Monday, 29 July 2013

ಸುಮ್ಮನೆ ಅಮ್ಮನಿಗಾಗಿ ....:))

ಅಮ್ಮ ,
ಅದೇನೊ ಗೊತ್ತಿಲ್ಲ ಅಮ್ಮ ನಿನಗೆ ಇಂದು ಬರೆಯಲೇ ಬೇಕೆನಿಸಿತು....'ದಿನಾ ಫೋನ್ ಅಲ್ಲೇ ಮಾತಾಡ್ತೀಯಲ್ಲ ಮಗ, ಮತ್ತೆ ಈಗೇನು ?' ಅಂದ್ಯ....ಏನೋ ಗೊತ್ತಿಲ್ಲ, ಹೇಳೋದಕ್ಕಿಂತ ಬರೆಯಲೇ ಬೇಕು ಅನಿಸಿತು..ಅದಕ್ಕೆ ಬರಿತಾ ಇದ್ದೀನಿ ಅಮ್ಮ...ಒಮ್ಮೆ ಓದಿ ಬಿಡು, ನೀನು ಇನ್ನು ಚಿಕ್ಕ ಹುಡುಗಿ ಅಂತ ಅಂದುಕೊಳ್ಳೋ ನಿನ್ನ ಮುದ್ದಿನ ಮಗಳು ಎಷ್ಟು ಬೆಳೆದು ಬಿಟ್ಲು ಅಲ್ವ ಅಂತ ಅತ್ತು ಬಿಡು, ನಕ್ಕು ಬಿಡು, ಖುಷಿ ಪದು....ಇಲ್ಲ ನೀನು ಎಷ್ಟೇ ಬೆಳೆದರು ನೀನು ನನ್ನ ಮಗಳೇ ಕಣೆ ಅಂತ ಬೈದು ಬಿಡು.....

ನೆನ್ನೆ ಪುಟ್ಟಿ ಅವಳ ಮಾರ್ಕ್ಸ್ ಕಾರ್ಡ್ ಹಿಡಿದು ಅಳ್ತಾ ಬಂದಾಗಲೇ ನನಗೆ ನೀನು ತುಂಬಾ ಕಾಡಿ ಬಿಟ್ಟೆ ಅಮ್ಮ....ಆಗ್ಲೂ ಹಿಂಗೆ ಅಲ್ವ , ನಾನು ನನ್ನ ಫಸ್ಟ್ ರಾಂಕ್ ತಪ್ಪಿ ಹೋಯ್ತು ಅಂತ ಅತ್ತು ಬಂದಿದ್ದು...ನೀನು ನನ್ನ ತಬ್ಬಿ ಮುತ್ತಿಟ್ಟು 'ಅಷ್ಟೇ ತಾನೇ ನನಗೆ ನೀನೆ ಫಸ್ಟ್ ಮಗಾ 'ಅಂತ ಸಮಾಧಾನ ಮಾಡಿದ್ದೆ ಅಲ್ವೇ...ಅಮ್ಮ,ಅಷ್ಟು ಚಿಕ್ಕ ವಯಸ್ಸಿಗೆ ನಿನಗೆ ಅಷ್ಟೆಲ್ಲಾ ಸಮಚಿತ್ತ ಹೇಗೆ ಕೊಟ್ಟಿದ್ದ ಆ ದೇವ್ರು ಗೊತ್ತಿಲ್ಲ...ಅಪ್ಪ ಇಲ್ಲದ ನನಗೆ ಅಪ್ಪನ ಕೊರತೆ ಬರದ ಹಾಗೆ ಬೆಳೆಸಿ ಬಿಟ್ಟೆ.....ನಿನ್ನ ಅಳಿಯ ಬರಲು ಅರ್ಧ ಘಂಟೆ ತಡವಾದರೆ ಆಕಾಶ ಭೂಮಿಗಳ ಒಂದು ಮಾಡೋ ನಾನೆಲ್ಲಿ...ಗಂಡ ಇಲ್ಲ ಅನ್ನೋ ಸತ್ಯ ಅರಿತು ನಿನ್ನ ಕೊರತೆಯ ಮೂಲೆಗೊತ್ತಿ ಅಷ್ಟು ಪುಟ್ಟ ಮಕ್ಕಳ ಬೆಳೆಸಿದ ನೀನೆಲ್ಲಿ......ಕೇಳಿದ್ದು ತಂದು ಕೊಡೋ ಗಂಡ ಒಂದು ದಿನ ಏನೋ ಮರೆತು ಬಂದರೆ ಮುನಿಸಿಕೊಳ್ಳೋ ನಾನೆಲ್ಲಿ.....ಹೊರಗೂ ದುಡಿದು ಮನೆಗೆ ಬಂದೊಡನೆ ಮಕ್ಕಳ ಜೊತೆ ನಗುನಗುತ್ತ ಇದ್ದ ನೀನೆಲ್ಲಿ,....ಏನಾದ್ರೂ ತಿಂಡಿ ಮಾಡಿಕೊಡು ಅಮ್ಮ ಅಂದ ಒಡನೆ ಆ ಉತ್ಸಾಹ ಎಲ್ಲಿಂದ ಬರುತ್ತಿತ್ತು ಅಮ್ಮ ನಿನಗೆ....ಮಾಡಿ ತಿನ್ನಿಸೋವರೆಗೂ ಬಹುಷಃ ನಿನಗೆ ನೆಮ್ಮದಿ ಇರುತ್ತಿರಲಿಲ್ಲ ಅನಿಸುತ್ತೆ...(ನಾನೂ ಇದ್ದೀನಿ ನೋಡು, ಮಕ್ಕಳು ಕೇಳಿದ್ರೆ ಅಜ್ಜಿ ಹತ್ತಿರ ಕೇಳು ಮಾಡಿಕೊಡ್ತಾರೆ ಅನ್ನೋ ಸೋಮಾರಿ,...!!) ಅಮ್ಮ , ನಾನು ಎಷ್ಟು ಮುನಿಸ್ಕೊಳ್ತಾ ಇದ್ದೆ ಅಲ್ವ, ಅದು ಹೇಗೆ ಸಮಾಧಾನ ಮಾಡ್ತಾ ಇದ್ದೆ ಅಲ್ವ ನೀನು... ಈಗ ಪುಟ್ಟಿ ಸಿಟ್ಕ್ಕೊಂಡ್ರೆ ಸಮಾಧಾನ ಮಾಡೋದು ನಾನಂತೂ ಅಲ್ಲ, ಪಾಪ ನಿನ್ನ ಅಳಿಯ, ಅಮ್ಮ ಮಗಳು ಇಬ್ಬರಿಗೂ convince ಮಾಡ್ತಾರೆ........ಅಂದು ನಾನು ಮುಂದೆ ಓದಲೇ ಬೇಕೆಂದು ಹಠ ಹಿಡಿದು ಹಾಸ್ಟೆಲ್ ಸೇರಿದಾಗ ನೀನು ಎಷ್ಟು ಚಡಪಡಿಸಿದ್ದೆ ಅಲ್ವೇ ಅಮ್ಮ, ....ನಾನು ಇಷ್ಟಪಟ್ಟವನನ್ನೇ ಮದುವೆ ಆಗುವೆ ಎಂದು ಹಠ ಹಿಡಿದಾಗ, ನಿನ್ನ ನೋವು ಹಂಚಿಕೊಳ್ಳಲು ಯಾರು ಇಲ್ಲದ ನೀನು ಎಷ್ಟು ನೊಂದಿರಬಹುದು ಅಮ್ಮ,...ಆಗೆಲ್ಲ ನೀನು ಯಾರಿಗೂ ಕಾಣದಂತೆ ಒಬ್ಬಳೇ ಎಷ್ಟು ಅತ್ತಿದೆಯೋ, ಅಂತ ಈಗ ಅರಿವಾಗುತ್ತಿದೆ ಅಮ್ಮ. (ಪ್ರತಿ ಬಾರಿ ನನ್ನ ಮಕ್ಕಳು ನನಗೆ ತಿರುಗಿಸಿ ಮಾತಾಡಿದಾಗ, ಹಠ ಮಾಡಿದಾಗ, ನನಗೆ ನಿನ್ನ ಮೊಗವೇ ಕಣ್ಣ ಮುಂದೆ ಬರುತ್ತದೆ.........)

ಕೆಲವು ವಿಷಯಗಳಲ್ಲಿ ನೀನು ನನ್ನ ಐಡಿಯಲ್ ಅಮ್ಮ....ಎಷ್ಟೇ ನೋವಿದ್ದರೂ ನಗುತ್ತ ಬದುಕ ಬೇಕೆಂದು ಕಲಿಸಿದ ಗುರು ನೀನು....ಯಾರಿಗೂ ತೊಂದರೆ ಕೊಡದೆ ಬದುಕ ಬೇಕು, ನಿನ್ನ ಕಾಲ ಮೇಲೆ ನೀನು ಅಭಿಮಾನದಿಂದ ನಿಲ್ಲಬೇಕು ಅಂತ ಕಲಿಸಿದವಳು ನೀನು, ಸಲ್ಲದ ಪ್ರತಿಷ್ಠೆಗೆ ಬಲಿಯಾಗದೆ ಸಂಬಂಧಗಳ ಉಳಿಸಿಕೊಳ್ಳುವುದ ಕಲಿಸಿದವಳು ನೀನು ,ಬದುಕಲ್ಲಿ ಬರುವ ಕಷ್ಟಕ್ಕೆ ಹೆದರದೆ ತಲೆಗೊಡಲು ಕಲಿಸಿದವಳು ನೀನು , ಮಕ್ಕಳನ್ನ ಹೊಡೆಯದೆ ಕೂಡ ಶಿಸ್ತಿನಿಂದ ಬೆಳೆಸಬಹುದೆಂದು ತೋರಿದವಳು ನೀನು....

Thanx ಅಮ್ಮ ಬದುಕುವ ದಾರಿ ಕಲಿಸಿದ್ದಕ್ಕೆ ಇಂದು ನಾಲ್ಕು ಜನರ ನಡುವೆ ತಲೆ ಗೌರವ ಪ್ರೀತಿಯಿಂದ ಬದುಕಲು ಕಲಿಸಿದ ನಿನಗೆ ನಾ ನೀಡುವ ಉಡುಗೊರೆ ಏನ್ ಗೊತ್ತ ಅಮ್ಮ...ನನ್ನ ಮಕ್ಕಳನ್ನೂ ನೀ ನಮ್ಮನ್ನ ಬೆಳೆಸಿದಂತೆ ಬೆಳೆಸಿ ಬದುಕ ಕಲಿಸುವುದು ...ಯಾಕೆ ಅಂದ್ರೆ ನೀ ನಮ್ಮಿಂದ ಬಯಸುವುದೂ ಅದೇ ತಾನೇ ....ಇದ್ಯಾಕೋ ಜಾಸ್ತಿ ಆಯಿತು ಸುಮ್ಮನೆ ಪೆನ್ ಮುಚ್ಚು ಅಂದ್ಯ....ಇನ್ನೊಂದೇ ಒಂದು ಮಾತು ಬರೆದು ನಿಲ್ಲಿಸ್ತೀನಿ ಅಮ್ಮ.....ಬದುಕಲು ಕಲಿಸುವ ನೀನು, ನಿನ್ನಂತ ಅಮ್ಮನಿಂದಿರಿಗೆಲ್ಲ ನನ್ನ ನಮನ .......ಟೇಕ್ ಕೇರ್ ಅಮ್ಮ.....

ಇಂತಿ ನಿನ್ನ ಪ್ರೀತಿಯ ..........................

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...