Tuesday, 4 July 2017

ಈವತ್ತು ಆಷಾಡದ ಮೊದಲ ಶುಕ್ರವಾರ . ನೆನ್ನೆ ಹೂ ತರೋಕೆ ಹೊರಟಿದ್ವಿ . ಪಕ್ಕದ ಮನೆಯ ಹಿರಿಯಾಕೆ ಬಂದು 'ನಮ್ ಮನೆಯವ್ರಿಗೆ ಬೆನ್ನು ನೋವು ಅಂತ ಮಲಗಿದ್ದಾರೆ. ನಮಗೂ ಒಂಚೂರು ಹೂ ತಂದ್ಬಿಡಿ ಮಂಜುನಾಥ್' ಅಂದ್ರು . ಮಂಜು 'ಆಯ್ತ್ ಬಿಡಿ ಅಮ್ಮ, ತರ್ತೀನಿ ' ಅಂದ್ರು .
ಆಷಾಢದಲ್ಲಿ ಹೆಣ್ಣು ದೇವರ ನೋಡು(ಪೂಜಿಸು) ಶ್ರಾವಣದಲ್ಲಿ ಗಂಡು ದೇವ್ರನ್ನ ನೋಡು (ಪೂಜಿಸು) ಅನ್ನೋದು ಒಂದ್ ಪ್ರತೀತಿ ನಮ್ ಕಡೆ..ಅದರಲ್ಲೂ ಮೈಸೂರಲ್ಲಿ ಆಷಾಢ ಅಂದ್ರೆ ಚಾಮುಂಡಿ ಬೆಟ್ಟದ ದೇವಿಗೆ ವಿಜೃಂಭಣೆಯ ಪೂಜೆ . ಸಂಭ್ರಮ ಇದ್ರೂ ಇತ್ತೀಚಿನ ಒಂದಷ್ಟು ವರ್ಷಗಳಲ್ಲಿ ಇದು ಬಹಳ ಹೆಚ್ಚಾಗಿ ಬಿಟ್ಟಿದೆ. ಲಕ್ಷಾಂತರ ಜನ ಚಾಮುಂಡಿಯ ದರ್ಶನಕ್ಕೆ ಬರ್ತಾರೆ . ಬೆಟ್ಟಕ್ಕೆ ಈಗ ಖಾಸಗಿ ವಾಹನ ಕೂಡ ಬಿಡೋದಿಲ್ಲ . ಲಲಿತಾಮಹಲ್ ಬಳಿ ಗಾಡಿ ನಿಲ್ಲಿಸಿ ಅಲ್ಲಿಂದ ಸರಕಾರೀ ವಾಹನದಲ್ಲಿ ಹೋಗಬೇಕು
ಹೂ ತರೋಕೆ ಹೊರಟವಳು ಮತ್ತೇನೋ ಹೇಳ್ತ ಕುಳಿತೆ ಅಲ್ವೇ !...ಸರಿ ಹೂ ತರೋಕೆ ಹೊರಟ್ವಿ . ಅದೇನ್ ರಶ್ ಅಂದ್ರೆ ನಾಳೆಯೇನಾದ್ರು ಲಕ್ಷ್ಮಿ ಪೂಜೆಯೋ ಗೌರಿ ಪೂಜೆಯೋ ಅಂತ ಗೊಂದಲಗೊಳ್ಳುವಷ್ಟು ! ಹೂವಿನ ಬೆಲೆಯೂ ಏರಿಕೆಯಾಗಿತ್ತು . ನಮ್ ಮನೆಯಲ್ಲಿ ವ್ಯಾಪಾರ ಮಾಡೋದು ಮಂಜು . ನಾನು ಪಕ್ಕದಲ್ಲಿರ್ತೀನಿ ಅಷ್ಟೇ ! ನಮಗೆ ಅಂತ ಸೇವಂತಿಗೆ , ಕನಕಾಂಬರ, ಗುಲಾಬಿ ತೆಗೆದುಕೊಂಡ್ವಿ. 'ಪಕ್ಕದ ಮನೆ ಅಮ್ಮ ಹೇಳಿದ್ದಾರಲ್ಲ ಅವ್ರಿಗೂ ಇಲ್ಲೇ ತಗೋಳಪ್ಪಾ' ಅಂದೆ . ನೀ ಒಂದ್ ನಿಂಷ ಇಲ್ಲೇ ನಿಂತಿರು ಬಂದೆ ' ಅಂತ ಹೇಳಿ ಆ ಜನಸಂದಣಿಯೊಳಗೇ ನುಗ್ಗಿ ಹೋಗಿ ಹೂ ತಂದ್ರು .. ನಾ ಒಂಚೂರು ರೇಗಿದೆ . ಇಲ್ಲೇ ತಂದಿದ್ರೆ ಆಗ್ತಾ ಇರ್ಲಿಲ್ವ ಅಂತ . ಮಂಜು ಹೇಳಿದ್ರು 'ನಮಗೆ ಅಂದ್ರೆ ಅಪ್ಪಿತಪ್ಪಿ ಒಂದಷ್ಟು ಹೆಚ್ಚುಕಡಿಮೆಯಾದರೂ ಪರವಾಗಿಲ್ಲ ಕಣಮ್ಮ, ಒಬ್ರು ಒಂದು ಕೆಲಸ ಹೇಳಿದಾಗ ಅದನ್ನ ಸರಿಯಾಗಿ ಮಾಡಬೇಕು. ನಿನಗೆ ಏನ್ ಖುಷಿ ಅನಿಸ್ತೋ ನೀ ತಗೊಂಡೆ . ಅವ್ರಿಗೆ ಇನ್ನೂ ಚೆನ್ನಾಗಿರೋದು ಸಿಗಬಹುದೇನೋ ಅಂತ ಒಳಗೆ ಹೋದೆ ಅಷ್ಟೇ. ನಾಳೆ ನೀನು ಬಾಗಿಲಿಗೆ ಹಾಕಿದ ಹೂವು ಅವರಿಗೆ ತಂದ ಹೂಗಿಂತ ಚೆನ್ನಾಗಿ ಕಂಡ್ರೆ ಅವರು ತಪ್ಪು ತಿಳೀತಾರೆ ಅಲ್ವ. ... ಇತ್ಯಾದಿ ಇತ್ಯಾದಿ ' ಹೇಳಿದ್ರು .
ಮದ್ವೆಯಾಗಿ ಸುಮಾರು ೨೫ ವರ್ಷ ಮತ್ತೆ ಅದಕ್ಕೂ ಮೊದಲು ಒಂದ್ಮೂರು ವರ್ಷ ಒಟ್ಟೊಟ್ಟಿಗೇ ಬೆಳೆದ್ವಿ .. ಈ ಮನುಷ್ಯ ಕಲಿತಾ ಕಲಿತಾ ಪಾಸ್ ಆಗಿ ಮುಂದ್ಮುಂದೆ ಹೋದ್ರೆ, ನಾ ಇನ್ನೂ ಅಲ್ಲೇ ಇದ್ದೀನಿ ಆಗೊಂದು ಈಗೊಂದು ಪಾಠ ಕಲಿತಾ ... 
ಅಂದ್ ಹಾಗೆ ಈವತ್ತು ಆಷಾಡದ ಮೊದಲ ಶುಕ್ರವಾರ ಯಾವುದಾದ್ರೂ ಒಂದು ಹೆಣ್ಣು ದೇವರ ಗುಡಿಗೆ ಹೋಗಿ ಕೈಮುಗಿದ್ರೆ ಒಳ್ಳೆಯದಾಗುತ್ತದಂತೆ 

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...