Thursday 13 July 2017

ಈ ಬಾರಿ ಮದುವೆಗಳು ತುಂಬಾನೇ ಜಾಸ್ತಿ. ಕೆಲವೊಂದು ದಿನಗಳಲ್ಲಿ ಒಂದೇ ದಿನ ೨-೩ ಸಮಾರಂಭಗಳಿಗೆ ಹೋಗಲೇಬೇಕಾದ ಅನಿವಾರ್ಯತೆ. ಮೊನ್ನೆ ನಮ್ಮ ಬೇಕರಿ ಸಂಜಣ್ಣ ಹೇಳ್ತಾ ಇದ್ರೂ 'ಈ ಮದ್ವೆ ಸೀಸನ್ ಮುಗಿದ್ರೆ ಸಾಕು ಅನಿಸಿಬಿಟ್ಟಿದೆ ! 100 ರೂಪಾಯಿ ಮುಯ್ಯಿ ಹಾಕೋಕೆ 1000 ರೂಪಾಯಿ ಖರ್ಚ್ ಮಾಡಿಕೊಂಡು ಹೋಗಿಬರಬೇಕು ನೋಡಿ ಅಕ್ಕ" ಅಂತ 
ನೆನ್ನೆ ಮೊನ್ನೆ ಎರಡು ದಿನ ತುಂಬಾನೇ ಬೇಕಾದವರ ಮನೆಯ ಎರಡು ಮದ್ವೆಗಳು. ಎರಡೂ ತೀರಾನೇ ವಿಭಿನ್ನ ಸಾಂಸಾರಿಕ ಹಿನ್ನಲೆಯುಳ್ಳವರ ಮನೆಗಳ ಮದುವೆ.
ಒಂದು ಮದುವೆ ಛತ್ರದಲ್ಲಿ..ಊರಿನ ನೆಂಟರ ಹುಡುಗನ ಮದುವೆ. ಆತನ ಗೆಳೆಯರು ಕೇಕ್ ತಂದು ಕತ್ತರಿಸಿ (!!) ಅದೆಷ್ಟೋ ಜನ ಕಾಯ್ತಾ ಇದ್ರೂ ಫೋಟೋ ಸೆಷನ್ಸ್ ಗಳನ್ನ ಮಾಡಿಸಿಕೊಂಡು ಕೆಲವರು ಬೇಸತ್ತು ರೇಗಿದ ಮೇಲೆ ಬಂದು ನಿಂತ್ರು . ನಿಲ್ಲೋದೇ ತಡ ಕೆಲವರು ಊಟಕ್ಕೆ ದೌಡಾಯಿಸಿದರೆ ಮತ್ತೊಂದೆಡೆ "ಮುಯ್ಯಿ" ಕೊಡೋರ ಸಾಲು !! (ನನಗೆ ಎರಡೂ ಸ್ವಲ್ಪ ಅಲ್ಲೆರ್ಜಿನೇ . ತುಂಬಾ ಆತ್ಮೀಯರಾದ್ರೆ ನೀರು ಹಾಕುವ ದಿನವೇ ನಾನು ಮಂಜು ಹೋಗಿ ಅದೇನ್ ಕೊಡೋದಿದೆಯೋ ಕೊಟ್ಬಿಡ್ತಿವಿ . ಇಲ್ಲಾ ಅಂದ್ರೆ ಒಂದಷ್ಟು ತಡವಾಗಿಯೇ ಹೋಗಿ ಮಾತನಾಡಿಸಿಕೊಂಡು ಬರೋದು ವಾಡಿಕೆ .. ಇನ್ನು ಊಟದ ಪಜೀತಿಯಂತೂ ಹೇಳೋದೇ ಬೇಡ. ಕೆಲವೊಮ್ಮೆ ನಮ್ಮ ಹಿಂದೆಯೇ ನಿಂತಿರ್ತಾರೆ !! ತಿನ್ನೋಕೆ ಮುಜುಗರ ಆಗೋ ಹಂಗೆ ನಮ್ ಕಡೆಯಂತೂ ಈ ಬೀಗರ ಔತಣಕ್ಕೆ ಮುಗಿ ಬೀಳೋದು ನೋಡಿಯೇ ತಿಳಿಬೇಕು!!) ಮಂಜು "ಜಾಗ ಹಿಡಿದ ಮೇಲೆ" ನಾ ಹೋದೆ .. ಅದೇನ್ ಊಟ ಅಂತೀರಾ ಮೂರು ಪಲ್ಯ , ಕೋಸಂಬರಿ, ಎರಡೆರಡು ಸಿಹಿ, ಇತ್ಯಾದಿ ಇತ್ಯಾದಿ .. ಊರಿನವರು ಕುಳಿತ ಎಲೆಗಳು ಎಲ್ಲಾ ಖಾಲಿಯಾಗಿದ್ರೆ .. ನಮ್ಮ ನಗರ ಮಂದಿ ಕುಳಿತ ಎಲೆಗಳು ಅರೆಬರೆ ತಿಂದು ಉಳಿಸಿದ್ದವು  ಹಾಗೆಂದು ಈ ಹುಡುಗನ ಮನೆಯವರು ತುಂಬಾನೇ ಅನುಕೂಲಸ್ಥರೇನೂ ಅಲ್ಲ . ಖರ್ಚು ಮಾಡೋದು ಹುಡುಗಿಯ ಮನೆಯವರಲ್ವಾ ಅನ್ನೋ ಅಹಂ/ಉದಾಸೀನ ಅಷ್ಟೇ !!!
ಎರಡನೆಯ ಮದುವೆ ಒಂದು ಸ್ಟಾರ್ ಹೋಟೆಲ್ ಅಲ್ಲಿ .ಹುಡುಗಿ ಒಂದು ಒಳ್ಳೆಯ ಕಡೆ ಕೆಲಸದಲ್ಲಿದೆ . ಹುಡುಗ ಕೂಡ ಚೆಂದದ ಕೆಲಸದಲ್ಲಿದ್ದಾನೆ . ದೇವಸ್ಥಾನದಲ್ಲಿ ಮದುವೆ ಮುಗಿಸಿಕೊಂಡು ಹೋಟೆಲ್ ಅಲ್ಲಿ ಊಟಕ್ಕೆ ಹೇಳಿದ್ದಾರೆ .ಮದುವೆ ಮುಗಿದ ಕೂಡಲೇ ಕೊಬ್ಬರಿಸಕ್ಕರೆ ಹಂಚಿ ಸಿಹಿ/ಖುಷಿ ಹಂಚಿಕೊಂಡು ಹೋಟೆಲ್ಗೆ ಬಂದ್ರು . ಊಟ ಕೂಡ ಹಿತಮಿತ . ರುಚಿರುಚಿಯಾದ್ರೂ ಚೆಲ್ಲುವಷ್ಟಲ್ಲ .. ಹುಡುಗ ಹುಡುಗಿ ಹಾಗೂ ಮನೆಯವರಿಗೆ ದುಡ್ಡಿನ ಬೆಲೆ ತಿಳಿದಂತೆ . ಒಂದು ಪಂಕ್ತಿಯವರು ಊಟ ಮಾಡುವಾಗ ಊಟದ ಮನೆಯ ಬಾಗಿಲು ಮುಚ್ಚಿ ಎಲ್ಲಾ ತೆಗೆದು ಶುಚಿ ಮಾಡುವರೆಗೂ-ಮಾಡಿ ಮತ್ತೆ ಕರೆಯುವವರೆಗೂ ಊಟಕ್ಕೆ ಯಾರೂ ಸುಳಿಯಲೇ ಇಲ್ಲ !!
ಮೊದಲೆಲ್ಲಾ ಅಮೆರಿಕನ್ ಕಲ್ಚರ್ ಅಂತ ಅದನ್ನ ಹಿಂಬಾಲಿಸ್ತಾ ಬಹಳ ಮಂದಿ ನಾವುಗಳು(!!) ಈಗ ಮತ್ತೆ ನಮ್ಮದೇ ಸಂಸ್ಕೃತಿ ಚೆಂದ ಎಂದು ಅದನ್ನೇ ಹಿಂಬಾಲಿಸುವ ಹಂತ ತಲುಪಿದ್ದೇವೆ . ಮದ್ವೆ ಆಗೋದು ಒಂದೇ ಸಾರಿ ನಿಜವೇ .. ಆದರೆ ಇಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬುದು ಅರಿವುದು ನಮ್ಮ ಕೈಲೆ ಇದೆ ಅಷ್ಟೇ..
ಆದ್ರೂ ಒಂದಂತೂ ಚೆಂದ ಕಣ್ರೀ. ಎರಡೂ ಮದ್ವೆಯಲ್ಲೂ ಪುಟ್ಟ ಮಕ್ಕಳ ಅಮ್ಮಂದಿರು/ಅಜ್ಜಿಯಂದಿರು ಬಟ್ಟಲಲ್ಲಿ ಅನ್ನ ಹಿಡಿದು ತಮ್ಮ ಚಿಲ್ಟಾರಿಗಳಿಗೆ "ಮಮ್ಮು" ತಿನಿಸ್ತಾ ಇದ್ದದ್ದು  ಒಂದೆಡೆ 'ಲೇ ಅಮ್ಮಿ , ಒಂದ್ ಬಟ್ಲಗೆ ಒಸಿ ಅನ್ನ ಹಾಕೋಡಮ್ಮಿ , ಮಗಿಗೆ ಉಣ್ಣಿಸಿಬುಡ್ತಿನಿ " ಅಂದ್ರೆ ,ಮತ್ತೊಂದೆಡೆ "ಒಂದು ಬೋವೆಲ್ಗೆ ಒಂಚೂರು ವೈಟ್ ರೈಸ್ ಹಾಕಿ ಕೊಡ್ತೀರಾ ಪ್ಲೀಸ್ ಮಗುಗೆ ಊಟ ಮಾಡಿಸೋಕೆ " ಅಂತಿದ್ರು ಅಷ್ಟೇ ))
ಮನಸ್ಸು ನೀಲಿ ನೀಲಿ ಆ ಬಾನಿನಂತೆ ))Feeling ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ )))))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...