Tuesday, 25 October 2016

ಲಕ್ಷ್ಮಿ ತನ್ನ ಪೂಜೆಯಿಂದ ತುಂಬಾ ಪ್ರಸನ್ನಗೊಂಡಿದ್ದಳು. ಜೊತೆಗೆ ಒಂದಷ್ಟು ಅಹಂ, ಜಂಬ ಕೂಡ ... 
ಗಂಡನಿಗೆ ಹೇಳಿದ್ಳು 'ನೋಡಿದ್ರಾ, ನಾ ಅಂದ್ರೆ ಹೆಂಗೆ, ನಾನು ಅಂದ್ರೆ ಬೇಡ ಅನ್ನೋರೇ ಇಲ್ಲ, ಪೂಜೆ, ಸೇವೆ, ನೈವೇದ್ಯ ಎಲ್ಲಾ ನೋಡಿದ್ರಾ? ದೇವಾನುದೇವತೆಗಳಲ್ಲಿ ನಾನೇ ಶ್ರೇಷ್ಠಳು!' 
ವಿಷ್ಣು ನಕ್ಕ .. 
'ಅದ್ಯಾಕೆ ಆ ನಗು? ನನ್ನ ಮಾತಲ್ಲಿ ನಂಬಿಕೆ ಇಲ್ವಾ ?ಅಲ್ಲಿ ನೋಡಿ ಭೂಮಿಯಲ್ಲಿ' ಅಂದ್ಳು 
ಅವಳು ಹೇಳಿದ್ದು ಯಾವುದು ಸುಳ್ಳಿರಲಿಲ್ಲ . ಭೂಮಿ ತುಂಬಾ ಅವಳಿಗಾಗಿ ನೈವೇದ್ಯ, ಹರಕೆ, ವೈಭವ ಓಹ್ ... ಅವಳನ್ನ ಬೇಡ ಎನ್ನುವವರೇ ಇಲ್ಲ .. ವಿಷ್ಣು ಕೂಡ ಹೆಂಡತಿಯ ಕಡೆ ಅಭಿಮಾನದಿಂದ ನೋಡಿದ . 
ಆದ್ರೂ ಆ ಅಹಂ...
ಹೆಂಡತಿಗೆ ಅಲ್ಲೊಂದು ಕಡೆ ನೋಡಲು ಹೇಳಿದ . ಅಲ್ಲೊಬ್ಬ ವ್ಯಕ್ತಿ ಸತ್ತಿದ್ದ.. "ಇವನಿಗೂ ನಿನ್ನ ಅಗತ್ಯ ಇದೆಯೇ ಪ್ರಿಯೆ ?" ಎಂದ
ಲಕ್ಷ್ಮಿ ಒಂದು ಕ್ಷಣ ವಿಚಲಿತಳಾದಳು .. ಮತ್ತೆ ಸ್ತಬ್ದಳಾದಳು ...
"ನಾನು" ಇರೋವರೆಗೂ ಮಾತ್ರ ನಿನ್ನ ಅಗತ್ಯ ಲಕ್ಷ್ಮಿ .. 'ನಾನು' ಅಂದ್ರೆ ಒಳಗಿನ ಉಸಿರು , 'ನಾನು' ಅಂದ್ರೆ ಜೀವಾತ್ಮ ........ ಮತ್ತೆ 'ನಾನು' ಅಂದ್ರೆ ಸ್ವಾರ್ಥ ಕೂಡ!!ಅಂದ .
ನೆನ್ನೆ ಮನೆಗೆ ಬಂದ ಹಿರಿಯರೊಬ್ಬರು ಹೇಳಿದ ಕಥೆ ...
ಹಂಚಿಕೊಳ್ಳಬೇಕು ಅನಿಸ್ತು
ಮುಡಿ ತೊಳೆದು ಸಿಕ್ಕಾದ ಜಡೆಯ ಬಿಡಿಸುವಂತೆ 
ಬದುಕ ಸಿಕ್ಕುಗಳ ಬಿಡಿಸುವಂತಾಗಿದ್ದರೆ ....... 
ಅಂದಾಗುತ್ತಿರಲ್ಲ 
ಮಹಾಭಾರತ ರಾಮಾಯಣಗಳು .... 
ಇಂದು ನಡೆಯುತ್ತಿರಲಿಲ್ಲ 
ಅದರ ಮುಂದುವರಿದ ಭಾಗಗಳು ಮತ್ತದರ ಉಪಕಥೆಗಳು ....
ಫೇಸ್ಬುಕ್ ಸೇರಿದ ಹೊಸದು. ಇಲ್ಲಿಯ ಫಾರ್ಮಾಲಿಟಿಸ್ಗಳು/ಔಪಚಾರಿಕತೆ ಗೊತ್ತಿಲ್ಲದ ಕಾಲ.. ಮೊದ್ಲೇ ಒಂದ್ ತರ ಬಾಳೆಹಣ್ಣಿನ ಗುಡಾಣದಲ್ಲಿ ಬೆಳೆದವಳು. ಪ್ರಪಂಚಕ್ಕೆ ತೆರೆದುಕೊಂಡಿರುವುದು ಕಡಿಮೆಯೇ. ಒಂಚ್ಚುರು ಚೆನ್ನಾಗಿ ಮಾತಾಡಿದ್ರೆ ಸಾಕು 'ಓಹ್ , ತುಂಬಾ ಒಳ್ಳೆಯವರು' ಅಂದ್ಕೊಳ್ತಾ ಇದ್ದೆ ಕೇಳೋದೇ ಸಾಕು ಅಂತ ಪೂರಾ bio-data ಕೊಟ್ಬಿಡ್ತಾ ಇದ್ದೆ ..ಅದೇನ್ ಪುಣ್ಯವೋ ಇಲ್ಲ ದೇವ್ರ ದಯೆನೋ ಏನೋ ಕಷ್ಟಕ್ಕೆ ಸಿಕ್ಕಿಕೊಂಡಿದ್ದು ಕಡಿಮೆಯೇ.. ಕೆಲವೊಂದು ಅನಪೇಕ್ಷಿತ ಸಣ್ಣ ಪುಟ್ಟ ಮುಜುಗರಗಳಿಗೆ ಒಳಗಾಗಿದಾಗ ಬೆನ್ನ ಹಿಂದೆಯೇ ಇದ್ದು ಜೊತೆ ನೀಡಿದ ಆಪತ್ಬಾಂಧವರು ಇಂದಿಗೂ ಅದೇ ಆತ್ಮೀಯತೆ ಉಳಿಸಿಕೊಂಡಿರುವುದು ಒಂದು ವರವೇನೋ ಎನ್ನುವಂತೆ...
ಮೊನ್ನೆ ಮೊನ್ನೆ ಗೆಳತಿಯೊಬ್ಬರು ಮೆಸೇಜ್ ಮಾಡಿ 'ನಿನಗೆ __ ಗೊತ್ತಾ ?' ಅಂದ್ರು. 'ಹ್ಮ್ , ಮೊದಲೊಮ್ಮೆ ಗೆಳೆಯರಾಗಿದ್ರು , ಒಂದೆರಡು ಬಾರಿ ಮಾತು ಕೂಡ ಆಡಿದ್ದೆ ,ಒಮ್ಮೆ ಮನೆಗೆ ಕೂಡ ಬಂದಿದ್ರು... ಈಗ ಇಲ್ಲ" ಅಂದೆ. 'ನನ್ನ ಹತ್ತಿರ ಮಾತಾಡ್ತಾ ಇರುವಾಗ ಹಾಗೆ ನಿನ್ನ ವಿಷ್ಯ ಬಂತು 'ಒಂದ್ ತರ ಅವರಿಗೆ(!) ಅಹಂಕಾರ ಜಾಸ್ತಿ ಅಂತ ಒಂದೆರಡು ಮಾತು ಹೇಳಿದ್ರು ಸುನಿ ' ಅಂದ್ರು ಆ ಗೆಳತಿ ... ನಕ್ಕು ಬಿಟ್ಟೆ..
ನನಗೆ ಯಾರ ಸರ್ಟಿಫಿಕೇಟ್ನಿಂದ ಖುಷಿ ಅಥವಾ ಬೇಸರ ಆಗೋದಿಲ್ಲ , ಕೆಲವೊಂದು ವಿಷಯಗಳನ್ನ ಹೇಳದೆ ಉಳಿದರೆ ಚೆಂದ.. ಹೇಳಿದರೆ ಮೊದಲು ನನ್ನ ವ್ಯಾಲ್ಯೂ ಕಡಿಮೆಯಾಗುತ್ತದೆ ('ಯಾಕೆ ಏನೂ ಗೊತ್ತಿಲ್ಲದವಳೇನ್ರಿ , ಊರಿಗೇ ಬುದ್ದಿ ಹೇಳ್ತಾಳೆ!!! ) ಅನ್ನೋದು ತಿಳಿಯದ ವಿಷಯವೇನಲ್ಲ ನನಗೆ..ಅತ್ತೆಯ ಮನೆಯಲ್ಲಿ ಬದುಕನ್ನ ಗೆದ್ದು ಸೈ ಅನಿಸಿಕೊಂಡವಳು ! :) ನಾನು ನನ್ನದೇ ಪರಿಧಿಯೊಳಗೆ ನನ್ನ ಮನೆ/ಮನಸ್ಸಿಗೆ ಮೋಸ ಮಾಡಿಕೊಳ್ಳದೆ ಮತ್ಯಾರಿಗೂ ನೋವಾಗದಂತೆ ಬದುಕಲು ಕಲಿತವಳು.. And i am happy.. ಇರುವ ಇರವ ಬೆಳಗುವ ಪರಿ ಕಲಿತಿದ್ದೇನೆ and it is enof... ಮತ್ತೊಬ್ಬರಿಗೆ ಹೇಳೋ ಅಷ್ಟು ದೊಡ್ಡವಳಲ್ಲ ಆದ್ರೆ ಹೇಳಿಸಿಕೊಳ್ಳೋ ಅಷ್ಟು ಚಿಕ್ಕವಳು rather ಸಣ್ಣವಳು/ಸಣ್ಣತನ ಕೂಡ ಅಲ್ಲ .... ಮತ್ತೊಬ್ಬರ ಬಗ್ಗೆ ಮಾತನಾಡುವಾಗ ಸಣ್ಣತನ ಬೇಡ....
I have lived my life, I've loved it, I've lost, I've missed, I've been hurt, I've trusted, I've made mistakes, but most of all, I've learned and keep learning.........:)))))
ಮಗಳ ಮದುವೆ ಫಿಕ್ಸ್ ಆಗಿತ್ತು . ಮುದ್ದಿನ ಮಗಳ ಮದುವೆ ಅವನಿಗೆ ಖುಷಿಯೇ ಆದರೂ ಅವಳು ತಮ್ಮನ್ನು ಬಿಟ್ಟು 'ಬೇರೆ' ಮನೆಗೆ ಹೋಗಿ ಸೇರುವುದು ಅವನಿಗೆ ನೋವು ತರುವ ವಿಷಯವಾಗಿತ್ತು .. 
ಹಾಗೆ ಮನೆಯ ಮುಂದಿನ ಗಿಡಗಳ ನೋಡುತ್ತಾ ಕುಳಿತ್ತಿದ್ದ ಅವನಿಗೆ ಮಗಳು ಕಾಫಿ ತಂದು ಕೊಟ್ಟಳು. ಕೊಟ್ಟು ಅಪ್ಪನ ಪಕ್ಕ ಹೆಗಲಿಗೆ ತಲೆಯಿಟ್ಟು ಕೂತಳು. ಅಪ್ಪ ತನ್ನ ತಲೆಯ ಅವಳ ತಲೆಗೆ ಒರಗಿಸಿದ. 
'ಖುಷಿಯಾಗಿದ್ದೀಯ ಮಗ ' ಅಂದ.. 'ಹ್ಮ್ , ಅಪ್ಪ ' ಅಂದ್ಲು.
ಒಂದಷ್ಟು ಹೊತ್ತಾದ ಮೇಲೆ 'ಅಪ್ಪ , ಇಲ್ಲಿ ಮುಂದೆ ಇದೆಯಲ್ಲ ಈ ದಾಳಿಂಬೆ ಮರ ಅದನ್ನ ಕಿತ್ತು ಹಿಂದೆ ಹಾಕೋಣವಾ ಅಪ್ಪ ' ಅಂದ್ಲು. 
ಅಪ್ಪ ಸ್ವಲ್ಪ ಚಕಿತನಾದ ' ಮಗ ಅದು ನಾಲ್ಕು ವರ್ಷದ ಗಿಡ ಮಗ. ಇನ್ನೇನು ಹಣ್ಣು ಬಿಡುತ್ತೆ . ಅದನ್ನ ಹಾಗೆ ಸ್ಥಳಾಂತರಿಸಿದರೆ ಹೊಸ ಮಣ್ಣು, ಹೊಸ ಜಾಗಕ್ಕೆ ಹೊಂದಿಕೊಳ್ಳೋಕೆ ತಡವಾಗುತ್ತೆ , ಕೆಲವೊಮ್ಮೆ ಗಿಡ ಹೊರಟು ಹೋಗುತ್ತೆ' ಅಂದ..
ಸುಮ್ಮನಿದ್ದ ಮಗಳು 'ಬರಿ ನಾಲ್ಕು ವರ್ಷದ ಗಿಡ ಸ್ಥಳಾಂತರ ಮಾಡಲು ಹೆದರುತ್ತೀಯಲ್ಲ ಅಪ್ಪ , ೨೨ ವರ್ಷ ನಿನ್ನ ಜೊತೆ ಇದ್ದ ನನ್ನನ್ನು ಹೇಗೆ ಕಳುಹಿಸುತ್ತೀಯಾ " ಅಂದ್ಲು !
ಅಪ್ಪ ಕಣ್ಣ ತುಂಬಾ ನೀರು ತುಂಬಿ ಉತ್ತರಿಸದೆ ಉಳಿದುಬಿಡುತ್ತಾನೆ .....
ಕಥೆ ಓದಿದ ಮೇಲೆ ........ ಏನೋ ಒಂದು ತರ ಮೂಕಭಾವ ... ಮನಸ್ಸು ಒದ್ದೆ ಒದ್ದೆ ....
felt like translating and sharing after reading....
ನೆನ್ನೆ ಕೃತಿ ಕಾಲೇಜ್ ಅಲ್ಲಿ ಪೇರೆಂಟ್ಸ್ ಮೀಟಿಂಗ್ ಇತ್ತು. ಹೊಸದಾಗಿ ಕಾಲೇಜ್ ಮೆಟ್ಟಲು ಹತ್ತಿದ್ದಕ್ಕೊ, ಇಲ್ಲ ಆಟಆಟ ಅಂತ ಥ್ರೋಬಾಲ್ ಅಲ್ಲಿ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಸಂಭ್ರಮಕ್ಕೋ, ಇಲ್ಲಾ ಮೊಬೈಲ್ ಅಲ್ಲಿ ಸಿನಿಮಾ ನೋಡೋ ಹುಚ್ಚಿಗೋ, ಅಂತೂ ಸ್ವಲ್ಪ ಕಡಿಮೆ ಅಂಕಗಳು ಬಂದಿದ್ವು. ಸರಿ ಒಂದಷ್ಟು ಬುದ್ದಿ ಹೇಳಿದೆ. 
ಸಂಜೆ ಕಾರ್ತಿ ಬಂದ .ಅವನಿಗೂ ಅವಳ ಅಂಕಗಳನ್ನ ಹೇಳಿದ್ಳು. ಅವ್ನು ಅವನ ಎಂದಿನ ಧಾಟಿಯಲ್ಲಿ 'ಬಿಡ್ ಕೃತಿ ಟೆನ್ಶನ್ ಮಾಡ್ಕೋಬೇಡ , ನಿನಗೆ ಇಷ್ಟೇ ಸಾಕು ಅಂತ ಅನಿಸಿದರೆ ಫೈನ್, ನಿನಗೆ ದೊಡ್ಡ ಏಮ್ ಇದ್ರೆ ಚೆನ್ನಾಗಿ ಓದು, ಆಟ ಇಷ್ಟ ಇದ್ರೆ ಕಂಟಿನ್ಯೂ ಮಾಡು ಅಷ್ಟೇ , ...ಇತ್ಯಾದಿ ' ಕಥೆ ಓದಿದ. ಅವನ ಮೇಲು ಸ್ವಲ್ಪ ರೇಗಿದೆ 'ಓದು ಅನ್ನೋದು ಬಿಟ್ಟು ಬರಿ ಸಿನಿಮ ಡೈಲಾಗ್ ಹೇಳು, ನಿನ್ ತರ ಅವ್ಲೂ ಮಂಡ್ಯಕ್ಕೆ ಅಪ್ ಅಂಡ್ ಡೌನ್ ಮಾಡ್ಬೇಕಾಗುತ್ತೆ ಕಡಿಮೆ ತೆಗೆದ್ರೆ ' ಅಂದೆ . 'ಮಾಡ್ಲಿ ಬಿಡು ಸ್ವಂತ ಬದುಕೋಕೆ ಕಲಿತಾಳೇ' ಅಂದ. 'ನಿಂದು ಬರೇ ವಿತಂಡ ವಾದ 'ಅಂತ ಬೈದು ಸುಮ್ಮನಾದೆ.
ಮಂಜು ಬಂದ ಮೇಲೆ ಕೇಳಿದ್ರು 'ಏನ್ ಮಗ್ಲೆ, ಎಲ್ಲಾ ಔಟ್ ಆಫ್ ಔಟಾ ?' 'ಇಲ್ಲ ಅಪ್ಪ , ಕಮ್ಮಿ ಬಂದಿದೆ ' ಅಂದ್ಳು ಮೆಲ್ಲಗೆ. ಮಂಜು ಇನ್ನು ಮಾತು ಶುರು ಮಾಡೇ ಇಲ್ಲ .. 'ನಾ ಎಲ್ಲಾ ಹೇಳಿದ್ದೀನಿ ಬಿಡಪ್ಪ, ನೀ ಇನ್ನೊಂದ್ ಸಾರಿ ಯಾಕೆ ಹೇಳ್ತೀಯ, ಪಾಪ ಓದ್ತಾಳೆ , ಒಂಚೂರು ಅಡ್ಜಸ್ಟ್ ಆಗೋಕೆ ಟೈಮ್ ಬೇಕು. ನಿಮ್ ಖಾಂದಾನ್ ಅಲ್ಲೇ ಯಾರೂ ತೆಗೆದಿಲ್ಲ ಅಷ್ಟ್ ಮಾರ್ಕ್ಸ್ ತೆಗಿತಾ ಇದ್ದಾಳಲ್ವಾ ಬಿಡು . ನನ್ ತಂಗಿಗೆ ನಾ ಹೇಳ್ಕೊಳ್ತೀನಿ , ನಾ ಓದಿಸ್ತೀನಿ ' ಅಂದ ಕಾರ್ತಿ. ಮಂಜು ಬಿಟ್ಟ ಕಣ್ಣು ಬಿಟ್ಟಂತೆ ಕೂತಿದ್ರು ..
ಈ ಅಣ್ಣತಮ್ಮಂದಿರಿಗೆ ತಾವು ಎಷ್ಟೇ ಕಿತ್ತಾಡಿದ್ರೂ ಬೈದ್ರೂ ತಮ್ಮ ಅಕ್ಕ ತಂಗಿಯರನ್ನ ಯಾರೂ ಬೈಬಾರದು ಅನ್ನೋ ಅಷ್ಟು possessiveness ... ಹಿಂದೆಲ್ಲ ಭಾನುವಾರದ ಸುತ್ತಾಟಕ್ಕೆ ಬಲಮುರಿ ಅಲ್ಲೆಲ್ಲಾ ಹೋದಾಗ ನೀರಲ್ಲಿ ಇಳಿದು ಆಟ ಆಡೋವಾಗ ತಮ್ಮ ಅಥವ ಕಸಿನ್ಸ್ ಅವರ ಶರ್ಟ್ ಬಿಚ್ಚಿಕೊಟ್ಟು ಹಾಕೊಳ್ಳೋಕೆ ಹೇಳ್ತಾ ಇದ್ದದ್ದು ನೆನಪಿಗೆ ಬಂತು !ಕಣ್ಣಲ್ಲಿ ಒಂದು ಹನಿ ನೀರು ಬಿದ್ರೆ ನೋಡೋಕೆ ಹಿಂಸೆ ಪಡ್ತಾ ಇದ್ರು.. .
ಮದ್ವೆ ಆದ ಮೇಲೆ ಅವರದೇ ಸಂಸಾರ ತಾಪತ್ರಯಗಳಲ್ಲಿ ಸಿಲುಕಿ ಅದ್ಯಾಕೋ ಬಹಳಷ್ಟು ಸಾರಿ ಅನಿವಾರ್ಯವಾಗಿ ಅನುದ್ದೇಶಪೂರ್ವಕವಾಗಿ ಈ ಅಣ್ತಮ್ಮ೦ದಿರು ಒಂದಷ್ಟು ದೂರ ಸರಿತಾ ಹೋಗ್ತಾರೆ ... ಆದ್ರೂ ಮನಸ್ಸಿನ ತುಂಬೆಲ್ಲಾ ಇರೋ ಆ ಪ್ರೀತಿ ಮಸುಕಾಗೋದೇ ಇಲ್ಲ ..ಆದ್ರೂ ಕಳೆದುಹೋದ ದಿನಗಳ ಅರಸುವಂತೆ ....
ಒಂದು ಜಾನಪದ ಮಾತಿನಂತೆ 'ಹೊಳೆದಂಡೆಯ ಗರಿಕೆ ಹಂಗ ಬೆಳೆಯಲಿ ತವರು ....... ಅನ್ನೋ ಹಂಗೆ ....
ಮನಸ್ಸು ನೀಲಿನೀಲಿ ...ಆ ಬಾನಿನಂತೆ ...
ಓದುವಿಕೆ ಮನುಷ್ಯನನ್ನ ಬಹಳ ಬದಲಾಯಿಸುತ್ತದೆ. ಬಹಳ ಚಿಕ್ಕವಳಿದ್ದಾಗಲೇ ಓದುವಿಕೆ ಶುರು ಮಾಡಿದವಳು ನಾನು. ಬಹುಶಃ ಈ ಓದುವ ಹುಚ್ಚು ಅಮ್ಮನೇ ಕಲಿಸಿದ್ದು .. ತುಂಬಾ ಚಿಕ್ಕವರಿದ್ದಾಗ ಅನುಪಮ ನಿರಂಜನ ಅವರ 'ದಿನಕ್ಕೊಂದು ಕಥೆ' (೧೨ ಪುಸ್ತಕಗಳು ಅನ್ನುವ ನೆನಪು)ಮತ್ತು ಕಾಮಿಕ್ಸ್ ತಂದುಕೊಡ್ತಾ ಇದ್ರು. ಆಗೆಲ್ಲ ಬೀದಿಯಲ್ಲಿ ಇದ್ದ ಒಂದಾರು ಮನೆಯಲ್ಲಿ ಒಂದೊಂದು ಮನೆಯವರು ಒಂದೊಂದು ನಿಯತಕಾಲಿಕ ತರಿಸಿದರೆ ಆ ಮನೆಯಿಂದ ಈ ಮನೆಗೆ ಈ ಮನೆಯಿಂದ ಆ ಮನೆಗೆ 'ಅದು' ಓಡಾಡಿ almost ಎಲ್ಲರೂ ಎಲ್ಲವನ್ನು ಓದ್ತಾ ಇದ್ರು . ಸುಧಾ, ತರಂಗ, ಪ್ರಜಾಮತ, ಮಂಗಳ, ವಾರಪತ್ರಿಕೆ, ಕಸ್ತೂರಿ , ಮಯೂರ ಇವನ್ನೆಲ್ಲ ನೋಡಿದ್ರೆ ಈಗ್ಲೂ ಮನ ನೆನಪುಗಳ ಮಯೂರ ನರ್ತನ ಆಡುತ್ತದೆ. ಹಾಗೆ ಅದರಲ್ಲಿ ಬರ್ತಾ ಇದ್ದ ಧಾರಾವಾಹಿಗಳನ್ನ ಕತ್ತರಿಸಿ ಪುಸ್ತಕ ಮಾಡಿ ಇಡ್ತಾ ಇದ್ರು . ಅಮ್ಮ ಬೈತಾಳೆ ಅಂತ ಪುಸ್ತಕಗಳ ನಡುವೆ ಕಥೆ ಪುಸ್ತಕ ಇಟ್ಟು ಓದಿದ ನೆನಪು. ಇಷ್ಟ್ ಓದಿದ್ರೆ ಬೇಗ ಕನ್ನಡಕ ಹಾಕೋ ಬೇಕಾಗುತ್ತೆ ಅಂತ ಇದ್ರು ಚಿಕ್ಕಮ್ಮ. ಹೈಸ್ಕೂಲಿಗೆ ಬಂದ ಮೇಲೆ ಕಥೆಗಳನ್ನ ಓದುವುದಕ್ಕೆ ಶುರು ಮಾಡಿದ್ದು . ಸಾಯಿಸುತೆ, ಉಷಾ ನವರತ್ನ ರಾಮ್, ಹೆಚ್ ಜಿ ರಾಧಾದೇವಿ, ಅನುಪಮಾ ನಿರಂಜನ, ಹೀಗೆ ಬಹಳಷ್ಟು ಲೇಖಕಿಯರನ್ನ ಓದಿದೆ.. ನಡುವೆ ತ್ರಿವೇಣಿ ಹಾಗು ಎಂ ಕೆ ಇಂದಿರಾ ಅವರ ಕೆಲವು ಪುಸ್ತಕಗಳನ್ನ ಕೂಡ ಓದಿದೆ. ಈ ಹೊತ್ತಲ್ಲೇ ಯೆಂಡಮೂರಿ ಕಾದಂಬರಿಗಳು ಜನಪ್ರಿಯವಾಗ್ತಾ ಇದ್ವು . ತುಳಸಿ, ಆನಂದೋಬ್ರಹ್ಮ, ಅಂತಿಮ ಹೋರಾಟ, ಕಪ್ಪಂಚು ಬಿಳಿ ಸೀರೆ , ದುಡ್ಡು ದುಡ್ಡು ದುಡ್ಡು ... ಪತ್ರಿಕೆ ಬಂದ ಕೂಡಲೇ ಓದಿ ಮುಂದಿನ ಸಂಚಿಕೆಯಲ್ಲಿ ಬರಬಹುದಾದ ಸನ್ನಿವೇಶಗಳ ಬಗ್ಗೆ ಚರ್ಚಿಸುತ್ತ ಇದ್ವಿ ಕೂಡ . ಓಹ್ ಅದರಲ್ಲಿನ ಕೆಲವು ಹೆಣ್ಣು charecters (ಹಾಗೆ ಹೆಸರುಗಳೂ ಕೂಡ ) ಅದೆಷ್ಟು ಮನಸ್ಸಿನ ಮೇಲೆ ಅಚ್ಚಾಗ್ತಾ ಇದ್ವು ಅಂದ್ರೆ, ಕೆಲವರೆಲ್ಲ ನನ್ನ ಆದರ್ಶವಾಗ ತೊಡಗಿದರು.. ಪ್ರಾಯಶಃ ಇಂದಿಗೂ ಕೆಲವು ಪಾತ್ರಗಳಲ್ಲಿ ಕಂಡ ಸ್ವಾಭಿಮಾನ, ಮತ್ತೊಬ್ಬರಿಗೆ(ಗಂಡನಿಗೆ ಕೂಡ) ಒತ್ತಾಸೆಯಾಗಿ ನಿಲ್ಲುವ ಛಲ, ಮಕ್ಕಳನ್ನ ಬೆಳೆಸುವ ಪರಿ, ಒಂದಷ್ಟು ತರ್ಲೆ ಇವೆಲ್ಲ ಎಲ್ಲೋ ಒಂದೆಡೆ ಮನದಲ್ಲಿ ಹಾಗೆ ಉಳಿದು ಬದುಕಲ್ಲಿ ಅಳವಡಿಸಿಕೊಂಡಿದದ್ದು ಇದೆ...
ಹಿರಿಯರೊಬ್ಬರ ಗೋಡೆಯ ಮೇಲೆ ಅವರು ಹಂಚಿಕೊಳ್ಳೋ ಯೆಂಡಮೂರಿ quotes ಇವೆಲ್ಲ ನೆನಪಿಸಿತು
ಈಗ್ಲೂ ಮಂಜು ಟಿವಿ ನೋಡ್ತಾ ಇದ್ರೆ , ನಾ ಪಕ್ಕ ಕುಳಿತು ಏನಾದ್ರೂ ಓದ್ತಾ ಇರ್ತೀನಿ , (ಆದ್ರೆ ಈಗ ಓದುವ ಪುಸ್ತಕಗಳು ಬದಲಾಗಿವೆ ಅಷ್ಟೇ . ಏನಿಲ್ಲ ಅಂದ್ರೆ ಕೃತಿಯ ಕನ್ನಡ ಅಥವಾ ಇಂಗ್ಲಿಷ್ ಪುಸ್ತಕ ಆದರು ಸರಿ!) ಕರೆಂಟ್ ಹೋದಾಗ ಒಂದು ಸಲ ಹುಸಿಕೆಮ್ಮು ಕೆಮ್ಮಿದ್ರೆ ಮಂಜು ನಗ್ತಾರೆ 'ಆಯ್ತ್ ಬುಡವ್ವ ನಿಮ್ ಪುಸ್ತಕಾನೇ ಗ್ರೇಟು , ನಮ್ ಟಿವಿ ಸರಿಯಿಲ್ಲ ಬುಡು' ಅಂತಾರೆ
ಒಳ್ಳೆಯ ಓದುವಿಕೆ ಬದುಕಿಗೆ ಬಣ್ಣ ತರಬಲ್ಲದು ..
ಸುಂಸುಮ್ನೆ ಹಂಚಿಕೋಬೇಕು ಅನಿಸ್ತು
ಮೊನ್ನೆ ಸುಳ್ಯದಿಂದ ಮೈಸೂರಿಗೆ ಬರ್ತಾ ಇದ್ವಿ. ನನಗೆ ಟ್ರಾವೆಲಿಂಗ್ sickness .. ಬಸ್ ಹತ್ತಿದ ಕೂಡ್ಲೇ ಕಣ್ಣು ಮುಚ್ಚಿ ಕೂತ್ಬಿಡ್ತೀನಿ .. ಆವತ್ತು ಹಾಗೆ ಮಂಜು ಭುಜದ ಮೇಲೆ ತಲೆಯಿಟ್ಟು ಕಣ್ಣು ಮುಚ್ಚಿದ್ದೆ . ಹಿಂದೆಯಿಂದ ಒಂದು ಹೆಣ್ಣು ಮಗಳ ದನಿ 'ಹಲೋ , ಹಲೋ , ಅವ್ರಿಗೆ ಹೇಳಿ ದಫನ್ ಮಾಡ್ಬೇಡ ಅಂತ ಈಗ ಸುಳ್ಯ ಬಿಟ್ಟೀವಿ. ೫ ಗಂಟೆ ಹೊತ್ಗೆ ಆಲ್ಲಿರ್ತೀವಿ.. ಹಲೋ .. ' ಮೂಗೊರೆಸುವ ಸದ್ದು. ಪಾಪ ಯಾರೋ ಅವರ ಕಡೆಯವರು ತೀರಿಹೋಗಿರ್ಬೇಕು..ಪಕ್ಕದಲ್ಲಿ ಒಂದ್ ೩-೪ ವರ್ಷದ ಮಗು, ಮಗುವಿನ ಪಕ್ಕ ಒಬ್ಬ ವ್ಯಕ್ತಿ , ಪ್ರಾಯಶಃ ಅವಳ ಗಂಡನಿರಬೇಕು ಅಂದುಕೊಂಡೆ (ಆಮೇಲೆ ಅವನು ಗಂಡನೇ ಅಂತ ಅವ್ರ ಮಾತುಗಳಿಂದ ಖಾತ್ರಿಯಾಯ್ತು). ಪಾಪ ಅನಿಸ್ತು.
(ನಾನು ೬ನೇ ತರಗತಿಯಲ್ಲಿರುವಾಗ ಅಜ್ಜಿ ತೀರಿಹೋಗಿದ್ರು . ತಿಪಟೂರಿನಲ್ಲಿ ಇದ್ದ ಚಿಕ್ಕಮ್ಮ ಕೊಳ್ಳೇಗಾಲಕ್ಕೆ ಬರುವ ತನಕ ಮಣ್ಣು ಮಾಡದೆ ಕಾಯ್ತಾ ಇದ್ದದ್ದು ನೆನಪಿಗೆ ಬಂತು. ಸಂಜೆ ೬ ಗಂಟೆಗೆ ಬಂದ ಚಿಕ್ಕಮ್ಮ 'ಅಮ್ಮ, ನಿನ್ನ ಮೊಕ ನೋಡೋಕೆ ಆಗುತ್ತಾ ಇಲ್ವೋ ಅಂದ್ಕೊಂಡಿದ್ದೆ' ಅಂತ ಅತ್ತದ್ದು ಈಗಲೂ ನೆನಪು.. ಆಗೆಲ್ಲ ಈಗಿನ ಹಾಗೆ ಮೊಬೈಲ್ ಎಲ್ಲಿದ್ವು, ಟೆಲಿಗ್ರಾಂ ಕಳಿಸ್ತಾ ಇದ್ರು . ಹೊರಟ್ರು ಅಂತ ಟ್ರಂಕ್ ಕಾಲ್ ಮಾಡಿದರೆ ಇಷ್ಟ್ ಹೊತ್ತಿನ ಬಸ್ಸು ಒಂದಷ್ಟು ಹೆಚ್ಚುಕಡಿಮೆ ಇಷ್ಟ್ ಹೊತ್ತಿಗೆ ಬರುತ್ತೆ ಅನ್ನೋ ಭರವಸೆಯಿಂದ ಕಾಯ್ತಾ ಇದ್ದದ್ದು ನೋಡಿದ ನೆನಪಿದೆ)
ಸುಳ್ಯ ಬಿಟ್ಟು ಹೊರಟ ಮೇಲೆ ನಡುವೆ ಮತ್ತೆರಡು ಬಾರಿ ಯಾರಿಗೂ ಕರೆ ಮಾಡಿದ್ಲು ಆ ಹೆಣ್ಣು ಮಗಳು. ನಡುನಡುವೆ ಗಂಡನ್ನ ಬೈತಾ ಇದ್ಲು. 'ಮಗುಗೆ ಬಿಸ್ಕೆಟ್ ತನ್ರಿ ಅಂದ್ರೆ ಹಂಗೆ ಬಂದ್ರಲ್ಲ' ಅಂತ ಅಲವತ್ತು ಕೊಳ್ತಾ ಇದ್ಲು. ಮಡಿಕೇರಿ ಬಂತು. ಮತ್ತೆ ಯಾರಿಗೂ ಕರೆ ಮಾಡಿದ್ಲು 'ಬರ್ತೀವಿ ದಫನ್ ಮಾಡ್ಬೇಡಿ' ಅಂದ್ಲು.. ಗಂಡನಿಗೆ ಮಗುವಿಗೆ ನೀರು ಮತ್ತೆ ಬಿಸ್ಕತ್ ತರೋಕೆ ಹೇಳಿದ್ಲು. ಒಂದಷ್ಟು ದುಡ್ಡು ಕೊಟ್ಟಳು ಅನಿಸುತ್ತೆ. ಆ ಮನುಷ್ಯ ಇಳಿದು ಹೋದ.. ಹಿಂದೆ ಸೀಟ್ನಲ್ಲಿ ಇದ್ದ ವ್ಯಕ್ತಿಯೊಬ್ಬ ಅವರ ಸೀಟ್ಗೆ ಬಂದ.. ಈಕೆ ಶುರು ಮಾಡಿದ್ಲು 'ನೋಡಣ್ಣ ಹಂಗೆ..ಹಿಂಗೇ , ನಂಗೆ ಅಲ್ಲಿ ಖರ್ಚಿಗೆ ಕಾಸು ಬೇಡ್ವಾ ಎಲ್ಲ ಇವನ್ಗೆ ಕೊಟ್ರೆ.. ಮಗುಗೆ ಏನೂ ತರ್ಲಿಲ್ಲ .. ಕೊಟ್ಟ ದುಡ್ಡು ಮಡಿಕಂಡವ್ನೆ. ನಾನು ವಾಪಸ್ಸು ಬರೋದು ಹೆಂಗೆ ' ಅವ್ನು ಏನೋ ಗುಸುಗುಸು ಅಂದ . ಅಷ್ಟ್ರಲ್ಲಿ ಗಂಡ ಅನಿಸಿಕೊಂಡವನು ಬಂದ ಏನು ತಂದ್ನೋ ಬಿಟ್ನೋ ಮತ್ತೆ ಆಕೆ ಪೇಚಾಡಲು ಶುರು ಮಾಡಿದ್ಲು.. ನಾ ಮಂಜುಗೆ ಹೇಳ್ದೆ 'ಬ್ಯಾಗ್ ಅಲ್ಲಿ ಸ್ನಾಕ್ಸ್ ಇದ್ಯಲ್ಲ ಕೊಟ್ಬಿಡು ಮಂಜು , ಪಾಪ ಮಗು ತಿನ್ಲಿ' ಮಂಜು ಹೇಳಿದ್ರು 'ತಾಯಿ,ನಿಂಗೆ ಇವೆಲ್ಲ ಗೊತ್ತಾಗೋದಿಲ್ಲ ಸುಮ್ನೆ ಕಣ್ ಮುಚ್ಚಿಕೊಂಡಿರೋ ಹಂಗೆ ಕಿವಿನೂ ಮುಚ್ಚಿಕೊಂಡು ದೇವ್ರು ಕುಂತಗೆ ಕೂತ್ಕೋ , ಆ ಮಗ ಎಣ್ಣೆ ಹಾಕಿದ್ದಾನೆ, ನಾನೇನಾದ್ರೂ ಕೊಡೋಕೆ ಹೋದ್ರೆ ಅವ್ನ ಬಾಯಲ್ಲಿ ನಾ ಅರ್ಚನೆ ಮಾಡಿಸ್ಕೊಬೇಕಾಗುತ್ತೆ' ಅಂದ್ರು ... ಆ ಹೆಣ್ಣು ಮಗಳು 'ಅವ್ನ ಆ ಕಡೆ ಕೂತ್ಕೊಳೋಕೆ ಹೇಳು ಅಣ್ಣ, ನೀ ಈ ಕಡೆ ಬಾ, ಅಂತ 'ಅಣ್ಣ ' ಅಂತ ಅನಿಸಿಕೊಳ್ತಾ ಇದ್ದ ವ್ಯಕ್ತಿಗೆ ಹೇಳ್ತಾ ಇದ್ದದ್ದು ಕೇಳಿಸ್ತು. ಅಣ್ಣನ ನಡವಳಿಕೆ 'ಅಣ್ಣನ' ತರ ಇರ್ಲಿಲ್ಲ ... ಹುಣಸೂರಿಗೆ ಬರೋ ಅಷ್ಟ್ರಲ್ಲಿ ಆಕೆ ಮತ್ತೊಂದೆರಡು ಕರೆಗಳನ್ನ ಮಾಡಿದ್ಳು. ಹುಣಸೂರಲ್ಲಿ ಆ ಅಣ್ಣ ಒಂದಷ್ಟು ದುಡ್ಡು ಕೊಟ್ಟು ಗಂಡನಿಗೆ ಹಾರ ತರೋಕೆ ಹೇಳ್ದ. ಇಳಿದು ಹೋದ ಆ ಮನುಷ್ಯ ಬರಲು ಸಮಯ ತೆಗೆದುಕೊಂಡಾಗ ಡ್ರೈವರ್ ಹಾಗು ನಿರ್ವಾಹಕ ಕೂಡ ರೇಗಿಯೇ ಬಿಟ್ರು 'ಬಸ್ ಹತ್ತಿದಾಗಿನಿಂದ ಬರಿ ಇದೇ ಆಯ್ತು ಹದವಾಗಿ ಇರೋಕೆ ಬರೋಲ್ವಾ'.....
ಬಸ್ ಹತ್ತಿದಾಗ ಇದ್ದ 'ಪಾಪ ಯಾರೋ ಸಂಕಟ ಪಡುತ್ತಾ ಇದ್ದಾರೆ' ಅನ್ನೋ ಅನುಕಂಪ ಇಳಿಯೋ ಹೊತ್ತಿಗೆ ರೇಜಿಗೆ ಅನಿಸಿಬಿಟ್ಟಿತ್ತು .. ಯಾಕೋ ಇಳಿವಾಗ ಕೂಡ ಅವರ ಮುಖ ನೋಡಬೇಕು ಅನಿಸಲಿಲ್ಲ .. ಆ ಮಗುವಿನ ಮುಖ ನೋಡಿದೆ.. ಪುಟ್ಟ ಮುದ್ದು ಹೆಣ್ಣು ಕೂಸು .... ಎಲ್ಲೋ ಮನಸ್ಸು 'ದೇವರೇ' ಅಂತ ಚೀರಿತು ...
ಮಗ ಕಾರ್ ನಿಲ್ಲಿಸ್ಕೊಂಡು ಕಾಯ್ತಾ ಇದ್ದ. ಮುಖ ನೋಡಿ 'ಸುಸ್ತಾಯ್ತಾ ಮಾ' ಅಂದ .. ಭದ್ರವಾಗಿ ಅವ್ನ ಭುಜ ಹಿಡಿದು 'ಇಲ್ಲ ಮಗ' ಅಂದೆ...
ಅಸಹಾಯಕತೆಯೋ, ಅನಕ್ಷರತೆಯೋ, ಅಗತ್ಯವೋ ..... ಗೊತ್ತಿಲ್ಲ . ಆದರೆ ವಾಸ್ತವ ಮಾತ್ರ ಕಠಿಣ
ಪುಟ್ಟಿ ಈಗ ಕಾಲೇಜು ಹುಡುಗಿ. ಆದ್ರೂ ಆ ವಟವಟ ನಿಲ್ಲಿಸಿಲ್ಲ. ಶಾಲೆಯಲ್ಲಿ ಹೇಗೆ ಜಗಳ ಆಡ್ತಾ ಇದ್ದಳೋ ಹಂಗೆ ಇಲ್ಲೂ ಹುಡುಗರ ಜೊತೆ ಜಗಳ ಆಡ್ತಾಳೆ. ಕಿರಿಕ್ ಮಾಡ್ತಾಳೆ. 'ಮಗ ಈಗ ಕಾಲೇಜ್ ಅಲ್ವ ಸ್ವಲ್ಪ ಡಿಸೆಂಟ್ ಆಗಿರಬಾರ್ದ' ಅಂದ್ರೆ 'ಈ ಡಿಸೆಂಟ್ ಅಂದ್ರೆ ಏನ್ ಹೇಳು' ಅಂತಾಳೆ . 'ಸ್ವಲ್ಪ ತಾಳ್ಮೆಯಿಂದ ಹೊಂದಿಕೊಂಡು ಹೋಗ್ಬೇಕು. ಚಿಕ್ಕಚಿಕ್ಕ ವಿಷ್ಯಕ್ಕೆ ಜಗಳ ಮಾಡಿಕೊಳ್ಳಬಾರದು' ಅಂದ್ರೆ 'ಮಾ, ನಿನಗೆ ಚಿಕ್ಕ ವಿಷ್ಯ ಆದ್ರೆ ನನಗೆ ನನ್ನ ಪ್ರೆಸ್ಟಿಜ್(!?) ವಿಷ್ಯ ' ಅಂತಾಳೆ... ಮಾತನ್ನ ಒಂಚ್ಚೂರು ಸೆನ್ಸರ್ ಮಾಡೋದಿಲ್ಲ. 
ಕಾಲೇಜಿಂದ ಬಂದಿದ್ದೆ ಹಾಲು ಕುಡಿತಾ ಅಂದಿನ ಪ್ರವರ ಶುರು ಮಾಡಿದ್ರೆ ಮಂಜು 'ಮಗ ಸಾಕು ನಿಲ್ಸು' ಅನ್ನೊವರೆಗೂ ಹೇಳ್ತಾನೆ ಇರ್ತಾಳೆ. ಸಂಜೆಯಲ್ಲಿ ಬರಿ ಆ ದಿನದ ಪಾಠ, ತಮಾಷೆ, ಜಗಳ, ಆಟದ ಕಥೆ ಹೇಳಿದ್ರೆ ಬೆಳಿಗ್ಗೆ ಬೆಳಿಗ್ಗೆ ಎದ್ದು ತಿಂಡಿ ತಿಂತಾ ಇರೋವಾಗ (ಅಣ್ಣ ಅಪ್ಪ ಇಲ್ಲದೆ ಇರೋವಾಗ) 'ಪರ್ಸನಲ್ ' ಕಥೆಗಳನ್ನ ಹೇಳ್ತಾಳೆ. ಗೆಳತಿಯರ ಬಗ್ಗೆ , ಗೆಳೆಯರ ಬಗ್ಗೆ , ಅದ್ಯಾರೋ ಯಾರನ್ನೋ ಪ್ರೊಪೋಸ್ ಮಾಡಿದ ಬಗ್ಗೆ .. ಇನ್ಯಾರೋ ಇನ್ಯಾರಿಗೋ ಮೆಸೇಜ್ ಹಾಕಿ ಸಿಕ್ಕಿಕೊಂಡ ಬಗ್ಗೆ... ಇತ್ಯಾದಿ ಇತ್ಯಾದಿ..ನಾನು ಅವಳಿಗೆ ದೋಸೆನೋ, ಚಪಾತಿನೋ, ಪೂರಿನೋ ಹಾಕ್ತಾ, ಬಾಕ್ಸ್ ತಯಾರು ಮಾಡುತ್ತಾ ಕೇಳ್ತಾ ಇರ್ತೀನಿ, ನಗ್ತಾ ಇರ್ತೀನಿ . ಒಮ್ಮೊಮ್ಮೆ ಬೈತೀನಿ
ಬೆಳಿಗ್ಗೆ ಕೂಡ ಹಾಗೆ ಶುರು ಮಾಡಿದ್ಲು."ಮಾ, ___ ಹಿಂಗೆಲ್ಲ ಹೇಳಿದ್ಲು" 'ಅದೇನ್ ಮಕ್ಲೊ ಕಾಣೆ..ನನ್ ಮಗನಿಗೂ ನಿಂಗೂ ಬರಿ ೪ ವರ್ಷ ವ್ಯತ್ಯಾಸ. ನನ್ ಮಗ ಒಂದು ದಿನ ಕೂಡ ಇಂತ ಮಾತೆಲ್ಲ ಆಡಿಲ್ಲ. ನೀವೇನ್ ಮಹರಾಯ್ತಿ ಇನ್ನು ನೆಟ್ಟಗೆ ಚೂಡಿದಾರ್ ಪ್ಯಾಂಟ್ ಕಟ್ಟೋಕೆ ಬರೋಲ್ಲ ಆಗ್ಲೇ ಇವೆಲ್ಲ' ಅಂತ ಬೈದೆ....
'ಲೋ ಮಾ, ನಿನ್ ಮಗ ಆಡಿದ್ರು ಹೇಳಿಲ್ಲವೇನೋ ಬಿಡು, ಅವನು ಚೈಲ್ದು!! ನಾವ್ ಗೊತ್ತಲ್ಲ ಏನಿದ್ರು ಸ್ಟ್ರೈಟ್ ಫಾರ್ವಾರ್ಡ್ಯೂ .. ನಾ ಯಾರ್ನಾದ್ರು ಲವ್ ಮಾಡಿದ್ರೆ ಕರ್ಕೊಂಡ್ ಬಂದು ನಿನ್ ಮುಂದೆ ನಿಲ್ಲಿಸ್ತೀನಿ , ಸ್ವಲ್ಪ ತಮ್ಮ ಬುದ್ದಿ ತಮ್ಮ ಗಂಡ ಅವ್ರ ಪೇಶೆನ್ಸ್ ಎಲ್ಲಾ ಕಲಿಸಿಬಿಡಿ !!ಇಲ್ಲಾ ಅಂದ್ರೆ ಪಾಪ ಅವ್ನ ಕಥೆ ಬಿರ್ಯಾನಿ ಅಷ್ಟೇ !!!'
ಅದೆಷ್ಟ್ ಜನ್ಮದ ಪುಣ್ಯದ ಫಲನೋ ಇಂತಹ ಪುಣ್ಯಾತಗಿತ್ತಿಗೆ ಅಮ್ಮನಾಗೋದು :)))))
ಕೃಷ್ಣ ಯುದ್ಧ ಬೇಡಾ ಅನ್ನೋರ ಬಯಕೆಯಂತೆ ತನ್ನ ಅಂತಿಮ ಪ್ರಯತ್ನವಾಗಿ ಶಾಂತಿಸಂಧಾನಕ್ಕೆ ಹೊರಡುತ್ತಾನೆ. 
ದ್ರೌಪದಿ ತನಗಾದ ಅವಮಾನವನ್ನ ಮನದಲ್ಲಿ ಇಟ್ಟು ಕೇಳ್ತಾಳೆ 'ಅಣ್ಣ ಹಾಗಾದ್ರೆ ಈ ಯುದ್ಧ ನಡೆಯೋದಿಲ್ವ ' 
'ತಂಗಿ , ಈ ವಿಷಯದಲ್ಲಿ ನೀ ನನಗಿಂತ ಹೆಚ್ಚು ದುರ್ಯೋಧನನ ಮೇಲೆ ಭರವಸೆ ಇಡಬಹುದು, ನಾ ಇನ್ನು ಹತ್ತು ಸಂಧಾನ ನಡೆಸಿದರೂ ಅವನು ಯುದ್ಧ ನಿಲ್ಲಿಸುವ ಮನಸ್ಥಿತಿಯಲ್ಲಿ ಇಲ್ಲ " ಅಂತಾನೆ .... 
ಇದು ಕಥೆ ... 
ಯುದ್ಧ ಬೇಡಾ ಅನ್ನೋರಿದ್ದಾರೆ.... ಅವರಿಗಾಗಿ ಸಂಧಾನಗಳು ನಡೆದಿವೆ .. ದೇಶಕ್ಕಾದ ಅಪಮಾನಕ್ಕೆ ಪ್ರತಿಕಾರ ತೆಗೆದುಕೊಳ್ಳಬೇಕು ಎಂದು ಹಂಬಲಿಸೋ ಮನಸ್ಸುಗಳಿವೆ .. ದೇಶದ ಹಿರಿಯನೇ ಸಂಧಾನಕ್ಕೆ ಹೋದರೂ ಕಡೆಗಣಿಸೋ ದುರ್ಯೋಧನನಂತಹ ಪಾಕ್ ಕೂಡ ಇದೆ .....
It is not a favor for war But ...stil ..... ತಾಯ್ನಾಡಿನ ಮೇಲೆ ದೌರ್ಜನ್ಯ ಸಹಿಸಲು ಸಾಧ್ಯವಿಲ್ಲವೇನೋ
ಸಾಮಾನ್ಯವಾಗಿ ಮನೆಗೆ ಊರಿಂದ/ಮಂಜು ಕಡೆಯ ನೆಂಟರು ಯಾರಾದ್ರು ಬಂದ್ರೆ .. ನಾ ಅಡಿಗೆ ಮಾಡುವಾಗ ಮಂಜು ನನ್ ಜೊತೆ ಅಡುಗೆಮನೆಯ ಒಳಗೆ ಹೊರಗೆ ಓಡಾಡುತ್ತಾರೆ .. ಮೊದ್ಲೆಲ್ಲಾ ತುಂಬಾನೇ ಮುಜುಗರ ಅನಿಸ್ತಾ ಇತ್ತು .. ಒಂದೆರಡು ಬಾರಿ ರೇಗಿಯೂ ರೇಗಿದ್ದೆ "ಯಾಕೆ ನನಗೆ ಅಡುಗೆ ಮಾಡೋಕೆ ಬರೋದಿಲ್ಲ ಅಂತ ಅಂದ್ಕೊಂಡು ಹಿಂಗೆ ಆಡ್ತೀಯಾ' ಅಂತ . ಆಗ ಮಂಜು ಹೇಳಿದ್ದು 'ಅಯ್ ನಮ್ ಕಡೆವು ಒಂದ್ ತರ .. ಎಲ್ಲಾದ್ರಲ್ಲೂ ತಪ್ಪು ಕಂಡಿಹಿಡಿತಾರೆ ..ಏನೂ ಸಿಗಲಿಲ್ಲ ಅಂದ್ರೆ ಗಸಗಸೆ ಹೆಚ್ಚಾಯ್ತು ಅಂತಲಾದ್ರೂ ಅಂತಾರೆ .. ನಾ ನಿನ್ ಜೊತೆ ಇದ್ರೆ ನಾನೇ ಹಾಕಿದ್ದು ಅಂತೀನಿ , ಆಗ ಏನೂ ಅನ್ನದೆ ತಿಂತಾರೆ .. ನಮ್ ಕಥೆ ಬಿಡು ತಾಯಿ.. ಬಿರ್ಯಾನಿ ಮಾಡಿದ್ರು ನಾವೇ ತಿನ್ನೋದು ನೆನ್ನೆಯ ಅನ್ನಕ್ಕೆ ಚಿತ್ರಾನ್ನ ಕಲೆಸಿದ್ರು ನಾವೇ ತಿನ್ನೋದು' (ನನ್ ಗೆಳೆಯ ಗೆಳತಿಯರು ಬಂದ್ರೆ ನೀ ಮಾತಾಡಮ್ಮ ನಾ ಟೀ ಮಾಡ್ತೀನಿ ಅಂತ ಹೇಳೋ ಸಹೃದಯಿ ...) ಮದುವೆಯಾದ ಹೊಸದರಲ್ಲಿ ಬೆನ್ನ ಹಿಂದೆ ನಿಂತವ ...ಈಗ್ಲೂ ಬೆನ್ನು ಬಿಡದೆ ನಿಂತವ್ನೆ :))))
ನೆನ್ನೆ ಹಿರಿಯರೊಬ್ಬರು ಮನೆಗೆ ಬಂದಿದ್ರು .. ಮಂಜು ನನ್ನ ಹಿಂದೆ ಇದ್ದದ್ದು ನೋಡಿ 'ಇನ್ನು ಅವ್ಳ ಹಿಂದೆ ಸುತ್ತುತೀಯೇನೋ ' ಅಂದ್ರು .. 'ಮಂಜು 'ಇನ್ಯಾರ ಹಿಂದೆ ಸುತ್ಲಿ ಮಾವ ... !!!' ಅಂದ್ರು .... ಎಲ್ಲರಂತವನಲ್ಲ ನನ ನಲ್ಲ :)))))))
ದಸರಾ ಅಂದ್ರೆ ನಾವ್ ಮೈಸೂರಿನವರಿಗೆ ಒಂದ್ ತರ ಸಂಭ್ರಮ . ಪ್ರತಿ ವರ್ಷ ನೋಡಿದರೂ ಮತ್ತೆ ಈ ವರ್ಷ ಕೂಡ ಹೊಸದೇನೂ ಇರಬೇಕು ಅನಿಸೋ ಅಷ್ಟು ಉತ್ಸಾಹ .. ಓದುವಾಗ ಮೆಡಿಕಲ್ ಕಾಲೇಜ್ ಅಲ್ಲಿ ಕುಳಿತು ನೋಡಿದ ದಸರ ಬಿಟ್ರೆ ಮದ್ವೆ ಆದ ಮೇಲೆ ದಸರ ಜಂಬೂ ಸವಾರಿಗೆ ಅಂತ ಹೋಗೇ ಇರಲಿಲ್ಲ. ಈ ಬಾರಿ ಮಂಜು ಹೇಳಿದ್ರು 'ನಿನ್ನ ದಸರಾಗೆ ಕರ್ಕೊಂಡ್ ಹೋಗ್ತೀನಿ ಅಂತ .. 'ಅಯ್ಯೋ ಆ ರಶ್ ನನಗೆ ಆಗೋದಿಲ್ಲ ತಲೆ ನೋವು ಬಂದ್ಬಿಡುತ್ತೆ ಅಷ್ಟೇ' ಅಂದೆ . 'ನೀ ಸುಮ್ನೆ ಬಾ, ನಾ ಕರ್ಕೊಂಡ್ ಹೋಗ್ತೀನಿ' ಅಂದ್ರು. 
ಮಳೆಯಲ್ಲಿ ನೆನೆಯುತ್ತಾ ಅಲ್ಲೆಲ್ಲೋ ಗಾಡಿ ನಿಲ್ಲಿಸಿ ನಡೆಯುತ್ತಾ ಸಯ್ಯಾಜಿ ರಾವ್ (ರಾಜ ಪಥ!! ) ರಸ್ತೆಯಲ್ಲಿನಡೆಯುತ್ತಾ ಹೋದ್ವಿ.. ಮಳೆಯಲ್ಲೂ ಅದೇನ್ ಜನ .. "ಮೂರು ದಿನದ ಹಿಂದೇನೆ ಜಾಗ ಆಕಿವ್ನಿ .. ಈಗೇನ್ ನೀ ಬಂದು ತಳ್ಳಾಡ್ತೀಯ' ಅನ್ನೋ ಹೆಂಗಸರು , ಸೆಲ್ಫಿ ತೆಗೆದುಕೊಳ್ಳೋ ಹೆಣ್ ಐಕ್ಳು, ಹುಡುಗಿಯರನ್ನ ಕಿಚಾಯಿಸೋ ಗಂಡ್ ಐಕ್ಳು , ಅಪ್ಪನ ಹೆಗಲೇರಿದ ಚಿಣ್ಣರು, ಕೈಗೆ ಸಿಗದ ಮಕ್ಕಳನ್ನ ಬೈಯ್ಯೋ ಅಮ್ಮಂದಿರು, ಉಸ್ ಅಂತ್ಲೆ ಅಂಬಾರಿ ಬರೋ ವರೆಗೂ ಕಾಯ್ತಾ ಇದ್ದ ಹಿರಿಯರು, ಒಂದಷ್ಟು ವಿದೇಶಿಯರು, ನಮ್ಮ ಪೊಲೀಸರು , ಮಟ ಮಟ ಮಧ್ಯಾಹ್ನವೇ 'ಕುಡಿದು' ಬಂದು ಬೈಸಿಕೊಳ್ತಾ ಇದ್ದವರು , ಸಿಕ್ಕಿದ್ದೇ ಚಾನ್ಸ್ ಅಂತ ಹೆಚ್ಚು ಬೆಲೆ ಹೇಳಿ ತಿಂಡಿತಿನಿಸು ಮಾರ್ತಾ ಇದ್ದವರು, ಲಾರಿಗಳನ್ನ ನಿಲ್ಲಿಸಿಕೊಂಡು 'ಒಂದು ಸೀಟ್ಗೆ ೫೦ ರೂಪಾಯಿ' ಅಂತ ದುಡ್ಡು ಗಳಿಸೋ ಲಾರಿಯವರು, ಪ್ರತಿಯೊಂದು ಸ್ತಬ್ಧಚಿತ್ರ ಬಂದಾಗ ಉದ್ಗಾರಗಳು, ಒಂದು ಕುಣಿತ ಹಾಕಿ ಮುಂದೆ ಹೋಗ್ರಣೋ ಅಂತ ಕೇಕೆ ಹಾಕೋ ಪಡ್ಡೆಗಳು, ಹೆಂಡತಿಯ ರಕ್ಷಣೆಗೆ ಅಂತ್ಲೆ ಹೆಂಡತಿಯ ಹೆಗಲ ಸುತ್ತಾ ಕೈ ಹಾಕಿ ಕರೆದುಕೊಂಡು ಹೋಗೋ ಪತಿದೇವರುಗಳು, ಹಸಿರು ದಸರ ಅಂತಲೇ ಪೊಲೀಸರ ಸೈಕಲ್ ಸವಾರಿ, ಅಂಬಾರಿ ಬಂದ ಒಡನೆ 'ಚಾಮುಂಡಿಗೆ ಜೈ, ಅಮ್ಮನಿಗೆ ಜೈ' ಅಂತ ಭಕ್ತಿಯಿಂದ ಕಣ್ಣು ತುಂಬಿಕೊಂಡವರು, ಅಂಬಾರಿ ಹೋದ ಕೂಡಲೇ ಬನ್ನಿಮಂಟಪದ ಕಡೆ ದೌಡಾಯಿಸೋರು, .. ಅಹ್ ಮೈಸೂರು ದಸರಾ ಎಷ್ಟೊಂದು ಸುಂದರ..
ನಾಜೂಕಾಗಿ ಒಂದೆಡೆ ಕುಳಿತು sophisticated ಆಗಿ ಮೈಗೆ ಕೈ ತಾಗಿಸಿಕೊಳ್ಳದೆ ಚಪ್ಪಾಳೆ ಹೊಡೆಯಲೂ ಕೂಡ ಕಾಸು ಬೇಕು ಅನ್ನೋ ಅಥವ ಅವಮಾನ ಅನ್ನೋ ಅಥವಾ ಸೋಮಾರಿತನ ತೋರುವ ಜನಗಳ ನಡುವಿನ ದಸರಾಕ್ಕಿಂತ ತುಂಬಾ ಭಿನ್ನವಾದ 'ಜನರ ದಸರ' ನೋಡಿದೆ...
THe best part was ಅರ್ಜುನ ತನ್ನ ಗಜ ಗಾಂಭೀರ್ಯದೊಡನೆ ತಾಯಿ ಚಾಮುಂಡೇಶ್ವರಿಯ ಹೊತ್ತು ಸಾಗಿದ ಪರಿ ಮತ್ತು ಮಳೆಯಲ್ಲಿ ಕೂಡ ತನ್ನ ನಗುವನ್ನ ಎರಚುತ್ತಾ ಸಾಗಿದ ತಾಯಿ ಚಾಮುಂಡಿ .....
(ವಾಪಸ್ಸು ಬಂದ ಮೇಲೆ ನನ್ ಐಕ್ಳು 'ಮುಗಿತಾ ಜಾಲಿ ಬರ್ಡ್ಸ್ ದಸರ ' ಅಂದ್ವು... ನನ್ ಗಂಡ ಹೇಳಿದ್ದು 'ಅಯ್ , ದಸರಾ ಮುಗಿದ್ರೇನು ದೀಪಾವಳಿ ಬಂತಲ್ಲ " )
ದಸರಾ ಮುಗಿತಾ? ಇಲ್ಲವಲ್ಲ ಹಿಂಗ್ ಹೋಗಿ ಮತ್ ಹಾಂಗ್ ಬಂದ್ಬಿಡುತ್ತೆ :))))))
ರಿಯರೊಬ್ಬರು ಹೇಳಿದ ಪತಿಪತ್ನಿಯರ ನಡುವಿನ ನಂಬಿಕೆಯ ಬಗ್ಗೆ ಗೆಳೆತನದ ವಿಶ್ವಾಸದ ಬಗ್ಗೆ ಹೇಳಿದ ಕಥೆ .. ಹಂಚಿಕೊಳ್ಳಬೇಕು ಅನಿಸ್ತು 
ಒಮ್ಮೆ ಕರ್ಣ ಹಾಗು ದುರ್ಯೋಧನನ ಪತ್ನಿ ಭಾನುಮತಿ ಅವಳ ಅಂತಃಪುರದಲ್ಲಿ ಪಗಡೆ ಆಡ್ತಾ ಇರ್ತಾರೆ . ಭಾನುಮತಿ ಸೋಲ್ತಾ ಇರ್ತಾಳೆ. ಕರ್ಣ ಆಟದಲ್ಲಿ ಮೇಲುಗೈ ಸಾಧಿಸ್ತಾ ಇರ್ತಾನೆ .. ಅಷ್ಟ್ರಲ್ಲಿ ದುರ್ಯೋಧನ ಅಂತಃಪುರಕ್ಕೆ ಬರ್ತಾನೆ. ಗಂಡ ಬಂದನಲ್ಲ ಎಂದು ಭಾನುಮತಿ ಏಳೋಕೆ ಹೋಗ್ತಾಳೆ .. ಬಾಗಿಲಿಗೆ ಬೆನ್ನು ಹಾಕಿ ಕುಳಿತ ಕರ್ಣ ಸೋಲುವ ನೆಪಕ್ಕೆ ಆಟದಿಂದ ಹೊರ ಹೋಗುತ್ತಾ ಇದ್ದಾಳೆ ಇವಳು ಎಂದುಕೊಂಡು ಸ್ವಾಭಾವಿಕವಾಗಿ ಕೈ ಹಿಡಿದು ಎಳೆಯೋಕೆ ಹೋಗ್ತಾನೆ .. ಭಾನುಮತಿಯ ಕೈ ಸಿಗದೇ ಅವಳ ಮುತ್ತಿನ ಹಾರ ಕೈಗೆ ಸಿಕ್ಕಿ ಮುತ್ತುಗಳೆಲ್ಲಾ ಚಲ್ಲಾಪಿಲ್ಲಿಯಾಗಿ ಹೋಗುತ್ತವೆ .. ಕ್ಷಮೆಕೇಳಲು ಎದ್ದ ಕರ್ಣನಿಗೆ ಹಿಂದೆ ನಿಂತ ದುರ್ಯೋಧನ ಕಾಣ್ತಾನೆ .. ಅಚಾತುರ್ಯದಿಂದ ಹಾರ ಕಿತ್ತುದ್ದಲ್ಲದೆ ಅಪಾರ್ಥಕ್ಕೆಡೆ ಮಾಡಿಕೊಡುವಂತ ಪರಿಸ್ಥಿತಿಯಿಂದ ಭಾನುಮತಿ ಹಾಗು ಕರ್ಣ ಇಬ್ಬರೂ ಮುಜುಗರಕ್ಕೆ ಒಳಗಾಗುತ್ತಾರೆ .... ದುರ್ಯೋಧನ 'ಮುತ್ತುಗಳ ಆಯ್ದರೆ ಮಾತ್ರ ಸಾಕೆ ಇಲ್ಲಾ ಹಾರವನ್ನೂ ಕಟ್ಟಿಕೊಡಬೇಕೆ ಮಹಾರಾಣಿ ' ಎಂದಂದು ಪರಿಸ್ಥಿತಿಯ ತಿಳಿಯಾಗಿಸುತ್ತಾನೆ .. ಕರ್ಣನ ಹೆಗಲ ಮೇಲೆ ಕೈ ಹಾಕಿ ನಗುತ್ತಾನೆ ....
ನಂಬಿಕೆ ವಿಶ್ವಾಸಗಳ ಮೇಲೆ ಕಟ್ಟಿದ ಸಂಬಂಧಗಳು ಬೃಹತ್ ವೃಕ್ಷಗಳಂತೆ ...... ಕಥೆ ಕೇಳಿದ ಮನಸ್ಸು ಆ ಮರದಂತೆ ಹಸಿರಸಿರು
ಮನೆಯ ಪಕ್ಕ ಒಂದು ಹಿರಿಯ ಗಂಡಹೆಂಡತಿ ಇದ್ದಾರೆ. ಮಕ್ಕಳಿಲ್ಲ . ಗಂಡ ಹಾಲು ಒಕ್ಕೂಟದಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ.. ಅಷ್ಟು ವಯಸ್ಸಾಗಿದ್ದರೂ ಒಂದಿಬ್ಬರು ಮಕ್ಕಳಿಗೆ ಪಾಠ ಹೇಳಿಕೊಡ್ತಾರೆ . ಆ ಹಿರಿಯ ಮಹಿಳೆ ಮನೆಯಲ್ಲೇ ಕುಳಿತು ಒಂದಷ್ಟು ಮಣಿ ಸರ, ಗೆಜ್ಜೆ ವಸ್ತ್ರಗಳನ್ನ ಮಾಡ್ತಾರೆ . ಈಗ್ಲೂ ದಸರೆಯಲ್ಲಿ ರಾಜರಾಣಿ ಗೊಂಬೆಗೆ ಅಲಂಕಾರ ಮಾಡಿಕೊಡ್ತಾರೆ. ಕಾಂಪೌಂಡ್ ಹೊರಗೆ ಗಿಡ ಹಾಕಿದರೆ ಹಸುಗಳನ್ನ "ಹೊಡೆದು" ಓಡಿಸಬೇಕಲ್ಲ ಎಂದು ಹಸುಗಳು ತಿನ್ನದೇ ಉಳಿಸುವ (ದೊಡ್ಡ ಪತ್ರೆ, ತುಳಸಿ) ಗಿಡಗಳನ್ನ ಹಾಕಿದ್ದಾರೆ. ಗಂಡನೋ ಹೆಂಡತಿಯೋ ಅವರ ಆರೋಗ್ಯದ ಆಧಾರದ ಮೇಲೆ ಯಾರೋ ಒಬ್ಬರು ಬಾಗಿಲು ಗುಡಿಸಿ, ಒಂದು ಸಣ್ಣ ಬಕೆಟ್ ಅಲ್ಲಿ ನೀರು ಹಿಡಿದು ಚುಮುಕಿಸಿದರೆ ಆಕೆ ರಂಗೋಲಿ ಹಾಕ್ತಾರೆ. ಮತ್ತೊಂದು ಬಕೆಟ್ ನೀರು ಗಿಡಗಳಿಗೆ ಹಾಕ್ತಾರೆ (ನಮ್ಮ ಕಡೆ ಕೆಲವರು ಪೈಪ್ ಹಿಡಿದು ನೀರು ಹಾಕೋಕೆ ಶುರು ಮಾಡಿದ್ರೆ ಕಾವೇರಿ ಬಾಗಿಲಲ್ಲೇ ಹರೀತಾಳೆ). ಪ್ರತಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಮಾಡ್ಕೊಂಡು ಹೋಗ್ತಾರೆ. 'ಸುನೀತಾ , ಆಮೇಲೆ ಬಂದು ಕುಂಕುಮ ತಗೊಂಡ್ ಹೋಗಿ ಅಂತ ಕರೀತಾರೆ' . ಎಂದೂ ಯಾರು ದೂರುವಂತೆ ನಡೆದುಕೊಂಡಿಲ್ಲ ಮತ್ತೊಬ್ಬರನ್ನು ದೂರೋದು ಇಲ್ಲ .ವಾರಕ್ಕೆರಡು ಬಾರಿ ಮನೆಗೆ ಅಂತ ಮಾರ್ಕೆಟ್ ಇಂದ ಹೂ ತಂದಾಗ ಒಂದು ಹಿಡಿ ಹೂ ಕೊಟ್ರೆ ಆ ಹಿರಿಯಾಕೆ ಖುಷಿಯಿಂದ 'ರೇಟ್ ಕಮ್ಮಿ ಇದ್ದಾಗ ನಮಗೂ ಒಂದ್ ಕಾಲ್ ಕೆಜಿ ತಂದ್ ಬಿಡ್ರಪ್ಪಾ ' ಅಂತಾರೆ. ಅವರಷ್ಟಕ್ಕೆ ಅವರು 'ಸುಂದರವಾಗಿ' ಬದುಕುತ್ತಾ ಇದ್ದಾರೆ.ನೋಡಿದವರು "ಬದುಕಲು ಕಲಿಯಿರಿ" ಅನ್ನೋವಂತೆ ಬದುಕುತ್ತಾ ಇದ್ದಾರೆ.
ಮನೆಯ ಮುಂದಿನ ರಸ್ತೆ ಒಂದಷ್ಟು ದಿನಗಳಿಂದ ಹಳ್ಳ ಬಿದ್ದಿತ್ತು , ಅದ್ಯಾಕೋ ಗೊತ್ತಿಲ್ಲ ಸರಿ ಮಾಡಿಸಿದಷ್ಟು ನಮ್ಮ ಒಂದೆರಡು ಮನೆಗಳ ಮುಂದೆ ಯಾವಾಗ್ಲೂ ಹಳ್ಳವೆ ! ವಾಕಿಂಗ್ ಹೋಗಿ ಹಾಲು ತರುವಾಗೆಲ್ಲಾ ಹಾದಿಬದಿಯಲ್ಲಿ ಕಾಣೋ ದೊಡ್ಡ ಕಲ್ಲು ಗಾರೆಯ ತುಂಡುಗಳನ್ನ ಕೈಲಿ ಹಿಡಿದು ತಂದು ಆ ಹಳ್ಳಕ್ಕೆ ಹಾಕ್ತಾ ಇದ್ರು ಆ ಹಿರಿಯ. ಆ ಹೊತ್ತಲ್ಲಿ ಬಾಗಿಲಿಗೆ ನೀರು ಹಾಕುವ ನಾನು 'ಅಯ್ಯೋ ಅಂಕಲ್ , ಎಷ್ಟ್ ಹಾಕಿದ್ರು ಅಷ್ಟೇ ಬಿಡಿ ನಮ ರೋಡು ಉದ್ದಾರ ಆಗೋದಿಲ್ಲ' ಅಂತ ಹೇಳ್ತಾ ಇದ್ದೆ . ಅವರೂ ನಗ್ತಾ ಸಾಗ್ತಾ ಇದ್ರು . ಈಗ ಹಳ್ಳ ತುಂಬಿದೆ ..! ಅಷ್ಟೆಲ್ಲ ನೀರು ನಿಲ್ಲೋದಿಲ್ಲ ..
ಆದ್ರೂ ಅವರ ಬದುಕಿನ ಬಗ್ಗೆ ಅವರ ಆಸಕ್ತಿ, ಶಿಸ್ತು , ಬದುಕನ್ನ ನೋಡುವ ಆಪ್ಟಿಮಿಸಂ.. "ಬದುಕಿಗೆ ಗುರಿ ಬೇಕು ನಮ್ಮ ಮಕ್ಕಳ್ಳನ್ನ ಚೆನ್ನಾಗಿ ಬೆಳೆಸೋದೇ ನಮ್ಮ ಗುರಿ ಅಂತ ಸ್ಲೋಗನ್ ಹೇಳ್ಕೊಳ್ತಾ ಬದುಕುವುದಕ್ಕೆ ಯಾವುದೋ ಒಂದು ಆಸರೆ ಬೇಕು, ಗುರಿ ಬೇಕು ' ಅಂತ ಅಂದ್ಕೊಳ್ತಾ ಒಂದು false ಭ್ರಮೆಯಲ್ಲಿ ಬದುಕುವ ನಮಗೆ (ನನಗೆ ನನ್ನ ಗಂಡನಿಗೆ), ನಮ್ಮಂಥವರಿಗೆ ಬದುಕಲು ಕಲಿಯಿರಿ ಎಂದು ಹೇಳುವಂತೆ .... ಬದುಕೋದಕ್ಕೆ ಕಾರಣವೇನು ಬೇಡ ಚೆನ್ನಾಗಿ ಬದುಕೋದೇ ಒಂದು ಖುಷಿ ಅನಿಸೋ ಹಾಗೆ ...
ಮನಸ್ಸು ನೀಲಿನೀಲಿ ...ಒಂದೆರಡು ಹನಿ ಬಿದ್ದರೆ ಸಾಕು ಕಾಮನಬಿಲ್ಲನ್ನು ಮೂಡಿಸುವೇ ಎನ್ನುವ ಸೂರ್ಯಕಿರಣದಂತೆ
ಮೊನ್ನೆ ಮಧ್ಯಾಹ್ನ ಕಾರ್ತಿ ಫೋನ್ ಮಾಡ್ದ 'ಅಮ್ಮ, ವಾಟರ್ ಟ್ಯಾಂಕ್ ಹತ್ತಿರ ಇದ್ದೀನಿ ಬಾ ಪಿಕ್ ಮಾಡೋಕೆ ' ಸರಿ ಗಾಡಿ ತಗೊಂಡು ಹೊರಟೆ . ಹೈ ಟೆನ್ಶನ್ ರಸ್ತೆಗೆ ಬಂದು ಎಂದಿನಂತೆ ನನ್ನದೇ ಲಹರಿಯಲ್ಲಿ ಗಾಡಿ ಓಡಿಸ್ತಾ ಇದ್ದೆ .. ಹಿಂದೆಯಿಂದ ಜೋರು ಹಾರ್ನ್ ಕೇಳಿಸ್ತು, ಕನ್ನಡಿಯಲ್ಲಿ ತುಂಬಾ ಹತ್ತಿರಾನೆ ಒಬ್ಬ ವ್ಯಕ್ತಿ ನನ್ನ ಹಿಂದೇನೆ ಇರೋದು ಕಾಣಿಸ್ತು. ನಾ ಪಕ್ಕಕ್ಕೆ ತಗೊಂಡಷ್ಟು ಆ ವ್ಯಕ್ತಿ ಕೂಡ ಹತ್ತಿರಾನೆ ಬರ್ತಾ ಇರೋದು ಅರಿವಿಗೆ ಬರ್ತಾ ಇತ್ತು. ಮೊದ್ಲೇ ಗಾಡಿ ಓಡಿಸುವಾಗ ಸ್ವಲ್ಪ ಟೆನ್ಶನ್ ಪಾರ್ಟಿ ನಾನು ..ತೀರಾ ಪಕ್ಕಕ್ಕೆ ತಗೊಂಡು ಹೋದೆ ಮತ್ತು ಗಾಡಿ ಸ್ಲೋ ಮಾಡಿದೆ .. (ನಮ್ಮೂರಲ್ಲಿ ಸರಗಳ್ಳತನ ತುಂಬಾನೇ ಹೆಚ್ಚಾಗಿದೆ.. ಹಿಂದೆಯಿಂದ ಬಂದು ಮಹಿಳೆಯರ ಸರ ಕಿತ್ತುಕೊಂಡು ಹೋಗೋದು ಕೆಲವರಿಗೆ ಜೀವನಾಧಾರವಾಗಿ ಬಿಟ್ಟದೆ ಹಾಗು ಹೆಣ್ಣು ಮಕ್ಕಳಿಗೆ ಜೀವಕ್ಕೆ ಎರವಾಗಿ ಬಿಟ್ಟಿದೆ :( . ಓಡಿಸುವ ಗಾಡಿಯನ್ನ ನಿಲ್ಲಿಸುವುದೇ ಅಪಾಯ ಅನಿಸೋ ಹಾಗೆ .... ಆದ್ರೂ ಒಂದೊಂದೇ ರೂಪಾಯಿ ಕೂಡಿಟ್ಟು ಆಸೆಯಿಂದ ಮಾಡಿಸಿಕೊಳ್ಳು ಒಡವೆಯನ್ನ ಕ್ಷಣಮಾತ್ರದಲ್ಲಿ ಕಸಿದುಕೊಂಡು ಹೋಗುವ ಇಂತಹವರು ಒಂದಷ್ಟು ಕಷ್ಟ ಪಟ್ಟು ದುಡಿದರೆ ಆಗದೆ ಎನಿಸುತ್ತದೆ. ಮಂಜು ಹೇಳ್ತಾರೆ 'ಇದಕ್ಕೂ ಕಷ್ಟ ಪಡಬೇಕು ಕಣ್ ತಾಯಿ!!' ಅಂತ .. ನಡೆದೇ ಹೊರಡಲಿ , ಗಾಡಿಯಲ್ಲೇ ಹೊರಡಲಿ ಹೆಣ್ಣು ಮಕ್ಕಳು ಒಡವೆ ಹಾಕಲು ಹೆದರುವ ಸ್ಥಿತಿ ಬಂದು ಬಿಟ್ಟಿದೆ.. ಪಕ್ಕದಲ್ಲಿ ಹೋದರೂ ಸಂಶಯದಿಂದ ನೋಡೋ ಹಾಗೆ ಆಗಿಬಿಟ್ಟಿದೆ )
ಗಾಡಿ ಸ್ಲೋ ಮಾಡಿ ಆ ವ್ಯಕ್ತಿಯನ್ನೇ ಪ್ರಶ್ನಾರ್ಥಕವಾಗಿ ನೋಡಿದೆ . ಇಲ್ಲಿ ಪ್ರಶ್ನಾರ್ಥಕ ಅಂದ್ರೆ ಗೊತ್ತಲ್ಲ (ಯಾಕೋ ಹುಡುಗ ಮೈಯಾಗೆ ಹೆಂಗಾಗೈತೆ ...:) :)ಅನ್ನೋ ಹಾಗೆ ) ಸುಮ್ನೆ ನೋಡ್ತಾನೆ ಇದ್ದ .. ನಾನು ನೋಡಿದೆ . ಮೊದ್ಲೇ ನಂಗೆ ಸ್ವಲ್ಪ amnesia. ಆಗಾಗ ಸಿಗೋರೆ ನೆನಪಿರೋದಿಲ್ಲ . ತಲೆಯಲ್ಲಿ recap ಆಗೋಕೆ ಶುರುವಾಯ್ತು . 'ಮಂಜು ಫ್ರೆಂಡಾ?, ನನ್ನ ಫ್ರೆಂಡಾ? ಕಾರ್ತಿ ಅಥವಾ ಕೃತಿಯ ಗೆಳೆಯ/ತಿರ ತಂದೆನಾ ? 'ಹಾಗೆ rewind ಆಗ್ತಾ ಆಗ್ತಾ ತಲೆಗೆ ಮಿಂಚ್ ಹೊಳೆಯಿತು "ಹೇ , ನೀನು, ___ ಅಲ್ವ ?" ಈಗ ನಕ್ಕ ಅವನು.
"ಅಯ್ಯೋ ಹೆಂಗಿದಿಯೋ , ಎಷ್ಟ್ ವರ್ಷ ಆಯ್ತೋ ನಿನ್ನ ನೋಡಿ , ಇದೇನೋ ಇಲ್ಲಿ , ನನ್ನ ಹೆಂಗೆ ಗುರುತಿಸಿದೆ ಅದೂ ಗಾಡಿ ಓಡಿಸ್ತಾ , ಇನ್ನೂ ಹೆಣ್ಣು ಮಕ್ಕಳನ್ನ ನೋಡೋದು ಬಿಟ್ಟಿಲ್ಲ ಅಲ್ವ ..ಮನೆಗೆ ನಡಿ, ಒಂದ್ ೫ ನಿಮಿಷ ಇಲ್ಲೇ ಇರು ಮಗನ್ನ ಕರ್ಕೊಂಡ್ ಬಂದ್ ಬಿಡ್ತೀನಿ ಮನೆಗೆ ಹೋಗೋಣ... " ಆಗ್ಲೂ ನನ್ನ ಉತ್ಸಾಹ ಕಮ್ಮಿ ಆಗೋವರೆಗೂ ನಗ್ತಾ ಇದ್ದ ಅವ್ನು .. ಆಮೇಲೆ ಹೇಳ್ದ 'ಸ್ವಲ್ಪ ನಿಲ್ಸು ಮಾರಾಯ್ತಿ . ನಿನ್ನ ಗುರುತು ಹಿಡಿಯೋದೇನು ಕಷ್ಟಾ ? ಹಂಗೆ ಗುಂಡಗುಂಡಗೆ ಇದ್ದೀಯ ಈಗ್ಲೂ , ಸರಿ ನಿನ್ ನಂಬರ್ ಕೊಡು , ಡ್ಯೂಟಿಗೆ ಹೋಗ್ತಾ ಇದೀನಿ , ಸಂಜೆ ಕಾಲ್ ಮಾಡ್ತೀನಿ , ನಮ ಮನೇನೂ ಇಲ್ಲೇ ....Etc etc.." ಅಂದ 'ಹೂ೦, ಮಗ ಕಾಯ್ತಾನೆ 'ಅಂತ ನಂಬರ್ ಕೊಟ್ಟು ನಾನೂ ಹೊರಟೆ.
ಮನೆಗೆ ಬರ್ತಾ ಕಾರ್ತಿಗೆ ಹೇಳ್ದೆ ಹಿಂಗ್ ಹಿಂಗೆ ಅಂತ, ಮನೆಗೆ ಬಂದು ಕೃತಿಗೆ ಹೇಳ್ದೆ , ಆಮೇಲೆ ಮಂಜುಗೆ ಹೇಳ್ದೆ ...ಮಂಜು 'ಮಗ ಇನ್ ಒಂದಾಲ್ಕು ದಿನ ಅವ್ನದೆ ಕಥೆ ಹೇಳ್ತಾಳೆ ನಿಮ್ಮಮ್ಮ ' ಅಂದ್ರೆ ಮಗರಾಯ 'ನೀ ಕೇಳಿಸ್ಕೊ ಅಪ್ಪ, ಕಟ್ಕೊಂಡಿದ್ದೀಯಲ್ಲ " ಅಂತ ಕಣ್ಣು ಮಿಟುಕಿಸಿದ !!!
ಕೆಲವು ಬಾಲ್ಯದ ಗೆಳೆತನಗಳೇ ಹಾಗೆ ವರುಷಗಳ ನಂತರವೂ ಮೊಗದಲ್ಲಿ ನಗುವನ್ನ ಮನದಲ್ಲಿ ಹಸಿರನ್ನ ತರಿಸೋ ಹಾಗೆ ..... :)))

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...