Thursday 23 March 2017

ಈ ನಮ್ಮ ಹಳೆ ಮೈಸೂರು ಭಾಗದಲ್ಲಿ ಶಿವರಾತ್ರಿ ಕಳೆದು, ಯುಗಾದಿಯ ಹೊಸವರ್ಷ ಹುಟ್ಟೋ ಮೊದಲು ಬಹುತೇಕ ಗ್ರಾಮಗಳಲ್ಲಿ ಗ್ರಾಮದೇವತೆಯ ಹಬ್ಬ ಮಾಡುತ್ತಾರೆ. ಬೇಸಿಗೆ ಹುಟ್ಟುವಾಗ ಕಾಡುವ ಅನೇಕ ಕಾಯಿಲೆಗಳು, ಬರಗಳು, ಕೆಡಕುಗಳು ಆಗದೆ ಇರಲಿ ಅನ್ನೋದಕ್ಕೆ ಗ್ರಾಮವ ಕಾಯುವ ದೇವಿಗೆ ಪೂಜೆ ಸಲ್ಲಿಸಿ ಹರಕೆ ತೀರಿಸುತ್ತಾರೆ. ಇದಕ್ಕೆ 'ಮಾರಿ ಹಬ್ಬ ' ಅಂತ್ಲೇ ಹೆಸರು. ಊರಿಗೆ ಊರೇ ಸಿಂಗಾರ ಗೊಳ್ಳುತ್ತದೆ. ಬಂಧುಗಳನ್ನ ಕರೆದು "ಉಣ್ಣಕ್ಕೆ ಇಕ್ಕಿ' ಸಂಭ್ರಮಿಸುತ್ತಾರೆ. ಈಗಲೂ ಮೈಸೂರಿನ ನಗರಪಾಲಿಕೆ ವ್ಯಾಪ್ತಿಗೆ ಬರುವ ಅನೇಕ ಕಾಲೋನಿಗಳಾದ ಪಡುವಾರಹಳ್ಳಿ, ಕನ್ನೇಗೌಡನಕೊಪ್ಪಲು, ತೊಣಚಿಕೊಪ್ಪಲು,ಹಿನಕಲ್, ಹೂಟಗಳ್ಳಿಗಳು ಕೂಡ ಈ ಮಾರಿ ಹಬ್ಬಕ್ಕೆ ಹಬ್ಬಕ್ಕೆ ಸಂಭ್ರಮಿಸೋ ಪರಿ ಚೆಂದ. ಹಸಿ ಅಕ್ಕಿಯಲ್ಲಿ ತಂಬಿಟ್ಟು ಮಾಡಿ ದೇವಿಗೆ ಸಮರ್ಪಿಸುತ್ತಾರೆ. ಹೆಣ್ಣು ಐಕ್ಲ ಸಂಭ್ರಮಕ್ಕೆ ಗಂಡ ಐಕ್ಲು ಸೋತು ಹೋಗುತ್ತಾರೆ:))) ಹಿಂದಿನ ದಿನವೇ ಊರೆಲ್ಲ ಸಿಂಗರಿಸಿ, ಡೋಲು ತಮಟೆ, ಕಹಳೆ ಜೊತೆ , ಹರಕೆ ಹೊತ್ತವರು 'ಬಾಯಿಗೆ ಬೀಗ' (ಪೂರ್ತ ದಿನ ಉಪವಾಸ ಇದ್ದು, ತಂತಿಯನ್ನ ಆ ಕೆನ್ನಯಿಂದ ಈ ಕೆನ್ನೆಯವರೆಗೆ ಚುಚ್ಚಿಸಿಕೊಂಡು ಮೆರವಣಿಗೆಯ ಜೊತೆ ಸಾಗಿ ಕಷ್ಟ ಪರಿಹರಿಸಿದ ದೇವಿಗೆ ಹರಕೆ ತೀರಿಸುತ್ತಾರೆ) ಹಾಕಿದವರು, ಪಂಜು ಹೊತ್ತವರು ರಾತ್ರಿ ಇಡೀ ದೇವಿಯ ಮೆರವಣಿಗೆ ಮಾಡಿ , ಅವಳಿಗೆ ಇಡೀ ಊರ ತೋರಿಸಿ 'ನೋಡ್ದಲ್ಲ, ಹಿಂಗದೆ ನಮ್ಮೂರು, ಹಿಂಗೆ ಮಡ್ಗು, ಎಲ್ಲಿ ಕಷ್ಟ ಐತೆ ಪರ್ಹರ್ಸು(ಪರಿಹರಿಸು)' ಅಂತ ಹೇಳಿ ಮತ್ತೆ ಅವಳ ಗುಡಿಗೆ ಬಿಟ್ಟು ಪೂಜಿಸುತ್ತಾರೆ. ದೇವರ ಹೊತ್ತ ವ್ಯಕ್ತಿ 'ದೇವಿ'ಯೇ ಆಗಿಬಿಟ್ಟಿರುತ್ತಾನೆ ಎಲ್ಲರ ಕಣ್ಣಲ್ಲಿ., ಮನೆಮನೆಯ ಮುಂದೆ ಈಡುಗಾಯಿ ಹೊಡೆದು, ಹಾರ ಹಾಕಿ ದೇವಿಯನ್ನ ಸ್ವಾಗತಿಸಿ ಬೀಳ್ಕೊಡುತ್ತಾರೆ .ಇದು ಈ ಕಡೆ ನಡೆಯೋ ಪದ್ಧತಿ.
ನೆನ್ನೆ ಮೊನ್ನೆ ಮಂಜು ಅವರ ಅಣ್ಣನ ಊರಲ್ಲಿ ಮಾರಿಹಬ್ಬ. ಅಲ್ಲಿಯದು ಮೂಕ ಮಾರಿಯಮ್ಮ. ದೇವರು ಹೊತ್ತ ವ್ಯಕ್ತಿ ಇಡೀ ದಿನ ಉಪವಾಸವಿದ್ದು , ಮೌನವಾಗಿದ್ದು , ಹೊಳೆಯ ಬದಿಯಿಂದ ಊರೆಲ್ಲ ಸುತ್ತಿ ಮಾರೀಗುಡಿಯ ಬಳಿ ಬಂದು ದೇವಿಯ ಒಳಗೆ ಕಳಿಸಿ ಪೂಜೆ ಮಾಡಿದ್ರೆ ಹಬ್ಬ ಸಂಪನ್ನ.ಮತ್ತೆಲ್ಲ ಊಟದ ಸಂಭ್ರಮ ಇವೆಲ್ಲದರ ನಡುವೆ ಕೆಲವು ಮನೆಗಳ ಮುಂದೆ ಬಂದ ದೇವಿ ಆ ಮನೆಯ ಜನಕ್ಕೆ 'ಹೂವು ಕೊಡ್ತಾಳೆ' ಹೂ ಕೊಟ್ರೆ ಆ ಮನೆಯ ಮಂದಿಗೆ ಒಂದು ಸೆಕ್ಯೂರ್ ಭಾವನೆ. ಕೆಲವೆಡೆ ದೇವರು ಹೊತ್ತ ವ್ಯಕ್ತಿ ರೌದ್ರತೆಯಿಂದ ಕುಣಿತಾನೇ .. ಅದು ಆ ಮನೆಯವರಿಗೆ ವಾರ್ನಿಂಗ್ ತರ .. ಏನೋ ತಪ್ಪೋ ನೋವೊ ನಡೆಯುತ್ತದೆ ಏನೊ ಅನ್ನೋ ಹಾಗೆ.. (ಈ ದೇವರು ಹೊರುವ ವ್ಯಕ್ರಿ ಅದೇ ಊರಿನವನಾಗಿದ್ದು ಅಲ್ಲಿನ ಪ್ರತಿಯೊಂದು ಸುದ್ದಿ ತಿಳಿದಿರುತ್ತದೆ!!! ಆದರ ಆಧಾರದ ಮೇಲೆ ದೇವಿ ಸನ್ನೆ ಮಾಡುತ್ತಾಳೋ ಏನೋ !!psychology versus religious belief !!)ಹೀಗೆಲ್ಲ ನಡೆಯೋ ಹಬ್ಬ ಜನರನ್ನ ಒಂದುಗೂಡಿಸುತ್ತದೆ, ದಿನನಿತ್ಯದ ಹಳ್ಳಿಯ ಬದುಕಿನಿಂದ ಒಂದಷ್ಟು ವಿರಾಮ ನೀಡಿ ಬದುಕ ರಂಜಿಸುತ್ತದೆ
ಇಲ್ಲಿ ಕಣ್ಣಿಗೆ ಕಾಣೋ ತುಂಬಾ ಸರಳ ಸತ್ಯ ಅಂದ್ರೆ ನಮ್ಮ ಹಿರಿಯರ ಜಾಣತನ ; ಬೇಸಿಗೆ ಬರೋ ಮೊದಲು ಬರುವ ಈ ಹಬ್ಬಕ್ಕೆ ಮನೆಯನ್ನೆಲ್ಲ ಶುಚಿಗೊಳಿಸೋದರಿಂದ ಬಹುತೇಕ ಕಾಯಿಲೆ ತಡೆಯಬಲ್ಲರು..ಜನಕ್ಕೆ ದೇವರ ಮೇಲೆ ಅಲ್ಲದಿದ್ದರೂ ದೇವರು ಕೊಡೊ ಹೂವು ಅಥವ ದೇವರ ಸಿಟ್ಟಿನ ಮೇಲಿನ ನಂಬಿಕೆಯಿಂದ ತಮ್ಮ ಕೆಲಸಗಳ ಬಗ್ಗೆ ವಹಿಸೋ ಎಚ್ಚರ.. ಇವೆಲ್ಲದರ ಜೊತೆಗೆ ಹಬ್ಬದ ನೆಪದಲ್ಲಿ ಬಂಧುತ್ವಗಳ ಬೆಸುಗೆ.... ಕೆಲವು ಹಬ್ಬಗಳು ಇನ್ನೂ ಜೀವಂತವಾಗಿ ಇರೋದೇ ಒಳ್ಳೆಯದು ಅನಿಸುವ ಹಾಗೆ with all its flaws.......

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...