Wednesday, 9 August 2017

ಈಗಷ್ಟೇ ಎಲೆಕ್ಟ್ರಿಕ್ ಬಿಲ್ ಬಂತು. ರಸೀದಿ ಹಾಕ್ತಾ ಇದ್ದವ್ರು ಪಕ್ಕದ ಮನೆಯಾಕೆಗೆ 'ಬಿಲ್ ಕಟ್ಟಿಲ್ಲ ಅಂತ ತೋರಿಸ್ತಾ ಇದೆ. ೧೫ರ ಒಳಗೆ ಕಟ್ಬಿಡಿ .ಇಲ್ಲ ಅಂದ್ರೆ ಕರೆಂಟ್ ಡಿಸ್ಕನೆಕ್ಟ್ ಮಾಡ್ತಾರೆ ' ಅಂತ ಹೇಳಿ ಹೋದ್ರು. ಒಂದು ಕ್ಷಣ ಮನಸ್ಸು ವಿಷಾದದ ಕಡಲಾಗಿಹೋಯ್ತು..ಮಂಜು ಅಪಘಾತಕ್ಕೆ ಸಿಲುಕಿ ಪೆಟ್ಟು ಮಾಡಿಕೊಂಡಾಗ ಎದುರಿಸಿದ ಬದುಕಿನ ಪುಟಗಳೆಲ್ಲಾ ತೆರೆದುಕೊಂಡಂತೆ ...
ಸುಮಾರು ೨೦೦೦ ಇಸವಿಯಲ್ಲಿ ಆಗಸ್ಟ್ ತಿಂಗಳ ಒಂದು ದಿನ ಮಂಜು ಏಟು ಮಾಡಿಕೊಂಡಾಗ ನನ್ನ ಚಿಕ್ಕ ಕೂಸಿಗೆ ಬರೀ ೪ ತಿಂಗಳು! ಅಮ್ಮ ತಮ್ಮ,ನಾದಿನಿ, ತಮ್ಮಂದಿರಂತಹ ಕಸಿನ್ಸ್ ಇಲ್ಲದೆ ಇದ್ದಿದ್ದರೆ ಬಹುಶಃ ಅದೇನ್ ಆಗಿಹೋಗ್ತಾ ಇದ್ನೋ ಗೊತ್ತಿಲ್ಲ ! ಬದುಕಿನ ಪಾಠ ಕಲಿತ ದಿನಗಳವು. ಮೈಸೂರ೦ತ ಮೈಸೂರಲ್ಲಿ ಮಂಜು ಕಾಲು ಸರಿ ಹೋಗದೆ ಇದ್ದಾಗ ಬೆಂಗಳೂರಿನ ಆಸ್ಪತ್ರೆಗೆ ಓಡಾಡಿ ಒಂದಷ್ಟು ಸರಿ ಹೋದಾಗ ಗೆದ್ದು ಬಂದಂತೆ. ಹಬ್ಬ ಅಂದರೆ ಸಂಭ್ರಮಿಸುತ್ತಿದ್ದ ನನಗೆ ದಿನಗಳೇ ಮರೆತು ಹೋಗಿತ್ತೇನೋ! ದೀಪಾವಳಿಯ ಹಿಂದಿನ ಬೆಳಿಗ್ಗೆ ಮೈದುನನನ್ನ ಮಂಜು ಜೊತೆ ಬಿಟ್ಟು, ಮಂಜುವನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಲು ದುಡ್ಡು ತರಲು ತಮ್ಮನೊಡನೆ ಮೈಸೂರಿಗೆ ಬಂದಾಗ, ಸಮಯಕ್ಕೆ ಸರಿಯಾಗಿ ಹೇಳಿದವರು ಹಣ ನೀಡದಿದ್ದಾಗ ಅಮ್ಮ ಅವಳ ಸರವನ್ನೇ ಅಡವಿಟ್ಟು ನೀ ತಗೊಂಡು ಹೋಗು ಮಗ , ನಾ ಬಿಡಿಸಿಕೊಳ್ತೀನಿ ' ಅಂತ ಹಣ ನೀಡಿದ್ಳು ! ಸಂಜೆ ಹೊರಡುವಷ್ಟರಲ್ಲಿ ಮೈದುನ 'ಬಾಬ್, ನನ್ನ ಹೆಂಡ್ತಿ ಸಿಟ್ಕೊಂಡಿದ್ದಾಳೆ , ಹಬ್ಬ ಇನ್ನೂ ಮನೆಗೆ ಬರಲಿಲ್ವಲ್ಲಾ ಅಂತ ನೀವು ಇನ್ನು ಹೊರಟಿಲ್ವಾ ' ಅಂದಾಗ ಸಿಸ್ಟರ್ಗೆ ಫೋನ್ ಮಾಡಿ 'ನಾ ಬರೋವರೆಗೂ ಮಂಜುನ ನೋಡಿಕೊಳ್ಳಿ ಪ್ಲೀಸ್ 'ಅಂದಾಗ ಅದ್ಯಾವ ಜನ್ಮದ ಅಕ್ಕತಂಗಿಯರೋ ಎಂಬಂತೆ ನೋಡಿಕೊಂಡಿದ್ದರು. ಅಮ್ಮನ ಮನೆಯಲ್ಲಿದ್ದ ನನ್ನನ್ನ ನೋಡಿದ ಮತ್ತೊಬ್ಬ ಮೈದುನ 'ಇದ್ಯಾಕ್ ಅತ್ಗೆ ಇಲ್ಲಿದ್ದೀರಾ, ಮನೆಗೆ ಹೋಗಿ ದೀಪ ಹಚ್ಚೋದಲ್ವಾ' ಅಂದಾಗ ಸುಮ್ನೆ ನಕ್ಕುಬಿಟ್ಟಿದ್ದೆ ಕಣ್ಣಲಿ ಹನಿ ತುಂಬಿ! ಒಂದಷ್ಟು ಕಾಲು ಸರಿಯಾಗಿ ಬಂದ ಮಗನನ್ನ ನೋಡಿದ ಅತ್ತೆ 'ಮೊದ್ಲೇ ಕರ್ಕೊಂಡ್ ಹೋಗಿದ್ರೆ ನನ್ ಮಗ ಇಷ್ಟ್ ನೋವೇ ತಿಂತಾ ಇರ್ಲಿಲ್ಲ ' ಅಂದಾಗ ಅದ್ಯಾಕೋ ಸಂಕಟ ಒತ್ತರಿಸಿತ್ತು.. ವಾಪಸ್ಸು ಬಂದು ಅಮ್ಮನ ಮನೆಯಲ್ಲಿ ಒಂದಷ್ಟು ಸುಧಾರಿಸಿಕೊಂಡು ಮತ್ತೆ ನಮ್ಮದೇ ಮನೆಗೆ ಬಂದಾಗ ಹೀಗೆ sameee ಮೇಲೆ ಹೇಳಿದಂತೆ ''ಬಿಲ್ ಕಟ್ಟಿಲ್ಲ ಅಂತ ತೋರಿಸ್ತಾ ಇದೆ. ೧೫ರ ಒಳಗೆ ಕಟ್ಬಿಡಿ .ಇಲ್ಲ ಅಂದ್ರೆ ಕರೆಂಟ್ ಡಿಸ್ಕನೆಕ್ಟ್ ಮಾಡ್ತಾರೆ ' ಅಂದಿದ್ರು ವಿದ್ಯುತ್ ಇಲಾಖೆಯವರು !!
ಅಮೇಲಿನದೆಲ್ಲ ಛಲಕ್ಕೆ ಬಿದ್ದಂತ ಬದುಕು! ಪುಟ್ಟ ಕಾರ್ತಿ, ಕೃತಿ, ಮಂಜು, ನಾನು ..... ಇಲ್ಲಿಯ ತನಕ ಹೀಗೆ ನಗಲು ತೆಗೆದುಕೊಂಡ ಹಠ ಅಹ್ ....
ಬದುಕು ಸುಂದರ. ಅದೆಷ್ಟೇ ಕಷ್ಟ ಬಂದರೂ ಗೆಲ್ಲಬಹುದು .. ಒಂದು ಜೊತೆ, ಒಂದಷ್ಟು ಹಠ ಸಾಕೇನೋ .. ಜೊತೆಗೆ ಯಾವುದೋ ಒಂದು ಶಕ್ತಿ ..ಬೀಳದಂತೆ ತಡೆ ಹಿಡಿವ ಶಕ್ತಿ, ಇನ್ಯಾರ ಮೂಲಕವೋ ನಮ್ಮನ್ನ ಗೆಲ್ಲಿಸುವ ಶಕ್ತಿ ಇದೆಯೇನೋ ...
ಬೆಳಗಾಗ ನಾ ಎದ್ದು ಯಾರ್ಯಾರ ನೆನೆಯಲಿ ಎಂದಾಗ ,ನಾ ನೆನೆಯಲು, ನೆನೆದು ಅಭಾರಿಯಾಗಿರಲು, ಆಭಾರಿಯಾಗಿ ಹಾರೈಸಲು ಅದೆಷ್ಟು ಜನರಿದ್ದಾರೆ ನನಗೆ : ಅಂತಹವರ ಸಂತತಿ ಹೊಳೆದಂಡೆಯ ಗರಿಕೆ ಹಂಗೆ ಬೆಳೆಯಲಿ ))))
ಬರೆಯಲು ಒಂದು ನೆಪ ಅಷ್ಟೇ ಅಂದ್ರಾ 

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...