Thursday, 23 March 2017

ಪಕ್ಕದ ಮನೆಯಲ್ಲಿ ಹಿರಿಯ ದಂಪತಿಯಿದ್ದಾರೆ . ಆ ಹಿರಿಯಾಕೆ ಬೆಳಿಗ್ಗೆ ನಾ ಬಾಗಿಲಿಗೆ ನೀರು ಹಾಕುವಾಗಲೋ ಅಥವ ಸಂಜೆ ಗಿಡಗಳನ್ನ ನೋಡುವಾಗಲೋ ಹೊರಗಿದ್ದರೆ ಮಾತನಾಡಿಸ್ತಾರೆ. ಊಟ ಆಯ್ತಾ ಸುನಿತಾ ಅನ್ನೋದ್ರಿಂದ ಹಿಡಿದು ಸಮಯ ಸಿಕ್ಕಾಗ ಕೆಲವೊಂದು ಅಡುಗೆಗಳನ್ನೂ ಮಾಡೋದು ಹೇಳಿಕೊಡ್ತಾರೆ .. ಮೊನ್ನೆ ಸಂಜೆ "ಮಹಿಳಾ ದಿನ ಅಂತೆ , ಆ FM ಅಲ್ಲಿ ಹೇಳ್ತಾ ಇದ್ರು ಹಾಡುಗಳೂ ಬರ್ತಾ ಇದೆ ಅಂದ್ರು .. 'ಹೊಂ ಮಾ, ಈವತ್ತು ಮಹಿಳಾ ದಿನ ಅಂತೆ ' ಅಂದೆ ... 'ಅಯ್ ಏನ್ ಹಾಕೊಂಡ್ರೆ ಏನು, ಏನ್ ಕೇಳಿದ್ರೆ ಏನು ಬಿಡಿ ಸುನೀತಾ, ಒಂದ್ ದಿನ ಅಷ್ಟೇ .. ಹೆಣ್ ಮಕ್ಲಿಗೆ , ಹೆಂಗಸರಿಗೆ ಮರ್ಯಾದೆ ಕೊಡದ ಕಡೆ ದೇವ್ರು ಸಾಥ್ ಕೊಡಲ್ಲ 'ಅಂದ್ರು .. ನಕ್ಕು 'ಇದ್ಯಕ್ಕಮ್ಮ ಹಿಂಗಂತೀರಾ ' ಅಂದೆ
'ಕೇಳ್ಕೊಳಿ, ಈ ಮಹಾಭಾರತದ ಭೀಷ್ಮ..ರಾಮಾಯಣದ ಜಟಾಯು ಇಲ್ವಾ , ಇವೆರಡು ಪಾತ್ರಗಳ ಸಾವು ಒಂದ್ ತರ ಒಂದೇ ತರ (same to same ಅಂದ್ರು) !!! ಜಟಾಯು ತಾಯಿಯಂತಹ ಸೀತೆಗಾಗಿ ಹೋರಾಡ್ತಾ ಹೋರಾಡ್ತಾ ಪೆಟ್ಟಾಗಿ ರಾಮನ ಬರುವುವಿಕೆಗಾಗಿ ಕಾಯ್ತಾನೆ , ರಾಮ ಬಂದಾಗ ಅವನ ತೊಡೆಯ ಮೇಲೆ ತಲೆಯಿಟ್ಟು ಪ್ರಾಣ ಬಿಡ್ತಾನೆ .. ಅವನ ಸಾವು ಭಗವಂತನ ತೊಡೆಯ ಮೇಲೆ ಆಗುತ್ತೆ ... ಭೀಷ್ಮ ಮಗಳಂತಹ ದ್ರೌಪದಿಯ ವಸ್ತ್ರಾಪಹರಣದ ಕಾಲದಲ್ಲಿ ಮೌನವಾಗಿ ಕಣ್ ಮುಚ್ಚಿ ಕುಳಿತುಕೊಳ್ತಾನೆ . ಮಹಾಭಾರತದ ಯುದ್ಧದಲ್ಲಿ ಕಡೆಗೆ ತನ್ನ ಸಾವಿಗೆ ತಾನೇ ಸಮಯ ಗೊತ್ತು ಮಾಡಿಕೊಂಡು ಶರಶ್ಯಯೆಯಲ್ಲಿ ಮಲಗಿ ಸಾವಿಗೆ ಕಾಯ್ತಾ ತನ್ನ ತಪ್ಪುಗಳಿಗೆ ಮರುಗುತ್ತಾ, ಪಶ್ಚಾತಾಪ ಪಡ್ತಾ ಸಾಯ್ತಾನೆ ಕಡೆಗೆ...ಯತ್ರ ನಾರ್ಯಸ್ತು ....... ಕೇಳಿಲ್ವಾ ' ಅಂದ್ರು
ಸುಮ್ನೆ ಹಂಚಿಕೊಳ್ಳಬೇಕು ಅನಿಸ್ತು .... :)))
'ಒಬ್ಬಳನ್ನ ಪ್ರೀತಿ ಮಾಡುವಾಗ ಮತ್ತೊಬ್ಬಳನ್ನ ಪ್ರೀತಿ ಮಾಡುವುದು ತಪ್ಪಾ ?' let me be very clear, ಆ ಒಬ್ಬಳು ನಮ್ಮನ್ನ ಪ್ರೀತಿ ಮಾಡದೆ ಇದ್ದಾಗ ಮತ್ತೊಬ್ಬಳನ್ನ ಪ್ರೀತಿ ಮಾಡುವುದು ತಪ್ಪಾ?. ನೀ ಯಾವಾಗ್ಲಾದ್ರೂ ಹಿಂಗೆ ಮಾಡಿದ್ದೀಯಾ .. ಅಪ್ಪ ನಿನ್ನನ್ನ ಹೆಂಗೆ propose ಮಾಡ್ತು ನೀ ಅಷ್ಟೊಂದು ಪ್ರೀತಿಸ್ತೀಯಲ್ಲಾ , ಇಷ್ಟ್ ವರ್ಷ ಆದ್ರೂ ಅಪ್ಪ ಹೆಂಗೆ ನಿನ್ನ ಅಷ್ಟು ಪ್ರೀತಿಸುತ್ತೆ ! ನೀ ಯಾರನ್ನಾದ್ರೂ ಲವ್ ಮಾಡಿದ್ಯಾ !? ಇಲ್ಲಾ ನಿಂಗೆ ಯಾರಾದ್ರೂ propse ಮಾಡಿದ್ರಾ ? ನನಗೂ ಕಾರ್ತಿಗೂ ೪ ವರ್ಷ ಗ್ಯಾಪ್ ಬೇಕಿತ್ತಾ ?
ವಯಸ್ಸಿಗೆ ಬಂದ ಮಕ್ಕಳನ್ನ ಗೆಳೆಯರ ತರ ನೋಡಬೇಕು ಅಂತ ನಡೆದುಕೊಂಡಿದ್ದರ ಪರಿಣಾಮ ... ಪುಣ್ಯಕ್ಕೆ ಈ ಪ್ರಶ್ನೆಗಳಿಗೆ ಉತ್ತರಿಸಿ ಅಂತ ಅಂಕಗಳನ್ನ ಕೊಟ್ಟಿಲ್ಲ ..ಅದೆಷ್ಟ್ ಪುಣ್ಯ ಮಾಡಿರೋದಕ್ಕೆ ಇಂತಹವು ಹುಟ್ಟಿದ್ದಾವೊ ಕಾಣೆ !!!!!!!
ಒಬ್ಬ ಸಾಧು ಒಂದುಸಮುದ್ರ ದಂಡೆಯಲ್ಲಿ ಬೆಳಿಗ್ಗೆಬೆಳಿಗ್ಗೆ ಧ್ಯಾನ ಮಾಡಲು ಹೋಗ್ತಾನೆ . ತಟದಲ್ಲಿ ಒಬ್ಬ ವ್ಯಕ್ತಿ ಒಂದು ಹೆಂಗಸಿನ ತೊಡೆಯ ಮೇಲೆ ತಲೆಯಿಟ್ಟು ಮಲಗಿರ್ತಾನೆ , ಪಕ್ಕದಲ್ಲಿ ಒಂದೆರಡು ಬಾಟಲಿಗಳು ಇರ್ತಾವೆ.
ಸನ್ಯಾಸಿ ಅದನ್ನು ನೋಡಿ ' ಛೆ ಎಷ್ಟು ಕೆಟ್ ಹೋಯ್ತು ಪ್ರಪಂಚ . ಬೆಳಿಗ್ಗೆಬೆಳಿಗ್ಗೆ ಕುಡಿದು ಹೆಣ್ಣಿನ ತೊಡೆಯಲ್ಲಿ ಮಲಗಿದ್ದಾನಲ್ಲ' ಅಂತ ಹೇವರಿಸುತ್ತಾನೆ. 
ಅಷ್ಟ್ರಲ್ಲಿ ಒಬ್ಬಾಕೆ 'ಕಾಪಾಡಿ ಕಾಪಾಡಿ, ಮಗು ಮುಳುಗ್ತಾ ಇದೆ' ಅಂತ ಕೂಗುತ್ತಾಳೆ . ಮಲಗಿದ್ದ ವ್ಯಕ್ತಿ ಎಚ್ಚೆತ್ತು ಸಾಗರದೊಳಗೆ ಇಳಿದು ಮಗುವನ್ನ ಉಳಿಸುತ್ತಾನೆ .. 
ಈಗ ಸನ್ಯಾಸಿ ಗೊಂದಲಕ್ಕೊಳಗಾಗುತ್ತಾನೆ 'ಇವನ್ನನ್ನ ಒಳ್ಳೆಯವನು ಎನ್ನಲೋ ಕೆಟ್ಟವನು ಎನ್ನಲೋ !?'
ಆ ವ್ಯಕ್ತಿಯನ್ನೇ ಕೇಳಿಬಿಡೋಣ ಅಂತ ಹೋಗ್ತಾನೆ 'ಯಾರಪ್ಪ ನೀನು? ಏನ್ ಕೆಲಸ ಮಾಡ್ತೀಯ?ಇಷ್ಟ್ ಬೆಳಿಗ್ಗೆಬೆಳಿಗ್ಗೆ ಇಲ್ಲೇನು ಮಾಡ್ತಾ ಇದ್ದೀಯ' ಅಂತಾನೆ ..
ಆ ವ್ಯಕ್ತಿ ಹೇಳ್ತಾನೆ 'ಅಯ್ಯಾ , ನಾನೊಬ್ಬ ಬೆಸ್ತರವ , ಸುಮಾರು ತಿಂಗಳೇ ಆಗಿತ್ತು ಮನೆ ಬಿಟ್ಟು . ಇಂದಷ್ಟೇ ಸಾಗರನ ಮಡಿಲಿಂದ ಹೊರ ಬಂದೆ . ಅದೆಷ್ಟೋ ದಿನಗಳ ನಂತರ ನೆಲ ಕಂಡ ಸಂತಸಕ್ಕೆ , ಈಕೆ ತಂದ ನೀರು ಆಹಾರ ಸೇವಿಸಿ ಹಾಗೆ ಒರಗಿದ್ದೆ ಅಷ್ಟೇ .. ಯಾರೋ ನೀರಲ್ಲಿ ಮುಳುಗಿದ್ದ ಕಂಡು ಎಚ್ಚರಗೊಂಡು ರಕ್ಷಿಸಿದೆ ಅಷ್ಟೇ .. ಈಕೆ ನನ್ನ ತಾಯಿ '
ಸನ್ಯಾಸಿ ತಾ ಯೋಚಿಸಿದ ಪರಿಗೆ ನಾಚುತ್ತಾನೆ ....
ನರಸಿಂಗ ರಾವ್ ಸರ್ ಅವ್ರ ಗೋಡೆಯಲ್ಲಿತ್ತು , ಭಾವಾನುವಾದ ನನ್ನದು ಅಷ್ಟೇ
ಹಂಚಿಕೊಳ್ಳಬೇಕು ಅನಿಸ್ತು :))
ಒಬ್ಬ ರಾಜ . ಒಳ್ಳೆಯವ .. ಮೊದ್ಲೇ ರಾಜ ಅದರ ಮೇಲೆ ಲಕ್ಷ್ಮಿ ಅವನರಮನೆಯಲ್ಲಿ ಕೈ ಕಟ್ಟಿ ಕುಳಿತ್ತಿದ್ದಳು . ಚಿನ್ನ ಬಟ್ಟಲ್ಲಲ್ಲೇ ಊಟ ಮಾಡ್ತಾ ಇದ್ದ . ಆಹಾರದ ವಿಷ್ಯದಲ್ಲಿ ತುಂಬಾನೇ ಆಸಕ್ತಿ . ಹೊಟ್ಟೆ ತುಂಬಾ ರುಚಿರುಚಿಯಾಗಿ ತಿನ್ತಾ ಇದ್ದ... ಒಮ್ಮೆ ಅವನು ಒಂದು ಯುದ್ಧಕ್ಕೆ ಹೋಗಬೇಕಾಗುತ್ತೆ . ಸರಿ ಸೈನ್ಯದ ಜೊತೆಗೆ ಅವನ ಆಹಾರದ ಆಸಕ್ತಿ ತಿಳಿದಿದ್ದ ಮಂತ್ರಿ ೧೦೦ ಒಂಟೆಗಳ ಮೇಲೆ ಆಹಾರ ಸಾಮಗ್ರಿಗಳನ್ನ ಹೊರಡಿಸ್ತಾನೆ ... ಒಂದಷ್ಟು ದಿನ ಯುದ್ಧ ನಡೆಯುತ್ತದೆ .. ದುರಾದೃಷ್ಟಕ್ಕೆ ರಾಜ ಯುದ್ಧದಲ್ಲಿ ಸೋತು ಹೋಗ್ತಾನೆ . ಸೆರೆಯಾಗ್ತಾನೆ .. ಒಂದು ದ್ವೀಪದಲ್ಲಿ ಅವನನ್ನ ಇರಿಸಲಾಗುತ್ತದೆ . ಜೊತೆಗೊಬ್ಬ ಅಡುಗೆಯವ ಇರ್ತಾನೆ. ಒಂದಷ್ಟು ದಿನಗಳ ನಂತರ ಅಡುಗೆಯ ಸಾಮಗ್ರಿಗಳೆಲ್ಲ ಮುಗಿದಿರುತ್ತದೆ .. ರಾಜ ಹಸಿವು ಅಂದಾಗ ಅಡುಗೆಯವ ಉಳಿದ ಒಂಚ್ಚುರು ಅಕ್ಕಿಯನ್ನೇ ಒಲೆಯ ಮೇಲಿಟ್ಟು ದ್ವೀಪದಲ್ಲಿ ತಿನ್ನೋ ಅಂತಹ ಹಣ್ಣಿದೆಯೇನೋ ಎಂದು ಹುಡುಕಲು ಹೋಗುತ್ತಾನೆ ... ರಾಜ ಹಾಗೆ ಮರದ ಕೆಳಗೆ ಒರಗಿರ್ತಾನೆ .. ಒಂದು ನಾಯಿ ಬಂದು ಮಡಿಕೆಯನ್ನ ಉರುಳಿಸಿ ಅರೆಬೆಂದ ಅನ್ನವನ್ನೇ ತಿಂದು ಹೊರತು ಹೋಗುತ್ತದೆ ... ರಾಜ ಅದನ್ನ ಓಡಿಸುವ ಯತ್ನವನ್ನೂ ಮಾಡದೆ ನಗುತ್ತಾನೆ .... ಅಡುಗೆಯಾತ ಬಂದಾಗ ಉರುಳಿದ ತಪ್ಪಲೆ ಹಾಗು ನಗುವ ಅರಸನನ್ನ ನೋಡುತ್ತಾನೆ .. ಅರಸ ಅವನಿಗೆ 'ನೆನ್ನೆ ಮೊನ್ನೆಯವರೆಗೂ ೧೦೦ ಒಂಟೆ ಹೊರುವಷ್ಟು ಆಹಾರ ನನ್ನದಾಗಿತ್ತು .... ಈಗ ನೋಡು ಒಂದು ನಾಯಿಗೆ ಕೂಡ ಸಾಲದಂತಾಗಿದೆ ... ಬದುಕೆಂದರೆ ಇದೆ ಏನೋ ...ಒಮ್ಮೆ ಅತೀವೃಷ್ಟಿ ಮತ್ತೊಮೆ ಅನಾವೃಷ್ಟಿ .... ಎರಡನ್ನೂ ತುಲನೆ ಮಾಡಿದಾಗ ನಾನೆಷ್ಟರವನು ಎಂದರಿವಾಗಿ ನಗು ಬಂತು ' ಅಂದ . ಕಣ್ಣ ತುಂಬಾ ನೀರು ತುಂಬಿಕೊಂಡ ಅಡುಗೆಯವ ತಾ ಹುಡುಕಿ ತಂದಿದ್ದ ಹಣ್ಣುಗಳನ್ನೇ ರಾಜನಿಗೆ ನೀಡುತ್ತಾನೆ .. ಅದನ್ನೇ ಪ್ರೀತಿಯಿಂದ ತಿನ್ನುತ್ತಾನೆ ರಾಜ ...
ಓದಿದ ಮೇಲೆ ಭಾವಾನುವಾದಿಸಿ ಸುಮ್ನೆ ಹಂಚಿಕೊಳ್ಳಬೇಕು ಅನಿಸ್ತು :))))
ನಮ್ಮ ರಕ್ಷಣಾ ಮಂತ್ರಿಯಾಗಿದ್ರಲ್ಲ ಮನೋಹರ ಪರಿಕರ್ ಅವರು ಹೇಳಿದ ಒಂದು ಕಥೆ/ಪ್ರಸಂಗ ...
ನಾನು ಗೋವಾ ರಾಜ್ಯಕ್ಕೆ ಸೇರಿದವನು. ನಮ್ಮ ಹಳ್ಳಿ ಕಲ್ಲಂಗಡಿ ಹಣ್ಣಿಗೆ ಭಾರಿ ಪ್ರಸಿದ್ಧ. ನಾ ಸಣ್ಣವನಿದ್ದಾಗ ನಮ್ಮ ಹಳ್ಳಿಯಲ್ಲಿ ಪ್ರತಿ ಸುಗ್ಗಿಯ ನಂತರ ಕಲ್ಲಂಗಡಿ ಹಣ್ಣು ತಿನ್ನುವ ಸ್ಪರ್ಧೆ ಇರ್ತಾ ಇತ್ತು .. ಮಕ್ಕಳು ತಮಗೆಷ್ಟು ಬೇಕೋ ಅಷ್ಟು ಹಣ್ಣು ತಿಂದು ಗೆಲ್ಲಬಹುದಿತ್ತು... ವರುಷಗಳ ನಂತರ, ನಾ ಮುಂಬೈಗೆ ಓದಲು ಹೋದೆ.. ಒಂದ್ ೬ ವರ್ಷಗಳ ಓದು ಮುಗಿದ ಮೇಲೆ ಹಳ್ಳಿಗೆ ಹಿಂದಿರುಗಿದೆ. .. ಅಲ್ಲಿದ್ದ ದಿನಗಳಲ್ಲಿ ನಮ್ಮೊರಿನ ಪ್ರಸಿದ್ಧ ಕಲ್ಲಂಗಡಿ ಹಣ್ಣನ್ನು ಹುಡುಕಿ ಮಾರುಕಟ್ಟೆಗೆ ಹೋಗಿದ್ದೆ . ಎಲ್ಲಿ !!ಅಂದಿನ ದೊಡ್ಡ ದೊಡ್ಡ ಹಣ್ಣುಗಳ ಸುಳಿವೇ ಇರಲಿಲ್ಲ. ಇದ್ದ ಸಣ್ಣ ಹಣ್ಣುಗಳು ನನ್ನ ಮನ ಸೆಳೆಯಲಿಲ್ಲ.
ಆ ಹಣ್ಣುಗಳು ಬೆಳೆದು ತಿನ್ನುವ ಸ್ಪರ್ಧೆ ಇಡ್ತಾ ಇದ್ದ ರೈತರ ಮನೆಗೆ ಹೋದೆ .. ಈಗೆಲ್ಲ ಅವರ ಮಕ್ಕಳದೇ ಕಾಲವಾಗಿತ್ತು... ಅವರೂ ಅಂತಹ ಸ್ಪರ್ಧೆ ನಡೆಸ್ತಾ ಇದ್ರೂ ಅದರಲ್ಲಿ ಒಂದು ದೊಡ್ಡ ವ್ಯತ್ಯಾಸವಿತ್ತು. ಹಿರಿಯ ರೈತ ತಾ ಬೆಳೆದ ದೊಡ್ಡದೊಡ್ಡ ಹಣ್ಣುಗಳನ್ನ ಸ್ಪರ್ಧೆಗೆ ಇಟ್ಟು , ಮಕ್ಕಳಿಗೆ ಹಣ್ಣು ತಿನ್ನುವಾಗ ಹಣ್ಣಿನಬೀಜಗಳನ್ನ ಕಚ್ಚದೆ ಒಂದು ಕಡೆ ಹಾಕಲು ಹೇಳ್ತಾ ಇದ್ದ. ಆ ಬಲಿತ ಬೀಜಗಳನ್ನ ಮುಂದಿನ ಬಿತ್ತನೆಗೆ ಒಣಗಿಸಿ ಇಡ್ತಾ ಇದ್ದ .. ಒಳ್ಳೆಯಹಣ್ಣುಗಳನ್ನ ಸ್ಪರ್ಧೆಗೆ ಇಡ್ತಾ ಇದ್ದ ಕಾರಣ ಅವನಿಗೆ ಒಳ್ಳೆಯ ಬಿತ್ತನೆ ಬೀಜಗಳು ಲಭ್ಯವಾಗುತ್ತಾ ಇದ್ವು.... ವ್ಯವಸ್ಸಾಯ ಯಾವಾಗ ಅಪ್ಪನಿಂದ ಮಗನಿಗೆ ಬಂತೋ, ಅವನು ಬೆಳೆದ ದೊಡ್ಡ ದೊಡ್ಡ ಹಣ್ಣುಗಳನ್ನ ಮಾರುಕಟ್ಟೆಗೆ ಕಳಿಸ್ತಾ ಇದ್ದ.. ಒಳ್ಳೆ ಹಣ ಗಳಿಸಿದ , ಸಣ್ಣ ಸಣ್ಣ ಹಣ್ಣುಗಳನ್ನ ಸ್ಪರ್ಧೆಗೆ ನೀಡ್ತಾ ಇದ್ದ ... !!! ಬರುಬರುತ್ತಾ ಬಿತ್ತನೆ ಬೀಜದ ಗುಣಮಟ್ಟ ಕಡಿಮೆಯಾದನಂತೆಲ್ಲ , ಹಣ್ಣುಗಳು ಸಣ್ಣದಾಗುತ್ತಲೇ ಹೋದವು ... ಕಡೆಗೆ ದೊಡ್ಡ ಹಣ್ಣುಗಳು ಕಣ್ಮರೆಯಾದವು !! ಇದು ನೋವಿನ ಸಂಗತಿ
ಸಂಸ್ಕಾರ ಸಂಸ್ಕೃತಿ ಕೂಡ ಹೀಗೆ.. ಅದೆಷ್ಟೋ ವರುಷಗಳ ಪರಿಶ್ರಮದಿಂದ ಬದುಕಿನ ಒಂದು ಚೆಂದದ ಭಾಗವಾಗಿರುತ್ತದೆ .... ಒಂದಿಬ್ಬರು, ಮತ್ತೊಂದಿಬ್ಬರು, ಇನ್ನೊಂದಿಬ್ಬರು ಅದನ್ನ ಮೂಲೆಗೊತ್ತುತ್ತಾ ಬಂದಂತೆ ಅದು ಮರೆಯಾಗುತ್ತಾ ಹೋಗುತ್ತದೆ .... ಹೆಗಲ ಮೇಲಿರುವ ಅಂತಹ heritage/culture ನ ನಮ್ಮ ಕಿರಿಯರ ಹೆಗಲ ಮೇಲೆ ಸರಿಸುವ ಹೊಣೆ ನಮ್ಮದೇ ಅನಿಸ್ತು ...
ಭಾವಾನುವಾದಿಸಿ ಹಂಚಿಕೊಳ್ಳಬೇಕು ಅನಿಸ್ತು :)))
ಕೈ ಇನ್ನೂ ನೋಯ್ತಾ ಇದ್ಯಾ ' 
'ಹ್ಞೂ' ಅಂದ್ಲು ಮೊಗವ ಉಬ್ಬಿಸಿ 
'ಒಂದು ಮ್ಯಾಜಿಕ್ ಮಾಡ್ಲಾ ? ' ಅಂದ ಅವಳ ಬೆರಳಿಗೆ ಮುತ್ತು ಕೂಡುತ್ತಾ 
"ಅದೇ 'ಓಂ, ಛೂ ಮಂತ್ರ ಗಾಳಿ '... ಅದೇ ತಾನೇ , ಅಪ್ಪಾ ನಾನೀಗ ದೊಡ್ಡೋಳಾಗಿದ್ದೀನಿ ಗೊತ್ತಾ " ಅಂದ್ಲು ಅಪ್ಪನ ಹೆಗಲಿಗೊರಗುತ್ತಾ .. 
ನಸುನಕ್ಕ ಅಪ್ಪ ..... ಅವನ ಕಣ್ಣಿಗೆ ಅವಳಿನ್ನೂ ಅವನತ್ತೆ ಪ್ರಸವದ ಕೋಣೆಯಿಂದ ತಂದುಕೊಟ್ಟ ಮುದ್ದಮ್ಮನೇ :))) 
And I smile as ever :))))))))))))
ನಮ್ಮ ಮನೆಯ ಹಿಂದಿನ ಮನೆಗೆ ಒಂದು ಹೊಸ ಕುಟುಂಬ ಬಾಡಿಗೆಗೆ ಬಂದಿದೆ. ಸರಿಯಾಗಿ ಪುಟ್ಟಿಯ ಕೋಣೆಯ ಕಿಟಕಿಗೆ ಅವರ ಮನೆಯ ಹಿಂಬದಿಯ ಗ್ರಿಲ್ಸ್ ತೆರೆದುಕೊಳ್ಳುತ್ತದೆ. ಮನೆಗೆ ಬಂದಿರೋರು ಎಲ್ಲೋ ಕೊಪ್ಪಲು (ನಮ್ಮ್ ಮೈಸೂರಿನ ಕಡೆ ಕೊಪ್ಪಲು ಪಡುವಾರಹಳ್ಳಿಯವ್ರು ಅಂದ್ರೆ ಒಂದಷ್ಟು ಹೆಚ್ಚೇ ಮಾತುಗಾರರು, ಜೋರಿನವರು ಅನ್ನೋ ಅರ್ಥ!!) ಕಡೆಯವರಿರಬೇಕು . ಒಂದೇ ಸಮ ಮಾತಾಡ್ತಾ ಇರ್ತಾರೆ . ಇಂತಹದೇ ಅಂತಿಲ್ಲ, ಒಟ್ಟಾರೆ ಜೋರಾಗಿ ಟಿವಿ ಹಾಗು ಮಾತುಕತೆ ಆಗ್ತಾ ಇರುತ್ತೆ.. ಮೊದ್ಲೇ ಪುಟ್ಟಿ ಒಂದ್ ತರ . ಅವಳಿಗೆ ಈ ಗಲಾಟೆ ಎಲ್ಲಾ ಆಗಿಬರೋದಿಲ್ಲ.. ಜೊತೆಗೆ ಈ ಬಾರಿ ಎರಡನೇ PUC ಅನ್ನೋ ತಲೆಬಿಸಿ ಅವಳಿಗೆ (ಓದೋದು ಅಷ್ಟರಲ್ಲೇ ಇದೆ ಆದ್ರೆ ತಲೆಬಿಸಿಗೇನು ಕಮ್ಮಿ ಇಲ್ಲ !!). ಒಂದೆರಡು ದಿನ ನೋಡಿ ಆಮೇಲೆ ನಾನೇ ನಿಧಾನವಾಗಿ ಅವರಿಗೆ ಹೇಳಬೇಕು ಅಂದ್ಕೊಳ್ತಾ ಇದ್ದೆ. (ನನಗೂ ಹೇಳೋಕೆ ಭಯ..ಮೊದ್ಲೇ ಜೋರಾಗಿ ಕಾಣ್ತಾರೆ ಏನಪ್ಪಾ ಅಂತ, ಇನ್ನು ನಮ್ಮ ಮನೆದೇವ್ರು ಅದಕ್ಕಲ್ಲೇ ತಲೆ ಕೆಡಿಸಿಕೊಳ್ಳೋ ಜೀವವೇ ಅಲ್ಲ . ಅಮ್ಮನ ಹತ್ರ ಕೂತ್ಕೊಂಡ್ ಓದ್ಕೋ ಮಗ ಬಾಲ್ಕನಿಯಲ್ಲಿ ಅಂತಾರೆ ಹೊರ್ತು ಹೇಳೋ ಛಾನ್ಸ್ ಇಲ್ಲವೇ ಇಲ್ಲ !!) ಕಾರ್ತಿ ಕೂಡ ಹೇಳೋ ರೀತಿಯಲ್ಲೇ ಹೇಳು ಅಮ್ಮ , ಕೇಳದೆ ಇದ್ರೆ ಆಮೇಲೆ ನೋಡೋಣ ಅಂದ.
ಎರಡು ದಿನ ಆಯ್ತು. ಮಗಳು "ಕುಳ್ಳಿಮಾ, ಆ ಹಿಂದ್ಗಡೆ ಮನೆಯವ್ರು ...' ಅಂತ ಹೇಳ್ತಾ ಇದ್ಳು. ನಾನು 'ಒಂದೆರಡು ದಿನ ತಡ್ಕೋ ಮಗ, ನಾನೇ ಹೇಳ್ತಿನಿ , ಈಗ ಹೊಸದಾಗಿ ಬಂದಿದ್ದಾರೆ ಅಲ್ವ, ಹೋಗೋರು ಹೋದ ಮೇಲೆ ಅವರೂ ಸೆಟ್ಲ್ ಆಗ್ತಾರೆ ' ಅಂದೆ .. ಪುಟ್ಟಿ 'ಮೌ, ಫುಲ್ ಕೇಳ್ಕೊ, ಆ ಹಿಂದ್ಗಡೆ ಮನೆಯಲ್ಲಿ ಒಂದೆರಡು ಚುಲ್ಟುಗಳಿದ್ದಾವೆ , ಅದೇನ್ ಮಾತಾಡ್ತಾವೆ ಗೊತ್ತಾ? ಈಗ ಬೆಳಿಗ್ಗೆ ಆ ಹುಡುಗಿ ಟಾಯ್ಲೆಟ್ಗೆ ಹೋಗಿರಬೇಕು , ಈ ಚಿಕ್ಕ ಹುಡ್ಗ ಒಂದೇ ಸಮ ಬಾಗಿಲು ತೆಗಿ ಅಂತ ಕಿರುಚ್ತಾ ಇತ್ತಾ .. ಅವ್ಳು 'ನಾ ಹೋದಾಗ್ಲೆ ನಿಂಗೂ ಬರುತ್ತೆ ಅಲ್ವೇನೋ ' ಅಂತ ಬೈದು ಬಾಗಿಲು ತೆಗೆದು ಅವನನ್ನ ಒಳಗೆ ಬಿಟ್ಟು ಚಿಲ್ಕ ಹಾಕೊಂಡಿರಬೇಕು! ಅವ್ನು ಚಿಲ್ಕ ತೆಗಿ ಅಂತ, ಅವ್ಳು 'ಅಕ್ಕ ಚಿಲ್ಕ ತೆಗಿ ಅಕ್ಕ' ಅನ್ನು ತೆಗಿತೀನಿ ಇಲ್ಲ ಅಂದ್ರೆ ತೆಗೆಯೊಲ್ಲ ಅಂತ. ಅವ್ನೂ ಒಂದಷ್ಟು ರೋಪ್ ಹೊಡೆದ. ಆಮೇಲೆ ಅವಳು ಹೇಳ್ದ ಹಂಗೆ 'ಅಕ್ಕ ಚಿಲ್ಕ ತೆಗಿ ಅಕ್ಕ' ಅಂದ ಇವ್ಳು ಇನ್ನೊಂದಷ್ಟು ಆಟ ಆಡಿಸಿ ತೆಗೆದ್ಲು ಅನಿಸುತ್ತೆ .. ಹೊರಗೆ ಬಂದ ಮೇಲೆ ಶುರು ಆಯ್ತು ನೋಡು ಕಿರಿಕ್ಕೂ..ಅವರಮ್ಮ ಬಂದು ನಾಲ್ಕು ಬಿಟ್ರು ಅನಿಸುತ್ತೆ :) ನಾ ಫಿದಾ ಆಗ್ಬಿಟ್ಟಿದ್ದೀನಿ ಅಮ್ಮ ಅವೆರಡಕ್ಕೆ , same ಕಾರ್ತಿ ನಾನು ಸಣ್ಣವರಿದ್ದಾಗ ಆಡಿದ್ದು ನೆನಪಾಗ್ತಾ ಇತ್ತು, I miss ಅಮ್ಮ' ಅಂದ್ಳು!!ನನಗೂ ನನ್ ಐಕ್ಳ ತರ್ಲೆ ನೆನಪಿಗೆ ಬಂತು ಜೊತೆಗೆ ನನ್ನ ತಮ್ಮ ನಾನು ಆಡ್ತಾ ಇದ್ದ ಕದನಗಳು ನೆನಪಿಗೆ ಬಂದ್ವು .
ಸರಿ ಅದೇ ನೆಪ ಇಟ್ಕೊಂಡು ಪುಟ್ಟಿಯ ಕಿಟಕಿಯ ಬಳಿ ನಿಂತು ಆ ಮಕ್ಕಳಿಗೆ 'ಓಯ್ ಅದೆಷ್ಟ್ ಗಲಾಟೆ ಮಕ್ಳ ನಿಮ್ದು , ಅಕ್ಕ ಓದ್ಕೊಬೇಕಂತೆ.. ಇಲ್ಲೇ ಕಿಟಕಿ ಹತ್ರ ಇರ್ತಾಳೆ ಗಲಾಟೆ ಮಾಡಿದ್ರೆ ಬೈತಾಳೆ ಅಂತ ಹೇಳಿ, ಅವರಮ್ಮನಿಗೆ ನಿಮ್ ಮಕ್ಕಳಿಗೆ ನಮ್ ಪುಟ್ಟಿ ಫ್ಯಾನ್ ಆಗ್ಬಿಟ್ಟಿದ್ದಾಳೆ, ಅವಳ ರೂಮ್ ಇದು, ಅವ್ಳು ಓದ್ಕೊಳ್ತಾ ಇರ್ತಾಳೆ ಈ ಸಾರಿ ಎರಡನೇ PUC,.... ' ಅಂದೆ. ಆಕೆ ಕೂಡ ಒಂದೆರಡು ಮಾತು ಆಡಿದ್ರು. ತಲುಪಿಸಬೇಕಾಗಿದ್ದುದ್ದನ್ನ ತಲುಪಿಸಿದ್ದೆ .. ಟಿವಿ ಸದ್ದು ಕಡಿಮೆಯಾಗಿದೆ! ಮಾತುಕತೆಯ ಒಂದಷ್ಟು ಸೌಂಡ್ ಕಡಿಮೆಯಾಗಿದೆ ! ಮುದಗೊಳಿಸೋ ಮಕ್ಕಳ ಕಿತ್ತಾಟ ಹಾಗೆ ಇದೆ .... :)
ಕಾಲ ಬದಲಾಯ್ತು ಅಂತಾರೆ. ಏನೂ ಬದಲಾಗೋದಿಲ್ಲ. ನೋಡುವ ನೋಟ ಬದಲಾಗುತ್ತದೆ ಅಷ್ಟೇ..ಅಂದು ನಾವು ಕಿತ್ತಾಡಿದರೆ ಅಮ್ಮ ತಲೇನೆ ಹಾಕ್ತಾ ಇರ್ಲಿಲ್ಲ ಅವ್ರೇ ಸರಿ ಹೋಗ್ತಾರೆ ಅಂತ, ನನ್ನ ಮಕ್ಕಳು ಕಿತ್ತಾಡುವಾಗ ನಾನು ಇಬ್ಬರಿಗೂ ಸಮಾಧಾನ ಹೇಳಿ ನಗಿಸ್ತಾ ಇದ್ದೆ ... (ಈಗ ನಾಲ್ಕು ಬಿಡ್ತಾರೆನೋ !!)
ವರ್ಷಗಳ ಹಿಂದಿನ ನಾವು , ೧೫ ವರ್ಷಗಳ ಹಿಂದಿನ ನಮ್ಮ ಮಕ್ಕಳು, ಈಗಿನ ಪುಟ್ಟ ಮಕ್ಕಳು, ಒಂದು ೭-೮ ವರ್ಷಗಳ ನಂತರದ ಮೊಮ್ಮಕ್ಳು.... ಯಾವುದೂ ಬದಲಾಗೋದಿಲ್ಲ ..
ಮನಸ್ಸು ಮನೆಯ ಮುಂದಿನ ಹೊಂಗೆ ಚಿಗುರಿನಂತೆ ಹಸಿರು .... ಹಸಿರು ಸಮೃದ್ಧಿಯ ಸಂಕೇತ , ಸ್ನೇಹದ, ಸಂತಸದ , ಅರಿತುಕೊಂಡು ನಡೆಯುವ .... ಸಮೃದ್ಧಿಯ ಸಂಕೇತ :))))
ಸಂಜೆ ಹೂ ತರೋಣ ಅಂತ ಕೆ ಆರ್ ಮಾರುಕಟ್ಟೆಗೆ ಹೋಗಿದ್ವಿ . ಹೂ ತೆಗೆದುಕೊಂಡು ವಾಪಸ್ಸು ಬರ್ತಾ ಇದ್ವಿ ... ನಮ್ಮ ವಿ ವಿ ಪುರಂ ಕಡೆ ಬಂದಾಗ ಒಂದು 'ಟೈಗರ್' (ಈ ನೋ ಪಾರ್ಕಿಂಗ್ ಅಲ್ಲಿ ನಿಲ್ಲಿಸಿದ ಗಾಡಿಗಳನ್ನ ಹೊತ್ತೊಯ್ಯುವ ವಾಹನ !!) ನಮ್ಮ ಮುಂದೆಯಿಂದಾನೇ ಹೋಯ್ತು ... ನಮ್ಮ ಮನೆದೇವ್ರು ಶುರು ಮಾಡಿದ್ರು ' ನಮ್ ಜನಕ್ಕೆ ಬುದ್ದಿನೇ ಇಲ್ಲ. ಇಲ್ಲೇ ಬರುತ್ತೆ ಅಂತ ಗೊತ್ತಿದ್ದೂ ಗಾಡಿ ಅದ್ಯಾಕ್ ಹಂಗೆ ನಿಲ್ಲಿಸ್ತಾರೋ ಕಾಣೆ, ಅದೇನ್ ತಲೇಲಿ ಜೇಡಿ ಮಣ್ಣು ಇದ್ಯೋ ಇಲ್ಲ ದುಡ್ಡು ಹೆಚ್ಚಾಗಿದೆಯೋ ಗೊತ್ತಿಲ್ಲ .. ಮುನ್ನೂರು ರೂಪಾಯಿ ಸುಮ್ನೆ ಬರುತ್ತಾ 'ಅಂತ ಶುರು ಮಾಡಿದ್ರು ... ನನಗೋ ಹಿಂದೊಮ್ಮೆ ನನ್ನ ತಪ್ಪಿಲ್ಲದೆ ಕೂಡ ಗಾಡಿ ಹೊತ್ತೊಯ್ದು ನನ್ನ ಮಗ ಬಂದು ಸ್ಟೇಷನ್ ಯಿಂದ ಗಾಡಿ ಬಿಡಿಸಿಕೊಂಡು ಬಂದಿದ್ದ ಗಿಲ್ಟು !! ಜೊತೆಗೆ ಮಂಜುಗೆ ಹೇಳದೆ ಉಳಿದಿದ್ದ ಗಿಲ್ಟು !! ನನ್ನನ್ನೇ ಬೈತಾ ಇದ್ದಾನೇನೋ ನನ್ನ ಗಂಡ ಅನ್ನೋ ಕಳ್ಳ ಮನಸ್ಸು :) "ಹೋಗ್ಲಿ ಬಿಡಪ್ಪ , ಕಟ್ಟವರು ಕಟ್ಕೊಳ್ತಾರೆ ನಮಗ್ಯಾಕೆ ನಾವು ಸರಿಯಾಗಿದ್ರೆ ಸಾಕಲ್ವ ' ಅಂದ್ರೆ ಬಿಡಬೇಕಲ್ಲ .... " !@#$#%## ' ಅಂತೆಲ್ಲ ಶುರು ಮಾಡಿಕೊಂಡ್ರು .... ಕಡೆಗೆ ತಡೆಯಲ್ಲಾರದೆ 'ಏನ್ ಈವಾಗ ಆ ಮಾತು ಸಾಕು.. ನಿಲ್ಲಿಸ್ತೀಯೋ ಇಲ್ಲ ಗಾಡಿಯಿಂದ ನೆಗೆದು ಬಿಡ್ಲೊ !!" ಅಂದೆ ... 'ಅಯ್ ಬುಡವ್ವ ಅದಕ್ಕ್ಯಾಕೆ ಇಷ್ಟ್ ಸಿಟ್ಕೊಳ್ತೀಯಾ ' ಅಂತ ಮಾತಿಗೆ ಬ್ರೇಕ್ ಹಾಕಿದ್ರು ....
ಕಳ್ಳ(ಳ್ಳಿಯ)ನ ಮನಸ್ಸು ಹುಳ್ ಹುಳ್ಳಗೆ ಅನ್ನೋದು ನಿಜವೇನೋ :)))
ಈ ನಮ್ಮ ಹಳೆ ಮೈಸೂರು ಭಾಗದಲ್ಲಿ ಶಿವರಾತ್ರಿ ಕಳೆದು, ಯುಗಾದಿಯ ಹೊಸವರ್ಷ ಹುಟ್ಟೋ ಮೊದಲು ಬಹುತೇಕ ಗ್ರಾಮಗಳಲ್ಲಿ ಗ್ರಾಮದೇವತೆಯ ಹಬ್ಬ ಮಾಡುತ್ತಾರೆ. ಬೇಸಿಗೆ ಹುಟ್ಟುವಾಗ ಕಾಡುವ ಅನೇಕ ಕಾಯಿಲೆಗಳು, ಬರಗಳು, ಕೆಡಕುಗಳು ಆಗದೆ ಇರಲಿ ಅನ್ನೋದಕ್ಕೆ ಗ್ರಾಮವ ಕಾಯುವ ದೇವಿಗೆ ಪೂಜೆ ಸಲ್ಲಿಸಿ ಹರಕೆ ತೀರಿಸುತ್ತಾರೆ. ಇದಕ್ಕೆ 'ಮಾರಿ ಹಬ್ಬ ' ಅಂತ್ಲೇ ಹೆಸರು. ಊರಿಗೆ ಊರೇ ಸಿಂಗಾರ ಗೊಳ್ಳುತ್ತದೆ. ಬಂಧುಗಳನ್ನ ಕರೆದು "ಉಣ್ಣಕ್ಕೆ ಇಕ್ಕಿ' ಸಂಭ್ರಮಿಸುತ್ತಾರೆ. ಈಗಲೂ ಮೈಸೂರಿನ ನಗರಪಾಲಿಕೆ ವ್ಯಾಪ್ತಿಗೆ ಬರುವ ಅನೇಕ ಕಾಲೋನಿಗಳಾದ ಪಡುವಾರಹಳ್ಳಿ, ಕನ್ನೇಗೌಡನಕೊಪ್ಪಲು, ತೊಣಚಿಕೊಪ್ಪಲು,ಹಿನಕಲ್, ಹೂಟಗಳ್ಳಿಗಳು ಕೂಡ ಈ ಮಾರಿ ಹಬ್ಬಕ್ಕೆ ಹಬ್ಬಕ್ಕೆ ಸಂಭ್ರಮಿಸೋ ಪರಿ ಚೆಂದ. ಹಸಿ ಅಕ್ಕಿಯಲ್ಲಿ ತಂಬಿಟ್ಟು ಮಾಡಿ ದೇವಿಗೆ ಸಮರ್ಪಿಸುತ್ತಾರೆ. ಹೆಣ್ಣು ಐಕ್ಲ ಸಂಭ್ರಮಕ್ಕೆ ಗಂಡ ಐಕ್ಲು ಸೋತು ಹೋಗುತ್ತಾರೆ:))) ಹಿಂದಿನ ದಿನವೇ ಊರೆಲ್ಲ ಸಿಂಗರಿಸಿ, ಡೋಲು ತಮಟೆ, ಕಹಳೆ ಜೊತೆ , ಹರಕೆ ಹೊತ್ತವರು 'ಬಾಯಿಗೆ ಬೀಗ' (ಪೂರ್ತ ದಿನ ಉಪವಾಸ ಇದ್ದು, ತಂತಿಯನ್ನ ಆ ಕೆನ್ನಯಿಂದ ಈ ಕೆನ್ನೆಯವರೆಗೆ ಚುಚ್ಚಿಸಿಕೊಂಡು ಮೆರವಣಿಗೆಯ ಜೊತೆ ಸಾಗಿ ಕಷ್ಟ ಪರಿಹರಿಸಿದ ದೇವಿಗೆ ಹರಕೆ ತೀರಿಸುತ್ತಾರೆ) ಹಾಕಿದವರು, ಪಂಜು ಹೊತ್ತವರು ರಾತ್ರಿ ಇಡೀ ದೇವಿಯ ಮೆರವಣಿಗೆ ಮಾಡಿ , ಅವಳಿಗೆ ಇಡೀ ಊರ ತೋರಿಸಿ 'ನೋಡ್ದಲ್ಲ, ಹಿಂಗದೆ ನಮ್ಮೂರು, ಹಿಂಗೆ ಮಡ್ಗು, ಎಲ್ಲಿ ಕಷ್ಟ ಐತೆ ಪರ್ಹರ್ಸು(ಪರಿಹರಿಸು)' ಅಂತ ಹೇಳಿ ಮತ್ತೆ ಅವಳ ಗುಡಿಗೆ ಬಿಟ್ಟು ಪೂಜಿಸುತ್ತಾರೆ. ದೇವರ ಹೊತ್ತ ವ್ಯಕ್ತಿ 'ದೇವಿ'ಯೇ ಆಗಿಬಿಟ್ಟಿರುತ್ತಾನೆ ಎಲ್ಲರ ಕಣ್ಣಲ್ಲಿ., ಮನೆಮನೆಯ ಮುಂದೆ ಈಡುಗಾಯಿ ಹೊಡೆದು, ಹಾರ ಹಾಕಿ ದೇವಿಯನ್ನ ಸ್ವಾಗತಿಸಿ ಬೀಳ್ಕೊಡುತ್ತಾರೆ .ಇದು ಈ ಕಡೆ ನಡೆಯೋ ಪದ್ಧತಿ.
ನೆನ್ನೆ ಮೊನ್ನೆ ಮಂಜು ಅವರ ಅಣ್ಣನ ಊರಲ್ಲಿ ಮಾರಿಹಬ್ಬ. ಅಲ್ಲಿಯದು ಮೂಕ ಮಾರಿಯಮ್ಮ. ದೇವರು ಹೊತ್ತ ವ್ಯಕ್ತಿ ಇಡೀ ದಿನ ಉಪವಾಸವಿದ್ದು , ಮೌನವಾಗಿದ್ದು , ಹೊಳೆಯ ಬದಿಯಿಂದ ಊರೆಲ್ಲ ಸುತ್ತಿ ಮಾರೀಗುಡಿಯ ಬಳಿ ಬಂದು ದೇವಿಯ ಒಳಗೆ ಕಳಿಸಿ ಪೂಜೆ ಮಾಡಿದ್ರೆ ಹಬ್ಬ ಸಂಪನ್ನ.ಮತ್ತೆಲ್ಲ ಊಟದ ಸಂಭ್ರಮ ಇವೆಲ್ಲದರ ನಡುವೆ ಕೆಲವು ಮನೆಗಳ ಮುಂದೆ ಬಂದ ದೇವಿ ಆ ಮನೆಯ ಜನಕ್ಕೆ 'ಹೂವು ಕೊಡ್ತಾಳೆ' ಹೂ ಕೊಟ್ರೆ ಆ ಮನೆಯ ಮಂದಿಗೆ ಒಂದು ಸೆಕ್ಯೂರ್ ಭಾವನೆ. ಕೆಲವೆಡೆ ದೇವರು ಹೊತ್ತ ವ್ಯಕ್ತಿ ರೌದ್ರತೆಯಿಂದ ಕುಣಿತಾನೇ .. ಅದು ಆ ಮನೆಯವರಿಗೆ ವಾರ್ನಿಂಗ್ ತರ .. ಏನೋ ತಪ್ಪೋ ನೋವೊ ನಡೆಯುತ್ತದೆ ಏನೊ ಅನ್ನೋ ಹಾಗೆ.. (ಈ ದೇವರು ಹೊರುವ ವ್ಯಕ್ರಿ ಅದೇ ಊರಿನವನಾಗಿದ್ದು ಅಲ್ಲಿನ ಪ್ರತಿಯೊಂದು ಸುದ್ದಿ ತಿಳಿದಿರುತ್ತದೆ!!! ಆದರ ಆಧಾರದ ಮೇಲೆ ದೇವಿ ಸನ್ನೆ ಮಾಡುತ್ತಾಳೋ ಏನೋ !!psychology versus religious belief !!)ಹೀಗೆಲ್ಲ ನಡೆಯೋ ಹಬ್ಬ ಜನರನ್ನ ಒಂದುಗೂಡಿಸುತ್ತದೆ, ದಿನನಿತ್ಯದ ಹಳ್ಳಿಯ ಬದುಕಿನಿಂದ ಒಂದಷ್ಟು ವಿರಾಮ ನೀಡಿ ಬದುಕ ರಂಜಿಸುತ್ತದೆ
ಇಲ್ಲಿ ಕಣ್ಣಿಗೆ ಕಾಣೋ ತುಂಬಾ ಸರಳ ಸತ್ಯ ಅಂದ್ರೆ ನಮ್ಮ ಹಿರಿಯರ ಜಾಣತನ ; ಬೇಸಿಗೆ ಬರೋ ಮೊದಲು ಬರುವ ಈ ಹಬ್ಬಕ್ಕೆ ಮನೆಯನ್ನೆಲ್ಲ ಶುಚಿಗೊಳಿಸೋದರಿಂದ ಬಹುತೇಕ ಕಾಯಿಲೆ ತಡೆಯಬಲ್ಲರು..ಜನಕ್ಕೆ ದೇವರ ಮೇಲೆ ಅಲ್ಲದಿದ್ದರೂ ದೇವರು ಕೊಡೊ ಹೂವು ಅಥವ ದೇವರ ಸಿಟ್ಟಿನ ಮೇಲಿನ ನಂಬಿಕೆಯಿಂದ ತಮ್ಮ ಕೆಲಸಗಳ ಬಗ್ಗೆ ವಹಿಸೋ ಎಚ್ಚರ.. ಇವೆಲ್ಲದರ ಜೊತೆಗೆ ಹಬ್ಬದ ನೆಪದಲ್ಲಿ ಬಂಧುತ್ವಗಳ ಬೆಸುಗೆ.... ಕೆಲವು ಹಬ್ಬಗಳು ಇನ್ನೂ ಜೀವಂತವಾಗಿ ಇರೋದೇ ಒಳ್ಳೆಯದು ಅನಿಸುವ ಹಾಗೆ with all its flaws.......
ದಿನದಿನದ ಕಥೆಗಳು ............ಮನೆಮನೆಯ ಕಥೆಗಳು:)))
ಅಮ್ಮಾ, ಈವತ್ತು ___ ಮನೆಯಲ್ಲಿ ಯಾರಿಲ್ಲ .. ಸ್ವಲ್ಪ ಸಾಂಬಾರ್ ಹಾಕಿ ಕೊಡು ಹಂಗೆ ಒಂಚ್ಚೂರು ಪಲ್ಯ ಹಾಕ್ಬಿಡು.. ಒಂದೆರಡು ಚಪಾತಿ ಹಾಕ್ಬಿಡು .. ನಾವಿಬ್ರು ಅಲ್ಲೇ ತಿನ್ಕೊಳ್ತೀವಿ ಪ್ಲೀಸ್ ..
ಒಂದ್ನಾಲ್ಕು ದಿನ ಆಯ್ತು
ಲೋ ಮಗ್ನೆ ಆವತ್ತು ಒಂದ್ ಮೂರು ಬಾಕ್ಸು, ಒಂದ್ ಪಾತ್ರೆ ಎಲ್ಲಾ ತಗೋಂಡ್ ಹೋದ್ಯಲ್ಲ .. ಅದ್ನ ತರೋದಲ್ವ ಅದು ಪುಟ್ಟಿ ಲಂಚ್ ಬಾಕ್ಸು ... 
ನೀನೆನಮ್ಮ ನಮ್ಮ ಮನೆಯಲ್ಲಿ ಅದೊಂದೇ ಬಾಕ್ಸು ಇರೋದು ಅನ್ನಂಗೆ.. ಬೇರೆದಕ್ಕೆ ಹಾಕಿ ಕಳ್ಸು ... ಅದೇನ್ ಚಿನ್ನನಾ ...
ಎಲಾ ಮಗ್ನೇ ... ಎಲ್ಲಿ ಹೋಯ್ತು ನಿನ್ನ ಪ್ಲೀಸೂ ........

Friday, 3 March 2017

ಕಂಡದ್ದು ಕಂಡಂತೆ ....
ಗಂಡು ಮಾನಸಿಕವಾಗಿ ಹಾಗು ದೈಹಿಕವಾಗಿ ತುಂಬಾನೇ ಬಲಶಾಲಿ ಅಂತ ಎಷ್ಟೇ ಅಂದುಕೊಂಡರೂ , ಒಂದಷ್ಟು ವರುಷ ಸಂಸಾರ ಮಾಡಿದ ನಂತರ ಆಕಸ್ಮಿಕವಾಗಿ ಹೆಂಡತಿ ತೀರಿ ಹೋದರೆ ಒಬ್ಬನೇ (ಮಕ್ಕಳ ಜೊತೆ ಅಥವ ಮನೆಯವರ ಜೊತೆ ಇದ್ದರೂ) ಬದುಕಲು ಪ್ರಯಾಸ ಪಡುತ್ತಾನೆ.."ಬಹಳಷ್ಟು" ಬಾರಿ ಗೆಲ್ಲಲಾಗದೆ ನೋವು ಅನುಭವಿಸುತ್ತಾನೆ ಅಥವಾ ಮರು ವಿವಾಹವಾಗುತ್ತಾನೆ 
ಅದೇ ಒಬ್ಬ ಹೆಣ್ಣುಮಗಳು ಗಂಡ ತೀರಿಕೊಂಡರೆ ನೋವಿದ್ದರೂ ಕೂಡ ಮಕ್ಕಳು ಚಿಕ್ಕವರಿದ್ದರೆ ಅವರ ಏಳಿಗೆಗಾಗಿ ಮಕ್ಕಳು ದೊಡ್ಡವರಾದರೆ ಅವರ ಜೊತೆ "ಹೊಂದಿಕೊಂಡು" ಬದುಕಲು ಪ್ರಯತ್ನಿಸುತ್ತಾಳೆ... ಮತ್ತು "ಬಹಳಷ್ಟು" ಬಾರಿ ಸಫಲಳಾಗುತ್ತಾಳೆ.... 
ಇದಕ್ಕೆ ಕಾರಣ ಕೂಡ ಬಹಳ ವಿಚಿತ್ರ ......His strength is his weakness and her weakness is her strength ................
And Yes With exceptions ...
ಶ್ರೀಪಾದಣ್ಣ ಆಸ್ತಿಕ ನಾಸ್ತಿಕನ ಬಗ್ಗೆ ಒಂದು ಸಾಲು ಬರೆದಿದ್ದಾರೆ (ಆಸ್ತಿಕ ಒಂದನ್ನೇ ನಂಬಿದರೆ.......... ನಾಸ್ತಿಕ ಎಲ್ಲವನ್ನೂ ಸಂದೇಹಿಸುತ್ತಾನೆ).. ಅದು ನನಗೆ ಈ ಕಥೆ ನೆನಪಿಸಿತು .. ಹಿರಿಯರೊಬ್ಬರು ಹೇಳಿದ್ದ ಕಥೆ. 
ಒಬ್ಬ ಗುರು ಒಂದು ಆಶ್ರಮದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡ್ತಾ ಇರ್ತಾನೆ. ಪ್ರತಿದಿನ ಪಾಠಕ್ಕೆ ಮೊದಲು ಪೂಜೆ ಮಾಡಿ ನೈವೇದ್ಯವಿಟ್ಟು ಮತ್ತೆ ಪ್ರಸಾದ ಹಂಚಿ ಪಾಠ ಶುರು ಮಾಡ್ತಾ ಇರ್ತಾನೆ. 
ಒಮ್ಮೆ ಒಬ್ಬ ಹುಡುಗ ಗುರುಗಳನ್ನ ಕೇಳ್ತಾನೆ "ಗುರುಗಳೇ, ನೀವು ಇಡೋ ನೈವೇದ್ಯದಲ್ಲಿ ಒಂಚ್ಚೂರು ಕಮ್ಮಿ ಆಗಿರೋದಿಲ್ಲ ಅದನ್ನೇ ದೇವರು ತಿಂದಿರ್ತಾನೆ ಅಂತ ಹ್ಯಾಗೆ ಹೇಳ್ತೀರಾ , ಅದು ಹೀಗೆ ಪ್ರಸಾದವಾಯ್ತು "? ಅಂತಾನೆ .. ಗುರುಗಳು ಉತ್ತರಿಸದೆ ನಕ್ಕು ಬಿಡ್ತಾರೆ .
ಮತ್ತೆ ಪಾಠ ಮಾಡಿ ಒಂದು ಇಡೀ ಶ್ಲೋಕವನ್ನ ಹೇಳಿಕೊಟ್ಟು ಎಲ್ಲರೂ ಬಾಯಿಪಾಠ ಮಾಡಿ ಹೇಳುವಂತೆ ಹೇಳುತ್ತಾರೆ . ಎಲ್ಲಾ ಮಕ್ಕಳು ಕಲಿತು ಒಪ್ಪಿಸುತ್ತಾರೆ . ಗುರುಗಳು ನೈವೇದ್ಯದ ಬಗ್ಗೆ ಪ್ರಶ್ನೆ ಕೇಳಿದ ಹುಡುಗನನ್ನ ಕರೀತಾರೆ. ಅವನ ಪುಸ್ತಕ ತರುವಂತೆ ಹೇಳುತ್ತಾರೆ. " ನೀನು ಈ ಪುಸ್ತಕದಿಂದ ತಾನೇ ಶ್ಲೋಕ ಕಲಿತದ್ದು ?" ಎಂದು ಕೇಳುತ್ತಾರೆ . ಹೌದೆನ್ನುತ್ತಾನೆ ಹುಡುಗ.. ನೀ ಕಲಿತ ಮೇಲೆ ಕೂಡ ಒಂದಕ್ಷರ ಕೂಡ ಕಡಿಮೆಯಾಗಿಲ್ಲ , ಪುಸ್ತಕದಲ್ಲಿನ ಶ್ಲೋಕ ಹಾಗೇ ಇದೆಯಲ್ಲ ಮಗು " ಎನ್ನುತ್ತಾರೆ "ಪುಸ್ತಕ ಸ್ಥೂಲಸ್ಥಿತಿ (ಕಣ್ಣಿಗೆ ಕಾಣುವ ಹಾಗೆ) ಕಲಿಕೆ ಸೂಕ್ಷ್ಮ ಸ್ಥಿತಿ (ಕಣ್ಣಿಗೆ ಕಾಣದ ಹಾಗೆ) .. ದೇವರೂ ಕೂಡ ಹಾಗೆ "ಸೂಕ್ಷ್ಮ ಸ್ಥಿತಿ" , ನಾವು ಇಡುವ ನೈವೇದ್ಯ "ಸ್ಥೂಲಸ್ಥಿತಿ" ಅವನು ಅದನ್ನ ನೋಡಿ ಮುಟ್ಟಿ ಹರಸುದರೆ ಅದೇ ಪ್ರಸಾದ" ಎನ್ನುತ್ತಾನೆ ...
ನಂಬಿಕೆಯೇ ನಂದಾ ದೀಪ ಅಷ್ಟೇ .....
ಸುಂಸುಮ್ನೆ ಹಂಚಿಕೊಳ್ಳಬೇಕು ಅನಿಸ್ತು :)))))))))
ಒಂದ್ ಕಥೆ 
ಒಬ್ಬ ದೊಡ್ಡ ಹುದ್ದೆಯಲ್ಲಿದ್ದ ವ್ಯಕ್ತಿ , ಕೈ ತುಂಬಾ ಸಂಬಳ , ಇರೋಕೆ ಮನೆ, ಹೆಂಡತಿ ಮಕ್ಕಳು.. ಎಲ್ಲಾ ಇದ್ರೂ ಅವನಿಗೇನೋ ಅಸಮಾಧಾನ , ಪ್ರತಿ ನಿತ್ಯದ ಸಮಸ್ಯೆಗಳಿಂದ ಮುಕ್ತಿಯೇ ಸಿಗದೇನೋ ಅನಿಸುವಂತೆ . ಬದುಕೇ ಬೇಸರ ಅನಿಸೋ ಹಾಗೆ .. 
ಒಮ್ಮೆ ಅವನ ಊರಿಗೆ ಒಬ್ಬ ಹಿರಿಯ ಗುರುಗಳು ಬರ್ತಾರೆ .. ತುಂಬಾ ತಿಳಿದವರು ಅಂತೆಲ್ಲ ಜನ ಹೇಳ್ತಾ ಇರ್ತಾರೆ . ಜನರೆಲ್ಲಾ ಅವರ ದರ್ಶನಕ್ಕೆ ಹೋಗೋದನ್ನ ಕಂಡು ಈ ವ್ಯಕ್ತಿ ಕೂಡ ತನಗೇನಾದ್ರು ಪರಿಹಾರ ಸಿಗಬಹುದೇನೋ ಅಂತ ಗುರುಗಳ ದರ್ಶನಕ್ಕೆ ಹೋಗ್ತಾನೆ ,, ವಿಪರೀತ ಜನಗಳ ಮಧ್ಯೆ ಅವನಿಗೆ ದರ್ಶನ ಸಿಕ್ಕಾಗ ರಾತ್ರಿ ಆಗಿರುತ್ತದೆ . ಅವನು ಗುರುಗಳಿಗೆ ತನ್ನ ಸಮಸ್ಯೆ ಹೇಳ್ತಾನೆ , ಒಂದಲ್ಲ ಒಂದು ಸಮಸ್ಯೆಗಳಿಂದ ಬೇಸೆತ್ತ ಬಗ್ಗೆ ಹೇಳ್ತಾನೆ . ಗುರುಗಳು ಹೇಳ್ತಾರೆ 'ಈಗ ಹೇಗೂ ರಾತ್ರಿ ಆಗಿಹೋಗಿದೆ , ನಿನ್ನ ಸಮಸ್ಯೆಗೆ ನಾಳೆ ಪರಿಹಾರ ಹೇಳ್ತಿನಿ , ನಮ್ಮ ದನಗಳ ಕೊಟ್ಟಿಗೆಯಲ್ಲಿ ಒಂದಷ್ಟು ದನಗಳಿವೆ , ಅವುಗಳನ್ನ ನೋಡಿಕೊಳ್ಳುವವ ಈವತ್ತು ಹುಷಾರು ತಪ್ಪಿದ್ದಾನೆ . ನೀನು ತುಂಬಾನೇ ದೊಡ್ಡ ಕೆಲ್ಸದಲ್ಲಿದ್ದೀಯ ಅಂತ ಗೊತ್ತು ಆದರು ಇವತ್ತೊಂದು ರಾತ್ರಿ ನೀನು ಆ "ಎಲ್ಲಾ " ದನಗಳು ರಾತ್ರಿ ಮಲಗಿದ ಮೇಲೆ ಮಲಗಬೇಕು , ಅವೇ ಮಲಗಿದರೂ ಸರಿ, ನೀನೆ ಕುಳ್ಳಿರಿಸಿದರೂ ಸರಿ , ಎಲ್ಲಾ ಮಲಗಿದ ಮೇಲೆ ಮಲಗಬೇಕು ' ಅಂತಾನೆ . ಇವನಿಗೆ ಇದ್ಯಾಕೋ ಅತಿಯಾಯ್ತು ಅನಿಸಿದರೂ ಅವರ ಮೇಲಿನ ಗೌರವಕ್ಕೆ ಒಪ್ಪಿಕೊಳ್ತಾನೆ
ಬೆಳಗಾಗುತ್ತೆ .. ಇವನೂ ಗುರುಗಳ ಮುಂದೆ ಬಂದು ನಿಲ್ತಾನೆ . ಗುರುಗಳು ಕೇಳ್ತಾರೆ 'ಏನಪ್ಪಾ, ರಾತ್ರಿ ಮಲಗಿದ್ಯಾ"?
"ಅಯ್ಯೋ , ಎಲ್ಲಿಯ ನಿದ್ರೆ ಗುರುಗಳೇ , ಒಂದು ದನವನ್ನ ಕುಳ್ಳಿರಿಸಿದರೆ ಮತ್ತೊಂದು ಎದ್ದು ನಿಲ್ತಾ ಇತ್ತು .. ಇಡೀ ರಾತ್ರಿ ಇದೇ ಆಯ್ತು ' ಅಂತಾನೆ
ಗುರುಗಳು ನಗ್ತಾರೆ ' ಕೆಲವು ದನಗಳು ಅವುಗಳಷ್ಟಕ್ಕೆ ಅವು ಕುಳಿತವೇನೋ, ಕೆಲವನ್ನ ನೀನು ಒತ್ತಾಯದಿಂದ ಕುಳ್ಳಿರಿಸಿದೆಯೇನೋ , ಕೆಲವು ಕುಳಿತುಕೊಳ್ಳಲೇ ಇಲ್ಲವೇನೋ ಅಲ್ವೇ??! ಬದುಕಿನಲ್ಲೂ ಹಾಗೇನೇ , ಸಮಸ್ಯೆಗಳು ಇದ್ದೆ ಇರುತ್ತವೆ ..... ಕೆಲವು ಸಮಯ ಕಳೆದಂತೆ ತಾವೇ ಸರಿದು ಹೋಗುತ್ತವೆ, ಕೆಲವು ಸಮಸ್ಯಗಳನ್ನ ನಾವೇ ಕಷ್ಟ ಪಟ್ಟು ಪರಿಹರಿಸಿಕೊಳ್ಳಬೇಕು , ಕೆಲವಕ್ಕೆ ಪರಿಹಾರವೇ ಸಿಗೋದಿಲ್ಲ , ಕೆಲವು ಸಮಸ್ಯೆಗಳು ಸಮಸ್ಯೆಗಳೇ ಅಲ್ಲ .... ನಿನಗೆ ಎಲ್ಲವೂ ಇದೆ , ಅನಗತ್ಯವಾಗಿ ನಿನ್ನನ್ನು ನೀನು ಹಿಂಸಿಕೊಳ್ಳಬೇಡ , ಬದುಕು ಸುಂದರವಾಗಿದೆ ಸುಂದರವಾಗು ಬದುಕು; ಅಂತಾನೆ ...
ಸಮಸ್ಯೆಯನ್ನ ಸಮಸ್ಯೆಯಾಗಿಯೇ ಉಳಿಸಿಕೊಂಡರೆ ಸಮಸ್ಯೆಯೇ ..... ಸಮಸ್ಯೆಯಲ್ಲದ್ದನ್ನ ಸಮಸ್ಯೆ ಎಂದುಕೊಂಡರೆ ಕೂಡ ಸಮಸ್ಯೆಯೇ
ಹಂಚಿಕೊಳ್ಳಬೇಕು ಅನಿಸ್ತು :))))
ನಮ್ಮ ಮನೆಯ ಒಂದೆರಡು ಮನೆಯಾಚೆ ಒಂದು ಸಂಸಾರ. ಮನೆಯ ಯಜಮಾನ ಹತ್ತಿರದ ಹಳ್ಳಿಯಲ್ಲಿ ಒಂದು ಪಡಿತರ ಅಂಗಡಿ ನಡೆಸ್ತಾರೆ, ಹೆಚ್ಚೇನೂ ಓದಿಲ್ಲದೆ ಇದ್ರೂ ಸೊಸೈಟಿ ನಡೆಸಿಕೊಂಡು ಹೋಗೋ ಅಷ್ಟು ಗೊತ್ತಿದೆ. ಹಳ್ಳಿಯಲ್ಲಿ ಒಂದಷ್ಟು ಹೊಲಗದ್ದೆ ಇದೆ ..ಅವರ ಹೆಂಡತಿ ಓದಿಲ್ಲ . ಮನೆಯನ್ನ ನೋಡಿಕೊಂಡು ಹೋಗ್ತಾರೆ. ಇಬ್ಬರು ಗಂಡು ಹುಡುಗರು . ಸುಮಾರಾಗಿ ಓದಿಕೊಂಡಿದ್ದಾರೆ . ದೊಡ್ಡವನು ತಂದೆಗೆ ಸಹಾಯಕನಾಗಿ ಅಂಗಡಿಗೆ ಹೋದ್ರೆ , ಚಿಕ್ಕವನು ಎಲ್ಲೋ ಬೇರೆ ಕಡೆ ಕೆಲಸಕ್ಕೆ ಹೋಗ್ತಾನೆ . ಅವರು ಈಗಿರುವ 20 x30 ಮನೆ ಕೊಂಡಾಗ ಮಕ್ಕಳಿಗೆ ಮದ್ವೆ ಆಗಿರಲಿಲ್ಲ. ಹಿರಿಯ ಮಗನ ಮದುವೆ ಮಾಡಿದ ನಂತರ ಮನೆಯ ಮೇಲೊಂದು ಮನೆ ಕಟ್ಟಿ, ಅದರ ಮೇಲೊಂದೆರಡು ಕೋಣೆಗಳನ್ನ ಕಟ್ಟಿ ಕೆಳಗಿನ ಮನೆಯನ್ನ ಬಾಡಿಗೆಗೆ ಕೊಟ್ಟಿದ್ರು .(ಅವ್ರ್ಗೆ ಇರ್ಬೇಕು ಅನಗಂಟ ಒಟ್ಟೊಟಿಗಿರ್ಲಿ ಬಿಡ್ರಲಾ , ಆಮ್ಯಾಕೆ ಅವ್ರಿಗ್ ಸೇರಿದ್ದು ಅಂತಾರೆ ಆ ಹಿರಿಯಾಕೆ!! ) ಕಿರಿಯನ ಮದುವೆ ಆದ ನಂತರ ಮನೆಯನ್ನ ಖಾಲಿ ಮಾಡಿಸಿಕೊಂಡು ಅವರೇ ಇಟ್ಟುಕೊಂಡ್ರು . ಮನೆಗೆ ಬಂದ ಇಬ್ಬರು ಸೊಸೆಯಂದಿರು ಕೂಡ ಸಣ್ಣವರೇ . ಒಳ್ಳೆಯ ಹೆಣ್ಣುಮಕ್ಕಳು.. ಹೊಂದಿಕೊಂಡು ಹೋಗೋ ಮಕ್ಕಳು .. ಅವಕ್ಕೆ ಈಗ ಒಂದೊಂದು ಪುಟ್ಟ ಕೂಸುಗಳು.. ಒಬ್ಬಳು ಕೆಲಸ ಮಾಡಿಕೊಂಡರೆ ಮತ್ತೊಬ್ಬಳು ಸೊಂಟಕ್ಕೆ ಇಬ್ಬರೂ ಮಕ್ಕಳನ್ನ ಇಟ್ಕೊಂಡು ತಿನ್ನಿಸೋದೋ ಆಟ ಆಡಿಸೋದೋ ಮಾಡ್ತಾಳೆ and vice-versa ..ಆ ಹಿರಿಯಾಕೆ ಕೂಡ ಮಕ್ಕಳನ್ನ ಮನೆ ಮುಂದೆ ಕೂಡಿಸಿಕೊಂಡೋ, ಎತ್ತಿಕೊಂಡೋ ಓಡಾಡ್ತಾರೆ ... ಒಂದು ದಿನಕ್ಕೂ ಹೊರಗೆ ಕೇಳೋ ಹಾಗೆ ಜಗಳ ನಡೆಸಿದ್ದಾಗಲಿ , ಅಕ್ಕಪಕ್ಕದವರೊಡನೆ ಮತ್ತೊಬ್ಬರ ಮೇಲೆ ದೂರು ಹೇಳೋದಾಗಲಿ ಕಂಡಿಲ್ಲ . ಎದುರು ಸಿಕ್ಕಾಗ ' ಆಂಟಿ , ಊಟ ಆಯ್ತಾ?' ಅಂತ ಅವರು ಮಾತಾಡಿಸಿದರೆ .. ಆ ಕೂಸುಗಳು ಆಚೆ ಈಚೆ ಓಡಾಡುವಾಗ ನಾನೂ ಮಾತನಾಡಿಸ್ತಿನಿ ಎತ್ತಿಕೊಳ್ತಿನಿ....
ಈಗ ಸಂಜೆ ಹೊರಗೆ ಬಾಗಿಲು ಕಸ ಗುಡಿಸ್ತಾ ಇದ್ದೆ .. ಆ ಹಿರಿಯಾಕೆ ದೊಡ್ಡ ಮಗನ ಮಗುವನ್ನ ನಡೆಸಿಕೊಂಡು ಹೋಗ್ತಾ ಇದ್ರು 'ಎಲ್ ಹೋಗಿದ್ದೆ ಪುಟ್ಟಿ?' ಅಂದೆ ..'ಚಿಕ್ಮಮನ್ಗೆ (ಚಿಕ್ಕಮ್ಮನಿಗೆ) ಮಾತೆ (ಮಾತ್ರೆ) ತಲೋಕೇ (ತರೋಕೆ) ಅಂತ ಹೇಳ್ತು ಮುದ್ಮುದ್ದಾಗಿ .. 'ಅವ್ಳ್ಗೆ ಉಸಾರಿಲಾ , ಇನಕಲ್ಗೋಗಿದ್ವಿ(ಇಣಕಲ್) ಮಾತ್ರೆ ತರೋಕೆ ' ಅಂದ್ರು ಆಕೆ ...
ಸುಂದರವಾಗಿ ಬದುಕೋಕೆ ವಿದ್ಯೆ ಒಂದೇ ಸಾಧನ ಅಲ್ಲ , ಕಲಿತ/ಕಲಿಸಿದ ಸಂಸ್ಕಾರ ಕೂಡ ಸಾಧನ .. ಜೊತೆಗೆ ಮನಸ್ಸು ಕೂಡ ಮುಖ್ಯ ....
ಮನಸ್ಸು ಒದ್ದೆ ಒದ್ದೆ ..... :))))))))

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...