Friday, 26 May 2017

ಮೆದುಳು ದೇಹದ ಅತಿ ಮುಖ್ಯ ಅಂಗ . ದೇಹ ಒಳಗೆ ತೆಗೆದುಕೊಳ್ಳುವ ಆಮ್ಲಜನಕದ ಶೇಕಡ ೨೦ ರಷ್ಟನ್ನ ಈ ಮಿದುಳೆ ಉಪಯೋಗಿಸಿಕೊಳ್ಳುತ್ತದೆ . (ಹಾಗೆಯೇ ಅದರ ಸರಿಯಾದ ಕೆಲಸಕ್ಕೆ ಅಧಿಕ ರಕ್ತದ ಹಾಗು ಆಹಾರದ ಅವಶ್ಯಕತೆ ಇರುತ್ತದೆ). ಇಲ್ಲವಾದರೆ hypoxia (ಆಮ್ಲಜನಕದ ಕೊರತೆ) ಎದುರಿಸಿ ಅನೇಕ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ .. ಆ ಆಮ್ಲಜನಕದ ಜನಕ ಗಿಡಮರಗಳು ... ಆಮ್ಲಜನಕ ನೀಡುವ ಗಿಡಗಳ ಸಂಖ್ಯೆ ಅಧಿಕವಾಗಲಿ ..ಅಕ್ಷಯವಾಗಲಿ ... 
ಮೆದುಳು ಎನ್ನುವ ಅಂಗಕ್ಕೆ ದೈಹಿಕವಾಗಿ ಆಮ್ಲಜನಕ ಹೇಗೋ ಹಾಗೆ ಅದರ ಸಮರ್ಪಕ ಕೆಲ್ಸಕ್ಕೆ ಪ್ರೀತಿ ಅನ್ನೋ ಆಮ್ಲಜನಕ ಕೂಡ ಅಗತ್ಯ .. ಮನಸಲ್ಲಿ ಪ್ರೀತಿ, ಮತ್ತೊಬ್ಬರೆಡೆಗೆ ಒಂದಷ್ಟು ಕಾಳಜಿ, ಸಹನೆ , ಅವರೂ ನನ್ನ ಹಾಗೆಯೆ ಎನ್ನುವ ಭಾವನೆಗಳ ಗಿಡ ನೆಟ್ಟರೆ ಮೆದುಳು ಭಾವನಾತ್ಮಕವಾಗಿ ಕೂಡ ಚೆಂದ ಕೆಲಸ ಮಾಡುತ್ತದೆ ....... ಪ್ರೀತಿ ಅಕ್ಷಯವಾಗಲಿ ... ಬದುಕು ಸಹನೀಯವಾಗಲಿ .......
ನಗು ವೈರಲ್ ಆಗಲಿ :))))))
ಕಳೆದ ವಾರ ಮೈದುನನ ಮಗಳಿಗೆ ಹುಷಾರಿಲ್ಲ ಅಂತ ಆಸ್ಪತ್ರೆ ಸೇರಿಸಿತ್ತು . ನಾನು ಮಂಜು ದಿನಾ ಸಂಜೆ ಹೋಗಿ ನೋಡಿಕೊಂಡು ಬರ್ತಾ ಇದ್ವಿ . ಮಕ್ಕಳ ವಾರ್ಡು , ಒಂದ್ನಾಲ್ಕು ಮಕ್ಕಳು ಇರ್ತಾ ಇದ್ವು, ಒಂದು ದಿನ ಒಂದು ಡಿಸ್ಚಾರ್ಜ್ ಆದ್ರೆ ಮತ್ತೊಂದು ದಿನ ಒಂದು ಹೊಸ ಕಂದ ಸೇರಿರ್ತಾ ಇತ್ತು. ನಾವು ಹೋದ್ರೆ ಆ ಮಕ್ಕಳನ್ನ ಸುಂಸುಮ್ನೆ ಮಾತನಾಡಿಸಿ ನಗಿಸಿ ಬರ್ತಾ ಇದ್ವಿ. ಮೈದುನನ ಮಗಳು ಕೂಡ ನಾವ್ ಹೋದ್ರೆ ಒಂದಷ್ಟು ಹೊತ್ತು ನಗ್ತಾ ಇರ್ತಿತ್ತು . ಏನೂ ತೆಗೆದುಕೊಂಡು ಹೋಗಿ ಕೊಡದೆ ಇದ್ದರೂ (ಚಾಕಲೇಟ್, ಕೇಕ್ ಎಲ್ಲಾ ಆಸ್ಪತ್ರೆಯಲ್ಲಿರುವ ಮಕ್ಕಳಿಗೆ ಕೊಡುವುದು ಸಲ್ಲ ಎಂದು) ನಾವು ಹೋದ್ರೆ ಮಕ್ಕಳು ಖುಷ್ಖುಷಿಯಾಗಿ ನಗ್ತಾ ಇದ್ವು .. ಒಂದ್ನಾಲ್ಕು ದಿನ ಹೋದ್ವಿ ಐದನೇ ದಿನ ಸಂಜೆ ಮಂಜು ಒಂಚೂರು ಪೆಟ್ಟು ಮಾಡಿಕೊಂಡ್ರು. ಡಾಕ್ಟ್ರು ವಿಶ್ರಾಂತಿ ಬೇಕು ಅಂದ್ರು ಅಂತ ಆಸ್ಪತ್ರೆಗೆ ಹೋಗಲಿಲ್ಲ. ಫೋನ್ ಮಾಡಿ ಪುಟ್ಟಿ ಹೇಗಿದ್ದಾಳೆ ಅಂತ ಕೇಳ್ಕೊಳ್ತಾ ಇದ್ದೆ .. ಮತ್ತೆ ಆಕೆ ಡಿಸ್ಚಾರ್ಜ್ ಆಗೋವರೆಗೂ ಹೋಗಲಾಗಲಿಲ್ಲ..
ನೆನ್ನೆ ಫೋನ್ ಮಾಡಿದ ವಾರಗಿತ್ತಿ "ಅಕ್ಕ, ನೀವು ಮಂಜಣ್ಣ ಬರ್ಲಿಲ್ಲ ಅಂತ ಆ ಪಕ್ಕದ ಬೆಡ್ ಅಲ್ಲಿ ಇದ್ವಲ್ಲ ಆ ಎರಡು ಮಕ್ಳು ಮತ್ತೆ ಅವರಮ್ಮಂದಿರು ಡಿಸ್ಚಾರ್ಜ್ ಆಗ ದಿನಾನೂ ಕೇಳ್ತಾ ಇದ್ರು . ಅವ್ರು ಬಂದ್ರೆ "ಚೆಂದ" ಇರ್ತಿತ್ತು , ಮಕ್ಳು ಒಂಚೂರು ನಗ್ತಾ ಇದ್ವು ಅಂತ. ಹಿಂಗ್ ಹಿಂಗೇ ಏಟಾಗಿದೆ ಅಂದೆ. ತುಂಬಾನೇ ಬೇಜಾರ್ ಮಾಡಿಕೊಂಡ್ರು ..ಬೇಗ ವಾಸಿ ಆಗ್ಲಿ ಅಂತ ಹೇಳ್ತಿದ್ರು ಅಕ್ಕ.. ಟೈಮ್ ಆದ್ರೆ ಮನೆಗೆ ಬಂದು ಹೋಗಿ ಅಕ್ಕ " ಅಂದ್ಲು!!
ಯಾರೋ ಏನೋ ಒಂದೂ ಗೊತ್ತಿಲ್ಲ, ಒಂದೆರಡು ದಿನ ಒಂದು ಗಂಟೆಯಷ್ಟು ಮಾತನಾಡಿಸಿದ್ದು ಬಿಟ್ಟರೆ ಬೇರೇನೂ ಗೊತ್ತಿಲ್ಲ.. ಒಂದೆರಡು ಮಾತು ನಗು ಹಂಚಿಕೊಂಡದಷ್ಟೇ !!! ಅಷ್ಟಕ್ಕೇ ಇಷ್ಟೆಲ್ಲಾ ಹಾರೈಕೆ.. 
ಹಾಗಾದರೆ...ರೆ.....ರೆ.....ಪ್ರತಿ ದಿನ ನೋಡುವ , ಸಿಗುವ ನಮ್ಮವರೇ ಆದವರಿಗೆ ಒಂದೆರಡು ಒಳ್ಳೆಯ ಮಾತು ನಗು ಹಂಚಿದರೆ.... ಜಗದ ತುಂಬಾ ನಗುವೇ ಇರುತ್ತದ್ದೇನೋ ಅಲ್ವೇ !!! 
ಒಂದಷ್ಟು ದಿನಗಳಿಂದ ಮೋಡ ಮಡುಗಟ್ಟಿದ್ದ ಮನಸ್ಸಿನಲ್ಲಿ ವಾರಗಿತ್ತಿ ಆಡಿದ ಮಾತು ಹಸಿರು ಎರಚಿದಂತೆ :)))) 
Once again Life is beautiful.....:))))))))
ಮಗನಿ/ಳಿಗೊಂದು ಪತ್ರ :
ಮಗ,
ಇದೇನು ಮನೆಯಲ್ಲೇ ಇದ್ದೀನಿ ಹೇಳೋದು ಬಿಟ್ಟು ಏನೋ ಕವಿರತ್ನ ಕಾಳಿದಾಸನ ತರ ಬರೀತಾ ಇದ್ದೀಯಾ ಅಂತ ತರ್ಲೆ ನಗು ನಗ್ತೀಯೇನೋ ಅಲ್ವ ?ಹೇಳಿದ್ರೆ ತಾಳ್ಮೆಯಿಂದ ನೀ ಯಾವತ್ತೂ ಕೇಳಿದ್ದೀಯ ಹೇಳು? ಒಂದೋ ನಗ್ತೀಯ ಅಥವ ಏನಾದ್ರೂ ತರ್ಲೆ ಮಾಡಿ ನಗಿಸಿಬಿಡ್ತೀಯ . ನಾನೂ ಆ ಕ್ಷಣದ ನಿನ್ನ ತುಂಟತನಕ್ಕೆ ನಕ್ಕರೂ ಹೇಳಬೇಕಾಗಿದ್ದನ್ನ ಹೇಳದೆ ಉಳಿದ ದುಗುಡದಲ್ಲೇ ಉಳಿದುಬಿಡ್ತೀನಿ .....
ಈಗಷ್ಟೇ ಹುಟ್ಟಿದಂತೆ ಅನಿಸುವ ನೀನು ಆಗಲೇ ನನಗಿಂತ ಎತ್ತರಕ್ಕೆ ಬೆಳೆದು ನಗುವುದ ನೋಡಿದಾಗ ಅದೇನ್ ಹೆಮ್ಮೆ ಅಂತೀಯಾ ! ಬೆಳವಣಿಗೆ ದೈಹಿಕವಾಗಿ ಮಾತ್ರವಲ್ಲದೆ ಬೌದಿಕವಾಗಿ ಕೂಡ ಅನಿಸದಾಗ ಹೆಮ್ಮೆ ದುಪ್ಪಟ್ಟಾಗುತ್ತದೆ. ವಯೋ ಸಹಜ ನಡವಳಿಕೆಗಳನ್ನ ಬೇಡ ಅನ್ನುವಷ್ಟು ಸಣ್ಣಮನಸ್ಸಿನವಳಲ್ಲ ಬಿಡು..ಆದರೂ ದುಡುಕುತನ ಮಾತ್ರ ಸಲ್ಲದು ಕಣ್ ಮಗ .. ಹೆಜ್ಜೆ ಇಡುವ ಮುನ್ನ, ಮಾತನಾಡುವ ಮುನ್ನ ಒಮ್ಮೆ, ಮತ್ತೊಮ್ಮೆ ಯೋಚಿಸಿಬಿಡು .. ನೀನೇ ಸರಿ ಹೆಜ್ಜೆ ಇಡ್ತೀಯ . ಓದುವಿಕೆಯ ಬಗ್ಗೆಯಾಗಲಿ, ನಿನ್ನ ಕಾಲ ಮೇಲೆ ನೀನು ನಿಲ್ಲಬೇಕೆನ್ನುವ ಬಗ್ಗೆಯಾಗಲಿ , ನೈತಿಕ ಸರಿ ದಾರಿಯ ಬಗ್ಗೆಯಾಗಲಿ ನಿನಗೆ ಹೇಳುವ ಅಗತ್ಯ ಬಂದಿಲ್ಲ ಬರುವುದೂ ಇಲ್ಲ ಅಲ್ವ.. ಎಷ್ಟೇ ಆದ್ರೂ ನೀ ನಮ್ಮ ಮಗ/ಳು ಅಲ್ವ.. (ಐಟ್ ಇದಕ್ಕೇನು ಕಮ್ಮಿ ಇಲ್ಲ ಬಿಡು ಅಂದ್ಯ !! :)...
ಆದ್ರೂ ಮಗ, ನೀನು ಎಷ್ಟೇ ದೊಡ್ಡವನಾ/ಳಾದ್ರೂ ನಮ್ಮ ಮುಂದೆ ನೀ ಚಿಕ್ಕವನೆ/ಳೆ .. ಗಾಡಿ ಹತ್ತಿದ ಕೂಡಲೆ ನೀ ಮಗನೆಂದು, ಅಣ್ಣನೆಂದು, ತಮ್ಮನೆಂದೋ , ಯಾರಿಗೋ ನೀ ಬೇಕಾದವನೆ೦ಬುದನ್ನೇ ಮರೆತು ನಿನ್ನದೇ ಲೋಕ ಸೇರಿಬಿಡುವ ನಿನ್ನ ಬಗ್ಗೆ ನನಗೆ ಬೇಸರವಿದೆ. ನಿನಗೆ ಪೆಟ್ಟಾದರೆ ನಿನ್ನ ದೈಹಿಕ ನೋವಿಗಿಂತ, (ನಿನಗಿಂತ !) ಹೆಚ್ಚಾಗಿ ನೋಯುವ ಮನಸ್ಸುಗಳಿವೆ .ನಿನ್ನ ಸಂತಸಕ್ಕೆಂದೇ ಕೊಡಿಸಿರುವ ಗಾಡಿ ನಿನಗೆ ದುಃಖ/ನೋವು ತಂದರೆ ಅದರ ತಪ್ಪಿತಸ್ಥ ಭಾವ ನಮಗೆ ಮಗ ! ಒಮ್ಮೆ ಪೆಟ್ಟಾದರೆ ಆ ಮಾನಸಿಕ ಹಾಗು ದೈಹಿಕ ನೋವು irreversible! .. ನೀ ನಂಬುವುದಿಲ್ಲ ನೀ ಸಣ್ಣವನಿದ್ದಾಗ ನೀ ಆಟ ಆಡುತ್ತಾ ಪೆಟ್ಟು ಮಾಡಿಕೊಂಡರೆ ನಿನ್ನನ್ನೇ ಬೈದರು ಅದೆಷ್ಟೋ ಬಾರಿ ರಾತ್ರಿಗಳಲ್ಲಿ ನಿನ್ನ ಗಾಯವನ್ನ ಸವರಿ ಕಣ್ಣ ಹನಿ ಹನಿಸಿದ್ದು ಉಂಟು . ಅದೆಷ್ಟೋ ಬಾರಿ ಪತ್ರಿಕೆಗಳಲ್ಲಿ ವಯಸ್ಸಿಗೆ ಬಂದ ಮಕ್ಕಳು ಬಿದ್ದು ಏಟು ಮಾಡಿಕೊಂಡರು ಅಂತಲೋ ಅಥವಾ ಮತ್ತಿನ್ನೇನೋ ಓದಿದಾಗ ಹೃದಯ ಬಾಯಿಗೆ ಬಂದಂತೆ ..ಅಪ್ಪ ನೀ ಗಾಡಿ ತೆಗೆದಾಗೆಲ್ಲ ಹೇಳ್ತಾನೆ ಇರ್ತಾರೆ 'driver friendly ಆಗಿ ಗಾಡಿ ಓಡಿಸು' ಅಂತ ಅಲ್ವ ? ಪ್ಲೀಸ್ , ನಿಧಾವಾಗಿರು. ನೀ ಒಬ್ಬರಿಗೆ ಏಟು ಮಾಡಿ ನೋಯಿಸಿದರೂ, ನೀನೇ ಏಟು ಮಾಡಿಕೊಂಡರೂ , ನಿನಗೆ ಮತ್ಯಾರೋ ಏಟು ಮಾಡಿದರೂ ನೋವು ನಿನಗೆ ಅಂತ ನೆನಪಿರಲಿ..
ಅಪ್ಪನದೂ ಇದೇ ಮಾತು .. ನಾನಾದರೋ ಒಂದೆರಡು ಕಣ್ಣ ಹನಿ ಹಾಕಿಯೋ, ಬೈದೊ ಸಮಾಧಾನ ಮಾಡಿಕೊಳ್ಳುತ್ತೇನೆ , ಆದ್ರೆ ಅಪ್ಪ ವಯಸ್ಸಿಗೆ ಬಂದ ಮಕ್ಕಳನ್ನ ಬಯ್ಯಲೂ ಆಗದೆ ಅಳಲೂ ಆಗದೆ ಕೊರಗಿ ಬಿಡುತ್ತಾರೆ .. ಇನ್ನು ನಿನ್ನ ಹಿಂದೆ ಮುಂದೆ ಹುಟ್ಟಿದ ಹಾಗು ನಿನ್ನನ್ನು ಪ್ರೀತಿಸುವ ಎಲ್ಲರಿಗೂ ನೋವಾಗುತ್ತದೆ .. ನೀನಂದ್ರೆ ನಮ್ಮ ಜೀವ ...
ನನಗೆ ಗೊತ್ತು ಇಷ್ಟ್ ಓದೋ ಅಷ್ಟ್ರಲ್ಲಿ ನೀ ನನ್ನ ಅದೆಷ್ಟ್ ಬೈಕೊಂಡಿರ್ತೀಯ ಅಂತ . ಬೈಕೋ, ನೀನಲ್ಲದೆ ಮತ್ಯಾರಾದ್ರು ಬೈದ್ರೆ ಗೊತ್ತಲ್ಲ :)
Love you maga
ನಿನ್ನ
ಅಮ್ಮ..
ಆತ ಆಕೆ ಬೇರೆಯಾಗಿದ್ರು . ಅವರದೇ ಕಾರಣಗಳು ,, ಈಗ ಇಬ್ರು ಒಳ್ಳೆಯ ಗೆಳೆಯಗೆಳತಿಯರು .. ಒಬ್ಬ ಮಗಳು ಅಪ್ಪನೊಂದಿಗೇ ಇದ್ದಾಳೆ .. ಬೇರೆ ಇದ್ದರೂ ಮಾತನಾಡುತ್ತಾರೆ . ಮಗಳು ಕೂಡ ಅಮ್ಮನೊಂದಿಗೆ ಒಳ್ಳೆಯ ಟರ್ಮ್ಸ್ ಅಲ್ಲಿದ್ದಾಳೆ .. 
ಮೊನ್ನೆ ಮೊನ್ನೆ ಒಂದು ಮದುವೆ ಮನೆಗೆ ಆಕೆ ಬಂದಿದ್ಳು .. ಈತನೂ ಬಂದಿದ್ದ .. ಈಕೆಯನ್ನ ಕಂಡ ಈತನ ಮನೆಯ ಕೆಲವರು ಈಕೆಯನ್ನ ಚೆಂದ ಮಾತನಾಡಿಸಿದರು .. ಆಕೆ ಕೂಡ ವಿಶ್ವಾಸದಿಂದ ಮಾತನಾಡಿದಳು.. ಮದ್ವೆ ಮನೆಯಲ್ಲಿ ಕೆಲವರ ಮುಖದಲ್ಲಿ ಈ ವಿಶ್ವಾಸವನ್ನ ಕಂಡು ಹಲವು ಪ್ರಶ್ನೆಗಳು "ಒಂದ್ ತರಾ " ನಗು ಕೂಡ ಕಾಣ್ತು ..ಅದನ್ನ ಬಿಟ್ ಬಿಡೋಣ ಬಿಡಿ ... ಆದರೆ ಈತ ಅವನಾಗೆ ಯಾರನ್ನೂ ಮಾತನಾಡಿಸಲಿಲ್ಲ .. ಅವರೂ ಕೂಡಾ ಮಾತನಾಡಿಸಲಿಲ್ಲ . ಮದ್ವೆ ಮುಗಿತು .. 
"ಅವಳು ಎಲ್ಲರನ್ನೂ ಮಾತನಾಡಿಸಿದಳು ..ನೋಡು ಅಷ್ಟೆಲ್ಲಾ ಆಗಿದ್ರು ಅವಳು ಅವನ ಕಡೆಯವರನ್ನ ಎಷ್ಟ್ ಚೆನ್ನಾಗಿ ಮಾತನಾಡಿಸಿದ್ಲು . ಎಷ್ಟ್ ಒಳ್ಳೆಯವಳು ಇವ್ನೆ ಸರಿ ಇಲ್ಲವೇನೋ ' ಅಂದ್ಕೊಂಡ ಮಂದಿ ಒಂದಷ್ಟಾದ್ರೆ .. "ಇಂತಹ ನಾಟಕಕ್ಕೆ ಬೇರೆ ಆಗಿದ್ದ್ಯಾಕೆ" ಅಂದವರು ಮತ್ತೊಂದಷ್ಟು.. 
ಇಲ್ಲಿ ಒಳ್ಳೆಯವರು ಕೆಟ್ಟವರು ಅನ್ನುವ ಪ್ರಶ್ನೆ ಬರೋದಿಲ್ಲ ... ಐದು ಬೆರಳು ಸಮನಾಗಿರೋದಿಲ್ಲವಲ್ಲ .. ಜೊತೆಗೆ ಕೆಲವೊಮ್ಮೆ ಸಮಯ ಸಂಧರ್ಭ ಕೂಡ ಕಾರಣವಾಗಿಬಿಡುತ್ತದೆ !! ಗಂಡು ಮಾತ್ರ ತಪ್ಪು ಮಾಡೋದು ಹೆಣ್ಣು ತಪ್ಪೆ ಮಾಡೋದಿಲ್ಲ ಅಂತೇನು ಇಲ್ಲವಲ್ಲ !! ಹಾಗೆ ತಪ್ಪುಗಳಾದ ಮೇಲೆ ಮಾತೇ ಆಡಿಸಬಾರದು ಎಂಬ ನಿಯಮ ಕೂಡ ಇಲ್ಲ !! ಹೀಗೆ ಚೆನ್ನಾಗಿರ್ತಿವಿ ಅಂದ್ರೆ ಇರ್ಲಿ ಬಿಡಿ ಅನಿಸೋ ಹಾಗೆ ..ಮಾತಿನಿಂದ ಮತ್ತೊಬ್ಬರನ್ನ ನೋಯಿಸುವ ಹಕ್ಕು ದೇವರೂ ಕೂಡ ನೀಡಿಲ್ಲ .. ಒಬ್ಬರನ್ನ, ಒಂದು ಸಂಬಂಧವನ್ನ ವಿಶ್ಲೇಷಿಸುವ ಹಕ್ಕು ಅದಕ್ಕೆ ಸಂಬಂಧಪಟ್ಟವರಿಗೆ ಮಾತ್ರವಿರುತ್ತದೆ ಅಲ್ಲವೇ .. ಮಾತನಾಡುವ ಮುನ್ನ ಯೋಚಿಸಿದರೆ ಒಳ್ಳೆಯದೇನೋ ..ಬದುಕು ಅಂದ್ರೆ ಹೊಂದಾಣಿಕೆ .. ಕೆಲವ್ರು ತಮ್ಮವರಿಗಾಗಿ ಆರ್ಥಿಕ ಸ್ವಾಸ್ಥಕ್ಕಾಗಿ , ಸಾಮಾಜಿಕ ಸ್ಥಾನಕ್ಕಾಗಿ ಹೊಂದಿಕೊಂಡು ಹೋದರೆ ಕೆಲವರಿಗೆ ಅದರ ಅಗತ್ಯ ಕಾಣೋದಿಲ್ಲ... 
Feeling....ಒಂದೊಳ್ಳೆ ಮಳೆ ಬಂದು ಮನುಷ್ಯನ ಕೆಟ್ಟತನವೆಲ್ಲ ಕೊಚ್ಚಿಹೋಗಲಿ ಅನಿಸುವ ಹಾಗೆ ...

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...