Thursday 2 February 2017

ನನ್ನ ಮಕ್ಕಳು ಅವರ ಓದುವಿಕೆಯ ವಿಷಯದಲ್ಲಿ ನನಗೆ ಯಾವತ್ತೂ ಹಿಂಸೆ ಮಾಡಿಲ್ಲ. ತೊಂದರೆ ಕೊಟ್ಟಿಲ್ಲ. ಚಿಕ್ಕವರಿದ್ದಾಗ ಹೇಳಿಕೊಡ್ತಾ ಇದ್ದಿದ್ದು ಬಿಟ್ರೆ ಅವರಷ್ಟಕ್ಕೆ ಅವ್ರು ಓದ್ಕೊಳ್ತಾರೆ. 8-9ನೇ ತರಗತಿಯವರೆಗೂ ಪಕ್ಕ ಕೂತ್ಕೊಳ್ತಾ ಇದ್ದೆ. ಆಮೇಲೆ ಅದೂ ಇಲ್ಲ. ತುಂಬಾನೇ ಜಾಣರು ಅಲ್ಲದೆ ಇದ್ರೂ ಶಾಲೆಯಲ್ಲಿ 8-10ರ ಒಳಗೆ ನಿಲ್ತಾರೆ. ಶಾಲೆಯಲ್ಲಾಗಲಿ, ಕಾಲೇಜಲ್ಲಾಗಲಿ ಪೇರೆಂಟ್ಸ್-ಟೀಚರ್ಸ್ ಮೀಟಿಂಗ್ನಲ್ಲಿ ದೂರುವ ಹಾಗೆ ನಡೆದುಕೊಂಡಿಲ್ಲ. ಒಂದಷ್ಟು ಪ್ರೆಷರ್ ಹಾಕಿದ್ರೆ ಇನ್ನೊಂದ್ಚೂರು ಹೆಚ್ಚು ಅಂಕಗಳು ಬರ್ತಾ ಇದ್ದಿದ್ದು ನಿಜ ಅನಿಸಿದ್ದರೂ ಅವರ ಬಾಲ್ಯದ ಸ್ವಾತಂತ್ರ್ಯ ಕಸಿದುಕೊಳ್ಳೋದು ಬೇಡ ಅನಿಸಿತ್ತು. ಮಂಜು ಈಗ್ಲೂ ನನ್ನ ಬೈತಾರೆ 'ನಿನ್ ಮಕ್ಳು ಇನ್ನೊಂದ್ಚೂರು ಕಷ್ಟ ಪಟ್ಟಿದ್ರೆ /ನೀನು ಒಂದ್ಚೂರು ಓದಿಸಿದ್ರೆ ಇನ್ನು ತುಂಬಾ ಅಂಕ ಬರ್ತಾ ಇತ್ತು' ಅಂತ . (ಮುಂದೆ ನನ್ನ ಮಕ್ಕಳೂ ಇದನ್ನೇ ಹೇಳ್ತಾರೇನೋ, ನೀನು ಇನ್ನೊಂದ್ಚೂರು ಭಯಪಡಿಸಿ ಓದಿಸಬೇಕಿತ್ತು ಕಣಮ್ಮ ಅಂತ !!) 
ಕಾರ್ತಿ ಎರಡನೇ ಪಿಯುಸಿ ಯಲ್ಲಿದ್ದಾಗ ಒಂದ್ ದಿನ ಕಾಲೇಜ್ನಿಂದ ಫೋನ್ ಬಂತು 'ನಾನು ಕೆಮಿಸ್ಟ್ರಿ ಲೆಕ್ಚರರ್ __ ಮಾತಾಡ್ತಾ ಇರೋದು. ನಿಮ್ ಹತ್ತಿರ ಸ್ವಲ್ಪ ಮಾತನಾಡಬೇಕಿತ್ತು ಕಾರ್ತಿಕ್ ವಿಷ್ಯ ' ಅಂದ್ರು. ಎಂದೂ ಇಲ್ಲದ್ದು ಇದೇನು ಹೀಗೆ ಅನಿಸಿ ಆತಂಕ ಅನಿಸ್ತು. ಮನೆಯಿಂದ ಕಾಲೇಜು ಒಂದ್ ಒಂದು-ಒಂದೂವರೆ ಕಿಲೋಮೀಟರು ಅಷ್ಟೇ, ಕೆಲ್ಸ ಮಾಡ್ತಾ ಇದ್ದವಳು 'ಈಗ್ಲೇ ಬರ್ತೀನಿ' ಅಂತ ಹೇಳಿ ಫೋನ್ ಇಟ್ಟೆ. ಎರಡು ನಿಮಿಷದಲ್ಲಿ ತಯಾರಾಗಿ ಗಾಡಿ ತೆಗೆಯೋಣ ಅಂದ್ರೆ ಅವನನ್ನು ಬಿಟ್ಟು ಬಂದಾಗ ಸರಿ ಇದ್ದ ಗಾಡಿ ಪಂಚರ್ ಆಗಿದೆ !! ಬರ್ತೀನಿ ಅಂತ ಹೇಳಿಬಿಟ್ಟಿದ್ದೇನೆ.ಮಾತು ತಪ್ಪಿದರೆ ಅವರಿಗೆ ನನ್ನ ಮಗನ ಮೇಲಿರೋ ವಿಶ್ವಾಸ ಹೋಗಿಬಿಡುತ್ತದೆ (ನನ್ನ ಮೇಲಿನ ಅವರ ವಿಶ್ವಾಸದ ಬಗ್ಗೆ ನನಗೆ ಭಯವಿಲ್ಲ, ಯಾಕೆ ಅಂದ್ರೆ ಅವರಿಂದ ನನಗಾಗಲಿ, ನನ್ನಿಂದ ಅವರಿಗಾಗಲಿ ಏನೂ ಉಪಯೋಗ (ಉಪಯೋಗ ಅಂದ್ರೆ ಅನುಕೂಲ) ಇಲ್ಲ)..ಸರಿ ನಡೆದೇ ಹೊರಟೆ. ಹೋಗೋ ಅಷ್ಟರಲ್ಲಿ ಸ್ವಲ್ಪ ಟೆನ್ಶನ್ಗೆ ಮತ್ತೊಂದಷ್ಟು ಬಿಸಿಲಿಗೆ ಮತ್ತಷ್ಟು ಉದ್ವೇಗಗೊಂಡಿದ್ದೆ. ಕೆಮಿಸ್ಟ್ರಿ ವಿಭಾಗದ ಹತ್ತಿರ ಹೋದೆ ." __ ಇದ್ದಾರಾ" ಅಂದೆ. ಅವರು ಇದ್ರು. ನನಗಿಂತ ಒಂಚೂರು ಚಿಕ್ಕವರೆ ."ನಾನು ಕಾರ್ತಿ ಅಮ್ಮ" ಅಂದೇ..ತುಂಬಾ ವಿನಮ್ರತೆಯಿಂದಲೆ 'ಮೇಡಂ ಅಷ್ಟೊಂದು ಟೆನ್ಶನ್ ಎಲ್ಲ ತಗೊಂಡು ಯಾಕೆ ಬರೋಕೆ ಹೋದ್ರಿ , ನಾಳೆ ಕೂಡ ಬಂದಿದ್ರೆ ಆಗೋದು, ನೀರು ಬೇಕಾ ಮೇಡಂ' ಅಂದ್ರು. ಮತ್ತೊಂದಿಬ್ಬರು ಉಪನ್ಯಾಸಕರೂ ಇದ್ರು. 'ಇಲ್ಲ ಥ್ಯಾಂಕ್ಸ್, ಪ್ಲೀಸ್ ಏನ್ ವಿಷ್ಯ ಹೇಳಿ ? ಎಂದೂ ಶಾಲೆಯಿಂದಾಗಲಿ ಕಾಲೇಜ್ನಿಂದಾಗಲಿ ಯಾವುದೇ ತರದ "ನಿಮ್ಮ ಮಗನ ವಿಷ್ಯ ನಿಮ್ಮ ಜೊತೆ ಮಾತನಾಡಬೇಕು" ಅನ್ನೋ ತರ ದೂರು ಬಂದಿಲ್ಲ .. ಏನು ಹೇಳಿ?" ಅಂದೆ. 'ಏನಿಲ್ಲ ಈ ಸಾರಿ ನಡು ವಾರ್ಷಿಕ ಪರೀಕ್ಷೆಯಲ್ಲಿ ಕಡಿಮೆ ಅಂಕ ತಗೊಂಡಿದ್ದಾನೆ. ಈ ಸಾರಿ ೨ನೇ ಪಿಯುಸಿ ಅಲ್ವ ಅದ್ಕೆ ಪೇರೆಂಟ್ಸ್ಗೆ ಹೇಳೋಣ ಅಂತ ಕರೆ ಮಾಡಿದ್ದು ಅಷ್ಟೇ ' ಅಂತ ಅವನ ಉತ್ತರ ಪತ್ರಿಕೆ ಕೊಟ್ರು.. ಉತ್ತರಪತ್ರಿಕೆ ನೋಡಿದೆ ಎಲ್ಲಾ ಅಲಕ್ಷ್ಯತೆಗೆ ಹೋದ ಅಂಕಗಳೇ !! ಬಿಸಿಲಲ್ಲಿ ನಡೆದು ಬಂದಿದ್ದಕ್ಕೋ , ಟೆನ್ಶನ್ಗೋ , ಇಲ್ಲ ಇವನ ಉತ್ತರ ಪತ್ರಿಕೆ ನೋಡಿಯೋ ಅಂತೂ ಕಣ್ಣು ತುಂಬಿ ಇನ್ನೇನು ಹರಿಯುವಂತಾಯ್ತು. ಅಷ್ಟ್ರಲ್ಲಿ ಕಾರ್ತಿನೂ ಕರೆಸಿದ್ದರು . ಅವನು ಬರುವುದಕ್ಕೂ ನನ್ನ ಕಣ್ಣು ತುಂಬಿ ನೀರು ಹೊರ ಬರುವುದಕ್ಕೂ ಸರಿ ಹೋಯ್ತು (ನಾ ದಿನಕ್ಕೆ ಒಂದು ಸಾರಿನಾದ್ರೂ ಸಣ್ಣ ವಿಷ್ಯಕ್ಕಾದ್ರೂ ಸರಿ ಅತ್ತುಬಿಡೋದು ಅದಕ್ಕೆ ಯಾರಾದ್ರೂ ಒಂದೆರಡು ತರ್ಲೆ ಡೈಲಾಗ್ ಹೊಡೆದರೆ ಕ್ಷಣಗಳಲ್ಲಿ ನಕ್ಕುಬಿಡೋದು ಮಾಮೂಲು. ಅದಕ್ಕೆ ಯಾರು ತಲೆ ಕೆಡಿಸಿಕೊಳ್ಳೋದಿಲ್ಲ.. ಅದನ್ನ ಬಿಟ್ಟು ದೈಹಿಕ ಅಥವ ಮಾನಸಿಕ ನೋವಿಗಾಗಲಿ ನಾನು ಮಕ್ಕಳ ಮುಂದಾಗಲಿ ಮತ್ಯಾರ ಮುಂದಾಗಲಿ ಅಳೋದಿಲ್ಲ ಹಾಗೆ ಅಳೋದನ್ನ ಮಕ್ಕಳು ನೋಡಿಲ್ಲ ಕೂಡ !!) ಒಂದೇ ಕ್ಷಣದಲ್ಲಿ ಸಾವರಿಸಿಕೊಂಡೆ. ಆ ಉಪನ್ಯಾಸಕರು ಕಾರ್ತಿಗೆ ಒಂದೆರಡು ಮಾತು ಹೇಳಿದ್ರು , ನಾನು ಸುಮ್ನೆ ಅವನ ಮುಖ ನೋಡಿ ;ನಿನ್ನ ಪೇಪರ್ ಒಂದ್ಸಾರಿ ನೋಡು ಮಗ" ಅಂತ ಹೇಳಿ ಉಪನ್ಯಾಸಕರಿಗೆ ಧನ್ಯವಾದ ಹೇಳಿ ಓದಿಸ್ತೀನಿ ಅಂತ ಹೇಳಿ ಹೊರಟೆ. ಅವರೂ ಕೂಡ ಬಂದಿದ್ದಕ್ಕೆ ಥ್ಯಾಂಕ್ಸ್ ಮೇಡಂ ಅಂದ್ರು .. ಬಂದ್ಬಿಟ್ಟೆ . 
ಸಂಜೆ ಎಂದಿನಂತೆ ಕಾರ್ತಿ ಬಂದ. 'ಅದನ್ನು' ಬಿಟ್ಟು ಒಂದೆರಡು ಮಾತುಗಳಾಡಿದೆವು . ಮಂಜುಗೆ ಹೇಳಲಿಲ್ಲ ಹೇಳಿದ್ರೆ ಟೆನ್ಶನ್ ಪಾರ್ಟಿ ಅವ್ರು ಅಂತ :) ರಾತ್ರಿ ಅಡುಗೆ ಮನೆಯಲ್ಲಿ ಪಾತ್ರೆ ತೊಳೀತಾ ಇದ್ದೆ. ಮಗ 'ಸಾರಿ ಮಾ, ನನ್ನಿಂದ ನೀನು ಅವರ ಮುಂದೆ ಅತ್ತಿದ್ದು ಬೇಜಾರ್ ಆಯ್ತು .ಇನ್ಯಾವತ್ತೂ ಹಿಂಗೇ ಆಗೋಲ್ಲ" ಅಂದ. ನನಗೂ ಅಷ್ಟರಲ್ಲಿ ನನ್ನ "ಅನಗತ್ಯ" excitement ಬಗ್ಗೆ ಒಂದಷ್ಟು ಬೇಸರವಾಗಿತ್ತು. ಆದ್ರೂ ೧೪ ವರ್ಷಗಳ ವಿದ್ಯಾರ್ಥಿಜೀವನದಲ್ಲಿ ಒಮ್ಮೆಯೂ ಯಾರು ದೂರದ ಮಗ ಅಂದು ದೂರಿಸಿಕೊಂಡ ಬಗ್ಗೆ ಬೇಸರವಿತ್ತು. 
ಇದು ಆಗಿ ಮೂರು ವರ್ಷ. ಇಂದಿಗೂ ಮಗ ನೆನಪಾದಾಗ ಅದರ ಬಗ್ಗೆ ವಿಷಾದಿಸುತ್ತಾನೆ ( ಅಮ್ಮ ಸ್ವಲ್ಪ ತಮಾಷೆ ಮೂಡಲ್ಲಿದ್ದಾಳೆ ಅನಿಸಿದಾಗ ಆ ಮೇಷ್ಟ್ರನ್ನ ಬೈತಾನೆ... ಆವೈದ ನಮ್ಮಮ್ಮನ್ನ ಅಳಿಸಿ ಬಿಟ್ಟ ಅಂತ !!) 
ತುಂಬಾನೇ ಸಣ್ಣ ವಿಷ್ಯ ಮತ್ತು ವಿಷಾದ ಅಲ್ವೇ... ಆದ್ರೂ ಆ ವಿಷಾದ ಅವನಿಗೆ ಪಾಠ ಕಲಿಸಿದ್ರೆ ಸಾಕು ಅಷ್ಟೆ

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...