Thursday, 30 November 2017

ನನಗೊಂದಿಷ್ಟು ನಗುವ ಸಾಲವಾಗಿ ಕೊಟ್ಟಿರು ಬದುಕೇ 
ನನ್ನಳಲ ಇತರರಿಗೆ ಹಂಚುವ ಮನಸಿಲ್ಲ ಅಂದಿದ್ದಳವಳು ಅಂದು ..... 
ಪಡೆದ ಸಾಲವ ಹಂಚುತ್ತಲೇ ಬಂದಿದ್ದಾಳೆ 
ಅವಳವರು ಎನಿಸಿಕೊಂಡವರೆಲ್ಲರಿಗೂ
ಅವಳಲ ಒಡಲಾಳದಲಿ ಬಚ್ಚಿಟ್ಟು ....
ಅಂದು ಸಾಲ ಕೊಡಲು ನಿಂತ ಬದುಕು 
ಇಲ್ಲಿಯವರೆಗೂ ಕೊಟ್ಟದ್ದ ಮರಳಿ ಕೇಳದೆ 
ನಗೆಯ ಸಾಲವ ನೀಡುತ್ತಲೇ ಇದೆ 
ಅವಳಲ ತನ್ನ ಒಡಲಾಳದಲಿ ಬಚ್ಚಿಟ್ಟುಕೊಂಡು ........
'ನಿನ್ನ ಭುಜದ ಮೇಲೆ ತಲೆಯಿಟ್ಟು ಒಂದಷ್ಟು ಹೊತ್ತು ಕೂರಬೇಕು '
'ಅಷ್ಟೇನಾ ' ಕಣ್ಣಲ್ಲಿ ಅದೇ ತುಂಟತನ 
'ಹೂಂ, ಅಷ್ಟೇ .. ಅದೆಷ್ಟೋ ವರ್ಷಗಳಾಗಿತ್ತು ಅಲ್ವ ನಾವಿಬ್ಬರೇ ಹೀಗೆ ಏಕಾಂತವಾಗಿ ಇದ್ದು .. '
'ಮದ್ವೆಗೆ ಮೊದಲೇನೋ ....."
ಮಕ್ಕಳ ಜವಾಬ್ದಾರಿ ಮುಗಿಸಿ ನಿರಾಳವಾಗಿ ಕುಳಿತ ಇಬ್ಬರ ಮೊಗದಲ್ಲೂ ನಗು.... ))
ಕಥೆ ಹೇಳಿ ತುಂಬಾ ದಿನಗಳಾಗಿತ್ತು ಅಲ್ವೇ  ಇಲ್ಲೊಂದು ಕಥೆಯಿದೆ ನೋಡಿ 
ಒಂದೂರು, ಊರಲ್ಲಿ ಒಂದೇ ಬಾವಿ , ಕುಡಿಯುವ ನೀರಿಗೆ ಎಲ್ಲಾ ಅಲ್ಲಿಂದಲೇ ನೀರು ತೆಗೆದುಕೊಳ್ತಾ ಇದ್ರು. 
ಒಮ್ಮೆ ಆ ಬಾವಿಯೊಳಗೆ ಒಂದು ನಾಯಿ ಬಿದ್ದು ಹೋಯ್ತು. ನೋಡಿದ್ರೋ ಅಥವ ನೋಡಲಿಲ್ಲವೋ -ಒಟ್ಟಾರೆ ಆ ನಾಯಿಯನ್ನ ಯಾರೂ ಹೊರ ತೆಗೆಯಲಿಲ್ಲ. ನಾಯಿ ಅಲ್ಲೇ ಸತ್ ಹೋಯ್ತು. ಒಂದೆರಡು ದಿನಗಳಾದ ಮೇಲೆ ನೀರು ನಾರತೊಡಗಿತು. ಬಳಸಲು ಅನರ್ಹವಾಗ್ತಾ ಹೋಯ್ತು. ಆದರೂ ನಾಯಿಯನ್ನ ಎತ್ತಬೇಕೆಂದು ಯಾರಿಗೂ ಅನಿಸಲಿಲ್ಲ ! ಜನ ಕುಡಿಯುವ ನೀರಿಗೆ ಒದ್ದಾಡತೊಡಗಿದರು. ಕಡೆಗೆ ಊರ ಹೊರಗಿನ ದೇಗುಲದ ಬಳಿಯಿದ್ದ ಹಿರಿಯ ಸನ್ಯಾಸಿಯೊಬ್ಬರನ್ನ ಪರಿಹಾರ ಕೇಳಿದ್ರು. ಸನ್ಯಾಸಿ 'ಒಂದಷ್ಟು ಗಂಗಾ ಜಲ ತಂದು ನೀರಿಗೆ ಹಾಕಿ, ನೀರಿನ ಪಾವಿತ್ರ ಹಿಂದಕ್ಕೆ ಬರುತ್ತದೆ ' ಅಂದ. ಜನ ಹಾಗೆ ಮಾಡಿದ್ರು. ಆದರೂ ನೀರು ಕುಡಿಯಲು ಯೋಗ್ಯವಾಗಲಿಲ್ಲ. ಜನ ಮತ್ತೆ ಸನ್ಯಾಸಿಯನ್ನ ಕೇಳಿದಾಗ ಒಂದಷ್ಟು ಹೋಮ, ಹವಾನ ಮಾಡಿಸಿ' ಅಂದ . ಜನ ಅದನ್ನೂ ಮಾಡಿದರು.ನೀರು ಶುದ್ಧವಾಗಲಿಲ್ಲ. ಮತ್ತೊಮ್ಮೆ ಕೇಳಿದಾಗ ಸನ್ಯಾಸಿ 'ನೀರಿಗೆ ಒಂದಷ್ಟು ಸುಣ್ಣ ಹಾಕಿ ಮತ್ತೆ ತಿಳಿಯಾಗಬಹುದು' ಅಂದ . ಜನ ಮತ್ತೆ ಹಿಂದಿರುಗಿ ಬಂದಾಗ ಸನ್ಯಾಸಿ ಅಚ್ಚರಿಗೊಂಡ . 'ಇನ್ನೂ ನೀರು ತಿಳಿಯಾಗಲಿಲ್ಲವೇ?' ಎಂದಾಗ ಜನರು 'ಇಲ್ಲಾ ' ಎಂದರು. ಸನ್ಯಾಸಿ 'ಅಲ್ಲಾ, ನೀವು ಸತ್ತ ನಾಯಿಯನ್ನ ಹೊರ ತೆಗೆದಿರಿ ತಾನೇ"? ಎಂದು ಪ್ರಶ್ನಿಸಿದ. ಈಗ ಜನ 'ನೀವು ಹೇಳಲೇ ಇಲ್ಲವಲ್ಲ ಸ್ವಾಮೀ ' ಎಂದರು .ಸನ್ಯಾಸಿ ನಕ್ಕುಬಿಟ್ಟ . 'ಕೊಳೆಯನ್ನೇ ತೆಗೆಯದೆ ಶುದ್ದಿ ಮಾಡಲು ಹೇಗೆ ಸಾಧ್ಯ' ಎಂದ . ಮೊದಲು ಸತ್ತ ನಾಯಿಯನ್ನ ಹೊರಹಾಕಲು ಹೇಳಿದ ....
ಮನದ ಮಲಿನವನ್ನ ತೆಗೆಯದೆ ಮನಸ್ಸಿಗೆ ಶಾಂತಿ ಎಲ್ಲಿಂದ ಅಲ್ವೇ? ಹಚ್ಚಿದ ಕಡ್ಡಿ ಬೇರೆಯವರನ್ನಸುಡುವ ಮುನ್ನ ತನ್ನನ್ನು ತಾನೇ ಸುಟ್ಟುಕೊಂಡಿರುತ್ತದೆ ಅದಕ್ಕೆ ಅರಿವಿಲ್ಲದೆ !
ಹಿರಿಯ ಗೆಳೆಯರೊಬ್ಬರು ಕಳಿಸಿದ್ರು. ಅನುವಾದಿಸಿ ಹಂಚಿಕೊಂಡೆ ಅಷ್ಟೇ 
ಅಂದೆಂದೋ ನನ್ನ 
ನೋಯಿಸಿದ್ದವರು 
ನನ್ನೆದಿರು ಬಂದು 
ಅಸಹಾಯಕರಂತೆ ನಿಂತಾಗ 
ನಾ ಅನುಭವಿಸಿದ 
ಯಾರಿಗೂ ಕಾಣದಂತೆ
ಸೆರಗಿನೊಳಗೆ ಬಚ್ಚಿಟ್ಟಿದ್ದ ನೋವೆಲ್ಲಾ 
ಒಮ್ಮೆಗೇ ಇಣುಕಿಬಿಡುತ್ತದೆ....... 
ಅಂದು 
ಒತ್ತಟ್ಟಿಗೆ 
ಮುಚ್ಚಿಟ್ಟಿದ್ದ ಅಸಹನೆಯೆಲ್ಲಾ 
ಇಂದು ಹೊರತೂರಿಬಿಡಲೇ ಅನಿಸುವಾಗ
ಇದು 
ಅಂದಿನ ನನ್ನದೇ ಅಸಹಾಯಕತೆಯ 
ಮತ್ತೊಂದು ರೂಪವೇನೋ ಅನಿಸಿ
ಅಳುವಿಗೆ ಭುಜ ನೀಡಿಬಿಡುತ್ತೇನೆ .... 
ಅವರ ಮೊಗದ ಅಪರಾಧೀಭಾವ ಕಂಡು 
ನನ್ನ ಒಳಮನ ಸಂತ್ವಾನಗೊಳ್ಳುತ್ತಿದೆಯೇೆ?? !!!! 
ಅಲ್ಲೆಲ್ಲೋ ನನ್ನ ಮನಸ್ಸು ಹೇಳುತ್ತದೆ 
ನೀ ಮೇಲೆ ಕಾಣುವಷ್ಟು ಒಳ್ಳೆಯವಳಲ್ಲ !!
ನೀ ಒಳ್ಳೆಯವಳಲ್ಲ .!!!!
ಹೌದೇನೋ 
ಆದರೂ 
ನಾನೂ ಮನುಷ್ಯಳೇ ತಾನೇ ಎಂದು ತಿಪ್ಪೆ ಸಾರಿಸಿಬಿಡುತ್ತೇನೆ .. 
ಒಳ್ಳೆಯವಳೆಂಬ ಮುಖವಾಡ ತೊಟ್ಟು ..... !!

Thursday, 9 November 2017

ಒಬ್ಬ ರಾಜ. ಸುಭಿಕ್ಷದ ಕಾಲದಲ್ಲಿ ಏನೂ ಕೆಲಸವಿಲ್ಲದೆ ತೊಂದರೆಗಳಿಲ್ಲದೆ ಇದ್ದಾಗ ತನ್ನ ಆಸ್ಥಾನದಲ್ಲಿ ಮಂತ್ರಿಮಂಡಲಗಳೊಂದಿಗೆ ಸರಸ ಸಂಭಾಷಣೆಯಲ್ಲಿ ತೊಡಗಿದ್ದಾಗ ಒಂದು ಪ್ರಶ್ನೆ ಕೇಳ್ತಾನೆ . 'ಮಂತ್ರಿಗಳೇ, ಮದುವೆಯಾಗಿ ಗಂಡನ ಮನೆಗೆ ಹೋಗುವ ಹೆಣ್ಣು ಮಗಳಿಗೆ ಬದುಕಿನಲ್ಲಿ ಸುಖಸಂತಸ ಇರಬೇಕೆಂದು ತುಂಬಾ ಆಸೆ ಆಕಾಂಕ್ಷೆಗಳಿರುತ್ತವೆ. ಪ್ರತಿ ಹೆಣ್ಣುಮಗಳು ಮದುವೆಯಾಗಿ ಹೋಗುವಾಗ ಮನದಲ್ಲಿ ಅನಿಸುವ ಅತೀ ಇಷ್ಟದ ಆಸೆ ಯಾವುದು ಹೇಳಿ?" 
ಮಂತ್ರಿ ಹಾಗು ಇತರರು 'ಗಂಡ ಒಳ್ಳೆಯವನಾಗಿರಬೇಕು, ಅತ್ತೆ ಮಾವ ಒಳ್ಳೆಯವರಾಗಿರಬೇಕು, ಒಳ್ಳೆ ಮುದ್ದಾದ ಮಕ್ಕಳಾಗಬೇಕು , ಇತ್ಯಾದಿ ಇತ್ಯಾದಿ' ಉತ್ತರಗಳನ್ನ ಹೇಳ್ತಾರೆ . ರಾಜ ಸಂಪ್ರೀತನಾಗೋದಿಲ್ಲ. 'ನಾಳೆ ಬೆಳಗ್ಗೆಯವರೆಗೆ ಸರಿಯಾದ ಸಮಂಜಸ ಉತ್ತರ ನೀಡದಿದ್ದರೆ ಶಿಕ್ಷೆಗೆ ಗುರಿಯಾಗುವಿರಿ' ಅಂತಾನೆ . ಮಂತ್ರಿ ಎಷ್ಟೇ ಪ್ರಯತ್ನಿಸಿದರೂ ಉತ್ತರ ಸಿಗೋದಿಲ್ಲ. ತುಂಬಾನೇ ಬೇಸರದಿಂದ ಕುಳಿತಿರುವಾಗ ಅವನ ಮಗ ಕಾರಣ ಕೇಳ್ತಾನೆ . ಮಂತ್ರಿ ಹಿಂಗ್ಹಿಂಗೆ ಅಂತ ಹೇಳ್ತಾನೆ. ಅಪ್ಪ ಅಂದ್ರೆ ಮಗನಿಗೆ ತುಂಬಾನೇ ಪ್ರಾಣ . ತಂದೆಯ ಸಮಸ್ಯೆಗೆ ಉತ್ತರ ಯೋಚಿಸುತ್ತಾ ಒಂದು ಹಳೆಯ ಛತ್ರದ ಬಳಿ ಕುಳಿತಾಗ ಒಬ್ಬ ಭಿಕ್ಷುಕಿ ಕಾಣ್ತಾಳೆ . ಅವಳು ಮಂತ್ರಿಕುಮಾರನನ್ನ ಬೇಸರಕ್ಕೆ ಕಾರಣ ಕೇಳ್ತಾಳೆ. ತುಂಬಾ ಕುರೂಪಿಯಾಗಿದ್ದ ಆಕೆಯನ್ನ ಕಂಡು ಪ್ರಶ್ನೆಗೆ ಉತ್ತರಿಸಬೇಕೆಂದೆನಿಸದಿದ್ದರೂ ಮಂತ್ರಿಕುಮಾರ ಸೌಜನ್ಯದಿಂದ ಕಾರಣ ಹೇಳ್ತಾನೆ . ಅವಳು ನಸುನಕ್ಕು 'ನೀನು ನನ್ನ ಮದುವೆಯಾಗುವೆ ಎಂದು ಭಾಷೆ ನೀಡಿದರೆ ನಾ ಉತ್ತರ ನೀಡ್ತೀನಿ' ಅಂತಾಳೆ. ಚಕಿತಗೊಂಡ ಮಂತ್ರಿಕುಮಾರ ಕೋಪಗೊಂಡರೂ ತಂದೆಗಾಗಿ ಒಪ್ಪಿಕೊಳ್ತಾನೆ ! ಸರಿ ಬೆಳಿಗ್ಗೆ ರಾಜನ ಆಸ್ಥಾನದಲ್ಲಿ ಭಿಕ್ಷಿಕಿ ರಾಜನಿಗೆ ಉತ್ತರಿಸುತ್ತಾಳೆ ' ಪ್ರತಿ ಹೆಣ್ಣು ಮಗಳಿಗೂ ಮದುವೆಯಾಗಿ ಹೋಗುವ ಮನೆಯಲ್ಲಿ ತನ್ನ ತವರಿನಲ್ಲಿದ್ದ ಸ್ವತಂತ್ರ ಇದ್ದರೆ ಸಾಕೆಂದು ಹಂಬಲಿಸುತ್ತಾಳೆ . ಅದೊಂದಿದ್ದರೆ ಉಳಿದದ್ದೆಲ್ಲ ಅವಳು ಪಡೆಯಬಲ್ಲಳು ' ಎನ್ನುತ್ತಾಳೆ ! ರಾಜ ಸಂತುಷ್ಟನಾಗುತ್ತಾನೆ . ಈಗ ಮಂತ್ರಿಗೆ ಅವಳನ್ನ ತನ್ನ ಮಗನಿಗೆ ಮದುವೆ ಮಾಡಿಕೊಳ್ಳಬೇಕಲ್ಲ ಎಂಬ ದುಃಖವಾಗುತ್ತದೆ. ಆದರೆ ಮಂತ್ರಿಯ ಮಗ ಆಕೆಗೆ ಕೊಟ್ಟ ಮಾತಿನಂತೆ ಆಕೆಯನ್ನ ವಿವಾಹವಾಗುವೆ ಎನ್ನುತ್ತಾನೆ . ಅವನ ನಿಷ್ಠೆಗೆ ಮೆಚ್ಚಿ ದೇವತೆಯೊಬ್ಬಳು ಪ್ರತ್ಯಕ್ಷವಾಗಿ 'ನಿನ್ನ ನಿಷ್ಠೆಗೆ ಮೆಚ್ಚಿದ್ದೇನೆ , ನಿನಗೊಂದು ವರಕೊಡುತ್ತೇನೆ , ಇವಳನ್ನ ನಾ ಸುಂದರಿಯಾಗಿ ಮಾಡುತ್ತೇನೆ , ಆದ್ರೆ ಹಗಲಿನಲ್ಲೊ , ರಾತ್ರಿಯಲ್ಲೊ ಎಂಬ ಆಯ್ಕೆ ನಿನ್ನಾದು ಅಂತಾಳೆ. " ಹಗಲಿನಲ್ಲಿ ಮನೆತುಂಬ ಕಳಕಳೆಯಾಗಿ ಓಡಾಡುವ ಪತ್ನಿಯನ್ನ ಬೇಡುತ್ತಾನೋ ಅಥವಾ ರಾತ್ರಿಯಲ್ಲಿ ಅವನ ಮನದಿಚ್ಛೆಯನ್ನ ಪೂರೈಸುವ ಮಡದಿಯನ್ನೋ ' ಎಂದು ಎಲ್ಲರೂ ಅಚ್ಚರಿಗೊಳ್ಳುತ್ತಾರೆ... ಮಂತ್ರಿಕುಮಾರ ಒಂದು ಘಳಿಗೆ ಯೋಚಿಸಿ "ಅದನ್ನ ಅವಳಿಚ್ಛೆಗೆ ಬಿಡುತ್ತೇನೆ " ಅನ್ನುತ್ತಾನೆ !!! ದೇವತೆ ಅವನನ್ನು ಹರಸಿ ಅವಳನ್ನ ಸುರಸುಂದರಿಯನ್ನಾಗಿಸಿ ಮಾಯವಾಗುತ್ತಾಳೆ:).
ಓದಿದೆ ಅನುವಾದಿಸಿ ಹಂಚಿಕೊಳ್ಳಬೇಕು ಅನಿಸ್ತು ...
ಮದುವೆಯಾಗಿ ಗಂಡನ ಮನೆಗೆ ಹೋಗುವ ಹೆಣ್ಣುಮಕ್ಕಳಿಗೆ ತವರಿನ ಬಂಧುತ್ವ ನೀಡಿದರೆ ಬಹಳಷ್ಟು ಮನೆಗಳು ಸ್ವರ್ಗವಾಗುತ್ತವೇನೋ !!
(ಎಲ್ಲಾ ಹೆಣ್ಣುಮಕ್ಕಳು ಹಾಗಲ್ಲ, ಸೊಸೆಯಂದಿರೂ ಒಳ್ಳೆಯವರಾಗಿರಬೇಕು, ಇತ್ಯಾದಿ ಇತ್ಯಾದಿ ಹೇಳಿಕೆಗಳು ಬಗ್ಗೆ ಅರಿವಿದೆ .. ಐದು ಬೆರಳೂ ಸಮವಿಲ್ಲ ಅಲ್ವೇ!! )
ಮೊನ್ನೆ ಮೊನ್ನೆ ಒಂದ್ ದಿನ ಎಂದಿನಂತೆ ಪುಟ್ಟಿನ ಕಾಲೇಜಿಂದ ಕರ್ಕೊಂಡ್ ಬರೋಕೆ ಹೋಗಿದ್ದೆ . ಗಾಡಿ ಹತ್ತಿದ ಕೂಡ್ಲೆ ಎಂದಿನಂತೆ "ಕಥೆ" ಶುರು ಮಾಡಿದ್ಲು ."ಊಟ ಮಾಡ್ದ ಕುಳ್ಳಿಮಾ? " ಇನ್ನೂ ನಾ ಉತ್ತರಿಸಿಯೇ ಇರಲಿಲ್ಲ ಆಗ್ಲೇ 'ಮಾ, ಈವತ್ತು ನಮ್ ಕ್ಲಾಸ್ ಅಲ್ಲಿ ೮ ಜನ "ಸೀಸು" . ಪ್ರಿನ್ಸಿ ಪೇರೆಂಟ್ಸ್ ಕರೆಸಿದ್ರು ' ಅಂದ್ಲು . (ಇವಳು ಕಾಲೇಜ್ಗೆ ಹೋಗೋಕೆ ಶುರು ಮಾಡಿದ ಮೇಲೆ ನನ್ನ ಪದಭಂಡಾರಕ್ಕೆ ಸುಮಾರು ಹೊಸಹೊಸ ಪದಗಳನ್ನ ಸೇರಿಸಿದ್ದಾಳೆ!! ಅಂತಹದೇ ಇದೂ ಒಂದು ಸೀಸು -ಸಿಕ್ಕಿಹಾಕೊಳ್ಳೋದು) 'ಯಾಕ್ ಮಗ' ಅಂದೆ. ಮೊನ್ನೆ ಕ್ಲಾಸಿಂದ ಎಪಿಎಸ್(!!) ( ಅಂದ್ರೆ ಎಸ್ಕೇಪ್/ಚಕ್ಕರ್!!) ಆಗಿ ತಲಕಾಡಿಗೆ ಹೋಗಿದ್ರಂತೆ. ಸಿಕ್ಕಿಹಾಕಿಕೊಂಡು ಅವರ ಅಪ್ಪಅಮ್ಮನ್ನ ಕರೆಸಿದ್ರು. ಆಫೀಸ್ ಈವತ್ತು ರಣರಂಗ ಆಗೋಗಿತ್ತು " ಅಂತೆಲ್ಲ ಹೇಳಿದ್ಲು. 'ನೀ ಹೋಗಿರ್ಲಿಲ್ಲ ತಾನೇ ' ಅಂತ ಕಾಲೆಳೆದೆ. 'ನಾವ್ ಗೊತ್ತಲ್ಲ, ಹಂಗೆಲ್ಲಾ ಹೇಳ್ದೆ ಹೋಗೋ ಸೀನೇ ಇಲ್ಲ, ನಿನ್ನ "ಅಳಿಯನ"(!!!) ಜೊತೆ ಹೋದ್ರು ಹೇಳ್ಬಿಟ್ ಹೋಯ್ತಿನಿ ಬಿಡಮ್ಮ' ಅಂದ್ಲು .'ಕರ್ಮ ಮಾರಾಯ್ತಿ ನಿಂದು, ಅಮ್ಮ ಅನ್ನೋ ಭಯನೇ ಇಲ್ಲ ' ಅಂತ ಬೈಕೊಂಡು ಬಂದೆ . ಕಿಸಿಕಿಸಿ ನಗುತ್ತಾ ಬೆನ್ನಿಗೆ ಒರಗಿ "ಲವ್ ಯು ಮಾ' ಅಂದ್ಲು ..
ಒಂದೆರಡು ದಿನ ಆಗಿತ್ತು . ಸುಮಾರು ೨ ಗಂಟೆಯಲ್ಲಿ ಕಾಲೇಜಿಂದ ಕರೆ ಬಂತು . 'ನಾವು, ___ ಕಾಲೇಜಿಂದ" ಅಂದ್ರು. ಪುಟ್ಟಿ ಹೇಳಿದ್ದ ಮಾತುಗಳು ನೆನಪಿಗೆ ಬಂದು ಒಂದಷ್ಟು ಬೆಚ್ಚಿದಂತಾಗಿ "ಹೇಳಿ ' ಅಂದೆ . "ನೀವು ಕೃತಿ ಮಂಜುನಾಥ್ ಪೇರೆಂಟಾ"? ಅಂದ್ರು. 'ಹೌದು ಹೇಳಿ ' ಅಂದೆ . 'ಎರಡನೇ ಟರ್ಮ್ ಫೀಸ್ ಬಾಕಿ ಇದೆ ಮೇಡಂ' ಅಂದ್ರು. ಇಲ್ಲಾ, ಕಟ್ಟಿ receipt ಕೂಡ ಆಫೀಸಿಗೆ ಕಳಿಸಿದ್ದೀನಿ. ಆಗ್ಲೇ ೧೫ ದಿಂದ ಮೇಲಾಯ್ತು ಒಮ್ಮೆ ಚೆಕ್ ಮಾಡಿ' ಅಂದೆ . 'ಕಟ್ಟಿದ್ರೆ ಸರಿ ಮೇಡಂ, ಸಾರಿ ಮೇಡಂ ' ಅಂತ ಫೋನ್ ಇಟ್ರು.
ಮನಸ್ಸು ಅದೆಷ್ಟು ವಿಚಿತ್ರ ಅಲ್ವೇ ! ಕ್ಷಣಗಳಲ್ಲಿ ಎಲ್ಲಿಂದೆಲ್ಲಿಗೋ ಹೋಗಿಬಿಡುತ್ತದೆ . ಒಳಿತಿಗಿಂತ ಕೆಡುಕೇ ಅಥವಾ ಕೆಡುಕಿನ ಭಯವೇ ಮನಸ್ಸಿನ ಪದರದಲ್ಲಿ ಅವಿತಿರುತ್ತದೇನೋ ಅನಿಸುವಂತೆ ! ಅದೆಷ್ಟೇ ನಂಬಿಕೆಯಿದ್ದರೂ ಅಲ್ಲೆಲ್ಲೋ ಒಂದು ಸಣ್ಣ ಅಪನಂಬಿಕೆಯ ಎಳೆ ಹುದುಗಿ ಕುಳಿತಂತೆ.....
ಪುಟ್ಟಿಗೆ ಸಂಜೆ "ಹಿಂಗ್ ಹಿಂಗೇ ಮಗ , ಭಯ ಆಯ್ತು, ನೀ ಚಕ್ಕರ್ ಹಾಕಿ ಎಲ್ಲಾದ್ರೂ ಹೋಗಿದ್ಯೇನೋ ಅಂತ" ಅಂದೆ . "ಮೌ,ನಾ ಹೇಳಿಲ್ವ, ಹೋಗೋದಾದ್ರೆ ಹೇಳೇ ಹೋಗ್ತೀನಿ ನಿನ್ನಳಿಯನ ಜೊತೆ ಅಂತ , ಸುಮ್ನೆ ಟೆನ್ಶನ್ ಮಾಡ್ಕೋ ಬೇಡ ಸರಿನಾ.... ಈಗ ಒಂದಿನ್ನೂರು ಈ ಕಡೆ ತಳ್ಳು, ನಾಳೆ ನನ್ ಫ್ರೆಂಡ್ ಬರ್ತ್ಡೇ ಐತೆ !!!" ಅಂದ್ಳು ..
ಪುಣ್ಯ ಮಾಡಿ ಹೆತ್ತಿದ್ದೀನಿ ಇವಳನ್ನ ....))ಇವ್ಳು ಉದ್ದಾರ ಅಗೋ ಚಾನ್ಸ್ ಇಲ್ಲ ......
ಹೆಂಡತಿ ಕೊಟ್ಟ ಟೀ ಆಸ್ವಾದಿಸುತ್ತಾ ಆರಾಮವಾಗಿ ಟಿವಿ ನೋಡ್ತಾ ಇದ್ದ ಪತಿ ರಾಯ . ಫೋನ್ ಟ್ರಿಂಗುಟ್ಟಿತು . 
'ಹಲೋ'
'ಹಲೋ ಸಾರ್ ಮಂಜುನಾಥ್ ಆವ್ರಾ?'
ಹೆಣ್ಣು ದನಿ ಕೇಳುತ್ತಲೇ ಮೊಗ ಅರಳಿತು ದನಿ ಮೆದುವಾಯ್ತು ' ಹುಂ , ಹೇಳಿ ಮೇಡಂ'
'ಸಾರ್, ನಿಮಗೆ ಒಂದು ಬಹುಮಾನದ ಕೂಪನ್ ಇದೆ . ಸಂಜೆ ನಿಮ್ಮ "ಫ್ಯಾಮಿಲಿ" ಕರ್ಕೊಂಡ್ ಬಂದು ತೆಗೆದುಕೊಂಡು ಹೋಗಿ ಸಾರ್ "
ಹೆಂಡತಿ ಅಡುಗೆ ಮನೆಯಲ್ಲಿರುವುದನ್ನ ಖಚಿತಪಡಿಸಿಕೊಂಡು 'ಫ್ಯಾಮಿಲಿ ಅಂದ್ರೆ ?!'
"ಸಾರ್ ನಿಮ್ ವೈಫ್ ಸರ್ "
"ನನ್ ವೈಫು ಸಿಟ್ಕೊಂಡು ಅವರಮ್ಮನ ಮನೆಗೆ ಹೋಗಿದ್ದಾಳೆ, ಬೇರೆ ಯಾರನ್ನಾದ್ರೂ ಕರ್ಕೊಂಡ್ ಬರಬಹುದಾ ಮೇಡಂ? "
ಪಾಪ ಆ ಕಡೆ ಮಾತನಾಡುತ್ತಿದ್ದವರು ಸ್ವಲ್ಪ ಗೊಂದಲಗೊಂಡಿರಬೇಕು
'ಸಾರ್, ಬಂದ್ ಮೇಲೆ ಕರ್ಕೊಂಡ್ ಬನ್ನಿ ಪರ್ವಾಗಿಲ್ಲ "
'ಅವ್ಳು ಬರೋದಿಲ್ಲ ಕಣಮ್ಮ"
'ಹೋಗ್ಲಿ ಬಿಡಿ ಸಾರ್ !!!!!!"
'ಹೋಗ್ಲಿ ಬಿಡಿ ಅಂದ್ರೆ ಕರ್ಕೊಂಡ್ ಬರಬೇಡಿ ಅಂತಾನಾ ಅಥವಾ 'ಅವ್ಳು' ಹೋದ್ರೆ ಹೋಗ್ಲಿ ಅಂತಾನಾ?'
"........."
"ಹಲೋ"
"........."
"ಹಲೋ "
ಕುಡಿದ ಟೀ , ತಿಂದ ತಿಂಡಿ ಹೆಚ್ಚಾದ್ರೆ ಹಿಂಗೇನೆ .....cholesterolನ ಮಹಿಮೆ ...
ಇದೊಂದು ಹಳೆಯ ಸೀರೆ. ಸುಮಾರು ೨೫ ವರ್ಷ ಹಳೆಯದೇನೋ . ನನ್ನ ಮಗಳು ವೈದ್ಯೆಯಾಗಿ ಹೊರಬರುತ್ತಾಳೆ ಅನ್ನೋ ಖುಷಿಗೆ ಅಮ್ಮ (ಅದ್ಯಾರೋ ಅವರ ಗೆಳತಿ ವಿದೇಶಕ್ಕೆ ಹೋಗಿದ್ದಾಗ ತರಿಸಿ.. ಆಗೆಲ್ಲ ವಿದೇಶಿ ಸೀರೆ ಅನ್ನೋದು ಹಮ್ಮು!!!) ನನ್ನ ೨೨ ಹುಟ್ಟುಹಬ್ಬಕ್ಕೆ ಕೊಡಿಸಿದ್ದು. ಅದ್ಯಾಕೋ ಅದರ ಮೇಲಿರುವ ಬಳೆಗಳ ಚಿತ್ತಾರ ತುಂಬಾನೇ ಇಷ್ಟವಾಗಿತ್ತು. ಕೃತಿ ಹುಟ್ಟಿ ಒಂದೈದಾರು ವರ್ಷಗಳವರೆಗೂ ಆಸೆ ಪಟ್ಟು ಹಾಕಿಕೊಳ್ತಾ ಇದ್ದೆ. ಆಮೇಲೆ ಸೀರೆ ಚಿಕ್ಕದಾಗ್ತಾ (!!) ಹೋಯ್ತು  ಹಾಗೆ ಇಟ್ಟುಬಿಟ್ಟಿದ್ದೆ. ಈಗೊಂದಷ್ಟು ದಿನಗಳ ಹಿಂದೆ ಬೀರು ಜೋಡಿಸ್ತಾ ಇದ್ದೆ. ಇಬ್ರು ಹೈಕ್ಳು ಮೊಬೈಲ್ ಹಿಡ್ಕೊಂಡು ಹಾಸಿಗೆ ಮೇಲೆ ಬಿದ್ಕೊಂಡು ತಲೆ ಹರಟೆ ಮಾಡ್ತಾ ಕೂತಿದ್ವು. ಪುಟ್ಟಿ 'ಮಾ,ಈ ಸೀರೆ ನನಗೆ ಇಡು, ಇದು ನನಗೆ ಇಡು, ಆ ಡಬ್ಬ ಸೀರೆ ನಿನ್ನ ಸೊಸೆಗೆ ಕೊಟ್ಬಿಡು' ಅಂತೆಲ್ಲ ಮಗನನ್ನ ರೇಗಿಸ್ತಾ ಇದ್ಳು. ನಾನು ಇದು ಇಂತಹ ಸಮಯದಲ್ಲಿ ತಂದಿದ್ದು, ಇದು ಇಂತಹವರು ಕೊಡಿಸಿದ್ದು ಅಂತೆಲ್ಲ ಹೇಳ್ತಾ ಜೋಡಿಸ್ತಾ ಇದ್ದೆ. ಸರಿ ಈ ಸೀರೆ ನೋಡಿ ಹಿಂಗ್ಹಿಂಗೆ ಅಂತ ಹೇಳ್ತಾ ಇದ್ದೆ . ಈ ಸೀರೆ ಇಡುವಾಗ 'ಇದು ನನಗೆ ಕುಳ್ಳಿಮಾ' ಅಂದ್ಳು ಪುಟ್ಟಿ. ಮಗರಾಯನಿಗೆ ಅದ್ಯಾಕೆ ಈ ಸೀರೆ ಇಷ್ಟಾ ಆಯ್ತೋ ಗೊತ್ತಿಲ್ಲ 'ಲೇ, ಈ ಸೀರೆ ನನಗೆ ಬೇಕು' ಅಂತ ಎತ್ಕೊಂಡ. ಇಬ್ರೂ ಒಂದಷ್ಟು ಹೊತ್ತು ಕಿತ್ತಾಡಿಕೊಂಡ್ರು. ಆಮೇಲೆ ಅವ್ನು ಅದನ್ನ ಎತ್ತಿಕೊಂಡು ಹೋಗಿ ಪ್ಯಾಕ್ ಮಾಡಿ ಅವನ ಬೀರುಲಿ ಭದ್ರ ಮಾಡಿಕೊಂಡ !!
ಮೊನ್ನೆ ಮೊನ್ನೆ ಪುಟ್ಟಿ 'ಮಾ, ನನ್ನ ಮದುವೆಯಲ್ಲಿ ನಾ ಏನ್ ಕೇಳಿದ್ರು ಕಾರ್ತಿ ಕೊಡ್ತಾನೆ/ಕೊಡಿಸ್ತಾನೆ ಅಲ್ವ "? ಅಂದ್ಳು. 'ಹ್ಮ್, ಅವನಿಗೆ affordable ಆಗಿದ್ರೆ ಕೊಡಿಸ್ತಾನೆ ಮಗ, ನಿನಗಲ್ಲದೆ ಇನ್ಯಾರಿಗೆ ಕೊಡಿಸ್ತಾನೆ ಹೇಳು, ಆದರು ಅದೇನ್ ಬೇಕು ಹೇಳಿದ್ರೆ ಅಪ್ಪನೋ, ನಾನೋ ಕೊಡಿಸ್ತೀವೀ ಅಲ್ವ ? ಅವನ ಮೇಲ್ಯಾಕೆ ಕಣ್ಣು" ಅಂದೆ "ಮಾ, ನಿನ್ನ ಮಗನಿಗೇನು ಕಷ್ಟ ಕೊಡಲ್ಲ ಬಿಡು, ಆ ಸೀರೆ ಪ್ಯಾಕ್ ಮಾಡಿ ಬಚ್ಚಿಟ್ಟುಕೊಂಡಿದ್ದಾನಲ್ಲ ಅದನ್ನ ಕಿತ್ಕೋಬೇಕು ಅದ್ಕೆ!" ಅಂದ್ಲು ಮುಖ ಊದಿಸಿಕೊಂಡು..  
ಒಡವೆಗಳಿಗೆ, ಆಸ್ತಿಗೆ ಜಗಳ ಆಡೋ ಹೈಕ್ಳನ್ನ ನೋಡಿದ್ದೀನಿ.. ಉಟ್ಕೊಳ್ದೆ ಇಟ್ಟಿದ್ದ ಹಳೆ ಸೀರೆಗೆ ಈ ಮಟ್ಟಿಗೆ 'ಡೀಲ್' ಮಾಡೋ ಐಕ್ಳನ್ನ ನೋಡಿರ್ಲಿಲ್ಲ ))
ಆ ಸೀರೆ ಅವನ ಹೆಂಡ್ತಿ ಉಟ್ಕೊಳ್ತಾಳೋ ಇಲ್ವೋ, ಇಲ್ಲ ಪುಟ್ಟಿ ಉಟ್ಕೊಳ್ತಾಳೋ ಇಲ್ವೋ ಗೊತ್ತಿಲ್ಲ ....ಆದರೆ Feeling ಸುಂಸುಮ್ನೆ ಮುದ್ಮುದ್ದು ))))

ಮೊನ್ನೆ ಮೊನ್ನೆ ಮನೆಗೆ ಬಂದ ಹಿರಿಯ ಗೆಳೆಯರೊಬ್ಬರೊಡನೆ ಮಾತಾಡ್ತಾ ಇದ್ವಿ . ಮಾತಿಗೆ ಮಾತು ಬಂದು ಮಕ್ಕಳನ್ನ ಬೆಳೆಸುವ ವಿಷ್ಯಕ್ಕೆ 'ಊರ ಬಾಗಿಲು ಕಾಯ್ದು ದೊಡ್ಡ ಬೋರೇಗೌಡ ಅನಿಸಿಕೊಂಡಂತೆ' ಅಂದ್ರು ಮಂಜು .
ಅದಕ್ಕಾ ಹಿರಿಯರು 'ಸಾಂಬನ ಕಥೆ ಗೊತ್ತಲ್ಲ? ಕೃಷ್ಣನ ಮಗ ಸಾಂಬನದು?" ಅಂದ್ರು ಮತ್ತೆ ಮುಂದುವರೆಸಿದರು "ಸಾಂಬ ಜಾಂಬವತಿ-ಕೃಷ್ಣನ ಮಗ. ತನ್ನ ತಂದೆಯ ವೇಷ ಧರಿಸಿ ತಂದೆಯ ಉಪಪತ್ನಿಯರನ್ನೇ ಮೋಸಗೊಳಿಸುತ್ತಾನೆ. ಕೋಪಗೊಂಡ ಅಪ್ಪ ಮಗನಿಗೆ ಚರ್ಮವ್ಯಾದಿಯ ಶಾಪ ನೀಡುತ್ತಾನೆ . ಸಾಂಬ ಸೂರ್ಯದೇವನಿಗೆ ದೇಗುಲಗಳನ್ನ ಕಟ್ಟಿಸಿ ಶಾಪ ವಿಮುಕ್ತಿಗೊಳ್ಳುತ್ತಾನೆ.(sun temple Konarak) 
ದುರ್ಯೋಧನನ ಮಗಳನ್ನ ಅಪಹರಿಸಿ ಸಿಕ್ಕಿಬಿದ್ದು ಯಾದವರಿಗೂ-ಕೌರವರಿಗೂ ಯುದ್ಧಕ್ಕೆ ಬೀಳುವಂತಾದಾಗ ಆತನ ದೊಡ್ಡಪ್ಪ ಬಲರಾಮ ನಿಂತು ರಾಜಿ ಮಾಡಿಸುತ್ತಾನೆ.
ಕಡೆಗೆ ಒಮ್ಮೆ ದೂರ್ವಾಸರು ಹಾಗು ಇತರ ಮುನಿಗಳು ದ್ವಾರಕೆಗೆ ಕೃಷ್ಣನ ದರ್ಶನಕ್ಕೆಬಂದಾಗ ಒನಕೆಯನ್ನ ಉದರಕ್ಕೆ ಸುತ್ತಿಕೊಂಡು ಗರ್ಭಿಣಿಯಂತೆ ನಟಿಸಿ 'ತನಗೆಂತ ಮಗು ಹುಟ್ಟುವುದೆಂದು ಅವರನ್ನ ಹಾಸ್ಯ ಮಾಡುವಂತೆ ಕೇಳಿದಾಗ ಕೋಪಗೊಂಡ ಮುನಿಗಳು ನಿನಗೊಂದು ಒನಕೆ ಹುಟ್ಟಲಿ, ಅದರಿಂದಲೇ ಯದುಕುಲ ಕೊನೆಯಾಗಲಿ ಅಂತ ಶಾಪ ನೀಡುತ್ತಾರೆ. ಕಡೆಗೊಂದು ದಿನ ಮುನಿಗಳ ಶಾಪದಂತೆ ಸಾಂಬ ಒನಕೆಕೆ ಜನ್ಮ ನೀಡುತ್ತಾನೆ . ಅದನ್ನೆಲ್ಲ ಚೂರು ಚೂರು ಮಾಡಿ ಯಮುನೆಯ ತಟದಲ್ಲಿ ಎಸೆದು ಬಿಡುತ್ತಾನೆ. ಯಾದವೀ ಕಲಹ ಶುರುಗುವಷ್ಟರಲ್ಲಿ ಈ ಒನಕೆಯ ಚೂರುಗಳು ದೊಡ್ಡ ಹುಲ್ಲಿನ ಜಂಡುಗಳಾಗಿ ಬೆಳೆದು ಯಾದವರು ಅವುಗಳಿಂದಲೇ ಆಯುಧ ಮಾಡಿ ಬಡಿದಾಡಿ ಸಾಯುತ್ತಾರೆ. ಕಡೆಗೆ ಕೃಷ್ಣ ಕೂಡ ನೊಂದು ಯಮುನೆಯ ತಟದಲ್ಲಿ ಆ ಹುಲ್ಲು ಜೊಂಡಿನ ನಡುವೆ ಮಲಗಿದ್ದಾಗ ಜರ ಎಂಬ ಬೇಟೆಗಾರ ಅವನನ್ನು ಯಾವುದೋ ಪ್ರಾಣಿ ಅಲ್ಲಿ ಮಲಗಿದೆಂದು ಭ್ರಮಿಸಿ ಬಾಣಹೂಡಿಬಿಡುತ್ತಾನೆ.. ಅಲ್ಲಿಗೆ ಯದುಕುಲದ ಪರಿಸಮಾಪ್ತಿಯಾಗುತ್ತದೆ ' ಅಂದ್ರು .
ಅಮ್ಮ ಅಪ್ಪನಾಗೋದು ಅಂದ್ರೆ ಕೇವಲ ದೈಹಿಕವಾಗಲ್ಲ ಮಾನಸಿಕವಾಗಿ ದೈವಿಕವಾಗಿ ಕೂಡ ಮಕ್ಕಳನ್ನ ಬೆಳೆಸಬೇಕೇನೋ. ಒಂದಷ್ಟು ಸಮಯ, ಒಂದಷ್ಟು ಪ್ರೀತಿ, ಒಂದಷ್ಟು ಅಪ್ಪನಾಗಿ, ಅಮ್ಮನಾಗಿ ಮಕ್ಕಳೊಡನೆ ಮಾತುಕತೆ ಅಗತ್ಯವೇನೋ ಅಲ್ವೇ ...
ಹಂಚಿಕೊಳ್ಳಬೇಕು ಅನಿಸ್ತು .... 

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...