Thursday, 23 March 2017

ನಮ್ಮ ಮನೆಯ ಹಿಂದಿನ ಮನೆಗೆ ಒಂದು ಹೊಸ ಕುಟುಂಬ ಬಾಡಿಗೆಗೆ ಬಂದಿದೆ. ಸರಿಯಾಗಿ ಪುಟ್ಟಿಯ ಕೋಣೆಯ ಕಿಟಕಿಗೆ ಅವರ ಮನೆಯ ಹಿಂಬದಿಯ ಗ್ರಿಲ್ಸ್ ತೆರೆದುಕೊಳ್ಳುತ್ತದೆ. ಮನೆಗೆ ಬಂದಿರೋರು ಎಲ್ಲೋ ಕೊಪ್ಪಲು (ನಮ್ಮ್ ಮೈಸೂರಿನ ಕಡೆ ಕೊಪ್ಪಲು ಪಡುವಾರಹಳ್ಳಿಯವ್ರು ಅಂದ್ರೆ ಒಂದಷ್ಟು ಹೆಚ್ಚೇ ಮಾತುಗಾರರು, ಜೋರಿನವರು ಅನ್ನೋ ಅರ್ಥ!!) ಕಡೆಯವರಿರಬೇಕು . ಒಂದೇ ಸಮ ಮಾತಾಡ್ತಾ ಇರ್ತಾರೆ . ಇಂತಹದೇ ಅಂತಿಲ್ಲ, ಒಟ್ಟಾರೆ ಜೋರಾಗಿ ಟಿವಿ ಹಾಗು ಮಾತುಕತೆ ಆಗ್ತಾ ಇರುತ್ತೆ.. ಮೊದ್ಲೇ ಪುಟ್ಟಿ ಒಂದ್ ತರ . ಅವಳಿಗೆ ಈ ಗಲಾಟೆ ಎಲ್ಲಾ ಆಗಿಬರೋದಿಲ್ಲ.. ಜೊತೆಗೆ ಈ ಬಾರಿ ಎರಡನೇ PUC ಅನ್ನೋ ತಲೆಬಿಸಿ ಅವಳಿಗೆ (ಓದೋದು ಅಷ್ಟರಲ್ಲೇ ಇದೆ ಆದ್ರೆ ತಲೆಬಿಸಿಗೇನು ಕಮ್ಮಿ ಇಲ್ಲ !!). ಒಂದೆರಡು ದಿನ ನೋಡಿ ಆಮೇಲೆ ನಾನೇ ನಿಧಾನವಾಗಿ ಅವರಿಗೆ ಹೇಳಬೇಕು ಅಂದ್ಕೊಳ್ತಾ ಇದ್ದೆ. (ನನಗೂ ಹೇಳೋಕೆ ಭಯ..ಮೊದ್ಲೇ ಜೋರಾಗಿ ಕಾಣ್ತಾರೆ ಏನಪ್ಪಾ ಅಂತ, ಇನ್ನು ನಮ್ಮ ಮನೆದೇವ್ರು ಅದಕ್ಕಲ್ಲೇ ತಲೆ ಕೆಡಿಸಿಕೊಳ್ಳೋ ಜೀವವೇ ಅಲ್ಲ . ಅಮ್ಮನ ಹತ್ರ ಕೂತ್ಕೊಂಡ್ ಓದ್ಕೋ ಮಗ ಬಾಲ್ಕನಿಯಲ್ಲಿ ಅಂತಾರೆ ಹೊರ್ತು ಹೇಳೋ ಛಾನ್ಸ್ ಇಲ್ಲವೇ ಇಲ್ಲ !!) ಕಾರ್ತಿ ಕೂಡ ಹೇಳೋ ರೀತಿಯಲ್ಲೇ ಹೇಳು ಅಮ್ಮ , ಕೇಳದೆ ಇದ್ರೆ ಆಮೇಲೆ ನೋಡೋಣ ಅಂದ.
ಎರಡು ದಿನ ಆಯ್ತು. ಮಗಳು "ಕುಳ್ಳಿಮಾ, ಆ ಹಿಂದ್ಗಡೆ ಮನೆಯವ್ರು ...' ಅಂತ ಹೇಳ್ತಾ ಇದ್ಳು. ನಾನು 'ಒಂದೆರಡು ದಿನ ತಡ್ಕೋ ಮಗ, ನಾನೇ ಹೇಳ್ತಿನಿ , ಈಗ ಹೊಸದಾಗಿ ಬಂದಿದ್ದಾರೆ ಅಲ್ವ, ಹೋಗೋರು ಹೋದ ಮೇಲೆ ಅವರೂ ಸೆಟ್ಲ್ ಆಗ್ತಾರೆ ' ಅಂದೆ .. ಪುಟ್ಟಿ 'ಮೌ, ಫುಲ್ ಕೇಳ್ಕೊ, ಆ ಹಿಂದ್ಗಡೆ ಮನೆಯಲ್ಲಿ ಒಂದೆರಡು ಚುಲ್ಟುಗಳಿದ್ದಾವೆ , ಅದೇನ್ ಮಾತಾಡ್ತಾವೆ ಗೊತ್ತಾ? ಈಗ ಬೆಳಿಗ್ಗೆ ಆ ಹುಡುಗಿ ಟಾಯ್ಲೆಟ್ಗೆ ಹೋಗಿರಬೇಕು , ಈ ಚಿಕ್ಕ ಹುಡ್ಗ ಒಂದೇ ಸಮ ಬಾಗಿಲು ತೆಗಿ ಅಂತ ಕಿರುಚ್ತಾ ಇತ್ತಾ .. ಅವ್ಳು 'ನಾ ಹೋದಾಗ್ಲೆ ನಿಂಗೂ ಬರುತ್ತೆ ಅಲ್ವೇನೋ ' ಅಂತ ಬೈದು ಬಾಗಿಲು ತೆಗೆದು ಅವನನ್ನ ಒಳಗೆ ಬಿಟ್ಟು ಚಿಲ್ಕ ಹಾಕೊಂಡಿರಬೇಕು! ಅವ್ನು ಚಿಲ್ಕ ತೆಗಿ ಅಂತ, ಅವ್ಳು 'ಅಕ್ಕ ಚಿಲ್ಕ ತೆಗಿ ಅಕ್ಕ' ಅನ್ನು ತೆಗಿತೀನಿ ಇಲ್ಲ ಅಂದ್ರೆ ತೆಗೆಯೊಲ್ಲ ಅಂತ. ಅವ್ನೂ ಒಂದಷ್ಟು ರೋಪ್ ಹೊಡೆದ. ಆಮೇಲೆ ಅವಳು ಹೇಳ್ದ ಹಂಗೆ 'ಅಕ್ಕ ಚಿಲ್ಕ ತೆಗಿ ಅಕ್ಕ' ಅಂದ ಇವ್ಳು ಇನ್ನೊಂದಷ್ಟು ಆಟ ಆಡಿಸಿ ತೆಗೆದ್ಲು ಅನಿಸುತ್ತೆ .. ಹೊರಗೆ ಬಂದ ಮೇಲೆ ಶುರು ಆಯ್ತು ನೋಡು ಕಿರಿಕ್ಕೂ..ಅವರಮ್ಮ ಬಂದು ನಾಲ್ಕು ಬಿಟ್ರು ಅನಿಸುತ್ತೆ :) ನಾ ಫಿದಾ ಆಗ್ಬಿಟ್ಟಿದ್ದೀನಿ ಅಮ್ಮ ಅವೆರಡಕ್ಕೆ , same ಕಾರ್ತಿ ನಾನು ಸಣ್ಣವರಿದ್ದಾಗ ಆಡಿದ್ದು ನೆನಪಾಗ್ತಾ ಇತ್ತು, I miss ಅಮ್ಮ' ಅಂದ್ಳು!!ನನಗೂ ನನ್ ಐಕ್ಳ ತರ್ಲೆ ನೆನಪಿಗೆ ಬಂತು ಜೊತೆಗೆ ನನ್ನ ತಮ್ಮ ನಾನು ಆಡ್ತಾ ಇದ್ದ ಕದನಗಳು ನೆನಪಿಗೆ ಬಂದ್ವು .
ಸರಿ ಅದೇ ನೆಪ ಇಟ್ಕೊಂಡು ಪುಟ್ಟಿಯ ಕಿಟಕಿಯ ಬಳಿ ನಿಂತು ಆ ಮಕ್ಕಳಿಗೆ 'ಓಯ್ ಅದೆಷ್ಟ್ ಗಲಾಟೆ ಮಕ್ಳ ನಿಮ್ದು , ಅಕ್ಕ ಓದ್ಕೊಬೇಕಂತೆ.. ಇಲ್ಲೇ ಕಿಟಕಿ ಹತ್ರ ಇರ್ತಾಳೆ ಗಲಾಟೆ ಮಾಡಿದ್ರೆ ಬೈತಾಳೆ ಅಂತ ಹೇಳಿ, ಅವರಮ್ಮನಿಗೆ ನಿಮ್ ಮಕ್ಕಳಿಗೆ ನಮ್ ಪುಟ್ಟಿ ಫ್ಯಾನ್ ಆಗ್ಬಿಟ್ಟಿದ್ದಾಳೆ, ಅವಳ ರೂಮ್ ಇದು, ಅವ್ಳು ಓದ್ಕೊಳ್ತಾ ಇರ್ತಾಳೆ ಈ ಸಾರಿ ಎರಡನೇ PUC,.... ' ಅಂದೆ. ಆಕೆ ಕೂಡ ಒಂದೆರಡು ಮಾತು ಆಡಿದ್ರು. ತಲುಪಿಸಬೇಕಾಗಿದ್ದುದ್ದನ್ನ ತಲುಪಿಸಿದ್ದೆ .. ಟಿವಿ ಸದ್ದು ಕಡಿಮೆಯಾಗಿದೆ! ಮಾತುಕತೆಯ ಒಂದಷ್ಟು ಸೌಂಡ್ ಕಡಿಮೆಯಾಗಿದೆ ! ಮುದಗೊಳಿಸೋ ಮಕ್ಕಳ ಕಿತ್ತಾಟ ಹಾಗೆ ಇದೆ .... :)
ಕಾಲ ಬದಲಾಯ್ತು ಅಂತಾರೆ. ಏನೂ ಬದಲಾಗೋದಿಲ್ಲ. ನೋಡುವ ನೋಟ ಬದಲಾಗುತ್ತದೆ ಅಷ್ಟೇ..ಅಂದು ನಾವು ಕಿತ್ತಾಡಿದರೆ ಅಮ್ಮ ತಲೇನೆ ಹಾಕ್ತಾ ಇರ್ಲಿಲ್ಲ ಅವ್ರೇ ಸರಿ ಹೋಗ್ತಾರೆ ಅಂತ, ನನ್ನ ಮಕ್ಕಳು ಕಿತ್ತಾಡುವಾಗ ನಾನು ಇಬ್ಬರಿಗೂ ಸಮಾಧಾನ ಹೇಳಿ ನಗಿಸ್ತಾ ಇದ್ದೆ ... (ಈಗ ನಾಲ್ಕು ಬಿಡ್ತಾರೆನೋ !!)
ವರ್ಷಗಳ ಹಿಂದಿನ ನಾವು , ೧೫ ವರ್ಷಗಳ ಹಿಂದಿನ ನಮ್ಮ ಮಕ್ಕಳು, ಈಗಿನ ಪುಟ್ಟ ಮಕ್ಕಳು, ಒಂದು ೭-೮ ವರ್ಷಗಳ ನಂತರದ ಮೊಮ್ಮಕ್ಳು.... ಯಾವುದೂ ಬದಲಾಗೋದಿಲ್ಲ ..
ಮನಸ್ಸು ಮನೆಯ ಮುಂದಿನ ಹೊಂಗೆ ಚಿಗುರಿನಂತೆ ಹಸಿರು .... ಹಸಿರು ಸಮೃದ್ಧಿಯ ಸಂಕೇತ , ಸ್ನೇಹದ, ಸಂತಸದ , ಅರಿತುಕೊಂಡು ನಡೆಯುವ .... ಸಮೃದ್ಧಿಯ ಸಂಕೇತ :))))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...