Tuesday, 4 July 2017

ಕಥೆ ಹೇಳಿ ಬಹಳ ದಿನಗಳಾಗಿದ್ದವು ಅಲ್ವೇ !  ಇಲ್ಲೊಂದು ಕಥೆ ಕೇಳಿ. ಗೆಳೆಯರೊಬ್ಬರು ಕಳಿಸಿದ್ದು. ಭಾವಾನುವಾದ ನನ್ನದು ಅಷ್ಟೇ 
ಕಾಲೇಜಿನ ತೋಟದಲ್ಲಿ ಅವ್ನು ಗಿಡಗಳಿಗೆ ಪಾತಿ ಮಾಡ್ತಾ ಇದ್ದ. ಜವಾನ ನಂಜಪ್ಪ ಬಂದು ಕರೆದ "ಗೋಪಾಲ, ಪ್ರಿನ್ಸಿಪಾಲರು ಕರೀತಾವ್ರೆ , ಒಸಿ ಆಫೀಸ್ಗೆ ಹೋಗು' ಅಂದ. ಒಂದು ಕ್ಷಣದಲ್ಲೆ ಗೋಪಾಲ ಬೆವೆತು ಹೋದ..ಪ್ರಿನ್ಸಿಪಾಲಮ್ಮ ಸ್ವಲ್ಪ ಕಟ್ಟುನಿಟ್ಟಿನ ಹೆಂಗಸು. ತನ್ನನ್ನು ಕರೆದಿದ್ದಾರೆಂದರೆ ತನ್ನಿಂದ ಏನಾದ್ರೂ ತಪ್ಪಾಗಿದ್ಯಾ ಎಂದು ಒಂದು ವಾರದ, ಒಂದು ತಿಂಗಳ ಹಿಂದಿನ ಕೆಲಸಗಳನ್ನೆಲ್ಲ ಮನದಲ್ಲೇ ತಿರುಗಿಸಿದ ಗೋಪಾಲ!'ಬೇಗ ಹೋಗೋ ಗೋಪಾಲಿ' ಅಂದ ನಂಜಪ್ಪ. ಜೀವವನ್ನ ಕೈಲಿ ಹಿಡಿದು ಗೋಪಾಲ ಆಫೀಸಿಗೆ ಹೋದ. 'ಅಮ್ಮ, ಹೇಳಿ ಕಳಿಸಿದ್ರಿ" ಅಂದ ಹೆದರುತ್ತಲೇ. ಪ್ರಿನ್ಸಿಪಾಲಮ್ಮ ಎಂದಿನ ಕಠಿಣ ದನಿಯಲ್ಲಿ 'ಅಲ್ಲಿರೋ ಪೇಪರ್ ಎತ್ಕೊಂಡು ಓದು' ಅಂದ್ರು.ಇನ್ನೂ ಹೆದರಿದ ಗೋಪಾಲ 'ಅಮ್ಮ ನನಗೆ ಓದೋಕೆ ಬರಕಿಲ್ರ.ನನ್ನಿಂದೇನಾದ್ರು ತ್ಯಪ್ಪಾಗಿದ್ರೆ ಕ್ಷಮಿಸಿ, ಕೆಲ್ಸದಿಂದ ತೆಗಿಬೇಡಿ, ತಿದ್ಕತೀನಿ.ನನ್ನ ಮೊಗಗೆ ಓದೋಕೆ ಇದಕ್ಕಿಂತ ಬ್ಯಾರೇ ಸಾಲೆ ಸಿಕ್ಕಾಕಿಲ್ಲ' ಅತ್ತೆ ಬಿಟ್ಟ. ಪ್ರಿನ್ಸಿಪಾಲಮ್ಮ 'ಅದ್ಯಾಕ್ ಅಷ್ಟೊಂದೆಲ್ಲಾ ಅಂದ್ಕೊಳ್ತೀಯಾ ?ಸ್ವಲ್ಪ ಇರು' ಅಂತ ಇಂಗ್ಲಿಷ್ ಟೀಚರ್ನ ಕರೆದ್ರು.ಅದನ್ನ ಓದೋಕೆ ಹೇಳಿದ್ರು. ಟೀಚರು ಅದನ್ನ ಓದ್ತಾ ಹಾಗೆ ಅರ್ಥ ಹೇಳುತ್ತಾ ಹೋದ್ರು. 
ಈವತ್ತು ಎಂಟನೇ ತರಗತಿಯ ಮಕ್ಕಳಿಗೆ "ಅಮ್ಮನ ದಿನದ" ಬಗ್ಗೆ ಒಂದು ನಿಬಂಧ ಬರೆಯೋಕೆ ಹೇಳಿದ್ವಿ. ನಿಮ್ಮ ಮಗಳು ಬರೆದ ನಿಬಂಧ ಇದು 
"ನಾ ಒಂದು ಕುಗ್ರಾಮದವಳು. ನಮ್ಮೂರಲ್ಲಿ ಈಗ್ಲೂ ಶಿಕ್ಷಣ ಹಾಗು ವ್ಯದ್ಯಕೀಯ ಸೇವೆ ಸಿಗೋದು ಕಡಿಮೆ. ನಮ್ಮಮ್ಮ ನನ್ನನ್ನ ಹೆತ್ತು ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ತೀರಿ ಹೋದಳು.ನನ್ನನ್ನ ಮೊದಲು ಎತ್ಕೊಂಡಿದ್ದು ಅಪ್ಪ. ಅಪ್ಪನ ಮನೆಯವ್ರು ತಾಯಿನ ತಿಂದ್ಕೊಂಡ ಮಗುವನ್ನ(!) ಆಶ್ರಮಕ್ಕೆ ಬಿಟ್ಟು ಮರುಮದುವೆಯಾಗಲು ಅಪ್ಪನಿಗೆ ಹೇಳಿದ್ರು. ಅಪ್ಪ ನನ್ ಮಗಳೇ ನನಗೆ ಎಲ್ಲ ಎಂದು ಮದುವೆ ಆಗಲು ಒಪ್ಪದೇ ಇದ್ದಾಗ. ಆಸ್ತಿಯಲ್ಲಿ ಕವಡೆ ಕಾಸು ಕೂಡ ಸಿಗದೆಂದು ಹೆದರಿಸಿದರು.ಚಿಂತೆ ಮಾಡದ ಅಪ್ಪ ತನ್ನ ಮನೆ, ತನ್ನವರು, ಆಸ್ತಿ, ಎಲ್ಲವನ್ನ ಬಿಟ್ಟು ಇಲ್ಲಿ ಬಂದು ಈ ಶಾಲೆಯಲ್ಲಿ ಮಾಲಿಯಾಗಿ ಸೇರಿ ನನ್ನನ್ನೂ ಇದೇ ಶಾಲೆಗೆ ಸೇರಿಸಿದ್ರು . ತುಂಬಾ ಪ್ರೀತಿಯಿಂದ ಮಮತೆಯಿಂದ ಸಾಕಿದ್ರು. ಯಾರಾದ್ರೂ ಏನಾದ್ರೂ ತಿನ್ನಲು ಕೊಟ್ರೆ ತನಗದು ಇಷ್ಟ ಇಲ್ಲ ಎಂದು ನನಗೆ ತಂದು ಕೊಡ್ತಾ ಇದ್ರು ಅವರ ಇಷ್ಟವಿಲ್ಲ ಎನ್ನುವುದಕ್ಕೆ ಕಾರಣ ನನಗೆ ಹೆಚ್ಚು ಸಿಗಲಿ ಎನ್ನುವುದು ಎಂದು ನಾ ಬೆಳೆಯುತ್ತಾ ಅರಿವಾಗತೊಡಗಿತು!ತನ್ನಿಂದಾದ ಎಲ್ಲವನ್ನೂ ನನಗಾಗಿ ಮಾಡಿದರು. ಅನ್ನಕ್ಕೆ ದಾರಿ, ವಾಸಕ್ಕೆ ಜಾಗ ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಮಗಳಿಗೆ ಶಿಕ್ಷಣ ನೀಡೋ ಈ ಶಾಲೆ ಅಂದ್ರೆ ಅವರಿಗೆ ಪ್ರಾಣ. 
ಅಮ್ಮ ಅಂದ್ರೆ ಕರುಣೆ,ಮಮತೆ, ಪ್ರೀತಿ, ಭರವಸೆ ಅಂತಾರೆ .ಅದೆಲ್ಲ ನಿಜ ಅಂದ್ರೆ ನನ್ನ ಅಪ್ಪನೇ ನನ್ನ ನಿಜವಾದ ಅಮ್ಮ. ಈ ಜಗದ ಶ್ರೇಷ್ಠ ಅಮ್ಮನಾದ ನನ್ನಪ್ಪನಿಗೆ ನನ್ನ ನಮನ. ಅಮ್ಮನ ಬಗ್ಗೆ ಬರಿ ಅಂದ್ರೆ ಅಪ್ಪನ ಬಗ್ಗೆ ಬರೆದ ನಾನು ಫೇಲಾಗಬಹುದೇನೋ?ಆದರೂ ನನಗೆ ಗೊತ್ತಿರೋ ಅಮ್ಮ ನನ್ನ ಅಪ್ಪನೇ!ಅಮ್ಮನಂತಹ ಅಪ್ಪನಿಗೆ ನಮನ " 
ಟೀಚರ್ರು ಓದುವುದನ್ನ ನಿಲಿಸಿದ್ರು. ಕುಸಿದು ಕುಳಿತ ಗೊಪಾಲ ಬಿಕ್ಕಿಬಿಕ್ಕಿ ಅತ್ತ . ಪ್ರಿನ್ಸಿಪಾಲಮ್ಮ ಅವನಿಗೆ ಕುಡಿಯಲು ನೀರಿತ್ತರು. ಹೇಳಿದ್ರು 'ಗೋಪಾಲ, ನಿನ್ನ ಮಗಳಿಗೆ 10/10 ಅಂಕ ಬಂದಿದೆ. ನಾಳೆ ನಮ್ಮ ಶಾಲೆಯಲ್ಲಿ "ಮಾತೃವಂದನಾ ದಿನ ".ನೀನು ನಾಳೆಯ ಮುಖ್ಯ ಅತಿಥಿ ' ಅಂದರು ಬೆನ್ನು ತಟ್ಟುತ್ತಾ . 
ಗೋಪಾಲ ಮೂಕನಾಗಿ ನಿಂತ ಎಂದಿನಂತೆ..ಅಕಳಂತೆ...ಎಂದಿನಂತೆ 
ಅಮ್ಮ ಅಂದ್ರೆ ಕರುಣೆ,ಮಮತೆ, ಪ್ರೀತಿ, ಭರವಸೆ . ಅಮ್ಮನಂತವರು ಅಂದ್ರೆ ಕೂಡ ಅದೇ ಅಲ್ವೇ .. ಅಪ್ಪನೋ, ಅಕ್ಕನೋ, ಅಣ್ಣನೋ, whoever... ಅಂತಹವರಿಗೆ ಒಂದು ನಮನ 
ಮನಸ್ಸೆಲ್ಲಾ ನೀಲಿನೀಲಿ ಆ ಬಾನಿನಂತೆ ))))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...