Tuesday 4 July 2017

ಮೊನ್ನೆ ಒಂದೆರಡು ದಿನ ರಜ ಇತ್ತು ಅಂತ ಎಲ್ಲಾ ಮೈದುನನ ಮನೆಯಲ್ಲಿ ಕ್ಯಾಂಪ್ ಹಾಕಿದ್ವಿ . ಒಟ್ಟೊಟ್ಟಿಗೆ ಒಂದೆರಡು ದಿನ ರಜ ಇದ್ರೆ ಆಗೊಮ್ಮೆ ಈಗೊಮ್ಮೆ ಈ ತರ ಕ್ಯಾಂಪಿನ್ಗಳು ನಡಿತಾವೆ . ಮೊನ್ನೆ ಹೋದಾಗ ಅತ್ತೆ ಬೆಳಿಗ್ಗೆಬೆಳಿಗ್ಗೆ ಎದ್ದು ಹಂಡೆ ಒಲೆ ಉರಿ ಹಾಕ್ಕಿದ್ರು . ಹಂಡೆ ನೀರಲ್ಲಿ ಬಿಸಿಬಿಸಿ ನೀರ್ ಹುಯ್ಕೊಳ್ಳಿ... ದಿನಾ ಆತ್ರಕ್ಕೆ ಆ ಸೋಲಾರ್, ಗ್ಯಾಸ್ ಗೀಸರ್ ನೀರ್ ಹುಯ್ಕೊಳ್ತೀರಾ , ಅದೇನ್ ಸ್ನಾನ ಮಾಡ ಆಟನೋ ಅಂದ್ರು . 
ನನಗಿನ್ನೂ ನೆನಪಿದೆ . ಅಜ್ಜಿ ಮನೆಗೆ ಹೋದಾಗ ಅತ್ತೆ ಬಿಸಿಬಿಸಿ ನೀರು ಎರೆಯುತ್ತಾ ಇದ್ದಿದ್ದು . ದೊಡ್ಡ 'ಕೊಳದಪ್ಪಲೆ' ಹಿಡಿದು ಸಾಕು ಅಂತ ಕಣ್ಣಲ್ಲಿ ನೀರು ತುಂಬೋವರೆಗೂ ಹಾಕ್ತಾ ಇದ್ರು . ಕೆಂಪುಕೆಂಪಾಗಿ ಹೊರ ಬಂದರೆ ದೃಷ್ಟಿ ಆಗ್ಗುತ್ತೆ ಅಂತ ಎಡ ಹುಬ್ಬಿನ ಮೇಲೊಂದು ಒಲೆಯ ಮಸಿ ಹಚ್ತಾ ಇದ್ರು ! ಬಿಸಿಬಿಸಿ ಅನ್ನದ ಮೇಲೆ ಇರೋಬರೋ ಎಲ್ಲಾ ತರಕಾರಿ ಹಾಕಿದ ಸಾಂಬಾರು , ಒಂಚೂರು ತುಪ್ಪ ಹಾಕಿ ತಿಂದ್ರೆ "ಮಲಗಿ ಬಿಡು ರಾಣಿ, ನಿಮ್ ಮಾಮ ಇರ್ತಾರೆ. ಹೊರಗೆ ಬಿಸಿಲಿಗೆ ಹೋಗ್ಬೇಡ ' ಅಂತ ಹೇಳಿ ಕೆಲ್ಸಕ್ಕೆ(ಟೀಚರ್) ಹೋಗ್ತಾ ಇದ್ರು . ಮಂಜು ಹೇಳ್ತಾರೆ "ಹಂಗೆ ತಿಂದುಂಡು ಆರೈಕೆ ಮಾಡಿಸಿಕೊಂಡು ಬೆಳೆದಿದ್ದಕ್ಕೆ ನೀ ಇನ್ನೂ ಹಿಂಗೇ (ಗುಂಡಗುಂಡಗೆ ಅಂತ ಮನಸಲ್ಲಿ ಅಂದ್ಕೊಳ್ತಾರೆ ಜೋರಾಗಿ ಹೇಳಿದ್ರೆ ಎಲ್ಲಿಯ ಗ್ರಹಚಾರ ಅಂತ ಆರೋಗ್ಯವಾಗಿ ಅಂತ ಸೇರಿಸ್ತಾರೆ ಅಷ್ಟೇ!) ಇರೋದು ಆರೋಗ್ಯವಾಗಿ ' ಅಂತ ..
ನಿಜವೇನೋ... ಆ ತ್ರಾಣ, ಶಕ್ತಿ, ದೈಹಿಕ ಹಾಗು ಮಾನಸಿಕ ಸ್ಥಿರತೆ ಎಲ್ಲದಕ್ಕೂ ಗಿಡವಾಗಿದ್ದಾಗ ಮಾಡುವ ಆರೈಕೆಯೇ ಕಾರಣವೇನೋ ಅನಿಸುವಂತೆ ... nostalgic memories......
ಮನಸ್ಸು ನೀಲಿನೀಲಿ ಥೇಟ್ ಆ ಬಾನಿನಂತೆ .. ಅಲ್ಲೆಲ್ಲೋ ಮೇಲೆ ಅತ್ತೆ, ಅಜ್ಜಿ, ಮಾಮ ನಿಂತು ನೋಡಿ ನಕ್ಕಂತೆ

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...