Friday 26 May 2017

ಮಗನಿ/ಳಿಗೊಂದು ಪತ್ರ :
ಮಗ,
ಇದೇನು ಮನೆಯಲ್ಲೇ ಇದ್ದೀನಿ ಹೇಳೋದು ಬಿಟ್ಟು ಏನೋ ಕವಿರತ್ನ ಕಾಳಿದಾಸನ ತರ ಬರೀತಾ ಇದ್ದೀಯಾ ಅಂತ ತರ್ಲೆ ನಗು ನಗ್ತೀಯೇನೋ ಅಲ್ವ ?ಹೇಳಿದ್ರೆ ತಾಳ್ಮೆಯಿಂದ ನೀ ಯಾವತ್ತೂ ಕೇಳಿದ್ದೀಯ ಹೇಳು? ಒಂದೋ ನಗ್ತೀಯ ಅಥವ ಏನಾದ್ರೂ ತರ್ಲೆ ಮಾಡಿ ನಗಿಸಿಬಿಡ್ತೀಯ . ನಾನೂ ಆ ಕ್ಷಣದ ನಿನ್ನ ತುಂಟತನಕ್ಕೆ ನಕ್ಕರೂ ಹೇಳಬೇಕಾಗಿದ್ದನ್ನ ಹೇಳದೆ ಉಳಿದ ದುಗುಡದಲ್ಲೇ ಉಳಿದುಬಿಡ್ತೀನಿ .....
ಈಗಷ್ಟೇ ಹುಟ್ಟಿದಂತೆ ಅನಿಸುವ ನೀನು ಆಗಲೇ ನನಗಿಂತ ಎತ್ತರಕ್ಕೆ ಬೆಳೆದು ನಗುವುದ ನೋಡಿದಾಗ ಅದೇನ್ ಹೆಮ್ಮೆ ಅಂತೀಯಾ ! ಬೆಳವಣಿಗೆ ದೈಹಿಕವಾಗಿ ಮಾತ್ರವಲ್ಲದೆ ಬೌದಿಕವಾಗಿ ಕೂಡ ಅನಿಸದಾಗ ಹೆಮ್ಮೆ ದುಪ್ಪಟ್ಟಾಗುತ್ತದೆ. ವಯೋ ಸಹಜ ನಡವಳಿಕೆಗಳನ್ನ ಬೇಡ ಅನ್ನುವಷ್ಟು ಸಣ್ಣಮನಸ್ಸಿನವಳಲ್ಲ ಬಿಡು..ಆದರೂ ದುಡುಕುತನ ಮಾತ್ರ ಸಲ್ಲದು ಕಣ್ ಮಗ .. ಹೆಜ್ಜೆ ಇಡುವ ಮುನ್ನ, ಮಾತನಾಡುವ ಮುನ್ನ ಒಮ್ಮೆ, ಮತ್ತೊಮ್ಮೆ ಯೋಚಿಸಿಬಿಡು .. ನೀನೇ ಸರಿ ಹೆಜ್ಜೆ ಇಡ್ತೀಯ . ಓದುವಿಕೆಯ ಬಗ್ಗೆಯಾಗಲಿ, ನಿನ್ನ ಕಾಲ ಮೇಲೆ ನೀನು ನಿಲ್ಲಬೇಕೆನ್ನುವ ಬಗ್ಗೆಯಾಗಲಿ , ನೈತಿಕ ಸರಿ ದಾರಿಯ ಬಗ್ಗೆಯಾಗಲಿ ನಿನಗೆ ಹೇಳುವ ಅಗತ್ಯ ಬಂದಿಲ್ಲ ಬರುವುದೂ ಇಲ್ಲ ಅಲ್ವ.. ಎಷ್ಟೇ ಆದ್ರೂ ನೀ ನಮ್ಮ ಮಗ/ಳು ಅಲ್ವ.. (ಐಟ್ ಇದಕ್ಕೇನು ಕಮ್ಮಿ ಇಲ್ಲ ಬಿಡು ಅಂದ್ಯ !! :)...
ಆದ್ರೂ ಮಗ, ನೀನು ಎಷ್ಟೇ ದೊಡ್ಡವನಾ/ಳಾದ್ರೂ ನಮ್ಮ ಮುಂದೆ ನೀ ಚಿಕ್ಕವನೆ/ಳೆ .. ಗಾಡಿ ಹತ್ತಿದ ಕೂಡಲೆ ನೀ ಮಗನೆಂದು, ಅಣ್ಣನೆಂದು, ತಮ್ಮನೆಂದೋ , ಯಾರಿಗೋ ನೀ ಬೇಕಾದವನೆ೦ಬುದನ್ನೇ ಮರೆತು ನಿನ್ನದೇ ಲೋಕ ಸೇರಿಬಿಡುವ ನಿನ್ನ ಬಗ್ಗೆ ನನಗೆ ಬೇಸರವಿದೆ. ನಿನಗೆ ಪೆಟ್ಟಾದರೆ ನಿನ್ನ ದೈಹಿಕ ನೋವಿಗಿಂತ, (ನಿನಗಿಂತ !) ಹೆಚ್ಚಾಗಿ ನೋಯುವ ಮನಸ್ಸುಗಳಿವೆ .ನಿನ್ನ ಸಂತಸಕ್ಕೆಂದೇ ಕೊಡಿಸಿರುವ ಗಾಡಿ ನಿನಗೆ ದುಃಖ/ನೋವು ತಂದರೆ ಅದರ ತಪ್ಪಿತಸ್ಥ ಭಾವ ನಮಗೆ ಮಗ ! ಒಮ್ಮೆ ಪೆಟ್ಟಾದರೆ ಆ ಮಾನಸಿಕ ಹಾಗು ದೈಹಿಕ ನೋವು irreversible! .. ನೀ ನಂಬುವುದಿಲ್ಲ ನೀ ಸಣ್ಣವನಿದ್ದಾಗ ನೀ ಆಟ ಆಡುತ್ತಾ ಪೆಟ್ಟು ಮಾಡಿಕೊಂಡರೆ ನಿನ್ನನ್ನೇ ಬೈದರು ಅದೆಷ್ಟೋ ಬಾರಿ ರಾತ್ರಿಗಳಲ್ಲಿ ನಿನ್ನ ಗಾಯವನ್ನ ಸವರಿ ಕಣ್ಣ ಹನಿ ಹನಿಸಿದ್ದು ಉಂಟು . ಅದೆಷ್ಟೋ ಬಾರಿ ಪತ್ರಿಕೆಗಳಲ್ಲಿ ವಯಸ್ಸಿಗೆ ಬಂದ ಮಕ್ಕಳು ಬಿದ್ದು ಏಟು ಮಾಡಿಕೊಂಡರು ಅಂತಲೋ ಅಥವಾ ಮತ್ತಿನ್ನೇನೋ ಓದಿದಾಗ ಹೃದಯ ಬಾಯಿಗೆ ಬಂದಂತೆ ..ಅಪ್ಪ ನೀ ಗಾಡಿ ತೆಗೆದಾಗೆಲ್ಲ ಹೇಳ್ತಾನೆ ಇರ್ತಾರೆ 'driver friendly ಆಗಿ ಗಾಡಿ ಓಡಿಸು' ಅಂತ ಅಲ್ವ ? ಪ್ಲೀಸ್ , ನಿಧಾವಾಗಿರು. ನೀ ಒಬ್ಬರಿಗೆ ಏಟು ಮಾಡಿ ನೋಯಿಸಿದರೂ, ನೀನೇ ಏಟು ಮಾಡಿಕೊಂಡರೂ , ನಿನಗೆ ಮತ್ಯಾರೋ ಏಟು ಮಾಡಿದರೂ ನೋವು ನಿನಗೆ ಅಂತ ನೆನಪಿರಲಿ..
ಅಪ್ಪನದೂ ಇದೇ ಮಾತು .. ನಾನಾದರೋ ಒಂದೆರಡು ಕಣ್ಣ ಹನಿ ಹಾಕಿಯೋ, ಬೈದೊ ಸಮಾಧಾನ ಮಾಡಿಕೊಳ್ಳುತ್ತೇನೆ , ಆದ್ರೆ ಅಪ್ಪ ವಯಸ್ಸಿಗೆ ಬಂದ ಮಕ್ಕಳನ್ನ ಬಯ್ಯಲೂ ಆಗದೆ ಅಳಲೂ ಆಗದೆ ಕೊರಗಿ ಬಿಡುತ್ತಾರೆ .. ಇನ್ನು ನಿನ್ನ ಹಿಂದೆ ಮುಂದೆ ಹುಟ್ಟಿದ ಹಾಗು ನಿನ್ನನ್ನು ಪ್ರೀತಿಸುವ ಎಲ್ಲರಿಗೂ ನೋವಾಗುತ್ತದೆ .. ನೀನಂದ್ರೆ ನಮ್ಮ ಜೀವ ...
ನನಗೆ ಗೊತ್ತು ಇಷ್ಟ್ ಓದೋ ಅಷ್ಟ್ರಲ್ಲಿ ನೀ ನನ್ನ ಅದೆಷ್ಟ್ ಬೈಕೊಂಡಿರ್ತೀಯ ಅಂತ . ಬೈಕೋ, ನೀನಲ್ಲದೆ ಮತ್ಯಾರಾದ್ರು ಬೈದ್ರೆ ಗೊತ್ತಲ್ಲ :)
Love you maga
ನಿನ್ನ
ಅಮ್ಮ..

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...