Tuesday, 9 January 2018

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿಲ್ಲ, ಮಂಜು ತಿಂತಾ ಇದ್ರು. ನಾ ಹಾಗೆ ಕುಳಿತು ಮಗಳಿಗೆ ಕರೆ ಮಾಡ್ತಾ ಇದ್ದೆ. ನಮ್ಮ ಎದುರಿನ ಮೇಜಲ್ಲಿ ಒಂದಷ್ಟು ಜನ ತಿಂಡಿ ತಿಂತಾ ಕೂತಿದ್ರು. ಎಲ್ಲರ ಕೈಲೂ ಮೊಬೈಲು, ನೋಡಲು ಸುಶಿಕ್ಷಿತರ ಹಾಗೆ ಕಾಣ್ತಾ ಇದ್ರು, ಮಂಜು ಚಟ್ನಿ ಹಾಕಿಸ್ಕೊಂಡ್ ಬರ್ತೀನಿ ಇರು ಅಂತ ಎದ್ದುಹೋದ್ರು. ಮಗಳ ಜೊತೆ ಮಾತಾಡ್ತಾ ಇದ್ದೆ. ಎದುರು ಮೇಜಲ್ಲಿ ಕುಳಿತಾಕೆ ಮೇಲೆದ್ದಳು. ಅವಳು ಎದ್ದಳೊ ಇಲ್ವೋ, ಪಕ್ಕ ಕುಳಿತಿದ್ದ ವ್ಯಕ್ತಿ 'ರಪ್' ಎಂದು ಹೊಡೆದೇ ಬಿಟ್ಟ. ಅವನು ಹೊಡೆದ ಏಟಿನ ಸದ್ದು ನನಗೂ ಕೇಳಿಸೋ ಅಷ್ಟಿತ್ತು .ಆಕೆ ಹಾಗೆ ಕುಳಿತಳು. ಒಂದ್ ಕ್ಷಣ ಎದೆ ದಗ್ ಅಂತು, ಆ ವ್ಯಕ್ತಿ ಯಾರಾದ್ರೂ ನೋಡಿದ್ರೆ ಎನ್ನುವಂತೆ ಅತ್ತ ಇತ್ತ ನೋಡಿದ್ದು, ನಾ ಫೋನ್ ಕಟ್ ಮಾಡಿ ಮಂಜು ಹತ್ತಿರ ಎದ್ದು ಹೋಗಿದ್ದು ಎಲ್ಲಾ ಕ್ಷಣಗಳಲ್ಲಿ ನಡೆದು ಹೋಯ್ತು. ಮಂಜು ನನ್ನ ಮುಖ ನೋಡಿ 'ಚಟ್ನಿ ತರೋ ತನ್ಕ ಬಿಟ್ಟಿರೋಕೆ ಆಗಲ್ವ ತಾಯಿ" ಅಂತ ನಗುತ್ತಾ ಮತ್ತೆ ಅಲ್ಲೇ ಬಂದು ಕುಳಿತರು. ನಾ ಪೆಚ್ಚಾಗಿ ಹೋಗಿದ್ದೆ . ಎದುರು ಕುಳಿತ ಆ ವ್ಯಕ್ತಿ, ಆಕೆ ಹಾಗು ಜೊತೆಯಿದ್ದವರೊಂದಿಗೆ 'ದುಡ್ಡು ಕೊಟ್ಟಿಲ್ವಾ , ತಿನ್ನೋಕೆ ಏನ್ ರೋಗ, ಅಷ್ಟ್ ಬಿಟ್ಟು ತಟ್ಟೆಗೆ ಕೈ ತೊಳೀತಾಳೆ, ತಿಮರು ಅದ್ಕೆ ' ಅಂತ ಸಮಜಾಯಿಷಿ ಕೊಡ್ತಾ ಇದ್ದ . ಅವ್ರೆಲ್ಲ ಅದೊಂದು ವಿಷಯವೇ ಅಲ್ಲ ಅನ್ನೋವಂತೆ ತಿನ್ನೋದನ್ನ ಮುಂದುವರಿಸ್ತಾ ಇದ್ರು . ಆಕೆ ಕೂಡ ಏನೂ ಆಗಿಲ್ಲ ಅನ್ನುವಂತೆ ಸುಮ್ನೆ ಕುಳಿತಿದ್ಲು....
ದೇವರ ದರ್ಶನ ಮಾಡಿ ಬಂದು ಒಂದ್ ತರ ಪ್ರಶಾಂತವಾಗಿದ್ದ ಮನಸ್ಸಿನ ತಿಳಿಜಲಕ್ಕೆ ಕಲ್ಲು ಬಿದ್ದಂತೆ ...
ಹೊರಗೆ ಬಂದ ಮೇಲೆ 'ಹಿಂಗ್ ಹಿಂಗೇ ' ಅಂದೇ ಮಂಜುಗೆ . 'ನಡಿ ಇನ್ನೊಂದ್ ಸಾರಿ ದೇವಸ್ಥಾನದ ಒಳಗೆ ಹೋಗಿ ಬರೋಣ . ಇಲ್ಲ ಅಂದ್ರೆ ಮನೆ ಸೇರೋವರೆಗೂ ನೀ ಹಿಂದೆ ಇರ್ತೀಯ ' ಅಂತ ಮತ್ತೊಮ್ಮೆ ಒಳಗೆ ಹೋಗಿ ಒಂದಷ್ಟು ಸಮಯ ಒಳಗಿದ್ದು ಬಂದ್ವಿ. ಮಂಜು ಹೇಳಿದ್ದು 'ಅವಳೇ ತಲೆ ಕೆಡಿಸಿಕೊಂಡಿಲ್ಲ ನೀ ಯಾಕ್ ಹಿಂಗ್ ಬೇಜಾರ್ ಮಾಡ್ಕೊಳ್ತೀಯಾ , ಅವರ್ಯಾರೋ ಏನೋ , ಬಿಟ್ಹಾಕು.. ಬರೀ ಇಷ್ಟ್ ನೋಡಿ ಇಷ್ಟ್ ಸಪ್ಪಗೆ ಆಗೋದ್ರೆ ಅಷ್ಟೇ , ನಿನ್ನ ಒಂದಷ್ಟು ದಿನ ಹೊರಗಿನ ಪ್ರಪಂಚ ನೋಡು ಅಂತ ಕಳಿಸ್ಬೇಕು'
ಅದು ಬೇಸರ ಅಲ್ಲ, ಒಂದ್ ತರ ಭಯ... ಮನುಷ್ಯ ಪ್ರಾಣಿಗಿಂತ ಉತ್ತಮ ಅಂತಾರೆ, ಯೋಚಿಸಬಲ್ಲ ಅಂತಾರೆ, ಸಮಾಜವಾಸಿ, ಸಂಘಜೀವಿ ಅಂತೆಲ್ಲ ಅಂತಾರೆ . ಒಂದಷ್ಟು ಜನರ ನಡುವೆ ಹೇಗೆ ನಡೆದುಕೊಳ್ಳಬೇಕು ಅನ್ನೋದನ್ನ ಅರಿಯದಿದ್ದರೆ , ಒಬ್ಬರು ನನ್ನ ಅಧೀನದಲ್ಲಿದ್ದಾರೆ ಅಂತ ತೋರಿಸಿಕೊಳ್ಳೋಕೆ ತನ್ನ ಶಕ್ತಿ ಬಳಸುತ್ತಾನೆ ಎಂದರೆ, ಒಬ್ಬರನ್ನ ಗೌರವಯುತವಾಗಿ ನಡೆಸಿಕೊಳ್ಳದೆ ಇದ್ದರೆ, ಮನುಷ್ಯ ಮನುಷ್ಯ ಅನಿಸಿಕೊಳ್ಳುವನೇ ? ಇದು ತೀರಾ ಸಣ್ಣ ವಿಷಯ ನಿಜವೇ.. ಆದ್ರೂ ಸಹಜೀವಿಗೆ ಹೊರ ಪ್ರಪಂಚದಲ್ಲೇ ಬೆಲೆ ಕೊಡದ ಮನುಷ್ಯ ಎತ್ತ ಸಾಗುತ್ತಿದ್ದಾನೆ ಅನಿಸೋ ಹಾಗೆ ...
ಕೃಷ್ಣ ನೀ ಬೇಗನೆ ಬಾರೋ ......... ಅನಿಸೋ ಹಾಗೆ ...
ಇದು ಸ್ತ್ರೀ ಶೋಷಣೆ ಪರ ಅಥವ ಪುರುಷ ದ್ವೇಷಕ್ಕೆ ಬರೆದಿದ್ದಲ್ಲ.... ಬರೀ ಮಾನವ ಸಂವೇದನೆಯ(sensitivity) ಬಗ್ಗೆ ತಳೆದ ಬೇಸರ
ಹೀಗೊಂದು ಅನಿಸಿಕೆ 
ದೊಡ್ಡ ದೊಡ್ಡ ಮಾತುಗಳು ನನಗೆ ಅರಿವಾಗೋದಿಲ್ಲ, ದೊಡ್ಡ ದೊಡ್ಡ ವಿಷಯಗಳು ಅರ್ಥ ಆಗೋದಿಲ್ಲ. ಆದರೆ ಯಾರಿಗಾದರು ನೋವಾದರೆ ನನಗೂ ನೋವಾಗುತ್ತದೆ. ನನ್ನಿಂದ ನೋವಾದ್ರೆ (ತಿಳಿದೋ ತಿಳಿಯದೆಯೋ) ನನ್ನ ಬಗ್ಗೆ ಬೇಸರ ಆಗುತ್ತದೆ.ಸಾಧ್ಯವಾದಷ್ಟು ಮತ್ತೆ ನೋಯಿಸದೆ ಇರಲು ಯತ್ನಿಸುತ್ತೇನೆ. ಯಾರಿಗಾದರು ಖುಷಿ ಅನಿಸಿದರೆ, ಖುಷಿ ಪಟ್ಟರೆ ಅವರ ಜೊತೆ ನಾನೂ ನಗ್ತೀನಿ. ಸ್ನೇಹಕ್ಕೆ ವಯಸ್ಸಿನ, ಸ್ಥಾನದ, ಅಂತಸ್ತಿನ ಅಂತರ ತೋರದೆ ಬೆಲೆಕೊಡ್ತೀನಿ. ಯಾರು ಯಾವ ಸ್ಥಾನ ನೀಡಿದ್ದಾರೋ ಆ ಸ್ಥಾನಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ತೀನಿ. ಅರ್ಥವಾಗದ ವಿಷಯಗಳ ಬಗ್ಗೆ ಮಾತನಾಡೋದಿಲ್ಲ, ಕೆಲವೊಂದು ಅರ್ಥ ಆದರೂ ಕೂಡ ನಾ ಹೇಳೋದು ನಾ ಹೇಳುವವರಿಗೆ ಅರ್ಥ ಆಗದು ಅನಿಸಿದಾಗ ಹೇಳುವುದಿಲ್ಲ. ಕೆಲವೊಂದು ವಿಷಯ ಅನಗತ್ಯ ಅನಿಸಿದಾಗ ಮಾತಾಡೋದಿಲ್ಲ . ಅನಗತ್ಯವಾಗಿ ಯಾರ ವಿಷಯಕ್ಕೂ ಹೋಗುವುದಿಲ್ಲ. ಹಾಗೆ ಅನಗತ್ಯ ಆಸಕ್ತಿ ಕೂಡ entertain ಮಾಡೋದಿಲ್ಲ . ನನಗೆ ಅನಿಸಿದ ಮಾತುಗಳು, ನಾ ಕಂಡ ವಿಷಯಗಳು ಅಂತ ಒಂದಷ್ಟು ಬರೆಯೋದು ಬಿಟ್ಟರೆ, ನಾನು, ನನ್ನ ಕೆಲಸ , ನನ್ನ ಮನೆ ಇಷ್ಟೇ ನನ್ನ ಪ್ರಪಂಚ. ಇದನ್ನ ಬಿಟ್ರೆ ನನಗೆ ಮತ್ತೇನು ಇಲ್ಲ.
ಅಷ್ಟೇ ...............ನಾನು ಅಂದ್ರೆ ಅಷ್ಟೇ ....ಮತ್ತೇನು ಇಲ್ಲ. ...
ಈವತ್ತು ಪುಟ್ಟಿ ಕಾಲೇಜ್ ಅಲ್ಲಿ ಪೇರೆಂಟ್ಸ್-ಟೀಚರ್ಸ್ ಮೀಟಿಂಗ್ ಇತ್ತು . ಅವ್ಳಿಗೆ ಸ್ವಲ್ಪ ಶೀತ ಕೆಮ್ಮು ಇತ್ತು ಅಂತ ಅವಳು ಕಾಲೇಜ್ಗೆ ಹೋಗಿರಲಿಲ್ಲ. ನಾ ಹೋದೆ. ಎಂದಿನಂತೆ ತುಂಬಾನೇ ಸ್ನೇಹದಿಂದ ಮಾತನಾಡಿಸಿದರು ಲೆಕ್ಚರರ್ಗಳು . ಎಂದಿಗಿಂತ ಒಂಚೂರು ಕಮ್ಮಿಅಂಕ ತೆಗೆದುಕೊಂಡಿದ್ಳು . ಸರಿ ಉತ್ತರ ಪತ್ರಿಕೆಗಳನ್ನ ನೋಡಿ ಮತ್ತೆ ಮನೆಗೆ ಬಂದೆ . 
ಇನ್ನೂ ಗಾಡಿ ನಿಲ್ಲಿಸ್ತಾ ಇದ್ದೆ. ಮಂಜುನಾಥ ಪ್ರಭುಗಳು ಫೋನ್ ಮಾಡಿದ್ರು ' ಏನಮ್ಮ ಬಂದ್ಯಾ, ಏನಂದ್ರು ಕಾಲೇಜ್ ಅಲ್ಲಿ?" "ನಿನ್ ಮಗಳು ಕಮ್ಮಿ ಮಾರ್ಕ್ಸ್ ತಗೊಂಡಿದ್ದಾಳೆ ಈ ಸಾರಿ ".. ಇನ್ನೂ ಮಾತೆ ಮುಗಿಸಿರಲಿಲ್ಲ ... ನೀನೇನು ಬೈಯೋಕೆ ಹೋಗ್ಬೇಡ ಅವಳನ್ನ , ಇನ್ನಾ ಟೈಮ್ ಇದೆ ! ಓದ್ಕೊಳ್ತಾಳೆ !' ಅಂದ್ರು. ಫೋನ್ ನನ್ನದಲ್ವಾ ಅದ್ಕೆ ಎಸಿಲಿಲ್ಲ . ಕಟ್ ಮಾಡಿದೆ .
ಒಳಗೆ ಬಂದೆನೋ ಇಲ್ವೋ ಅಲ್ಲೆಲ್ಲೋ ಊರು ಸುತ್ತೋಕೆ ಹೋಗಿರೋ ಮಗ ಕಾಲ್ ಮಾಡ್ದ. 'ಮಾ, ಪುಟ್ಟಿ ಹುಷಾರಾಗಿದ್ದಾಳಾ? ಮೀಟಿಂಗೇ ಹೋಗಿದ್ದಾ "? "ಹೊಂ, ಈಗ ಬಂದೆ...ಸ್ವಲ್ಪ ಕಮ್ಮಿ ಮಾರ್ಕ್ಸ್ ತಗೊಂಡಿದ್ದಾಳೆ .... " ಇನ್ನೂ ಮಾತೆ ಮುಗಿಸಿಲ್ಲ . 'ಏನೂ ಅನ್ಬೇಡ , ಅವ್ಳು ಓದ್ತಾಳೆ , ಇನ್ನಾ ಟೈಮ್ ಇದೆ, ನನ್ ತಂಗಿ ನನ್ನಂಗೆ ..." ಫೋನ್ ನನ್ನದಲ್ವಾ ಅದ್ಕೆ ಎಸಿಲಿಲ್ಲ . ಕಟ್ ಮಾಡಿದೆ !!
ಅಲ್ಲಾ, ನಾನೇನು ಇಲ್ಲಿ ವಿಲ್ಲನ್ನಾ ಇವರಿಗೆಲ್ಲಾ ...
ಅದ್ಕೆ ನಾ ಇನ್ಮೇಲೆ ಇವರ್ಯಾರ ವಿಷ್ಯಕ್ಕೂ ಹೋಗೋದಿಲ್ಲ ಅಂತ ತೀರ್ಮಾನ ಮಾಡಿಬಿಟ್ಟಿದ್ದೀನಿ .... ನಾಳೆ ಬೆಳಿಗ್ಗೆವರೆಗೂ ))))
"ಲೋ ಮಗ, ಸಂಜೆ ಅಪ್ಪನ್ನ ಚೆಕಪ್ಗೆ ಕರ್ಕೊಂಡ್ ಹೋಗ್ಬೇಕು, ಪುಟ್ಟಿ ಒಬ್ಳೆ ಇರ್ತಾಳೆ ಮನೇಲೆ ಇರು ಸುತ್ತೋ ಪ್ರೋಗ್ರಾಮ್ ಇಟ್ಕೋಬೇಡ "
"ಏನ್ ಆಯ್ತಮ್ಮಾ? ಏನ್ ಚೆಕಪು ? ಮತ್ತೆ ಅಪ್ಪ ಡ್ಯೂಟಿಗೆ ಹೋಗಿದೆ " (ದನಿಯಲ್ಲಿ ಕಾಳಜಿ )
"ಅಯ್ ರೂಟೀನ್ ವಾರ್ಷಿಕ ಚೆಕಪ್ ಅಷ್ಟೇ ಕಣ್ ಮಗ "
"ನೀನೂ ಮಾಡಿಸ್ಕೊ ಮಾ "
"ನನಗೇನಾಗಿದೆ ಅಂತ ... "
"ರೋಗ ಇದ್ರೇ ಚೆಕಪ್ ಮಾಡಿಸ್ಕೊಬೇಕಾ? ನನ್ನಂತಹ ಮಗ ಅವಳಂತ ಮಗಳಿರುವಾಗ ಮೊದ್ಲೇ ಚೆಕಪ್ ಮಾಡಿಸ್ಕೊ !! ಆಮೇಲೆ ಏನಾದ್ರೂ ಬಂದ್ಬಿಟ್ಟಾತ್ತು ಕಿರ್ಚಿ ಕಿರ್ಚಿ " (ದನಿಯಲ್ಲಿ ತರಲೆ)
ಪುಣ್ಯ ಇವುಗಳನ್ನ ಹೆತ್ತ ನನ್ನದೋ, ಇಲ್ಲ ಅವುಗಳದೋ ಗೊತ್ತಿಲ್ಲ 💙😜😂
ಮದ್ವೆಯಾದ ಹೊಸದರಲ್ಲಿ ನಾವೂ ತುಂಬಾನೇ ಕಿತ್ತಾಡ್ಕೋಳ್ತಾ ಇದ್ವಿ . ಮೊದ್ಲೇ ಪ್ರೀತಿಸಿ ಆದ ಮದುವೆ.. ಎರಡೂ ಮನೆಗಳ ನಡುವೆ ಅಗಾಧ ಅಂತರ ಎಲ್ಲದರಲ್ಲೂ . ಸಣ್ಣ ಸಣ್ಣ ವಿಷಯಗಳಿಗೂ ಆಕ್ಷೇಪಣೆ .. ಬದುಕು ಪ್ರೀತಿಸುವಾಗ ಕಾಣ್ತಾ ಇದ್ದಷ್ಟು ಸರಳ ಅಲ್ಲ ಅನಿಸೋ ಹಾಗೆ . ಬೇರೆ ಮನೆ ಮಾಡಿದ ಮೇಲೆ ಕೂಡ ತುಂಬಾ ಸಣ್ಣ ಸಣ್ಣ ವಿಷಯಗಳನ್ನೂ ದೊಡ್ಡದು ಮಾಡಿಕೊಂಡು ಮನಸ್ತಾಪ ಮಾಡಿಕೊಳ್ತಾ ಇದ್ದಿದ್ದೂ ಉಂಟು. ನಮ್ಮಿಬ್ಬರ ವಿಷಯಗಳಿಗಿಂತ ಜಗಳದಲ್ಲಿ ಮೂರನೆಯ (ನಮ್ಮಿಬ್ಬರ ಮನೆಗಳವರ, ಬಂಧುಗಳ ನೆಪ ಹಿಡಿದು !!) ವಿಷ್ಯಕ್ಕೆ ಮನಸ್ತಾಪಗಳಾಗತೊಡಗಿತು. ಕೋಪ, ಅಹಂ, ಅನಗತ್ಯ ವಾದಗಳು ಮನಸ್ಸಿನ ನಡುವೆ ಕಂದಕವನ್ನು ನಿರ್ಮಿಸತೊಡಗಿದಾಗ- One fine day-ಇಬ್ರೂ ತೀರ್ಮಾನ/ಸಂಧಾನ ಮಾಡಿಕೊಂಡ್ವಿ . ನಮ್ಮಿಬ್ಬರದಲ್ಲದೆ ಮೂರನೆಯ(!!) ವಿಷಯಕ್ಕೆ ಜಗಳಗಳು ಬೇಡ ಎಂದು.. ಬದುಕು ಅಂದರೆ ಅರ್ಥ ಮಾಡಿಕೊಳ್ಳುವಿಕೆ ಅಷ್ಟೇ ಅನಿಸತೊಡಗಿತು ಕೆಲವನ್ನ ಮರೆತು, ಕೆಲವನ್ನ ನೋಡಿಯೂನೋಡದೆ, ಕೆಲವನ್ನ ಕೇಳಿಯೂಕೇಳದೆ, ಕೆಲವನ್ನ ಬದಿಗೊತ್ತಿ ಬದುಕತೊಡಗಿದಂತೆಲ್ಲ ಬದುಕು ಪ್ರೀತಿಸುವಾಗ ಇದ್ದಷ್ಟೇ ಸುಂದರ ಅನಿಸತೊಡಗಿತು. ಮಕ್ಕಳು ದೊಡ್ಡವರಾದಂತೆಲ್ಲ, ಅವರೊಟ್ಟಿಗೆ ನಾವೂ ಬೆಳೆದೆವು . ಮಾಗಿದಂತೆಲ್ಲ ಬದುಕು ಹಸನು ಮಾಡಿಕೊಳ್ಳುತ್ತಾ ಸಾಗಿದೆವು . ಜಗಳಗಳೇ ಇಲ್ಲವೆಂದಲ್ಲ, ಆದರೆ ಅದನ್ನ ಮುಂದುವರಿಸುವ ಶಕ್ತಿ/ಇಚ್ಛೆ ಇಬ್ಬರಿಗೂ ಇರೋದಿಲ್ಲ! ಮತ್ತೆಲ್ಲಾ ಶುದ್ಧ..ನಿರ್ಮಲ ಅಷ್ಟೇ !
ಪುಟ್ಟ ಹೆಣ್ಣುಮಗಳೊಬ್ಬಳು ಒಂದಷ್ಟು ದಿನಗಳ ಹಿಂದಷ್ಟೇ ಮದುವೆಯಾದವಳು , ಮೊನ್ನೆ ಮೊನ್ನೆ ಮಗುವನ್ನ ಹೆತ್ತವಳು , ಮಾತಾಡ್ತಾ ಮಾತಾಡ್ತಾ ಎಲ್ಲರಿಗೂ ನಿಮ್ಮ ಹಾಗೆ ಬದುಕು ಸಿಗೋದಿಲ್ಲ ಅಮ್ಮ, ಅತ್ತೆ ಮನೆಯಲ್ಲಿ ಕಷ್ಟ ಎಂದು ನೊಂದುಕೊಂಡಳು .... ಮನಸ್ಸಿಗೆ ನೋವಾಯತು .
ಬದುಕು ಯಾರಿಗೂ ಹಾಗೆ ಪುಕ್ಕಟೆ ಸಿಗೋದಿಲ್ಲ , ಕಟ್ಟಿಕೊಳ್ಳಬೇಕು, ಪಡೆದುಕೊಳ್ಳಬೇಕು , ಕೆಲವಕ್ಕೆ ಬೆಲೆ ತೆತ್ತು, ಕೆಲವನ್ನ ಪ್ರೀತಿಯಿಂದ, ಕೆಲವನ್ನ ಹಠದಿಂದ , ಕೆಲವನ್ನ ಛಲದಿಂದ !
ಬದುಕು ಬಾನಿನಂತೆ . ಆಗಾಗ ಮೋಡ ಕವಿದು ಮಳೆ ಸುರಿದರೂ ಮತ್ತೊಮ್ಮೆ ನೀಲಿ ಮೂಡುವಂತೆ 
I smile with everything Not because I am strong, because I know the value of MY tears ))
ಸುಂಸುಮ್ನೆ ಬರೀಬೇಕು ಅನಿಸ್ತು )

Wednesday, 20 December 2017

ಪುಟ್ಟಿ ಕಾಲೇಜ್ ಅಲ್ಲಿ ಈ ವಾರ ಪೂರಾ fun ವೀಕ್. ಈ ವಾರ ಓದುವಿಕೆಗೆ ತಿಲಾಂಜಲಿ ಇಟ್ಟಿದ್ದಾಳೆ! ದಿನಕ್ಕೊಂದು ತರದ ಬಟ್ಟೆ ,ಅದನ್ನ ಹಿಂದಿನ ಸಂಜೆ ಹುಡುಕೋದಕ್ಕೆ ಟ್ರೈ ಮಾಡೋದಕ್ಕೆ ಅಂತಲೇ ಮೀಸಲಿಟ್ಟಿದ್ದಾಳೆ!! ದಿನಾ ಬೆಳಿಗ್ಗೆ 'ಏಳು ಮಗ ಟೈಮ್ ಆಯ್ತು' ಅಂದ್ರೆ 'ಇನ್ನೊಂದ್ ಹತ್ ನಿಮಿಷ್ ಮಾ'ಅಂತ ಗೋಗರೆದು ಆಮೇಲೆ ಎದ್ದು ಟೈಮ್ ಆಯ್ತು ಅಂತ ಪರದಾಡೋ ಹುಡುಗಿ ಈಗ ಬೇಗಬೇಗ ಎದ್ದು ತಯಾರಾಗ್ತಾಳೆ !! 'ತಿಂಡಿ ನೀನೆ ತಿನ್ನಿಸ್ಬಿಡು' ಅಂತ ಗೋಳಾಡಿಸ್ತಾಳೆ ..
ಈವತ್ತು ರಾಜಕಾರಣಿಗಳ ದಿನ ಅಂತೆ.. ಒಂದು ಕಾಟನ್ ಸೀರೆ ತೆಗೆದು ಉಟ್ಕೊಂಡು ರೆಡಿ ಆದ್ಲು (ಈ ಸೀರೆನ ದಿನಾ ಹೆಂಗ್ ಮೈನ್ಟೈನ್ ಮಾಡ್ತೀರೋ ತಾಯಂದಿರ ನಿಮಗೊಂದು ನಮಸ್ಕಾರ ಅಂದ್ಲು ), ದಿನದಂತೆ ಜುಟ್ಟು ಕಟ್ಟದೆ ಒಂದು ಪುಟ್ಟ ಜಡೆ ಹಾಕಿಕೊಂಡಳು . ಒಂದು ಪುಟ್ಟ ವಾಚ್ ಕಟ್ಟಿಕೊಂಡ್ಲು . ಸರ ಹಾಕ್ಕೋ ಅಂದೆ 'ಮಾ, U kno I am a very sincere Politician, ಯಾವನ್ ರೈಡ್ ಮಾಡಿದ್ರು ನನ್ನ ಮನೆಯಲ್ಲಿ ಏನಿರೋದಿಲ್ಲ ಅಂತ ಹೇಳೋಕೆ ಹಿಂಗ್ ಇರೋದು' ಅಂದ್ಳು !! (ಮೂಗಿನ ಮೇಲೆ ಬೆರಳಿಟ್ಟುಕೊಂಡೆ !!)..ಎಲ್ಲಾ ಆಯ್ತು ಕಾಲೇಜ್ಗೆ ಹೊರಟಳು. ಸೀರೆ ಹಾಕ್ಕೊಂಡು ಒಂದೇ ಬದಿಯಲ್ಲಿ ಗಾಡಿಯಲ್ಲಿ ಕುಳಿತಾಗ ಶುರು ಆಯ್ತು ಅವಳ ವರಾತ .'ಮಾ, ಮೆಲ್ಲ್ಗೆ ಓಡ್ಸು ಪ್ಲೀಸ್' ಅಂತ. ದಿನ ಡ್ರಾಪ್ ಮಾಡೋವಾಗ 'ಅದೇನ್ ಗಾಡಿ ಓಡಿಸ್ತಿರೋ ಏನೋ ಗಂಡಹೆಂಡತಿ , ನಮ್ಮಣ್ಣ ಓಡಿಸ್ತಾನೆ ನೋಡು ಹಂಗ್ ಓಡಿಸಬೇಕು , ಅದ್ಯಾವ್ ಮಗ DL ಕೊಟ್ಟನೋ ನಿಮ್ಮಿಬ್ಬರಿಗೆ ' ಅಂತ ಹಿಂದೆ ಕೂತು ವಟಗುಟ್ಟುತ್ತಾ ಇದ್ದವಳು ಇವಳೇನಾ ಅನಿಸೋ ಹಾಗೆ !
ಗಾಡಿ ಇಳೀತಾ ಹೇಳ್ತಾಳೆ 'ಈವತ್ತು ಗಂಡ್ ಐಕ್ಳಿಗೆಲ್ಲ ಪಾಠ ತಲೆಗೆ ಹೋಗಲ್ಲ ಬಿಡು , ಕಾಲೇಜ್ ಹಾಳ್ ಮಾಡಿ ಬರ್ತೀವಿ'
ಇನ್ನು ಈಗ ತೊಡೆಯ ಮೇಲೆ ಮಲಗಿದ್ದ ಮಗಳ ನೆನಪು .... And I Cherish Every moment with Them :)))) <3

Thursday, 30 November 2017

ನನಗೊಂದಿಷ್ಟು ನಗುವ ಸಾಲವಾಗಿ ಕೊಟ್ಟಿರು ಬದುಕೇ 
ನನ್ನಳಲ ಇತರರಿಗೆ ಹಂಚುವ ಮನಸಿಲ್ಲ ಅಂದಿದ್ದಳವಳು ಅಂದು ..... 
ಪಡೆದ ಸಾಲವ ಹಂಚುತ್ತಲೇ ಬಂದಿದ್ದಾಳೆ 
ಅವಳವರು ಎನಿಸಿಕೊಂಡವರೆಲ್ಲರಿಗೂ
ಅವಳಲ ಒಡಲಾಳದಲಿ ಬಚ್ಚಿಟ್ಟು ....
ಅಂದು ಸಾಲ ಕೊಡಲು ನಿಂತ ಬದುಕು 
ಇಲ್ಲಿಯವರೆಗೂ ಕೊಟ್ಟದ್ದ ಮರಳಿ ಕೇಳದೆ 
ನಗೆಯ ಸಾಲವ ನೀಡುತ್ತಲೇ ಇದೆ 
ಅವಳಲ ತನ್ನ ಒಡಲಾಳದಲಿ ಬಚ್ಚಿಟ್ಟುಕೊಂಡು ........
'ನಿನ್ನ ಭುಜದ ಮೇಲೆ ತಲೆಯಿಟ್ಟು ಒಂದಷ್ಟು ಹೊತ್ತು ಕೂರಬೇಕು '
'ಅಷ್ಟೇನಾ ' ಕಣ್ಣಲ್ಲಿ ಅದೇ ತುಂಟತನ 
'ಹೂಂ, ಅಷ್ಟೇ .. ಅದೆಷ್ಟೋ ವರ್ಷಗಳಾಗಿತ್ತು ಅಲ್ವ ನಾವಿಬ್ಬರೇ ಹೀಗೆ ಏಕಾಂತವಾಗಿ ಇದ್ದು .. '
'ಮದ್ವೆಗೆ ಮೊದಲೇನೋ ....."
ಮಕ್ಕಳ ಜವಾಬ್ದಾರಿ ಮುಗಿಸಿ ನಿರಾಳವಾಗಿ ಕುಳಿತ ಇಬ್ಬರ ಮೊಗದಲ್ಲೂ ನಗು.... ))
ಕಥೆ ಹೇಳಿ ತುಂಬಾ ದಿನಗಳಾಗಿತ್ತು ಅಲ್ವೇ  ಇಲ್ಲೊಂದು ಕಥೆಯಿದೆ ನೋಡಿ 
ಒಂದೂರು, ಊರಲ್ಲಿ ಒಂದೇ ಬಾವಿ , ಕುಡಿಯುವ ನೀರಿಗೆ ಎಲ್ಲಾ ಅಲ್ಲಿಂದಲೇ ನೀರು ತೆಗೆದುಕೊಳ್ತಾ ಇದ್ರು. 
ಒಮ್ಮೆ ಆ ಬಾವಿಯೊಳಗೆ ಒಂದು ನಾಯಿ ಬಿದ್ದು ಹೋಯ್ತು. ನೋಡಿದ್ರೋ ಅಥವ ನೋಡಲಿಲ್ಲವೋ -ಒಟ್ಟಾರೆ ಆ ನಾಯಿಯನ್ನ ಯಾರೂ ಹೊರ ತೆಗೆಯಲಿಲ್ಲ. ನಾಯಿ ಅಲ್ಲೇ ಸತ್ ಹೋಯ್ತು. ಒಂದೆರಡು ದಿನಗಳಾದ ಮೇಲೆ ನೀರು ನಾರತೊಡಗಿತು. ಬಳಸಲು ಅನರ್ಹವಾಗ್ತಾ ಹೋಯ್ತು. ಆದರೂ ನಾಯಿಯನ್ನ ಎತ್ತಬೇಕೆಂದು ಯಾರಿಗೂ ಅನಿಸಲಿಲ್ಲ ! ಜನ ಕುಡಿಯುವ ನೀರಿಗೆ ಒದ್ದಾಡತೊಡಗಿದರು. ಕಡೆಗೆ ಊರ ಹೊರಗಿನ ದೇಗುಲದ ಬಳಿಯಿದ್ದ ಹಿರಿಯ ಸನ್ಯಾಸಿಯೊಬ್ಬರನ್ನ ಪರಿಹಾರ ಕೇಳಿದ್ರು. ಸನ್ಯಾಸಿ 'ಒಂದಷ್ಟು ಗಂಗಾ ಜಲ ತಂದು ನೀರಿಗೆ ಹಾಕಿ, ನೀರಿನ ಪಾವಿತ್ರ ಹಿಂದಕ್ಕೆ ಬರುತ್ತದೆ ' ಅಂದ. ಜನ ಹಾಗೆ ಮಾಡಿದ್ರು. ಆದರೂ ನೀರು ಕುಡಿಯಲು ಯೋಗ್ಯವಾಗಲಿಲ್ಲ. ಜನ ಮತ್ತೆ ಸನ್ಯಾಸಿಯನ್ನ ಕೇಳಿದಾಗ ಒಂದಷ್ಟು ಹೋಮ, ಹವಾನ ಮಾಡಿಸಿ' ಅಂದ . ಜನ ಅದನ್ನೂ ಮಾಡಿದರು.ನೀರು ಶುದ್ಧವಾಗಲಿಲ್ಲ. ಮತ್ತೊಮ್ಮೆ ಕೇಳಿದಾಗ ಸನ್ಯಾಸಿ 'ನೀರಿಗೆ ಒಂದಷ್ಟು ಸುಣ್ಣ ಹಾಕಿ ಮತ್ತೆ ತಿಳಿಯಾಗಬಹುದು' ಅಂದ . ಜನ ಮತ್ತೆ ಹಿಂದಿರುಗಿ ಬಂದಾಗ ಸನ್ಯಾಸಿ ಅಚ್ಚರಿಗೊಂಡ . 'ಇನ್ನೂ ನೀರು ತಿಳಿಯಾಗಲಿಲ್ಲವೇ?' ಎಂದಾಗ ಜನರು 'ಇಲ್ಲಾ ' ಎಂದರು. ಸನ್ಯಾಸಿ 'ಅಲ್ಲಾ, ನೀವು ಸತ್ತ ನಾಯಿಯನ್ನ ಹೊರ ತೆಗೆದಿರಿ ತಾನೇ"? ಎಂದು ಪ್ರಶ್ನಿಸಿದ. ಈಗ ಜನ 'ನೀವು ಹೇಳಲೇ ಇಲ್ಲವಲ್ಲ ಸ್ವಾಮೀ ' ಎಂದರು .ಸನ್ಯಾಸಿ ನಕ್ಕುಬಿಟ್ಟ . 'ಕೊಳೆಯನ್ನೇ ತೆಗೆಯದೆ ಶುದ್ದಿ ಮಾಡಲು ಹೇಗೆ ಸಾಧ್ಯ' ಎಂದ . ಮೊದಲು ಸತ್ತ ನಾಯಿಯನ್ನ ಹೊರಹಾಕಲು ಹೇಳಿದ ....
ಮನದ ಮಲಿನವನ್ನ ತೆಗೆಯದೆ ಮನಸ್ಸಿಗೆ ಶಾಂತಿ ಎಲ್ಲಿಂದ ಅಲ್ವೇ? ಹಚ್ಚಿದ ಕಡ್ಡಿ ಬೇರೆಯವರನ್ನಸುಡುವ ಮುನ್ನ ತನ್ನನ್ನು ತಾನೇ ಸುಟ್ಟುಕೊಂಡಿರುತ್ತದೆ ಅದಕ್ಕೆ ಅರಿವಿಲ್ಲದೆ !
ಹಿರಿಯ ಗೆಳೆಯರೊಬ್ಬರು ಕಳಿಸಿದ್ರು. ಅನುವಾದಿಸಿ ಹಂಚಿಕೊಂಡೆ ಅಷ್ಟೇ 
ಅಂದೆಂದೋ ನನ್ನ 
ನೋಯಿಸಿದ್ದವರು 
ನನ್ನೆದಿರು ಬಂದು 
ಅಸಹಾಯಕರಂತೆ ನಿಂತಾಗ 
ನಾ ಅನುಭವಿಸಿದ 
ಯಾರಿಗೂ ಕಾಣದಂತೆ
ಸೆರಗಿನೊಳಗೆ ಬಚ್ಚಿಟ್ಟಿದ್ದ ನೋವೆಲ್ಲಾ 
ಒಮ್ಮೆಗೇ ಇಣುಕಿಬಿಡುತ್ತದೆ....... 
ಅಂದು 
ಒತ್ತಟ್ಟಿಗೆ 
ಮುಚ್ಚಿಟ್ಟಿದ್ದ ಅಸಹನೆಯೆಲ್ಲಾ 
ಇಂದು ಹೊರತೂರಿಬಿಡಲೇ ಅನಿಸುವಾಗ
ಇದು 
ಅಂದಿನ ನನ್ನದೇ ಅಸಹಾಯಕತೆಯ 
ಮತ್ತೊಂದು ರೂಪವೇನೋ ಅನಿಸಿ
ಅಳುವಿಗೆ ಭುಜ ನೀಡಿಬಿಡುತ್ತೇನೆ .... 
ಅವರ ಮೊಗದ ಅಪರಾಧೀಭಾವ ಕಂಡು 
ನನ್ನ ಒಳಮನ ಸಂತ್ವಾನಗೊಳ್ಳುತ್ತಿದೆಯೇೆ?? !!!! 
ಅಲ್ಲೆಲ್ಲೋ ನನ್ನ ಮನಸ್ಸು ಹೇಳುತ್ತದೆ 
ನೀ ಮೇಲೆ ಕಾಣುವಷ್ಟು ಒಳ್ಳೆಯವಳಲ್ಲ !!
ನೀ ಒಳ್ಳೆಯವಳಲ್ಲ .!!!!
ಹೌದೇನೋ 
ಆದರೂ 
ನಾನೂ ಮನುಷ್ಯಳೇ ತಾನೇ ಎಂದು ತಿಪ್ಪೆ ಸಾರಿಸಿಬಿಡುತ್ತೇನೆ .. 
ಒಳ್ಳೆಯವಳೆಂಬ ಮುಖವಾಡ ತೊಟ್ಟು ..... !!

Thursday, 9 November 2017

ಒಬ್ಬ ರಾಜ. ಸುಭಿಕ್ಷದ ಕಾಲದಲ್ಲಿ ಏನೂ ಕೆಲಸವಿಲ್ಲದೆ ತೊಂದರೆಗಳಿಲ್ಲದೆ ಇದ್ದಾಗ ತನ್ನ ಆಸ್ಥಾನದಲ್ಲಿ ಮಂತ್ರಿಮಂಡಲಗಳೊಂದಿಗೆ ಸರಸ ಸಂಭಾಷಣೆಯಲ್ಲಿ ತೊಡಗಿದ್ದಾಗ ಒಂದು ಪ್ರಶ್ನೆ ಕೇಳ್ತಾನೆ . 'ಮಂತ್ರಿಗಳೇ, ಮದುವೆಯಾಗಿ ಗಂಡನ ಮನೆಗೆ ಹೋಗುವ ಹೆಣ್ಣು ಮಗಳಿಗೆ ಬದುಕಿನಲ್ಲಿ ಸುಖಸಂತಸ ಇರಬೇಕೆಂದು ತುಂಬಾ ಆಸೆ ಆಕಾಂಕ್ಷೆಗಳಿರುತ್ತವೆ. ಪ್ರತಿ ಹೆಣ್ಣುಮಗಳು ಮದುವೆಯಾಗಿ ಹೋಗುವಾಗ ಮನದಲ್ಲಿ ಅನಿಸುವ ಅತೀ ಇಷ್ಟದ ಆಸೆ ಯಾವುದು ಹೇಳಿ?" 
ಮಂತ್ರಿ ಹಾಗು ಇತರರು 'ಗಂಡ ಒಳ್ಳೆಯವನಾಗಿರಬೇಕು, ಅತ್ತೆ ಮಾವ ಒಳ್ಳೆಯವರಾಗಿರಬೇಕು, ಒಳ್ಳೆ ಮುದ್ದಾದ ಮಕ್ಕಳಾಗಬೇಕು , ಇತ್ಯಾದಿ ಇತ್ಯಾದಿ' ಉತ್ತರಗಳನ್ನ ಹೇಳ್ತಾರೆ . ರಾಜ ಸಂಪ್ರೀತನಾಗೋದಿಲ್ಲ. 'ನಾಳೆ ಬೆಳಗ್ಗೆಯವರೆಗೆ ಸರಿಯಾದ ಸಮಂಜಸ ಉತ್ತರ ನೀಡದಿದ್ದರೆ ಶಿಕ್ಷೆಗೆ ಗುರಿಯಾಗುವಿರಿ' ಅಂತಾನೆ . ಮಂತ್ರಿ ಎಷ್ಟೇ ಪ್ರಯತ್ನಿಸಿದರೂ ಉತ್ತರ ಸಿಗೋದಿಲ್ಲ. ತುಂಬಾನೇ ಬೇಸರದಿಂದ ಕುಳಿತಿರುವಾಗ ಅವನ ಮಗ ಕಾರಣ ಕೇಳ್ತಾನೆ . ಮಂತ್ರಿ ಹಿಂಗ್ಹಿಂಗೆ ಅಂತ ಹೇಳ್ತಾನೆ. ಅಪ್ಪ ಅಂದ್ರೆ ಮಗನಿಗೆ ತುಂಬಾನೇ ಪ್ರಾಣ . ತಂದೆಯ ಸಮಸ್ಯೆಗೆ ಉತ್ತರ ಯೋಚಿಸುತ್ತಾ ಒಂದು ಹಳೆಯ ಛತ್ರದ ಬಳಿ ಕುಳಿತಾಗ ಒಬ್ಬ ಭಿಕ್ಷುಕಿ ಕಾಣ್ತಾಳೆ . ಅವಳು ಮಂತ್ರಿಕುಮಾರನನ್ನ ಬೇಸರಕ್ಕೆ ಕಾರಣ ಕೇಳ್ತಾಳೆ. ತುಂಬಾ ಕುರೂಪಿಯಾಗಿದ್ದ ಆಕೆಯನ್ನ ಕಂಡು ಪ್ರಶ್ನೆಗೆ ಉತ್ತರಿಸಬೇಕೆಂದೆನಿಸದಿದ್ದರೂ ಮಂತ್ರಿಕುಮಾರ ಸೌಜನ್ಯದಿಂದ ಕಾರಣ ಹೇಳ್ತಾನೆ . ಅವಳು ನಸುನಕ್ಕು 'ನೀನು ನನ್ನ ಮದುವೆಯಾಗುವೆ ಎಂದು ಭಾಷೆ ನೀಡಿದರೆ ನಾ ಉತ್ತರ ನೀಡ್ತೀನಿ' ಅಂತಾಳೆ. ಚಕಿತಗೊಂಡ ಮಂತ್ರಿಕುಮಾರ ಕೋಪಗೊಂಡರೂ ತಂದೆಗಾಗಿ ಒಪ್ಪಿಕೊಳ್ತಾನೆ ! ಸರಿ ಬೆಳಿಗ್ಗೆ ರಾಜನ ಆಸ್ಥಾನದಲ್ಲಿ ಭಿಕ್ಷಿಕಿ ರಾಜನಿಗೆ ಉತ್ತರಿಸುತ್ತಾಳೆ ' ಪ್ರತಿ ಹೆಣ್ಣು ಮಗಳಿಗೂ ಮದುವೆಯಾಗಿ ಹೋಗುವ ಮನೆಯಲ್ಲಿ ತನ್ನ ತವರಿನಲ್ಲಿದ್ದ ಸ್ವತಂತ್ರ ಇದ್ದರೆ ಸಾಕೆಂದು ಹಂಬಲಿಸುತ್ತಾಳೆ . ಅದೊಂದಿದ್ದರೆ ಉಳಿದದ್ದೆಲ್ಲ ಅವಳು ಪಡೆಯಬಲ್ಲಳು ' ಎನ್ನುತ್ತಾಳೆ ! ರಾಜ ಸಂತುಷ್ಟನಾಗುತ್ತಾನೆ . ಈಗ ಮಂತ್ರಿಗೆ ಅವಳನ್ನ ತನ್ನ ಮಗನಿಗೆ ಮದುವೆ ಮಾಡಿಕೊಳ್ಳಬೇಕಲ್ಲ ಎಂಬ ದುಃಖವಾಗುತ್ತದೆ. ಆದರೆ ಮಂತ್ರಿಯ ಮಗ ಆಕೆಗೆ ಕೊಟ್ಟ ಮಾತಿನಂತೆ ಆಕೆಯನ್ನ ವಿವಾಹವಾಗುವೆ ಎನ್ನುತ್ತಾನೆ . ಅವನ ನಿಷ್ಠೆಗೆ ಮೆಚ್ಚಿ ದೇವತೆಯೊಬ್ಬಳು ಪ್ರತ್ಯಕ್ಷವಾಗಿ 'ನಿನ್ನ ನಿಷ್ಠೆಗೆ ಮೆಚ್ಚಿದ್ದೇನೆ , ನಿನಗೊಂದು ವರಕೊಡುತ್ತೇನೆ , ಇವಳನ್ನ ನಾ ಸುಂದರಿಯಾಗಿ ಮಾಡುತ್ತೇನೆ , ಆದ್ರೆ ಹಗಲಿನಲ್ಲೊ , ರಾತ್ರಿಯಲ್ಲೊ ಎಂಬ ಆಯ್ಕೆ ನಿನ್ನಾದು ಅಂತಾಳೆ. " ಹಗಲಿನಲ್ಲಿ ಮನೆತುಂಬ ಕಳಕಳೆಯಾಗಿ ಓಡಾಡುವ ಪತ್ನಿಯನ್ನ ಬೇಡುತ್ತಾನೋ ಅಥವಾ ರಾತ್ರಿಯಲ್ಲಿ ಅವನ ಮನದಿಚ್ಛೆಯನ್ನ ಪೂರೈಸುವ ಮಡದಿಯನ್ನೋ ' ಎಂದು ಎಲ್ಲರೂ ಅಚ್ಚರಿಗೊಳ್ಳುತ್ತಾರೆ... ಮಂತ್ರಿಕುಮಾರ ಒಂದು ಘಳಿಗೆ ಯೋಚಿಸಿ "ಅದನ್ನ ಅವಳಿಚ್ಛೆಗೆ ಬಿಡುತ್ತೇನೆ " ಅನ್ನುತ್ತಾನೆ !!! ದೇವತೆ ಅವನನ್ನು ಹರಸಿ ಅವಳನ್ನ ಸುರಸುಂದರಿಯನ್ನಾಗಿಸಿ ಮಾಯವಾಗುತ್ತಾಳೆ:).
ಓದಿದೆ ಅನುವಾದಿಸಿ ಹಂಚಿಕೊಳ್ಳಬೇಕು ಅನಿಸ್ತು ...
ಮದುವೆಯಾಗಿ ಗಂಡನ ಮನೆಗೆ ಹೋಗುವ ಹೆಣ್ಣುಮಕ್ಕಳಿಗೆ ತವರಿನ ಬಂಧುತ್ವ ನೀಡಿದರೆ ಬಹಳಷ್ಟು ಮನೆಗಳು ಸ್ವರ್ಗವಾಗುತ್ತವೇನೋ !!
(ಎಲ್ಲಾ ಹೆಣ್ಣುಮಕ್ಕಳು ಹಾಗಲ್ಲ, ಸೊಸೆಯಂದಿರೂ ಒಳ್ಳೆಯವರಾಗಿರಬೇಕು, ಇತ್ಯಾದಿ ಇತ್ಯಾದಿ ಹೇಳಿಕೆಗಳು ಬಗ್ಗೆ ಅರಿವಿದೆ .. ಐದು ಬೆರಳೂ ಸಮವಿಲ್ಲ ಅಲ್ವೇ!! )
ಮೊನ್ನೆ ಮೊನ್ನೆ ಒಂದ್ ದಿನ ಎಂದಿನಂತೆ ಪುಟ್ಟಿನ ಕಾಲೇಜಿಂದ ಕರ್ಕೊಂಡ್ ಬರೋಕೆ ಹೋಗಿದ್ದೆ . ಗಾಡಿ ಹತ್ತಿದ ಕೂಡ್ಲೆ ಎಂದಿನಂತೆ "ಕಥೆ" ಶುರು ಮಾಡಿದ್ಲು ."ಊಟ ಮಾಡ್ದ ಕುಳ್ಳಿಮಾ? " ಇನ್ನೂ ನಾ ಉತ್ತರಿಸಿಯೇ ಇರಲಿಲ್ಲ ಆಗ್ಲೇ 'ಮಾ, ಈವತ್ತು ನಮ್ ಕ್ಲಾಸ್ ಅಲ್ಲಿ ೮ ಜನ "ಸೀಸು" . ಪ್ರಿನ್ಸಿ ಪೇರೆಂಟ್ಸ್ ಕರೆಸಿದ್ರು ' ಅಂದ್ಲು . (ಇವಳು ಕಾಲೇಜ್ಗೆ ಹೋಗೋಕೆ ಶುರು ಮಾಡಿದ ಮೇಲೆ ನನ್ನ ಪದಭಂಡಾರಕ್ಕೆ ಸುಮಾರು ಹೊಸಹೊಸ ಪದಗಳನ್ನ ಸೇರಿಸಿದ್ದಾಳೆ!! ಅಂತಹದೇ ಇದೂ ಒಂದು ಸೀಸು -ಸಿಕ್ಕಿಹಾಕೊಳ್ಳೋದು) 'ಯಾಕ್ ಮಗ' ಅಂದೆ. ಮೊನ್ನೆ ಕ್ಲಾಸಿಂದ ಎಪಿಎಸ್(!!) ( ಅಂದ್ರೆ ಎಸ್ಕೇಪ್/ಚಕ್ಕರ್!!) ಆಗಿ ತಲಕಾಡಿಗೆ ಹೋಗಿದ್ರಂತೆ. ಸಿಕ್ಕಿಹಾಕಿಕೊಂಡು ಅವರ ಅಪ್ಪಅಮ್ಮನ್ನ ಕರೆಸಿದ್ರು. ಆಫೀಸ್ ಈವತ್ತು ರಣರಂಗ ಆಗೋಗಿತ್ತು " ಅಂತೆಲ್ಲ ಹೇಳಿದ್ಲು. 'ನೀ ಹೋಗಿರ್ಲಿಲ್ಲ ತಾನೇ ' ಅಂತ ಕಾಲೆಳೆದೆ. 'ನಾವ್ ಗೊತ್ತಲ್ಲ, ಹಂಗೆಲ್ಲಾ ಹೇಳ್ದೆ ಹೋಗೋ ಸೀನೇ ಇಲ್ಲ, ನಿನ್ನ "ಅಳಿಯನ"(!!!) ಜೊತೆ ಹೋದ್ರು ಹೇಳ್ಬಿಟ್ ಹೋಯ್ತಿನಿ ಬಿಡಮ್ಮ' ಅಂದ್ಲು .'ಕರ್ಮ ಮಾರಾಯ್ತಿ ನಿಂದು, ಅಮ್ಮ ಅನ್ನೋ ಭಯನೇ ಇಲ್ಲ ' ಅಂತ ಬೈಕೊಂಡು ಬಂದೆ . ಕಿಸಿಕಿಸಿ ನಗುತ್ತಾ ಬೆನ್ನಿಗೆ ಒರಗಿ "ಲವ್ ಯು ಮಾ' ಅಂದ್ಲು ..
ಒಂದೆರಡು ದಿನ ಆಗಿತ್ತು . ಸುಮಾರು ೨ ಗಂಟೆಯಲ್ಲಿ ಕಾಲೇಜಿಂದ ಕರೆ ಬಂತು . 'ನಾವು, ___ ಕಾಲೇಜಿಂದ" ಅಂದ್ರು. ಪುಟ್ಟಿ ಹೇಳಿದ್ದ ಮಾತುಗಳು ನೆನಪಿಗೆ ಬಂದು ಒಂದಷ್ಟು ಬೆಚ್ಚಿದಂತಾಗಿ "ಹೇಳಿ ' ಅಂದೆ . "ನೀವು ಕೃತಿ ಮಂಜುನಾಥ್ ಪೇರೆಂಟಾ"? ಅಂದ್ರು. 'ಹೌದು ಹೇಳಿ ' ಅಂದೆ . 'ಎರಡನೇ ಟರ್ಮ್ ಫೀಸ್ ಬಾಕಿ ಇದೆ ಮೇಡಂ' ಅಂದ್ರು. ಇಲ್ಲಾ, ಕಟ್ಟಿ receipt ಕೂಡ ಆಫೀಸಿಗೆ ಕಳಿಸಿದ್ದೀನಿ. ಆಗ್ಲೇ ೧೫ ದಿಂದ ಮೇಲಾಯ್ತು ಒಮ್ಮೆ ಚೆಕ್ ಮಾಡಿ' ಅಂದೆ . 'ಕಟ್ಟಿದ್ರೆ ಸರಿ ಮೇಡಂ, ಸಾರಿ ಮೇಡಂ ' ಅಂತ ಫೋನ್ ಇಟ್ರು.
ಮನಸ್ಸು ಅದೆಷ್ಟು ವಿಚಿತ್ರ ಅಲ್ವೇ ! ಕ್ಷಣಗಳಲ್ಲಿ ಎಲ್ಲಿಂದೆಲ್ಲಿಗೋ ಹೋಗಿಬಿಡುತ್ತದೆ . ಒಳಿತಿಗಿಂತ ಕೆಡುಕೇ ಅಥವಾ ಕೆಡುಕಿನ ಭಯವೇ ಮನಸ್ಸಿನ ಪದರದಲ್ಲಿ ಅವಿತಿರುತ್ತದೇನೋ ಅನಿಸುವಂತೆ ! ಅದೆಷ್ಟೇ ನಂಬಿಕೆಯಿದ್ದರೂ ಅಲ್ಲೆಲ್ಲೋ ಒಂದು ಸಣ್ಣ ಅಪನಂಬಿಕೆಯ ಎಳೆ ಹುದುಗಿ ಕುಳಿತಂತೆ.....
ಪುಟ್ಟಿಗೆ ಸಂಜೆ "ಹಿಂಗ್ ಹಿಂಗೇ ಮಗ , ಭಯ ಆಯ್ತು, ನೀ ಚಕ್ಕರ್ ಹಾಕಿ ಎಲ್ಲಾದ್ರೂ ಹೋಗಿದ್ಯೇನೋ ಅಂತ" ಅಂದೆ . "ಮೌ,ನಾ ಹೇಳಿಲ್ವ, ಹೋಗೋದಾದ್ರೆ ಹೇಳೇ ಹೋಗ್ತೀನಿ ನಿನ್ನಳಿಯನ ಜೊತೆ ಅಂತ , ಸುಮ್ನೆ ಟೆನ್ಶನ್ ಮಾಡ್ಕೋ ಬೇಡ ಸರಿನಾ.... ಈಗ ಒಂದಿನ್ನೂರು ಈ ಕಡೆ ತಳ್ಳು, ನಾಳೆ ನನ್ ಫ್ರೆಂಡ್ ಬರ್ತ್ಡೇ ಐತೆ !!!" ಅಂದ್ಳು ..
ಪುಣ್ಯ ಮಾಡಿ ಹೆತ್ತಿದ್ದೀನಿ ಇವಳನ್ನ ....))ಇವ್ಳು ಉದ್ದಾರ ಅಗೋ ಚಾನ್ಸ್ ಇಲ್ಲ ......
ಹೆಂಡತಿ ಕೊಟ್ಟ ಟೀ ಆಸ್ವಾದಿಸುತ್ತಾ ಆರಾಮವಾಗಿ ಟಿವಿ ನೋಡ್ತಾ ಇದ್ದ ಪತಿ ರಾಯ . ಫೋನ್ ಟ್ರಿಂಗುಟ್ಟಿತು . 
'ಹಲೋ'
'ಹಲೋ ಸಾರ್ ಮಂಜುನಾಥ್ ಆವ್ರಾ?'
ಹೆಣ್ಣು ದನಿ ಕೇಳುತ್ತಲೇ ಮೊಗ ಅರಳಿತು ದನಿ ಮೆದುವಾಯ್ತು ' ಹುಂ , ಹೇಳಿ ಮೇಡಂ'
'ಸಾರ್, ನಿಮಗೆ ಒಂದು ಬಹುಮಾನದ ಕೂಪನ್ ಇದೆ . ಸಂಜೆ ನಿಮ್ಮ "ಫ್ಯಾಮಿಲಿ" ಕರ್ಕೊಂಡ್ ಬಂದು ತೆಗೆದುಕೊಂಡು ಹೋಗಿ ಸಾರ್ "
ಹೆಂಡತಿ ಅಡುಗೆ ಮನೆಯಲ್ಲಿರುವುದನ್ನ ಖಚಿತಪಡಿಸಿಕೊಂಡು 'ಫ್ಯಾಮಿಲಿ ಅಂದ್ರೆ ?!'
"ಸಾರ್ ನಿಮ್ ವೈಫ್ ಸರ್ "
"ನನ್ ವೈಫು ಸಿಟ್ಕೊಂಡು ಅವರಮ್ಮನ ಮನೆಗೆ ಹೋಗಿದ್ದಾಳೆ, ಬೇರೆ ಯಾರನ್ನಾದ್ರೂ ಕರ್ಕೊಂಡ್ ಬರಬಹುದಾ ಮೇಡಂ? "
ಪಾಪ ಆ ಕಡೆ ಮಾತನಾಡುತ್ತಿದ್ದವರು ಸ್ವಲ್ಪ ಗೊಂದಲಗೊಂಡಿರಬೇಕು
'ಸಾರ್, ಬಂದ್ ಮೇಲೆ ಕರ್ಕೊಂಡ್ ಬನ್ನಿ ಪರ್ವಾಗಿಲ್ಲ "
'ಅವ್ಳು ಬರೋದಿಲ್ಲ ಕಣಮ್ಮ"
'ಹೋಗ್ಲಿ ಬಿಡಿ ಸಾರ್ !!!!!!"
'ಹೋಗ್ಲಿ ಬಿಡಿ ಅಂದ್ರೆ ಕರ್ಕೊಂಡ್ ಬರಬೇಡಿ ಅಂತಾನಾ ಅಥವಾ 'ಅವ್ಳು' ಹೋದ್ರೆ ಹೋಗ್ಲಿ ಅಂತಾನಾ?'
"........."
"ಹಲೋ"
"........."
"ಹಲೋ "
ಕುಡಿದ ಟೀ , ತಿಂದ ತಿಂಡಿ ಹೆಚ್ಚಾದ್ರೆ ಹಿಂಗೇನೆ .....cholesterolನ ಮಹಿಮೆ ...
ಇದೊಂದು ಹಳೆಯ ಸೀರೆ. ಸುಮಾರು ೨೫ ವರ್ಷ ಹಳೆಯದೇನೋ . ನನ್ನ ಮಗಳು ವೈದ್ಯೆಯಾಗಿ ಹೊರಬರುತ್ತಾಳೆ ಅನ್ನೋ ಖುಷಿಗೆ ಅಮ್ಮ (ಅದ್ಯಾರೋ ಅವರ ಗೆಳತಿ ವಿದೇಶಕ್ಕೆ ಹೋಗಿದ್ದಾಗ ತರಿಸಿ.. ಆಗೆಲ್ಲ ವಿದೇಶಿ ಸೀರೆ ಅನ್ನೋದು ಹಮ್ಮು!!!) ನನ್ನ ೨೨ ಹುಟ್ಟುಹಬ್ಬಕ್ಕೆ ಕೊಡಿಸಿದ್ದು. ಅದ್ಯಾಕೋ ಅದರ ಮೇಲಿರುವ ಬಳೆಗಳ ಚಿತ್ತಾರ ತುಂಬಾನೇ ಇಷ್ಟವಾಗಿತ್ತು. ಕೃತಿ ಹುಟ್ಟಿ ಒಂದೈದಾರು ವರ್ಷಗಳವರೆಗೂ ಆಸೆ ಪಟ್ಟು ಹಾಕಿಕೊಳ್ತಾ ಇದ್ದೆ. ಆಮೇಲೆ ಸೀರೆ ಚಿಕ್ಕದಾಗ್ತಾ (!!) ಹೋಯ್ತು  ಹಾಗೆ ಇಟ್ಟುಬಿಟ್ಟಿದ್ದೆ. ಈಗೊಂದಷ್ಟು ದಿನಗಳ ಹಿಂದೆ ಬೀರು ಜೋಡಿಸ್ತಾ ಇದ್ದೆ. ಇಬ್ರು ಹೈಕ್ಳು ಮೊಬೈಲ್ ಹಿಡ್ಕೊಂಡು ಹಾಸಿಗೆ ಮೇಲೆ ಬಿದ್ಕೊಂಡು ತಲೆ ಹರಟೆ ಮಾಡ್ತಾ ಕೂತಿದ್ವು. ಪುಟ್ಟಿ 'ಮಾ,ಈ ಸೀರೆ ನನಗೆ ಇಡು, ಇದು ನನಗೆ ಇಡು, ಆ ಡಬ್ಬ ಸೀರೆ ನಿನ್ನ ಸೊಸೆಗೆ ಕೊಟ್ಬಿಡು' ಅಂತೆಲ್ಲ ಮಗನನ್ನ ರೇಗಿಸ್ತಾ ಇದ್ಳು. ನಾನು ಇದು ಇಂತಹ ಸಮಯದಲ್ಲಿ ತಂದಿದ್ದು, ಇದು ಇಂತಹವರು ಕೊಡಿಸಿದ್ದು ಅಂತೆಲ್ಲ ಹೇಳ್ತಾ ಜೋಡಿಸ್ತಾ ಇದ್ದೆ. ಸರಿ ಈ ಸೀರೆ ನೋಡಿ ಹಿಂಗ್ಹಿಂಗೆ ಅಂತ ಹೇಳ್ತಾ ಇದ್ದೆ . ಈ ಸೀರೆ ಇಡುವಾಗ 'ಇದು ನನಗೆ ಕುಳ್ಳಿಮಾ' ಅಂದ್ಳು ಪುಟ್ಟಿ. ಮಗರಾಯನಿಗೆ ಅದ್ಯಾಕೆ ಈ ಸೀರೆ ಇಷ್ಟಾ ಆಯ್ತೋ ಗೊತ್ತಿಲ್ಲ 'ಲೇ, ಈ ಸೀರೆ ನನಗೆ ಬೇಕು' ಅಂತ ಎತ್ಕೊಂಡ. ಇಬ್ರೂ ಒಂದಷ್ಟು ಹೊತ್ತು ಕಿತ್ತಾಡಿಕೊಂಡ್ರು. ಆಮೇಲೆ ಅವ್ನು ಅದನ್ನ ಎತ್ತಿಕೊಂಡು ಹೋಗಿ ಪ್ಯಾಕ್ ಮಾಡಿ ಅವನ ಬೀರುಲಿ ಭದ್ರ ಮಾಡಿಕೊಂಡ !!
ಮೊನ್ನೆ ಮೊನ್ನೆ ಪುಟ್ಟಿ 'ಮಾ, ನನ್ನ ಮದುವೆಯಲ್ಲಿ ನಾ ಏನ್ ಕೇಳಿದ್ರು ಕಾರ್ತಿ ಕೊಡ್ತಾನೆ/ಕೊಡಿಸ್ತಾನೆ ಅಲ್ವ "? ಅಂದ್ಳು. 'ಹ್ಮ್, ಅವನಿಗೆ affordable ಆಗಿದ್ರೆ ಕೊಡಿಸ್ತಾನೆ ಮಗ, ನಿನಗಲ್ಲದೆ ಇನ್ಯಾರಿಗೆ ಕೊಡಿಸ್ತಾನೆ ಹೇಳು, ಆದರು ಅದೇನ್ ಬೇಕು ಹೇಳಿದ್ರೆ ಅಪ್ಪನೋ, ನಾನೋ ಕೊಡಿಸ್ತೀವೀ ಅಲ್ವ ? ಅವನ ಮೇಲ್ಯಾಕೆ ಕಣ್ಣು" ಅಂದೆ "ಮಾ, ನಿನ್ನ ಮಗನಿಗೇನು ಕಷ್ಟ ಕೊಡಲ್ಲ ಬಿಡು, ಆ ಸೀರೆ ಪ್ಯಾಕ್ ಮಾಡಿ ಬಚ್ಚಿಟ್ಟುಕೊಂಡಿದ್ದಾನಲ್ಲ ಅದನ್ನ ಕಿತ್ಕೋಬೇಕು ಅದ್ಕೆ!" ಅಂದ್ಲು ಮುಖ ಊದಿಸಿಕೊಂಡು..  
ಒಡವೆಗಳಿಗೆ, ಆಸ್ತಿಗೆ ಜಗಳ ಆಡೋ ಹೈಕ್ಳನ್ನ ನೋಡಿದ್ದೀನಿ.. ಉಟ್ಕೊಳ್ದೆ ಇಟ್ಟಿದ್ದ ಹಳೆ ಸೀರೆಗೆ ಈ ಮಟ್ಟಿಗೆ 'ಡೀಲ್' ಮಾಡೋ ಐಕ್ಳನ್ನ ನೋಡಿರ್ಲಿಲ್ಲ ))
ಆ ಸೀರೆ ಅವನ ಹೆಂಡ್ತಿ ಉಟ್ಕೊಳ್ತಾಳೋ ಇಲ್ವೋ, ಇಲ್ಲ ಪುಟ್ಟಿ ಉಟ್ಕೊಳ್ತಾಳೋ ಇಲ್ವೋ ಗೊತ್ತಿಲ್ಲ ....ಆದರೆ Feeling ಸುಂಸುಮ್ನೆ ಮುದ್ಮುದ್ದು ))))

ಮೊನ್ನೆ ಮೊನ್ನೆ ಮನೆಗೆ ಬಂದ ಹಿರಿಯ ಗೆಳೆಯರೊಬ್ಬರೊಡನೆ ಮಾತಾಡ್ತಾ ಇದ್ವಿ . ಮಾತಿಗೆ ಮಾತು ಬಂದು ಮಕ್ಕಳನ್ನ ಬೆಳೆಸುವ ವಿಷ್ಯಕ್ಕೆ 'ಊರ ಬಾಗಿಲು ಕಾಯ್ದು ದೊಡ್ಡ ಬೋರೇಗೌಡ ಅನಿಸಿಕೊಂಡಂತೆ' ಅಂದ್ರು ಮಂಜು .
ಅದಕ್ಕಾ ಹಿರಿಯರು 'ಸಾಂಬನ ಕಥೆ ಗೊತ್ತಲ್ಲ? ಕೃಷ್ಣನ ಮಗ ಸಾಂಬನದು?" ಅಂದ್ರು ಮತ್ತೆ ಮುಂದುವರೆಸಿದರು "ಸಾಂಬ ಜಾಂಬವತಿ-ಕೃಷ್ಣನ ಮಗ. ತನ್ನ ತಂದೆಯ ವೇಷ ಧರಿಸಿ ತಂದೆಯ ಉಪಪತ್ನಿಯರನ್ನೇ ಮೋಸಗೊಳಿಸುತ್ತಾನೆ. ಕೋಪಗೊಂಡ ಅಪ್ಪ ಮಗನಿಗೆ ಚರ್ಮವ್ಯಾದಿಯ ಶಾಪ ನೀಡುತ್ತಾನೆ . ಸಾಂಬ ಸೂರ್ಯದೇವನಿಗೆ ದೇಗುಲಗಳನ್ನ ಕಟ್ಟಿಸಿ ಶಾಪ ವಿಮುಕ್ತಿಗೊಳ್ಳುತ್ತಾನೆ.(sun temple Konarak) 
ದುರ್ಯೋಧನನ ಮಗಳನ್ನ ಅಪಹರಿಸಿ ಸಿಕ್ಕಿಬಿದ್ದು ಯಾದವರಿಗೂ-ಕೌರವರಿಗೂ ಯುದ್ಧಕ್ಕೆ ಬೀಳುವಂತಾದಾಗ ಆತನ ದೊಡ್ಡಪ್ಪ ಬಲರಾಮ ನಿಂತು ರಾಜಿ ಮಾಡಿಸುತ್ತಾನೆ.
ಕಡೆಗೆ ಒಮ್ಮೆ ದೂರ್ವಾಸರು ಹಾಗು ಇತರ ಮುನಿಗಳು ದ್ವಾರಕೆಗೆ ಕೃಷ್ಣನ ದರ್ಶನಕ್ಕೆಬಂದಾಗ ಒನಕೆಯನ್ನ ಉದರಕ್ಕೆ ಸುತ್ತಿಕೊಂಡು ಗರ್ಭಿಣಿಯಂತೆ ನಟಿಸಿ 'ತನಗೆಂತ ಮಗು ಹುಟ್ಟುವುದೆಂದು ಅವರನ್ನ ಹಾಸ್ಯ ಮಾಡುವಂತೆ ಕೇಳಿದಾಗ ಕೋಪಗೊಂಡ ಮುನಿಗಳು ನಿನಗೊಂದು ಒನಕೆ ಹುಟ್ಟಲಿ, ಅದರಿಂದಲೇ ಯದುಕುಲ ಕೊನೆಯಾಗಲಿ ಅಂತ ಶಾಪ ನೀಡುತ್ತಾರೆ. ಕಡೆಗೊಂದು ದಿನ ಮುನಿಗಳ ಶಾಪದಂತೆ ಸಾಂಬ ಒನಕೆಕೆ ಜನ್ಮ ನೀಡುತ್ತಾನೆ . ಅದನ್ನೆಲ್ಲ ಚೂರು ಚೂರು ಮಾಡಿ ಯಮುನೆಯ ತಟದಲ್ಲಿ ಎಸೆದು ಬಿಡುತ್ತಾನೆ. ಯಾದವೀ ಕಲಹ ಶುರುಗುವಷ್ಟರಲ್ಲಿ ಈ ಒನಕೆಯ ಚೂರುಗಳು ದೊಡ್ಡ ಹುಲ್ಲಿನ ಜಂಡುಗಳಾಗಿ ಬೆಳೆದು ಯಾದವರು ಅವುಗಳಿಂದಲೇ ಆಯುಧ ಮಾಡಿ ಬಡಿದಾಡಿ ಸಾಯುತ್ತಾರೆ. ಕಡೆಗೆ ಕೃಷ್ಣ ಕೂಡ ನೊಂದು ಯಮುನೆಯ ತಟದಲ್ಲಿ ಆ ಹುಲ್ಲು ಜೊಂಡಿನ ನಡುವೆ ಮಲಗಿದ್ದಾಗ ಜರ ಎಂಬ ಬೇಟೆಗಾರ ಅವನನ್ನು ಯಾವುದೋ ಪ್ರಾಣಿ ಅಲ್ಲಿ ಮಲಗಿದೆಂದು ಭ್ರಮಿಸಿ ಬಾಣಹೂಡಿಬಿಡುತ್ತಾನೆ.. ಅಲ್ಲಿಗೆ ಯದುಕುಲದ ಪರಿಸಮಾಪ್ತಿಯಾಗುತ್ತದೆ ' ಅಂದ್ರು .
ಅಮ್ಮ ಅಪ್ಪನಾಗೋದು ಅಂದ್ರೆ ಕೇವಲ ದೈಹಿಕವಾಗಲ್ಲ ಮಾನಸಿಕವಾಗಿ ದೈವಿಕವಾಗಿ ಕೂಡ ಮಕ್ಕಳನ್ನ ಬೆಳೆಸಬೇಕೇನೋ. ಒಂದಷ್ಟು ಸಮಯ, ಒಂದಷ್ಟು ಪ್ರೀತಿ, ಒಂದಷ್ಟು ಅಪ್ಪನಾಗಿ, ಅಮ್ಮನಾಗಿ ಮಕ್ಕಳೊಡನೆ ಮಾತುಕತೆ ಅಗತ್ಯವೇನೋ ಅಲ್ವೇ ...
ಹಂಚಿಕೊಳ್ಳಬೇಕು ಅನಿಸ್ತು .... 

Wednesday, 9 August 2017

ೆಯಲ್ಲಿ ಒಂದು ಪುಟ್ಟ ಹುಡುಗಿ, ಕಾರ್ತಿಗಿಂತ ಒಂದ್ಮೂರು ವರ್ಷ ದೊಡ್ಡವಳೇನೋ, ಶಾಲೆಗೆ ಹೋಗುವಾಗ ದಿನಾ ಮಾತನಾಡಿಸ್ತಾ ಇದ್ದೆ. ಒಂದೆರಡು ತಿಂಗಳುಗಳ ನಂತರ ಗಾಡಿಯಲ್ಲಿ ನಾನು ಮಂಜು ಹೋಗುವಾಗ ಆ ಹುಡುಗಿ ತನಗಿಂತ ಒಂದಾರೇಳು ವರ್ಷದ ಹುಡುಗಿ ಜೊತೆ ಆಗಾಗ ಕಾಣಿಸ್ತಾ ಇತ್ತು. ಆ ದೊಡ್ಡ ಹುಡುಗಿ ಫೋನ್ ಅಲ್ಲಿ ಯಾರ ಜೊತೆಗೆ ಮಾತಾಡ್ತಾ ಇದ್ರೆ ಇದು ಪಕ್ಕದಲ್ಲಿ ನಿಂತಿರ್ತಾ ಇತ್ತು. ಆ ದೊಡ್ಡ ಹುಡುಗಿ ತನ್ನ safetyಗಾಗಿ ಇವಳನ್ನ ಜೊತೆಗೆ ಕರ್ಕೊಂಡು ಬಂದು ಜೊತೆ ನಿಲ್ಲಿಸಿಕೊಂಡು ಗಂಟಿಗಟ್ಟಲೆ ಮಾತಾಡ್ತಾ ಇತ್ತು ಅನಿಸುತ್ತೆ (ಯಾರ ಜೊತೆ, ಏನು ಮಾತಾಡ್ತಾ ಇದ್ದಳೋ ನನಗೆ ಅಪ್ರಸ್ತುತ .. ಆದರೆ ಹೋಗ್ತಾ ಬರ್ತಾ ಇದ್ದವರು ಆಕೆಯನ್ನ ನೋಡೋ ರೀತಿ ಇಷ್ಟ ಆಗ್ತಾ ಇರ್ಲಿಲ್ಲ ). ಈ ಹುಡುಗಿ ಪಕ್ಕದಲ್ಲೇ ಸುಮ್ನೆ ನಿಂತಿರ್ತಾ ಇತ್ತು . ಒಂದೆರಡ್ಮೂರು ಬಾರಿ ನೋಡಿದ ನಂತರ ಒಂದ್ ದಿನ ಎಂದಿನಂತೆ ಮಾತನಾಡಿಸಿದ ಹುಡುಗಿಯನ್ನ 'ಪುಟ್ಟ, ನಿನ್ನ ಅಲ್ಲಿ ನೋಡ್ದೆ , ಯಾಕ್ ಅಲ್ಲಿ ಇಲ್ಲಿ ನಿಂತ್ಕೊಳ್ತೀಯಪ್ಪ? ಅಪ್ಪ ಅಮ್ಮ ನೋಡಿದ್ರೆ ಬೇಜಾರ್ ಮಾಡ್ಕೊಳ್ತಾರೆ. ನಿನ್ ಫ್ರೆಂಡ್ಸ್ ಜೊತೇನೆ ಹೋಗು, ದೊಡ್ಡೋರ ಜೊತೆ ಯಾಕಪ್ಪ 'ಅಂದೆ . ಮನೆಯ ಹೊರಗೆ ಕಾಂಪೌಂಡ್ ಅಲ್ಲೇ ಇದ್ದ ಅವರಮ್ಮ "ಏನ್ ಸುನೀತಾ "ಅಂದ್ರು . 'ಏನಿಲ್ಲ ಟೆಸ್ಟ್ ಆಯ್ತಾ ಅಂತ ಕೇಳ್ತಾ ಇದ್ದೆ ಅಷ್ಟೇ' ಅಂದೆ.
ಅದೇ ಕೊನೆ ನಾ ಆ ಮಗುವನ್ನ ರಸ್ತೆ ಬದಿಯಲ್ಲಿ ನೋಡಿದ್ದು. ಮನೆಯ ಮುಂದೆ ತನ್ನ ಸಮಾನ ವಯಸ್ಸಿನ ಮಕ್ಕಳ ಜೊತೆ ಆಡ್ಕೊಂಡು, ಚೆಂದ ಅಂಕಗಳನ್ನ ತೆಗೆದು ಇಂಜಿನಿಯರಿಂಗ್ ಮುಗಿಸಿದ್ಳು. ಅಲ್ಲೆಲ್ಲೋ ಒಂದು ಕಡೆ ಕೆಲ್ಸಕ್ಕೆ ಕೂಡ ಹೋದ್ಳು . ಮೊನ್ನೆಮೊನ್ನೆ ಅವರಮ್ಮ 'ಮಗಳಿಗೆ ಮದ್ವೆ ಫಿಕ್ಸ್ ಆಯ್ತು ಸುನೀತಾ ' ಅಂತ ಸಂತಸ ಹಂಚಿಕೊಂಡ್ರು . ಪುಟ್ಟ ಹುಡುಗಿ ಈಗಿನ್ನು ಕಣ್ಣ ತುಂಬಿ ನಿಂತು 'ಇನ್ ಮೇಲೆ ಹೋಗೋಲ್ಲ ಆಂಟಿ' ಅಂದ ನೆನಪು . ಆಗಲೇ ಅದಕ್ಕೆ ಮದುವೆ  ಮತ್ತೊಂದು ನಾಲ್ಕುವರ್ಷಕ್ಕೆ ಅದರ ಮಗು ನನ್ನ 'ಅಜ್ಜಿ ' ಅನ್ನುವುದೇನೋ
ಮನಸ್ಸು ನೀಲಿನೀಲಿ ))
ಬದುಕು ತುಂಬಾ ಸುಂದರ, ನಾವು ಆರಿಸಿಕೊಳ್ಳುವ ಹಾಗೆ ....
ನೆನ್ನೆ ಹೂ ತರಲು ನಮ್ಮ ಕೆ ಆರ್ ಮಾರುಕಟ್ಟೆಗೆ ಹೋಗಿದ್ವಿ . ಹೂವಿನ ಬೆಲೆ ಸ್ವಲ್ಪ ಜಾಸ್ತಿನೇ ಇತ್ತು. ಮಂಜುಗೆ ಹೇಳ್ದೆ ' ಈಗ್ಲೇ ಹಿಂಗಾದ್ರೆ ಇನ್ನ ಹಬ್ಬಕ್ಕೆ ಅಂತೂ ಕೇಳೋದೇ ಬೇಡವೇನೋ ಅನ್ನೋ ಅಷ್ಟು ಜಾಸ್ತಿ ಆಗುತ್ತೆ ಅಲ್ವ ಮಂಜು' . 'ಒಂದು ಬ್ಯಾಗ್ ಹೋಲಿಸಿ ಕೊಡ್ತೀನಿ ಬಿಡವ್ವಾ ' ಅಂದ್ರು.... ರೇಗಿಹೋಯ್ತು ! 
ನಮ್ಮ ರಸ್ತೆಗೆ ಬೆಳಿಗ್ಗೆಬೆಳಿಗ್ಗೆ ಒಬ್ರು "ಲೇಡಿ' ವಾಕಿಂಗ್ಗೆ ಬರ್ತಾರೆ . ಹೆಗಲಿಗೆ ಒಂದು ಚೀಲ ತಗುಲಿಸಿಕೊಂಡು ಹೋಗ್ತಾರೆ. ಯಾರೂ ಇಲ್ಲದೆ ಇದ್ರೆ ಯಾರ ಮನೆಯ ಮುಂದೆ ಹೂ ಇದೆಯೋ ಅಲ್ಲಿಂದ "ಕೇವಲ" ಒಂದೋ ಎರಡೋ ಕಿತ್ಕೊಂಡು ಟಕ್ ಅಂತ ಚೀಲಕ್ಕೆ ಹಾಕಿ ಏನೂ ನಡೆದೇ ಇಲ್ಲವೇನೋ ಎನ್ನುವಂತೆ ವಾಕಿಂಗ್ ಮುಂದುವರೆಸುತ್ತಾರೆ . ಅದೆಷ್ಟು ಚೆಂದದ reflex action ಅಂತೀರಾ ... ಮೂರು ಬೀದಿಯ ವಾಕಿಂಗ್ ಮುಗಿಸೋ ಹೊತ್ತಿಗೆ ಆವತ್ತಿನ ಪೂಜೆಗೊ, ಷೋಗೆ ಇಡೋದಕ್ಕೋ ಹೂವಿನ ವ್ಯವಸ್ಥೆ ಆಗಿಹೋಗಿರುತ್ತೆ . ಬ್ಯಾಗ್ ತಂದ ಕಾರಣ ಹಾಲು ತೆಗೆದುಕೊಳ್ಳಲು ಅನಿಸೋ ಹಾಗೆ ಕಡೆಗೆ ಬ್ಯಾಗಲ್ಲಿ ಮೂಲೆಯ ಡೈರಿಯಿಂದ ಹಾಲು ಸೇರುತ್ತದೆ! ಮತ್ತೆ ಮೂರು ರಸ್ತೆಗಳ ಆಚೆಯ ಆಕೆಯ ಅಪಾರ್ಟ್ಮೆಂಟ್ ಸೇರಿಕೊಳ್ಳುತ್ತಾರೆ . (ನಾ ಲೇಡಿ ಅಂದಿದ್ದು ಯಾಕೆ ಅಂತ ಗೊತ್ತಾಯ್ತಲ್ವಾ !!) ಮಂಜುನಾಥ ಪ್ರಭುಗಳು ಆ ಸಮಯದಲ್ಲಿ ಡ್ಯೂಟಿಗೆ ಹೋಗುವ ಮೊದಲು ಕಾರು ಒರೆಸಿ ಹೂ ಹಾಕ್ತಾ ಇರ್ತಾರೆ... ಆಕೆಗೆ ಕಾರಿನ ಮರೆಯಲ್ಲಿರೋರು ಕಾಣೋದಿಲ್ಲ ! ಒಮ್ಮೆ ಹಾಗೇ ಕೀಳುವಾಗ ಇವರಿದ್ದಿದ್ದನ್ನ ನೋಡಿ ಮುಜುಗರಗೊಂಡು 'ಯಾವ ಹೂವು ಅಂತ ನೋಡಿದೆ ಅಷ್ಟೇ ಸಾರ್' ಅನ್ದರಂತೆ ! ನನ್ನ ಪತಿದೇವರು ಸುಮ್ನೆ ಹಲ್ಲು ಬಿಟ್ಟರಂತೆ !! (ಇನ್ನೇನು ಮಾಡೋಕೆ ಆಗುತ್ತೆ ! ಹೆಣ್ಣು ಮಕ್ಕಳನ್ನ ಬೈಯೋಕೆ ಆಗುತ್ತಾ ಅಂತಾರೆ!!! ಅಲ್ವ ಮತ್ತೆ!!) ...
ನನಗೆ ರೇಗಿದ್ದು ಯಾಕೆ ಅಂತ ಗೊತ್ತಾಯ್ತಲ್ವಾ ))))).
ಅಜ್ಜಿ ಮೊಮ್ಮಗನಿಗೆ :"ಮಗ ಹೋಗಿ ತನಿ ಎರೆದು ಬರೋದಲ್ವಾ ... ಒಳ್ಳೆಯದಾಗುತ್ತೆ "
ಮೊಮ್ಮಗ : "ಕೊಡಮ್ಮ ಹೋಗ್ ಬರ್ತೀನಿ "
ಅಮ್ಮ ಬಾಳೆಹಣ್ಣು,ಹಾಲು, ಕರ್ಪೂರ ಕೊಟ್ಲು 'ನಾ ಆಮೇಲೆ ಹೋಗಿ ಬರ್ತೀನಿ ,ನೀ ಹಾಲು ಕೊಟ್ಟು ಕರ್ಪೂರ ಹಚ್ಚಿ ಬಾ ಸಾಕು'
ಮೊಮ್ಮಗ ಹೋದ. ಒಂದ್ಹತ್ತು ನಿಮಿಷ ಬಿಟ್ಟು ಬಂದ .. 
ಅಜ್ಜಿ 'ಎರೆದ ಮಗ' 
ಮೊಮ್ಮಗ "ಹ್ಮ್ಮ್ ಅಜ್ಜಿ ' ಅಂದ
ಅಮ್ಮ ಅಡುಗೆ ಮನೆಯಲ್ಲಿ ಚಪಾತಿ ಲಟ್ಟಿಸ್ತಾ ಇದ್ಳು . 'ತಿಂಡಿ ರೆಡಿನಾ ಅಮ್ಮಾ ' ಅಂತ ಜೋರಾಗಿ ಕೇಳಿ, ಒಳಗೆ ಬಂದು 'ಬಾಳೆಹಣ್ಣು ಹಸುಗೆ ಕೊಟ್ಟೆ , ನಾಯಿಗೆ ಹಾಲು ಹಾಕಿದ್ದೀನಿ , ಕರ್ಪೂರ ಹಚ್ಚಿ ಬಂದಿದ್ದೀನಿ , ನಿಮ್ಮತ್ತೆ ಮುಂದೆ ಭಜನೆ ಶುರು ಮಾಡಬೇಡ ಆಯ್ತಾ , ನೀ ಹೆಂಗು ಮತ್ತೆ ಅಭಿಷೇಕಕ್ಕೆ ಅಂತ ಹಾಲು ಕೊಡ್ತೀಯಲ್ಲ " ಅಂದ ತಲೆ ಸವರುತ್ತಾ ...
ಅಪ್ಪನದೇ ಡ್ರಾಮ ಕಂಪನಿ ಅಲ್ವೇ  ಡೈಲಾಗ್ ಹೆಂಗೆ ಬದಲಾಗುತ್ತೆ ?? ಅದ್ ಹೆಂಗೆ ಬ್ಯಾಲನ್ಸ ಮಾಡೋದು ಅಂತ ಅರಿತವ )))
ಈಗಷ್ಟೇ ಎಲೆಕ್ಟ್ರಿಕ್ ಬಿಲ್ ಬಂತು. ರಸೀದಿ ಹಾಕ್ತಾ ಇದ್ದವ್ರು ಪಕ್ಕದ ಮನೆಯಾಕೆಗೆ 'ಬಿಲ್ ಕಟ್ಟಿಲ್ಲ ಅಂತ ತೋರಿಸ್ತಾ ಇದೆ. ೧೫ರ ಒಳಗೆ ಕಟ್ಬಿಡಿ .ಇಲ್ಲ ಅಂದ್ರೆ ಕರೆಂಟ್ ಡಿಸ್ಕನೆಕ್ಟ್ ಮಾಡ್ತಾರೆ ' ಅಂತ ಹೇಳಿ ಹೋದ್ರು. ಒಂದು ಕ್ಷಣ ಮನಸ್ಸು ವಿಷಾದದ ಕಡಲಾಗಿಹೋಯ್ತು..ಮಂಜು ಅಪಘಾತಕ್ಕೆ ಸಿಲುಕಿ ಪೆಟ್ಟು ಮಾಡಿಕೊಂಡಾಗ ಎದುರಿಸಿದ ಬದುಕಿನ ಪುಟಗಳೆಲ್ಲಾ ತೆರೆದುಕೊಂಡಂತೆ ...
ಸುಮಾರು ೨೦೦೦ ಇಸವಿಯಲ್ಲಿ ಆಗಸ್ಟ್ ತಿಂಗಳ ಒಂದು ದಿನ ಮಂಜು ಏಟು ಮಾಡಿಕೊಂಡಾಗ ನನ್ನ ಚಿಕ್ಕ ಕೂಸಿಗೆ ಬರೀ ೪ ತಿಂಗಳು! ಅಮ್ಮ ತಮ್ಮ,ನಾದಿನಿ, ತಮ್ಮಂದಿರಂತಹ ಕಸಿನ್ಸ್ ಇಲ್ಲದೆ ಇದ್ದಿದ್ದರೆ ಬಹುಶಃ ಅದೇನ್ ಆಗಿಹೋಗ್ತಾ ಇದ್ನೋ ಗೊತ್ತಿಲ್ಲ ! ಬದುಕಿನ ಪಾಠ ಕಲಿತ ದಿನಗಳವು. ಮೈಸೂರ೦ತ ಮೈಸೂರಲ್ಲಿ ಮಂಜು ಕಾಲು ಸರಿ ಹೋಗದೆ ಇದ್ದಾಗ ಬೆಂಗಳೂರಿನ ಆಸ್ಪತ್ರೆಗೆ ಓಡಾಡಿ ಒಂದಷ್ಟು ಸರಿ ಹೋದಾಗ ಗೆದ್ದು ಬಂದಂತೆ. ಹಬ್ಬ ಅಂದರೆ ಸಂಭ್ರಮಿಸುತ್ತಿದ್ದ ನನಗೆ ದಿನಗಳೇ ಮರೆತು ಹೋಗಿತ್ತೇನೋ! ದೀಪಾವಳಿಯ ಹಿಂದಿನ ಬೆಳಿಗ್ಗೆ ಮೈದುನನನ್ನ ಮಂಜು ಜೊತೆ ಬಿಟ್ಟು, ಮಂಜುವನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಲು ದುಡ್ಡು ತರಲು ತಮ್ಮನೊಡನೆ ಮೈಸೂರಿಗೆ ಬಂದಾಗ, ಸಮಯಕ್ಕೆ ಸರಿಯಾಗಿ ಹೇಳಿದವರು ಹಣ ನೀಡದಿದ್ದಾಗ ಅಮ್ಮ ಅವಳ ಸರವನ್ನೇ ಅಡವಿಟ್ಟು ನೀ ತಗೊಂಡು ಹೋಗು ಮಗ , ನಾ ಬಿಡಿಸಿಕೊಳ್ತೀನಿ ' ಅಂತ ಹಣ ನೀಡಿದ್ಳು ! ಸಂಜೆ ಹೊರಡುವಷ್ಟರಲ್ಲಿ ಮೈದುನ 'ಬಾಬ್, ನನ್ನ ಹೆಂಡ್ತಿ ಸಿಟ್ಕೊಂಡಿದ್ದಾಳೆ , ಹಬ್ಬ ಇನ್ನೂ ಮನೆಗೆ ಬರಲಿಲ್ವಲ್ಲಾ ಅಂತ ನೀವು ಇನ್ನು ಹೊರಟಿಲ್ವಾ ' ಅಂದಾಗ ಸಿಸ್ಟರ್ಗೆ ಫೋನ್ ಮಾಡಿ 'ನಾ ಬರೋವರೆಗೂ ಮಂಜುನ ನೋಡಿಕೊಳ್ಳಿ ಪ್ಲೀಸ್ 'ಅಂದಾಗ ಅದ್ಯಾವ ಜನ್ಮದ ಅಕ್ಕತಂಗಿಯರೋ ಎಂಬಂತೆ ನೋಡಿಕೊಂಡಿದ್ದರು. ಅಮ್ಮನ ಮನೆಯಲ್ಲಿದ್ದ ನನ್ನನ್ನ ನೋಡಿದ ಮತ್ತೊಬ್ಬ ಮೈದುನ 'ಇದ್ಯಾಕ್ ಅತ್ಗೆ ಇಲ್ಲಿದ್ದೀರಾ, ಮನೆಗೆ ಹೋಗಿ ದೀಪ ಹಚ್ಚೋದಲ್ವಾ' ಅಂದಾಗ ಸುಮ್ನೆ ನಕ್ಕುಬಿಟ್ಟಿದ್ದೆ ಕಣ್ಣಲಿ ಹನಿ ತುಂಬಿ! ಒಂದಷ್ಟು ಕಾಲು ಸರಿಯಾಗಿ ಬಂದ ಮಗನನ್ನ ನೋಡಿದ ಅತ್ತೆ 'ಮೊದ್ಲೇ ಕರ್ಕೊಂಡ್ ಹೋಗಿದ್ರೆ ನನ್ ಮಗ ಇಷ್ಟ್ ನೋವೇ ತಿಂತಾ ಇರ್ಲಿಲ್ಲ ' ಅಂದಾಗ ಅದ್ಯಾಕೋ ಸಂಕಟ ಒತ್ತರಿಸಿತ್ತು.. ವಾಪಸ್ಸು ಬಂದು ಅಮ್ಮನ ಮನೆಯಲ್ಲಿ ಒಂದಷ್ಟು ಸುಧಾರಿಸಿಕೊಂಡು ಮತ್ತೆ ನಮ್ಮದೇ ಮನೆಗೆ ಬಂದಾಗ ಹೀಗೆ sameee ಮೇಲೆ ಹೇಳಿದಂತೆ ''ಬಿಲ್ ಕಟ್ಟಿಲ್ಲ ಅಂತ ತೋರಿಸ್ತಾ ಇದೆ. ೧೫ರ ಒಳಗೆ ಕಟ್ಬಿಡಿ .ಇಲ್ಲ ಅಂದ್ರೆ ಕರೆಂಟ್ ಡಿಸ್ಕನೆಕ್ಟ್ ಮಾಡ್ತಾರೆ ' ಅಂದಿದ್ರು ವಿದ್ಯುತ್ ಇಲಾಖೆಯವರು !!
ಅಮೇಲಿನದೆಲ್ಲ ಛಲಕ್ಕೆ ಬಿದ್ದಂತ ಬದುಕು! ಪುಟ್ಟ ಕಾರ್ತಿ, ಕೃತಿ, ಮಂಜು, ನಾನು ..... ಇಲ್ಲಿಯ ತನಕ ಹೀಗೆ ನಗಲು ತೆಗೆದುಕೊಂಡ ಹಠ ಅಹ್ ....
ಬದುಕು ಸುಂದರ. ಅದೆಷ್ಟೇ ಕಷ್ಟ ಬಂದರೂ ಗೆಲ್ಲಬಹುದು .. ಒಂದು ಜೊತೆ, ಒಂದಷ್ಟು ಹಠ ಸಾಕೇನೋ .. ಜೊತೆಗೆ ಯಾವುದೋ ಒಂದು ಶಕ್ತಿ ..ಬೀಳದಂತೆ ತಡೆ ಹಿಡಿವ ಶಕ್ತಿ, ಇನ್ಯಾರ ಮೂಲಕವೋ ನಮ್ಮನ್ನ ಗೆಲ್ಲಿಸುವ ಶಕ್ತಿ ಇದೆಯೇನೋ ...
ಬೆಳಗಾಗ ನಾ ಎದ್ದು ಯಾರ್ಯಾರ ನೆನೆಯಲಿ ಎಂದಾಗ ,ನಾ ನೆನೆಯಲು, ನೆನೆದು ಅಭಾರಿಯಾಗಿರಲು, ಆಭಾರಿಯಾಗಿ ಹಾರೈಸಲು ಅದೆಷ್ಟು ಜನರಿದ್ದಾರೆ ನನಗೆ : ಅಂತಹವರ ಸಂತತಿ ಹೊಳೆದಂಡೆಯ ಗರಿಕೆ ಹಂಗೆ ಬೆಳೆಯಲಿ ))))
ಬರೆಯಲು ಒಂದು ನೆಪ ಅಷ್ಟೇ ಅಂದ್ರಾ 
ರಾತ್ರಿ ಅಷ್ಹೊತ್ತಲ್ಲಿ ಪುಟ್ಟಿ ಎಬ್ಬಿಸಿದ್ಳು 'ಮಾ, ಬಾ ಗ್ರಹಣ ನೋಡೋಣ' ಅಂತ . ಅದಕ್ಕೆ ನಿರಾಸೆ ಯಾಕೆ ಅಂತ ಮಾಳಿಗೆಯ ಮೇಲೆ ಹೋದ್ವಿ.ಮೋಡ ಕವಿದಿತ್ತು. ಮೋಡಗಳ ನಡುವೆಯೇ ಒಂದಷ್ಟು ನೋಡಿ ಮತ್ತೆ ಬಂದು ಮಲಗಿದ್ವಿ...
ಸಣ್ಣವರಿದ್ದಾಗ ಈ ಗ್ರಹಣಗಳು ಸಂಭವಿಸಿದರೆ ಅಮ್ಮ ರಾತ್ರಿ ಏನನ್ನು ಉಳಿಸ್ತಾ ಇರಲಿಲ್ಲ. ಅಪ್ಪಿತಪ್ಪಿ ಉಳಿದರೆ ನಾಯಿಗೆ ಹಾಕಿಬಿಡ್ತಾ ಇದ್ಲು. ನೀರಿಗೆ, ತುಪ್ಪಕ್ಕೆ ಒಂಚೂರು ದರ್ಭೆ ತಂದು ಹಾಕ್ತಾ ಇದ್ಳು . ಬೆಳಿಗ್ಗೆ ನೀರು ಬಂದ್ರೆ ಇರೋಬರೋ ನೀರನ್ನೆಲ್ಲಾ ಬಾಗಿಲಿಗೋ ಗಿಡಕ್ಕೋ ಹಾಕಿ ಹೊಸ ನೀರು ತುಂಬುತ್ತಾ ಇದ್ಲು. ನಾವು ಒಂದಷ್ಟು ರೇಗಿಸ್ತಾ ಇದ್ವಿ , ಆ ನಲ್ಲಿಯವ್ನೂ ರಾತ್ರಿ ದರ್ಭೆ ಹಾಕಿದ್ನಾ ಅಂತಾ. ಆಸ್ಪತ್ರೆಯ ಔಷಧಿಗೆ ಏನಾಗೋದಿಲ್ವ ಅಂತ ರೇಗಿಸ್ತಾ ಇದ್ವಿ.
ಮದ್ವೆ ಆದ ಮೇಲೆ ಕಾರ್ತಿ ಇನ್ನು ಬಸುರಲ್ಲಿದ್ದಾಗ ಬಂದ ಸೂರ್ಯ ಗ್ರಹಣದ ದಿನ ಅತ್ತೆ , ಮಂಜು ನನ್ನ ರೂಮಿನ ಕಿಟಕಿಗೆಲ್ಲ ದಪ್ಪದಪ್ಪ ಕಂಬಳಿಗಳನ್ನ ಕಟ್ಟಿ ನಾ ಹೊರಗೇ ಬಾರದ ಹಾಗೆ ಕಾವಲಿದ್ರು ! ಆಮೇಲೆ ತಲೆಗೆ ನೀರೆರೆಸಿ ತುಪ್ಪದ ದೀಪ ಹಚ್ಚಿಸಿದ್ರು!! (ಅಮ್ಮನ್ನ ರೇಗಿಸಿದ ಹಾಗೆ, ಅಮ್ಮನಿಗೆ ಉಲ್ಟಾ ಹೊಡೆಯೋ ಹಾಗೆ ಅತ್ತೆಗೆ ಉಲ್ಟಾ ಹೊಡೆಯಲಾಗುತ್ತದೆಯೇ?!)
ಬೆಳಿಗ್ಗೆಬೆಳಿಗ್ಗೆ ಪುಟ್ಟಿಗೆ ಅವರಜ್ಜಿ 'ತಲೆ ಸ್ನಾನ ಮಾಡು ಮಗ' ಅಂದ್ರು . 'ಸರಿ ಅಜ್ಜಿ' ಅಂದ್ಳು . ಅಡುಗೆ ಮನೆಗೆ ಬಂದು 'ಲೇ ಕುಳ್ಳಿಮಾ, ತಲೆ ಸ್ನಾನ ಮಾಡಿದ್ರೆ ಕಾಲೇಜ್ಗೆ ಹೋಗೋ ತನಕ ಕೂದ್ಲು ಒಣಗಲ್ಲ, ನಾ ತಲೆ ಸ್ನಾನ ಮಾಡಲ್ಲ, ಮೈ ತೊಳೆದು ಬರ್ತೀನಿ ನಿಮ್ಮತ್ತೆ ಕೇಳದ ಹಾಗೆ ನೋಡ್ಕೋ' ಅಂದ್ಳು . ಸರಿ, ನೀ ರೆಡಿ ಆಗು ಅಂದೆ. ತಯಾರಾಗಿ ಬಂದು ದೇವ್ರಿಗೆ ಕೈಮುಗಿದು ತಿಂಡಿ ತಿಂದ್ಳು. ಕಾಲೇಜ್ಗೆ ಬಿಟ್ಟು ಬಂದೆ . 'ಮಕ್ಕಳನ್ನ ನೀನೆ ಹಾಳ್ ಮಾಡ್ತೀಯ' ಅಂದ್ರು ಅತ್ತೆ. ಸುಮ್ನೆ ನಕ್ಕೆ. ನಾ ಹೋಗಿ ಎಂದಿನಂತೆ ದೀಪ ಹಚ್ಚಿದೆ...
ವಿಜ್ಞಾನಕ್ಕೂ ಸಂಪ್ರದಾಯಕ್ಕೂ ಬಹಳ ಹಿಂದಿನಿಂದಲೂ ಒಂದು ಯುದ್ಧ ನಡೆಯುತ್ತಲೇ ಬಂದಿದೆ . ಸಂಪ್ರದಾಯದ ಹೆಸರಲ್ಲಿ ಹೇರಿಕೆಯಾಗುವ ಯಾವುದೇ ಆದರೂ ಮನೆಯಲ್ಲಿ ನೆಮ್ಮದಿ ಕೆಡುವಂತದ್ದು.. ವಿಜ್ಞಾನದ ಹೆಸರಲ್ಲಿ ಸಂಪ್ರದಾಯವನ್ನ ಸೋಲಿಸಿದೆ , ಸಂಪ್ರದಾಯದ ಹೆಸರಲ್ಲಿ ವಿಜ್ಞಾನವನ್ನ ಸೋಲಿಸಿದೆ ಎನ್ನುವುದು ಸುಳ್ಳು. ವಿಜ್ಞಾನದ "ಉಪಯುಕ್ತತೆ"ಯನ್ನ, ಸಂಪ್ರದಾಯದ "ಯುಕ್ತತೆ"ಯನ್ನ ಅಳವಡಿಸಿಕೊಳ್ಳುತ್ತಾ ನಡೆದರೆ ಚೆಂದವೇನೋ! ಅವರವರ ಭಾವಭಕುತಿ! ಖುಷ್ಖುಷಿಯಿಂದ ಏನೇ ಮಾಡಿದರೂ ಚೆಂದ..."ಗ್ರಹಣ ಬಿಡ್ತಾ" ಅನ್ನೋದು ಬರೀ ಪ್ರಾಕೃತಿಕವಾಗಲ್ಲ ಮಾನಸಿಕವಾಗಿಯೂ ಆದಾಗ ಚೆಂದವೇನೋ..
ಸುಂಸುಮ್ನೆ ಬರಿಬೇಕು ಅನ್ನಿಸಿತು 

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...