Monday 27 July 2015

ಮೊನ್ನೆ ಎರಡು ದಿನ ರಜ ಅಂತ ಎಲ್ಲಾ ಅತ್ತೆ ಮನೆಗೆ ಹೋಗಿದ್ವಿ .. ಒಂದಷ್ಟು ಜನ ಸೇರಿದರೆ ಮಾತಿಗೇನು ಕೊರತೆ ಬರದು .. ..ಅತ್ತೆ ಅವರ ಕಾಲದ ಕಥೆ ಶುರು ಮಾಡಿದ್ರು ..'ನನ್ನ ಮಕ್ಳು ಅವರ ಅಪ್ಪ ಅಂದ್ರೆ ಅದೆಷ್ಟ್ ಹೆದರ್ತಾ ಇದ್ರೂ ಅಂದ್ರೆ, ಏನೇ ಕೇಳಬೇಕು ಅಂದ್ರೂ ನನ್ನೇ ಕೇಳಿ , ನಾ ಈಸ್ಕೊಡ್ತಾ ಇದ್ದೆ. ಈಗ್ನವೂ ನಿಮ್ ಮಕ್ಳು ನೋಡು ಅಪ್ಪ ಅಂದ್ರೆ ಭಯನೇ ಇಲ್ಲ . ಒಂದ್ ಸಾರಿ ಅವರಪ್ಪನ ಜೊತೆ ಒಂದು ಸರ್ಕಸ್ಗೆ ಹೋಗಿ ನನ್ ಮಕ್ಳು ಪಾಪ ಅಳ್ತಾ ಬಂದವ್ರೆ ' ...

ಮಂಜು ಕಥೆ ಮುಂದುವರೆಸಿದ್ರು 'ಮೂರು ಮಕ್ಕಳನ್ನು ಅಪರೂಪಕ್ಕೆ ಸರ್ಕಸ್ಗೆ ಕರ್ಕೊಂಡ್ ಹೋದ್ರ, ನಮಗೇ ಅದೇನ್ ಸಂಭ್ರಮ ಅಂತೀಯ . ಸರಿ ಮಾವ (ಅವರಪ್ಪನ್ನ ಮಕ್ಕಳು ಮಾವ ಅಂತಾನೆ ಕರಿತಾ ಇದ್ರು ) ನೀವ್ ನೋಡ್ತಾ ಇರಿ ಅಂತ ಹೊರಗೆ ಹೋಗಿದ್ರು . ಯಾರೋ ಒಬ್ಬ ಬಂದು ಪಾಪ್ಕಾರ್ನ್ ತಂದ..ಮುಂದೆ ಹಿಡಿದಾಗ, ಒಳಗೆ ಬಂದ್ರೆ ಇದ್ದನ್ನೂ ಅವ್ರೆ ಕೊಡ್ತಾರೇನೋ ಅಂತ ಈಸ್ಕೊಂಡ್ವಿ.. ಇನ್ನೊಬ್ಬ ಒಂದು ಐಸ್ ಕ್ರೀಂ ತಂದ, ಈಸ್ಕೊಂಡ್ವಿ.. ಮತ್ತೆ ಒಬ್ಬ ಚಾಕ್ಲೇಟ್ ತಂದ ಅದನ್ನೂ ಈಸ್ಕೊಂಡ್ವಿ... ಮೊದಲು ಐಸ್ ಕ್ರೀಂ ತಿಂದ್ಬಿಡೋಣ ಕಣೋ ಕರಗೋಗುತ್ತೆ ಅಂತ ಮೂರು ಜನ ಅಣ್ಣ ತಮ್ಮ ತಿನ್ನೋಕೆ ಶುರು ಮಾಡಿದ್ವಿ .. ಅದೇನ್ ಖುಷಿ ಗೊತ್ತಾ , ಸರ್ಕಸ್ ನೋಡ್ತಾ ಪಾಪ್ಕಾರ್ನ್ ಬಿಚ್ಚಿದ್ವಿ .. ಇನ್ನು ತಿಂತಾ ಇದ್ವಿ ಹೊರಗೆ ಹೋಗಿದ್ದ ಮಾವ ಬಂದ್ರು .. ಮಕ್ಕಳು ತಿನ್ನೋದನ್ನ ನೋಡಿ 'ಕಾಸ್ ಯಾರ್ ಕೊಟ್ರು ?' ಅಂದ್ರು .. 'ಇದಕ್ಕೆ ಕಾಸು ಕೊಡಬೇಕಾ?' ಅಂತ ಹೆದರಿ ಮುಖ ನೋಡ್ಕೊಂಡ್ವಿ . ಕೊಟ್ಟು ಹೋಗಿದ್ದವರ ಕರೆದು ಬೈದ ಮಾವ ಇನ್ನ ಕೈಯಲ್ಲೇ ಇದ್ದ ಚಾಕ್ಲೇಟ್ ವಾಪಸ್ ಕೊಡಿಸಿದ್ರು .. ಸರ್ಕಸ್ ಮುಗಿಸಿ ಮನೆಗೆ ಹೋಗೊ ಅಷ್ಟರಲ್ಲಿ ಸಹಸ್ರ ನಾಮಾವಳಿ ಆಗಿತ್ತು ..ಮತ್ತೆ ಮಾವನ ಜೊತೆ ನಾವ್ ಹೊರಗೆ ಹೋಗಿದ್ದೇ ಇಲ್ಲ '.

ಅತ್ತೆ ಹೇಳಿದ್ರು 'ಆವತ್ತು ನಮಗೆ ಕಾಲ ಹಂಗೆ ಇತ್ತು ಕಣ್ ಮಗ ಮೂರು ಮಕ್ಕಳನ್ನ ಸಾಕೋದಕ್ಕೆ ಅದೆಷ್ಟ್ ಕಷ್ಟ ಪಟ್ಟಿದ್ದೀನಿ ಗೊತ್ತಾ "....
ಈಗ್ಲೂ ನಾನೇನಾದ್ರು ಫೈವ್ ಸ್ಟಾರ್ ತಗೊಂಡ್ ಹೋಗಿ ಕೊಟ್ರೆ ಮಂಜು ಕಣ್ಣಲ್ಲಿ ಅದೇನೋ ಒಂದು ಮಿಂಚು ಮಿಂಚಿ ಮರೆಯಾಗುತ್ತೆ .... ಬಹುಶಃ ಒಂದು ಚಾಕ್ಲೇಟ್ಗೆ ಹಾತೊರೆದ ಬಾಲ್ಯದ ನೆನಪಾಗುತ್ತದೆಯೇನೋ ... 


ಸುಮ್ನೆ ಹಂಚಿಕೊಳ್ಳಬೇಕು ಅನಿಸ್ತು ..

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...