Tuesday 28 February 2017

ಸುನೀತ ಹೋಗ್ಬಿಟ್ಟಳಂತೆ
ಛೆ ಹೌದಾ ! ನೆನ್ನೆ ಮಾತಾಡಿಸಿದ್ದೆ .. ಚೆನ್ನಾಗಿದ್ರು , ಏನಾಗಿತ್ತಂತೆ
ಮಲ್ಗಿದ್ ಹಂಗೆ ಹೋಗ್ಬಿಟ್ಟಳಂತೆ
ಛೆ !!!
ಸುನೀತಕ್ಕ ಹೋಗ್ಬಿಟ್ಟಳಂತೆ
ಹೌದಾ ಚೆನ್ನಾಗೇ ಇದ್ಲಲ್ಲ
ಒಂಚೂರು ಅಹಂಕಾರ ಅನ್ನೋದ್ ಬಿಟ್ರೆ ಒಳ್ಳೆವಳೇ ... ಏನೋ ಆಯಸ್ಸು ಅಷ್ಟೇ ಬಿಡಿ!!
ಸುನಿ ಹೋಗ್ಬಿಟ್ಟಳಂತೆ
ಹೌದೇನ್ರೀ ? ಏನ್ ಆಗಿತ್ತೋ ಏನೋ  ಬಿಡಿ ಮುತೈದೆ ಸಾವು ಒಳ್ಳೇದಾಗ್ಲಿ!!!
ನಮ್ ಮಂಜ್ನ್ ಹೆಂಡ್ತಿ ಹೋಗ್ಬಿಟ್ಟಳಂತೆ
ಅದ್ಯಾಕಮ್ಮಿ ಏನಾಗಿತ್ತಂತೆ??  ನಮ್  ಮಂಜ ಏನ್ ಮಾಡ್ತಾನೋ ಕಾಣೆ ಹೆಡ್ತಿ ಅಂದ್ರೆ ಪ್ರಾಣ ಬುಡ್ತಿದ್ದ .!!
ಸುನಿ ಹೋಗ್ಬಿಟ್ಟಳಂತೆ
ಏನ್ ಹೇಳ್ತಾ ಇದ್ದೀರಾ
ನಿಜ , ನಾನೇ ಫೋನ್ ಮಾಡಿ confirm ಮಾಡ್ಕೊಂಡೆ
ಇನ್ನೊಂದ್ ೬-೭ ವರ್ಷ ಮಗಳ ಮದ್ವೆ ಮಾಡೋವರೆಗಾದ್ರೂ ಇದ್ದಿದ್ರೆ ಚೆನ್ನಾಗಿತ್ತು  ತುಂಬಾ ಆಸೆ ಇಟ್ಕೊಂದಿದ್ಲು ಬದುಕಿನ ಮೇಲೆ !!!
ಸುನೀತಾ ಹೋಗ್ಬಿಟ್ಟರಂತೆ
ಯಾರ್ ಹೇಳಿ ಸುನಿತಾ ಅಂದ್ರೆ
ಏ ಅದೇ ಫೇಸ್ಬುಕ್ ಅಲ್ಲಿ ಇದ್ರೂ . ಅದೂ ಇದೂ ಒಂಚೂರು ಬರ್ಕೊಳ್ತಾ ಇದ್ರೂ
ಓಹ್  ಹೌದಾ ನನ್ ಲಿಸ್ಟ್ ಅಲ್ಲಿ ಇರ್ಲಿಲ್ಲ ಬಿಡಿ !!
ಸುನಿ ಹೋಗ್ಬಿಟ್ಟಳಂತೆ
ಹೆಜ್ಜೆಗಳನ್ನ ಉಳಿಸಿಯೂ ಉಳಿಸದಂತೆ  ಹೋಗ್ಬಿಟ್ಟಳಂತೆ
ಹುಟ್ಟಿದವರು ಇಲ್ಲೇ ಇರೋಕಾಗ್ತದ ಬಿಡಿ ....!!!!!

Tuesday 14 February 2017

ಈ ಫೇಸ್ಬುಕ್ ಗೆ ಬಂದ ಹೊಸದರಲ್ಲಿ ಸುಮಾರು ಒಂದು ವರ್ಷ ನನ್ನ ಚಿತ್ರ ಹಾಕಿರಲಿಲ್ಲ . ನನ್ನ ಬಗ್ಗೆ ನನಗೆ ಎಷ್ಟೇ ಆತ್ಮ ವಿಶ್ವಾಸವಿದ್ದರೂ , ವೃತ್ತಿ ಪ್ರವೃತ್ತಿಯ ಬಗ್ಗೆ ಹೆಮ್ಮೆ ಇದ್ದರೂ ನನ್ನ ಕತ್ತಿನಲ್ಲಿರೋ ಆ ಕಲೆಯ ಬಗ್ಗೆ ಒಂದು ಕಾಂಪ್ಲೆಕ್ಸ್ ಇತ್ತು . ಮನೆಯವರೆಲ್ಲ, ನನ್ನವರೆಲ್ಲಾ, ನನ್ನ ಗೆಳೆಯ ಗೆಳತಿಯರೆಲ್ಲ, ನನ್ನ ಮಕ್ಕಳೆಲ್ಲಾ ನನ್ನನ್ನ accept ಮಾಡಿಕೊಂಡಿದ್ದರೂ ಈ ಫೇಸ್ಬುಕ್ ಅನ್ನೋ ಮಾಯಾಪ್ರಪಂಚ ನನ್ನನ್ನ ಹೇಗೆ ಕಾಣುತ್ತದೋ ಅನ್ನುವ "ಭಯ"ವಿತ್ತು . ಬಂದ ಹೊಸದರಲ್ಲಿ ಗೆಳತಿಯೊಬ್ಬಳು ನಿನ್ನ ಚಿತ್ರ ಕಳಿಸು ಆಗ್ಲೇ ನೀನು ಹುಡುಗಿ ಅಂತ ನಂಬೋದು ನಿನ್ನ ಬಳಿ ಏನಾದ್ರು ಹಂಚಿಕೊಳ್ಳೋದು ಅಂದಾಗ ಒಂದ್ ತರ ಅನಿಸಿತ್ತು ...ಕಡೆಗೊಂದು ದಿನ ನನ್ನನ್ನ ನಾನಿರುವ ಹಾಗೆ accept ಮಾಡಿಕೊಳ್ಳುವವರಿದ್ರೆ ಗೆಳೆತನ ಉಳಿಯಲಿ.. ಇಲ್ಲ ಅಂದ್ರೆ ಅವರರವರ ಭಾವಕ್ಕೆ ಸೇರಿದ್ದು ಅಂತ ಚಿತ್ರ ಹಾಕಿದೆ...
ಪ್ರಾಪಂಚಿಕವಾಗಿ ತುಂಬಾ ಕಡಿಮೆ ಜನ ಸ೦ಪರ್ಕ ಹೊಂದಿದ್ದ ನನಗೆ ಈ ಫೇಸ್ಬುಕ್ ಒಂದಷ್ಟು ಪ್ರಪಂಚ ಜ್ಞಾನ ಕಲಿಸಿತು .. ರೂಪ, ಅಂತಸ್ತು, ವಯಸ್ಸು, ಉದ್ಯೋಗಗಳ ಎಲ್ಲೇ ಮೀರಿ ಪ್ರೀತಿ ಗೆಳೆತನ ನೀಡಿದ ಫೇಸ್ಬುಕ್ ಬಗ್ಗೆ ಧನ್ಯತೆ ಇದೆ... ಗೆಳೆಯ ಗೆಳತಿಯರ ಬಗ್ಗೆ ಪ್ರೀತಿ ಇದೆ ಗೌರವ ಇದೆ :))) ಅವರೂ ಕೂಡ ಅಷ್ಟೇ ವಿಶ್ವಾಸ ತೋರಿದ್ದಾರೆ ಪ್ರೀತಿಸಿದ್ದಾರೆ ...
ಗೆಳತಿಯೊಬ್ಬರು ನಿಮ್ಮ ಕತ್ತಿನಲ್ಲಿ ಕಲೆ ಕಾಣುವಂತೆ ಚಿತ್ರ ಹಾಕಬೇಡಿ ಅಂದ್ರು... ಅಂದಾಗಿದ್ರೆ ಏನೋ ಗೊತ್ತಿಲ್ಲ ... ಇಂದು ನಕ್ಕುಬಿಟ್ಟೆ ....
And I smile as ever....I am proud of myself for winning all what life gave me :)))
ಆ ಮರದ ಕೆಳಗಿನ 
ಆ ದೇವರ ನೋಡಿದೆಯ ಗೆಳೆಯ 
ಅದ್ಯಾರ ಮನೆಯಲ್ಲಿ 
ಅದೆಷ್ಟು ದಿನ 
ಅದೆಷ್ಟು ವಿಜೃಂಭಣೆಯಿಂದ 
ಪೂಜೆಗೊಳಗಾಗಿದ್ದನೋ
ಅದೆಷ್ಟು ವರ ನೀಡಿದ್ದನೋ
ಅದೆಷ್ಟು ನೈವೇದ್ಯ ತಿಂದಿದ್ದನೋ ಏನೋ
ಭಿನ್ನಗೊಂಡಿದ್ದಾನೆ ಎಂದು
ತಂದು ಇಲ್ಲಿ ಬಿಟ್ಟಿದ್ದಾರೆ ನೋಡು
ನಾವು ಜೋಪಾನವಾಗಿರಬೇಕೆನಿಸುತ್ತಿದೆ ಗೆಳೆಯ
ಭಿನ್ನವಾಗಿ ಬಿಟ್ರೆ
ನಮ್ಮ ಗತಿಯೂ ದೇವರದೇ ಗತಿ ಅಲ್ವೇ :)))))))
ಹೂವಿನ ಒಂದೊಂದೇ ಪಕಳೆ ಕೀಳುತ್ತಾ "He loves me Loves me not " ಆಟ ಆಡ್ತಾ ಇದ್ರು ... ಕಡೆಯ ಪಕಳೆ "loves me notಗೆ ನಿಲ್ತಾ ಇತ್ತೇನೋ , ಅವ್ನು ಒಂದ್ ಕ್ಷಣ ಅವಳನ್ನ ಯಾಮಾರಿಸಿ Loves meಗೆ ನಿಲ್ಲಿಸಿದ ... ಅವಳ ಬೆಲೆ ಕಟ್ಟಲಾಗದ ನಗು ಮನೆಯೆಲ್ಲ ಹರಡಿತು ...ಅಪ್ಪ ಅಮ್ಮ ಅವನು ಮಾಡಿದ ಚಿಕ್ಕ ಮೋಸ ತಿಳಿದು ಹುಸಿನಕ್ಕರು ... ಅಣ್ಣ ತಂಗಿ ಅಂದ್ರೆ ಹಾಗೇ .... ಪ್ರೀತಿ ಅಂದ್ರೆ ಹಾಗೆ 
Valentine's Day ??!! ಹೌದು ಪ್ರೀತಿಗೆ ದಿನವೂ ಹಬ್ಬವೇ :)))))))))
"ಅಪ್ಪ , ಏನ್ ಕೊಡಿಸ್ತಾ ಇದ್ದೆ ನೀನು ಅಮ್ಮಂಗೆ ವ್ಯಾಲೆಂಟೈನ್ಸ್ ಡೇ ದಿನ ?"
"ನಮಗೆ ಇವೆಲ್ಲ ಗೊತ್ತೇ ಇರ್ಲಿಲ್ಲ ಮಗಳೇ ..ದಿನಾ ಕಾಲೇಜ್ ಮುಗಿಸಿ ಬಸ್ ಸ್ಟಾಂಡ್ ಅಲ್ಲಿ ನಾ ಕಾಯ್ತಿದ್ರೆ ನಿಮ್ಮಮ್ಮ ನಾ ಕಾಯ್ತಾ ಇರ್ತೀನಿ ಅಂತ ಒಂದೇ ಉಸಿರಿಗೆ ಬರ್ತಾ ಇದ್ಳು ಆ ಏಪ್ರಾನ್ ಹೆಗಲಿಯ ಮೇಲೆ ಹಾಕಿಕೊಂಡು ಪುಸ್ತಕಗಳನ್ನ ಹಿಡಿದುಕೊಂಡು !. ಆಮೇಲೆ ಕಾಮಧೇನು ಅಲ್ಲಿ ಒಂದ್ ಪ್ಲೇಟ್ ಪಕೋಡ ಬೈಟು ಟೀ ಕುಡಿಯೋಕೆ ಒಂದ್ ಗಂಟೆ ತಗೊಳ್ತಾ ಇದ್ವಲ್ಲ ಅದರ ಮುಂದೆ ನೀವ್ ಹೋಗೋ Coffee Day Pizza Hut ಎಲ್ಲಾ ನಿವಾಳಿಸಿ ಬಿಸಾಕಬೇಕು..ಆಮೇಲೆ .... " 
'ಇಬ್ರು ಮರ್ಯಾದೆಯಾಗಿ ಎದ್ ಬಂದು ಊಟ ಮಾಡಿ ಮಲಗಿ .. ಅಪ್ಪ-ಮಗಳು ಮಾತಾಡೋ ಮಾತಾ ಇವು... " 
'ಆಯ್ತ್ ಬಿಡೇ ಕುಳ್ಳಿಮಾ , ನಿನ್ ಸೀಕ್ರೆಟ್ ನೀನೆ ಇಟ್ಕೋ ..Lov you ಅಪ್ಪ ' :))))))
"ಈವತ್ತು ದೇವಸ್ಥಾನದಲ್ಲಿ ಸೀ ಪೊಂಗಲ್ ಕೊಟ್ಟಿದ್ರು ಮಗ, ನಿನ್ ನೆನಸ್ಕೊಳ್ತಾ ಇದ್ದೆ ಸಂಜೆ ಬರ್ತೀವಿ ಅಂತ ಮಂಜ ಫೋನ್ ಮಾಡಿದ್ದ ..ಅದ್ಕೆ ತಂದಿಟ್ಟಿದ್ದೆ, ತಿನ್ನು " ಅಂತ ಹೇಳೋ ಅತ್ತೆ.
'ಮಗ, ಈ ಒಬ್ಬಟ್ಟು ತಗೊಂಡ್ ಹೋಗಿ ಅಕ್ಕಂಗೆ ಕೋಟ್ ಬಿಡು ..ಅವ್ಳ್ಗೆ ಇಷ್ಟ " ಅಂತ ಕೊಟ್ಟು ಕಳುಹಿಸೋ ಅಮ್ಮ ಮತ್ತು ತಂದು ಕೊಡೊ ತಮ್ಮ..
'ಸುನೀತಾ ಅವ್ರೆ ಒಂದ್ ಹತ್ ನಿಮಿಷ ಬಂದ್ ಹೋಗಿ, ಕಜ್ಜಾಯ ಮಾಡಿದ್ದೀನಿ ತಗೊಂಡ್ ಹೋಗುವಿರಂತೆ/ ಅಕ್ಕ, ಜಾಮೂನ್ ಮಾಡಿದ್ದೆ,ನಿಮ್ಮನ್ನ ನೆನೆಸ್ಕೊಂಡೆ, ಎತ್ತಿಟ್ಟಿರ್ತೀನಿ ಯಾವಾಗ ಬರ್ತೀರಾ ' ' ಅನ್ನೋ ವಾರಗಿತ್ತಿಯರು .. 
'ಮಾ, ಸ್ಕೂಲ್ ಅಲ್ಲಿ ಈವತ್ತು ಮಹಾಲಕ್ಸ್ಮಿ ಸ್ವೀಟ್ಸ್ದು ಮೈಸೂರ್ ಪಾಕ್ ಕೊಟ್ಟಿದ್ರು annual dayದು ನಿನಗೆ ಇಷ್ಟ ಅಲ್ವ ತಗೋ' ಅನ್ನೋ ಮುದ್ದು ಮಗಳು ..
'ನನಗೆ ಈ ಸ್ವೀಟ್ ಇಷ್ಟ ಇಲ್ಲ ನೀವೇ ತಿನ್ನಿ ಅತ್ತಿಗೆ' ಅಂತ ಮದ್ವೆ ಮನೆಯಲ್ಲೊ ಮತ್ತೆಲ್ಲೋ ಸಿಹಿ ಎತ್ತಿ ನನ್ನ ಎಲೆಗೆ ಹಾಕುವ ಮೈದುನಂದಿರು ...
'ಮಾ , ಅದೇನ್ ಸ್ವೀಟ್ ತಿಂತೀಯಾ ಅಷ್ಟ್ ತಿನ್ನಬೇಡ ' ಅಂತ ಪ್ರೀತಿಯಿಂದ ಗದರುವ ಮಗ ...
ಸಂಜೆಯ ಅವನ ಫೇಸ್ಬುಕ್ (ಅಡ್ಡ!!!) ಬಿಟ್ಟು ಒಬ್ಬನೇ ಎಲ್ಲೂ ಹೋಗದ ಗಂಡ ಅಪರೂಪಕ್ಕೊಮ್ಮೆ ಒಬ್ಬನೇ ಹೋದಾಗ ಹುಡುಕಿ ತರೋ 'ಬೆಲ್ಲದ ಮಿಠಾಯಿ '......
ಐದು ವರ್ಷದ ನಂತರ ಬಂದ್ರು 'ನಿಮಗೆ ಸಿಹಿ ಇಷ್ಟ ಅಲ್ವ ಸುನಿತಾ 'ಅಂತ ಸಿಹಿ ಹಿಡಿದು ಬರುವ ಗೆಳೆಯ
"ಲೇ, ಮೊದ್ಲು ಮರ್ಯಾದೆಯಾಗಿ ವಾಕಿಂಗ್ ಹೋಗು, ಬಂದ್ರೆ ಗ್ರಹಚಾರ ಬಿಡಿಸ್ತೀನಿ ಅಷ್ಟೇ ' ಅನ್ನೋ ಗೆಳತೀ
ಅದೆಷ್ಟು ಜನಕ್ಕೆ ನಾ ವ್ಯಾಲೆಂಟೈನ್ ಅಲ್ವೇ:))))
ಪ್ರೀತಿ ಅಂದ್ರೆ ಹಾಗೆ, ಕೋಪನೆೇ ಇಲ್ಲ, ಜಗಳವೇ ಇಲ್ಲ, ಅಂತೇನೂ ಅಲ್ಲ .... ಪ್ರೀತಿ ಅಂದ್ರೆ ನೀನು ಮನದಲ್ಲಿ ಇದ್ದೀಯ ಅಂತ .. ನಿನ್ನ ಇಷ್ಟಾನಿಷ್ಟಗಳು ನನಗೆ ಗೊತ್ತು ಅಂತ ...ಸಾಧ್ಯವಾದಷ್ಟು ಪರಸ್ಪರ ಹಿತವಾಗಿರೋಣ ಅಂತ ......... ಅಷ್ಟೇ
Valentines Day or Not ...........Being in someone's thought and mind is Love ...:)))))))

Wednesday 8 February 2017

ನನಗೆ ಒಂದ್ ತರ amnesia.ಜೊತೆಗೆ ಒಂದಷ್ಟು ಸಂಕೋಚ .. ಗುರುತು ಹಿಡಿಯೋದು ಸ್ವಲ್ಪ ನಿಧಾನ . ಮಂಜುಗೆ ಫ್ರೆಂಡ್ಸ್ ಹೇಳ್ತಾರೆ 'ಅಕ್ಕ ಸಿಕ್ಕಿದ್ರು ಮಂಜಣ್ಣ , ಅದ್ಯಾಕೋ ನಾ ನಕ್ಕರೂ ನಗಲಿಲ್ಲ ' ಮಂಜು 'ಅಯ್ಯೋ ಅವ್ಳು ಹಂಗೆ , ನಾ ಇಲ್ಲದಿದ್ದರೆ ಅವ್ಳು ಅವಳದೇ ಲೋಕದಲ್ಲಿ ಇರ್ತಾಳೆ ಬಿಡಣ್ಣ " ಅಂತ ಹೇಳಿ ಮನೆಗೆ ಬಂದು ಇಂತಹವರು ಸಿಕ್ಕಿದ್ರು , ನಿನ್ನ ನೋಡಿದ್ರಂತೆ, ಹೇಳ್ತಾ ಇದ್ರು ಅಂತ ಹೇಳಿದಾಗ 'ಹೊಂ ಅದ್ಯಾರೋ ನಕ್ರು ಮಂಜು ನನಗೆ ತಕ್ಷಣ ಗುರುತು ಸಿಗಲಿಲ್ಲ ನೋಡು' ಅಂದ್ರೆ ನಿನ್ನ ಕಥೆ ಹೊಸದ ಅನ್ನೋ ಹಾಗೆ ಲುಕ್ ಕೊಟ್ಟು ಸುಮ್ಮನಾಗ್ತಾರೆ ಮಂಜು. ಮೊದಲೆಲ್ಲ ತಪ್ಪು ತಿಳಿತಾ ಇದ್ದವರಿಗೆ ಈಗ ಗೊತ್ತಾಗಿಬಿಟ್ಟಿದೆ ಇವ್ಳಿಗೆ ಹಿಂಗ್ ಒಂದ್ ಕಾಯಿಲೆ ಅಂತ!! ಜಾಸ್ತಿ ತಪ್ಪು ತಿಳಿಯೋದಿಲ್ಲ !!
ಮೊನ್ನೆ ಶನಿವಾರ ಕಾರ್ತಿ 'ಮಾ, ಟ್ಯಾಂಕ್ ಹತ್ತಿರ ಬಾ ಪಿಕ್ ಮಾಡೋಕೆ " ಅಂತ ಫೋನ್ ಮಾಡ್ದ . ನಾ ಹೋದೆ. ಬಸ್ ನಿಲ್ತು. ನಾ ನಿಂತಿದ್ದೆ . ಸರಿ ಒಂದ್ ಹುಡುಗ ನನ್ನ ಕಡೆ ನೋಡಿ ನಗ್ತಾ ಬರ್ತಾ ಇದ್ದ. ಎಂದಿನ ಹಾಗೆ ನನ್ನದು ಬ್ಲಾಂಕ್ ಲುಕ್. ಅವನ ಪಕ್ಕ ಕಾರ್ತಿ ಕೂಡ ಇದ್ದಿದ್ದು ರಸ್ತೆ ತಿರುವಿನಲ್ಲಿ ಇದ್ದ ನನಗೆ ಕಾಣ್ತಾ ಇರಲಿಲ್ಲ . ಒಂದಷ್ಟು ಮುಂದೆ ಬಂದ ಮೇಲೆ ಆ ಹುಡುಗ ಕಾರ್ತಿ ಜೊತೆನೇ ಬರ್ತಾ ಇದದ್ದು ಗೊತ್ತಾಯ್ತು. ಅಷ್ಟರಲ್ಲಿ ಆ ಹುಡುಗ ಆ ಕಡೆ ರಸ್ತೆ ದಾಟಿ ಆಗ್ಹೋಯ್ತು . ಮಗನ ಜೊತೆ ವಾಪಸ್ ಬರ್ತಾ 'ಮಗ ಆ ಹುಡುಗ ನಗ್ತಾ ಬಂತು ನನಗೆ ಗುರ್ತೆ ಸಿಗಲಿಲ್ಲ! ಯಾರ್ ಮಗ ಅದು? ಪಾಪ ಏನ್ ತಿಳ್ಕೊಳ್ತೋ ಏನೋ' ಅಂದೆ 'ಅದು ಆಕಾಶ್ ಅಲ್ವ ಮಾ, ಮೊನ್ನೆ ನೀನೆ ಒಬ್ಬಟ್ಟು ಹಾಕಿ ಕೊಟ್ಟಿದ್ದಲ್ಲ ಅವ್ನು ಮನೆಗೆ ಬಂದಾಗ " ಅಂದ. ನೆನಪಿಗೆ ಬರಲಿಲ್ಲವಾದ್ರು ಸಾರಿ ಹೇಳ್ಬಿಡು ಮಗ ಗೊತ್ತಾಗಲಿಲ್ಲ ಅಂದೆ. 'ಅಯ್ಯೋ ಬಿಡಮ್ಮ ನನ್ ಫ್ರೆಂಡ್ಸ್ ಹಂಗೆಲ್ಲ ಅಂದ್ಕೊಳ್ಳೋದಿಲ್ಲ ' ಅಂದ 'ಅದ್ಯಾಕೋ ಮರೆವು ಮಗ. ಒಂದೊಂದ್ ಸಾರಿ ಬೇಜಾರ ಆಗುತ್ತೆ ಈ ಮರೆವಿನ ಮೇಲೆ .. ಅದೆಷ್ಟ ತಪ್ಪು ತಿಳಿತಾರೋ ಅಲ್ವ" 'ಮಾ, ಅದು ಕಾಯಿಲೆ ಅಲ್ಲ ಮಾ boon!! ಮನಸ್ಸಿಗೆ ಏನ್ ಇಷ್ಟ ಅಷ್ಟನ್ನ ಮಾತ್ರ ಉಳಿಸಿಕೊಂಡು ಉಳಿದದ್ದನ್ನ ಮರೆತು ಬಿಡೋ boon ! PCನಲ್ಲಿ ಅನಗತ್ಯ ಮೆಮೊರಿ ತುಂಬ್ತಾ ಹೋದ್ರೆ PC ಸ್ಲೋ ಆಗೋದಿಲ್ವ ಡಿಲೀಟ್ ಮಾಡಿದ್ರೆ ಚೆನ್ನಾಗ್ ಕೆಲಸ ಮಾಡೋದಿಲ್ವ ಹಂಗೆ ಬೇಡದ್ದು ತುಂಬಿಕೊಂಡರೆ ಭಾರ ಜಾಸ್ತಿ ಆಗುತ್ತೆ!! ಯಾರೋ ಮಾತಾಡಿಸಿಲ್ಲ ಅಂದ್ರೆ ಒಹ್ ಇವ್ರು ಅವ್ರಲ್ವ ನನ್ನ ಮಾತೇ ಅಡ್ಸಿಲ್ಲ ನೋಡು ಅಂತ ನೊಂದ್ಕೊತೀಯ ..ಈಗ ಅವೆಲ್ಲ ತಲೆನೋವೇ ಇಲ್ಲ ..! ಸುಮ್ಸುಮ್ನೆ ಅದ್ಯಾಕ್ ಟೆನ್ಶನ್ ಮಾಡ್ಕೊತೀಯ ಸುಮ್ನಿರು !!!!!! :))))))
ಮಕ್ಕಳು ಚಿಕ್ಕವರಿದ್ದಾಗ ಈ ಟಿವಿ ಮೊಬೈಲು ಎಲ್ಲಾ ಗೊತ್ತೇ ಇರ್ಲಿಲ್ಲ .. ಶಾಲೆಯಿಂದ ಬಂದಿದ್ದೆ ಹಾಲು ಕುಡಿದು ಅಂದಿನ ಹೋಮ್ ವರ್ಕ್ ಮುಗಿಸಿಬಿಡ್ತಾ ಇದ್ರೂ.. ಆಮೇಲೆ ಏನಾದ್ರೂ ತಿಂದು ಮನೆಯ ಮುಂದೆ ನಮ್ಮ ಬೀದಿಯಲ್ಲಿದ ಮಕ್ಕಳ ಜೊತೆ ಆಟ ಆಡಿಕೊಂಡು ಬಂದ್ರೆ, ಮತ್ತೆಲ್ಲಾ ಮಾತೇಮಾತು .. ಶಾಲೆಯಲ್ಲಿನ ಮಾತು ಆಟದಲ್ಲಿನ ಮಾತು ಎಲ್ಲ ಮುಗಿಸಿ , ಒಂದು ಚೀಲದಲ್ಲಿ ತುಂಬಿದ್ದ ಅವರದೇ ಹಳೆಯ ಆಟಿಕೆಗಳನ್ನು ತೆಗದುಕೊಂಡು ಇಬ್ಬರು ಒಂದಷ್ಟು ಕಿತ್ತಾಡುವಷ್ಟ್ರಲ್ಲಿ ಅಡುಗೆ ಆಗಿ ಊಟ ಮಾಡೋ ಹೊತ್ತಾಗ್ತಾ ಇತ್ತು .. ಊಟ ಮಾಡಿಸಿಬಿಟ್ರೆ ಇನ್ನು ಮಲಗೋವರೆಗೂ ಹಾಡುಗಳದ್ದೇ ಸಾಮ್ರಾಜ್ಯ. ನಿದ್ರೆ ಬರೋವರೆಗೂ ಅವರಪ್ಪ ಸಿಳ್ಳೆಯಲ್ಲಿ ಹಾಡು ಹೇಳಿದ್ರೆ/ ಹಮ್ ಮಾಡಿದ್ರೆ ಅದ್ಯಾವ ಹಾಡೆಂದು ಇವೆರಡು ಕಿರಿಚಿಕೊಳ್ತಾ ಇದ್ವು.. ನಾ ಫಸ್ಟ್ ಹೇಳಿದ್ದು ಅಂತ ಅಲ್ಲೂ ಜಗಳ ತೆಗಿತಾ ಇದ್ವು . ಈಗ ನಾ "ಹ್ಮ್ ಹ್ಮ್ " ಅಂತೀನಿ ನೀನು ಹಾಡು ಹೇಳು ಅಂತ ತಮ್ಮದೇ ಶೈಲಿಯಲ್ಲಿ ಹೇಳೋವಾಗ ಚೆಂದ ಅನಿಸ್ತಾ ಇತ್ತು .. ಅಂತ್ಯಾಕ್ಷರಿ ಆಡ್ತಾ ಇದ್ರು..... (ಸತ್ ಹೋಗಿರೋ ರಾಜಣ್ಣ ಅಲ್ಲೆಲ್ಲಾದ್ರು ಅಡ್ಡಾಡ್ತಾ ನಮ್ಮ ಮನೆಯ ಮೇಲೆ ಹೋಗ್ತಾ ಇದ್ದಾಗ ತನ್ನ ಹಾಡುಗಳನ್ನ ಹಾಡ್ತಾ ಇರೋ ಐಕ್ಳ ನೋಡಿದ್ರೆ ತನ್ನ ಬಗ್ಗೆ ಹೆಮ್ಮೆ ಪಟ್ಕೊಳ್ತಾ ಇದ್ನೇನೋ ಅನಿಸೋ ಹಾಗೆ ಹಳೆಯ ಹಾಡುಗಳನ್ನ ಹಾಡ್ತಾ ಇದ್ರು ..)... ಅದೆಷ್ಟ್ ಚೆಂದ ಅನಿಸ್ತಾ ಇತ್ತು .ಈಗ ಇಬ್ರೂ ನನಗಿಂತ "ದೊಡ್ಡೋ"ರಾಗಿಬಿಟ್ಟಿದ್ದಾರೆ. (ಪ್ರಾಜೆಕ್ಟು , ಅಸೈನ್ಮೆಂಟು , ಮೊಬೈಲು, ..... )
ನೆನ್ನೆ ಧಿಡೀರ ಅಂತ ಅಪ್ಪಮಕ್ಕಳಿಗೆ ಮತ್ತೊಮ್ಮೆ ಅದೆಲ್ಲ ನೆನಪಿಗೆ ಬಂದು.. 'ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ ..... ' ಅಂತ ಇಡೀ ಹಾಡನ್ನ ( ನನ್ನ ಕೂಸು ಸಾಹಿತ್ಯ ಲೋಪವಿಲ್ಲದೆ ಹಾಡುತ್ತೆ ಭಾರಿ ಖುಷಿಯಾಗುತ್ತೆ ) ಹಾಡಿ ಉರುಳಿಸಿಬಿಟ್ರು...
ದಿನಾ ಹಿಂಗೇ ಇರೋಕೆ ಏನ್ ನಿಮ್ಮಿಬ್ಬರಿಗೆ . ಯಾವಾಗ್ಲೂ ಆ ಮೊಬೈಲ್ ಒಳಗೆ ಇರ್ತೀರಲ್ಲ ಅಂದ್ರೆ ....'ಹಬ್ಬಬ್ಬಕ್ಕೂ ಒಬ್ಬಟ್ಟು ತಟ್ಟಿದ್ರೆ ಚೆನ್ನಾಗಿರೋದಿಲ್ಲ ಸುಮ್ನಿರಮ್ಮ "!!!!!!!!
And I smile as Ever :)))

Thursday 2 February 2017

ಸಣ್ಣವರಿದ್ದಾಗ ಪ್ರಬಂಧ ಬರೆಯಿರಿ ಅಂತ ಕೊಡ್ತಾ ಇದ್ದಾಗ ಒಂದಷ್ಟು ವರ್ಷ 'ಟೆಲಿವಿಷನ್' ಬಗ್ಗೆಯೇ ಕೇಳ್ತಾ ಇದ್ರು. ಪ್ರಥಮಭಾಷೆ ಕನ್ನಡ, ದ್ವಿತೀಯ ಭಾಷೆ ಇಂಗ್ಲಿಷ್, ಮತ್ತು ತೃತೀಯ ಭಾಷೆ ಹಿಂದಿ , ಯಾವುದಾದರೂ ಸರಿ ಅಂತೂ ಬರೀತಾ ಇದ್ವಿ . (ಈಗ್ಲೂ ಪುಟ್ಟಿ ೭ನೇ ತರಗತಿಯಲ್ಲಿದ್ದಾಗ ಟಿವಿ ಬಗ್ಗೆ ಒಂದ್ ಪ್ರಬಂಧ ಅಂತೇ ಹೇಳ್ಕೊಡಮ್ಮ ಅಂತ ಕೇಳಿದ್ದು ನೆನಪಿದೆ) "ಟಿವಿ ಅನ್ನೋದು ಒಂದು ಮನೋರಂಜನೆಯ ಸಾಧನ ಮಾತ್ರ ಅಲ್ಲ , ಟಿವಿ ಇಂದ ಅನೇಕ ಉಪಯೋಗಗಳಿವೆ, ಟಿವಿ ಮಾಧ್ಯಮ ಜನರನ್ನ ತುಂಬಾ ಹತ್ತಿರ ಮಾಡಿದೆ. ವಿಷಯಗಳನ್ನು ಅರಿಯಲು ಸಹಕಾರಿಯಾಗಿದೆ, ಇತ್ಯಾದಿ, ಇತ್ಯಾದಿ ಇತ್ಯಾದಿ" ಪುಟಗಟ್ಟಲೆ ಬರೀತಾ ಇದ್ವಿ . ನಾ ಒಂದೂವರೆ ಪೇಜ್ ಬರೆದಿದ್ದೇನೆ ಹೆಚ್ಚುವರಿ ಶೀಟ್ ಅದಕ್ಕೆ ಅಂತಲೇ ತಗೊಂಡೆ ಅನ್ನುವಾಗ ಹೆಮ್ಮೆ ಪಡ್ತಾ ಇದ್ವಿ ...ಆದ್ರೆ ಎಲ್ಲೂ ಟಿವಿ ಅಂದ್ರೆ ಹಣ ಮಾಡುವ ಸಾಧನ ಅಂತ ಬರೀತಾ ಇರಲಿಲ್ಲ , ಹಾಗೆ ಹಣ ಮಾಡಬಹುದು ಅಂತ ಆಗ ಗೊತ್ತೇ ಇರಲಿಲ್ಲ.. ಇದ್ದ ನ್ಯಾಷನಲ್ ದೂರದರ್ಶನ (DD1)ಮತ್ತು ಪ್ರಾದೇಶಿಕ (DD9) ಚಂದನ ಬಿಟ್ರೆ ಬೇರೆ ಆಯ್ಕೆಗಳೇ ಇರಲಿಲ್ಲ .. ಅದರಲ್ಲೇ ಖುಷಿ ಪಡ್ತಾ ಇದ್ವಿ ..
ಈಗ ವಿಷ್ಯಕ್ಕೆ ಬರ್ತೀನಿ. ನಾ ಟಿವಿ ನೋಡೋದು ಬಲು ಅಪರೂಪ. ಸಿಕ್ಕೋ ಸಮಯದಲ್ಲಿ ಯಾವುದಾದ್ರೂ ಒಳ್ಳೆ ಹಾಡುಗಳು ಅಥವ ಒಂದಷ್ಟು ನ್ಯೂಸ್ ಕೇಳೋದು, ಕ್ರಿಕೆಟ್, ಟೆನಿಸ್, ಒಂದಷ್ಟು ಕಬಡ್ಡಿ ಬಿಟ್ರೆ ಬೇರೆ ಏನಾದ್ರೂ ನೋಡೋದು ಕಮ್ಮಿ.. ರಿಮೋಟ್ ಮಕ್ಕಳ ಕೈಲೋ ಗಂಡನ ಕೈಲೋ ಇದ್ರೆ ಪಕ್ಕ ಕೂತಿದ್ದಾಗ ಅವರು ಹಾಕಿದ್ದನ್ನ ನೋಡ್ತಾ ಕೈಲಿ ಒಂದು ಪುಸ್ತಕ ಹಿಡಿದು ಕೂರ್ತಿನಿ...ಅವ್ರುಹಾಕಿದ್ದು ಕಿವಿಗೆ ಬಿದ್ರೆ ಚೆಂದ ಅನಿಸಿದ್ರೆ ಹಾಗೇ ಕೇಳ್ತಿನಿ.. ಇಲ್ಲ ಅಂದ್ರೆ ಇಲ್ಲ.. ಇತ್ತೀಚೆಗೆ ನ್ಯೂಸ್ ಹಾಕಿದ್ರೆ 'ಅಂಕಲ್ ಆಫೀಸ್ಗೆ , ಆಂಟಿ ಟೆಂಟ್ ಸಿನಿಮಾಗೆ " 'ಹೆಂಡತಿಯ ಅನೈತಿಕ ಸಂಬಂಧ , ಕೊಲೆ ಮಾಡಿದ ಗಂಡ" ' ಪರಸತಿಯ ಜೊತೆ ಇದ್ದ ಗಂಡ ರುದ್ರ ಪತ್ನಿಯಿಂದ ಪೂಜೆ" ......ಇತ್ಯಾದಿ , ಇತ್ಯಾದಿ ನೋಡಿ ನೋಡಿ ಬೇಸರ ಅನಿಸುತ್ತೆ ನ್ಯೂಸ್ ನೋಡೋದೇ ಬೇಡ ಅನ್ನೋ ಹಾಗೆ..ಕೃತಿ ಬಿದ್ದು ಬಿದ್ದು ನಗ್ತಾಳೆ 'ಓಯ್ ಚೇಂಜ್ ಮಾಡು ಮಗ' ಅಂದ್ರೆ 'ಸುಮ್ನಿರಮ್ಮ ಸಕ್ಕತ್ತಾಗಿದೆ ಟೈಟಲ್' ಅಂತಾಳೆ :(
ಒಂದಷ್ಟು ವರುಷಗಳಿಂದ ಈ ಟಿವಿಗಳಲ್ಲಿ ರಿಯಾಲಿಟಿ ಕಾರ್ಯಕ್ರಮಗಳನ್ನ ನಡೆಸೋದು, ಅದರ ಫಲಿತಾಂಶ ವೀಕ್ಷಕರ ಕೈಲಿದೆ ಎಂದು "ಯಾಮಾರಿಸಿ" ವೋಟ್ ಹಾಕಿ ಅನ್ನೋದು, ನಾವೂ ಕೂಡ ಏನೋ ನನ್ನ ವೋಟ್ನಿಂದಲೇ ಅವನೋ/ಳೋ ಗೆಲ್ತಾಳೆ ಅನ್ನೋ ಹಾಗೆ ವೋಟ್ ಹಾಕೋದು (ದೇವ್ರಾಣೆ ನನಗೂ ಇದಕ್ಕೂಬಲು ದೂರ, ಮೆಸೇಜ್ ಹಾಕಿದ್ರೆ ವಾಪಸ್ಸು ಮೆಸೇಜ್ ಹಾಕದ ಸೋಮಾರಿ ನಾನು) .. ಇದ್ಯಾಕೆ ಅಂತ? ಅಭಿಮಾನ ಇರಬೇಕು, ಪ್ರೀತಿ ಇರಬೇಕು, ಗೌರವ ಇರಬೇಕು, ಎದುರಿಗೆ ಕಂಡರೆ ವಿಶ್ವಾಸದಿಂದ ಇರಬೇಕು . ಹುಚ್ಚುತನ ಇರಬಾರದು. ಗೆಲುವು ಸೋಲು "ಅರ್ಹತೆಯ" ಮೇಲೆ ಸಿಗಬೇಕೇ ಹೊರತು ಮತ್ಯಾವುದೇ ಮಾನದಂಡದ ಮೂಲಕ ಅಲ್ಲ.... ಅದೆಷ್ಟೋ ದುಡ್ಡು ಖರ್ಚು ಮಾಡಿ ಜನ ವೋಟ್ ಮಾಡ್ತಾರೆ , ಬಹುಶಃ ಬಹುಮಾನದ ಹಣಕ್ಕೆ ಅದರ ೧೦% ಕೂಡ ಸರಿ ಹೋಗೋದಿಲ್ಲ....ದುಡ್ಡು ಗೆದ್ದ ವ್ಯಕ್ತಿ ಒಂದಷ್ಟು ದಿನಗಳ ನಂತರ ನಮ್ಮ ಕಣ್ಣಿಗೆ ಕಾಣೋದೇ ಇಲ್ಲ ! ಜನಗಳ ನೆನಪಿನಶಕ್ತಿ ಬಲು ಕಡಿಮೆ. ಹೊಸದೊಂದು ವಿಷಯ ಸಿಕ್ಕ ಕೂಡಲೇ ಹಳೆಯದನ್ನ ಮರೀತಾರೆ. ಗಾಸಿಪ್ ಜೀವನ ಅಲ್ಲ . (ಮೊನ್ನೆ ನನ್ನ ಅತ್ತೆಯ ಮಗಳು " ಹಿಂಗೇ ಅಕ್ಕ, !@$#$#@@@$$" ಅಂದ್ಳು, ನಮ್ಮದು ಗಾಸಿಪ್ ಮಾಡೋ ವಯಸ್ಸ ತಾಯಿ ಅಂದೆ..ನಕ್ಬಿಟ್ಲು ) ಕೆಲವು ರಿಯಾಲಿಟಿ ಷೋಗಳ ನೋಡ್ತಿವಿ ಅಂದ್ರೆ ನಮ್ಮ ಅಭಿರುಚಿಯ ಬಗ್ಗೆ ಪ್ರಶ್ನೆ ಏಳುವಷ್ಟು ಮಟ್ಟಕ್ಕೆ ಬಂದು ತಲುಪಿದ್ದೇವೆ..
ಒಳ್ಳೆಯದು ಕೆಟ್ಟದರ ನಡುವೆ ಒಂದು ಗೆರೆ ಇರುತ್ತದೆ . ಗೆರೆ ಎಳೆಯುವವರು, ಎಳೆದುಕೊಳ್ಳಬೇಕಾದವರು ನಾವೇ.. ಯಾವುದೇ ಕಾರ್ಯಕ್ರಮ ನೋಡಬೇಕು ಅಥವ ನೋಡಬಾರದು ಅನ್ನೋದಲ್ಲ ನನ್ನ ಉದ್ದೇಶ. ನಾವು ಮಾಡುವ ಕೆಲ್ಸದ ಬಗ್ಗೆ ವಿವೇಚನೆ ಇದ್ರೆ ಸಾಕು. ಅದರ ಅಗತ್ಯ ಎಷ್ಟು ಅನ್ನೋದರ ಬಗ್ಗೆ ಸಾಮಾನ್ಯ ಪ್ರಜ್ಞೆ ಇದ್ರೆ ಸಾಕು.
(ಪುಟ್ಟಿ ಹೇಳ್ತಾ ಇದ್ದಾಳೆ 'ಕುಳ್ಳಿಮಾ, ನೀವ್ ಯಾಕೋ ಮಾತಾ ಸುನಿತಾನಂದಮಯಿ ಆಗೋ ರೇಂಜ್ಗೆ ಹೋಯ್ತಾ ಇದ್ದೀರಾ ಜೋಪಾನ..U need to come forward yaa ಅಂತ!!)...
money makes many things ಅಂತಿದ್ಲು ಅಮ್ಮ .... ನಿಜವೇನೋ ...
ಸುಂಸುಮ್ನೆ ಬರೀಬೇಕು ಅನಿಸ್ತು ...
ನನ್ನ ಮಕ್ಕಳು ಅವರ ಓದುವಿಕೆಯ ವಿಷಯದಲ್ಲಿ ನನಗೆ ಯಾವತ್ತೂ ಹಿಂಸೆ ಮಾಡಿಲ್ಲ. ತೊಂದರೆ ಕೊಟ್ಟಿಲ್ಲ. ಚಿಕ್ಕವರಿದ್ದಾಗ ಹೇಳಿಕೊಡ್ತಾ ಇದ್ದಿದ್ದು ಬಿಟ್ರೆ ಅವರಷ್ಟಕ್ಕೆ ಅವ್ರು ಓದ್ಕೊಳ್ತಾರೆ. 8-9ನೇ ತರಗತಿಯವರೆಗೂ ಪಕ್ಕ ಕೂತ್ಕೊಳ್ತಾ ಇದ್ದೆ. ಆಮೇಲೆ ಅದೂ ಇಲ್ಲ. ತುಂಬಾನೇ ಜಾಣರು ಅಲ್ಲದೆ ಇದ್ರೂ ಶಾಲೆಯಲ್ಲಿ 8-10ರ ಒಳಗೆ ನಿಲ್ತಾರೆ. ಶಾಲೆಯಲ್ಲಾಗಲಿ, ಕಾಲೇಜಲ್ಲಾಗಲಿ ಪೇರೆಂಟ್ಸ್-ಟೀಚರ್ಸ್ ಮೀಟಿಂಗ್ನಲ್ಲಿ ದೂರುವ ಹಾಗೆ ನಡೆದುಕೊಂಡಿಲ್ಲ. ಒಂದಷ್ಟು ಪ್ರೆಷರ್ ಹಾಕಿದ್ರೆ ಇನ್ನೊಂದ್ಚೂರು ಹೆಚ್ಚು ಅಂಕಗಳು ಬರ್ತಾ ಇದ್ದಿದ್ದು ನಿಜ ಅನಿಸಿದ್ದರೂ ಅವರ ಬಾಲ್ಯದ ಸ್ವಾತಂತ್ರ್ಯ ಕಸಿದುಕೊಳ್ಳೋದು ಬೇಡ ಅನಿಸಿತ್ತು. ಮಂಜು ಈಗ್ಲೂ ನನ್ನ ಬೈತಾರೆ 'ನಿನ್ ಮಕ್ಳು ಇನ್ನೊಂದ್ಚೂರು ಕಷ್ಟ ಪಟ್ಟಿದ್ರೆ /ನೀನು ಒಂದ್ಚೂರು ಓದಿಸಿದ್ರೆ ಇನ್ನು ತುಂಬಾ ಅಂಕ ಬರ್ತಾ ಇತ್ತು' ಅಂತ . (ಮುಂದೆ ನನ್ನ ಮಕ್ಕಳೂ ಇದನ್ನೇ ಹೇಳ್ತಾರೇನೋ, ನೀನು ಇನ್ನೊಂದ್ಚೂರು ಭಯಪಡಿಸಿ ಓದಿಸಬೇಕಿತ್ತು ಕಣಮ್ಮ ಅಂತ !!) 
ಕಾರ್ತಿ ಎರಡನೇ ಪಿಯುಸಿ ಯಲ್ಲಿದ್ದಾಗ ಒಂದ್ ದಿನ ಕಾಲೇಜ್ನಿಂದ ಫೋನ್ ಬಂತು 'ನಾನು ಕೆಮಿಸ್ಟ್ರಿ ಲೆಕ್ಚರರ್ __ ಮಾತಾಡ್ತಾ ಇರೋದು. ನಿಮ್ ಹತ್ತಿರ ಸ್ವಲ್ಪ ಮಾತನಾಡಬೇಕಿತ್ತು ಕಾರ್ತಿಕ್ ವಿಷ್ಯ ' ಅಂದ್ರು. ಎಂದೂ ಇಲ್ಲದ್ದು ಇದೇನು ಹೀಗೆ ಅನಿಸಿ ಆತಂಕ ಅನಿಸ್ತು. ಮನೆಯಿಂದ ಕಾಲೇಜು ಒಂದ್ ಒಂದು-ಒಂದೂವರೆ ಕಿಲೋಮೀಟರು ಅಷ್ಟೇ, ಕೆಲ್ಸ ಮಾಡ್ತಾ ಇದ್ದವಳು 'ಈಗ್ಲೇ ಬರ್ತೀನಿ' ಅಂತ ಹೇಳಿ ಫೋನ್ ಇಟ್ಟೆ. ಎರಡು ನಿಮಿಷದಲ್ಲಿ ತಯಾರಾಗಿ ಗಾಡಿ ತೆಗೆಯೋಣ ಅಂದ್ರೆ ಅವನನ್ನು ಬಿಟ್ಟು ಬಂದಾಗ ಸರಿ ಇದ್ದ ಗಾಡಿ ಪಂಚರ್ ಆಗಿದೆ !! ಬರ್ತೀನಿ ಅಂತ ಹೇಳಿಬಿಟ್ಟಿದ್ದೇನೆ.ಮಾತು ತಪ್ಪಿದರೆ ಅವರಿಗೆ ನನ್ನ ಮಗನ ಮೇಲಿರೋ ವಿಶ್ವಾಸ ಹೋಗಿಬಿಡುತ್ತದೆ (ನನ್ನ ಮೇಲಿನ ಅವರ ವಿಶ್ವಾಸದ ಬಗ್ಗೆ ನನಗೆ ಭಯವಿಲ್ಲ, ಯಾಕೆ ಅಂದ್ರೆ ಅವರಿಂದ ನನಗಾಗಲಿ, ನನ್ನಿಂದ ಅವರಿಗಾಗಲಿ ಏನೂ ಉಪಯೋಗ (ಉಪಯೋಗ ಅಂದ್ರೆ ಅನುಕೂಲ) ಇಲ್ಲ)..ಸರಿ ನಡೆದೇ ಹೊರಟೆ. ಹೋಗೋ ಅಷ್ಟರಲ್ಲಿ ಸ್ವಲ್ಪ ಟೆನ್ಶನ್ಗೆ ಮತ್ತೊಂದಷ್ಟು ಬಿಸಿಲಿಗೆ ಮತ್ತಷ್ಟು ಉದ್ವೇಗಗೊಂಡಿದ್ದೆ. ಕೆಮಿಸ್ಟ್ರಿ ವಿಭಾಗದ ಹತ್ತಿರ ಹೋದೆ ." __ ಇದ್ದಾರಾ" ಅಂದೆ. ಅವರು ಇದ್ರು. ನನಗಿಂತ ಒಂಚೂರು ಚಿಕ್ಕವರೆ ."ನಾನು ಕಾರ್ತಿ ಅಮ್ಮ" ಅಂದೇ..ತುಂಬಾ ವಿನಮ್ರತೆಯಿಂದಲೆ 'ಮೇಡಂ ಅಷ್ಟೊಂದು ಟೆನ್ಶನ್ ಎಲ್ಲ ತಗೊಂಡು ಯಾಕೆ ಬರೋಕೆ ಹೋದ್ರಿ , ನಾಳೆ ಕೂಡ ಬಂದಿದ್ರೆ ಆಗೋದು, ನೀರು ಬೇಕಾ ಮೇಡಂ' ಅಂದ್ರು. ಮತ್ತೊಂದಿಬ್ಬರು ಉಪನ್ಯಾಸಕರೂ ಇದ್ರು. 'ಇಲ್ಲ ಥ್ಯಾಂಕ್ಸ್, ಪ್ಲೀಸ್ ಏನ್ ವಿಷ್ಯ ಹೇಳಿ ? ಎಂದೂ ಶಾಲೆಯಿಂದಾಗಲಿ ಕಾಲೇಜ್ನಿಂದಾಗಲಿ ಯಾವುದೇ ತರದ "ನಿಮ್ಮ ಮಗನ ವಿಷ್ಯ ನಿಮ್ಮ ಜೊತೆ ಮಾತನಾಡಬೇಕು" ಅನ್ನೋ ತರ ದೂರು ಬಂದಿಲ್ಲ .. ಏನು ಹೇಳಿ?" ಅಂದೆ. 'ಏನಿಲ್ಲ ಈ ಸಾರಿ ನಡು ವಾರ್ಷಿಕ ಪರೀಕ್ಷೆಯಲ್ಲಿ ಕಡಿಮೆ ಅಂಕ ತಗೊಂಡಿದ್ದಾನೆ. ಈ ಸಾರಿ ೨ನೇ ಪಿಯುಸಿ ಅಲ್ವ ಅದ್ಕೆ ಪೇರೆಂಟ್ಸ್ಗೆ ಹೇಳೋಣ ಅಂತ ಕರೆ ಮಾಡಿದ್ದು ಅಷ್ಟೇ ' ಅಂತ ಅವನ ಉತ್ತರ ಪತ್ರಿಕೆ ಕೊಟ್ರು.. ಉತ್ತರಪತ್ರಿಕೆ ನೋಡಿದೆ ಎಲ್ಲಾ ಅಲಕ್ಷ್ಯತೆಗೆ ಹೋದ ಅಂಕಗಳೇ !! ಬಿಸಿಲಲ್ಲಿ ನಡೆದು ಬಂದಿದ್ದಕ್ಕೋ , ಟೆನ್ಶನ್ಗೋ , ಇಲ್ಲ ಇವನ ಉತ್ತರ ಪತ್ರಿಕೆ ನೋಡಿಯೋ ಅಂತೂ ಕಣ್ಣು ತುಂಬಿ ಇನ್ನೇನು ಹರಿಯುವಂತಾಯ್ತು. ಅಷ್ಟ್ರಲ್ಲಿ ಕಾರ್ತಿನೂ ಕರೆಸಿದ್ದರು . ಅವನು ಬರುವುದಕ್ಕೂ ನನ್ನ ಕಣ್ಣು ತುಂಬಿ ನೀರು ಹೊರ ಬರುವುದಕ್ಕೂ ಸರಿ ಹೋಯ್ತು (ನಾ ದಿನಕ್ಕೆ ಒಂದು ಸಾರಿನಾದ್ರೂ ಸಣ್ಣ ವಿಷ್ಯಕ್ಕಾದ್ರೂ ಸರಿ ಅತ್ತುಬಿಡೋದು ಅದಕ್ಕೆ ಯಾರಾದ್ರೂ ಒಂದೆರಡು ತರ್ಲೆ ಡೈಲಾಗ್ ಹೊಡೆದರೆ ಕ್ಷಣಗಳಲ್ಲಿ ನಕ್ಕುಬಿಡೋದು ಮಾಮೂಲು. ಅದಕ್ಕೆ ಯಾರು ತಲೆ ಕೆಡಿಸಿಕೊಳ್ಳೋದಿಲ್ಲ.. ಅದನ್ನ ಬಿಟ್ಟು ದೈಹಿಕ ಅಥವ ಮಾನಸಿಕ ನೋವಿಗಾಗಲಿ ನಾನು ಮಕ್ಕಳ ಮುಂದಾಗಲಿ ಮತ್ಯಾರ ಮುಂದಾಗಲಿ ಅಳೋದಿಲ್ಲ ಹಾಗೆ ಅಳೋದನ್ನ ಮಕ್ಕಳು ನೋಡಿಲ್ಲ ಕೂಡ !!) ಒಂದೇ ಕ್ಷಣದಲ್ಲಿ ಸಾವರಿಸಿಕೊಂಡೆ. ಆ ಉಪನ್ಯಾಸಕರು ಕಾರ್ತಿಗೆ ಒಂದೆರಡು ಮಾತು ಹೇಳಿದ್ರು , ನಾನು ಸುಮ್ನೆ ಅವನ ಮುಖ ನೋಡಿ ;ನಿನ್ನ ಪೇಪರ್ ಒಂದ್ಸಾರಿ ನೋಡು ಮಗ" ಅಂತ ಹೇಳಿ ಉಪನ್ಯಾಸಕರಿಗೆ ಧನ್ಯವಾದ ಹೇಳಿ ಓದಿಸ್ತೀನಿ ಅಂತ ಹೇಳಿ ಹೊರಟೆ. ಅವರೂ ಕೂಡ ಬಂದಿದ್ದಕ್ಕೆ ಥ್ಯಾಂಕ್ಸ್ ಮೇಡಂ ಅಂದ್ರು .. ಬಂದ್ಬಿಟ್ಟೆ . 
ಸಂಜೆ ಎಂದಿನಂತೆ ಕಾರ್ತಿ ಬಂದ. 'ಅದನ್ನು' ಬಿಟ್ಟು ಒಂದೆರಡು ಮಾತುಗಳಾಡಿದೆವು . ಮಂಜುಗೆ ಹೇಳಲಿಲ್ಲ ಹೇಳಿದ್ರೆ ಟೆನ್ಶನ್ ಪಾರ್ಟಿ ಅವ್ರು ಅಂತ :) ರಾತ್ರಿ ಅಡುಗೆ ಮನೆಯಲ್ಲಿ ಪಾತ್ರೆ ತೊಳೀತಾ ಇದ್ದೆ. ಮಗ 'ಸಾರಿ ಮಾ, ನನ್ನಿಂದ ನೀನು ಅವರ ಮುಂದೆ ಅತ್ತಿದ್ದು ಬೇಜಾರ್ ಆಯ್ತು .ಇನ್ಯಾವತ್ತೂ ಹಿಂಗೇ ಆಗೋಲ್ಲ" ಅಂದ. ನನಗೂ ಅಷ್ಟರಲ್ಲಿ ನನ್ನ "ಅನಗತ್ಯ" excitement ಬಗ್ಗೆ ಒಂದಷ್ಟು ಬೇಸರವಾಗಿತ್ತು. ಆದ್ರೂ ೧೪ ವರ್ಷಗಳ ವಿದ್ಯಾರ್ಥಿಜೀವನದಲ್ಲಿ ಒಮ್ಮೆಯೂ ಯಾರು ದೂರದ ಮಗ ಅಂದು ದೂರಿಸಿಕೊಂಡ ಬಗ್ಗೆ ಬೇಸರವಿತ್ತು. 
ಇದು ಆಗಿ ಮೂರು ವರ್ಷ. ಇಂದಿಗೂ ಮಗ ನೆನಪಾದಾಗ ಅದರ ಬಗ್ಗೆ ವಿಷಾದಿಸುತ್ತಾನೆ ( ಅಮ್ಮ ಸ್ವಲ್ಪ ತಮಾಷೆ ಮೂಡಲ್ಲಿದ್ದಾಳೆ ಅನಿಸಿದಾಗ ಆ ಮೇಷ್ಟ್ರನ್ನ ಬೈತಾನೆ... ಆವೈದ ನಮ್ಮಮ್ಮನ್ನ ಅಳಿಸಿ ಬಿಟ್ಟ ಅಂತ !!) 
ತುಂಬಾನೇ ಸಣ್ಣ ವಿಷ್ಯ ಮತ್ತು ವಿಷಾದ ಅಲ್ವೇ... ಆದ್ರೂ ಆ ವಿಷಾದ ಅವನಿಗೆ ಪಾಠ ಕಲಿಸಿದ್ರೆ ಸಾಕು ಅಷ್ಟೆ
ನೆನ್ನೆ ಕೃತಿ, ಮಂಜು,ನಾನು ಒಂದಷ್ಟು ಕೆಲಸಗಳ ನಿಮಿತ್ತ ಹೊರಗೆ ಹೋಗಿದ್ವಿ .ಕೆಲಸ ಮುಗ್ಯೋ ವೇಳೆಗೆ ಮಧ್ಯಾಹ್ನ ಆಗ್ಹೋಯ್ತು , ಸರಿ ಪುಟ್ಟಿನೂ ನಮ್ ಜೊತೇನೆ ಇದ್ದಾಳಲ್ಲ ಅಲ್ಲೇ ಎಲ್ಲಾದ್ರೂ ಊಟ ಮಾಡೋಣ ಇನ್ ಮನೆಗೆ ಹೋಗಿ ಮಾಡೋ ಅಷ್ಟ್ರಲ್ಲಿ ಲೇಟ್ ಆಗುತ್ತೆ ಅಂತ ಅಲ್ಲೇ ಒಂದ್ ಕಡೆ ಊಟಕ್ಕೆ ಹೋದ್ವಿ . (ನನಗೆ ಮಂಜುಗೆ ಇಂತಹ ಹೋಟೆಲ್ಲೇ ಬೇಕು ಅಂತೇನಿಲ್ಲ . ಯಾವುದಾದ್ರೂ ಸಣ್ಣ ಪೆಟ್ಗೆ ಅಂಗಡಿ ಸಿಕ್ಕಿದ್ರು ಟೀನೋ ಜ್ಯೂಸೊ ಕುಡಿದು ಮನೆಗೆ ಬಂದ್ ಬಿಡ್ತೀವಿ with no prejudice.. ಆದ್ರೆ ಪುಟ್ಟಿ ಇದ್ಲಲ್ಲ , ಅದೂ ಇತ್ತೀಚೆಗೆ ಅವಳು ನಮ ಜೊತೆ ಬರೋದು ಅಪರೂಪ ಅಂತ ಹೋಟೆಲ್ಗೆ ಹೋದ್ವಿ ) ಸರಿ ಪುಟ್ಟಿ ಊಟ ತಗೊಂಡಳು, ಮಂಜು ಪಲಾವ್ ತಗೊಂಡ್ರು, ನಾ ಮೊಸರನ್ನ(ಅದು ನನ್ನ fav ಮಧ್ಯಾಹ್ನದ ಊಟ) ತಗೊಂಡೆ .. ಈ ತರಕಾರಿನಾ ? ಇದು ಬೇಡ ಅದು ಬೇಡ ಅಂತಲೇ ಒಂಚೂರು ತಿಂದ್ಳು. ಈ ಸ್ವೀಟ್ ನೀ ತಿನ್ನು ಅಂದ್ಳು , ಮೊಸರು ಅವರಪ್ಪನಿಗೆ ಕೊಟ್ಲು .. ಅಂತೂ ತಿಂದ್ಳು !!
ರಾತ್ರಿ ಊಟ ಮಾಡ್ತಾ ಇದ್ವಿ 'ಮಧ್ಯಾಹ್ನ ತಿಂದ ಆ ಸ್ವೀಟ್ ಅಲ್ಲಿ ಸ್ವೀಟೆ ಇರ್ಲಿಲ್ಲ ಕಣ್ ಮಗ' ಅಂದೇ ಪುಟ್ಟಿಗೆ .." ಅದ್ಕೆ ನಾ ನಿನಗೆ ಕೊಟ್ಟಿದ್ದು !!!' ಅಂದ್ಳು. 'ಅಯ್ಯೋ ಕಪಿ, ಟೇಸ್ಟ್ ಮಾಡಿ ಕೊಟ್ಯಾ !!? ನಾನು ನನ್ ಗಂಡ ಹೋಟೆಲ್ಗೆ ಊಟಕ್ಕೆ ಹೋದ್ರೆ, ನನ್ ಗಂಡ ಊಟ ತಗೊಂಡ್ರೆ ಮೊದಲು ಸ್ವೀಟ್, ಸೊಪ್ಪಿನ ಪಲ್ಯ ಇದ್ರೆ ನನಗೆ ಕೊಟ್ಬಿಡ್ತಾನೆ ಗೊತ್ತಾ, ನೀ ಸರಿ ಇಲ್ಲಾ ಮಗ " ಅಂದೆ 'U kno Maa, ಮಹಾರಾಣಿ ಊಟ ಮಾಡೋಕೆ ಮೊದ್ಲು ಯಾರಾದ್ರೂ ಊಟ ಸರಿ ಇದ್ಯಾ , ವಿಷಗಿಷ ಹಾಕಿದ್ದಾರೆ ಅಂತ ಪರೀಕ್ಷೆ ಮಾಡಿ ಕೊಡ್ತಾರೆ, ನೀ ಹಂಗೆ ನನಗೆ , i Love U kano " ಅಂತ ಕಿವಿ ಮೇಲೆ ಹೂವಿಟ್ಲು.. " ನಿನ್ನ ಗಂಡಂಗೆ ಸ್ವೀಟ್ಸ್ ಇಷ್ಟ ಇಲ್ಲ ಅದ್ಕೆ ಮೊದ್ಲೇ ಕೊಟ್ಟಬಿಡ್ತಾನೆ ಬಿಡು ಅದೇನ್ ಮಹಾ 'ಅಂದ್ಳು 
ಮಾತಾಡೋಕೆ ಇರೋ ಅಷ್ಟ್ ಬುದ್ದಿ ಓದೋದ್ರಲ್ಲಿ ತೋರಿಸಿದ್ರೆ ನನ್ ಐಕ್ಳು ಇಷ್ಟ್ ಹೊತ್ತಿಗೆ ಎಲ್ಲೋ ಇರ್ತಿದ್ವು ..... 
ಮಾತನಾಡುವುದು ಕೂಡಾ ಕಲೆ ಅಂತೆ . ನನಗಂತೂ ಬರೋದಿಲ್ಲ .. ಇವಕ್ಕೆ ಬಂದಿದೆ ಅಂತ ಖುಷಿ ಪಡ್ಬೇಕು ಅಷ್ಟೇಯಾ :))))))

Wednesday 1 February 2017

ಚಿಕ್ಕವರಿದ್ದಾಗ ಬಸ್, ರೈಲು, ಅಥವಾ ಕಾರಲ್ಲಿ ಹೋಗೋವಾಗ ಗಿಡಮರಗಳು, ರಸ್ತೆ , ಅಲ್ಲೆಲೋ ಕಾಣುವ ವಿಂಡ್ಮಿಲ್, ಎಲ್ಲಾ ಹಿಂದಕ್ಕ್ಕೆ ಹೋದಂತೆ ಅನಿಸ್ತಾ ಇತ್ತು. ಹಾಗೆಲ್ಲ ಅದು ಹಿಂದೆ ಹೋದಂತೆ ಅದೇನೋ ವಿಸ್ಮಯ !! ಅದ್ಯಾಕೆ ಹಾಗೆ ಹಿಂದಕ್ಕೆ ಹೋಗ್ತಾ ಇದೆ ಅಂತ. 'ನಾವ್ ಮುಂದಕ್ಕೆ ಹೋಗ್ತಾ ಇದೀವಲ್ಲ ಅದಕ್ಕೆ ಹಾಗೆ ಅನಿಸುತ್ತೆ ಮಗ ' ಅಂತ ಅಮ್ಮ ಹೇಳಿದ್ರೂ ಅದೇನೋ ಅರ್ಥವಾಗದಂತೆ. ಒಂದಷ್ಟು ದೊಡ್ಡವರಾಗಿ ವಿಜ್ಞಾನ ಓದ್ತಾ ಓದ್ತಾ ಮನಸ್ಸು ಅದಕ್ಕೆ ತೆರದುಕೊಳ್ತಾ ಹೋಯ್ತು.
ಚಾಮುಂಡಿ ಬೆಟ್ಟಕ್ಕೆ ಹೋಗ್ತಾ, ಕಾರ್ ಡ್ರೈವ್ ಮಾಡ್ತಾ ಮಾಡ್ತಾ, ಮಂಜು ಅಂದೆಂದೋ ಲೂನಾದಲ್ಲಿ ಚಾಮುಂಡಿಬೆಟ್ಟಕ್ಕೆ ಕರ್ಕೊಂಡು ಹೋಗಿದ್ದನ್ನ ಸ್ವಾರಸ್ಯವಾಗಿ ರೋಮ್ಯಾಂಟಿಕ್ ಆಗಿ ಹೇಳ್ತಾ ಇದ್ರೆ ಬೆಟ್ಟದಿಂದ ಇಳಿಯುವಾಗ ಸಿಗುವ ಅದೇ ಗಿಡಮರಗಳಂತೆ ಹಿಂದಕ್ಕೆ ಹೋದ ಕೆಲವು ಸಮಯಗಳೂ ಬರುವಂತಿದ್ದರೆ ಎನಿಸಿದ್ದು ಸುಳ್ಳಲ್ಲ !! And then he said 'ನಾ ರೆಡಿ !!ಲೂನದಲ್ಲಿ ತಾನೇ ಕರ್ಕೊಂಡ್ ಹೋಗ್ತೀನಿ ಬಿಡು!! ಆಗ ಕೂಡ ಎಲ್ರೂ 'ಇದೇನ್ ಹಿಂಗ್ ಸುತ್ತುತ್ತವೆ ಇವೆರಡು ಅಂತ ನಮ್ಮನ್ನೇ ನೋಡ್ತಿದ್ರು !! ಈಗ್ಲೂ ನಮ್ಮನ್ನೇ ನೋಡ್ತಾರೆ ಇವ್ರಿಗೇನ್ ಬಂತು "ಈಗ" ಲೂನಾದಲ್ಲಿ ಸುತ್ತೋಕೆ ಅಂತ'!!! And I smile as ever:)))))))))))))
ಒಂದು ಹಳೆಯ ಕನ್ನಡ ಚಲನ ಚಿತ್ರ ಸಾಕ್ಷಾತ್ಕಾರ. ಅನೇಕ ದಿಗ್ಗಜರು ಆ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ .. ಪುಟ್ಟಣ ಕಣಗಾಲ್, ನಾಗೇಂದ್ರ ರಾಯರು, ಪೃಥ್ವಿ ರಾಜ್ ಕಪೂರ್ , ರಾಜಕುಮಾರ್, ಜಮುನ, ಬಾಲಣ್ಣ , ವಜ್ರಮುನಿ, ಪಿ. ಬಿ. ಶ್ರೀನಿವಾಸ್, ಸುಶೀಲ , ಎಮ್. ರಂಗರಾವ್, ಕಣಗಾಲ್ ಪ್ರಭಾಕರ ಶಾಸ್ತ್ರಿ ಇತ್ಯಾದಿ .... ಹಾಡುಗಳು ಹಾಗು ಚಿತ್ರ ಮನೆಯ ಮಕ್ಕಳ ಜೊತೆ ಮುಜುಗರ ಇಲ್ಲದೆ ಕುಳಿತು ನೋಡಬಹುದು ... ಟಿವಿ ಅಲ್ಲಿ ಬಂದಾಗೆಲ್ಲ ತಪ್ಪದೇ ನೋಡೋ ಚಿತ್ರದಲ್ಲಿ ಇದೂ ಒಂದೂ .......ಈಗ ಇಲ್ಲಿ ಇದನ್ನು ಹೇಳೋದಕ್ಕೆ ಕಾರಣ ಅಂದ್ರಾ ...ಈ ಚಿತ್ರದಲ್ಲಿ ಪೃಥ್ವಿ ರಾಜ್ ಕಪೂರ್ ಒಂದು ಡೈಲಾಗ್ ಹೇಳುತ್ತಾರೆ .... 'ನನ್ನ ಮನೆಯ ಬಾಗಿಲು ಬರುವವರಿಗೆ ಸದಾ ಕಾಲ ಸ್ವಾಗತ (ತೆರೆದಿರುತ್ತದೆ ).... ಹೋಗುವವರಿಗೆ ನಮಸ್ಕಾರ ...!!" ಹೀಗೆ ಅರ್ಥ ಬರುವ ಮಾತುಗಳು ...... 
ಈ ಮಾತುಗಳು ಎಷ್ಟು ಇಷ್ಟ ಆಗುತ್ತೆ ಅಂದ್ರೆ ...... wen in such situations, ..........ಬಹಳಷ್ಟು ಸಾರಿ ನನಗೆ ನಾನೇ ಈ ಮಾತುಗಳನ್ನ ಹೇಳಿಕೊಳ್ಳೋದು ಇದೆ ... be it in a friendship or between relatives.... ಹಾಗೆ ನನಗೆ ನಾನೇ ಸಮಾಧಾನ ಮಾಡಿಕೊಳ್ಳೋದೂ ಇದೆ .... ಒಂದು ಸಿನಿಮಾ ಮಾತು ನಿಜಕ್ಕೂ ಇಷ್ಟು ಪ್ರಭಾವ ಬೀರಬಲ್ಲುದೇ ??? ಗೊತ್ತಿಲ್ಲ ...
.But I say it to myself for a few times and wen i am right................
ಅಮ್ಮ ಮಗ ಜಗಳ ಆಡಿದರು .. ತಮ್ಮದಲ್ಲದ ವಿಷಯಕ್ಕೆ, ಸಲ್ಲದ ಪ್ರತಿಷ್ಠೆಗೆ ಬಿದ್ದು ಜಗಳ ಆಡಿದರು .... ಮಾತು ನಿಂತು ಹೋಗಿತ್ತು .. ಸರಿ ಗೊತ್ತೇ ಇದೆಯಲ್ಲ ತಪ್ಪು ಯಾರದೇ ಇದ್ದರೂ ಅದು ಬೀಳೋದು ಸೊಸೆಯ ಮೇಲೆಯೇ.. ಸೊಸೆಯ ಜೊತೆ ಕೂಡ ಮಾತು ನಿಂತು ಹೋಯ್ತು .. ಅಮ್ಮ ಮಗನ ಮನೆಗೆ ಬರೋದು ನಿಂತು ಹೋಯ್ತು .. ವಾರಕ್ಕೆ ಒಂದೆರಡು ಬಾರಿ ಅಮ್ಮನನ್ನ ನೋಡಿ ಬರುತ್ತಿದ್ದ ಮಗ ಕೂಡ ತನ್ನದಲ್ಲದ ತಪ್ಪಿಗೆ ತಾನೇಕೆ ಬಗ್ಗಲಿ ಎಂದು ಹೋಗೋದೇ ಬಿಟ್ಟ ...ಸುಮ್ಮನೆ ಬೇಡದ ವಿರಸ ಬೇಡ ಎಂದ ಹೆಂಡತಿಗೆ ತಲೆ ಕೆಡಿಸಿಕೊಳ್ಳದೆ ಇರಲು ಸಲಹೆ ನೀಡಿದ... !! ಹಿರಿಯರ ಪ್ರತಿಷ್ಠೆಗೆ ನಲುಗಿದ್ದು ಪುಟ್ಟ ಮಕ್ಕಳ ಮನಸ್ಸುಗಳು ...ಎಲ್ಲೋ ಅಲ್ಲೊಮ್ಮೆ ಇಲ್ಲೊಮ್ಮೆ ಸಿಕ್ಕಾಗ ಮಾತಾಡುವುದು ಬಿಟ್ಟರೆ ಶಾಲೆ, ಆಟ ಪಾಠ ಇಷ್ಟೇ ಬದುಕು ಎಂಬಂತೆ ಆಗಿಹೋಯ್ತು ..... ಹಬ್ಬಕ್ಕೆ ಒಂದಾಗಲಿಲ್ಲ ... ನೆಂಟರ ಸಾವಿಗೆ ಹೋದರೂ ಅಮ್ಮ ಮಗ ಮಾತಾಡಲಿಲ್ಲ .... ಇಬ್ಬರ ಮನದಲ್ಲೂ ನೋವಿನ ಗೆರೆಗಳು .... ಮಾತನಾಡಲು ಹುಂಬ ಪ್ರತಿಷ್ಠೆ .....ಮಾತಾಡಲು ವೇದಿಕೆಗಾಗಿ ಕಾದೇ ಕಾದರು ....ಕಡೆಗೊಮ್ಮೆ ಮೌನ ಮುರಿದು ಮಾತಾಡಿದರು .... ಅಮ್ಮ ಮಗ ಒಂದಾದರು ..ಅಮ್ಮ ಅತ್ತಳು, ನಕ್ಕಳು , ಮಗ ಅಮ್ಮನನ್ನ ತಬ್ಬಿ ಸಂತೈಸಿದ ... ಮಕ್ಕಳು ನಕ್ಕರು ... ಎಲ್ಲರಿಗೂ ಖುಷಿ .............'ಮನೆಗೆ ಬಾಮ ' ಸೊಸೆಯನ್ನ ಕರೆದಳು ಅತ್ತೆ .... ಸೊಸೆ ಮುಖ ನೋಡಿದಳು .....ಆ ನೋಟದ ನೋವಿಗೆ ಆ ನೋಟದ ಪ್ರಶ್ನೆಗಳಿಗೆ ಅತ್ತೆ ಉತ್ತರಿಸದಾದಳು .... 'ಒಂದೆರಡು ಮಾತಿದೆ ಆ ಮಾತಿಗೆ ಉತ್ತರ ಸಿಕ್ಕರೆ ನಾ ಮನೆಗೆ ಬರುವೆ ಅಮ್ಮ .." ಅಂದ್ಲು .... ಗಂಡನ ಮೊಗದಲ್ಲಿ ಈಗ ಇದೆಲ್ಲ ಬೇಕಾ ಎಂಬ ಪ್ರಶ್ನೆ ... ಮಕ್ಕಳ ಮೊಗದಲ್ಲಿ ಅಮ್ಮ ಏನ್ ಹೇಳ್ತಾಳೋ ಅನ್ನೋ ಭಯ ... ವಾರಗಿತ್ತಿಯ ಮಕ್ಕಳ ಮೊಗದಲ್ಲಿ ಮತ್ತೆ ದೊಡ್ಡಮ್ಮ ಅಕ್ಕ ಅಣ್ಣನನ್ನ ಕರೆದುಕೊಂಡು ಹೋಗಿಬಿಡ್ತಾಳೇನೋ ಅನ್ನೋ ನೋವು .......... 'ಅಮ್ಮ ನೀವು ಅಮ್ಮ ಮಗ ಅಲ್ಲದೆ , ನಾನು ನೀವು ಜಗಳ ಆಡಿದ್ದರೆ ; ನಿಮ್ಮ ಮಗನ ಜೊತೆ ಮಾತಾಡೋದು ಬಿಡ್ತಾ ಇದ್ರಾ ?? .....ಅವರದಲ್ಲದ ತಪ್ಪಿಗೆ ನನ್ನ ಮಕ್ಕಳು ನೋವು ಅನುಭವಿಸಿದ್ದು ಸರಿನಾ ??? ... ಈಗ ಕೂಡ ನೀವು ನಿಮ್ಮ ಮಗನಿಗಾಗಿ ಕರಿತಾ ಇದ್ದೀರಾ ಹೊರತೂ ................ " ಅನ್ನೋ ಪ್ರಶ್ನೆಗಳೆಲ್ಲಾ ಮನದ ಮೂಲೆಯಲ್ಲೇ ಹುದುಗಿಸಿ ಬಿಟ್ಟಳು .......... ಮತ್ತೊಮ್ಮೆ ಭೂಮಿಯಾಗಿ ಬಿಟ್ಟಳು ............ಅಭಿಮಾನ!!!....... ನಕ್ಕು ಬಿಟ್ಟಳು ...ನಗುವಿನ ಜೊತೆ ಬಂದ ಕಣ್ಣ ಹನಿ ಯಾರಿಗೂ ಕಾಣಲೇ ಇಲ್ಲ ............... !!
ಮನೆ ಅಂದ ಮೇಲೆ ಮಾತು ಬರುತ್ತೆ ಹೋಗುತ್ತೆ . ಸಣ್ಣ ಮಾತುಗಳು ಅತ್ತೆ ಸೊಸೆಯರ ನಡುವೆ ಇದ್ದೆ ಇರುತ್ತದೆ ..ಅದಕ್ಕೆ ನಮ್ಮ ಮನೆಯೂ ಹೊರತಲ್ಲ...ಬಹಳಷ್ಟು ಸಾರಿ ನಾವು ಮೂರೂ ಜನ ಸೊಸೆಯಂದಿರು ಅಯ್ಯೋ ಅವರ ಬುದ್ದಿ ಗೊತ್ತಲ್ಲ ಮತ್ತ್ಯಾಕೆ ಹೆಚ್ಚು ತಲೆ ಕೆಡಿಸಿಕೊಳ್ಳೋದು ಅಂತ ಸುಮ್ಮನಾಗಿ ಬಿಡ್ತೀವಿ , ಆದ್ರೂ ಕೆಲವೊಮ್ಮೆ ಮನಸ್ಸಿನ ಪರಿಸ್ಥಿತಿಗೆ ಅನುಗುಣವಾಗಿ ಕೆಲವೊಮ್ಮೆ ವಯಸ್ಸಿಗೆ ಬಂದ ಮಕ್ಕಳಿರುವ ನಾವು ಅನಿಸಿಕೊಳ್ಳೋದಾ ಅನ್ನೋ ಸಿಟ್ಟಿಗೆ ಏನಾದ್ರು ಅಂದು ಬಿಡೋದು ಉಂಟು . ಮೊನ್ನೆ ಅತ್ತೆ ಬಂದಿದ್ರು ಏನೋ ಸಣ್ಣ ಪುಟ್ಟ ಮಾತುಗಳು ಬಂದ್ವು ಅಲ್ಲಿ ಅಂತ ಬೇಸರಗೊಂಡಿದ್ದರು.. ಅವರಮ್ಮನಿಗೆ ಒಂದಷ್ಟು ಸಮಾಧಾನ ಬುದ್ದಿ ಹೇಳಿದ ಮೇಲೆ , ಅತ್ತೆ ಮಲಗಲು ಹೋದ ಮೇಲೆ ಮಂಜು ಹೇಳಿದ್ರು "ಅವ್ರ ಕಥೆ ಗೊತ್ತಲ್ವ ಸುನಿ ನಿನಗೆ.. ೨೫ ವರ್ಷದಿಂದ ನೋಡ್ತಾನೆ ಬಂದಿದ್ದೀಯ, ನಿಮ್ಮ ಮೂರು ಜನರ(ವಾರಗಿತ್ತಿಯರು) ಬಗ್ಗೆ ಒಂದ್ ಮಾತು ಇಲ್ಲ .. ನಮಗೆಲ್ಲ ತಾಯಂದಿರು ನೀವು...'
ಹಾಗೆ ಮಾತಾಡ್ತಾ ಮಾತಾಡ್ತಾ .... 'ದಿನಾ ಅದೇ ಬಾವಿಯಲ್ಲಿ ನೀರ್ ತೆಗಿತಾ ಇದ್ರೆ ಬಾವಿಯ ಆಳ ಗೊತ್ತಿರುತ್ತದೆ ಕಣಮ್ಮ! ಹಗ್ಗ ಇಷ್ಟಕ್ಕೆ ನಿಂತರೆ ಬಿಂದಿಗೆ ಮುಳುಗುತ್ತೆ ,ನೀರು ಸಿಗ್ತದೆ ಅಂತ ! ಹೊಸದಾಗಿ ಬಾವಿ ಹತ್ರ ಬಂದವ್ರಿಗೆ ನೀರಿನ ಆಳ ತಿಳಿಯೋದಿಲ್ಲ ! ನೀನೂ ತಿಳ್ಕೋ ಬದುಕೋದು ಹೇಗೆ ಅಂತ !! ನಿನ್ ಮಕ್ಕಳು ನಿನ್ನನ್ನ ಹುಟ್ಟಿದಾಗಿಂದ ನೋಡಿರ್ತಾರೆ. ನೀ ಬೇಸರಗೊಂಡು ಮಾತಾಡಿದ್ರೆ ನಿನ್ ಮಕ್ಕಳಿಗೆ ನಮ್ಮಮ್ಮ ಹಿಂಗೆ ಅಂತ ಗೊತ್ತಿರುತ್ತೆ ಆದ್ರೆ ಸೊಸೆ ಅಥ್ವ ಅಳಿಯ ನಿನ್ನ ಆಗಷ್ಟೇ ನೋಡ್ತಾ ಇರ್ತಾರೆ, ಅವ್ರು ಬೇರೆ ಕಡೆಯಿಂದ ಬಂದು ನಿನ್ನ ಮನೆಗೆ ಸೇರ್ತಾರೆ... ಮಾತಾಡುವಾಗ ಸ್ವಲ್ಪ ತಡೆದು ಮಾತನಾಡು.. ಅಷ್ಟರಲ್ಲಿ ನಿನಗೇ ಗೊತ್ತಾಗಿರುತ್ತೆ ಆ ಮಾತು ಅಗತ್ಯನಾ ಇಲ್ವಾ ಅಂತ .. 'ನನ್ನ' ಮನೆ ಇದು 'ಹೀಗೆ' ಇರಬೇಕು ಅಂತ ಅನ್ಕೊಬೇಡ..!!! ನಿನ್ನ ಕಾಲ, ನಿನ್ನ ಬದುಕು, ನೀ ಬದುಕ ನೋಡೋ ರೀತಿಯಲ್ಲೇ ಎಲ್ಲಾರೂ ನೋಡಬೇಕು ಅಂದಾಗಲೇ ಇದೆಲ್ಲ ಬರೋದು.... ಅಂತೆಲ್ಲ ಹೇಳ್ತಾ ಹೋದ್ರು !!! "ಅಯ್ಯೋ ಶಿವ, ಒಂದ್ ಪುಸ್ತಕ ಓದೋದಿಲ್ಲ(ಓದಿಲ್ಲ) ಆದ್ರೂ ಈ ಪಾಟಿ ಬುದ್ದಿ ಎಲ್ಲಿರುತ್ತೋ ಕಾಣೆ'!!!
ಮನಸ್ಸು ಒಮ್ಮೆಮ್ಮೆ ಮಳೆಯ ನಂತರ ಮೂಡೋ ಕಾಮನಬಿಲ್ಲಿನ ಚಿತ್ತಾರದ ಬಾನಿನಂತೆ... ಪಾಠ ಕಲಿಯೊದಕ್ಕೆ ಪುಸ್ತಕವೇಕೆ ಇಂತಹ ಜೀವದ ಗೆಳೆಯನಿದ್ದರೆ ಅನ್ನೋ ಹಾಗೆ :))))
ಮನೆ ಅಂದ ಮೇಲೆ ಮಾತು ಬರುತ್ತೆ ಹೋಗುತ್ತೆ . ಸಣ್ಣ ಮಾತುಗಳು ಅತ್ತೆ ಸೊಸೆಯರ ನಡುವೆ ಇದ್ದೆ ಇರುತ್ತದೆ ..ಅದಕ್ಕೆ ನಮ್ಮ ಮನೆಯೂ ಹೊರತಲ್ಲ...ಬಹಳಷ್ಟು ಸಾರಿ ನಾವು ಮೂರೂ ಜನ ಸೊಸೆಯಂದಿರು ಅಯ್ಯೋ ಅವರ ಬುದ್ದಿ ಗೊತ್ತಲ್ಲ ಮತ್ತ್ಯಾಕೆ ಹೆಚ್ಚು ತಲೆ ಕೆಡಿಸಿಕೊಳ್ಳೋದು ಅಂತ ಸುಮ್ಮನಾಗಿ ಬಿಡ್ತೀವಿ , ಆದ್ರೂ ಕೆಲವೊಮ್ಮೆ ಮನಸ್ಸಿನ ಪರಿಸ್ಥಿತಿಗೆ ಅನುಗುಣವಾಗಿ ಕೆಲವೊಮ್ಮೆ ವಯಸ್ಸಿಗೆ ಬಂದ ಮಕ್ಕಳಿರುವ ನಾವು ಅನಿಸಿಕೊಳ್ಳೋದಾ ಅನ್ನೋ ಸಿಟ್ಟಿಗೆ ಏನಾದ್ರು ಅಂದು ಬಿಡೋದು ಉಂಟು . ಮೊನ್ನೆ ಅತ್ತೆ ಬಂದಿದ್ರು ಏನೋ ಸಣ್ಣ ಪುಟ್ಟ ಮಾತುಗಳು ಬಂದ್ವು ಅಲ್ಲಿ ಅಂತ ಬೇಸರಗೊಂಡಿದ್ದರು.. ಅವರಮ್ಮನಿಗೆ ಒಂದಷ್ಟು ಸಮಾಧಾನ ಬುದ್ದಿ ಹೇಳಿದ ಮೇಲೆ , ಅತ್ತೆ ಮಲಗಲು ಹೋದ ಮೇಲೆ ಮಂಜು ಹೇಳಿದ್ರು "ಅವ್ರ ಕಥೆ ಗೊತ್ತಲ್ವ ಸುನಿ ನಿನಗೆ.. ೨೫ ವರ್ಷದಿಂದ ನೋಡ್ತಾನೆ ಬಂದಿದ್ದೀಯ, ನಿಮ್ಮ ಮೂರು ಜನರ(ವಾರಗಿತ್ತಿಯರು) ಬಗ್ಗೆ ಒಂದ್ ಮಾತು ಇಲ್ಲ .. ನಮಗೆಲ್ಲ ತಾಯಂದಿರು ನೀವು...'
ಹಾಗೆ ಮಾತಾಡ್ತಾ ಮಾತಾಡ್ತಾ .... 'ದಿನಾ ಅದೇ ಬಾವಿಯಲ್ಲಿ ನೀರ್ ತೆಗಿತಾ ಇದ್ರೆ ಬಾವಿಯ ಆಳ ಗೊತ್ತಿರುತ್ತದೆ ಕಣಮ್ಮ! ಹಗ್ಗ ಇಷ್ಟಕ್ಕೆ ನಿಂತರೆ ಬಿಂದಿಗೆ ಮುಳುಗುತ್ತೆ ,ನೀರು ಸಿಗ್ತದೆ ಅಂತ ! ಹೊಸದಾಗಿ ಬಾವಿ ಹತ್ರ ಬಂದವ್ರಿಗೆ ನೀರಿನ ಆಳ ತಿಳಿಯೋದಿಲ್ಲ ! ನೀನೂ ತಿಳ್ಕೋ ಬದುಕೋದು ಹೇಗೆ ಅಂತ !! ನಿನ್ ಮಕ್ಕಳು ನಿನ್ನನ್ನ ಹುಟ್ಟಿದಾಗಿಂದ ನೋಡಿರ್ತಾರೆ. ನೀ ಬೇಸರಗೊಂಡು ಮಾತಾಡಿದ್ರೆ ನಿನ್ ಮಕ್ಕಳಿಗೆ ನಮ್ಮಮ್ಮ ಹಿಂಗೆ ಅಂತ ಗೊತ್ತಿರುತ್ತೆ ಆದ್ರೆ ಸೊಸೆ ಅಥ್ವ ಅಳಿಯ ನಿನ್ನ ಆಗಷ್ಟೇ ನೋಡ್ತಾ ಇರ್ತಾರೆ, ಅವ್ರು ಬೇರೆ ಕಡೆಯಿಂದ ಬಂದು ನಿನ್ನ ಮನೆಗೆ ಸೇರ್ತಾರೆ... ಮಾತಾಡುವಾಗ ಸ್ವಲ್ಪ ತಡೆದು ಮಾತನಾಡು.. ಅಷ್ಟರಲ್ಲಿ ನಿನಗೇ ಗೊತ್ತಾಗಿರುತ್ತೆ ಆ ಮಾತು ಅಗತ್ಯನಾ ಇಲ್ವಾ ಅಂತ .. 'ನನ್ನ' ಮನೆ ಇದು 'ಹೀಗೆ' ಇರಬೇಕು ಅಂತ ಅನ್ಕೊಬೇಡ..!!! ನಿನ್ನ ಕಾಲ, ನಿನ್ನ ಬದುಕು, ನೀ ಬದುಕ ನೋಡೋ ರೀತಿಯಲ್ಲೇ ಎಲ್ಲಾರೂ ನೋಡಬೇಕು ಅಂದಾಗಲೇ ಇದೆಲ್ಲ ಬರೋದು.... ಅಂತೆಲ್ಲ ಹೇಳ್ತಾ ಹೋದ್ರು !!! "ಅಯ್ಯೋ ಶಿವ, ಒಂದ್ ಪುಸ್ತಕ ಓದೋದಿಲ್ಲ(ಓದಿಲ್ಲ) ಆದ್ರೂ ಈ ಪಾಟಿ ಬುದ್ದಿ ಎಲ್ಲಿರುತ್ತೋ ಕಾಣೆ'!!!
ಮನಸ್ಸು ಒಮ್ಮೆಮ್ಮೆ ಮಳೆಯ ನಂತರ ಮೂಡೋ ಕಾಮನಬಿಲ್ಲಿನ ಚಿತ್ತಾರದ ಬಾನಿನಂತೆ... ಪಾಠ ಕಲಿಯೊದಕ್ಕೆ ಪುಸ್ತಕವೇಕೆ ಇಂತಹ ಜೀವದ ಗೆಳೆಯನಿದ್ದರೆ ಅನ್ನೋ ಹಾಗೆ :))))

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...