Wednesday 19 April 2017

ಹೀಗೊಬ್ಬ ಅವಳು :))))  ( ವಿಶ್ವ ವಾಣಿಗೆ ಬರೆದದ್ದು )
ಭೂಮಿ ತೂಕದವಳು ನನ್ನ ಸೊಸೆ..ಮೊದಲಿನ ಹಾಗಿಲ್ಲ ಅಂತ ಅತ್ತೆ ಹೇಳುವಾಗೆಲ್ಲ ನಕ್ಕು ಬಿಡುತ್ತಾಳೆ ಆಕೆ .
ಆಕೆಯೇನು ಅತ್ತೆ ಇಷ್ಟ ಪಟ್ಟು ಮಗನಿಗೆ ತಂದುಕೊಂಡ ವಧುವಲ್ಲ   ಪ್ರೀತಿ ಮಾಡಿ ಹಠಕ್ಕೆಬಿದ್ದು ಮದುವೆಯಾದವಳು . ಆಕೆಯ ಹೆತ್ತವರಿಗೂ ಈ ಮದುವೆ ಇಷ್ಟವಿರಲಿಲ್ಲ.. ಮಗಳ ಓದುವಿಕೆಗೆ ರೂಪಕ್ಕೆ ಇನ್ನಷ್ಟು ಒಳ್ಳೆಯ ಗಂಡ ಸಿಗುವನೆಂಬ ಆಸೆ.  ಮಗ ಮತ್ತ್ಯಾರನ್ನಾದ್ರು ಮದುವೆಯಾಗಿದ್ರೆ ಒಂದಷ್ಟು ವರದಕ್ಷಿಣೆ ಬರ್ತಾ ಇತ್ತೇನೋ ಅನ್ನೋ ಸಿಟ್ಟೆನೋ ! ಸೊಸೆಯನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲೇ ಇಲ್ಲ.  ಸೊಸೆ ಒಂದು ಅವಘಢಕ್ಕೆ ಸಿಲುಕಿದಾಗ ಆಕೆಯ ಸಿಟ್ಟಿಗೆ  ಇನ್ನಷ್ಟು  ತುಪ್ಪ ಸುರಿದಂತ್ತಾಯ್ತು. 'ಹಾಳಾದೋಳ ಮುಖ ಕೂಡ ಹಾಳಾಗಬೇಕಿತ್ತು ' ಅನ್ನೋ ಮಾತು ಕೇಳಿದಾಗ ಮನದ ಕಡೆಯ ತಂತುವಿನಲ್ಲೂ ನೋವು. ಹೆತ್ತವರ, ಅಣ್ಣತಮ್ಮಂದಿರ ಹರಕೆ, ಆರೈಕೆ, ಹಾರೈಕೆಗಳ ಫಲವಾಗಿ ಸಾವನ್ನ ಗೆದ್ದು ಉಳಿದೆ ಬಿಟ್ಟಳು. ಒಂದಷ್ಟು  ದಿನಗಳ ನಂತರ  ಗಂಡ ಆಕೆಯ ತವರಿನಿಂದ ಕರೆದೊಯ್ಯಲು ಬಂದಾಗ ಹೆತ್ತವರ ವಿರೋಧದ ನಡುವೆಯೂ ಹೊರಟು  ನಿಂತಳು . ಬದಲಾಗಿರಬಹುದೇನೋ ಅತ್ತೆ ಎಂದುಕೊಂಡಳು. ಅತ್ತೆಗೆ ಅದೇ ಸಿಟ್ಟು. ಮತ್ತೆ ಕರೆ ತಂದ ಮಗನ ಮೇಲೂ ಕೋಪ. ಈಗ ಆ ಕೋಪ ಮಕ್ಕಳಾಗಿಲ್ಲ ಅನ್ನುವ ರೂಪ ಪಡೆದುಕೊಂಡಿತ್ತು . 'ಇವ್ಳಿಗೆ ಮಕ್ಕಳಾಗೋದಿಲ್ಲ ಗೊಡ್ಡು ಹಸು ತಂದು ಕಟ್ಟಿಕೊಂಡಿದ್ದೀಯ ಕಣೋ' ಅಂತ ಹರಿಹಾಯುವಾಗ ಮಗ ಮೂಗನಾಗಿ ಹೋಗುತ್ತಿದ್ದ . ಮನೆಯ ತೊರೆದರೆ ಆಪಾದನೆ ಹೆಂಡತಿಯ ಮೇಲೆ ಬರುತ್ತದೆ ಎಂದು ಸಹಿಸಿಕೊಂಡ. ಹೆಂಡತಿಯ ಮೇಲಿನ ಪ್ರೀತಿ ತೋರಿಸಲೂ ಅಂಜುತ್ತಿದ್ದ. ಹೆಂಡತಿ ಬಸುರಿ ಆದಾಗ ಆಕೆಯ  ಬಯಕೆಗಳನ್ನ ತೀರಿಸಲೂ ಹೆದರುತ್ತಿದ್ದ.  ಈಕೆ ಒಂದಷ್ಟು  ತಿರುಗಿ ಮಾತನಾಡಿದರೂ ರೌದ್ರಾವತಾರದ ಅತ್ತೆಯ ಮುಂದೆ ಈಕೆಯದೇನೂ ನಡೆಯಿತ್ತಿರಲಿಲ್ಲ. ಮಗ ಹುಟ್ಟಿದ ಮೇಲೆ ಖರ್ಚಿನ ನೆಪ ಒಡ್ಡಿ ಜಗಳವಾದ ಮೇಲೆ ಮಗ ಬೇರೆಯದೇ ಮನೆ ಮಾಡಿದ . ಮತ್ತೊಬ್ಬ ಮಗಳಾದಳು . ಮಗು ಪುಟ್ಟದಿರುವಾಗಲೇ ಗಂಡನಿಗೆ ಅಪಘಾತವಾದಾಗ ಹೆತ್ತವರ ಸಹಕಾರದಿಂದ ಗಂಡನನ್ನ ಉಳಿಸಿಕೊಂಡಳು. ಅತ್ತೆ ಏನು ಬದಲಾಗಲಿಲ್ಲ . ನೋಡಿದಾಗೆಲ್ಲ ಕುಹಕ.
ಒಂದಷ್ಟು ವರುಷಗಳ ವನವಾಸ, ಅಜ್ಞಾತವಾಸಗಳ ನಂತರ ಈಗೆಲ್ಲ ಬದಲಾಗಿದೆ.  ಗಂಡಹೆಂಡತಿ  ಚೆನ್ನಾಗಿದ್ದಾರೆ . ಬೆಳೆದ ಮಕ್ಕಳು ಅವರ ಆಸೆಯಂತೆ ಒಳ್ಳೆಯ ಪ್ರಜೆಗಳಾಗುವತ್ತ ಸಾಗಿದ್ದಾರೆ. ವಯಸ್ಸಾದ ಅತ್ತೆ ಆಗಾಗ ಬರುತ್ತಾರೆ . ಉಳಿದ ಗಂಡು ಮಕ್ಕಳ ಮತ್ತು ಹೆಣ್ಣು ಮಕ್ಕಳ ಮನೆಯಲ್ಲಿ ಆಗುವ ನೋವು ಅಪಮಾನಗಳ ಬಗ್ಗೆ ಹೇಳಿಕೊಳ್ಳುತ್ತಾರೆ.. 'ಯಾರಿಗೆ ಹೇಳಲಿ ಮಗ'  ಎನ್ನುವಾಗ ಆಕೆ ಅವರ ಕಣ್ಣೀರಿಗೆ  ಜೊತೆಯಾಗುತ್ತಾಳೆ. ತನ್ನ ಕೈಲಾದದ್ದು ಪ್ರೀತಿಯಿಂದ ಮಾಡಿ ಹಾಕುತ್ತಾಳೆ  ತಮ್ಮಲ್ಲೇ ಉಳಿಯುವಂತೆ ಹೇಳುತ್ತಾಳೆ. 'ತೀರಾ ಆಗದೆ ಹೋದಾಗ ಬರುತ್ತೇನೆ ಬಿಡು ನನಗಿನ್ಯಾರಿದ್ದಾರೆ; ಎನ್ನುತ್ತಾರೆ... ಹೊರಟಾಗ ಕಣ್ಣ ತುಂಬ ನೀರು ತುಂಬಿಕೊಳ್ಳುತ್ತಾರೆ . ಭೂಮಿ ತೂಕದವಳು ನನ್ನ ಸೊಸೆ ಎನ್ನುತ್ತಾರೆ.. ಈಕೆ ನಕ್ಕುಬಿಡುತ್ತಾಳೆ ಸುಮ್ಮನೆ .. ಹಾಗೆ ಸುಮ್ಮನೆ .....
ಅತ್ತೆ ಹೋದ ಮೇಲೆ ಈಕೆ ದೇವರನ್ನ ಕೇಳುತ್ತಾಳೆ 'ದೇವ್ರೇ, ಈಕೆ ಕೈಲಾಗದೆ ಹೋಗಿ ಯಾರಿಗೂ ಹೊರೆಯಾಗದಂತಿರಲಿ, ನೋಯದಂತಿರಲಿ, ಅಭಿಮಾನದಿಂದ(ದುರಭಿಮಾನ!!) ಬದುಕಿದ ಜೀವ ಅದನ್ನ ತಡೆಯಲಾರದು , ' ಎಂದು. ಗಂಡ ಅದ್ ಹೇಗೆ ತಾಳ್ಮೆ ಕಲಿತೆ ಎಂದರೆ ತನ್ನ ಸ್ವಾರ್ಥದ   ಕಾರಣ ಹೇಳುತ್ತಾಳೆ  !! 'ನಾ ನಿಮ್ಮಮ್ಮನನ್ನ ನೋಡಿಕೊಂಡ್ರೆ ದೂರದ್ಲಲಿರುವ  ನನ್ನ ತಾಯಿಯನ್ನ ಮತ್ಯಾರದ್ರು ನೋಡಿಕೊಳ್ಳುತ್ತಾರೆ' ಎನ್ನುತ್ತಾಳೆ.
ಈಕೆ  ಯಾರು ಎಂದೇನೂ ಹುಡುಕ ಹೋಗಬೇಡಿ .... ನಿಮ್ಮ  ಮನೆಯಲ್ಲೊಬ್ಬಳೋ , ಇಲ್ಲ ಅಲ್ಲೇ ಎದುರು ಮನೆಯಲ್ಲೋ, ಪಕ್ಕದ ಮನೆಯಲ್ಲೋ ಇರ್ತಾಳೆ .. ಕ್ಷಮಿಸುತ್ತಲೇ ಹೋಗುತ್ತಾಳೆ , ತನಗಾಗಿ, ತನ್ನವರಿಗಾಗಿ .... ಕೆಲವೊಮ್ಮೆ ನಗುತ್ತಾ ... ಕೆಲವೊಮ್ಮೆ ಅಳುತ್ತಾ .. ಅವನಿಯಂತೆ:))))

Wednesday 5 April 2017

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿಲ್ಲ, ಮಂಜು ತಿಂತಾ ಇದ್ರು. ನಾ ಹಾಗೆ ಕುಳಿತು ಮಗಳಿಗೆ ಕರೆ ಮಾಡ್ತಾ ಇದ್ದೆ. ನಮ್ಮ ಎದುರಿನ ಮೇಜಲ್ಲಿ ಒಂದಷ್ಟು ಜನ ತಿಂಡಿ ತಿಂತಾ ಕೂತಿದ್ರು. ಎಲ್ಲರ ಕೈಲೂ ಮೊಬೈಲು, ನೋಡಲು ಸುಶಿಕ್ಷಿತರ ಹಾಗೆ ಕಾಣ್ತಾ ಇದ್ರು, ಮಂಜು ಚಟ್ನಿ ಹಾಕಿಸ್ಕೊಂಡ್ ಬರ್ತೀನಿ ಇರು ಅಂತ ಎದ್ದುಹೋದ್ರು. ಮಗಳ ಜೊತೆ ಮಾತಾಡ್ತಾ ಇದ್ದೆ. ಎದುರು ಮೇಜಲ್ಲಿ ಕುಳಿತಾಕೆ ಮೇಲೆದ್ದಳು. ಅವಳು ಎದ್ದಳೊ ಇಲ್ವೋ, ಪಕ್ಕ ಕುಳಿತಿದ್ದ ವ್ಯಕ್ತಿ 'ರಪ್' ಎಂದು ಹೊಡೆದೇ ಬಿಟ್ಟ. ಅವನು ಹೊಡೆದ ಏಟಿನ ಸದ್ದು ನನಗೂ ಕೇಳಿಸೋ ಅಷ್ಟಿತ್ತು .ಆಕೆ ಹಾಗೆ ಕುಳಿತಳು. ಒಂದ್ ಕ್ಷಣ ಎದೆ ದಗ್ ಅಂತು, ಆ ವ್ಯಕ್ತಿ ಯಾರಾದ್ರೂ ನೋಡಿದ್ರೆ ಎನ್ನುವಂತೆ ಅತ್ತ ಇತ್ತ ನೋಡಿದ್ದು, ನಾ ಫೋನ್ ಕಟ್ ಮಾಡಿ ಮಂಜು ಹತ್ತಿರ ಎದ್ದು ಹೋಗಿದ್ದು ಎಲ್ಲಾ ಕ್ಷಣಗಳಲ್ಲಿ ನಡೆದು ಹೋಯ್ತು. ಮಂಜು ನನ್ನ ಮುಖ ನೋಡಿ 'ಚಟ್ನಿ ತರೋ ತನ್ಕ ಬಿಟ್ಟಿರೋಕೆ ಆಗಲ್ವ ತಾಯಿ" ಅಂತ ನಗುತ್ತಾ ಮತ್ತೆ ಅಲ್ಲೇ ಬಂದು ಕುಳಿತರು. ನಾ ಪೆಚ್ಚಾಗಿ ಹೋಗಿದ್ದೆ . ಎದುರು ಕುಳಿತ ಆ ವ್ಯಕ್ತಿ, ಆಕೆ ಹಾಗು ಜೊತೆಯಿದ್ದವರೊಂದಿಗೆ 'ದುಡ್ಡು ಕೊಟ್ಟಿಲ್ವಾ , ತಿನ್ನೋಕೆ ಏನ್ ರೋಗ, ಅಷ್ಟ್ ಬಿಟ್ಟು ತಟ್ಟೆಗೆ ಕೈ ತೊಳೀತಾಳೆ, ತಿಮರು ಅದ್ಕೆ ' ಅಂತ ಸಮಜಾಯಿಷಿ ಕೊಡ್ತಾ ಇದ್ದ . ಅವ್ರೆಲ್ಲ ಅದೊಂದು ವಿಷಯವೇ ಅಲ್ಲ ಅನ್ನೋವಂತೆ ತಿನ್ನೋದನ್ನ ಮುಂದುವರಿಸ್ತಾ ಇದ್ರು . ಆಕೆ ಕೂಡ ಏನೂ ಆಗಿಲ್ಲ ಅನ್ನುವಂತೆ ಸುಮ್ನೆ ಕುಳಿತಿದ್ಲು....
ದೇವರ ದರ್ಶನ ಮಾಡಿ ಬಂದು ಒಂದ್ ತರ ಪ್ರಶಾಂತವಾಗಿದ್ದ ಮನಸ್ಸಿನ ತಿಳಿಜಲಕ್ಕೆ ಕಲ್ಲು ಬಿದ್ದಂತೆ ...
ಹೊರಗೆ ಬಂದ ಮೇಲೆ 'ಹಿಂಗ್ ಹಿಂಗೇ ' ಅಂದೇ ಮಂಜುಗೆ . 'ನಡಿ ಇನ್ನೊಂದ್ ಸಾರಿ ದೇವಸ್ಥಾನದ ಒಳಗೆ ಹೋಗಿ ಬರೋಣ . ಇಲ್ಲ ಅಂದ್ರೆ ಮನೆ ಸೇರೋವರೆಗೂ ನೀ ಹಿಂದೆ ಇರ್ತೀಯ ' ಅಂತ ಮತ್ತೊಮ್ಮೆ ಒಳಗೆ ಹೋಗಿ ಒಂದಷ್ಟು ಸಮಯ ಒಳಗಿದ್ದು ಬಂದ್ವಿ. ಮಂಜು ಹೇಳಿದ್ದು 'ಅವಳೇ ತಲೆ ಕೆಡಿಸಿಕೊಂಡಿಲ್ಲ ನೀ ಯಾಕ್ ಹಿಂಗ್ ಬೇಜಾರ್ ಮಾಡ್ಕೊಳ್ತೀಯಾ , ಅವರ್ಯಾರೋ ಏನೋ , ಬಿಟ್ಹಾಕು.. ಬರೀ ಇಷ್ಟ್ ನೋಡಿ ಇಷ್ಟ್ ಸಪ್ಪಗೆ ಆಗೋದ್ರೆ ಅಷ್ಟೇ , ನಿನ್ನ ಒಂದಷ್ಟು ದಿನ ಹೊರಗಿನ ಪ್ರಪಂಚ ನೋಡು ಅಂತ ಕಳಿಸ್ಬೇಕು'
ಅದು ಬೇಸರ ಅಲ್ಲ, ಒಂದ್ ತರ ಭಯ... ಮನುಷ್ಯ ಪ್ರಾಣಿಗಿಂತ ಉತ್ತಮ ಅಂತಾರೆ, ಯೋಚಿಸಬಲ್ಲ ಅಂತಾರೆ, ಸಮಾಜವಾಸಿ, ಸಂಘಜೀವಿ ಅಂತೆಲ್ಲ ಅಂತಾರೆ . ಒಂದಷ್ಟು ಜನರ ನಡುವೆ ಹೇಗೆ ನಡೆದುಕೊಳ್ಳಬೇಕು ಅನ್ನೋದನ್ನ ಅರಿಯದಿದ್ದರೆ , ಒಬ್ಬರು ನನ್ನ ಅಧೀನದಲ್ಲಿದ್ದಾರೆ ಅಂತ ತೋರಿಸಿಕೊಳ್ಳೋಕೆ ತನ್ನ ಶಕ್ತಿ ಬಳಸುತ್ತಾನೆ ಎಂದರೆ, ಒಬ್ಬರನ್ನ ಗೌರವಯುತವಾಗಿ ನಡೆಸಿಕೊಳ್ಳದೆ ಇದ್ದರೆ, ಮನುಷ್ಯ ಮನುಷ್ಯ ಅನಿಸಿಕೊಳ್ಳುವನೇ ? ಇದು ತೀರಾ ಸಣ್ಣ ವಿಷಯ ನಿಜವೇ.. ಆದ್ರೂ ಸಹಜೀವಿಗೆ ಹೊರ ಪ್ರಪಂಚದಲ್ಲೇ ಬೆಲೆ ಕೊಡದ ಮನುಷ್ಯ ಎತ್ತ ಸಾಗುತ್ತಿದ್ದಾನೆ ಅನಿಸೋ ಹಾಗೆ ...
ಕೃಷ್ಣ ನೀ ಬೇಗನೆ ಬಾರೋ ......... ಅನಿಸೋ ಹಾಗೆ ...
ಇದು ಸ್ತ್ರೀ ಶೋಷಣೆ ಪರ ಅಥವ ಪುರುಷ ದ್ವೇಷಕ್ಕೆ ಬರೆದಿದ್ದಲ್ಲ.... ಬರೀ ಮಾನವ ಸಂವೇದನೆಯ(sensitivity) ಬಗ್ಗೆ ತಳೆದ ಬೇಸರ
ಬಹುಶಃ ಹತ್ತನೇ ತರಗತಿಯಲ್ಲೊ ಒಂಬತ್ತರಲ್ಲೋ ನೆನಪಿಲ್ಲ, ರವೀಂದ್ರನಾಥ ಟ್ಯಾಗೂರರ ಕಾಬೂಲಿವಾಲ ಕಥೆ ಓದಿದ್ದು. ಕಥೆನೇ ಓದಿದ್ದೋ ಇಲ್ಲ ಪಾಠ ಇತ್ತೋ ನೆನಪಾಗ್ತಾ ಇಲ್ಲ . ಅಂದಿಗೆ ಮನಸ್ಸನ್ನ ಸೆಳೆದ ಕಥೆ. ಮಾನವೀಯ ನೆಲೆಗಟ್ಟನ್ನ ಸಂಬಂಧಗಳ ಮೌಲ್ಯಗಳನ್ನ ತೋರಿಸೋ ಕಥೆ. (ಇದು ಟ್ಯಾಗೋರರ ಮಗಳು ಮತ್ತು ಕಾಬೂಲಿವಾಲನದೆ ಕಥೆ ಎಂದೂ ಕೂಡ ಓದಿದ ನೆನಪು )
ಒಬ್ಬ ಪರದೇಶದ (ಆಫ್ಘಾನಿಸ್ಥಾನ) ಮನೆಮನೆಗೆ ಒಣ ಹಣ್ಣುಗಳ ಮಾರುವ ವ್ಯಾಪಾರಿ. ಬಂದ ಹಣವನ್ನ ಹೆಂಡತಿ ಮಕ್ಕಳಿಗೆ ಕಳಿಸಿ ಬದುಕ್ತಾ ಇರ್ತಾನೆ. ವರುಷಕ್ಕೆ ಒಮ್ಮೆ ಮಾತ್ರ ಅವನೂರಿಗೆ ಹೋಗುವ ಅವಕಾಶ ಅವನಿಗೆ. ಹೀಗೆ ರಸ್ತೆಯಲ್ಲಿ ಮಾರುವಾಗ ಒಮ್ಮೆ ಒಂದು ಪುಟ್ಟ ಹುಡುಗಿ 'ಕಾಬೂಲಿವಾಲಾ' ಅಂತ ಬಾಗಿಲ ಸಂದಿನಿಂದ ಕರೀತಾಳೆ . ಇವನು ಅವಳ ಮನೆ ಬಳಿ ಹೋದಾಗ ಇವನ ಆಕಾರ ವೇಷಭೂಷಣಕ್ಕೆ ಹೆದರಿ ಬಚ್ಚಿಟ್ಟುಕೊಳ್ಳುತ್ತಾಳೆ, ಕ್ರಮೇಣ ಇಬ್ಬರ ನಡುವೆ ಒಂದು ಅವೀನಾಭಾವ ಗೆಳೆತನ ಬೆಳೆದು ಬಿಡುತ್ತದೆ, ಅಮ್ಮ ಬೈದರೂ ಕೂಡ ಈ ಮಗು ಅವನ ಜೊತೆ ಗೆಳೆತನ ಹಂಚಿಕೊಳ್ಳುತ್ತದೆ. ಇವನೂ ಕೂಡ ಸಾಧ್ಯವಾದಾಗೆಲ್ಲ ಪುಟ್ಟ ಮಗುವನ್ನ ನೋಡಿ, ಮಾತನಾಡಿಸಿ, ಕದ್ದುಮುಚ್ಚಿ ಒಂದಷ್ಟು ಒಣ ಹಣ್ಣುಗಳನ್ನ ನೀಡಿ ಹೋಗ್ತಾ ಇರ್ತಾನೆ.. ಒಮ್ಮೆ ಇವನ ಯಾವುದೋ ತಪ್ಪಿಗೆ ಶಿಕ್ಷೆಯಾಗಿ ಜೈಲು ಪಾಲಾಗಬೇಕಾಗುತ್ತದೆ. ಒಂದಷ್ಟು ವರ್ಷಗಳ ನಂತರ ಬಿಡುಗಡೆಯಾಗಿ ಬಂದಾಗ ಆ ಹುಡುಗಿಯ ಮದುವೆ ಸಿದ್ಧತೆ ನಡೆದಿರುತ್ತದೆ. ಹುಡುಗಿಯ ತಂದೆಗೆ ಇವನು ಬಂದುದ್ದು ಸರಿ ಅನಿಸೋದಿಲ್ಲ. ಆಗ ಇವನು ಅವನ ಬಳಿ ಇದ್ದ ಒಂದು ಪುಟ್ಟ ಕಾಗದದಲ್ಲಿ ಇದ್ದ ಹಸ್ತದ ಗುರುತು ತೋರಿಸ್ತಾನೆ. ತನ್ನ ಮಗಳಂತಹ ಹುಡುಗಿಯನ್ನ ನೋಡಲು ಆಪೇಕ್ಷಿಸುತ್ತಾನೆ. ಕಡೆಗೆ ಆ ಹುಡುಗಿ ಬಂದಾಗ ತನ್ನ ಕಣ್ಣನ್ನೇ ತಾನು ನಂಬಲು ಸಾಧ್ಯವಾಗೋದಿಲ್ಲ. ಪುಟ್ಟ ಯುವತಿಯಾಗಿ ರೂಪುಗೊಂಡ ಆ ಹುಡುಗಿ ಅವನ ಮಗಳನ್ನ ನೆನಪಿಸಿ ಕಣ್ಣು ತುಂಬಿ ಬರುತ್ತದೆ. ಕಡೆಗೆ ಹುಡ್ಗಿಯ ಅಪ್ಪ ಆತನಿಗೆ ಒಂದಷ್ಟು ಹಣ ನೀಡಿ ಅವನ ಮಗಳನ್ನ ನೋಡಲು ಅವನೂರಿಗೆ ವಾಪಸ್ಸು ಹೋಗಲು ಹೇಳುತ್ತಾನೆ. ಕೈ ಮುಗಿದ ಕಾಬೂಲಿವಾಲ ತನ್ನೂರಿಗೆ ಪಯಣಿಸುತ್ತಾನೆ..ಇದು ಕಥೆ
ನಮ್ಮ ಮನೆಯಿಂದ ಒಂದ್ನಾಲ್ಕು ಮನೆಗಳ ಆಚೆ ಒಂದು ಮನೆ. ಅಲ್ಲಿ ಒಂದು ಪುಟ್ಟ ಮಗು, ಬೆಳಿಗ್ಗೆಬೆಳಿಗ್ಗೆ ತಳ್ಳುವಗಾಡಿಯಲ್ಲಿ ತರಕಾರಿ ಮಾರಿಕೊಂಡು ಬರುವಾತನಿಗೂ ಈಕೆಗೂ ಅದೆಂತಹ ಚೆಂದದ ಗೆಳೆತನ ಅಂತೀರಾ !! ಅವನು ಬರುವ ಹೊತ್ತಲ್ಲಿ ಇದು ಗೇಟ್ ಹಿಡಿದು ನಿಂತಿರುತ್ತದೆ . ತನ್ನ ಬಾಲಭಾಷೆಯಲ್ಲಿ 'ಕ್ಯಾರೆಟ್' ಅನ್ನುತ್ತದೆ . ಈತ ಒಂದು ಪುಟ್ಟ ಕ್ಯಾರೆಟ್ನ ತನ್ನಬಟ್ಟೆಗೆ ಒರೆಸಿ ಅದರ ಕೈಗೆ ಕೊಟ್ಟು 'ಬೈ ಚಿನ್ನು' ಅಂತಾನೆ . ಅದು 'ತಾತಾ (ಟಾಟಾ!!) ಮಾಮ ' ಅನ್ನುತ್ತದೆ . ಅವರಮ್ಮ ಒಳಗಿಂದ 'ಲೇ , ಚಿನ್ನು' ಅಂದ ಕೊಡ್ಲೆ ಒಳಗೆ ಸೇರಿಕೊಳ್ಳುತ್ತದೆ! ಅವರಜ್ಜಿ 'ಇದ್ಯಾಕಣ್ಣ ದಿನ ಕೊಟ್ ರೂಢಿ ಮಾಡ್ತೀರಾ' ಅಂದ್ರೆ ತಿನ್ಲಿ ಬುಡವ್ವ ಮೊಗ' ಅಂತಾನೆ. ಆ ಮಗು ಕಾಣದಿದ್ದರೆ ಈತ ಪಕ್ಕದ ನಾಯರ್ ತಾತನನ್ನ ಕೇಳೋದು ಕಾಣಿಸುತ್ತದೆ !! ಭಾನುವಾರ ಬಿಟ್ಟು ಪ್ರತಿ ದಿನ ಹೀಗೆ ಸಾಗುತ್ತದೆ ಅವರಿಬ್ಬರ ಗೆಳೆತನ.....
ಬದುಕು ತುಂಬಾ ಚೆಂದ ಕಣ್ರೀ..............
ಸುಂಸುಮ್ನೆ ಹಂಚಿಕೊಳ್ಳಬೇಕು ಅನಿಸ್ತು :)))))

ಕಥೆ ಅಂದ್ರೆ ರಾತ್ರಿನೇ ಕೇಳಬೇಕು ಅನ್ನೋದೇನು ಇಲ್ಲ ಅಲ್ವ.. ಇಲ್ಲೊಂದು ಸಣ್ಣ ಕಥೆ ಇದೆ ನೋಡಿ. ಕೇಳಿದ ಮೇಲೆ ಎಂದಿನಂತೆ ಹಂಚಿಕೊಳ್ಳಬೇಕು ಅನ್ನಿಸಿತು.....
ಒಮ್ಮೆ ಒಂದು ದೊಡ್ಡ ಆನೆ ನದಿಯಲ್ಲಿ ಆನಂದದಿ೦ದ ಈಜಿ ಸ್ವಚ್ಛವಾಗಿ ಹೊರಗೆ ಬರ್ತಾ ಇತ್ತು. ಹಾಗೆ ರಸ್ತೆಯಲ್ಲಿ ಬರ್ತಾ ಇರೋವಾಗ ಒಂದು ಹಂದಿ ಹೊಲಸಲ್ಲಿ ಹೊರಳಾಡಿ ಎದ್ದು ಬರ್ತಾ ಇತ್ತು. ಆನೆ ಹಂದಿಗೆ ಹಾದಿ ಬಿಟ್ಟು ರಸ್ತೆ ಬದಿಯಿಂದ ಹೋಯ್ತು . ಹಂದಿ ವ್ಯಂಗ್ಯವಾಗಿ ನಕ್ಕು 'ನೋಡು ಎಷ್ಟ್ ದೊಡ್ಡ ಪ್ರಾಣಿ ನನಗೆ ಹೆದರಿ ದಾರಿ ಬಿಡ್ತು' ಅಂತು. ಉಳಿದ ಆನೆಗಳು ಈ ದೊಡ್ಡ ಆನೆಗೆ ಬೈದ್ವು' ನೋಡು ನಿನ್ನಿಂದ ನಮ್ಮ ಕುಲಕ್ಕೇ ಅವಮಾನ , ಹೆದರಿ ದಾರಿ ಬಿಟ್ಟೆಯಲ್ಲ' ಈ ಆನೆ ಹೇಳ್ತು 'ಅಣ್ತಮ್ಮ ಅಕ್ತಂಗಿಯರ, ಆ ಹಂದಿಯ ಮೇಲೆ ಕಾಲಿಟ್ಟು ಹೊಸಕಿ ಹಾಕೋದು ಎಷ್ಟ್ ಹೊತ್ತು ? ನಾನೇನು ಹೆದರಿ ದಾರಿ ಬಿಟ್ಟಿಲ್ಲ , ನಾ ಆಗಷ್ಟೇ ಸ್ವಚ್ಛವಾಗಿ ಖುಷಿಖುಷಿಯಿಂದ ಬರ್ತಾ ಇದ್ದೆ , ಸುಂಸುಮ್ನೆ ಮೈ ಮನಸ್ಸು ಮೈಲಿಗೆ ಯಾಕೆ ಅಂತ ಸುಮ್ನಾದೆ'
ಬದುಕು ನಾಟಕಗಳ ಹೊರತಾಗಿಯೂ ಚೆಂದ . ಅಗತ್ಯವಿಲ್ಲದ ಕಡೆ ನಾವೇನು ಅಂತ ಸಾಬೀತು ಪಡಿಸೊ ಅಗತ್ಯವೇ ಇಲ್ಲ ಅಲ್ವೇ :))))


ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...