Tuesday 4 July 2017

ದಿನಪತ್ರಿಕೆ ಹಾಕೋಕೆ ಒಬ್ಬ ಹುಡುಗ ಬರ್ತಾ ಇದ್ದ. ೮ನೇ ತರಗತಿ ಹುಡುಗ . ದಿನಾ ನಾ ಬಾಗಿಲಿಗೆ ನೀರು ಹಾಕ್ವಾಗ್ಲೊ ರಂಗೋಲಿ ಹಾಕ್ವಾಗ್ಲೊ ಬರ್ತಾ ಇದ್ದ. ನಾನು ಪೇಪರ್ ಇಸ್ಕೊಂಡ್ 'ಥ್ಯಾಂಕ್ಸ್ ಕಣೋ'ಅಂದ್ರೆ ,ಒಂದು ಚೆಂದದ ನಗೆ ಎಸೆದು ಹೋಗ್ತಾ ಇದ್ದ . ಪರೀಕ್ಷೆ ಆಯ್ತಾ? ಶಾಲೆ ಶುರು ಆಯ್ತಾ ಅಂತ ಕೇಳಿದ್ರೆ ಉತ್ತರಿಸಿ ಹೋಗ್ತಾ ಇದ್ದ. ನಾನು ಪೇಪರ್ ಬಿಲ್ ಕೊಡುವಾಗ ಒಂದ್ ೧೦ ರೂಪಾಯಿಯೋ ೧೫ ರೂಪಾಯಿಯೋ ಚಿಲ್ಲರೆ ಉಳಿದರೆ 'ಇಟ್ಕೊಂಡು ಪೆನ್ನೋ ಬುಕ್ಕೊ ತಗೋಳೋ ಮರಿ' ಅಂತ ಹೇಳ್ತಾ ಇದ್ದೆ . ಮೊದಮೊದಲು ಒಂದಷ್ಟು ಕನ್ಫ್ಯೂಸ್ಡ್ ಆಗಿ ನೋಡಿ ಆಮೇಲೆ ಆಮೇಲೆ ತೆಗೆದುಕೊಳ್ತಾ ಇದ್ದ "ಥ್ಯಾಂಕ್ಸ್ ಆಂಟಿ" ಅಂತಿದ್ದ. ಮತ್ತದೇ ನಗು ಎಸೆದು ಹೋಗ್ತಾ ಇದ್ದ.
ಈಗೊಂದ್ ನಾಲ್ಕು ತಿಂಗಳಿಂದ ಬೇರೆ ಹುಡುಗ ಪೇಪರ್ ಹಾಕ್ತಾ ಇದ್ದ. ಅವ್ನು ಮೊದಲು ಬರ್ತಾ ಇದ್ದವನಿಗಿಂತ ಸ್ವಲ್ಪ ಸಣ್ಣವನೇ ಏನೋ. ಪೇಪರ್ ಸ್ವಲ್ಪ ತಡವಾಗಿ ತರ್ತಾ ಇದ್ದ. ಗೇಟ್ಗೆ ಸಿಗಿಸದೆ ಎಸೆದು ಹೋಗ್ತಾ ಇದ್ದ . ಒಂದೆರಡು ಬಾರಿ ಹೇಳಿದ ಮೇಲೆ ಗೇಟ್ಗೆ ಸಿಕ್ಕಿಸಿ ಹೋಗೋಕೆ ಶುರು ಮಾಡಿದ. ಒಂದೆರಡು ತಿಂಗಳು ಪೇಪರ್ ದುಡ್ಡು ಪೇಪರ್ ಏಜೆಂಟೇ ಬಂದು ತೆಗೆದುಕೊಂಡು ಹೋದ್ರು. ಕಳೆದ ತಿಂಗಳು ಈ ಹುಡುಗನಿಗೆ ದುಡ್ಡು ಕೊಟ್ಟೆ. ಸರಿ ಚಿಲ್ಲರೆ ಒಂದ್ ೧೦ ರೂಪಾಯಿ ಉಳೀತು. "ನೀನೆ ಇಟ್ಕೊಳ್ಳೋ ಪೆನ್ ಏನಾದ್ರೂ ತಗೋ 'ಅಂದೆ. ಮುಖ ನೋಡಿದ,ಆಮೇಲೆ ತೆಗೆದುಕೊಂಡ. ನಡುವೆ ಒಂದು ದಿನ ಕೃತಿಗೆ ತಿಂಡಿ ಮಾಡ್ತಾ ಇದ್ದೆ . ಬೆಲ್ ಮಾಡಿದ ಪೇಪರ್ ಹುಡುಗ 'ಆಂಟಿ,ಈವತ್ತು ನನ್ನ ಹುಟ್ಟಿದ ದಿನ ಒಂದ್ ೧೦ ರೂಪಾಯಿ ಕೊಡಿ' ಅಂದ. ಒಂದ್ ಕ್ಷಣ ರೇಗ್ತು! ಏನ್ ಇವನೇನ್ ನನ್ ಹತ್ತಿರ ಕೊಟ್ಟು ಇಟ್ಟಿದ್ದಾನಾ ಅಂತ . (ಪ್ರೀತಿಯಿಂದ ಕೊಡೋದಕ್ಕೂ ಆನ್ ಡಿಮ್ಯಾಂಡ್ ಕೊಡೋದಕ್ಕೂ ವ್ಯತ್ಯಾಸವಿದೆ). ಹೋಗ್ಲಿ ಹುಟ್ಟಿದ ದಿನ ಅಂತಾನೆ ಅಂತ ಕೊಟ್ಟೆ.ತಿಂಡಿ ತಿನ್ತಾ ಇದ್ದ ಪುಟ್ಟಿ 'ಕುಳ್ಳಿಮಾ, ಅಡ್ವಾಂಟೇಜ್ ತಗೊಳ್ತಾ ಇದ್ದಾನೆ ಅವ್ನು . ಇನ್ಮೇಲೆ ಎಂಟರ್ಟೈನ್ ಮಾಡ್ಬೇಡ.. ಬರ್ತ್ಡೇ ಅಂದ್ರೆ ಫ್ರಿಡ್ಜ್ಯಿಂದ ಒಂದು ಚಾಕಲೇಟ್ ಕೊಟ್ಟಿದ್ರೆ ಆಗ್ತಾ ಇತ್ತು" ಅಂದ್ಳು. 'ಹೋಗ್ಲಿ ಬಿಡ್ ಮಗ ಹತ್ ರೂಪಾಯಿ ತಾನೇ' ಅಂದೆ . 'ನಾ ಕೇಳಿದ್ರೆ ನೂರು ಲೆಕ್ಕ ಕೇಳ್ತೀಯಾ ..ನಿನಗೆ ನನ್ ಮೇಲೆ ಪ್ರೀತಿ ಇಲ್ಲ' ಅಂದ್ಳು. 'ಮರ್ಯಾದೆಯಾಗಿ ತಿಂದು ಎದ್ದೇಳು , ಕಾಲೇಜ್ ಗೆ ಟೈಮ್ ಆಯಿತು' ಅಂದೆ ಮುಖ ಊದಿಸಿಕೊಂಡು ಹೋದ್ಲು. ನೆನ್ನೆ ಈ ಬಾರಿಯ ಪೇಪರ್ ಬಿಲ್ ಕೊಟ್ಟೆ . ಚಿಲ್ಲರೆ ಉಳಿಯಲಿಲ್ಲ. ಆ ಹುಡುಗ ಮುಖ ನೋಡಿದ . 'ಚಿಲ್ರೆ ಇಲ್ಲ ಕಣೋ' ಅಂದೆ. 'ನಾ ಕೊಡ್ತೀನಿ ಕೊಡಿ' ಅಂದ. ಆಶ್ಚರ್ಯವಾಯ್ತು . 'ಮುಂದಿನ ತಿಂಗ್ಳು ಕೊಡ್ತೀನಿ ಬಿಡು' ಅಂದು ಒಳಗೆ ಬಂದೆ . ಬೆಳಿಗ್ಗೆ ಪೇಪರ್ ಗೇಟ್ಗೆ ಸಿಕ್ಕಿಸದೆ ಮೆಟ್ಟಿಲ ಮೇಲೆ ಬಿದ್ದಿತ್ತು !!!
ಅದೆಷ್ಟು ವ್ಯತ್ಯಾಸ ಅಲ್ವೇ ಮನುಷ್ಯರ ನಡುವೆ. ಒಬ್ಬ ಕೊಟ್ಟಿದ್ದಕ್ಕೆ ಕೃತಜ್ಞತೆ ತೋರಿದರೆ , ಮತ್ತೊಬ್ಬ ಅದನ್ನ ಹಕ್ಕು ಎಂಬಂತೆ ತಿಳಿದ ....
ಅದ್ಯಾಕೋ ಒಮ್ಮೊಮ್ಮೆ ಪ್ರೀತಿ/ವಿಶ್ವಾಸ ಕೂಡ ಸಲ್ಲದೇನೋ ಅನಿಸುವಂತೆ.. ಸಲ್ಲುವವರಿಗೆ ಮಾತ್ರ ಸಲ್ಲಿಸಬೇಕು ಅನಿಸುವಂತೆ.. ಆದರೆ ಸಲ್ಲುವವರನ್ನ ಗುರುತಿಸುವುದೆಂತು ಎನ್ನುವಂತೂ ತಿಳಿಯದಂತೆ..
ಮನಸ್ಸು ಅದ್ಯಾಕೋ ಮಡುಗಟ್ಟಿದ ಬಾನಿನಂತೆ ....

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...