Wednesday, 9 August 2017

ರಾತ್ರಿ ಅಷ್ಹೊತ್ತಲ್ಲಿ ಪುಟ್ಟಿ ಎಬ್ಬಿಸಿದ್ಳು 'ಮಾ, ಬಾ ಗ್ರಹಣ ನೋಡೋಣ' ಅಂತ . ಅದಕ್ಕೆ ನಿರಾಸೆ ಯಾಕೆ ಅಂತ ಮಾಳಿಗೆಯ ಮೇಲೆ ಹೋದ್ವಿ.ಮೋಡ ಕವಿದಿತ್ತು. ಮೋಡಗಳ ನಡುವೆಯೇ ಒಂದಷ್ಟು ನೋಡಿ ಮತ್ತೆ ಬಂದು ಮಲಗಿದ್ವಿ...
ಸಣ್ಣವರಿದ್ದಾಗ ಈ ಗ್ರಹಣಗಳು ಸಂಭವಿಸಿದರೆ ಅಮ್ಮ ರಾತ್ರಿ ಏನನ್ನು ಉಳಿಸ್ತಾ ಇರಲಿಲ್ಲ. ಅಪ್ಪಿತಪ್ಪಿ ಉಳಿದರೆ ನಾಯಿಗೆ ಹಾಕಿಬಿಡ್ತಾ ಇದ್ಲು. ನೀರಿಗೆ, ತುಪ್ಪಕ್ಕೆ ಒಂಚೂರು ದರ್ಭೆ ತಂದು ಹಾಕ್ತಾ ಇದ್ಳು . ಬೆಳಿಗ್ಗೆ ನೀರು ಬಂದ್ರೆ ಇರೋಬರೋ ನೀರನ್ನೆಲ್ಲಾ ಬಾಗಿಲಿಗೋ ಗಿಡಕ್ಕೋ ಹಾಕಿ ಹೊಸ ನೀರು ತುಂಬುತ್ತಾ ಇದ್ಲು. ನಾವು ಒಂದಷ್ಟು ರೇಗಿಸ್ತಾ ಇದ್ವಿ , ಆ ನಲ್ಲಿಯವ್ನೂ ರಾತ್ರಿ ದರ್ಭೆ ಹಾಕಿದ್ನಾ ಅಂತಾ. ಆಸ್ಪತ್ರೆಯ ಔಷಧಿಗೆ ಏನಾಗೋದಿಲ್ವ ಅಂತ ರೇಗಿಸ್ತಾ ಇದ್ವಿ.
ಮದ್ವೆ ಆದ ಮೇಲೆ ಕಾರ್ತಿ ಇನ್ನು ಬಸುರಲ್ಲಿದ್ದಾಗ ಬಂದ ಸೂರ್ಯ ಗ್ರಹಣದ ದಿನ ಅತ್ತೆ , ಮಂಜು ನನ್ನ ರೂಮಿನ ಕಿಟಕಿಗೆಲ್ಲ ದಪ್ಪದಪ್ಪ ಕಂಬಳಿಗಳನ್ನ ಕಟ್ಟಿ ನಾ ಹೊರಗೇ ಬಾರದ ಹಾಗೆ ಕಾವಲಿದ್ರು ! ಆಮೇಲೆ ತಲೆಗೆ ನೀರೆರೆಸಿ ತುಪ್ಪದ ದೀಪ ಹಚ್ಚಿಸಿದ್ರು!! (ಅಮ್ಮನ್ನ ರೇಗಿಸಿದ ಹಾಗೆ, ಅಮ್ಮನಿಗೆ ಉಲ್ಟಾ ಹೊಡೆಯೋ ಹಾಗೆ ಅತ್ತೆಗೆ ಉಲ್ಟಾ ಹೊಡೆಯಲಾಗುತ್ತದೆಯೇ?!)
ಬೆಳಿಗ್ಗೆಬೆಳಿಗ್ಗೆ ಪುಟ್ಟಿಗೆ ಅವರಜ್ಜಿ 'ತಲೆ ಸ್ನಾನ ಮಾಡು ಮಗ' ಅಂದ್ರು . 'ಸರಿ ಅಜ್ಜಿ' ಅಂದ್ಳು . ಅಡುಗೆ ಮನೆಗೆ ಬಂದು 'ಲೇ ಕುಳ್ಳಿಮಾ, ತಲೆ ಸ್ನಾನ ಮಾಡಿದ್ರೆ ಕಾಲೇಜ್ಗೆ ಹೋಗೋ ತನಕ ಕೂದ್ಲು ಒಣಗಲ್ಲ, ನಾ ತಲೆ ಸ್ನಾನ ಮಾಡಲ್ಲ, ಮೈ ತೊಳೆದು ಬರ್ತೀನಿ ನಿಮ್ಮತ್ತೆ ಕೇಳದ ಹಾಗೆ ನೋಡ್ಕೋ' ಅಂದ್ಳು . ಸರಿ, ನೀ ರೆಡಿ ಆಗು ಅಂದೆ. ತಯಾರಾಗಿ ಬಂದು ದೇವ್ರಿಗೆ ಕೈಮುಗಿದು ತಿಂಡಿ ತಿಂದ್ಳು. ಕಾಲೇಜ್ಗೆ ಬಿಟ್ಟು ಬಂದೆ . 'ಮಕ್ಕಳನ್ನ ನೀನೆ ಹಾಳ್ ಮಾಡ್ತೀಯ' ಅಂದ್ರು ಅತ್ತೆ. ಸುಮ್ನೆ ನಕ್ಕೆ. ನಾ ಹೋಗಿ ಎಂದಿನಂತೆ ದೀಪ ಹಚ್ಚಿದೆ...
ವಿಜ್ಞಾನಕ್ಕೂ ಸಂಪ್ರದಾಯಕ್ಕೂ ಬಹಳ ಹಿಂದಿನಿಂದಲೂ ಒಂದು ಯುದ್ಧ ನಡೆಯುತ್ತಲೇ ಬಂದಿದೆ . ಸಂಪ್ರದಾಯದ ಹೆಸರಲ್ಲಿ ಹೇರಿಕೆಯಾಗುವ ಯಾವುದೇ ಆದರೂ ಮನೆಯಲ್ಲಿ ನೆಮ್ಮದಿ ಕೆಡುವಂತದ್ದು.. ವಿಜ್ಞಾನದ ಹೆಸರಲ್ಲಿ ಸಂಪ್ರದಾಯವನ್ನ ಸೋಲಿಸಿದೆ , ಸಂಪ್ರದಾಯದ ಹೆಸರಲ್ಲಿ ವಿಜ್ಞಾನವನ್ನ ಸೋಲಿಸಿದೆ ಎನ್ನುವುದು ಸುಳ್ಳು. ವಿಜ್ಞಾನದ "ಉಪಯುಕ್ತತೆ"ಯನ್ನ, ಸಂಪ್ರದಾಯದ "ಯುಕ್ತತೆ"ಯನ್ನ ಅಳವಡಿಸಿಕೊಳ್ಳುತ್ತಾ ನಡೆದರೆ ಚೆಂದವೇನೋ! ಅವರವರ ಭಾವಭಕುತಿ! ಖುಷ್ಖುಷಿಯಿಂದ ಏನೇ ಮಾಡಿದರೂ ಚೆಂದ..."ಗ್ರಹಣ ಬಿಡ್ತಾ" ಅನ್ನೋದು ಬರೀ ಪ್ರಾಕೃತಿಕವಾಗಲ್ಲ ಮಾನಸಿಕವಾಗಿಯೂ ಆದಾಗ ಚೆಂದವೇನೋ..
ಸುಂಸುಮ್ನೆ ಬರಿಬೇಕು ಅನ್ನಿಸಿತು 

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...