿರುತ್ತದೆ ಅಂದ್ರೆ, ಅರ್ಧ ಕಸ ದಾರಿಯಲ್ಲೇ ಚೆಲ್ಲಿ ಹೋಗೊ ಅಷ್ಟು .... ನಾವು ಸಣ್ಣವರಿದ್ದಾಗ ಕಸ ಒಂದು ಸಮಸ್ಯೆನೇ ಆಗಿರಲಿಲ್ಲ . ಹಾಲು ಹಾಕೋಕೆ ಬರ್ತಾ ಇದ್ದ ರಂಗಪ್ಪ ಒಂದು ಬಕೆಟ್ ಇಟ್ಟಿದ್ದ.. ನಮ್ಮ ಹಾಗೆ ಅವನು ಹಾಲು ಹಾಕೋ ಒಂದಷ್ಟು ಮನೆಯವರೆಲ್ಲ ಆ ಬಕೆಟ್ಗೆ ತರಕಾರಿ ಸಿಪ್ಪೆ, ಅಕ್ಕಿ ತೊಳೆದ ನೀರು, ಅಡುಗೆ ಮನೆಯ ತ್ಯಾಜ್ಯ ಎಲ್ಲಾ ಹಾಕ್ತಾ ಇದ್ರು .. ಅವನು ಹಾಲು ಕರೆಯೋ ಅಷ್ಟರಲ್ಲಿ ಹಸು ನೆಮ್ಮದಿಯಾಗಿ ಅದೆಲ್ಲ ಕುಡಿದು ನಿಂತಿರ್ತಾ ಇತ್ತು.. ಹರಿದ ಪೇಪರ್ ಇತ್ಯಾದಿ ಕಸ ಒಲೆ ಸೇರ್ತಾ ಇತ್ತು...ಇನ್ನ ಒಲೆಯ ಬೂದಿ ಗಿಡದ ಮೇಲೆ ಎರಚಿದರೆ ಹುಳ ಬರೋದಿಲ್ಲ ಅಂತ ಮತ್ತೆ ಪಾತ್ರೆ ತೊಳೆಯೋದಕ್ಕೆ ಉಪಯೋಗಿಸ್ತಾ ಇದ್ರು . ಮನೆಯ ಸಾಮಾನು ತರೋಕೆ ಒಂದು ಚೀಲ ಇರ್ತಾ ಇತ್ತು , ಪೇಪರ್ ಕವರ್ ಅಲ್ಲಿ ಕಟ್ಟಿಕೊಡ್ತಾ ಇದ್ದ. ಬಟ್ಟೆ ಅಂಗಡಿಯಲ್ಲಿ ಕೂಡ ಒಂದು ಖಾಕಿ ಬಣ್ಣದ ಕವರ್ಗೆ ಬಟ್ಟೆ ಹಾಕ್ತಾ ಇದ್ರು . ಅದನ್ನ ಬಹಳಷ್ಟು ಸಾರಿ ಪುಸ್ತಕಕ್ಕೆ wrapper ಹಾಕಿದ್ದೂ ಇದೆ. ನಾವು ಬೇರೆ ಊರಿಗೆ ಬಂದ ಮೇಲೆ ಅಲ್ಲಿ ಹಸುವಿನ ಹಾಲಿನ ಬದಲು ಡೈರಿ ಹಾಲು ತರುವುದಕ್ಕೆ ಶುರು ಮಾಡಿದಾಗ ಅಮ್ಮ ತರಕಾರಿ ತ್ಯಾಜ್ಯನ ಗಿಡಗಳಿಗೆ ಹಾಕ್ತ ಇದ್ಲು.. ಉಳಿದ (ಉಳಿ(ಸಿ)ದರೆ!!!) ಅನ್ನ ಇತ್ಯಾದಿ ಬಾಗಿಲ ಬಳಿಯ ಕಲ್ಲ ಮೇಲೆ ಹಾಕಿದ್ರೆ ರಸ್ತೆಯ ನಾಯಿ ಬಂದು ತಿನ್ಕೊಂಡ್ ಹೋಗ್ತಾ ಇತ್ತು .. ಈಗ ಅಡುಗೆ ಮನೆಯ ವೇಸ್ಟೇ ಎಷ್ಟು ಅಂದ್ರೆ ಹಾಕೋದಕ್ಕೆ ಗಿಡಗಳೇ ಇಲ್ಲ .. ಇರೋ ಒಂದೆರಡು ಕುಂಡಗಳಿಗೆ ಅಷ್ಟೆಲ್ಲ ಹಿಡಿಯೋ ಜಾಗ ಇಲ್ಲ .. ಇನ್ನ ಮನೆಮನೆಯಲ್ಲೂ ಒಂದೊಂದು ನಾಯಿ ಬೊಗಳೋದಕ್ಕೆ ಬೀದಿಯಲ್ಲಿ ನಾಯಿಗಳೇ ಬರೋದಿಲ್ಲ ಉಳಿದದ್ದು ಹಾಕೋದಕ್ಕೆ !! ಪೇಪರ್ ತರದ ಕಸ ಹಾಕೋದಕ್ಕೆ ಒಲೆನೇ ಇಲ್ಲಾ !! ಇನ್ನ ಮನೆ ಸಾಮಾನು ತಂದ ಆ ಪ್ಲಾಸ್ಟಿಕ್ ಕವರ್ ಈ ಕಸ ಹಾಕೋಕೆ ಉಪಯೋಗಿಸ್ತಾರೆ..ಪುಟ್ಟಿ ಡ್ರಾಪ್ ಮಾಡೋಕೆ ಹೋದಾಗ ದಾರಿಯಲ್ಲಿ ಹಸು ಕಸದ ಜೊತೆ ಪ್ಲಾಸ್ಟಿಕ್ ಕೂಡ ತಿಂತಾ ಇತ್ತು .. !!! ಹಾಗಾದರೆ civilization ಅನ್ನೋ ನೆಪದಲ್ಲಿ ನಮ್ಮನ್ನ ನಾವು ಎತ್ತ ಕೊಂಡೊಯ್ಯುತ್ತಾ ಇದ್ದೇವೆ !!?? Feeling ಒಂದಷ್ಟು ದಿನಗಳಾದ ಮೇಲೆ ಮನುಷ್ಯರಿಗಿಂತ ಸಮಸ್ಯೆಗಳೇ ಹೆಚ್ಚಾಗಿ ಬಿಡುತ್ತದೆಯೇ ?!

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...