Thursday 2 February 2017

ಸಣ್ಣವರಿದ್ದಾಗ ಪ್ರಬಂಧ ಬರೆಯಿರಿ ಅಂತ ಕೊಡ್ತಾ ಇದ್ದಾಗ ಒಂದಷ್ಟು ವರ್ಷ 'ಟೆಲಿವಿಷನ್' ಬಗ್ಗೆಯೇ ಕೇಳ್ತಾ ಇದ್ರು. ಪ್ರಥಮಭಾಷೆ ಕನ್ನಡ, ದ್ವಿತೀಯ ಭಾಷೆ ಇಂಗ್ಲಿಷ್, ಮತ್ತು ತೃತೀಯ ಭಾಷೆ ಹಿಂದಿ , ಯಾವುದಾದರೂ ಸರಿ ಅಂತೂ ಬರೀತಾ ಇದ್ವಿ . (ಈಗ್ಲೂ ಪುಟ್ಟಿ ೭ನೇ ತರಗತಿಯಲ್ಲಿದ್ದಾಗ ಟಿವಿ ಬಗ್ಗೆ ಒಂದ್ ಪ್ರಬಂಧ ಅಂತೇ ಹೇಳ್ಕೊಡಮ್ಮ ಅಂತ ಕೇಳಿದ್ದು ನೆನಪಿದೆ) "ಟಿವಿ ಅನ್ನೋದು ಒಂದು ಮನೋರಂಜನೆಯ ಸಾಧನ ಮಾತ್ರ ಅಲ್ಲ , ಟಿವಿ ಇಂದ ಅನೇಕ ಉಪಯೋಗಗಳಿವೆ, ಟಿವಿ ಮಾಧ್ಯಮ ಜನರನ್ನ ತುಂಬಾ ಹತ್ತಿರ ಮಾಡಿದೆ. ವಿಷಯಗಳನ್ನು ಅರಿಯಲು ಸಹಕಾರಿಯಾಗಿದೆ, ಇತ್ಯಾದಿ, ಇತ್ಯಾದಿ ಇತ್ಯಾದಿ" ಪುಟಗಟ್ಟಲೆ ಬರೀತಾ ಇದ್ವಿ . ನಾ ಒಂದೂವರೆ ಪೇಜ್ ಬರೆದಿದ್ದೇನೆ ಹೆಚ್ಚುವರಿ ಶೀಟ್ ಅದಕ್ಕೆ ಅಂತಲೇ ತಗೊಂಡೆ ಅನ್ನುವಾಗ ಹೆಮ್ಮೆ ಪಡ್ತಾ ಇದ್ವಿ ...ಆದ್ರೆ ಎಲ್ಲೂ ಟಿವಿ ಅಂದ್ರೆ ಹಣ ಮಾಡುವ ಸಾಧನ ಅಂತ ಬರೀತಾ ಇರಲಿಲ್ಲ , ಹಾಗೆ ಹಣ ಮಾಡಬಹುದು ಅಂತ ಆಗ ಗೊತ್ತೇ ಇರಲಿಲ್ಲ.. ಇದ್ದ ನ್ಯಾಷನಲ್ ದೂರದರ್ಶನ (DD1)ಮತ್ತು ಪ್ರಾದೇಶಿಕ (DD9) ಚಂದನ ಬಿಟ್ರೆ ಬೇರೆ ಆಯ್ಕೆಗಳೇ ಇರಲಿಲ್ಲ .. ಅದರಲ್ಲೇ ಖುಷಿ ಪಡ್ತಾ ಇದ್ವಿ ..
ಈಗ ವಿಷ್ಯಕ್ಕೆ ಬರ್ತೀನಿ. ನಾ ಟಿವಿ ನೋಡೋದು ಬಲು ಅಪರೂಪ. ಸಿಕ್ಕೋ ಸಮಯದಲ್ಲಿ ಯಾವುದಾದ್ರೂ ಒಳ್ಳೆ ಹಾಡುಗಳು ಅಥವ ಒಂದಷ್ಟು ನ್ಯೂಸ್ ಕೇಳೋದು, ಕ್ರಿಕೆಟ್, ಟೆನಿಸ್, ಒಂದಷ್ಟು ಕಬಡ್ಡಿ ಬಿಟ್ರೆ ಬೇರೆ ಏನಾದ್ರೂ ನೋಡೋದು ಕಮ್ಮಿ.. ರಿಮೋಟ್ ಮಕ್ಕಳ ಕೈಲೋ ಗಂಡನ ಕೈಲೋ ಇದ್ರೆ ಪಕ್ಕ ಕೂತಿದ್ದಾಗ ಅವರು ಹಾಕಿದ್ದನ್ನ ನೋಡ್ತಾ ಕೈಲಿ ಒಂದು ಪುಸ್ತಕ ಹಿಡಿದು ಕೂರ್ತಿನಿ...ಅವ್ರುಹಾಕಿದ್ದು ಕಿವಿಗೆ ಬಿದ್ರೆ ಚೆಂದ ಅನಿಸಿದ್ರೆ ಹಾಗೇ ಕೇಳ್ತಿನಿ.. ಇಲ್ಲ ಅಂದ್ರೆ ಇಲ್ಲ.. ಇತ್ತೀಚೆಗೆ ನ್ಯೂಸ್ ಹಾಕಿದ್ರೆ 'ಅಂಕಲ್ ಆಫೀಸ್ಗೆ , ಆಂಟಿ ಟೆಂಟ್ ಸಿನಿಮಾಗೆ " 'ಹೆಂಡತಿಯ ಅನೈತಿಕ ಸಂಬಂಧ , ಕೊಲೆ ಮಾಡಿದ ಗಂಡ" ' ಪರಸತಿಯ ಜೊತೆ ಇದ್ದ ಗಂಡ ರುದ್ರ ಪತ್ನಿಯಿಂದ ಪೂಜೆ" ......ಇತ್ಯಾದಿ , ಇತ್ಯಾದಿ ನೋಡಿ ನೋಡಿ ಬೇಸರ ಅನಿಸುತ್ತೆ ನ್ಯೂಸ್ ನೋಡೋದೇ ಬೇಡ ಅನ್ನೋ ಹಾಗೆ..ಕೃತಿ ಬಿದ್ದು ಬಿದ್ದು ನಗ್ತಾಳೆ 'ಓಯ್ ಚೇಂಜ್ ಮಾಡು ಮಗ' ಅಂದ್ರೆ 'ಸುಮ್ನಿರಮ್ಮ ಸಕ್ಕತ್ತಾಗಿದೆ ಟೈಟಲ್' ಅಂತಾಳೆ :(
ಒಂದಷ್ಟು ವರುಷಗಳಿಂದ ಈ ಟಿವಿಗಳಲ್ಲಿ ರಿಯಾಲಿಟಿ ಕಾರ್ಯಕ್ರಮಗಳನ್ನ ನಡೆಸೋದು, ಅದರ ಫಲಿತಾಂಶ ವೀಕ್ಷಕರ ಕೈಲಿದೆ ಎಂದು "ಯಾಮಾರಿಸಿ" ವೋಟ್ ಹಾಕಿ ಅನ್ನೋದು, ನಾವೂ ಕೂಡ ಏನೋ ನನ್ನ ವೋಟ್ನಿಂದಲೇ ಅವನೋ/ಳೋ ಗೆಲ್ತಾಳೆ ಅನ್ನೋ ಹಾಗೆ ವೋಟ್ ಹಾಕೋದು (ದೇವ್ರಾಣೆ ನನಗೂ ಇದಕ್ಕೂಬಲು ದೂರ, ಮೆಸೇಜ್ ಹಾಕಿದ್ರೆ ವಾಪಸ್ಸು ಮೆಸೇಜ್ ಹಾಕದ ಸೋಮಾರಿ ನಾನು) .. ಇದ್ಯಾಕೆ ಅಂತ? ಅಭಿಮಾನ ಇರಬೇಕು, ಪ್ರೀತಿ ಇರಬೇಕು, ಗೌರವ ಇರಬೇಕು, ಎದುರಿಗೆ ಕಂಡರೆ ವಿಶ್ವಾಸದಿಂದ ಇರಬೇಕು . ಹುಚ್ಚುತನ ಇರಬಾರದು. ಗೆಲುವು ಸೋಲು "ಅರ್ಹತೆಯ" ಮೇಲೆ ಸಿಗಬೇಕೇ ಹೊರತು ಮತ್ಯಾವುದೇ ಮಾನದಂಡದ ಮೂಲಕ ಅಲ್ಲ.... ಅದೆಷ್ಟೋ ದುಡ್ಡು ಖರ್ಚು ಮಾಡಿ ಜನ ವೋಟ್ ಮಾಡ್ತಾರೆ , ಬಹುಶಃ ಬಹುಮಾನದ ಹಣಕ್ಕೆ ಅದರ ೧೦% ಕೂಡ ಸರಿ ಹೋಗೋದಿಲ್ಲ....ದುಡ್ಡು ಗೆದ್ದ ವ್ಯಕ್ತಿ ಒಂದಷ್ಟು ದಿನಗಳ ನಂತರ ನಮ್ಮ ಕಣ್ಣಿಗೆ ಕಾಣೋದೇ ಇಲ್ಲ ! ಜನಗಳ ನೆನಪಿನಶಕ್ತಿ ಬಲು ಕಡಿಮೆ. ಹೊಸದೊಂದು ವಿಷಯ ಸಿಕ್ಕ ಕೂಡಲೇ ಹಳೆಯದನ್ನ ಮರೀತಾರೆ. ಗಾಸಿಪ್ ಜೀವನ ಅಲ್ಲ . (ಮೊನ್ನೆ ನನ್ನ ಅತ್ತೆಯ ಮಗಳು " ಹಿಂಗೇ ಅಕ್ಕ, !@$#$#@@@$$" ಅಂದ್ಳು, ನಮ್ಮದು ಗಾಸಿಪ್ ಮಾಡೋ ವಯಸ್ಸ ತಾಯಿ ಅಂದೆ..ನಕ್ಬಿಟ್ಲು ) ಕೆಲವು ರಿಯಾಲಿಟಿ ಷೋಗಳ ನೋಡ್ತಿವಿ ಅಂದ್ರೆ ನಮ್ಮ ಅಭಿರುಚಿಯ ಬಗ್ಗೆ ಪ್ರಶ್ನೆ ಏಳುವಷ್ಟು ಮಟ್ಟಕ್ಕೆ ಬಂದು ತಲುಪಿದ್ದೇವೆ..
ಒಳ್ಳೆಯದು ಕೆಟ್ಟದರ ನಡುವೆ ಒಂದು ಗೆರೆ ಇರುತ್ತದೆ . ಗೆರೆ ಎಳೆಯುವವರು, ಎಳೆದುಕೊಳ್ಳಬೇಕಾದವರು ನಾವೇ.. ಯಾವುದೇ ಕಾರ್ಯಕ್ರಮ ನೋಡಬೇಕು ಅಥವ ನೋಡಬಾರದು ಅನ್ನೋದಲ್ಲ ನನ್ನ ಉದ್ದೇಶ. ನಾವು ಮಾಡುವ ಕೆಲ್ಸದ ಬಗ್ಗೆ ವಿವೇಚನೆ ಇದ್ರೆ ಸಾಕು. ಅದರ ಅಗತ್ಯ ಎಷ್ಟು ಅನ್ನೋದರ ಬಗ್ಗೆ ಸಾಮಾನ್ಯ ಪ್ರಜ್ಞೆ ಇದ್ರೆ ಸಾಕು.
(ಪುಟ್ಟಿ ಹೇಳ್ತಾ ಇದ್ದಾಳೆ 'ಕುಳ್ಳಿಮಾ, ನೀವ್ ಯಾಕೋ ಮಾತಾ ಸುನಿತಾನಂದಮಯಿ ಆಗೋ ರೇಂಜ್ಗೆ ಹೋಯ್ತಾ ಇದ್ದೀರಾ ಜೋಪಾನ..U need to come forward yaa ಅಂತ!!)...
money makes many things ಅಂತಿದ್ಲು ಅಮ್ಮ .... ನಿಜವೇನೋ ...
ಸುಂಸುಮ್ನೆ ಬರೀಬೇಕು ಅನಿಸ್ತು ...

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...