Sunday 9 November 2014

ನಾನು ನಿನ್ನ ಪ್ರೀತಿಸಿದ್ದೆನಾ ..
ಶರಶಯ್ಯೆಯಲ್ಲಿದ್ದ ಭೀಷ್ಮನ ಮನದ ಪ್ರಶ್ನೆ ಅರಿತಂತೆ
ಶಿಖಂಡಿಯ ಮೊಗದಲ್ಲಿ ಹುಸಿನಗೆ ಮೂಡಿತು...
ಅಂದು ಅಂಬೆಯಾಗಿ ....
ಹಕ್ಕಿಯ ಹಾಗೆ ಹಾರಿಕೊಂಡು
ಸಾಳ್ವನ ಮನದ ಅರಗಿಣಿಯಾಗಿದ್ದ ನನ್ನ ನೀ ಹೊತ್ತುಕೊಂಡು ಹೋದಾಗ
ನಾ ಹಾಗೆ ಅಂದುಕೊಂಡಿದ್ದೆ ಭೀಷ್ಮ....
ನೀ ಹೊತ್ತೊಯ್ದ ನಾನು
ಇತ್ತ ವಿಚಿತ್ರವೀರ್ಯನ ಪತ್ನಿಯು ಆಗದೆ
ಅತ್ತ ಸಾಳ್ವನ ರಾಣಿಯು ಆಗದೆ ಬಂದು ನಿನ್ನ ಅಂಗಲಾಚಿದಾಗ....
ನೀ ನನ್ನ ವರಿಸೇ ಬಿಡುವೆ ಎಂದಿದ್ದೆ ಭೀಷ್ಮ......
ನೀ ಕರಗಲೇ ಇಲ್ಲ ಭೀಷ್ಮ...
ನಿನಗೆ ನಿನ್ನ ಶಪಥದ್ದೆ ಚಿಂತೆ....
ನಿನಗೆ ನಿನ್ನ ಅಭಿಮಾನದ್ದೆ ಹಠ.....
ನಾನಾದರೂ ಏನು ಮಾಡಲಿ...
ಅಗ್ನಿಯಂತೆ ಅಗ್ನಿಯೊಳಗೇ ಬೆಂದೆ ನೊಂದೆ....
ನಾನು ಕಾದೇಕಾದೆ ಭೀಷ್ಮ..
ನಿನ್ನನ್ನು ಪ್ರಶ್ನಿಸಲು....
ನೀನೆಂದಾದರು ನನ್ನ ಪ್ರೀತಿಸಿದ್ದೆಯಾ ಎಂದು ಕೇಳಲು ....
ಕುರುಕ್ಷೇತ್ರದ ಒಂದೊಂದು ದಿನವು ನಿನ್ನ ನೋಡ ಹಂಬಲಿಸಿದ್ದೆ....
ನೀನು ನನ್ನ ನೋಡುವ ಸಾಹಸವನ್ನ ಮಾಡಲಿಲ್ಲ...
ತಪ್ಪಿತಸ್ತ ಭಾವವೇ...!!???
ನೋಡಿದರೆ ಏನೆನ್ನುವಳೆಂಬ ಅಂಜಿಕೆಯೇ.....!!?
ಪಾರ್ಥನ ಸಾರಥಿ ನಾನಾಗಲೆಂದು
ನೀ ಕೃಷ್ಣನ ಬಳಿ ಹೇಳಿದಾಗಲೇ
ನನಗೆ ಅರಿವಾಗಿತ್ತು ಭೀಷ್ಮ ...
ಇದು ನಿನಗೆ ನೀನೇ ಕೊಟ್ಟುಕೊಳ್ಳುತ್ತಿರುವ ಶಿಕ್ಷೆ ಎಂದು...
ನನಗೆ ನಿನ್ನ ಮೇಲೆ ಕೋಪವಿಲ್ಲ ಭೀಷ್ಮ...
ಆದರೆ ನನ್ನ ಹೆಣ್ತನಕ್ಕೆ ನೀ ಮಾಡಿದ ಅಪಮಾನಕ್ಕೆ ಕೋಪವಿದೆ...
ಹೆಣ್ಣಿನ ಮನವ ಅರಿಯದೆ ಒಂದು ತುಂಬು ಪ್ರೀತಿಯ
ಅರಿತೋ ಅರಿಯದೆಯೋ ನಾಶ ಮಾಡಿದ್ದಕ್ಕೆ ಕೋಪವಿದೆ...
ಅರ್ಜುನನ ಬಾಣಕ್ಕೆ ನೀನು ಹೆದೆಯೇರಿಸದೆ...
ಬಿಲ್ಲನ್ನು ಪಕ್ಕಕ್ಕೆ ಇಟ್ಟಾಗ ........
ನಿನ್ನ ಕಣ್ಣಲಿ ನನಗೆ ಕಂಡಿದ್ದು ಪ್ರೀತಿಯೇ....???
ಈಗ ನೀನು ಶರಶಯ್ಯಯಲ್ಲಿರುವಾಗ
ನಿನ್ನ ಮುಂದೆ ಸುಳಿದ ನನ್ನ ನೀನು
ಕಣ್ಣಲ್ಲೇ ಕ್ಷಮೆ ಕೇಳಿದಂತೆ ಅನಿಸಿದ್ದು ಸುಳ್ಳಲ್ಲ ಭೀಷ್ಮ......
ನೀ ನನ್ನ ಪ್ರೀತಿಸಿದ್ದೆಯೋ ಇಲ್ಲವೋ
ನಾ ಅರಿಯೆ ಭೀಷ್ಮ....
ಆದರೆ ನಾ ನಿನ್ನ ಎಂದೂ ಪ್ರೀತಿಸಲಾರೆ...ದ್ವೇಷಿಸಲಾರೆ......
ಏಕೆಂದರೆ...
ನೀ ಜಗಕ್ಕೆಲ್ಲಾ ಪುರುಷೋತ್ತಮ .....
ನನಗೆ .....
ಹೆಣ್ಣಿನ ಮನವ ಅರಿಯದ ನೀನು ಪುರುಷ ಮಾತ್ರಾ.......
ನಾ ನಿನ್ನ ಪ್ರೀತಿಸಲಾರೆ....:))))))
ಇತಿ.....ಅಂಬೆ....:))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...