Tuesday, 25 October 2016

ಓದುವಿಕೆ ಮನುಷ್ಯನನ್ನ ಬಹಳ ಬದಲಾಯಿಸುತ್ತದೆ. ಬಹಳ ಚಿಕ್ಕವಳಿದ್ದಾಗಲೇ ಓದುವಿಕೆ ಶುರು ಮಾಡಿದವಳು ನಾನು. ಬಹುಶಃ ಈ ಓದುವ ಹುಚ್ಚು ಅಮ್ಮನೇ ಕಲಿಸಿದ್ದು .. ತುಂಬಾ ಚಿಕ್ಕವರಿದ್ದಾಗ ಅನುಪಮ ನಿರಂಜನ ಅವರ 'ದಿನಕ್ಕೊಂದು ಕಥೆ' (೧೨ ಪುಸ್ತಕಗಳು ಅನ್ನುವ ನೆನಪು)ಮತ್ತು ಕಾಮಿಕ್ಸ್ ತಂದುಕೊಡ್ತಾ ಇದ್ರು. ಆಗೆಲ್ಲ ಬೀದಿಯಲ್ಲಿ ಇದ್ದ ಒಂದಾರು ಮನೆಯಲ್ಲಿ ಒಂದೊಂದು ಮನೆಯವರು ಒಂದೊಂದು ನಿಯತಕಾಲಿಕ ತರಿಸಿದರೆ ಆ ಮನೆಯಿಂದ ಈ ಮನೆಗೆ ಈ ಮನೆಯಿಂದ ಆ ಮನೆಗೆ 'ಅದು' ಓಡಾಡಿ almost ಎಲ್ಲರೂ ಎಲ್ಲವನ್ನು ಓದ್ತಾ ಇದ್ರು . ಸುಧಾ, ತರಂಗ, ಪ್ರಜಾಮತ, ಮಂಗಳ, ವಾರಪತ್ರಿಕೆ, ಕಸ್ತೂರಿ , ಮಯೂರ ಇವನ್ನೆಲ್ಲ ನೋಡಿದ್ರೆ ಈಗ್ಲೂ ಮನ ನೆನಪುಗಳ ಮಯೂರ ನರ್ತನ ಆಡುತ್ತದೆ. ಹಾಗೆ ಅದರಲ್ಲಿ ಬರ್ತಾ ಇದ್ದ ಧಾರಾವಾಹಿಗಳನ್ನ ಕತ್ತರಿಸಿ ಪುಸ್ತಕ ಮಾಡಿ ಇಡ್ತಾ ಇದ್ರು . ಅಮ್ಮ ಬೈತಾಳೆ ಅಂತ ಪುಸ್ತಕಗಳ ನಡುವೆ ಕಥೆ ಪುಸ್ತಕ ಇಟ್ಟು ಓದಿದ ನೆನಪು. ಇಷ್ಟ್ ಓದಿದ್ರೆ ಬೇಗ ಕನ್ನಡಕ ಹಾಕೋ ಬೇಕಾಗುತ್ತೆ ಅಂತ ಇದ್ರು ಚಿಕ್ಕಮ್ಮ. ಹೈಸ್ಕೂಲಿಗೆ ಬಂದ ಮೇಲೆ ಕಥೆಗಳನ್ನ ಓದುವುದಕ್ಕೆ ಶುರು ಮಾಡಿದ್ದು . ಸಾಯಿಸುತೆ, ಉಷಾ ನವರತ್ನ ರಾಮ್, ಹೆಚ್ ಜಿ ರಾಧಾದೇವಿ, ಅನುಪಮಾ ನಿರಂಜನ, ಹೀಗೆ ಬಹಳಷ್ಟು ಲೇಖಕಿಯರನ್ನ ಓದಿದೆ.. ನಡುವೆ ತ್ರಿವೇಣಿ ಹಾಗು ಎಂ ಕೆ ಇಂದಿರಾ ಅವರ ಕೆಲವು ಪುಸ್ತಕಗಳನ್ನ ಕೂಡ ಓದಿದೆ. ಈ ಹೊತ್ತಲ್ಲೇ ಯೆಂಡಮೂರಿ ಕಾದಂಬರಿಗಳು ಜನಪ್ರಿಯವಾಗ್ತಾ ಇದ್ವು . ತುಳಸಿ, ಆನಂದೋಬ್ರಹ್ಮ, ಅಂತಿಮ ಹೋರಾಟ, ಕಪ್ಪಂಚು ಬಿಳಿ ಸೀರೆ , ದುಡ್ಡು ದುಡ್ಡು ದುಡ್ಡು ... ಪತ್ರಿಕೆ ಬಂದ ಕೂಡಲೇ ಓದಿ ಮುಂದಿನ ಸಂಚಿಕೆಯಲ್ಲಿ ಬರಬಹುದಾದ ಸನ್ನಿವೇಶಗಳ ಬಗ್ಗೆ ಚರ್ಚಿಸುತ್ತ ಇದ್ವಿ ಕೂಡ . ಓಹ್ ಅದರಲ್ಲಿನ ಕೆಲವು ಹೆಣ್ಣು charecters (ಹಾಗೆ ಹೆಸರುಗಳೂ ಕೂಡ ) ಅದೆಷ್ಟು ಮನಸ್ಸಿನ ಮೇಲೆ ಅಚ್ಚಾಗ್ತಾ ಇದ್ವು ಅಂದ್ರೆ, ಕೆಲವರೆಲ್ಲ ನನ್ನ ಆದರ್ಶವಾಗ ತೊಡಗಿದರು.. ಪ್ರಾಯಶಃ ಇಂದಿಗೂ ಕೆಲವು ಪಾತ್ರಗಳಲ್ಲಿ ಕಂಡ ಸ್ವಾಭಿಮಾನ, ಮತ್ತೊಬ್ಬರಿಗೆ(ಗಂಡನಿಗೆ ಕೂಡ) ಒತ್ತಾಸೆಯಾಗಿ ನಿಲ್ಲುವ ಛಲ, ಮಕ್ಕಳನ್ನ ಬೆಳೆಸುವ ಪರಿ, ಒಂದಷ್ಟು ತರ್ಲೆ ಇವೆಲ್ಲ ಎಲ್ಲೋ ಒಂದೆಡೆ ಮನದಲ್ಲಿ ಹಾಗೆ ಉಳಿದು ಬದುಕಲ್ಲಿ ಅಳವಡಿಸಿಕೊಂಡಿದದ್ದು ಇದೆ...
ಹಿರಿಯರೊಬ್ಬರ ಗೋಡೆಯ ಮೇಲೆ ಅವರು ಹಂಚಿಕೊಳ್ಳೋ ಯೆಂಡಮೂರಿ quotes ಇವೆಲ್ಲ ನೆನಪಿಸಿತು
ಈಗ್ಲೂ ಮಂಜು ಟಿವಿ ನೋಡ್ತಾ ಇದ್ರೆ , ನಾ ಪಕ್ಕ ಕುಳಿತು ಏನಾದ್ರೂ ಓದ್ತಾ ಇರ್ತೀನಿ , (ಆದ್ರೆ ಈಗ ಓದುವ ಪುಸ್ತಕಗಳು ಬದಲಾಗಿವೆ ಅಷ್ಟೇ . ಏನಿಲ್ಲ ಅಂದ್ರೆ ಕೃತಿಯ ಕನ್ನಡ ಅಥವಾ ಇಂಗ್ಲಿಷ್ ಪುಸ್ತಕ ಆದರು ಸರಿ!) ಕರೆಂಟ್ ಹೋದಾಗ ಒಂದು ಸಲ ಹುಸಿಕೆಮ್ಮು ಕೆಮ್ಮಿದ್ರೆ ಮಂಜು ನಗ್ತಾರೆ 'ಆಯ್ತ್ ಬುಡವ್ವ ನಿಮ್ ಪುಸ್ತಕಾನೇ ಗ್ರೇಟು , ನಮ್ ಟಿವಿ ಸರಿಯಿಲ್ಲ ಬುಡು' ಅಂತಾರೆ
ಒಳ್ಳೆಯ ಓದುವಿಕೆ ಬದುಕಿಗೆ ಬಣ್ಣ ತರಬಲ್ಲದು ..
ಸುಂಸುಮ್ನೆ ಹಂಚಿಕೋಬೇಕು ಅನಿಸ್ತು

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...