Sunday, 29 September 2013

ನಿನ್ನ ನೆನಪಾದಾಗೆಲ್ಲ 
ಆ ಹೊಂಗೆಯ ಬುಡಕ್ಕೆ ಭುಜ ಆನಿಸುತ್ತೇನೆ ನಲ್ಲಾ.........
ಆ ಹೊಂಗೆಗೆ ನಾ ಭುಜ ಆನಿಸಿದಾಗೆಲ್ಲಾ 
ಅದು ನಿನ್ನಂತೆಯೇ ತಲೆದೂಗಿ 
ಮನದ ಬೇಗೆಯ ನೀಗಿಸುವುದಲ್ಲಾ..............:)))))
'ನೀನು ಕವಿಯಂತೆ ಹೌದೇನೇ ನಲ್ಲೇ '
ಎಂದ ನನ್ನವ..........
ಬೀಗಿಹಿಗ್ಗಿದ ನನ್ನ ಕಂಡು...
'ನಿನ್ನ ಕವಿತೆ ಕಣ್ಣ ತೆರೆಸುವುದೋ, ಕಣ್ಣ ಒರೆಸುವುದೋ
ಎರಡೂ ಸಾಧಿಸದ ಕವಿತೆ ಕವಿತೆಯೇ ಅಲ್ಲ...... ' 
ಎಂದಂದು ನನ್ನ ಕಣ್ಣ ತೆರೆಸಿಬಿಟ್ಟನಲ್ಲ..............:))
ಬೀಸುವ ಗಾಳಿಯಿಂದ 
ಆರಬಾರದು ಹಣತೆ ಎಂದು 
ತನ್ನ ಕರಗಳಿಂದ ಮರೆಮಾಡಿದಳು ಆಕೆ.......
ಉರಿವ ಹಣತೆಗೇನು ಗೊತ್ತು ತನ್ನ ರಕ್ಷಿಸುವ ಕೈ ಇದೆಂದು........
ಎಲ್ಲರ ಸುಡುವಂತೆ...
ಅವಳ ಕೈಗಳ ಕೂಡ ಸುಟ್ಟೇ ಸುಟ್ಟಿತು..........
ಅಪ್ಪ ಹಾಗು ಆ ದೊಡ್ಡ ಆಲದ ಮರ 
ಇಬ್ಬರದೂ ಒಂದೇ ಗುಣ........
ಬಳಿ ಹೋದೊಡನೆ 
ಮನವ ತಂಪಾಗಿಸಿ ಬೇಗೆ ತಣಿಸುವುದಲ್ಲ ..........:))
'ಬದಲಾದೆಯ ರಾಧೆ??, 
ಹೆಜ್ಜೆಯ ಸದ್ದಿಗೆ ನಸುನಗುತ್ತ ಬಂದು 
ಕೇಳುವ ಮುನ್ನವೇ ನಗೆಯ ಸ್ವಾಗತ ಅರ್ಪಿಸಿ 
ಮುರಳಿಯ ನಾದಕ್ಕೆ ತಲೆದೂಗುವ ನನ್ನ ರಾಧೆ
ಬದಲಾದಳೇ.'...???ಕೇಳಿದ ಮಾಧವ ನಸುನಗುತ್ತಾ ..........
ರಾಧೆಯದು ಅದೇ ಸ್ಥಿರ ಭಾವ...
ಕಣ್ಣ ತುಂಬಾ ತುಂಟತನ.....
'ಇಲ್ಲ ಮಾಧವ...
ಇರುವಿಕೆಯ ಬಯಸದೆ ನಿನ್ನ ಬಯಸಿದ,...
ನುಡಿಸದೆ ಇದ್ದರು ನಿನ್ನ ವೇಣುನಾದವ ಆಲಿಸಿದ,...
ನಿನಗಾಗೆ ನಗುವ ರಾಧೇ....
ನೀ ಬಂದರೂ ,ಬಾರದಿದ್ದರೂ ಬದಲಾಗಳು...
ಇದ ಅರಿತ ಮೇಲೆ ತಾನೇ ನೀ
ನಾ ಕರೆಯದಿದ್ದರೂ ಬಂದು ನನ್ನ ಸೆರಗ ಹಿಡಿಯುವುದು'......:)))))
ನಾ ಬರೆದ
ಅಕ್ಷರಗಳೆಲ್ಲ
ಮಲ್ಲಿಗೆಯ ಮೊಗ್ಗು ಅರಳಿದಂತೆ
ಘಮಘಮಿಸಿದ್ದು
ಆ ಪದಗಳಿಗೆ
ನಿನ್ನ ಒಲುಮೆಯ ಸಿಂಚನವಾದಾಗ ನಲ್ಲ....:)))))
ನೀ ನೆಟ್ಟ ಮಲ್ಲಿಗೆಯ ಅಂಬಿನಲ್ಲರಳಿದ 
ಮೊಗ್ಗ ಬೊಗಸೆ ತುಂಬಾ ಹೊತ್ತು 
ನಿನಗೆ ಉಡುಗೊರೆಯಾಗಿ ತಂದಿದ್ದೆ ನಲ್ಲ....
ನಿನ್ನ ಕಂಡೊಡನೆ ಮೊಗ್ಗೆಲ್ಲ ಅರಳಿ 
ಸುಮವಾಗಿ ನಕ್ಕು ,ನಿನ್ನ ಸೆಳೆದು 
ನನಗೆ ಮೋಸ ಮಾಡ ಹೊರಟವಲ್ಲ .............:)))))
ಯಾರ ಬಳಿಯೂ ಹೇಳಲಿಚ್ಚಿಸದ ಬದುಕಿನ ಕಥೆಯ ಸಾಗರನ ಮುಂದೆ ಕುಳಿತು ಹೇಳುತ್ತಾ ಹೋದಳು.....ಸಾಗರ ಅವಳ ದುಖವನ್ನೆಲ್ಲ ಕಣ್ಣ ಹನಿಯಾಗಿಸಿ ತನ್ನ ಒಡಲೊಳಗೆ ಅಡಗಿಸಿಕೊಂಡ........ಈಗ ಸಾಗರನ ನೀರು ಉಪ್ಪು, ಅವಳ ಕಣ್ಣ ಹನಿಯ ಹಾಗೆ..................!!!
ಇರಬಹುದೇ 
ಇಳೆಯ 
ಮೈಯೊಳಗೂ
ಮಿಡಿಯವ 
ಒಲವಿನ ಹೃದಯ ....
ಇಲ್ಲದ್ದಿದ್ದರೆ 
ಅರಳುತ್ತಿದ್ದವೇ 
ಈ ಪರಿಯ 
ಸುಂದರ ಸುವಾಸಿತ 
ಕುಸುಮ .....:)))))
ಪ್ರತಿಯೊಂದು ಪ್ರೇಮವೂ 
ಒಂದೊಂದು ಕಾವ್ಯದಂತೆ...
ಅದರದೇ ಛಂದಸ್ಸು 
ಅದರದೇ ಅಲಂಕಾರ...
ಅದರದೇ ಭಾವಾರ್ಥ 
ಅದರದೇ ಒಳಾರ್ಥ...
ಕವಿತೆ ಓದಿ ವ್ಯಾಕರಣವ ಅರಿಯತೊಡಗಿದರೆ ...
ಕವಿತೆ ಬಲು ಚೆನ್ನ...............:)))))))
ಆ ವರ್ಷ ಬರಗಾಲ....ಇದ್ದ ಹಿಟ್ಟು ಬಳಸಿ ಅಮ್ಮ ಒಂದು ರೊಟ್ಟಿ ಮಾಡಿದ್ಲು.
ಅವಳಿಗೆ ಗೊತ್ತು ಆ ರೊಟ್ಟಿ ನನಗೆ ಸಾಲದು ಎಂದು... ನಾ ಮತ್ತೊಂದು ರೊಟ್ಟಿ ಕೇಳಿಬಿಟ್ಟರೇ ಇಲ್ಲ ಅನ್ನಬೇಕಲ್ಲ .. ಎನ್ನೋ ನೋವೂ ಇತ್ತು ..
'ಮಗ ಒಂದು ಪ್ರಶ್ನೆ ಕೇಳ್ತೀನಿ ಸರಿ ಉತ್ತರ ಕೊಟ್ರೆ ನಿನ್ನ ಉತ್ತರದ ಅಷ್ಟೂ ರೊಟ್ಟಿ ..ನಿನಗೆ ತಪ್ಪು ಉತ್ತರ ಕೊಟ್ರೆ ಒಂದು ರೊಟ್ಟಿ ಮಾತ್ರ ನಿನಗೆ' ಅಂದ್ಲು....
'ಸರಿ ಅಮ್ಮ ಕೇಳು" ಅಂದೇ ..
'ಖಾಲಿ ಹೊಟ್ಟೆಯಲ್ಲಿ ನೀನು ಎಷ್ಟು ರೊಟ್ಟಿ ತಿನ್ನಬಲ್ಲೆ' ಎಂದಳು...
'ಆರು ರೊಟ್ಟಿ ಅಮ್ಮ" ಅಂದೆ ....
'ತಪ್ಪು ಮಗ, ಒಂದು ರೊಟ್ಟಿ ತಿಂದ ಮೇಲೆ ನಿನ್ನ ಹೊಟ್ಟೆ ಖಾಲಿ ಹೇಗೆ ' ಅಂದ್ಲು...'ತಗೋ ಇವತ್ತು ನಿಂಗೆ ಒಂದೇ ರೊಟ್ಟಿ ಮತ್ತೆ ಕೇಳೋಹಾಗಿಲ್ಲ ' ಅಂದ್ಲು.......ಒಳಮನೆಗೆ ಹೋಗುತ್ತಾ ನನಗೆ ಕಾಣದಂತೆ ಕಣ್ಣು ಒರೆಸಿಕೊಂಡಳು ..........................
ಹಕ್ಕಿಗಳೆಲ್ಲ ಹಾರಿ ಹೋದ ಮೇಲೆ 
ಮರಕ್ಕೆ ಉಳಿದದ್ದು ಖಾಲಿ ಗೂಡುಗಳು.....
ಬೆಳೆದ ಮಕ್ಕಳೆಲ್ಲ ಹಾರಿ ಹೋದ ಮೇಲೆ..
ಅಪ್ಪನಿಗೆ ಉಳಿದದ್ದು ಅವನ ಕೈಗಳ ಸುಕ್ಕುಗಳು...
ಅಮ್ಮನಿಗೆ ಉಳಿದದ್ದು ಒಡಲ ಮೇಲೆ ಉಳಿದ ಮಾತೃತ್ವದ ಗೆ(ಬ)ರೆಗಳು..............

Saturday, 10 August 2013

ಹುಡುಕಲೇಕೆ ಗೆಳೆಯ


ಯಾಕೆ ಹುಡುಕುತ್ತಿ ಗೆಳೆಯ
ಆ ಪುಟ್ಟ ಹುಡುಗಿಯನ್ನು....
ಅವಳೆಂದೋ ಕಳೆದುಹೋಗಿಹಳು ನನ್ನೊಳಗೆ...
ಪುಟ್ಟ ಲಂಗವ ತೊಟ್ಟು
ನಿನ್ನ ಹಿಂದೆ ಮುಂದೆ ಓಡಾಡಿದ ಅವಳು
ಈಗೊಂದು ಮನೆಯ ಹೊತ್ತಗೆಯ ಹೊದಿಕೆ...
ಯಾಕೆ ಹುಡುಕುತ್ತಿ ಗೆಳೆಯ
ಮುದ್ದು ಮೊಗದ ತುಂಟ ಬಾಲೆಯ
ಅವಳ ತುಂಟತನಗಳೆಲ್ಲ ಮುದುಡಿ ಹೋಗಿದೆ ನನ್ನೊಳಗೆ
ಈಗ ಅವಳು
ತುಂಟ ಪೋರರ ದಡ ಸೇರಿಸುತ್ತಿಹ ನಾವಿಕೆ....
ಯಾಕೆ ಹುಡುಕುತ್ತಿ ಗೆಳೆಯ
ರಂಗೋಲಿ ಇಡುತ್ತಿದ್ದ ಆ ಮುಗುದೆಯನ್ನ..
ವರುಷಗಳ ಮಳೆಗೆ ಮುಗ್ದತೆ ಕರಗಿ ಹೋಗಿ
ಈಗವಳು
ಮುದ್ದು ಮಗಳಿಗೆ
ರಂಗವಲ್ಲಿ ಹೇಳಿಕೊಡುವ ಮಾತೃಕೆ ....
ಯಾಕೆ ಹುಡುಕುತ್ತಿ ಗೆಳೆಯ
ಪುಟ್ಟ ಮಾತಿಗೆ ಸಿಟ್ಟಿಗೆದ್ದು
ಕಣ್ಣಲ್ಲಿ ಹನಿ ತುಂಬಿ ನಿಂತು
ಕ್ಷಣದಲ್ಲೇ ಅಳು ಮರೆತು ನಗುತಿದ್ದ ಪೋರಿಯನ್ನ...
ಸಿಟ್ಟಿಗೆ ಕಡಿವಾಣ ಬಿದ್ದು..
ಮಾತೆಲ್ಲ ಮೌನವಾಗಿ
ಓಟ ನೋಟಗಳೆಲ್ಲ ನೆನಪಿನ ಪುಟಗಳ ಸೇರಿ...
ಈಗವಳು
ಒಂದು ಸಂಸಾರದ ದೀಪಿಕೆ.........
ಮತ್ತ್ಯಾಕೆ ಹುಡುಕುತ್ತಿ ಗೆಳೆಯ
ಕಳೆದು ಹೋದವಳನ್ನ ....
ಸಿಕ್ಕಲಾರದವಳನ್ನ .....
ನೆನಪಿನ ಪುಟಗಳಲ್ಲಿ ಅಡಗಿಕೊಂಡವಳನ್ನು ..
ಹುಡುಕಲೇ ಬೇಕೆಂದಾದರೆ
ಒಮ್ಮೆ ನಿನ್ನ ನೀನು ಕೇಳಿಕೋ
"ನಾ ಬಿಟ್ಟು ಹೋದದ್ದೇಕೆ ಅವಳನ್ನು"...........:))))

Saturday, 3 August 2013

ಸಕ್ಕರೆಯ ಬೊಂಬೆ

ಅಮ್ಮನ ಬಿಳಿಯ ಕತ್ತಲ್ಲಿ 
ಕಪ್ಪು ಮಣಿಯ ಸರ ನೋಡಿದ್ದಾಗೆಲ್ಲ
ನನಗೂ ಅಂತಹದೇ ಸರ ಬೇಕೆಂದು ಅತ್ತಿದ್ದೆ...

ಅಮ್ಮ ತಿಳಿ ಹೇಳಿದ್ದಳು...
ಅದು ಪವಿತ್ರವಾದ ಮಾಂಗಲ್ಯ ಎಂದೂ 
ಅದು ಆಟಕ್ಕೆ ಹಾಕುವ ಸರ ಅಲ್ಲವೆಂದೂ 
ದೊಡ್ಡವಳಾದ ಮೇಲೆ 
ನಿನಗೆಂದೇ ಹುಟ್ಟಿದ ರಾಜಕುಮಾರ 
ಬಂದು ತನ್ನ ಕೈಯಾರೆ ಅದ ತೊಡಿಸಿ ..
ನಿನ್ನನ್ನು ಎತ್ತಿಕೊಂಡು..
ತನ್ನರಮನೆಗೆ ಕರೆದೊಯ್ವನೆಂದು....

ಅಮ್ಮನ ಮಾತಿಗೆ ಪುಟ್ಟ ಕನಸೊಂದು ಗೂಡು ಕಟ್ಟ ತೊಡಗಿತು...
ಯಾವಾಗ ದೊಡ್ಡವಳಾದೇನೋ
ರಾಜಕುಮಾರ ಹೇಗಿರುವನೋ...
ಅವನರಮನೆಗೆ ತಾನೇ ರಾಣಿಯಾದಂತೆ..
ಅವನೊಲವಿಗೆ ತಾನೇ ಅರಗಿಣಿಯಾದಂತೆ....

ದಿನಗಳೆದಂತೆ
ನಾನು ಬೆಳೆದೆ...
ಕನ್ನಡಿಯು ಹೇಳಿತು ನಾನು ರಾಜಕುವರಿಯೇ ಎಂದು...
ಅಪ್ಪ ಅಮ್ಮನ ಮುದ್ದಿನ ಕೂಸು...
ಅಣ್ಣನ ಸಕ್ಕರೆ ಗೊಂಬೆ...
ಇದ್ದದ್ದರಲ್ಲೇ ನಾನು ರಾಜಕುಮಾರಿ ನನ್ನ ಮನೆಗೆ....

ಬಂದನೊಬ್ಬ ರಾಜಕುಮಾರ
ನನ್ನ ಕರೆದೊಯ್ಯಲು..
ನನ್ನ ಕನಸು ನನಸಾದಂತೆ...
ನನಗೊಂದು ಕಪ್ಪುಮಣಿ ಸರ ತಂದಂತೆ...

ರಾಜಕುವರ ತಂದ ಕಪ್ಪುಮಣಿಯ ಬೆಲೆ
ನನ್ನಪ್ಪನ ಜೀವಮಾನದ ದುಡಿಮೆ...
ನನ್ನಮ್ಮನ ಕಣ್ಣ ನೀರು...
ನನ್ನ ಜೀವದ ಹಕ್ಕು ಎಂದು ತಿಳಿಯುವಷ್ಟರಲ್ಲಿ
ನನ್ನ ಕತ್ತ ಸುತ್ತ ಕಪ್ಪು ಮಣಿ ಹೊಳೆಯುತ್ತಿತ್ತು...
ಕನಸು ಗರ್ಭಪಾತವಾಗಿತ್ತು......

ಅಮ್ಮ.....
ಕನಸ ತುಂಬುವ ಮೊದಲು
ಕಸುವ ತುಂಬ ಬಾರದಿತ್ತೆ.....
ಅಪ್ಪ..
ಜೀವಮಾನದ ದುಡಿಮೆ ಅವಳಿಗಾಗಿ ಸುರಿಯುವ ಬದಲು..
ಜೀವನ ನಡೆಸುವ ದುಡಿಮೆ ಕಲಿಸಬಾರದಿತ್ತೆ...
ಅಣ್ಣ..
ನಿನ್ನ ಸಕ್ಕರೆಯ ಬೊಂಬೆಗೆ...
ಸಕ್ಕರೆ ತರುವುದ ಹೇಳಿಕೊಡಬಾರದಿತ್ತೆ.....

ಕಪ್ಪು ಮಣಿಯ ಆಸೆಗೆ ಜೀವ ತೊತ್ತಾಯಿತೇ..??!!

(ಒಂದು ಪುಟ್ಟ 'ಕನಸು' ಕನಸ ಚಿವುಟಿ ಕಣ್ಣೇರು ಹಾಕುವಾಗ ಮನ ನೊಂದುಹೊಯ್ತು...)
ಮಾದ್ರಿ....

ಧಗಧಗಿಸುವ ಚಿತೆ...
ಚಿತೆಯ ಮುಂದೆ ನಿಂತ ಮನದ ತುಂಬಾ 
ಹಾದುಬಂದ ಬದುಕ ಕವಲುಗಳ ನೆನಪಿನ ಧಾರೆ.... 

ಅಣ್ಣ ಅವನ ವಚನ ಬದ್ದ...
ಹಸ್ತಿನಾಪುರದ ರಾಣಿಯ ಪಟ್ಟ ನಿನಗೆ ಎಂದ ..
ಮನದ ತುಂಬಾ ಹೊಂಗಿರಣ....

ಕುಂತಿ ಒಪ್ಪುವಳೇ...?
ಅವಳು ಅರಮನೆಗೆ ಮಹಾರಾಣಿ ಅಂತೆ....
ನಾನು ಪಾಂಡುವಿಗೆ ಹೆಂಡತಿ ಅಂತೆ...
ಪ್ರತಿಸ್ಪರ್ಧಿಗಳೇ ಇಲ್ಲವಂತೆ ನನಗೆ...

ಎಲ್ಲವಿರುವ ಅರಮನೆ...
ಕುಂತಿ ನಗುತ್ತಲೇ ಬರಮಾಡಿಕೊಂಡಳು...
ತನ್ನವನನ್ನ ನನಗೆ ಧಾರೆ ಎರೆದು ಕೊಟ್ಟಳು...
ತನ್ನವ ಎನ್ನಲು ಅವಳಿಗೆ ಏನಿತ್ತು ಅವನಲ್ಲಿ(!!?)...
ಅವ ಶಾಪಗ್ರಸ್ತ .....
ಶಾಪ ಅವನದು....
ಅನುತಾಪ ನನ್ನ(ಮ್ಮ)ದು...
ಅವನೋ ಉರಿದು ಹೋದ ಕೆಂಡ..
ನಾನೋ ಒಳಗೆ ಉರಿಯುವ ಜ್ವಾಲಾಮುಖಿ...

ಕುಂತಿಯ ಕೃಪೆಯ ಫಲ...
ನಿಯೋಗದ ಬಲ
ಚಿನ್ನದ ಪುತ್ಹಳಿಗಳ ಹೆಡೆದೆ....
ಮಕ್ಕಳ ಚೆನ್ನಾಟದಲ್ಲಿ ಬಯಕೆ ಮರೆತೆ ...

ಸಂಜೆಯಾದೊಡನೆ ಅಶ್ವಿನಿ ದೇವತೆಗಳ ನೆನೆದೇನೆ...???!!!

ಅದೊಂದು ದಿನ ಅದು ನಡೆದೇ ಬಿಟ್ಟಿತು..
ಮಿಲನದ ಮೊದಲೇ ಅವನ ಪ್ರಾಣ ಹೊರಟೆ ಬಿಟ್ಟಿತು...
ಕಣ್ಣಲಿ ಹನಿ ನೀರು ಹುಟ್ಟದ ಮೇಲೆ ಅವನ ಸಾವಿಗೆ ನನ್ನಲ್ಲಿ ನೋವೆಲ್ಲಿಯದು..

ಕುಂತಿಗೋ ಮಕ್ಕಳ ಹೊಣೆಯಂತೆ...
ಅವಳು ಸಹಗಮನೆಯಾರಬಾರದಂತೆ...
ನಾನೇ ಅವನ ಹೃದಯ ರಾಣಿಯಂತೆ.....
ಸಹಗಮನದ ಹೊಣೆ ನನ್ನದಂತೆ...
ಈಗ ಭಯವೆನಿಸುತ್ತಿದೆ...

ಹಣತೆಯ ದೀಪ ಸುಟ್ಟರೆ ಬೆಣ್ಣೆ ಸವರಿದ ಅಮ್ಮನ ನೆನಪು ಮಾಸೇ ಇಲ್ಲದಿರುವಾಗ ..
ಒಡಲ ಬೆಂಕಿಯೇ ಆರದಿರುವಾಗ ...
ದೇಹವ ಬೆಂಕಿಗೆ ಒಡ್ದಬೇಕೇ .....
ಮುದ್ದು ಬೊಮ್ಮಟೆಗಳ ತೊರೆಯಬೇಕೆ...

ಧಗಧಗಿಸುವ ಚಿತೆಯಲ್ಲಿ ......
ಅವನೊಡನೆ ನಾನು...
ಬದುಕಿದ್ದಾಗ ಇರದ ಮಿಲನವ ಸಾವಲ್ಲಿ ಹುಡುಕ ಬೇಕೇ… ಬೇಕೇ…..

ಧಗಧಗಿಸುವ ಚಿತೆ...
ಚಿತೆಯ ಮುಂದೆ ನಿಂತ ಮನದ ತುಂಬಾ ..
ಹಾದುಬಂದ ಬದುಕ ಕವಲುಗಳ ಧಾರೆ....
ಕಣ್ಣ ತುಂಬಾ ಕಂಬನಿಯ ಧಾರೆ....
ಈ ಧಾರೆಗೆ ಚಿತೆ ಆರಬಾರದೆ............

ಇತಿ...
ಮಾದ್ರಿ....

Monday, 29 July 2013
















"ಪಾರಿಜಾತಕ " ಅನ್ನುವ ಒಬ್ಬ ರಾಜಕುವರಿ..ಸೂರ್ಯ ದೇವನ ಪ್ರೀತಿಸಿದಳು .ಅವನ ಮನ ಗೆಲ್ಲಲು ಇನ್ನಿಲದಂತೆ ಯತ್ನಿಸಿದರೂ ಅವ ಒಲಿಯಲಿಲ್ಲ...ಅಗ್ನಿಪ್ರವೇಶ ಮಾಡಿ ದೇಹ ತ್ಯಾಗ ಮಾಡಿದ ಆಕೆಯ ಬೂದಿಯಿಂದ ಒಂದು ಮರ ಹುಟ್ಟಿತು..ಆ ಮರದ ಹೂವೆ ಪಾರಿಜಾತ ಪುಷ್ಪ ..ತನ್ನಿನಿಯನ ನೋಡಬಾರದು ಎಂಬಂತೆ ರಾತ್ರಿಯಲ್ಲೇ ಅರಳಿ ಬೆಳಗು ಮೂಡುವುದರಲ್ಲಿ ಕಂಬನಿಯಂತೆ ಉದುರಿ ಬೀಳುತ್ತವೆ....:))' ಅದೇಕೋ ಈ ಹೂವು ನನಗೆ ಹೊವಾಗಿ ಅಲ್ಲದೆ ಹೆಣ್ಣಾಗಿಯೇ ಕಾಣುತ್ತಾಳೆ.......:))))

ಅನುದಿನವು ನಿನ್ನ ಪ್ರೀತಿಯ ಗುಂಗಿನಲ್ಲಿ
ಸಂಜೆ ರಂಗ ಒಡಲೊಳಗೆ ಬಸಿದು...
ನಿನ್ನ ಪ್ರೇಮದ ಸುಗಂಧ ಪೂಸಿ...
ನಿಶೆಯ ಅಂಗಳದಿ ನಿಶಬ್ದವಾಗಿ ನಿನಗಾಗಿ ಅರಳಿ
ನೀನೊಲಿಯದ ಮೇಲೆ ನನಗೇನಿದೆ ಎಂದು ನೊಂದು ಬೆಂದು
ಕಣ್ಣ ಹನಿಯ ತೆರದಿ ಉದುರುವ ನನ್ನ
ನೀ ಗುರುತಿಸಲಿಲ್ಲ ನಲ್ಲ.....

ಕೆಳಗೆ ಬಿದ್ದ ಹೂವುಗಳು ಪೂಜೆಗೆ ಸಲ್ಲದೆಂದರೆಲ್ಲ......

ಯಾರು ಏನು ಅಂದರೇನು...
ಕೆಳಗೆ ಬಿದ್ದವಳಾದರೇನು...
ಎಲ್ಲರಂತ ಹೂವು ನೀನು
ಅಂದೂ
ಇಂದೂ
ಮುಂದೆಂದೂ
ನನ್ನ ಮುಡಿಯನೇರು ನೀನು
ಎಂದು
ದೇವ ಹರಸಿದನಲ್ಲ...:))))) 





















ನಿನ್ನೊಡಲ ನೋಡುತ್ತಾ 

ನನ್ನನೇ ನಾನು ತೆರೆದುಕೊಳ್ಳುತ್ತಾ...
ನನ್ನಂತೆ ನೀನೋ ..

ನಿನ್ನಂತೆ ನಾನೋ..
ಅರಿಯದೆ ಹೋಗುತ್ತಿದ್ದೇನೆ ಕಾವೇರಿ...

ನಿನ್ನೊಳಗೆ ನನ್ನ ನೋಡಿದಾಗ...
ನಾನು ನೀನು ಬೇರೆಯಲ್ಲ ಅನಿಸಿದ್ದೇಕೆ...
ನಿನ್ನ ಕಲರವ
ನನ್ನದೇ ನಗು ಅನಿಸಿದ್ದೇಕೆ...
ನಡುವೆಲ್ಲೋ ನಿನ್ನ ಮೌನ
ನನ್ನೊಳಗಿನ ಸುಪ್ತ ಗಾನ ಅನಿಸಿದ್ದೇಕೆ...
ಅಲ್ಲೆಲೋ ನೀನು ಧುಮ್ಮಿಕ್ಕುವಾಗ
ನನ್ನೊಳಗಿನ ಭಾವನೆಗಳ ಮಹಾಪೂರ ಅನಿಸಿದ್ದೇಕೆ ..
ನೀನು ಕಡಲಿನೊಡನೆ ಬೆರೆಯಲು ಸರಸರನೆ ಹರಿವಾಗ...
ನಲ್ಲನೆಡೆಗಿನ ನನ್ನ ನಡೆಯು ನೆನಪಾದುದ್ದೇಕೆ...
ಶರಧಿಯೊಡಲ ಸೇರಿದೊಡನೆ ನಿನ್ನ ನೀನು ಮರೆತಾಗ
ನನ್ನ ಅವನ ಮಿಲನ ನೆನೆದು ಕೆಂಪಾದುದ್ದೇಕೆ ..
ಅರಿಯದೆ ಹೋಗುತ್ತಿದ್ದೇನೆ ಕಾವೇರಿ...


ನಿನ್ನೊಡಲ ನೋಡುತ್ತಾ
ನನ್ನನೇ ನಾನು ತೆರೆದುಕೊಳ್ಳುತ್ತಾ...
ನನ್ನಂತೆ ನೀನೋ ..
ನಿನ್ನಂತೆ ನಾನೋ..
ಎನಿಸುವಾಗ.....

ನನ್ನ ಕೊಡುಕೊಳ್ಳುವಿಕೆಯ ಪರಿ..
ನಿನ್ನ
ಏನು ಬಯಸದೆ ಪ್ರೀತಿ ಹರಿಸುವ ಪರಿ
ಮನದಲೆಲ್ಲೋ ಮಿಂಚಿನಂತೆ ಹೊಳೆದು...
ನೀನೆಲ್ಲಿ...ನಾನೆಲ್ಲಿ
ಅನಿಸಿದ್ದು ಸುಳ್ಳಲ್ಲ ಕಾವೇರಿ...:)))

ಮೊನ್ನೆ ತಲಕಾಡಿನ ಕಾವೇರಿಯ ತಟದಲ್ಲಿ ಅವಳೊಡನೆ ನಡೆದ ನನ್ನ ಮೌನ ಸಂಭಾಷಣೆ...:)))


ಅವನಿಗಾಗಿ, ಅವನಿಂದ ....:)))

ನೀನು Mr. Perfect ಅಲ್ಲ....ನಾನು Mrs. Perfect ಅಲ್ಲ....ನಾವು ಹಾಗೆ ಆಗುವುದೂ ಸಾಧ್ಯವೂ ಇಲ್ಲ...ಆದರೂ ನಾವಿಬ್ಬರು ಉತ್ತಮ ಮಾನವರು...ತಪ್ಪೇ ಮಾಡದವರೇನಲ್ಲ.. ಮಾಡಿದ ತಪ್ಪ ಒಪ್ಪಿ..ಕ್ಷಮೆ ಕೇಳುವ ಮನ ಇಬ್ಬರಲ್ಲೂ ಇದೆ...ಕಣ್ಣ ಹನಿ ಕೆಳ ಜಾರುವ ಮೊದಲೇ ಮೊಗದಲ್ಲಿ ನಗುವ ಅರಳಿಸಬಲ್ಲವ ನೀನಾದರೆ...ನಿನ್ನ ಮೊಗದ ರೇಖೆಗಳಿಂದಲೇ ನಿನ್ನ ಭಾವ ಅರಿತು ಅದಕ್ಕೆ ತಕ್ಕಂತೆ ನಡೆವ ಮನ ನನಗಿದೆ...ಕವಿತೆಗಳ ಜಪಿಸಿ ಒಪ್ಪಿಸಿ ನನಗಾಗಿ ನೀ ಹಾಡದೆ ಇದ್ದರೂ ...ನಿನ್ನ ಮನದಲ್ಲಿ ನಾನಿರುವೆ ಎಂದು ತಿಳಿದಿದ್ದೇನೆ ...ನನಗಾಗಿ ಸಮಯ ನೀಡದೆ ಇದ್ದರೂ..ನಾ ಕೇಳಿದರೆ ಇಲ್ಲ ಎನ್ನಲಾರೆ ಎಂದೂ ಗೊತ್ತಿದೆ...ಎಲ್ಲರ ನಡುವೆ ಕೂಡ ನಾ ನಿನ್ನ ನೆನೆವೆ ಎಂದು ನಿನಗೂ ತಿಳಿದಿದೆ.... ಅದಕ್ಕೆ....ನಿನ್ನ ನೋಯಿಸಲಾರೆ...ನಿನ್ನ ಬದಲಿಸ ಬಯಸಲಾರೆ...ನಿನ್ನಿಂದ ಸಾದ್ಯವಿರದ ಏನನ್ನು ಕೇಳಲಾರೆ...(ಸಮಯವನ್ನು ಕೂಡ) ಏನೇ ಆದರೂ...ಕೊನೆಗೆ ನೀನೇ ಬಂದು ನಗಿಸಿದಾಗ ನಗುವೇ....ನೀ ತಪ್ಪು ಮಾಡಿದಾಗ ಕಿರಚಿ ಪರಚಿ ಅಳುವೇ..(!!), ನೀನಿಲ್ಲದೆ ಇದ್ದಾಗ ನಿನ್ನ ಮಿಸ್ ಮಾಡಿಕೊಳ್ಳುವೆ.....ಯಾಕೆ ಅಂದ್ರೆ ನಾವಿಬ್ಬರು ಹುಲುಮಾನವರೇ ಹೊರತು ದೇವ ಮಾನವರಲ್ಲ...ಅಲ್ಲವೇ...ನಿನ್ನ ಜೊತೆಯಿಂದ ನಾನು ಬೆಳೆದಿದ್ದೇನೆ ಗೆಳೆಯ .....ಬದುಕು ಬರಿ ಅರ್ಥೈಸಿಕೊಳ್ಳುವಿಕೆ...ಹಂಚಿಕೊಳ್ಳುವಿಕೆ....ಬದುಕು ಪ್ರೀತಿ...ಬದುಕು ಅಂದ್ರೆ ಗೆಳೆತನ ..ಬದುಕು ಅಂದ್ರೆ ನಿನಗೆ ನಾನು....ನನಗೆ ನೀನು.....ನೀನು ಮತ್ತು ನಾನು ಅಲ್ಲ....ನೀನು ನಾನು..ಅಲ್ಲ....ಬರಿ ನಾವು...ಅಂದ್ರೆ ಪ್ರೀತಿ....ಅಷ್ಟೇ...ಅಲ್ಲವೇ ...... :))))
ಪ್ರಕೃತಿಪುರುಷ


ಅವಳಿಗೆ ಸಾಗರ ತಟ ಅಂದ್ರೆ ಅದಮ್ಯ ಪ್ರೀತಿ....
ಘಳಿಗೆಗೊಮ್ಮೆ ಬಂದು ಅವನ ಸೋಕುವ ಹಂಬಲ..."ಹೇಗಿದ್ದೀಯ ಗೆಳೆಯ" ಎನ್ನುವ ಬಯಕೆ...
ಬಂದೇ ಬರುತ್ತಿದ್ದಳು....ಕೇಳೇ ಕೇಳುತ್ತಿದ್ದಳು... 
ಅಲ್ಲೊಂದು ಬಂಡೆರಾಯ ..ಅವನಿಗೆ ಇವಳ ಕೆಣಕುವ ಆಸೆ.....ಅವಳ ಕಂಡು ಹೇಳಿದ.."ನಿನ್ನ ನಾ ತಡೆಯುತ್ತೇನೆ...ನಿನ್ನ ಹೋಗಗೊಡುವುದಿಲ್ಲ"...
ಅವಳದು ಅದೇ ಸ್ಥಿರ ನಗು.."ನಾ ನಿನ್ನ ದಾಟಿ ಹೋಗಬಲ್ಲೆ...ನನಗೆ ಅವನೆಂದರೆ ಪ್ರಾಣ.."
ಅವನ ರೊಚ್ಚಿಗೇಳಿಸುವಂತ ನಗು......ಅವನೂ ಗಟ್ಟಿಯಾಗಿ ನಿಂತ.....
ಇವಳು ಅಷ್ಟು ದೂರದಿಂದಲೇ ನಗುತ್ತಾ ಆದರೆ ರಭಸವಾಗಿ....ಅವನ ತಲುಪುವ ಹುರುಪಿನಿಂದ...ಬಂದೇ ಬಂದಳು...
ಬಂಡೆ ಸ್ವಲ್ಪವು ಅಲುಗಾಡಲಿಲ್ಲ.....ಅಷ್ಟೇ ರಭಸದಿಂದ ಹಿಂದೆ ಹೋದಳು ಅವಳು......
ಬಂಡೆರಾಯ ನಕ್ಕ...ಸೋತೆಯಲ್ಲ ಎಂಬಂತೆ ನಕ್ಕ....
ಈಕೆಯ ಮೊಗದಲ್ಲಿ ಅದೇ ನಗು....ಅವನ ರೊಚ್ಚಿಗೇಳಿಸುವ ಮುಗ್ಧ..ಸುಂದರ ನಗು...."ಗೆಳೆಯ...ಒಂದೊಮ್ಮೆ ನೀನಿರುವ ಆ ಇಡಿ ಸಾಗರ ತಟ ನಿನ್ನ ಹಾಗೆ ಬಂಡೆಯಾಗಿತ್ತು...ನಿನ್ನ ನಾ ಸೋಕಿ ಹಿಂದೆ ಬಂದಾಗ...ನಿನ್ನ ಅಣುಗಳು ನನ್ನೊಡನೆ ನನ್ನೊಡಲ ಸೇರಿಕೊಂಡವು.. ಪ್ರತಿ ಬಾರಿ ನಿನ್ನ ನಾ ಸೋಕಿದಾಗ ಇದೇ ಆಗುತ್ತದೆ...ಎಲ್ಲಿಯವರೆಗೆ ನೀನು ಇಡಿಯಾಗಿ ತಟದೊಡನೆ ತಟವಾಗಿ ಸೇರಿಕೊಳ್ವೆಯೋ ಅಲ್ಲಿಯವರೆಗೂ ಹೀಗೆ ಬರುತ್ತೇನೆ...ಆಮೇಲೆ ನೀನೂ ನನ್ನ ಪ್ರೀತಿಸುತ್ತೀಯ ...ತಟದೊಡನೆ ತಟವಾಗಿ...ನಾನು ಬಂದೇ ಬರುತ್ತೇನೆ ನಿನ್ನ ಪ್ರೇಮ ಕನ್ನಿಕೆಯಾಗಿ" ಅಂದ್ಲು.....
ಪ್ರಕೃತಿ ತನ್ನ ಸೌಂದರ್ಯ..ಸ್ನೇಹ, ಪ್ರೀತಿ, determination ತ್ಯಾಗದಿಂದ ಪುರುಷನನ್ನ ಗೆಲ್ಲುತಲೇ ಹೋಗುತ್ತಾಳೆ...ಇವರ ಮಿಲನಕ್ಕೆ ಇವರ ಮಿಲನಕ್ಕೆ ಭೂಮಿ ಸುಂದರವಾಗುತ್ತಾ ರೂಪಾಂತರಗೊಳ್ಳುತ್ತಾ ನಗುತ್ತಾಳೆ ...ಬದುಕುತ್ತಾಳೆ ...ಉಳಿಯುತ್ತಾಳೆ ..........
ಹುಚ್ಚು ಮನದ ಒಂದಷ್ಟು ಬಿಚ್ಚು ಮಾತುಗಳು 

ಶಿರವೆ ನಶ್ವರ ಎಂದಿರುವಾಗ ...
ಕಿರೀಟದ ವ್ಯಾಮೋಹವೇಕೆ ಎಲೆ ಮನವೇ....
ಸಾವು ಕಟ್ಟಿಟ್ಟ ಬುತ್ತಿ ಎಂದಿರುವಾಗ...
ಸಲ್ಲದ ಪ್ರತಿಷ್ಠೆ ಏಕೆ ಮೂಢ ಮತಿಯೇ...


ರಕ್ತದಿಂದಲೇ ಹುಟ್ಟಬೇಕಿಲ್ಲ.
ಬಂಧುಗಳು ಬಂಧನಗಳು 
ಭಾವದಿಂದಲೇ ಭವ 
ಬಂಧುಗಳು ಬಂಧನಗಳು 
ಭಾವನೆಗಳಿದ್ದರೆ ಅಪರಿಚಿತನು ಬಂಧುವಂತೆ......
ಭಾವನೆಗಳು ಮುರುಟಿ ಹೋದರೆ....ಬಂಧುಗಳು ಅಪರಿಚಿತರಂತೆ.... 

ಸುಡುವ ಬೆಂಕಿಗೆ ತಿಳಿಯದು
ಯಾರ, ಹೇಗೆ , ಏಕೆ ಸುಡುವೆ ಎಂದು...
ಹಚ್ಚುವ ಮಾನವನಿಗೆ ತಿಳಿಯದೆ..
ಸುಡುವ ಬೆಂಕಿಯ ನೋವು,
ಮನವ ದಹಿಸುವ ಕಾವು...

ನಿನ್ನ ಕರಗಳಿಂದ ಸೃಷ್ಟಿಯಾದ
ಕಲ್ಲು ದೇವರ ಪೂಜಿಸುವ ನೀನು....
ದೇವನ ಕರಗಳಿಂದ ಸೃಷ್ಟಿಯಾದ
ಸಹಮಾನವನ ಮೆಚ್ಚಲಾರೆ ಸಹಿಸಲಾರೆಯಲ್ಲ ಮಾನವ...


ದೀಪ ದೀಪವ ಕಾಣಲು
ಬೆಳಕು ಬೇಕು.....
ನನ್ನ ಪ್ರೀತಿಯ ನೀ ಅರಿಯಲು
ನಿನ್ನಲ್ಲು ಪ್ರೀತಿ ಇರಬೇಕು ಗೆಳೆಯ....:

ಕಿಚ್ಚ ಹಚ್ಚಲೇ ಬೇಕೆಂದಿದ್ದರೆ
ಮಾನವತೆಯ ,ಪ್ರೀತಿಯ ಕಿಚ್ಚು ಹಚ್ಚು ಮನವೇ
ಅದು ಕಿಚ್ಚೆ ಆದರು ಉರಿದು ಬೆಳಗಲಿ...
ದ್ವೇಷದ ಕಿಡಿ ಬಿತ್ತಿ
ದಳ್ಳುರಿಯ ನೋಡ ಬಯಸ ಬೇಡ..
ಅದು ಕಿಡಿಯೇ ಆದರೂ ಸುಟ್ಟೀತು ಇಡೀ ಜಗವೇ...

ಹೇಗೆ ಪ್ರೀತಿಸಲಿ 'ಬದುಕೇ" ನಿನ್ನ....
ನಿನ್ನ ಒಂದೊಂದು ಉದಯ
ನನ್ನನ್ನು ಒಂದೊಂದು ಅಸ್ತಮದೆಡೆಗೆ ಕೊಂಡೊಯ್ಯುವಾಗ ...:))

ಸತ್ಯ....
ಸತ್ಯ...
ಸತ್ಯ........
ಹತ್ತು ಹಲವು ಬಾರಿ ಬರೆದ ಆವ.....
ಪುಟದ ರೂಪ ಬದಲಾಗಲಿಲ್ಲ.....
ಹೊತ್ತಗೆಯ ಅಂದ ಕುಗ್ಗಲಿಲ್ಲ.....
ಮಿಥ್ಯ ....
ಎಂದು ಒಮ್ಮೆ ಬರೆದ ಒಡನೆ.........
ಹೊತ್ತಗೆಯ ಬಣ್ಣವೇ ಬದಲಾಗಿ ಹೋಯ್ತಲ್ಲ..........

ವಿಧಿ ಎನ್ನುವ
ದ್ರೋಣಾಚಾರ್ಯ...
ದಿನಕ್ಕೊಂದು
ಕ್ಷಣಕ್ಕೊಂದು
ಚಕ್ರವ್ಯೂಹ
ರಚಿಸುತ್ತಿದ್ದರೆ...
ಮನ ಅಭಿಮನ್ಯುವಾಗಿ
ಚಕ್ರವ್ಯೂಹವ ಛೇದಿಸಿ
ಎಷ್ಟೋ ಬಾರಿ
ಸೋತು
ಸತ್ತು
ಮತ್ತೆ ಎದ್ದು ನಿಲ್ಲುತ್ತಿದ್ದೆ
ನನ್ನ ನೀನು ಸೋಲಿಸಲಾರೆ ಎಂದು.

ದೇಹ ಅನ್ನೋ ಮನೆ........
ಇಟ್ಟಂತೆ ..
ತೊಟ್ಟಂತೆ....
ಬೆಳೆಸಿದಂತೆ....
ಹೋಗುವಾಗ
ಪಂಚಭೂತಗಳಲ್ಲಿ ಲೀನವಾದರೂ ....
ಕುರುಹುಗಳ ಉಳಿಸಿ ಹೋಗುವಂತೆ.....


ಬುದ್ಧನಾಗಬೇಕೆಂದು
ಬೋಧಿವೃಕ್ಷದ ಕೆಳಗೆ ಕುಳಿತನವ
ಬದ್ದನಂತೆ...
ಮೀನೊಂದನ್ನ ಕಚ್ಚಿ ತಂದು
ಮರದ ಮೇಲೆ ಕುಳಿತ ಕಾಗೆ
ತಪ್ಪಿ ಬೀಳಿಸಿತದನ
ಅವನ ತಲೆಯ ಮೇಲೆ.....
ಕೆರಳಿದ ಅವನ ಉರಿಗಣ್ಣಿಗೆ ಸಿಲುಕಿ
ಬೂದಿಯಾಯಿತಾ ಕಾಗೆ...
ತನ್ನ ಶಕ್ತಿಗೆ ಸಂತೃಪ್ತನಾದ ಅವ ಮತ್ತೆ
ಬದ್ದನಾಗಿ ಕುಳಿತ ಬುದ್ಧನಂತೆ ..............!!!

ಹುಟ್ಟು ನೀಡಿ ಬಂಧಗಳಿಂದ ಬಂಧಿಸುಯಾದರೆ
ಸಾವ ಕಳುಹಿ ಎಲ್ಲ ತೊರೆಸುವೆಯೇಕೆ ...
ಆ ಮನೆಗೆ ಹೊಸ ಬೆಳಕ ನೀಡುವಾಗ...
ಈ ಮನೆಯ ಬೆಳಕ ನಂದಿಸುವ ಆಟವೇಕೆ...
ಹುಟ್ಟಿನ ಸಿರಿಯೇಕೆ....
ಮರಣ ಮೃದಂಗವೇಕೇ....
ನಿನ್ನ ಲೀಲೆಯ ನಾ ಅರಿಯಲು
ನೀನೀ ಆಟ ಕಟ್ಟುವೆಯಾದರೆ...
ನಾ ನಿನ್ನ ಪ್ರೀತಿಸಬೇಕೆ..
ನಿನಗೆ ಹೆದರಬೇಕೇ..
ನಿನ್ನ ದ್ವೇಷಿಸಬೇಕೇ..
ನಿನ್ನಿರುವಿಕೆಯ ಪ್ರಶ್ನಿಸಬೇಕೆ...!!!??!!!?????

 ಆಚಾರವಿಲ್ಲದ
ನಾಲಿಗೆ
ಗಾಜಿನದಾಗಿದ್ದರೆ.........
ಮಾತನಾಡುವ ಮುನ್ನ
ತನ್ನವರಿಗಾಗಿ ಅಲ್ಲದಿದ್ದರೂ..
ತನಗಾಗಿ
ಚಿಂತಿಸುತ್ತಿದ್ದನೇನೋ.............
ಹೀನ ಮಾನವ...........

ತಿಳಿಗೊಳದ ತಿಳಿನೀರಿಗೆ ಕಲ್ಲುಹಾಕಲೇಕೆ ....
ಆ ತಿಳಿನೀರಿಗಾಗಿ ಕಣ್ಣೀರು ಹಾಕುವ ಮಂದಿಯಿದ್ದಾರೆ...
ಬೇಡವೆಂದವರಿಗೂ ಅನ್ನವಿಕ್ಕಿ ಅನ್ನದ ಬೆಲೆಯೇ ಇಳಿಸುವಿರೆಕೆ...
ಅನ್ನಕ್ಕಾಗಿ ದೇಹವನ್ನೇ ಬೆಲೆ ಕಟ್ಟುವವರಿದ್ದಾರೆ...!!!!!!!

ಹೃದಯದ ಜ್ವಾಲೆಯ ನಂದಿಸಲು
ಕಂಬನಿ ಬಳಸುವೆಯೇಕೆ ಎಲೆ ಮನವೇ...
ಹೊತ್ತಿದ ಜ್ವಾಲೆಯ ಒಲೆಯೆಂದು ತಿಳಿದು
ನಿನ್ನ ಒಡಲ (ತಿಳಿವಿನ) ಹಸಿವ ಬೇಯಿಸಿಕೊ
ಬದುಕ ರೂಪಿಸಿಕೊ...:)))


ಒಂದೆರಡು ಕಿರು ಕಥೆಗಳು 

ಹೇಳದೆ ಉಳಿದ ಅವಳ  ಕಥೆ...
ಅವಳು ಆ ಮರದ ಅಡಿಯಲ್ಲಿ ನೆರಳು ಬೆಳಕಿನಾಟವ ನೋಡುತ್ತಾ ನಿಂತಳು...ಅಂದು ಅವಳು ಅವನಿಗಾಗಿ ಬಂದಿರಲಿಲ್ಲ...ಆದರೂ ಅವನು ಅವಳ ಮನದ ಮೂಲೆಯಲ್ಲೇ ಇದ್ದ... ಅವನೊಡನೆ ಇದ್ದ, ಇಲ್ಲದ ಸಮಯ ನೆರಳು ಬೆಳಕಿನಂತೆ ಅವಳ ಮನದಲ್ಲಿ ಉಳಿದು ಹೋಗಿತ್ತು.....ಆ ಮರ ಅದಕ್ಕೆ ಸಾಕ್ಷಿಯಾಗಿತ್ತು ......

ಅವಳ ಮನೆಯ ಮನದ ಬಾಗಿಲಿಗೆ ಎರಡು ಆಯ್ಕೆಗಳಿವೆ ಎಂದು ಇದೆ ಅವಳಿಗೆ ಗೊತ್ತಿತ್ತು..ಒಂದು ಅವಳು ಒಳಗೇ ಉಳಿದು ಬಾಗಿಲು ಹಾಕಿಕೊಳ್ಳುವುದು..ಮತ್ತೊಂದು ಅವನನ್ನು ಕ್ಷಮಿಸಿ ಒಳ ಬರಮಾಡಿಕೊಂಡು ಬಾಗಿಲು ಹಾಕುವುದು ..ಅವಳು ಎರಡನೆಯದ ಆಯ್ದುಕೊಂಡಳು ..ಏಕೆಂದರೆ ಬದುಕು ಅವಳಿಗೆ ಕ್ಷಮಿಸುವುದ ಕಲಿಸಿತ್ತು .....:)))

ಎಲ್ಲಿಂದಲೋ ಬಂದ ಬಾಣ ಅವಳೆದೆಗೆ ನಾಟಿದಾಗ ತುಟಿ ಕಚ್ಚಿ ನೋವ ತಡೆದುಕೊಂಡ ಅವಳ ಜೀವ, ಬಿಲ್ಲು ಹಿಡಿದ ಕೈಗಳ ಹಿಂದಿನ ಮೊಗ ಕಂಡಾಗ ಉಸಿರಾಡುವುದ ಮರತೆ ಬಿಟ್ಟಿತು..................!!!!!

ಹೀಗೊಂದು ಕಥೆ...............
ಅವನು: ಅಳ್ತಾ ಇದ್ದೆಯಾ???
ಅವಳು: ಇಲ್ಲ, ಕಣ್ಣಲಿ ಧೂಳು....
ಕಣ್ಣೀರ ಅರಿಯದವನ ಮುಂದೆ, ಅವಳು ಏನು ಹೇಳಲು ಇಚ್ಛಿಸಲಿಲ್ಲ.....!!

ವಿಪರ್ಯಾಸ..!!!
ಕಥೆಯ ಬರೆದು ಮುಗಿಸಿದ ಅವಳು ನಿಟ್ಟುಸಿರಬಿಟ್ಟು ಹೊರೆ ಕಳಚಿದಂತೆ ನಿದ್ರೆಯ ಮೊರೆ ಹೋದಳು...
ಕಥೆ ಓದಿ ಮುಗಿಸಿದ ಇವ ನಿಟ್ಟುಸಿರಬಿಟ್ಟು ಹೊರೆ ಹೊತ್ತಂತೆ ನಿದಿರೆ ಬಾರದೆ ಮಗ್ಗುಲು ಬದಲಿಸಿದ.....!!!!


ಒಲ್ಲದ ಗಂಡನಿಗೆ ಮೊಸರಲ್ಲೂ (ಮೊಸರನ್ನ)ಕಲ್ಲು ಅನ್ನೋದು ಒಂದು ಗಾದೆ............
ದಿನ ಬೆಳಿಗ್ಗೆ 4 ಗಂಟೆಗೆ ಎದ್ದು ಒಲೆ ಉರಿ ಹಾಕುವ ಹೆಂಡತಿಯ ಬಗ್ಗೆ ಕಾಳಜಿಯಿಂದ ಆವ ಮನೆಗೆ ಸೋಲಾರ್ ಹಾಕಿಸಿದ......
ಎಂದೂ ಯಾವುದನ್ನೂ positive ಆಗಿ ನೋಡದ ಅವಳು '"ಅಯ್ಯೋ ಸೌದೆ ರೇಟ್ ಅಷ್ಟ ಆಗಿದೆ ಪುಗಸಟ್ಟೆ ಬಿಸಿ ನೀರು ಸಿಗುತ್ತೆ ಅಂತ ಸೋಲಾರ್ ಹಾಕಿಸಿದ ಅಷ್ಟೇ"ಅಂದ್ಲು...........!!!!!


'ಸೂರ್ಯ ಮುಳುಗಿ ಹೋದ,. ಕತ್ತಲು ಆಯಿತು,....ಹೋ...ಎಲ್ಲ ಮುಗಿದು ಹೋಯ್ತು,'....ಅಂದ ಆವ...
'ಏನ್ ಮುಗಿತು ಮಹಾರಾಯ್ರೆ,......ನಾವು ಮಲಗಿ ನಾಳೆ ಮತ್ತೆ ಏಳೋದ್ರಲ್ಲಿ ಸೂರ್ಯ ಬಂದಿರ್ತಾನೆ,.....ಕತ್ತಲು ಹರಿದು ಬೆಳಗು ಮೂಡಿರುತ್ತೆ , ಹಕ್ಕಿಗಳು ಚಿಲಿಪಿಲಿ ಅಂತಾವೆ,....ಎಲ್ಲ ಎಂದಿನಂತೆ ನಡೆದಿರುತ್ತೆ,......ಏಳೋದ್ದಕ್ಕೆ ನಮಗೆ ಮನಸ್ಸಿರಬೇಕು ಅಷ್ಟೇ'.....ಅಂದ್ಲು ......

ಬದುಕು ಅಷ್ಟೇ ಅಲ್ವೇ............ನಮ್ಮ ಬದುಕು ನಮ್ಮ ಕೈಲಿ.....:))))


ಅವಳು ಅತ್ತುಕರೆದು ರಂಪ ಮಾಡಲಿಲ್ಲ, ...ಮೊಗ ತಿರುಗಿಸಿ ಹೋಗಲಿಲ್ಲ, .....ಧಡ್ ಎಂದು ಕದವ ಮುಚ್ಚಲಿಲ್ಲ,.. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ಅವನನ್ನು ಒಬ್ಬ ಸಾಧಾರಣ ದಾರಿಹೋಕನ ಹಾಗೆ ನೋಡಿದ ಅವಳ ನೋಟ ಅವನನ್ನ ನಡುಗಿಸಿ ಬಿಟ್ಟಿತು.......ಕಥೆ ಮುಗಿದೇ ಹೋಯಿತು......................
ಸುಮ್ಮನೆ ಅಮ್ಮನಿಗಾಗಿ ....:))

ಅಮ್ಮ ,
ಅದೇನೊ ಗೊತ್ತಿಲ್ಲ ಅಮ್ಮ ನಿನಗೆ ಇಂದು ಬರೆಯಲೇ ಬೇಕೆನಿಸಿತು....'ದಿನಾ ಫೋನ್ ಅಲ್ಲೇ ಮಾತಾಡ್ತೀಯಲ್ಲ ಮಗ, ಮತ್ತೆ ಈಗೇನು ?' ಅಂದ್ಯ....ಏನೋ ಗೊತ್ತಿಲ್ಲ, ಹೇಳೋದಕ್ಕಿಂತ ಬರೆಯಲೇ ಬೇಕು ಅನಿಸಿತು..ಅದಕ್ಕೆ ಬರಿತಾ ಇದ್ದೀನಿ ಅಮ್ಮ...ಒಮ್ಮೆ ಓದಿ ಬಿಡು, ನೀನು ಇನ್ನು ಚಿಕ್ಕ ಹುಡುಗಿ ಅಂತ ಅಂದುಕೊಳ್ಳೋ ನಿನ್ನ ಮುದ್ದಿನ ಮಗಳು ಎಷ್ಟು ಬೆಳೆದು ಬಿಟ್ಲು ಅಲ್ವ ಅಂತ ಅತ್ತು ಬಿಡು, ನಕ್ಕು ಬಿಡು, ಖುಷಿ ಪದು....ಇಲ್ಲ ನೀನು ಎಷ್ಟೇ ಬೆಳೆದರು ನೀನು ನನ್ನ ಮಗಳೇ ಕಣೆ ಅಂತ ಬೈದು ಬಿಡು.....

ನೆನ್ನೆ ಪುಟ್ಟಿ ಅವಳ ಮಾರ್ಕ್ಸ್ ಕಾರ್ಡ್ ಹಿಡಿದು ಅಳ್ತಾ ಬಂದಾಗಲೇ ನನಗೆ ನೀನು ತುಂಬಾ ಕಾಡಿ ಬಿಟ್ಟೆ ಅಮ್ಮ....ಆಗ್ಲೂ ಹಿಂಗೆ ಅಲ್ವ , ನಾನು ನನ್ನ ಫಸ್ಟ್ ರಾಂಕ್ ತಪ್ಪಿ ಹೋಯ್ತು ಅಂತ ಅತ್ತು ಬಂದಿದ್ದು...ನೀನು ನನ್ನ ತಬ್ಬಿ ಮುತ್ತಿಟ್ಟು 'ಅಷ್ಟೇ ತಾನೇ ನನಗೆ ನೀನೆ ಫಸ್ಟ್ ಮಗಾ 'ಅಂತ ಸಮಾಧಾನ ಮಾಡಿದ್ದೆ ಅಲ್ವೇ...ಅಮ್ಮ,ಅಷ್ಟು ಚಿಕ್ಕ ವಯಸ್ಸಿಗೆ ನಿನಗೆ ಅಷ್ಟೆಲ್ಲಾ ಸಮಚಿತ್ತ ಹೇಗೆ ಕೊಟ್ಟಿದ್ದ ಆ ದೇವ್ರು ಗೊತ್ತಿಲ್ಲ...ಅಪ್ಪ ಇಲ್ಲದ ನನಗೆ ಅಪ್ಪನ ಕೊರತೆ ಬರದ ಹಾಗೆ ಬೆಳೆಸಿ ಬಿಟ್ಟೆ.....ನಿನ್ನ ಅಳಿಯ ಬರಲು ಅರ್ಧ ಘಂಟೆ ತಡವಾದರೆ ಆಕಾಶ ಭೂಮಿಗಳ ಒಂದು ಮಾಡೋ ನಾನೆಲ್ಲಿ...ಗಂಡ ಇಲ್ಲ ಅನ್ನೋ ಸತ್ಯ ಅರಿತು ನಿನ್ನ ಕೊರತೆಯ ಮೂಲೆಗೊತ್ತಿ ಅಷ್ಟು ಪುಟ್ಟ ಮಕ್ಕಳ ಬೆಳೆಸಿದ ನೀನೆಲ್ಲಿ......ಕೇಳಿದ್ದು ತಂದು ಕೊಡೋ ಗಂಡ ಒಂದು ದಿನ ಏನೋ ಮರೆತು ಬಂದರೆ ಮುನಿಸಿಕೊಳ್ಳೋ ನಾನೆಲ್ಲಿ.....ಹೊರಗೂ ದುಡಿದು ಮನೆಗೆ ಬಂದೊಡನೆ ಮಕ್ಕಳ ಜೊತೆ ನಗುನಗುತ್ತ ಇದ್ದ ನೀನೆಲ್ಲಿ,....ಏನಾದ್ರೂ ತಿಂಡಿ ಮಾಡಿಕೊಡು ಅಮ್ಮ ಅಂದ ಒಡನೆ ಆ ಉತ್ಸಾಹ ಎಲ್ಲಿಂದ ಬರುತ್ತಿತ್ತು ಅಮ್ಮ ನಿನಗೆ....ಮಾಡಿ ತಿನ್ನಿಸೋವರೆಗೂ ಬಹುಷಃ ನಿನಗೆ ನೆಮ್ಮದಿ ಇರುತ್ತಿರಲಿಲ್ಲ ಅನಿಸುತ್ತೆ...(ನಾನೂ ಇದ್ದೀನಿ ನೋಡು, ಮಕ್ಕಳು ಕೇಳಿದ್ರೆ ಅಜ್ಜಿ ಹತ್ತಿರ ಕೇಳು ಮಾಡಿಕೊಡ್ತಾರೆ ಅನ್ನೋ ಸೋಮಾರಿ,...!!) ಅಮ್ಮ , ನಾನು ಎಷ್ಟು ಮುನಿಸ್ಕೊಳ್ತಾ ಇದ್ದೆ ಅಲ್ವ, ಅದು ಹೇಗೆ ಸಮಾಧಾನ ಮಾಡ್ತಾ ಇದ್ದೆ ಅಲ್ವ ನೀನು... ಈಗ ಪುಟ್ಟಿ ಸಿಟ್ಕ್ಕೊಂಡ್ರೆ ಸಮಾಧಾನ ಮಾಡೋದು ನಾನಂತೂ ಅಲ್ಲ, ಪಾಪ ನಿನ್ನ ಅಳಿಯ, ಅಮ್ಮ ಮಗಳು ಇಬ್ಬರಿಗೂ convince ಮಾಡ್ತಾರೆ........ಅಂದು ನಾನು ಮುಂದೆ ಓದಲೇ ಬೇಕೆಂದು ಹಠ ಹಿಡಿದು ಹಾಸ್ಟೆಲ್ ಸೇರಿದಾಗ ನೀನು ಎಷ್ಟು ಚಡಪಡಿಸಿದ್ದೆ ಅಲ್ವೇ ಅಮ್ಮ, ....ನಾನು ಇಷ್ಟಪಟ್ಟವನನ್ನೇ ಮದುವೆ ಆಗುವೆ ಎಂದು ಹಠ ಹಿಡಿದಾಗ, ನಿನ್ನ ನೋವು ಹಂಚಿಕೊಳ್ಳಲು ಯಾರು ಇಲ್ಲದ ನೀನು ಎಷ್ಟು ನೊಂದಿರಬಹುದು ಅಮ್ಮ,...ಆಗೆಲ್ಲ ನೀನು ಯಾರಿಗೂ ಕಾಣದಂತೆ ಒಬ್ಬಳೇ ಎಷ್ಟು ಅತ್ತಿದೆಯೋ, ಅಂತ ಈಗ ಅರಿವಾಗುತ್ತಿದೆ ಅಮ್ಮ. (ಪ್ರತಿ ಬಾರಿ ನನ್ನ ಮಕ್ಕಳು ನನಗೆ ತಿರುಗಿಸಿ ಮಾತಾಡಿದಾಗ, ಹಠ ಮಾಡಿದಾಗ, ನನಗೆ ನಿನ್ನ ಮೊಗವೇ ಕಣ್ಣ ಮುಂದೆ ಬರುತ್ತದೆ.........)

ಕೆಲವು ವಿಷಯಗಳಲ್ಲಿ ನೀನು ನನ್ನ ಐಡಿಯಲ್ ಅಮ್ಮ....ಎಷ್ಟೇ ನೋವಿದ್ದರೂ ನಗುತ್ತ ಬದುಕ ಬೇಕೆಂದು ಕಲಿಸಿದ ಗುರು ನೀನು....ಯಾರಿಗೂ ತೊಂದರೆ ಕೊಡದೆ ಬದುಕ ಬೇಕು, ನಿನ್ನ ಕಾಲ ಮೇಲೆ ನೀನು ಅಭಿಮಾನದಿಂದ ನಿಲ್ಲಬೇಕು ಅಂತ ಕಲಿಸಿದವಳು ನೀನು, ಸಲ್ಲದ ಪ್ರತಿಷ್ಠೆಗೆ ಬಲಿಯಾಗದೆ ಸಂಬಂಧಗಳ ಉಳಿಸಿಕೊಳ್ಳುವುದ ಕಲಿಸಿದವಳು ನೀನು ,ಬದುಕಲ್ಲಿ ಬರುವ ಕಷ್ಟಕ್ಕೆ ಹೆದರದೆ ತಲೆಗೊಡಲು ಕಲಿಸಿದವಳು ನೀನು , ಮಕ್ಕಳನ್ನ ಹೊಡೆಯದೆ ಕೂಡ ಶಿಸ್ತಿನಿಂದ ಬೆಳೆಸಬಹುದೆಂದು ತೋರಿದವಳು ನೀನು....

Thanx ಅಮ್ಮ ಬದುಕುವ ದಾರಿ ಕಲಿಸಿದ್ದಕ್ಕೆ ಇಂದು ನಾಲ್ಕು ಜನರ ನಡುವೆ ತಲೆ ಗೌರವ ಪ್ರೀತಿಯಿಂದ ಬದುಕಲು ಕಲಿಸಿದ ನಿನಗೆ ನಾ ನೀಡುವ ಉಡುಗೊರೆ ಏನ್ ಗೊತ್ತ ಅಮ್ಮ...ನನ್ನ ಮಕ್ಕಳನ್ನೂ ನೀ ನಮ್ಮನ್ನ ಬೆಳೆಸಿದಂತೆ ಬೆಳೆಸಿ ಬದುಕ ಕಲಿಸುವುದು ...ಯಾಕೆ ಅಂದ್ರೆ ನೀ ನಮ್ಮಿಂದ ಬಯಸುವುದೂ ಅದೇ ತಾನೇ ....ಇದ್ಯಾಕೋ ಜಾಸ್ತಿ ಆಯಿತು ಸುಮ್ಮನೆ ಪೆನ್ ಮುಚ್ಚು ಅಂದ್ಯ....ಇನ್ನೊಂದೇ ಒಂದು ಮಾತು ಬರೆದು ನಿಲ್ಲಿಸ್ತೀನಿ ಅಮ್ಮ.....ಬದುಕಲು ಕಲಿಸುವ ನೀನು, ನಿನ್ನಂತ ಅಮ್ಮನಿಂದಿರಿಗೆಲ್ಲ ನನ್ನ ನಮನ .......ಟೇಕ್ ಕೇರ್ ಅಮ್ಮ.....

ಇಂತಿ ನಿನ್ನ ಪ್ರೀತಿಯ ..........................

ನಲ್ಲ .........once again..:))))))))))


ಎಲ್ಲಾ ಸರಿ ನಲ್ಲ..........
ಆದರೆ....
ನನ್ನ ಮನದಲ್ಲಿ 
ನನಗಿಂತ ಹೆಚ್ಚಾಗಿ 
ನೀನೆ ಇರುವುದು 
ನ್ಯಾಯವೇನಲ್ಲ...;)))))))



ಆ ಎಲೆಯ ಮೇಲೆ ಬಿದ್ದ ಹನಿ ...
ಅತಿ ಸುಂದರ ನಲ್ಲ.....
ನಿನ್ನ ಒಲುಮೆಯ ಹಾಗೆ..........
ಆದರೆ 
ನನಗೆ 
ಎಲೆಯ ಮೇಲೆ ಬಿದ್ದ ಆ ಹನಿಗಿಂತ 
ಭುವಿಗೆ ಬಿದ್ದು 
ಬೇರಿಗಿಳಿವ ಹನಿಯೇ ಇಷ್ಟ ನಲ್ಲ....
ಕಂಡೂ ಕಾಣದೆ ನಿನ್ನಿಂದ ನನ್ನೆಡೆಗೆ ಹರಿವ ಜೀವ ನದಿಯ ಹಾಗೆ.....
ನಿನ್ನೊಲುಮೆಯ ಹಣತೆಯಿಂದ ನನ್ನುಸಿರ ಸೊಡರ ಹಚ್ಚಿದ ಹಾಗೆ...:))))




ನೀ
ಹಚ್ಚಿಟ್ಟ ಹಣತೆಗೆ
ಎಣ್ಣೆ ಬತ್ತಿಯ ಅಗತ್ಯವೇ ಇಲ್ಲ ನಲ್ಲ.....
ಹಗಲೆನ್ನದೆ
ರಾತ್ರಿಯೆನ್ನದೆ
ಮನೆ
ಮನವ
ಬೆಳಗುವುದಲ್ಲ..:))))))



ನನಗಿಂತ
ನನ್ನ
ನೆನಪುಗಳೇ ಚೆಂದವಂತೆ ನನ್ನ ನಲ್ಲನಿಗೆ...
ನಾನು ಕರೆದರೂ ಹೋಗೆನಂತೆ
ಅವುಗಳೋ
ಕರೆಯದೆ ಇದ್ದರೂ ಬಂದು
ಹೋಗೆಂದರು ಹೋಗವಂತೆ..:))))

ಎಲ್ಲರಂತವನಲ್ಲ ನನ ನಲ್ಲ...
ಕಣ್ಣ ಕಂಬನಿಯ
ನಗುವಾಗಿಸುವ ಕಲೆ ಬಲ್ಲನಲ್ಲ..:)))

ನಿನ್ನಿರುವಿಕೆಯಲ್ಲಿ
ನಾನು
ಮಳೆಯಲ್ಲಿ
ತೊಯ್ದ
ಇಳೆಯಂತೆ ನಲ್ಲ..........:))))

ನನ್ನದು ಹುಚ್ಚು ಪ್ರೀತಿಯ ಬಿರುಮಳೆ ನಲ್ಲ ....
ಸೆಳೆದೊಯ್ಯುವಂತದ್ದು .......
ನಿನ್ನದೋ ಬೆಚ್ಚನೆಯ ಒಲವಿನ ಹೊಳೆ ನಲ್ಲ....
ಈಜು ಕಲಿಸುವಂತದ್ದು..:)))


ನೀನೆಟ್ಟ ಮಲ್ಲಿಗೆ ಬಳ್ಳಿಗೆ ಈಗ ತುಂಬು ಯೌವನ ನಲ್ಲ......
ಮೈತುಂಬ ಮೊಗ್ಗ ಹೊತ್ತು ಬಿರಿಯಲು ಕಾದಿಹಳಲ್ಲ.............
ಆದರೂ ...
ನಿನ್ನ ಮೇಲೆ ಅದೆಂತಾ ಒಲುಮೆಯೋ ನಲ್ಲ...
ನಾ ಬಳಿ ಹೋದಾಗೆಲ್ಲ ನಿನ್ನ ಪ್ರೀತಿಯನ್ನೇ ಹೇಳುತ್ತಾಳಲ್ಲ...........:))))


ಎನ್ನ ಬಾಹುಬಂಧನವೇ
ನಿನ್ನ ಕೊರಳ ಮುತ್ತಿನ ಹಾರ...
ಎಂದು ಬೀಗುತ್ತಿದ್ದೆನಲ್ಲ....
ನಿನ್ನ ಹಾರ ಹಳತು ಈಗ..
ಸಿಕ್ಕಿತೆನಗೆ ಬೇರೆ ಹಾರ...
ನಿನ್ನದಕ್ಕಿಂತ ಸುಂದರ ...
ನಿನ್ನದಕ್ಕಿಂತ ಸುಕೋಮಲ...
ಎಂದ ನಲ್ಲನ ನುಡಿಗೆ
ಕಣ್ಣು ತುಂಬಿ,ಮನವು ಮುದುಡಿತಲ್ಲ..
ಓಡಿ ಬಂದ ಮುದ್ದು ಕುವರಿ
ಬಳಸಿದಾಗ ಅವನ ಕೊರಳ...
ತುಂಟ ನಗೆಯ ಬೀರಿದ ಅವನ ಕಂಡು
ನುಡಿದ ನುಡಿಯ ಅರ್ಥ ತಿಳಿದು ಮೋರೆ ಕೆಂಪಾಯ್ತಲ್ಲ..:)))

ನೀನು...
ನಾನು....
ನನ್ನೊಳಗಿನ ನೀನು...
ನಿನ್ನೊಳಗಿನ ನಾನು ....
ಎಲ್ಲಾ ಕವಿಗಳೇ ನಲ್ಲ...
ನಾ
ಅಕ್ಷರಕ್ಕೆ ನಮಿಸಿ ಕವಿತೆ ಎಂದೇನಲ್ಲಾ.........
ನೀನಾದರೋ...
ಮನದ ಗೋಡೆಗಳ ಮೇಲೆಲ್ಲಾ ಕವನ ಬರೆದು
ಒಳಗೆ ಉಳಿದು ಬಿಟ್ಟೆಯಲ್ಲಾ..................:))))

ಎಷ್ಟು ಚೆಂದ ನಲ್ಲ ನಮ್ಮ ಒಲುಮೆ...
ನನ್ನ ಪ್ರೀತಿಯ ರೀತಿಯ ನೀ ಒಪ್ಪಲಾರೆ....
ನಿನ್ನ ಪ್ರೀತಿಯ ರೀತಿಯ ನಾ ಒಪ್ಪಲಾರೆ....
ಆದರೂ
ಇಬ್ಬರೂ ಬಂಧಿಗಳು ಒಲುಮೆಯೊಳಗೆ ....
ಬೇರ್ಪಡದ ಹಾಗೆ..:))))

ಏಕಾಂತದಲ್ಲೂ
ನಾ
ಏಕಾಂಗಿ ಅಲ್ಲ ನಲ್ಲ.........
ಬಳಿ ನೀನಿಲ್ಲದಿದ್ದರೂ
ನಿನ್ನ ಒಲವಿನ ಬಲ ಇದೆಯಲ್ಲ.........:))))

ನಿನ್ನಿರುವಿಕೆಯೆ
ಸಾಕು ನಲ್ಲ...
ಮನದ ವೀಣೆಯ ತಂತಿ ಮೀಟಿ ಝೇಂಕಾರ ಹೊಮ್ಮಲು.......:)))))


ಪದಗಳ ಆಟ ನೋಡು ನಲ್ಲ....
ನಿನಗಾಗಿ ನಾ ಬರೆಯ ಹೊರಟರೆ...
ಕೈಗೆ ಸಿಗದೇ ಅಡಗಿ ಕುಳಿತು ನನ್ನೇ ಅಣಕಿಸುವವಲ್ಲ ........:))))

ಶಿಶಿರನಿಗೆ
ಪ್ರೇಮದ ಪರಿಭಾಷೆ ಗೊತ್ತು ನಲ್ಲ....
ಸದ್ದೇ ಮಾಡದೆ ಎಲೆಗಳ ಉದುರಿಸಿ...
ಭೂರಮೆಯ ಸದ್ದಿಲ್ಲದೇ ಚುಂಬಿಸುವನಲ್ಲ ..:)))))

ಆ ಕವಿತೆ ಎಷ್ಟು ಚೆಂದ ನಲ್ಲ
ಹಾಗೆ ಬರೆಯಲು ನನಗೆ ಬರದಲ್ಲ
ಎಂದೆನೊಮ್ಮೆ ನನ್ನವನಿಗೆ..........
ನಸುನಕ್ಕ ಆವ ........
ಕವಿತೆಗಳೇ ಹಾಗೆ ಗೆಳತಿ....
ಪರಸತಿಯ ಹಾಗೆ.........
ನಮ್ಮದಕ್ಕಿಂತ ಅವರದೇ ಚೆಂದ ಎನಿಸುವ ಹಾಗೆ ಎಂದನಲ್ಲ..........!!!!!!;)

ನೀ ತಂದ ನೂಪುರದ ಬಿನ್ನಾಣಕ್ಕೆ ಸಾಟಿಯೇ ಇಲ್ಲ ನಲ್ಲ.........
ಯಾರ ಇರುವಿಕೆಯ ಪರಿವೆ ಇಲ್ಲದೆ ...
ನಿನ್ನ ನೆನೆದು ಘಲ್ ಅನ್ನುವವಲ್ಲಾ .........:)))))


ನೆಲದ ಮೇಲೆ ಹರಡಿರುವ ಮುತ್ತುಗಳು
ಕಥೆ ಹೇಳಬಲ್ಲವು ನಲ್ಲ.....
ನಿನ್ನೊಲುಮೆ ಅಲೆಯ ತುಂಟಾಟಕ್ಕೆ
ಸೋತು ಉದುರಿದ
ಮೋಹಕ ಕಥೆಯ ಮೌನವಾಗೇ ಹೇಳಬಲ್ಲವಲ್ಲಾ .......:)))))))

ನನ್ನೊಳಗಿನ
ನೀನೆ
ನಿಜವಾದ ಕವಿ ನಲ್ಲ....
ನಾ ನಿನ್ನೊಲವಿನ ಪ್ರತಿಕೃತಿ ಮಾತ್ರ ನಲ್ಲ......:)))

ನಾಳೆ ಪ್ರಳಯವಂತೆ ನಲ್ಲ...
ಎಂದೇನಲ್ಲ..........
ಅದೇನು ಮಹಾ ಬಿಡು ನಲ್ಲೆ....
(20)ವರುಷಗಳ ಹಿಂದೆ ಇದಕ್ಕಿಂತ ಮಹಾ ಪ್ರಳಯ ಎದುರಿಸಿ
ಇನ್ನೂ ಬದುಕಿದ್ದೀನಿ ನೋಡು ಅಂತ ನನ್ನೇ ನೋಡಿ ಹುಸಿನಗುವನಲ್ಲ..........;)))))...


ಮನದ ಭಾವನೆಗಳ ಬಾಗಿಲ ಬಡಿತಕ್ಕೆ......
ನಾ ನೀಡುವ ಉತ್ತರ...
ಕವಿತೆಯ ಝರಿಯಷ್ಟೇ ನಲ್ಲ.................
ನೀ ನೀಡುವ ಉತ್ತರ....
ಮೌನ ಒಲುಮೆಯ ಶರಧಿ ನಲ್ಲ.....:))

ಮೌನವೇ ಬಂಗಾರ ಎನ್ನುವ ನಲ್ಲ
ನಾ ಮೌನವಾದೊಡನೆ ಬೆಚ್ಚಿಬೀಳುವನಲ್ಲ...........
ಕಾರಣ ಕೇಳಿದರೆ....
ನೀ ಮೌನವಾದರೆ ನಲ್ಲೆ.....
ಬಂಗಾರಕ್ಕೆ ಕಾಸು ಎಲ್ಲಿಂದ ತರಲಿ ಎನ್ನುವನಲ್ಲ....;)))))

ಹರಿದ ಸೀರೆಯ ಸೆರಗೂ
ಕಥೆ ಹೇಳಬಲ್ಲದು ನಲ್ಲೆ ಎಂದ ನನ ನಲ್ಲ......
ನಾ ಸೋಜಿಗದ ನೋಟ ಬೀರಿದ ಪರಿಗೆ...
'ಈ ಸೀರೆ ನೋಡು,...
ಅಂದು ನೀ ಮುನಿದು ಮುಂದೆ ಹೋದಾಗ
ನಾ ಸೆರಗೆಳೆದ ತಪ್ಪಿಗೆ ....
ಬಂದ ಬೋನಸ್ ಹಣವೆಲ್ಲ ಸುರಿದು
ಹೊಸ ಸೀರೆಯ ತರಿಸಿಕೊಟ್ಟ ಸೀರೆಯಲ್ಲವೇ ಇದು ' ಎನ್ನುವನಲ್ಲ....;)))!!!!!!!

ಅಗಾಧ ಜೀವನ ಸಾಗರದಲ್ಲಿ ಈಜಿ ಗೆದ್ದು ಬಂದೆ ನಲ್ಲ...
ನಿನ್ನ ಒಂದು ಹನಿ ಕಣ್ಣ ನೀರಲ್ಲಿ ಮುಳುಗಿ ಹೋದೆನಲ್ಲ..:))))

ನಿನ್ನೊಡನೆ ಇರುವ ಪ್ರತಿದಿನವೂ ನನಗೆ ದೀಪಾವಳಿ ನಲ್ಲ...
ನೀನಿಲ್ಲದ ದೀಪಾವಳಿಯು ಖಾಲಿ ಜೋಳಿಗೆಯಂತಾಯಿತಲ್ಲ...:))))


ಕವಿ ನಾನಲ್ಲ ನಲ್ಲ
ನಿನ್ನ ಒಲುಮೆಯ ಕವಿತೆಯಷ್ಟೇ ನಾ ಎಂದೇ ನಲ್ಲನಿಗೆ....
ನೀ ಕವಿಯೋ ಕವಿತೆಯೋ ನಾನರಿಯೆ ನಲ್ಲೆ....
ನನ್ನ ಪಾಲಿಗೆ ನೀ....
ನಾ ಹಚ್ಚಿಟ್ಟ ಪ್ರೀತಿಯ ಹಣತೆ ಎನ್ನುವನಲ್ಲ.... :)))
ಸದ್ದು ಮಾಡಬೇಡ ಗೆಜ್ಜೆಯೇ...
ನೀನು ಹೊಮ್ಮಿಸುವ ಪಿಸುದನಿಗೆ
ನಲ್ಲನಿಗೆ ತಿಳಿದು ಹೋದೀತು
ನಾನವನಿಗೆ ಕಾಯ್ವೆನೆಂದು ........:))))

ಬಲು ಅಪರೂಪ ನಲ್ಲ ನಿನ್ನ ಪ್ರೀತಿಯ ಪರಿ....
ನನ್ನ ಪ್ರೇಮವ ಕದ್ದೊಯ್ಯಲೂ ಇಲ್ಲ...
ನನ್ನಲ್ಲಿ ಪ್ರೇಮವ ಉಳಿಸಲೂ ಇಲ್ಲ...:))))

ನಲ್ಲನ ಪ್ರೀತಿ ಸೊಗಸು...
ನಡುವೆಲ್ಲೋ ಮೂಡುವ ಮುನಿಸೂ ಸೊಗಸು...
ಪ್ರೀತಿಯ ಉತ್ತುಂಗದಲ್ಲೂ...
ವೇದನೆಯ ಉತ್ಕಟತೆಯಲ್ಲೂ..
ಬದುಕ ಕಟ್ಟುವ ಜಾಣ್ಮೆ ಅತಿ ಸೊಗಸು.....:))))

ಒಲುಮೆ ಅಂದ್ರೆ
ನೀ ನನ್ನ ಎಷ್ಟು ಬಾರಿ ನಗಿಸಿದೆ ಅನ್ನುವುದಲ್ಲ........
ನೀ ಎಷ್ಟು ಬಾರಿ ನನ್ನ ಅಳುವ ನಗುವಾಗಿಸಿದೆ ಅನ್ನುವುದು ನಲ್ಲ...........:)))

ನಲ್ಲ........ ಇವನೇ ನನಗೆಲ್ಲಾ ....:))))


ನದಿಯ ಹಾಡಿನ ಸೊಬಗ 
ನದಿಯ ಮೂಲದಲ್ಲೇಕೆ ಹುಡುಕುವೆ ನಲ್ಲ....
ಸಾಗರನ ಅಧರ ಚುಂಬಿಸುವಲ್ಲಿ ಹುಡುಕು..
ನನ್ನ ಒಲವ ಗೀತೆಯ 
ನಿನ್ನಿರುವಿಕೆಯಲ್ಲಿ ನಗುವ ನನ್ನ ಮೊಗದಲ್ಲೇಕೆ ಹುಡುಕುವೆ ನಲ್ಲ...
ನೀನಿಲ್ಲದಿದ್ದರು ನಿನ್ನ ನೆನಪಲ್ಲಿ
ಅಳುತ ನಗುವ 
ನಗುತ ಅಳುವ 
ಮನದ ಮಂದಕಿನಿಯಲ್ಲೊಮ್ಮೆ ಇಣುಕು ..:)))))


ಹೊರಟೆ ಎಂದು 
ಹೊರಟ ಮೇಲೆ... 
ಮೊಗವ ನೋಡಿ ನಗುವೇ ಏಕೆ ನಲ್ಲ...
ನೀ ನಕ್ಕೊಡನೆ..
ನನ್ನ ಕಣ್ಣಲ್ಲಿ ಮೂಡುವ ಹನಿಯ ...
ನೆಪ ಒಡ್ಡಿ...
ನೀ ಬಳಿ ಬಂದಾಗ 
'ಹೋಗಬೇಡ ನೀ 'ಎಂದು ನಾ ನಿನ್ನ ತಡೆಯಲಿ 
ಎಂದೇ ತಾನೇ ಈ ಚೆನ್ನಾಟವೆಲ್ಲ...:)))))


ನೀನಿಲ್ಲದೆ ನಾನಿಲ್ಲ 
ಎಂಬ ಮಾತು ತಪ್ಪೇನೋ ನಲ್ಲ...
ಆದರೆ ನೀನಿಲ್ಲದ
ನೋವಿನಲಿ 
ನಾನಿರುವೆ 
ಎಂಬ ಮಾತು ತಪ್ಪಲ್ಲವಲ್ಲ... ...:)))


ಎಷ್ಟು ವಿಸ್ಮಯ ನಲ್ಲ ಈ ನಿನ್ನ ಒಲುಮೆ...
ಇರುವಿಕೆಯ ಅಗತ್ಯವೇ ಇಲ್ಲದೆ 
ಪ್ರೀತಿಯ ಚಿಮ್ಮುವ ನಿನ್ನ ಪ್ರೀತಿಯ ಚಿಲುಮೆ....:))))


ಈ ಭುವಿಯ ತೊರೆವ ಮೊದಲು...
ನನ್ನ ಚರಾಸ್ತಿಗಳ ನಿನಗಾಗಿ ಬಿಟ್ಟು ಹೋಗುವ ಆಣೆ ಇದೆ ನಲ್ಲ...
ನನ್ನ ಕೆಲವು ನೆನಪು ನಿನ್ನ ಮನಕೆ....
ನನಗಾಗಿ ಕೆಲವು ಹನಿ ನೀರು ನಿನ್ನ ಕಂಗಳಿಗೆ...
ನನ್ನ ಹೆಸರು ಹೇಳುವ ಹಕ್ಕು ನಿನ್ನ ನಿಶಬ್ದ ರಾತ್ರಿಗಳಿಗೆ....
ನನ್ನ ಅನುಪಸ್ತಿತಿ ನಿನ್ನ ಬದುಕಿಗೆ....
ನನ್ನ ಉಪಸ್ತಿತಿ ನಿನ್ನ ಮನದ ಭಾವನೆಗಳಿಗೆ.... 
ರುಜು ಹಾಕಿ ಒಪ್ಪಿಸಿಕೊ ನಲ್ಲ....
ಎಂದೇನಲ್ಲ....
ಸುಮ್ಮ ಸುಮ್ಮನೆ ಆಸೆ ಹುಟ್ಟಿಸಬೇಡ ನಲ್ಲೆ....
ಈಗಾಗಲೇ ನೊಂದಿದ್ದೇನೆ ಅಂದನಲ್ಲ....!!!!!!!!!!.))))


ಗುಲಾಬಿ ದಳಗಳ ಮೇಲಿನ 
ಪುಟ್ಟ ಮಳೆಯ ಹನಿಗಳ 
ಕಂಡ ನಲ್ಲ....
ಮೊದಲ ಬೇಟಿಯ ನಂತರ
ಬೆವೆತಿದ್ದ ನಿನ್ನ ಮೊಗದ 
ನೆನಪಾಯ್ತು ಎಂದನಲ್ಲ....:))))


ನೀ ಬರೆವ 
ಕವಿತೆಗೊಂದು 
ಕವಿತೆ ಬರೆವೆ
ಎಂದ ನನ್ನ ನಲ್ಲ...
ಅವನ ಬೆರಳ ತುದಿಯ 
ಎನ್ನೊಸಲ ಮೇಲಾಡಿಸಿ..
ಮೊಗದಿ ಮೂಡಿದ ರಂಗೇ
ನಾ ಬರೆದ ಕವಿತೆ ಎಂದನಲ್ಲ......:)))


ನಿನ್ನ ಹೆಜ್ಜೆ ಸದ್ದಿಗೆ
ತಪ್ಪಿದ ನನ್ನೆದೆಯ ಬಡಿತಕ್ಕೆ ನಲ್ಲ 
ಅಂಗಳದ ತುಳಸಿ ಕೂಡ ಹುಸಿನಕ್ಕಳಲ್ಲ.....:))))))))


ಯಾರು ಯಾರಿಗೂ ನೀಡದ 
ಉಡುಗೊರೆಯೊಂದ ನೀಡು 
ಎಂದು ಕೇಳಿದೆನೊಮ್ಮೆ ನನ್ನ ನಲ್ಲನನ್ನ 
ನಸುನಕ್ಕ ನನ್ನ ನಲ್ಲ...
ತನ್ನ ತಾನೇ ನನಗೆ ನೀಡಿಬಿಟ್ಟನಲ್ಲ ...:)))))


ಪದೇ ಪದೇ
ನಾ ನಿನಗೆ ಸೋಲಲು ಕಾರಣವಿದೆ ನಲ್ಲ
ಗೆಲುವಿನ ನಗೆಗಿಂತ
ಸೋತು ನಾ ಅತ್ತಾಗ ನೀ ಹಾಕುವ ತೋಳಬಂಧಿಯ ಆಸೆ ಇದೆಯಲ್ಲ....:))))


ನಿನ್ನೊಲುಮೆಯ ಹೊನಲಿಗೆ ನಾಚಿ ನಲ್ಲ 
ನೂಪುರದ ಘಳಿರು ತನ್ನುಸಿರ ಸ್ತಂಭಿಸಿತಲ್ಲ ...:)))

ನನ್ನ ಮನ ಎಷ್ಟು ಕೃತಘ್ನ ಕೇಳು ನಲ್ಲ...
ನೀ ನನ್ನೊಡನೆ ಕದನಕ್ಕಿಳಿದರೂ ನಿನ್ನ ಪರ ವಹಿಸುವುದಲ್ಲಾ ...:))))

ನೀ 
ವರುಷಗಳ 
ಮೊದಲು 
ಬರೆದ 
ಪ್ರೇಮಪತ್ರಕ್ಕೆ 
ಇಂದೂ
ಅಂದಿನ 
ಅದೇ ಘಮಲು ನಲ್ಲ...
ಪುಟ 
ತೆರೆದೊಡನೆ 
ನಿನ್ನ ಮೊದಲ ಸ್ಪರ್ಶ 
ನೆನಪಾಗುವುದಲ್ಲ...:)))))

ನಲ್ಲನ 
ನೋಡಲು 
ಅವನೂರಿಗೆ ಹೋದೆ..
ಬರುವ ಹಾದಿಯಲೆಲ್ಲ 
ಗುಲ್ ಮೊಹರಿನ 
ಕಾಲು ಹಾಸು...
ಹೆಜ್ಜೆಯಿಟ್ಟರೆ 
ಹೂ ನಲುಗಬಹುದೆಂದು
ಹೂ ಒಣಗುವವರೆಗೂ 
ಅವನೊಡನೆ ಕುಳಿತು ಕಾದೆ...
ಹೂ ಒಣಗುವ ಮೊದಲೇ..
ನೀ ಹೋಗುವುದೆಲ್ಲಿಗೆ
ಎಂಬಂತೆ ನಸುನಗೆಯ ಬೀರಿ
ಮತ್ತಷ್ಟು ಹೂ ಉದುರಿದವಲ್ಲ...:)))))))))

ನೀ 
ಬರುವ ದಾರಿಯಲಿ...
ಹೂವ ರಂಗೋಲಿ ಹಾಸಿರುವೆ ನಲ್ಲ...
ಹೂವ ನೋಯಿಸದೆ 
ಬಳಿ ಬರುವ ಹಾದಿ ತಿಳಿದರೆ 
ನೀ ಹೂವಂತ ನಲ್ಲ ಎಂದೆನಲ್ಲ...
ನಸುನಕ್ಕ ನಲ್ಲ...
ತಾ ಬರದೆ .....
ಹೂವಿನೊಡನೆ 
ನನ್ನನ್ನೇ 
ಅವನಿರುವೆಡೆಗೆ..
ಅವನೆದೆಯೊಳಗೆ ...
ಸೆಳೆದೊಯ್ದನಲ್ಲ......:)))))

ಈ ಏಕಾಕಿತನಕ್ಕೂ ನಿನಗೂ
ಯಾವ ಹಗೆತನವೋ ನಲ್ಲ..
ನೀನಿದ್ದೆಡೆ ಅದು ತಲೆ ಹಾಕದಲ್ಲ ....
ನೀ ಹೋದೊಡನೆ ....
ನನ್ನೆದೆಯರಮನೆಯ ಬಾಗಿಲ ಎಡ ತಾಕುವುದಲ್ಲ...:))))

ನೀ ಬರುವ ಹಾದಿಯಲ್ಲಿ
ನಿನಗಾಗಿ ನಾ ಹಚ್ಚಿಟ್ಟ ಹಣತೆಗೆ 
ನಿನ್ನ ಮೇಲೆ ಅದೆಷ್ಟು ಪ್ರೀತಿ ನಲ್ಲ...
ನೀ ಬಂದ ಒಡನೆ
ತಾವೇ ಆರಿಹೋಗಿ....
ನಿನ್ನ ತುಂಟತನಕ್ಕೆ ಅನುವು ಮಾಡಿ ಕೊಡುವುದಲ್ಲ....:))))))

ನಾ
ಬರೆವ 
ಪದವೆಲ್ಲಾ ....
ನಿನ್ನಿಂದ ಕಲಿತ 
ಒಲುಮೆಯ ಪಾಠಕ್ಕೆ 
ನಾ ನೀಡುವ ಉಡುಗೊರೆ ನಲ್ಲ....:))))))


ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...