Thursday, 9 November 2017

ಇದೊಂದು ಹಳೆಯ ಸೀರೆ. ಸುಮಾರು ೨೫ ವರ್ಷ ಹಳೆಯದೇನೋ . ನನ್ನ ಮಗಳು ವೈದ್ಯೆಯಾಗಿ ಹೊರಬರುತ್ತಾಳೆ ಅನ್ನೋ ಖುಷಿಗೆ ಅಮ್ಮ (ಅದ್ಯಾರೋ ಅವರ ಗೆಳತಿ ವಿದೇಶಕ್ಕೆ ಹೋಗಿದ್ದಾಗ ತರಿಸಿ.. ಆಗೆಲ್ಲ ವಿದೇಶಿ ಸೀರೆ ಅನ್ನೋದು ಹಮ್ಮು!!!) ನನ್ನ ೨೨ ಹುಟ್ಟುಹಬ್ಬಕ್ಕೆ ಕೊಡಿಸಿದ್ದು. ಅದ್ಯಾಕೋ ಅದರ ಮೇಲಿರುವ ಬಳೆಗಳ ಚಿತ್ತಾರ ತುಂಬಾನೇ ಇಷ್ಟವಾಗಿತ್ತು. ಕೃತಿ ಹುಟ್ಟಿ ಒಂದೈದಾರು ವರ್ಷಗಳವರೆಗೂ ಆಸೆ ಪಟ್ಟು ಹಾಕಿಕೊಳ್ತಾ ಇದ್ದೆ. ಆಮೇಲೆ ಸೀರೆ ಚಿಕ್ಕದಾಗ್ತಾ (!!) ಹೋಯ್ತು  ಹಾಗೆ ಇಟ್ಟುಬಿಟ್ಟಿದ್ದೆ. ಈಗೊಂದಷ್ಟು ದಿನಗಳ ಹಿಂದೆ ಬೀರು ಜೋಡಿಸ್ತಾ ಇದ್ದೆ. ಇಬ್ರು ಹೈಕ್ಳು ಮೊಬೈಲ್ ಹಿಡ್ಕೊಂಡು ಹಾಸಿಗೆ ಮೇಲೆ ಬಿದ್ಕೊಂಡು ತಲೆ ಹರಟೆ ಮಾಡ್ತಾ ಕೂತಿದ್ವು. ಪುಟ್ಟಿ 'ಮಾ,ಈ ಸೀರೆ ನನಗೆ ಇಡು, ಇದು ನನಗೆ ಇಡು, ಆ ಡಬ್ಬ ಸೀರೆ ನಿನ್ನ ಸೊಸೆಗೆ ಕೊಟ್ಬಿಡು' ಅಂತೆಲ್ಲ ಮಗನನ್ನ ರೇಗಿಸ್ತಾ ಇದ್ಳು. ನಾನು ಇದು ಇಂತಹ ಸಮಯದಲ್ಲಿ ತಂದಿದ್ದು, ಇದು ಇಂತಹವರು ಕೊಡಿಸಿದ್ದು ಅಂತೆಲ್ಲ ಹೇಳ್ತಾ ಜೋಡಿಸ್ತಾ ಇದ್ದೆ. ಸರಿ ಈ ಸೀರೆ ನೋಡಿ ಹಿಂಗ್ಹಿಂಗೆ ಅಂತ ಹೇಳ್ತಾ ಇದ್ದೆ . ಈ ಸೀರೆ ಇಡುವಾಗ 'ಇದು ನನಗೆ ಕುಳ್ಳಿಮಾ' ಅಂದ್ಳು ಪುಟ್ಟಿ. ಮಗರಾಯನಿಗೆ ಅದ್ಯಾಕೆ ಈ ಸೀರೆ ಇಷ್ಟಾ ಆಯ್ತೋ ಗೊತ್ತಿಲ್ಲ 'ಲೇ, ಈ ಸೀರೆ ನನಗೆ ಬೇಕು' ಅಂತ ಎತ್ಕೊಂಡ. ಇಬ್ರೂ ಒಂದಷ್ಟು ಹೊತ್ತು ಕಿತ್ತಾಡಿಕೊಂಡ್ರು. ಆಮೇಲೆ ಅವ್ನು ಅದನ್ನ ಎತ್ತಿಕೊಂಡು ಹೋಗಿ ಪ್ಯಾಕ್ ಮಾಡಿ ಅವನ ಬೀರುಲಿ ಭದ್ರ ಮಾಡಿಕೊಂಡ !!
ಮೊನ್ನೆ ಮೊನ್ನೆ ಪುಟ್ಟಿ 'ಮಾ, ನನ್ನ ಮದುವೆಯಲ್ಲಿ ನಾ ಏನ್ ಕೇಳಿದ್ರು ಕಾರ್ತಿ ಕೊಡ್ತಾನೆ/ಕೊಡಿಸ್ತಾನೆ ಅಲ್ವ "? ಅಂದ್ಳು. 'ಹ್ಮ್, ಅವನಿಗೆ affordable ಆಗಿದ್ರೆ ಕೊಡಿಸ್ತಾನೆ ಮಗ, ನಿನಗಲ್ಲದೆ ಇನ್ಯಾರಿಗೆ ಕೊಡಿಸ್ತಾನೆ ಹೇಳು, ಆದರು ಅದೇನ್ ಬೇಕು ಹೇಳಿದ್ರೆ ಅಪ್ಪನೋ, ನಾನೋ ಕೊಡಿಸ್ತೀವೀ ಅಲ್ವ ? ಅವನ ಮೇಲ್ಯಾಕೆ ಕಣ್ಣು" ಅಂದೆ "ಮಾ, ನಿನ್ನ ಮಗನಿಗೇನು ಕಷ್ಟ ಕೊಡಲ್ಲ ಬಿಡು, ಆ ಸೀರೆ ಪ್ಯಾಕ್ ಮಾಡಿ ಬಚ್ಚಿಟ್ಟುಕೊಂಡಿದ್ದಾನಲ್ಲ ಅದನ್ನ ಕಿತ್ಕೋಬೇಕು ಅದ್ಕೆ!" ಅಂದ್ಲು ಮುಖ ಊದಿಸಿಕೊಂಡು..  
ಒಡವೆಗಳಿಗೆ, ಆಸ್ತಿಗೆ ಜಗಳ ಆಡೋ ಹೈಕ್ಳನ್ನ ನೋಡಿದ್ದೀನಿ.. ಉಟ್ಕೊಳ್ದೆ ಇಟ್ಟಿದ್ದ ಹಳೆ ಸೀರೆಗೆ ಈ ಮಟ್ಟಿಗೆ 'ಡೀಲ್' ಮಾಡೋ ಐಕ್ಳನ್ನ ನೋಡಿರ್ಲಿಲ್ಲ ))
ಆ ಸೀರೆ ಅವನ ಹೆಂಡ್ತಿ ಉಟ್ಕೊಳ್ತಾಳೋ ಇಲ್ವೋ, ಇಲ್ಲ ಪುಟ್ಟಿ ಉಟ್ಕೊಳ್ತಾಳೋ ಇಲ್ವೋ ಗೊತ್ತಿಲ್ಲ ....ಆದರೆ Feeling ಸುಂಸುಮ್ನೆ ಮುದ್ಮುದ್ದು ))))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...