Tuesday 9 January 2018

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿಲ್ಲ, ಮಂಜು ತಿಂತಾ ಇದ್ರು. ನಾ ಹಾಗೆ ಕುಳಿತು ಮಗಳಿಗೆ ಕರೆ ಮಾಡ್ತಾ ಇದ್ದೆ. ನಮ್ಮ ಎದುರಿನ ಮೇಜಲ್ಲಿ ಒಂದಷ್ಟು ಜನ ತಿಂಡಿ ತಿಂತಾ ಕೂತಿದ್ರು. ಎಲ್ಲರ ಕೈಲೂ ಮೊಬೈಲು, ನೋಡಲು ಸುಶಿಕ್ಷಿತರ ಹಾಗೆ ಕಾಣ್ತಾ ಇದ್ರು, ಮಂಜು ಚಟ್ನಿ ಹಾಕಿಸ್ಕೊಂಡ್ ಬರ್ತೀನಿ ಇರು ಅಂತ ಎದ್ದುಹೋದ್ರು. ಮಗಳ ಜೊತೆ ಮಾತಾಡ್ತಾ ಇದ್ದೆ. ಎದುರು ಮೇಜಲ್ಲಿ ಕುಳಿತಾಕೆ ಮೇಲೆದ್ದಳು. ಅವಳು ಎದ್ದಳೊ ಇಲ್ವೋ, ಪಕ್ಕ ಕುಳಿತಿದ್ದ ವ್ಯಕ್ತಿ 'ರಪ್' ಎಂದು ಹೊಡೆದೇ ಬಿಟ್ಟ. ಅವನು ಹೊಡೆದ ಏಟಿನ ಸದ್ದು ನನಗೂ ಕೇಳಿಸೋ ಅಷ್ಟಿತ್ತು .ಆಕೆ ಹಾಗೆ ಕುಳಿತಳು. ಒಂದ್ ಕ್ಷಣ ಎದೆ ದಗ್ ಅಂತು, ಆ ವ್ಯಕ್ತಿ ಯಾರಾದ್ರೂ ನೋಡಿದ್ರೆ ಎನ್ನುವಂತೆ ಅತ್ತ ಇತ್ತ ನೋಡಿದ್ದು, ನಾ ಫೋನ್ ಕಟ್ ಮಾಡಿ ಮಂಜು ಹತ್ತಿರ ಎದ್ದು ಹೋಗಿದ್ದು ಎಲ್ಲಾ ಕ್ಷಣಗಳಲ್ಲಿ ನಡೆದು ಹೋಯ್ತು. ಮಂಜು ನನ್ನ ಮುಖ ನೋಡಿ 'ಚಟ್ನಿ ತರೋ ತನ್ಕ ಬಿಟ್ಟಿರೋಕೆ ಆಗಲ್ವ ತಾಯಿ" ಅಂತ ನಗುತ್ತಾ ಮತ್ತೆ ಅಲ್ಲೇ ಬಂದು ಕುಳಿತರು. ನಾ ಪೆಚ್ಚಾಗಿ ಹೋಗಿದ್ದೆ . ಎದುರು ಕುಳಿತ ಆ ವ್ಯಕ್ತಿ, ಆಕೆ ಹಾಗು ಜೊತೆಯಿದ್ದವರೊಂದಿಗೆ 'ದುಡ್ಡು ಕೊಟ್ಟಿಲ್ವಾ , ತಿನ್ನೋಕೆ ಏನ್ ರೋಗ, ಅಷ್ಟ್ ಬಿಟ್ಟು ತಟ್ಟೆಗೆ ಕೈ ತೊಳೀತಾಳೆ, ತಿಮರು ಅದ್ಕೆ ' ಅಂತ ಸಮಜಾಯಿಷಿ ಕೊಡ್ತಾ ಇದ್ದ . ಅವ್ರೆಲ್ಲ ಅದೊಂದು ವಿಷಯವೇ ಅಲ್ಲ ಅನ್ನೋವಂತೆ ತಿನ್ನೋದನ್ನ ಮುಂದುವರಿಸ್ತಾ ಇದ್ರು . ಆಕೆ ಕೂಡ ಏನೂ ಆಗಿಲ್ಲ ಅನ್ನುವಂತೆ ಸುಮ್ನೆ ಕುಳಿತಿದ್ಲು....
ದೇವರ ದರ್ಶನ ಮಾಡಿ ಬಂದು ಒಂದ್ ತರ ಪ್ರಶಾಂತವಾಗಿದ್ದ ಮನಸ್ಸಿನ ತಿಳಿಜಲಕ್ಕೆ ಕಲ್ಲು ಬಿದ್ದಂತೆ ...
ಹೊರಗೆ ಬಂದ ಮೇಲೆ 'ಹಿಂಗ್ ಹಿಂಗೇ ' ಅಂದೇ ಮಂಜುಗೆ . 'ನಡಿ ಇನ್ನೊಂದ್ ಸಾರಿ ದೇವಸ್ಥಾನದ ಒಳಗೆ ಹೋಗಿ ಬರೋಣ . ಇಲ್ಲ ಅಂದ್ರೆ ಮನೆ ಸೇರೋವರೆಗೂ ನೀ ಹಿಂದೆ ಇರ್ತೀಯ ' ಅಂತ ಮತ್ತೊಮ್ಮೆ ಒಳಗೆ ಹೋಗಿ ಒಂದಷ್ಟು ಸಮಯ ಒಳಗಿದ್ದು ಬಂದ್ವಿ. ಮಂಜು ಹೇಳಿದ್ದು 'ಅವಳೇ ತಲೆ ಕೆಡಿಸಿಕೊಂಡಿಲ್ಲ ನೀ ಯಾಕ್ ಹಿಂಗ್ ಬೇಜಾರ್ ಮಾಡ್ಕೊಳ್ತೀಯಾ , ಅವರ್ಯಾರೋ ಏನೋ , ಬಿಟ್ಹಾಕು.. ಬರೀ ಇಷ್ಟ್ ನೋಡಿ ಇಷ್ಟ್ ಸಪ್ಪಗೆ ಆಗೋದ್ರೆ ಅಷ್ಟೇ , ನಿನ್ನ ಒಂದಷ್ಟು ದಿನ ಹೊರಗಿನ ಪ್ರಪಂಚ ನೋಡು ಅಂತ ಕಳಿಸ್ಬೇಕು'
ಅದು ಬೇಸರ ಅಲ್ಲ, ಒಂದ್ ತರ ಭಯ... ಮನುಷ್ಯ ಪ್ರಾಣಿಗಿಂತ ಉತ್ತಮ ಅಂತಾರೆ, ಯೋಚಿಸಬಲ್ಲ ಅಂತಾರೆ, ಸಮಾಜವಾಸಿ, ಸಂಘಜೀವಿ ಅಂತೆಲ್ಲ ಅಂತಾರೆ . ಒಂದಷ್ಟು ಜನರ ನಡುವೆ ಹೇಗೆ ನಡೆದುಕೊಳ್ಳಬೇಕು ಅನ್ನೋದನ್ನ ಅರಿಯದಿದ್ದರೆ , ಒಬ್ಬರು ನನ್ನ ಅಧೀನದಲ್ಲಿದ್ದಾರೆ ಅಂತ ತೋರಿಸಿಕೊಳ್ಳೋಕೆ ತನ್ನ ಶಕ್ತಿ ಬಳಸುತ್ತಾನೆ ಎಂದರೆ, ಒಬ್ಬರನ್ನ ಗೌರವಯುತವಾಗಿ ನಡೆಸಿಕೊಳ್ಳದೆ ಇದ್ದರೆ, ಮನುಷ್ಯ ಮನುಷ್ಯ ಅನಿಸಿಕೊಳ್ಳುವನೇ ? ಇದು ತೀರಾ ಸಣ್ಣ ವಿಷಯ ನಿಜವೇ.. ಆದ್ರೂ ಸಹಜೀವಿಗೆ ಹೊರ ಪ್ರಪಂಚದಲ್ಲೇ ಬೆಲೆ ಕೊಡದ ಮನುಷ್ಯ ಎತ್ತ ಸಾಗುತ್ತಿದ್ದಾನೆ ಅನಿಸೋ ಹಾಗೆ ...
ಕೃಷ್ಣ ನೀ ಬೇಗನೆ ಬಾರೋ ......... ಅನಿಸೋ ಹಾಗೆ ...
ಇದು ಸ್ತ್ರೀ ಶೋಷಣೆ ಪರ ಅಥವ ಪುರುಷ ದ್ವೇಷಕ್ಕೆ ಬರೆದಿದ್ದಲ್ಲ.... ಬರೀ ಮಾನವ ಸಂವೇದನೆಯ(sensitivity) ಬಗ್ಗೆ ತಳೆದ ಬೇಸರ
ಹೀಗೊಂದು ಅನಿಸಿಕೆ 
ದೊಡ್ಡ ದೊಡ್ಡ ಮಾತುಗಳು ನನಗೆ ಅರಿವಾಗೋದಿಲ್ಲ, ದೊಡ್ಡ ದೊಡ್ಡ ವಿಷಯಗಳು ಅರ್ಥ ಆಗೋದಿಲ್ಲ. ಆದರೆ ಯಾರಿಗಾದರು ನೋವಾದರೆ ನನಗೂ ನೋವಾಗುತ್ತದೆ. ನನ್ನಿಂದ ನೋವಾದ್ರೆ (ತಿಳಿದೋ ತಿಳಿಯದೆಯೋ) ನನ್ನ ಬಗ್ಗೆ ಬೇಸರ ಆಗುತ್ತದೆ.ಸಾಧ್ಯವಾದಷ್ಟು ಮತ್ತೆ ನೋಯಿಸದೆ ಇರಲು ಯತ್ನಿಸುತ್ತೇನೆ. ಯಾರಿಗಾದರು ಖುಷಿ ಅನಿಸಿದರೆ, ಖುಷಿ ಪಟ್ಟರೆ ಅವರ ಜೊತೆ ನಾನೂ ನಗ್ತೀನಿ. ಸ್ನೇಹಕ್ಕೆ ವಯಸ್ಸಿನ, ಸ್ಥಾನದ, ಅಂತಸ್ತಿನ ಅಂತರ ತೋರದೆ ಬೆಲೆಕೊಡ್ತೀನಿ. ಯಾರು ಯಾವ ಸ್ಥಾನ ನೀಡಿದ್ದಾರೋ ಆ ಸ್ಥಾನಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ತೀನಿ. ಅರ್ಥವಾಗದ ವಿಷಯಗಳ ಬಗ್ಗೆ ಮಾತನಾಡೋದಿಲ್ಲ, ಕೆಲವೊಂದು ಅರ್ಥ ಆದರೂ ಕೂಡ ನಾ ಹೇಳೋದು ನಾ ಹೇಳುವವರಿಗೆ ಅರ್ಥ ಆಗದು ಅನಿಸಿದಾಗ ಹೇಳುವುದಿಲ್ಲ. ಕೆಲವೊಂದು ವಿಷಯ ಅನಗತ್ಯ ಅನಿಸಿದಾಗ ಮಾತಾಡೋದಿಲ್ಲ . ಅನಗತ್ಯವಾಗಿ ಯಾರ ವಿಷಯಕ್ಕೂ ಹೋಗುವುದಿಲ್ಲ. ಹಾಗೆ ಅನಗತ್ಯ ಆಸಕ್ತಿ ಕೂಡ entertain ಮಾಡೋದಿಲ್ಲ . ನನಗೆ ಅನಿಸಿದ ಮಾತುಗಳು, ನಾ ಕಂಡ ವಿಷಯಗಳು ಅಂತ ಒಂದಷ್ಟು ಬರೆಯೋದು ಬಿಟ್ಟರೆ, ನಾನು, ನನ್ನ ಕೆಲಸ , ನನ್ನ ಮನೆ ಇಷ್ಟೇ ನನ್ನ ಪ್ರಪಂಚ. ಇದನ್ನ ಬಿಟ್ರೆ ನನಗೆ ಮತ್ತೇನು ಇಲ್ಲ.
ಅಷ್ಟೇ ...............ನಾನು ಅಂದ್ರೆ ಅಷ್ಟೇ ....ಮತ್ತೇನು ಇಲ್ಲ. ...
ಈವತ್ತು ಪುಟ್ಟಿ ಕಾಲೇಜ್ ಅಲ್ಲಿ ಪೇರೆಂಟ್ಸ್-ಟೀಚರ್ಸ್ ಮೀಟಿಂಗ್ ಇತ್ತು . ಅವ್ಳಿಗೆ ಸ್ವಲ್ಪ ಶೀತ ಕೆಮ್ಮು ಇತ್ತು ಅಂತ ಅವಳು ಕಾಲೇಜ್ಗೆ ಹೋಗಿರಲಿಲ್ಲ. ನಾ ಹೋದೆ. ಎಂದಿನಂತೆ ತುಂಬಾನೇ ಸ್ನೇಹದಿಂದ ಮಾತನಾಡಿಸಿದರು ಲೆಕ್ಚರರ್ಗಳು . ಎಂದಿಗಿಂತ ಒಂಚೂರು ಕಮ್ಮಿಅಂಕ ತೆಗೆದುಕೊಂಡಿದ್ಳು . ಸರಿ ಉತ್ತರ ಪತ್ರಿಕೆಗಳನ್ನ ನೋಡಿ ಮತ್ತೆ ಮನೆಗೆ ಬಂದೆ . 
ಇನ್ನೂ ಗಾಡಿ ನಿಲ್ಲಿಸ್ತಾ ಇದ್ದೆ. ಮಂಜುನಾಥ ಪ್ರಭುಗಳು ಫೋನ್ ಮಾಡಿದ್ರು ' ಏನಮ್ಮ ಬಂದ್ಯಾ, ಏನಂದ್ರು ಕಾಲೇಜ್ ಅಲ್ಲಿ?" "ನಿನ್ ಮಗಳು ಕಮ್ಮಿ ಮಾರ್ಕ್ಸ್ ತಗೊಂಡಿದ್ದಾಳೆ ಈ ಸಾರಿ ".. ಇನ್ನೂ ಮಾತೆ ಮುಗಿಸಿರಲಿಲ್ಲ ... ನೀನೇನು ಬೈಯೋಕೆ ಹೋಗ್ಬೇಡ ಅವಳನ್ನ , ಇನ್ನಾ ಟೈಮ್ ಇದೆ ! ಓದ್ಕೊಳ್ತಾಳೆ !' ಅಂದ್ರು. ಫೋನ್ ನನ್ನದಲ್ವಾ ಅದ್ಕೆ ಎಸಿಲಿಲ್ಲ . ಕಟ್ ಮಾಡಿದೆ .
ಒಳಗೆ ಬಂದೆನೋ ಇಲ್ವೋ ಅಲ್ಲೆಲ್ಲೋ ಊರು ಸುತ್ತೋಕೆ ಹೋಗಿರೋ ಮಗ ಕಾಲ್ ಮಾಡ್ದ. 'ಮಾ, ಪುಟ್ಟಿ ಹುಷಾರಾಗಿದ್ದಾಳಾ? ಮೀಟಿಂಗೇ ಹೋಗಿದ್ದಾ "? "ಹೊಂ, ಈಗ ಬಂದೆ...ಸ್ವಲ್ಪ ಕಮ್ಮಿ ಮಾರ್ಕ್ಸ್ ತಗೊಂಡಿದ್ದಾಳೆ .... " ಇನ್ನೂ ಮಾತೆ ಮುಗಿಸಿಲ್ಲ . 'ಏನೂ ಅನ್ಬೇಡ , ಅವ್ಳು ಓದ್ತಾಳೆ , ಇನ್ನಾ ಟೈಮ್ ಇದೆ, ನನ್ ತಂಗಿ ನನ್ನಂಗೆ ..." ಫೋನ್ ನನ್ನದಲ್ವಾ ಅದ್ಕೆ ಎಸಿಲಿಲ್ಲ . ಕಟ್ ಮಾಡಿದೆ !!
ಅಲ್ಲಾ, ನಾನೇನು ಇಲ್ಲಿ ವಿಲ್ಲನ್ನಾ ಇವರಿಗೆಲ್ಲಾ ...
ಅದ್ಕೆ ನಾ ಇನ್ಮೇಲೆ ಇವರ್ಯಾರ ವಿಷ್ಯಕ್ಕೂ ಹೋಗೋದಿಲ್ಲ ಅಂತ ತೀರ್ಮಾನ ಮಾಡಿಬಿಟ್ಟಿದ್ದೀನಿ .... ನಾಳೆ ಬೆಳಿಗ್ಗೆವರೆಗೂ ))))

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...