Wednesday 19 April 2017

ಹೀಗೊಬ್ಬ ಅವಳು :))))  ( ವಿಶ್ವ ವಾಣಿಗೆ ಬರೆದದ್ದು )
ಭೂಮಿ ತೂಕದವಳು ನನ್ನ ಸೊಸೆ..ಮೊದಲಿನ ಹಾಗಿಲ್ಲ ಅಂತ ಅತ್ತೆ ಹೇಳುವಾಗೆಲ್ಲ ನಕ್ಕು ಬಿಡುತ್ತಾಳೆ ಆಕೆ .
ಆಕೆಯೇನು ಅತ್ತೆ ಇಷ್ಟ ಪಟ್ಟು ಮಗನಿಗೆ ತಂದುಕೊಂಡ ವಧುವಲ್ಲ   ಪ್ರೀತಿ ಮಾಡಿ ಹಠಕ್ಕೆಬಿದ್ದು ಮದುವೆಯಾದವಳು . ಆಕೆಯ ಹೆತ್ತವರಿಗೂ ಈ ಮದುವೆ ಇಷ್ಟವಿರಲಿಲ್ಲ.. ಮಗಳ ಓದುವಿಕೆಗೆ ರೂಪಕ್ಕೆ ಇನ್ನಷ್ಟು ಒಳ್ಳೆಯ ಗಂಡ ಸಿಗುವನೆಂಬ ಆಸೆ.  ಮಗ ಮತ್ತ್ಯಾರನ್ನಾದ್ರು ಮದುವೆಯಾಗಿದ್ರೆ ಒಂದಷ್ಟು ವರದಕ್ಷಿಣೆ ಬರ್ತಾ ಇತ್ತೇನೋ ಅನ್ನೋ ಸಿಟ್ಟೆನೋ ! ಸೊಸೆಯನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲೇ ಇಲ್ಲ.  ಸೊಸೆ ಒಂದು ಅವಘಢಕ್ಕೆ ಸಿಲುಕಿದಾಗ ಆಕೆಯ ಸಿಟ್ಟಿಗೆ  ಇನ್ನಷ್ಟು  ತುಪ್ಪ ಸುರಿದಂತ್ತಾಯ್ತು. 'ಹಾಳಾದೋಳ ಮುಖ ಕೂಡ ಹಾಳಾಗಬೇಕಿತ್ತು ' ಅನ್ನೋ ಮಾತು ಕೇಳಿದಾಗ ಮನದ ಕಡೆಯ ತಂತುವಿನಲ್ಲೂ ನೋವು. ಹೆತ್ತವರ, ಅಣ್ಣತಮ್ಮಂದಿರ ಹರಕೆ, ಆರೈಕೆ, ಹಾರೈಕೆಗಳ ಫಲವಾಗಿ ಸಾವನ್ನ ಗೆದ್ದು ಉಳಿದೆ ಬಿಟ್ಟಳು. ಒಂದಷ್ಟು  ದಿನಗಳ ನಂತರ  ಗಂಡ ಆಕೆಯ ತವರಿನಿಂದ ಕರೆದೊಯ್ಯಲು ಬಂದಾಗ ಹೆತ್ತವರ ವಿರೋಧದ ನಡುವೆಯೂ ಹೊರಟು  ನಿಂತಳು . ಬದಲಾಗಿರಬಹುದೇನೋ ಅತ್ತೆ ಎಂದುಕೊಂಡಳು. ಅತ್ತೆಗೆ ಅದೇ ಸಿಟ್ಟು. ಮತ್ತೆ ಕರೆ ತಂದ ಮಗನ ಮೇಲೂ ಕೋಪ. ಈಗ ಆ ಕೋಪ ಮಕ್ಕಳಾಗಿಲ್ಲ ಅನ್ನುವ ರೂಪ ಪಡೆದುಕೊಂಡಿತ್ತು . 'ಇವ್ಳಿಗೆ ಮಕ್ಕಳಾಗೋದಿಲ್ಲ ಗೊಡ್ಡು ಹಸು ತಂದು ಕಟ್ಟಿಕೊಂಡಿದ್ದೀಯ ಕಣೋ' ಅಂತ ಹರಿಹಾಯುವಾಗ ಮಗ ಮೂಗನಾಗಿ ಹೋಗುತ್ತಿದ್ದ . ಮನೆಯ ತೊರೆದರೆ ಆಪಾದನೆ ಹೆಂಡತಿಯ ಮೇಲೆ ಬರುತ್ತದೆ ಎಂದು ಸಹಿಸಿಕೊಂಡ. ಹೆಂಡತಿಯ ಮೇಲಿನ ಪ್ರೀತಿ ತೋರಿಸಲೂ ಅಂಜುತ್ತಿದ್ದ. ಹೆಂಡತಿ ಬಸುರಿ ಆದಾಗ ಆಕೆಯ  ಬಯಕೆಗಳನ್ನ ತೀರಿಸಲೂ ಹೆದರುತ್ತಿದ್ದ.  ಈಕೆ ಒಂದಷ್ಟು  ತಿರುಗಿ ಮಾತನಾಡಿದರೂ ರೌದ್ರಾವತಾರದ ಅತ್ತೆಯ ಮುಂದೆ ಈಕೆಯದೇನೂ ನಡೆಯಿತ್ತಿರಲಿಲ್ಲ. ಮಗ ಹುಟ್ಟಿದ ಮೇಲೆ ಖರ್ಚಿನ ನೆಪ ಒಡ್ಡಿ ಜಗಳವಾದ ಮೇಲೆ ಮಗ ಬೇರೆಯದೇ ಮನೆ ಮಾಡಿದ . ಮತ್ತೊಬ್ಬ ಮಗಳಾದಳು . ಮಗು ಪುಟ್ಟದಿರುವಾಗಲೇ ಗಂಡನಿಗೆ ಅಪಘಾತವಾದಾಗ ಹೆತ್ತವರ ಸಹಕಾರದಿಂದ ಗಂಡನನ್ನ ಉಳಿಸಿಕೊಂಡಳು. ಅತ್ತೆ ಏನು ಬದಲಾಗಲಿಲ್ಲ . ನೋಡಿದಾಗೆಲ್ಲ ಕುಹಕ.
ಒಂದಷ್ಟು ವರುಷಗಳ ವನವಾಸ, ಅಜ್ಞಾತವಾಸಗಳ ನಂತರ ಈಗೆಲ್ಲ ಬದಲಾಗಿದೆ.  ಗಂಡಹೆಂಡತಿ  ಚೆನ್ನಾಗಿದ್ದಾರೆ . ಬೆಳೆದ ಮಕ್ಕಳು ಅವರ ಆಸೆಯಂತೆ ಒಳ್ಳೆಯ ಪ್ರಜೆಗಳಾಗುವತ್ತ ಸಾಗಿದ್ದಾರೆ. ವಯಸ್ಸಾದ ಅತ್ತೆ ಆಗಾಗ ಬರುತ್ತಾರೆ . ಉಳಿದ ಗಂಡು ಮಕ್ಕಳ ಮತ್ತು ಹೆಣ್ಣು ಮಕ್ಕಳ ಮನೆಯಲ್ಲಿ ಆಗುವ ನೋವು ಅಪಮಾನಗಳ ಬಗ್ಗೆ ಹೇಳಿಕೊಳ್ಳುತ್ತಾರೆ.. 'ಯಾರಿಗೆ ಹೇಳಲಿ ಮಗ'  ಎನ್ನುವಾಗ ಆಕೆ ಅವರ ಕಣ್ಣೀರಿಗೆ  ಜೊತೆಯಾಗುತ್ತಾಳೆ. ತನ್ನ ಕೈಲಾದದ್ದು ಪ್ರೀತಿಯಿಂದ ಮಾಡಿ ಹಾಕುತ್ತಾಳೆ  ತಮ್ಮಲ್ಲೇ ಉಳಿಯುವಂತೆ ಹೇಳುತ್ತಾಳೆ. 'ತೀರಾ ಆಗದೆ ಹೋದಾಗ ಬರುತ್ತೇನೆ ಬಿಡು ನನಗಿನ್ಯಾರಿದ್ದಾರೆ; ಎನ್ನುತ್ತಾರೆ... ಹೊರಟಾಗ ಕಣ್ಣ ತುಂಬ ನೀರು ತುಂಬಿಕೊಳ್ಳುತ್ತಾರೆ . ಭೂಮಿ ತೂಕದವಳು ನನ್ನ ಸೊಸೆ ಎನ್ನುತ್ತಾರೆ.. ಈಕೆ ನಕ್ಕುಬಿಡುತ್ತಾಳೆ ಸುಮ್ಮನೆ .. ಹಾಗೆ ಸುಮ್ಮನೆ .....
ಅತ್ತೆ ಹೋದ ಮೇಲೆ ಈಕೆ ದೇವರನ್ನ ಕೇಳುತ್ತಾಳೆ 'ದೇವ್ರೇ, ಈಕೆ ಕೈಲಾಗದೆ ಹೋಗಿ ಯಾರಿಗೂ ಹೊರೆಯಾಗದಂತಿರಲಿ, ನೋಯದಂತಿರಲಿ, ಅಭಿಮಾನದಿಂದ(ದುರಭಿಮಾನ!!) ಬದುಕಿದ ಜೀವ ಅದನ್ನ ತಡೆಯಲಾರದು , ' ಎಂದು. ಗಂಡ ಅದ್ ಹೇಗೆ ತಾಳ್ಮೆ ಕಲಿತೆ ಎಂದರೆ ತನ್ನ ಸ್ವಾರ್ಥದ   ಕಾರಣ ಹೇಳುತ್ತಾಳೆ  !! 'ನಾ ನಿಮ್ಮಮ್ಮನನ್ನ ನೋಡಿಕೊಂಡ್ರೆ ದೂರದ್ಲಲಿರುವ  ನನ್ನ ತಾಯಿಯನ್ನ ಮತ್ಯಾರದ್ರು ನೋಡಿಕೊಳ್ಳುತ್ತಾರೆ' ಎನ್ನುತ್ತಾಳೆ.
ಈಕೆ  ಯಾರು ಎಂದೇನೂ ಹುಡುಕ ಹೋಗಬೇಡಿ .... ನಿಮ್ಮ  ಮನೆಯಲ್ಲೊಬ್ಬಳೋ , ಇಲ್ಲ ಅಲ್ಲೇ ಎದುರು ಮನೆಯಲ್ಲೋ, ಪಕ್ಕದ ಮನೆಯಲ್ಲೋ ಇರ್ತಾಳೆ .. ಕ್ಷಮಿಸುತ್ತಲೇ ಹೋಗುತ್ತಾಳೆ , ತನಗಾಗಿ, ತನ್ನವರಿಗಾಗಿ .... ಕೆಲವೊಮ್ಮೆ ನಗುತ್ತಾ ... ಕೆಲವೊಮ್ಮೆ ಅಳುತ್ತಾ .. ಅವನಿಯಂತೆ:))))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...