Wednesday, 9 August 2017

ೆಯಲ್ಲಿ ಒಂದು ಪುಟ್ಟ ಹುಡುಗಿ, ಕಾರ್ತಿಗಿಂತ ಒಂದ್ಮೂರು ವರ್ಷ ದೊಡ್ಡವಳೇನೋ, ಶಾಲೆಗೆ ಹೋಗುವಾಗ ದಿನಾ ಮಾತನಾಡಿಸ್ತಾ ಇದ್ದೆ. ಒಂದೆರಡು ತಿಂಗಳುಗಳ ನಂತರ ಗಾಡಿಯಲ್ಲಿ ನಾನು ಮಂಜು ಹೋಗುವಾಗ ಆ ಹುಡುಗಿ ತನಗಿಂತ ಒಂದಾರೇಳು ವರ್ಷದ ಹುಡುಗಿ ಜೊತೆ ಆಗಾಗ ಕಾಣಿಸ್ತಾ ಇತ್ತು. ಆ ದೊಡ್ಡ ಹುಡುಗಿ ಫೋನ್ ಅಲ್ಲಿ ಯಾರ ಜೊತೆಗೆ ಮಾತಾಡ್ತಾ ಇದ್ರೆ ಇದು ಪಕ್ಕದಲ್ಲಿ ನಿಂತಿರ್ತಾ ಇತ್ತು. ಆ ದೊಡ್ಡ ಹುಡುಗಿ ತನ್ನ safetyಗಾಗಿ ಇವಳನ್ನ ಜೊತೆಗೆ ಕರ್ಕೊಂಡು ಬಂದು ಜೊತೆ ನಿಲ್ಲಿಸಿಕೊಂಡು ಗಂಟಿಗಟ್ಟಲೆ ಮಾತಾಡ್ತಾ ಇತ್ತು ಅನಿಸುತ್ತೆ (ಯಾರ ಜೊತೆ, ಏನು ಮಾತಾಡ್ತಾ ಇದ್ದಳೋ ನನಗೆ ಅಪ್ರಸ್ತುತ .. ಆದರೆ ಹೋಗ್ತಾ ಬರ್ತಾ ಇದ್ದವರು ಆಕೆಯನ್ನ ನೋಡೋ ರೀತಿ ಇಷ್ಟ ಆಗ್ತಾ ಇರ್ಲಿಲ್ಲ ). ಈ ಹುಡುಗಿ ಪಕ್ಕದಲ್ಲೇ ಸುಮ್ನೆ ನಿಂತಿರ್ತಾ ಇತ್ತು . ಒಂದೆರಡ್ಮೂರು ಬಾರಿ ನೋಡಿದ ನಂತರ ಒಂದ್ ದಿನ ಎಂದಿನಂತೆ ಮಾತನಾಡಿಸಿದ ಹುಡುಗಿಯನ್ನ 'ಪುಟ್ಟ, ನಿನ್ನ ಅಲ್ಲಿ ನೋಡ್ದೆ , ಯಾಕ್ ಅಲ್ಲಿ ಇಲ್ಲಿ ನಿಂತ್ಕೊಳ್ತೀಯಪ್ಪ? ಅಪ್ಪ ಅಮ್ಮ ನೋಡಿದ್ರೆ ಬೇಜಾರ್ ಮಾಡ್ಕೊಳ್ತಾರೆ. ನಿನ್ ಫ್ರೆಂಡ್ಸ್ ಜೊತೇನೆ ಹೋಗು, ದೊಡ್ಡೋರ ಜೊತೆ ಯಾಕಪ್ಪ 'ಅಂದೆ . ಮನೆಯ ಹೊರಗೆ ಕಾಂಪೌಂಡ್ ಅಲ್ಲೇ ಇದ್ದ ಅವರಮ್ಮ "ಏನ್ ಸುನೀತಾ "ಅಂದ್ರು . 'ಏನಿಲ್ಲ ಟೆಸ್ಟ್ ಆಯ್ತಾ ಅಂತ ಕೇಳ್ತಾ ಇದ್ದೆ ಅಷ್ಟೇ' ಅಂದೆ.
ಅದೇ ಕೊನೆ ನಾ ಆ ಮಗುವನ್ನ ರಸ್ತೆ ಬದಿಯಲ್ಲಿ ನೋಡಿದ್ದು. ಮನೆಯ ಮುಂದೆ ತನ್ನ ಸಮಾನ ವಯಸ್ಸಿನ ಮಕ್ಕಳ ಜೊತೆ ಆಡ್ಕೊಂಡು, ಚೆಂದ ಅಂಕಗಳನ್ನ ತೆಗೆದು ಇಂಜಿನಿಯರಿಂಗ್ ಮುಗಿಸಿದ್ಳು. ಅಲ್ಲೆಲ್ಲೋ ಒಂದು ಕಡೆ ಕೆಲ್ಸಕ್ಕೆ ಕೂಡ ಹೋದ್ಳು . ಮೊನ್ನೆಮೊನ್ನೆ ಅವರಮ್ಮ 'ಮಗಳಿಗೆ ಮದ್ವೆ ಫಿಕ್ಸ್ ಆಯ್ತು ಸುನೀತಾ ' ಅಂತ ಸಂತಸ ಹಂಚಿಕೊಂಡ್ರು . ಪುಟ್ಟ ಹುಡುಗಿ ಈಗಿನ್ನು ಕಣ್ಣ ತುಂಬಿ ನಿಂತು 'ಇನ್ ಮೇಲೆ ಹೋಗೋಲ್ಲ ಆಂಟಿ' ಅಂದ ನೆನಪು . ಆಗಲೇ ಅದಕ್ಕೆ ಮದುವೆ  ಮತ್ತೊಂದು ನಾಲ್ಕುವರ್ಷಕ್ಕೆ ಅದರ ಮಗು ನನ್ನ 'ಅಜ್ಜಿ ' ಅನ್ನುವುದೇನೋ
ಮನಸ್ಸು ನೀಲಿನೀಲಿ ))
ಬದುಕು ತುಂಬಾ ಸುಂದರ, ನಾವು ಆರಿಸಿಕೊಳ್ಳುವ ಹಾಗೆ ....
ನೆನ್ನೆ ಹೂ ತರಲು ನಮ್ಮ ಕೆ ಆರ್ ಮಾರುಕಟ್ಟೆಗೆ ಹೋಗಿದ್ವಿ . ಹೂವಿನ ಬೆಲೆ ಸ್ವಲ್ಪ ಜಾಸ್ತಿನೇ ಇತ್ತು. ಮಂಜುಗೆ ಹೇಳ್ದೆ ' ಈಗ್ಲೇ ಹಿಂಗಾದ್ರೆ ಇನ್ನ ಹಬ್ಬಕ್ಕೆ ಅಂತೂ ಕೇಳೋದೇ ಬೇಡವೇನೋ ಅನ್ನೋ ಅಷ್ಟು ಜಾಸ್ತಿ ಆಗುತ್ತೆ ಅಲ್ವ ಮಂಜು' . 'ಒಂದು ಬ್ಯಾಗ್ ಹೋಲಿಸಿ ಕೊಡ್ತೀನಿ ಬಿಡವ್ವಾ ' ಅಂದ್ರು.... ರೇಗಿಹೋಯ್ತು ! 
ನಮ್ಮ ರಸ್ತೆಗೆ ಬೆಳಿಗ್ಗೆಬೆಳಿಗ್ಗೆ ಒಬ್ರು "ಲೇಡಿ' ವಾಕಿಂಗ್ಗೆ ಬರ್ತಾರೆ . ಹೆಗಲಿಗೆ ಒಂದು ಚೀಲ ತಗುಲಿಸಿಕೊಂಡು ಹೋಗ್ತಾರೆ. ಯಾರೂ ಇಲ್ಲದೆ ಇದ್ರೆ ಯಾರ ಮನೆಯ ಮುಂದೆ ಹೂ ಇದೆಯೋ ಅಲ್ಲಿಂದ "ಕೇವಲ" ಒಂದೋ ಎರಡೋ ಕಿತ್ಕೊಂಡು ಟಕ್ ಅಂತ ಚೀಲಕ್ಕೆ ಹಾಕಿ ಏನೂ ನಡೆದೇ ಇಲ್ಲವೇನೋ ಎನ್ನುವಂತೆ ವಾಕಿಂಗ್ ಮುಂದುವರೆಸುತ್ತಾರೆ . ಅದೆಷ್ಟು ಚೆಂದದ reflex action ಅಂತೀರಾ ... ಮೂರು ಬೀದಿಯ ವಾಕಿಂಗ್ ಮುಗಿಸೋ ಹೊತ್ತಿಗೆ ಆವತ್ತಿನ ಪೂಜೆಗೊ, ಷೋಗೆ ಇಡೋದಕ್ಕೋ ಹೂವಿನ ವ್ಯವಸ್ಥೆ ಆಗಿಹೋಗಿರುತ್ತೆ . ಬ್ಯಾಗ್ ತಂದ ಕಾರಣ ಹಾಲು ತೆಗೆದುಕೊಳ್ಳಲು ಅನಿಸೋ ಹಾಗೆ ಕಡೆಗೆ ಬ್ಯಾಗಲ್ಲಿ ಮೂಲೆಯ ಡೈರಿಯಿಂದ ಹಾಲು ಸೇರುತ್ತದೆ! ಮತ್ತೆ ಮೂರು ರಸ್ತೆಗಳ ಆಚೆಯ ಆಕೆಯ ಅಪಾರ್ಟ್ಮೆಂಟ್ ಸೇರಿಕೊಳ್ಳುತ್ತಾರೆ . (ನಾ ಲೇಡಿ ಅಂದಿದ್ದು ಯಾಕೆ ಅಂತ ಗೊತ್ತಾಯ್ತಲ್ವಾ !!) ಮಂಜುನಾಥ ಪ್ರಭುಗಳು ಆ ಸಮಯದಲ್ಲಿ ಡ್ಯೂಟಿಗೆ ಹೋಗುವ ಮೊದಲು ಕಾರು ಒರೆಸಿ ಹೂ ಹಾಕ್ತಾ ಇರ್ತಾರೆ... ಆಕೆಗೆ ಕಾರಿನ ಮರೆಯಲ್ಲಿರೋರು ಕಾಣೋದಿಲ್ಲ ! ಒಮ್ಮೆ ಹಾಗೇ ಕೀಳುವಾಗ ಇವರಿದ್ದಿದ್ದನ್ನ ನೋಡಿ ಮುಜುಗರಗೊಂಡು 'ಯಾವ ಹೂವು ಅಂತ ನೋಡಿದೆ ಅಷ್ಟೇ ಸಾರ್' ಅನ್ದರಂತೆ ! ನನ್ನ ಪತಿದೇವರು ಸುಮ್ನೆ ಹಲ್ಲು ಬಿಟ್ಟರಂತೆ !! (ಇನ್ನೇನು ಮಾಡೋಕೆ ಆಗುತ್ತೆ ! ಹೆಣ್ಣು ಮಕ್ಕಳನ್ನ ಬೈಯೋಕೆ ಆಗುತ್ತಾ ಅಂತಾರೆ!!! ಅಲ್ವ ಮತ್ತೆ!!) ...
ನನಗೆ ರೇಗಿದ್ದು ಯಾಕೆ ಅಂತ ಗೊತ್ತಾಯ್ತಲ್ವಾ ))))).
ಅಜ್ಜಿ ಮೊಮ್ಮಗನಿಗೆ :"ಮಗ ಹೋಗಿ ತನಿ ಎರೆದು ಬರೋದಲ್ವಾ ... ಒಳ್ಳೆಯದಾಗುತ್ತೆ "
ಮೊಮ್ಮಗ : "ಕೊಡಮ್ಮ ಹೋಗ್ ಬರ್ತೀನಿ "
ಅಮ್ಮ ಬಾಳೆಹಣ್ಣು,ಹಾಲು, ಕರ್ಪೂರ ಕೊಟ್ಲು 'ನಾ ಆಮೇಲೆ ಹೋಗಿ ಬರ್ತೀನಿ ,ನೀ ಹಾಲು ಕೊಟ್ಟು ಕರ್ಪೂರ ಹಚ್ಚಿ ಬಾ ಸಾಕು'
ಮೊಮ್ಮಗ ಹೋದ. ಒಂದ್ಹತ್ತು ನಿಮಿಷ ಬಿಟ್ಟು ಬಂದ .. 
ಅಜ್ಜಿ 'ಎರೆದ ಮಗ' 
ಮೊಮ್ಮಗ "ಹ್ಮ್ಮ್ ಅಜ್ಜಿ ' ಅಂದ
ಅಮ್ಮ ಅಡುಗೆ ಮನೆಯಲ್ಲಿ ಚಪಾತಿ ಲಟ್ಟಿಸ್ತಾ ಇದ್ಳು . 'ತಿಂಡಿ ರೆಡಿನಾ ಅಮ್ಮಾ ' ಅಂತ ಜೋರಾಗಿ ಕೇಳಿ, ಒಳಗೆ ಬಂದು 'ಬಾಳೆಹಣ್ಣು ಹಸುಗೆ ಕೊಟ್ಟೆ , ನಾಯಿಗೆ ಹಾಲು ಹಾಕಿದ್ದೀನಿ , ಕರ್ಪೂರ ಹಚ್ಚಿ ಬಂದಿದ್ದೀನಿ , ನಿಮ್ಮತ್ತೆ ಮುಂದೆ ಭಜನೆ ಶುರು ಮಾಡಬೇಡ ಆಯ್ತಾ , ನೀ ಹೆಂಗು ಮತ್ತೆ ಅಭಿಷೇಕಕ್ಕೆ ಅಂತ ಹಾಲು ಕೊಡ್ತೀಯಲ್ಲ " ಅಂದ ತಲೆ ಸವರುತ್ತಾ ...
ಅಪ್ಪನದೇ ಡ್ರಾಮ ಕಂಪನಿ ಅಲ್ವೇ  ಡೈಲಾಗ್ ಹೆಂಗೆ ಬದಲಾಗುತ್ತೆ ?? ಅದ್ ಹೆಂಗೆ ಬ್ಯಾಲನ್ಸ ಮಾಡೋದು ಅಂತ ಅರಿತವ )))
ಈಗಷ್ಟೇ ಎಲೆಕ್ಟ್ರಿಕ್ ಬಿಲ್ ಬಂತು. ರಸೀದಿ ಹಾಕ್ತಾ ಇದ್ದವ್ರು ಪಕ್ಕದ ಮನೆಯಾಕೆಗೆ 'ಬಿಲ್ ಕಟ್ಟಿಲ್ಲ ಅಂತ ತೋರಿಸ್ತಾ ಇದೆ. ೧೫ರ ಒಳಗೆ ಕಟ್ಬಿಡಿ .ಇಲ್ಲ ಅಂದ್ರೆ ಕರೆಂಟ್ ಡಿಸ್ಕನೆಕ್ಟ್ ಮಾಡ್ತಾರೆ ' ಅಂತ ಹೇಳಿ ಹೋದ್ರು. ಒಂದು ಕ್ಷಣ ಮನಸ್ಸು ವಿಷಾದದ ಕಡಲಾಗಿಹೋಯ್ತು..ಮಂಜು ಅಪಘಾತಕ್ಕೆ ಸಿಲುಕಿ ಪೆಟ್ಟು ಮಾಡಿಕೊಂಡಾಗ ಎದುರಿಸಿದ ಬದುಕಿನ ಪುಟಗಳೆಲ್ಲಾ ತೆರೆದುಕೊಂಡಂತೆ ...
ಸುಮಾರು ೨೦೦೦ ಇಸವಿಯಲ್ಲಿ ಆಗಸ್ಟ್ ತಿಂಗಳ ಒಂದು ದಿನ ಮಂಜು ಏಟು ಮಾಡಿಕೊಂಡಾಗ ನನ್ನ ಚಿಕ್ಕ ಕೂಸಿಗೆ ಬರೀ ೪ ತಿಂಗಳು! ಅಮ್ಮ ತಮ್ಮ,ನಾದಿನಿ, ತಮ್ಮಂದಿರಂತಹ ಕಸಿನ್ಸ್ ಇಲ್ಲದೆ ಇದ್ದಿದ್ದರೆ ಬಹುಶಃ ಅದೇನ್ ಆಗಿಹೋಗ್ತಾ ಇದ್ನೋ ಗೊತ್ತಿಲ್ಲ ! ಬದುಕಿನ ಪಾಠ ಕಲಿತ ದಿನಗಳವು. ಮೈಸೂರ೦ತ ಮೈಸೂರಲ್ಲಿ ಮಂಜು ಕಾಲು ಸರಿ ಹೋಗದೆ ಇದ್ದಾಗ ಬೆಂಗಳೂರಿನ ಆಸ್ಪತ್ರೆಗೆ ಓಡಾಡಿ ಒಂದಷ್ಟು ಸರಿ ಹೋದಾಗ ಗೆದ್ದು ಬಂದಂತೆ. ಹಬ್ಬ ಅಂದರೆ ಸಂಭ್ರಮಿಸುತ್ತಿದ್ದ ನನಗೆ ದಿನಗಳೇ ಮರೆತು ಹೋಗಿತ್ತೇನೋ! ದೀಪಾವಳಿಯ ಹಿಂದಿನ ಬೆಳಿಗ್ಗೆ ಮೈದುನನನ್ನ ಮಂಜು ಜೊತೆ ಬಿಟ್ಟು, ಮಂಜುವನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಲು ದುಡ್ಡು ತರಲು ತಮ್ಮನೊಡನೆ ಮೈಸೂರಿಗೆ ಬಂದಾಗ, ಸಮಯಕ್ಕೆ ಸರಿಯಾಗಿ ಹೇಳಿದವರು ಹಣ ನೀಡದಿದ್ದಾಗ ಅಮ್ಮ ಅವಳ ಸರವನ್ನೇ ಅಡವಿಟ್ಟು ನೀ ತಗೊಂಡು ಹೋಗು ಮಗ , ನಾ ಬಿಡಿಸಿಕೊಳ್ತೀನಿ ' ಅಂತ ಹಣ ನೀಡಿದ್ಳು ! ಸಂಜೆ ಹೊರಡುವಷ್ಟರಲ್ಲಿ ಮೈದುನ 'ಬಾಬ್, ನನ್ನ ಹೆಂಡ್ತಿ ಸಿಟ್ಕೊಂಡಿದ್ದಾಳೆ , ಹಬ್ಬ ಇನ್ನೂ ಮನೆಗೆ ಬರಲಿಲ್ವಲ್ಲಾ ಅಂತ ನೀವು ಇನ್ನು ಹೊರಟಿಲ್ವಾ ' ಅಂದಾಗ ಸಿಸ್ಟರ್ಗೆ ಫೋನ್ ಮಾಡಿ 'ನಾ ಬರೋವರೆಗೂ ಮಂಜುನ ನೋಡಿಕೊಳ್ಳಿ ಪ್ಲೀಸ್ 'ಅಂದಾಗ ಅದ್ಯಾವ ಜನ್ಮದ ಅಕ್ಕತಂಗಿಯರೋ ಎಂಬಂತೆ ನೋಡಿಕೊಂಡಿದ್ದರು. ಅಮ್ಮನ ಮನೆಯಲ್ಲಿದ್ದ ನನ್ನನ್ನ ನೋಡಿದ ಮತ್ತೊಬ್ಬ ಮೈದುನ 'ಇದ್ಯಾಕ್ ಅತ್ಗೆ ಇಲ್ಲಿದ್ದೀರಾ, ಮನೆಗೆ ಹೋಗಿ ದೀಪ ಹಚ್ಚೋದಲ್ವಾ' ಅಂದಾಗ ಸುಮ್ನೆ ನಕ್ಕುಬಿಟ್ಟಿದ್ದೆ ಕಣ್ಣಲಿ ಹನಿ ತುಂಬಿ! ಒಂದಷ್ಟು ಕಾಲು ಸರಿಯಾಗಿ ಬಂದ ಮಗನನ್ನ ನೋಡಿದ ಅತ್ತೆ 'ಮೊದ್ಲೇ ಕರ್ಕೊಂಡ್ ಹೋಗಿದ್ರೆ ನನ್ ಮಗ ಇಷ್ಟ್ ನೋವೇ ತಿಂತಾ ಇರ್ಲಿಲ್ಲ ' ಅಂದಾಗ ಅದ್ಯಾಕೋ ಸಂಕಟ ಒತ್ತರಿಸಿತ್ತು.. ವಾಪಸ್ಸು ಬಂದು ಅಮ್ಮನ ಮನೆಯಲ್ಲಿ ಒಂದಷ್ಟು ಸುಧಾರಿಸಿಕೊಂಡು ಮತ್ತೆ ನಮ್ಮದೇ ಮನೆಗೆ ಬಂದಾಗ ಹೀಗೆ sameee ಮೇಲೆ ಹೇಳಿದಂತೆ ''ಬಿಲ್ ಕಟ್ಟಿಲ್ಲ ಅಂತ ತೋರಿಸ್ತಾ ಇದೆ. ೧೫ರ ಒಳಗೆ ಕಟ್ಬಿಡಿ .ಇಲ್ಲ ಅಂದ್ರೆ ಕರೆಂಟ್ ಡಿಸ್ಕನೆಕ್ಟ್ ಮಾಡ್ತಾರೆ ' ಅಂದಿದ್ರು ವಿದ್ಯುತ್ ಇಲಾಖೆಯವರು !!
ಅಮೇಲಿನದೆಲ್ಲ ಛಲಕ್ಕೆ ಬಿದ್ದಂತ ಬದುಕು! ಪುಟ್ಟ ಕಾರ್ತಿ, ಕೃತಿ, ಮಂಜು, ನಾನು ..... ಇಲ್ಲಿಯ ತನಕ ಹೀಗೆ ನಗಲು ತೆಗೆದುಕೊಂಡ ಹಠ ಅಹ್ ....
ಬದುಕು ಸುಂದರ. ಅದೆಷ್ಟೇ ಕಷ್ಟ ಬಂದರೂ ಗೆಲ್ಲಬಹುದು .. ಒಂದು ಜೊತೆ, ಒಂದಷ್ಟು ಹಠ ಸಾಕೇನೋ .. ಜೊತೆಗೆ ಯಾವುದೋ ಒಂದು ಶಕ್ತಿ ..ಬೀಳದಂತೆ ತಡೆ ಹಿಡಿವ ಶಕ್ತಿ, ಇನ್ಯಾರ ಮೂಲಕವೋ ನಮ್ಮನ್ನ ಗೆಲ್ಲಿಸುವ ಶಕ್ತಿ ಇದೆಯೇನೋ ...
ಬೆಳಗಾಗ ನಾ ಎದ್ದು ಯಾರ್ಯಾರ ನೆನೆಯಲಿ ಎಂದಾಗ ,ನಾ ನೆನೆಯಲು, ನೆನೆದು ಅಭಾರಿಯಾಗಿರಲು, ಆಭಾರಿಯಾಗಿ ಹಾರೈಸಲು ಅದೆಷ್ಟು ಜನರಿದ್ದಾರೆ ನನಗೆ : ಅಂತಹವರ ಸಂತತಿ ಹೊಳೆದಂಡೆಯ ಗರಿಕೆ ಹಂಗೆ ಬೆಳೆಯಲಿ ))))
ಬರೆಯಲು ಒಂದು ನೆಪ ಅಷ್ಟೇ ಅಂದ್ರಾ 
ರಾತ್ರಿ ಅಷ್ಹೊತ್ತಲ್ಲಿ ಪುಟ್ಟಿ ಎಬ್ಬಿಸಿದ್ಳು 'ಮಾ, ಬಾ ಗ್ರಹಣ ನೋಡೋಣ' ಅಂತ . ಅದಕ್ಕೆ ನಿರಾಸೆ ಯಾಕೆ ಅಂತ ಮಾಳಿಗೆಯ ಮೇಲೆ ಹೋದ್ವಿ.ಮೋಡ ಕವಿದಿತ್ತು. ಮೋಡಗಳ ನಡುವೆಯೇ ಒಂದಷ್ಟು ನೋಡಿ ಮತ್ತೆ ಬಂದು ಮಲಗಿದ್ವಿ...
ಸಣ್ಣವರಿದ್ದಾಗ ಈ ಗ್ರಹಣಗಳು ಸಂಭವಿಸಿದರೆ ಅಮ್ಮ ರಾತ್ರಿ ಏನನ್ನು ಉಳಿಸ್ತಾ ಇರಲಿಲ್ಲ. ಅಪ್ಪಿತಪ್ಪಿ ಉಳಿದರೆ ನಾಯಿಗೆ ಹಾಕಿಬಿಡ್ತಾ ಇದ್ಲು. ನೀರಿಗೆ, ತುಪ್ಪಕ್ಕೆ ಒಂಚೂರು ದರ್ಭೆ ತಂದು ಹಾಕ್ತಾ ಇದ್ಳು . ಬೆಳಿಗ್ಗೆ ನೀರು ಬಂದ್ರೆ ಇರೋಬರೋ ನೀರನ್ನೆಲ್ಲಾ ಬಾಗಿಲಿಗೋ ಗಿಡಕ್ಕೋ ಹಾಕಿ ಹೊಸ ನೀರು ತುಂಬುತ್ತಾ ಇದ್ಲು. ನಾವು ಒಂದಷ್ಟು ರೇಗಿಸ್ತಾ ಇದ್ವಿ , ಆ ನಲ್ಲಿಯವ್ನೂ ರಾತ್ರಿ ದರ್ಭೆ ಹಾಕಿದ್ನಾ ಅಂತಾ. ಆಸ್ಪತ್ರೆಯ ಔಷಧಿಗೆ ಏನಾಗೋದಿಲ್ವ ಅಂತ ರೇಗಿಸ್ತಾ ಇದ್ವಿ.
ಮದ್ವೆ ಆದ ಮೇಲೆ ಕಾರ್ತಿ ಇನ್ನು ಬಸುರಲ್ಲಿದ್ದಾಗ ಬಂದ ಸೂರ್ಯ ಗ್ರಹಣದ ದಿನ ಅತ್ತೆ , ಮಂಜು ನನ್ನ ರೂಮಿನ ಕಿಟಕಿಗೆಲ್ಲ ದಪ್ಪದಪ್ಪ ಕಂಬಳಿಗಳನ್ನ ಕಟ್ಟಿ ನಾ ಹೊರಗೇ ಬಾರದ ಹಾಗೆ ಕಾವಲಿದ್ರು ! ಆಮೇಲೆ ತಲೆಗೆ ನೀರೆರೆಸಿ ತುಪ್ಪದ ದೀಪ ಹಚ್ಚಿಸಿದ್ರು!! (ಅಮ್ಮನ್ನ ರೇಗಿಸಿದ ಹಾಗೆ, ಅಮ್ಮನಿಗೆ ಉಲ್ಟಾ ಹೊಡೆಯೋ ಹಾಗೆ ಅತ್ತೆಗೆ ಉಲ್ಟಾ ಹೊಡೆಯಲಾಗುತ್ತದೆಯೇ?!)
ಬೆಳಿಗ್ಗೆಬೆಳಿಗ್ಗೆ ಪುಟ್ಟಿಗೆ ಅವರಜ್ಜಿ 'ತಲೆ ಸ್ನಾನ ಮಾಡು ಮಗ' ಅಂದ್ರು . 'ಸರಿ ಅಜ್ಜಿ' ಅಂದ್ಳು . ಅಡುಗೆ ಮನೆಗೆ ಬಂದು 'ಲೇ ಕುಳ್ಳಿಮಾ, ತಲೆ ಸ್ನಾನ ಮಾಡಿದ್ರೆ ಕಾಲೇಜ್ಗೆ ಹೋಗೋ ತನಕ ಕೂದ್ಲು ಒಣಗಲ್ಲ, ನಾ ತಲೆ ಸ್ನಾನ ಮಾಡಲ್ಲ, ಮೈ ತೊಳೆದು ಬರ್ತೀನಿ ನಿಮ್ಮತ್ತೆ ಕೇಳದ ಹಾಗೆ ನೋಡ್ಕೋ' ಅಂದ್ಳು . ಸರಿ, ನೀ ರೆಡಿ ಆಗು ಅಂದೆ. ತಯಾರಾಗಿ ಬಂದು ದೇವ್ರಿಗೆ ಕೈಮುಗಿದು ತಿಂಡಿ ತಿಂದ್ಳು. ಕಾಲೇಜ್ಗೆ ಬಿಟ್ಟು ಬಂದೆ . 'ಮಕ್ಕಳನ್ನ ನೀನೆ ಹಾಳ್ ಮಾಡ್ತೀಯ' ಅಂದ್ರು ಅತ್ತೆ. ಸುಮ್ನೆ ನಕ್ಕೆ. ನಾ ಹೋಗಿ ಎಂದಿನಂತೆ ದೀಪ ಹಚ್ಚಿದೆ...
ವಿಜ್ಞಾನಕ್ಕೂ ಸಂಪ್ರದಾಯಕ್ಕೂ ಬಹಳ ಹಿಂದಿನಿಂದಲೂ ಒಂದು ಯುದ್ಧ ನಡೆಯುತ್ತಲೇ ಬಂದಿದೆ . ಸಂಪ್ರದಾಯದ ಹೆಸರಲ್ಲಿ ಹೇರಿಕೆಯಾಗುವ ಯಾವುದೇ ಆದರೂ ಮನೆಯಲ್ಲಿ ನೆಮ್ಮದಿ ಕೆಡುವಂತದ್ದು.. ವಿಜ್ಞಾನದ ಹೆಸರಲ್ಲಿ ಸಂಪ್ರದಾಯವನ್ನ ಸೋಲಿಸಿದೆ , ಸಂಪ್ರದಾಯದ ಹೆಸರಲ್ಲಿ ವಿಜ್ಞಾನವನ್ನ ಸೋಲಿಸಿದೆ ಎನ್ನುವುದು ಸುಳ್ಳು. ವಿಜ್ಞಾನದ "ಉಪಯುಕ್ತತೆ"ಯನ್ನ, ಸಂಪ್ರದಾಯದ "ಯುಕ್ತತೆ"ಯನ್ನ ಅಳವಡಿಸಿಕೊಳ್ಳುತ್ತಾ ನಡೆದರೆ ಚೆಂದವೇನೋ! ಅವರವರ ಭಾವಭಕುತಿ! ಖುಷ್ಖುಷಿಯಿಂದ ಏನೇ ಮಾಡಿದರೂ ಚೆಂದ..."ಗ್ರಹಣ ಬಿಡ್ತಾ" ಅನ್ನೋದು ಬರೀ ಪ್ರಾಕೃತಿಕವಾಗಲ್ಲ ಮಾನಸಿಕವಾಗಿಯೂ ಆದಾಗ ಚೆಂದವೇನೋ..
ಸುಂಸುಮ್ನೆ ಬರಿಬೇಕು ಅನ್ನಿಸಿತು 

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...