Wednesday 5 April 2017

ಬಹುಶಃ ಹತ್ತನೇ ತರಗತಿಯಲ್ಲೊ ಒಂಬತ್ತರಲ್ಲೋ ನೆನಪಿಲ್ಲ, ರವೀಂದ್ರನಾಥ ಟ್ಯಾಗೂರರ ಕಾಬೂಲಿವಾಲ ಕಥೆ ಓದಿದ್ದು. ಕಥೆನೇ ಓದಿದ್ದೋ ಇಲ್ಲ ಪಾಠ ಇತ್ತೋ ನೆನಪಾಗ್ತಾ ಇಲ್ಲ . ಅಂದಿಗೆ ಮನಸ್ಸನ್ನ ಸೆಳೆದ ಕಥೆ. ಮಾನವೀಯ ನೆಲೆಗಟ್ಟನ್ನ ಸಂಬಂಧಗಳ ಮೌಲ್ಯಗಳನ್ನ ತೋರಿಸೋ ಕಥೆ. (ಇದು ಟ್ಯಾಗೋರರ ಮಗಳು ಮತ್ತು ಕಾಬೂಲಿವಾಲನದೆ ಕಥೆ ಎಂದೂ ಕೂಡ ಓದಿದ ನೆನಪು )
ಒಬ್ಬ ಪರದೇಶದ (ಆಫ್ಘಾನಿಸ್ಥಾನ) ಮನೆಮನೆಗೆ ಒಣ ಹಣ್ಣುಗಳ ಮಾರುವ ವ್ಯಾಪಾರಿ. ಬಂದ ಹಣವನ್ನ ಹೆಂಡತಿ ಮಕ್ಕಳಿಗೆ ಕಳಿಸಿ ಬದುಕ್ತಾ ಇರ್ತಾನೆ. ವರುಷಕ್ಕೆ ಒಮ್ಮೆ ಮಾತ್ರ ಅವನೂರಿಗೆ ಹೋಗುವ ಅವಕಾಶ ಅವನಿಗೆ. ಹೀಗೆ ರಸ್ತೆಯಲ್ಲಿ ಮಾರುವಾಗ ಒಮ್ಮೆ ಒಂದು ಪುಟ್ಟ ಹುಡುಗಿ 'ಕಾಬೂಲಿವಾಲಾ' ಅಂತ ಬಾಗಿಲ ಸಂದಿನಿಂದ ಕರೀತಾಳೆ . ಇವನು ಅವಳ ಮನೆ ಬಳಿ ಹೋದಾಗ ಇವನ ಆಕಾರ ವೇಷಭೂಷಣಕ್ಕೆ ಹೆದರಿ ಬಚ್ಚಿಟ್ಟುಕೊಳ್ಳುತ್ತಾಳೆ, ಕ್ರಮೇಣ ಇಬ್ಬರ ನಡುವೆ ಒಂದು ಅವೀನಾಭಾವ ಗೆಳೆತನ ಬೆಳೆದು ಬಿಡುತ್ತದೆ, ಅಮ್ಮ ಬೈದರೂ ಕೂಡ ಈ ಮಗು ಅವನ ಜೊತೆ ಗೆಳೆತನ ಹಂಚಿಕೊಳ್ಳುತ್ತದೆ. ಇವನೂ ಕೂಡ ಸಾಧ್ಯವಾದಾಗೆಲ್ಲ ಪುಟ್ಟ ಮಗುವನ್ನ ನೋಡಿ, ಮಾತನಾಡಿಸಿ, ಕದ್ದುಮುಚ್ಚಿ ಒಂದಷ್ಟು ಒಣ ಹಣ್ಣುಗಳನ್ನ ನೀಡಿ ಹೋಗ್ತಾ ಇರ್ತಾನೆ.. ಒಮ್ಮೆ ಇವನ ಯಾವುದೋ ತಪ್ಪಿಗೆ ಶಿಕ್ಷೆಯಾಗಿ ಜೈಲು ಪಾಲಾಗಬೇಕಾಗುತ್ತದೆ. ಒಂದಷ್ಟು ವರ್ಷಗಳ ನಂತರ ಬಿಡುಗಡೆಯಾಗಿ ಬಂದಾಗ ಆ ಹುಡುಗಿಯ ಮದುವೆ ಸಿದ್ಧತೆ ನಡೆದಿರುತ್ತದೆ. ಹುಡುಗಿಯ ತಂದೆಗೆ ಇವನು ಬಂದುದ್ದು ಸರಿ ಅನಿಸೋದಿಲ್ಲ. ಆಗ ಇವನು ಅವನ ಬಳಿ ಇದ್ದ ಒಂದು ಪುಟ್ಟ ಕಾಗದದಲ್ಲಿ ಇದ್ದ ಹಸ್ತದ ಗುರುತು ತೋರಿಸ್ತಾನೆ. ತನ್ನ ಮಗಳಂತಹ ಹುಡುಗಿಯನ್ನ ನೋಡಲು ಆಪೇಕ್ಷಿಸುತ್ತಾನೆ. ಕಡೆಗೆ ಆ ಹುಡುಗಿ ಬಂದಾಗ ತನ್ನ ಕಣ್ಣನ್ನೇ ತಾನು ನಂಬಲು ಸಾಧ್ಯವಾಗೋದಿಲ್ಲ. ಪುಟ್ಟ ಯುವತಿಯಾಗಿ ರೂಪುಗೊಂಡ ಆ ಹುಡುಗಿ ಅವನ ಮಗಳನ್ನ ನೆನಪಿಸಿ ಕಣ್ಣು ತುಂಬಿ ಬರುತ್ತದೆ. ಕಡೆಗೆ ಹುಡ್ಗಿಯ ಅಪ್ಪ ಆತನಿಗೆ ಒಂದಷ್ಟು ಹಣ ನೀಡಿ ಅವನ ಮಗಳನ್ನ ನೋಡಲು ಅವನೂರಿಗೆ ವಾಪಸ್ಸು ಹೋಗಲು ಹೇಳುತ್ತಾನೆ. ಕೈ ಮುಗಿದ ಕಾಬೂಲಿವಾಲ ತನ್ನೂರಿಗೆ ಪಯಣಿಸುತ್ತಾನೆ..ಇದು ಕಥೆ
ನಮ್ಮ ಮನೆಯಿಂದ ಒಂದ್ನಾಲ್ಕು ಮನೆಗಳ ಆಚೆ ಒಂದು ಮನೆ. ಅಲ್ಲಿ ಒಂದು ಪುಟ್ಟ ಮಗು, ಬೆಳಿಗ್ಗೆಬೆಳಿಗ್ಗೆ ತಳ್ಳುವಗಾಡಿಯಲ್ಲಿ ತರಕಾರಿ ಮಾರಿಕೊಂಡು ಬರುವಾತನಿಗೂ ಈಕೆಗೂ ಅದೆಂತಹ ಚೆಂದದ ಗೆಳೆತನ ಅಂತೀರಾ !! ಅವನು ಬರುವ ಹೊತ್ತಲ್ಲಿ ಇದು ಗೇಟ್ ಹಿಡಿದು ನಿಂತಿರುತ್ತದೆ . ತನ್ನ ಬಾಲಭಾಷೆಯಲ್ಲಿ 'ಕ್ಯಾರೆಟ್' ಅನ್ನುತ್ತದೆ . ಈತ ಒಂದು ಪುಟ್ಟ ಕ್ಯಾರೆಟ್ನ ತನ್ನಬಟ್ಟೆಗೆ ಒರೆಸಿ ಅದರ ಕೈಗೆ ಕೊಟ್ಟು 'ಬೈ ಚಿನ್ನು' ಅಂತಾನೆ . ಅದು 'ತಾತಾ (ಟಾಟಾ!!) ಮಾಮ ' ಅನ್ನುತ್ತದೆ . ಅವರಮ್ಮ ಒಳಗಿಂದ 'ಲೇ , ಚಿನ್ನು' ಅಂದ ಕೊಡ್ಲೆ ಒಳಗೆ ಸೇರಿಕೊಳ್ಳುತ್ತದೆ! ಅವರಜ್ಜಿ 'ಇದ್ಯಾಕಣ್ಣ ದಿನ ಕೊಟ್ ರೂಢಿ ಮಾಡ್ತೀರಾ' ಅಂದ್ರೆ ತಿನ್ಲಿ ಬುಡವ್ವ ಮೊಗ' ಅಂತಾನೆ. ಆ ಮಗು ಕಾಣದಿದ್ದರೆ ಈತ ಪಕ್ಕದ ನಾಯರ್ ತಾತನನ್ನ ಕೇಳೋದು ಕಾಣಿಸುತ್ತದೆ !! ಭಾನುವಾರ ಬಿಟ್ಟು ಪ್ರತಿ ದಿನ ಹೀಗೆ ಸಾಗುತ್ತದೆ ಅವರಿಬ್ಬರ ಗೆಳೆತನ.....
ಬದುಕು ತುಂಬಾ ಚೆಂದ ಕಣ್ರೀ..............
ಸುಂಸುಮ್ನೆ ಹಂಚಿಕೊಳ್ಳಬೇಕು ಅನಿಸ್ತು :)))))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...