Thursday 13 July 2017

ನೆನ್ನೆ ಸಂಜೆ ಎಂದಿನಂತೆ ನಮ್ಮನೆ ದೇವ್ರು ನಾನು ಒಂದು ಸಣ್ಣ ರೌಂಡ್ ಹೋಗಿದ್ವಿ . ತರೋಕೆ ಅಂತ ಏನಿಲ್ಲದೆ ಹೋದ್ರು ಪ್ರತಿದಿನ ಸುಂಸುಮ್ನೆ ಹಾಗೆ ಒಂದು ಸಣ್ಣ ಸುತ್ತು ಹಾಕಿ ಬರೋದು ವಾಡಿಕೆ .. ನಾವು ಓಡಾಡುವ ರಸ್ತೆಯಲ್ಲಿ ಸಂಜೆಯಲ್ಲಿ ಕಷ್ಟಸುಖ ಮಾತನಾಡುತ್ತಾ ನಿಲ್ಲೋ ಹೆಣ್ಣುಮಕ್ಕಳು, ಪರಿಚಿತರು 'ಇದೇನ್ ಇವು ದಿನಾ ಊರು ಸುತ್ತುತ್ವೇ! ಇನ್ನ ವಯಸ್ಸಲ್ಲಿ ಇರೋ ಹಂಗೆ ಅಂದ್ಕೊಳ್ತಾರೇನೋ !! ಹಾಗೆ ಸುತೋಕು ಒಂದ್ ಕಾರಣ ಇದೆ ಬುಡಿ . ಮಕ್ಕಳ ಮುಂದೆ ಮಾತನಾಡಲು ಆಗದ ಅವರದೇ ಒಂದಷ್ಟು ವಿಷಯಗಳನ್ನ ಹಾಗು ಮತ್ತೆ ಕೆಲವೊಂದು ಮಾತುಗಳನ್ನ ಮಾತನಾಡಿಕೊಂಡು ಬರ್ತೀವಿ . ನನ್ ಚಿಕ್ ಕೂಸು ಹೇಳ್ತದೆ 'ಅದೇನ್ ನಾಟ್ಕ ಆಡ್ತೀರೋ ಇಬ್ರುವೇ . ಸುತ್ತೋಕೆ ಹೋಗೋಕೆ ಆಸೆ ಅಂದ್ರೆ ನಾವೇನ್ ಬೇಡ ಅಂತೀವಾ ' ಅಂತ!! ಅದ್ಕೆ ನಮ್ಮನೆ ದೇವ್ರು 'ರಸಿಕತೆ ಇಲ್ಲದ ಬಾಳು ಬಾಳಾ ಬಿಡು ಮಗ .. ' ಅಂತ ಅದ್ಯಾವ್ದೋ ಹಳೆ ಸಿನಿಮಾದ ಡೈಲಾಗ್ ಹೊಡೀತಾರೆ. ನಾ ಎಂದಿನಂತೆ 'ಇದಕ್ಕೇನು ಕಮ್ಮಿ ಇಲ್ಲ' ಅಂತ ನಗ್ತೀನಿ . 
ನೆನ್ನೆ ಎಂದಿನಂತೆ ಹೊರಗೆ ಹೋದ್ವಿ . ಮೋರ್ ಹತ್ರ ಹೋದಾಗ ಗೋದಿಹಿಟ್ಟು ಮಾಡಿಸೋಕೆ ಸೋಯಾಕಾಳು ತಂದಿಲ್ಲದೆ ಇದ್ದದ್ದು ನೆನಪಿಗೆ ಬಂತು . ಹೋದ್ವಿ . ತೆಗೆದುಕೊಂಡು ಬಿಲ್ಲಿಂಗ್ ಹತ್ರ ಬಂದ್ವಿ . ಎಂದಿನಂತೆ ಮಂಜುನಾಥ ಪ್ರಭುಗಳು ಸಣ್ಣಗೆ ಹಾಡು ಹೇಳ್ತಾ ಬಿಲ್ ಹಾಕಿಸ್ತಾ ಇದ್ರು . ನಾ ಪಕ್ಕದಲ್ಲೇ ಇದ್ದೆ . ಬಿಲ್ ಮಾಡ್ತಾ ಇದ್ದ ಹುಡುಗ ' ಸಾರ್ ಬಹಳ ಖುಶಿಯಲ್ಲಿದ್ದಾರೆ ' ಅಂದ . 'ಮನೆಯಲ್ಲಿ ಹಾಡೋಕೆ ಆಗೋದಿಲ್ಲ ಕಣಪ್ಪ ಭಯ ಅವ್ರ್ಗೆ ಅದ್ಕೆ ಇಲ್ ಹಾಡಿಕೊಳ್ತಾರೆ ' ಅಂದೆ. ಹುಡುಗ ನಕ್ಕು ಬಿಟ್ಟ . ಮಂಜು 'ಮನೆಯಲ್ಲಿ ಈ ಹಾಡೆಲ್ಲ ಎಲ್ ಹೇಳನ ಮಹರಾಯ , ಮನೆಯಲ್ಲಿ ಬೇರೇನೇ ಹಾಡು ಹೇಳೋದು' ಅಂದ್ರು. 'ಯಾವ್ ಹಾಡು ಸಾರ್' ಅಂದ ಹುಡುಗ .. 'ಓ ನಿಂಗಿನ್ನೂ ಮದ್ವೆ ಆಗಿಲ್ಲ ಅಲ್ವ ಮನೆಯಲ್ಲಿ ಹಾಡೋದು 'ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ' ಅಂತ !!' ಅಂದ್ರು. ಹುಡುಗ ಮತ್ತೆ ನಕ್ಕ. ಪಕ್ಕದಲ್ಲೇ ನಿಂತಿದ್ದ ಹಿರಿಯ ಹೆಣ್ಣುಮಗಳೊಬ್ಬರು 'ಪುಣ್ಯ ಮಾಡಿದ್ದೀಯಾಮ್ಮ , ನಗಿಸೋಕೆ ಅಂತ್ಲೆ ದುಡ್ಡು ಕೊಡೊ ಕಾಲದಲ್ಲಿ ಹೊಟ್ಟೆ ತುಂಬಾ ನಗೋದಕ್ಕೆ ಪುಣ್ಯ ಮಾಡಿರಬೇಕು .. ಹಿಂಗೇ ಇರಿ' ಅಂದ್ರು !! 'ಥ್ಯಾಂಕ್ಸ್ ಅಮ್ಮ' ಅಂದ್ರು ಮಂಜು . 
ಬದುಕು ಬನದಂತೆ .. ಹಸಿರಾಗಿಸಿಕೊಳ್ಳೋದು ಬರಡಾಗಿಸಿಕೊಳ್ಳೋದು ನಮ್ಮದೇ ಆಯ್ಕೆ ಅನಿಸುವಂತೆ 
And I Smile as ever 

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...