Thursday, 9 November 2017

ಒಬ್ಬ ರಾಜ. ಸುಭಿಕ್ಷದ ಕಾಲದಲ್ಲಿ ಏನೂ ಕೆಲಸವಿಲ್ಲದೆ ತೊಂದರೆಗಳಿಲ್ಲದೆ ಇದ್ದಾಗ ತನ್ನ ಆಸ್ಥಾನದಲ್ಲಿ ಮಂತ್ರಿಮಂಡಲಗಳೊಂದಿಗೆ ಸರಸ ಸಂಭಾಷಣೆಯಲ್ಲಿ ತೊಡಗಿದ್ದಾಗ ಒಂದು ಪ್ರಶ್ನೆ ಕೇಳ್ತಾನೆ . 'ಮಂತ್ರಿಗಳೇ, ಮದುವೆಯಾಗಿ ಗಂಡನ ಮನೆಗೆ ಹೋಗುವ ಹೆಣ್ಣು ಮಗಳಿಗೆ ಬದುಕಿನಲ್ಲಿ ಸುಖಸಂತಸ ಇರಬೇಕೆಂದು ತುಂಬಾ ಆಸೆ ಆಕಾಂಕ್ಷೆಗಳಿರುತ್ತವೆ. ಪ್ರತಿ ಹೆಣ್ಣುಮಗಳು ಮದುವೆಯಾಗಿ ಹೋಗುವಾಗ ಮನದಲ್ಲಿ ಅನಿಸುವ ಅತೀ ಇಷ್ಟದ ಆಸೆ ಯಾವುದು ಹೇಳಿ?" 
ಮಂತ್ರಿ ಹಾಗು ಇತರರು 'ಗಂಡ ಒಳ್ಳೆಯವನಾಗಿರಬೇಕು, ಅತ್ತೆ ಮಾವ ಒಳ್ಳೆಯವರಾಗಿರಬೇಕು, ಒಳ್ಳೆ ಮುದ್ದಾದ ಮಕ್ಕಳಾಗಬೇಕು , ಇತ್ಯಾದಿ ಇತ್ಯಾದಿ' ಉತ್ತರಗಳನ್ನ ಹೇಳ್ತಾರೆ . ರಾಜ ಸಂಪ್ರೀತನಾಗೋದಿಲ್ಲ. 'ನಾಳೆ ಬೆಳಗ್ಗೆಯವರೆಗೆ ಸರಿಯಾದ ಸಮಂಜಸ ಉತ್ತರ ನೀಡದಿದ್ದರೆ ಶಿಕ್ಷೆಗೆ ಗುರಿಯಾಗುವಿರಿ' ಅಂತಾನೆ . ಮಂತ್ರಿ ಎಷ್ಟೇ ಪ್ರಯತ್ನಿಸಿದರೂ ಉತ್ತರ ಸಿಗೋದಿಲ್ಲ. ತುಂಬಾನೇ ಬೇಸರದಿಂದ ಕುಳಿತಿರುವಾಗ ಅವನ ಮಗ ಕಾರಣ ಕೇಳ್ತಾನೆ . ಮಂತ್ರಿ ಹಿಂಗ್ಹಿಂಗೆ ಅಂತ ಹೇಳ್ತಾನೆ. ಅಪ್ಪ ಅಂದ್ರೆ ಮಗನಿಗೆ ತುಂಬಾನೇ ಪ್ರಾಣ . ತಂದೆಯ ಸಮಸ್ಯೆಗೆ ಉತ್ತರ ಯೋಚಿಸುತ್ತಾ ಒಂದು ಹಳೆಯ ಛತ್ರದ ಬಳಿ ಕುಳಿತಾಗ ಒಬ್ಬ ಭಿಕ್ಷುಕಿ ಕಾಣ್ತಾಳೆ . ಅವಳು ಮಂತ್ರಿಕುಮಾರನನ್ನ ಬೇಸರಕ್ಕೆ ಕಾರಣ ಕೇಳ್ತಾಳೆ. ತುಂಬಾ ಕುರೂಪಿಯಾಗಿದ್ದ ಆಕೆಯನ್ನ ಕಂಡು ಪ್ರಶ್ನೆಗೆ ಉತ್ತರಿಸಬೇಕೆಂದೆನಿಸದಿದ್ದರೂ ಮಂತ್ರಿಕುಮಾರ ಸೌಜನ್ಯದಿಂದ ಕಾರಣ ಹೇಳ್ತಾನೆ . ಅವಳು ನಸುನಕ್ಕು 'ನೀನು ನನ್ನ ಮದುವೆಯಾಗುವೆ ಎಂದು ಭಾಷೆ ನೀಡಿದರೆ ನಾ ಉತ್ತರ ನೀಡ್ತೀನಿ' ಅಂತಾಳೆ. ಚಕಿತಗೊಂಡ ಮಂತ್ರಿಕುಮಾರ ಕೋಪಗೊಂಡರೂ ತಂದೆಗಾಗಿ ಒಪ್ಪಿಕೊಳ್ತಾನೆ ! ಸರಿ ಬೆಳಿಗ್ಗೆ ರಾಜನ ಆಸ್ಥಾನದಲ್ಲಿ ಭಿಕ್ಷಿಕಿ ರಾಜನಿಗೆ ಉತ್ತರಿಸುತ್ತಾಳೆ ' ಪ್ರತಿ ಹೆಣ್ಣು ಮಗಳಿಗೂ ಮದುವೆಯಾಗಿ ಹೋಗುವ ಮನೆಯಲ್ಲಿ ತನ್ನ ತವರಿನಲ್ಲಿದ್ದ ಸ್ವತಂತ್ರ ಇದ್ದರೆ ಸಾಕೆಂದು ಹಂಬಲಿಸುತ್ತಾಳೆ . ಅದೊಂದಿದ್ದರೆ ಉಳಿದದ್ದೆಲ್ಲ ಅವಳು ಪಡೆಯಬಲ್ಲಳು ' ಎನ್ನುತ್ತಾಳೆ ! ರಾಜ ಸಂತುಷ್ಟನಾಗುತ್ತಾನೆ . ಈಗ ಮಂತ್ರಿಗೆ ಅವಳನ್ನ ತನ್ನ ಮಗನಿಗೆ ಮದುವೆ ಮಾಡಿಕೊಳ್ಳಬೇಕಲ್ಲ ಎಂಬ ದುಃಖವಾಗುತ್ತದೆ. ಆದರೆ ಮಂತ್ರಿಯ ಮಗ ಆಕೆಗೆ ಕೊಟ್ಟ ಮಾತಿನಂತೆ ಆಕೆಯನ್ನ ವಿವಾಹವಾಗುವೆ ಎನ್ನುತ್ತಾನೆ . ಅವನ ನಿಷ್ಠೆಗೆ ಮೆಚ್ಚಿ ದೇವತೆಯೊಬ್ಬಳು ಪ್ರತ್ಯಕ್ಷವಾಗಿ 'ನಿನ್ನ ನಿಷ್ಠೆಗೆ ಮೆಚ್ಚಿದ್ದೇನೆ , ನಿನಗೊಂದು ವರಕೊಡುತ್ತೇನೆ , ಇವಳನ್ನ ನಾ ಸುಂದರಿಯಾಗಿ ಮಾಡುತ್ತೇನೆ , ಆದ್ರೆ ಹಗಲಿನಲ್ಲೊ , ರಾತ್ರಿಯಲ್ಲೊ ಎಂಬ ಆಯ್ಕೆ ನಿನ್ನಾದು ಅಂತಾಳೆ. " ಹಗಲಿನಲ್ಲಿ ಮನೆತುಂಬ ಕಳಕಳೆಯಾಗಿ ಓಡಾಡುವ ಪತ್ನಿಯನ್ನ ಬೇಡುತ್ತಾನೋ ಅಥವಾ ರಾತ್ರಿಯಲ್ಲಿ ಅವನ ಮನದಿಚ್ಛೆಯನ್ನ ಪೂರೈಸುವ ಮಡದಿಯನ್ನೋ ' ಎಂದು ಎಲ್ಲರೂ ಅಚ್ಚರಿಗೊಳ್ಳುತ್ತಾರೆ... ಮಂತ್ರಿಕುಮಾರ ಒಂದು ಘಳಿಗೆ ಯೋಚಿಸಿ "ಅದನ್ನ ಅವಳಿಚ್ಛೆಗೆ ಬಿಡುತ್ತೇನೆ " ಅನ್ನುತ್ತಾನೆ !!! ದೇವತೆ ಅವನನ್ನು ಹರಸಿ ಅವಳನ್ನ ಸುರಸುಂದರಿಯನ್ನಾಗಿಸಿ ಮಾಯವಾಗುತ್ತಾಳೆ:).
ಓದಿದೆ ಅನುವಾದಿಸಿ ಹಂಚಿಕೊಳ್ಳಬೇಕು ಅನಿಸ್ತು ...
ಮದುವೆಯಾಗಿ ಗಂಡನ ಮನೆಗೆ ಹೋಗುವ ಹೆಣ್ಣುಮಕ್ಕಳಿಗೆ ತವರಿನ ಬಂಧುತ್ವ ನೀಡಿದರೆ ಬಹಳಷ್ಟು ಮನೆಗಳು ಸ್ವರ್ಗವಾಗುತ್ತವೇನೋ !!
(ಎಲ್ಲಾ ಹೆಣ್ಣುಮಕ್ಕಳು ಹಾಗಲ್ಲ, ಸೊಸೆಯಂದಿರೂ ಒಳ್ಳೆಯವರಾಗಿರಬೇಕು, ಇತ್ಯಾದಿ ಇತ್ಯಾದಿ ಹೇಳಿಕೆಗಳು ಬಗ್ಗೆ ಅರಿವಿದೆ .. ಐದು ಬೆರಳೂ ಸಮವಿಲ್ಲ ಅಲ್ವೇ!! )

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...