Monday, 13 April 2015

ಹೀಗೊಂದು ಹೀಗೊಂದು  ಕೇಳಿದ ಕಥೆ .........
ಅದೊಂದು ಮಾಘ ಮಾಸದ ಇರುಳು....ಹೊಸ ಜೀವವೊಂದನ್ನು ಕಾಣೋ ಆಸೆಯಿಂದ ಆತ ಮತ್ತು ೬ ವರ್ಷದ ಪ್ರಣವ ಕಾದು ಕುಳಿತ್ತಿದ್ದಾರೆ ...ಒಂಬತ್ತು ತಿಂಗಳಿಗೆ ಇನ್ನು ಎರಡು ತಿಂಗಳು ಬಾಕಿ ಇದ್ದಂತೆ ಹೊರಬರಲು ಹವಣಿಸಿದ ಜೀವ. ಆಪರೇಷನ್ ಕೊಠಡಿಯಿಂದ ಹೊರ ಬಂದ ವೈದ್ಯನ ಮೊಗದಲ್ಲಿ ನೋವಿನ ಭಾವ...'ಏನು ಹೇಳಲಾರೆ ಮಾಧವ ..ಬದುಕಬಹುದು ಬದುಕದೆಯೂ ಇರಬಹುದು, ಬದುಕಿದರೂ ಮಾತಾಡದೆಯೋ, ಕಣ್ಣು ಕಾಣದೆಯೋ, ಕಿವಿ ಕೇಳದೆಯೋ ಇಲ್ಲ ಮಾನಸಿಕ ಅಂಗವೈಕಲ್ಯದಿಂದಲೋ ಬದುಕಬಹುದು. ಒಂದೂಮುಕ್ಕಾಲು ಕೆ ಜಿ ತೂಕ ಇದ್ದಾಳೆ ಅಷ್ಟೇ"..ಪ್ರಣವನ ಕಣ್ಣ ತುಂಬಾ ಕಂಬನಿ. 'ಅಪ್ಪ, ಪುಟ್ಟಿನ ನೋಡೋಣ ಬಾ' ಎನ್ನೋ ಅವನ ಮುಗ್ಧ ಕರೆಗೆ ಕರಗಿ ಹೋದ ಮಾಧವ..'ಎಷ್ಟೆಲ್ಲಾ ಕನಸು ಕಟ್ಟಿದ್ದೆವು ಮೂರು ಜನ ಪುಟ್ಟಿಗಾಗಿ' ಕಣ್ಣು ತುಂಬಿ ಬಂತು.
ಆ ಮನೆಯಲ್ಲಿ ಅವರು ಮೂವರೇ, ಮಾಧವ, ರಾಧೆ, ಮತ್ತು ಪ್ರಣವ . ..ಪುಟ್ಟಿ ಬರುತ್ತಾಳೆ ಅಂದಾಗ ಆದ ಸಂಭ್ರಮ ಎಷ್ಟು......ಈಗ ಮೂವರ ಮನದಲ್ಲೂ ದುಗುಡ...
ರಾಧೆ ಕಂಗೆಡಲಿಲ್ಲ ಅಳಲು ಇಲ್ಲ..ನನ್ನ ಮಗಳು ಬದುಕುತ್ತಾಳೆ ಅನ್ನೋ ನಂಬಿಕೆ...ದೈವಗಳ ಮೇಲೆ, ವೈದ್ಯರ ಮೇಲೆ ,ತನ್ನ ಮೇಲೆ ನಂಬಿಕೆ ಅವಳಿಗೆ..ಮಗುವನ್ನ ‘incubator ಅಲ್ಲಿ ಇಡಲಾಯ್ತು..ಎಷ್ಟು ಪುಟ್ಟ ಕಂದ..ಒಂದು ಸಣ್ಣ ಮುತ್ತಿಗೆ ನೋವು ಅನುಭವಿಸುವಂತೆ ಅನಿಸುತ್ತಿತ್ತು..ತಬ್ಬಿ ಹಾಲೂಡಿಸುವ ರಾಧೆಯ ಆಸೆ ಕಣ್ಣ ನೀರಿನೊಡನೆ ಕರಗಿ ಹೋಗುತ್ತಿತ್ತು ..ಎತ್ತಿಕೊಂಡು ಎದೆಗೊತ್ತಿಕೊಳ್ಳುವ ಮಾಧವನ ಬಯಕೆ ಬಾಡಿಹೋಗುತ್ತಿತ್ತು .
ದಿನಗಳು ಉರುಳಿದವು....ಎಲ್ಲರ ಆಶ್ಚರ್ಯಕ್ಕೆ ಪುಟ್ಟಿಗೆ ಈಗ ಎರಡು ತಿಂಗಳು...ಅಮ್ಮನ ಕಣ್ಣಿರೋ, ವೈದ್ಯರ ಆರೈಕೆಯೋ, ಅಪ್ಪ ಮಗನ ಪ್ರಾರ್ಥನೆಯ ಫಲವೋ..ಪುಟ್ಟಿ ಈಗ ಮೊದಲ ಬಾರಿ ಅಮ್ಮನ ತೋಳು ಸೇರಿದಳು...ರಾಧೆಯ ಕಣ್ಣುಗಳಲ್ಲಿ ಸಂಭ್ರಮ ..ಅಪ್ಪ ಮಗನೆ ಆರತಿ ಬೆಳಗಿ ಅಮ್ಮಮಗಳ ಮನೆ ತುಂಬಿಸಿಕೊಂಡರು......
ಈವತ್ತು ಪುಟ್ಟಿಗೆ ಐದು ವರ್ಷ...ಪುಟ್ಟ ಕಣ್ಣು ಪಿಳಿಪಿಳಿ ಬಿಡುತ್ತ, ಪುಟ್ಟ ಬಾಯಿಂದ ವಟಗುಟ್ಟುವ ಪುಟ್ಟಿ ಅಮ್ಮ, ಅಪ್ಪ, ಅಣ್ಣನ ಮುದ್ದು .....
ವೈದ್ಯರ ಮಾತಿಗೆ ಸವಾಲೆಂಬಂತೆ ಬೆಳೆದವಳು..ಅಮ್ಮನ ಹಾರೈಕೆ, ಅಪ್ಪನ ಪರಿಶ್ರಮ, ಅಣ್ಣನ ಪ್ರೀತಿ ಅವಳನ್ನ ಉಳಿಸಿಬಿಟ್ಟಿತು..
ಇಂದು ಅದೇ ಮಾಘ ಮಾಸ...ಮುಸ್ಸಂಜೆ ಹೊತ್ತಲ್ಲಿ ಅಮ್ಮ ಮಗಳು ಮನೆಯ ಮುಂದಿನ ಮೆಟ್ಟಿಲ ಮೇಲೆ ಕುಳಿತಿದ್ದಾರೆ ..ಪುಟ್ಟಿ ಕೇಳಿದಳು "ಅಮ್ಮ ನಿನಗೆ ಆ ಮಣ್ಣಿನವಾಸನೆ ಬಂತಾ??" .."ಹೂಂ ಪುಟ್ಟಿ ಮಳೆ ವಾಸನೆ ಅಲ್ವೇ ಪುಟ್ಟಿ... ನನಗೂ ಇಷ್ಟ ಪುಟ್ಟಿ ".. .
"ಅಲ್ಲ ಅಮ್ಮ..ಇದು ನಿನ್ನ ಹತ್ತಿರ ಬರೋ ಪರಿಮಳ...ನಿನ್ನ ಮಡಿಲಲ್ಲಿ ನಿನ್ನ ಎದೆಯಲ್ಲಿ ತಲೆ ಇಟ್ಟಾಗ ಸಿಗುವ ಪರಿಮಳ...."
.ಈಗ ತುಂಬಿ ಬಂತು ರಾಧೆಯ ಕಣ್ಣು..ವರ್ಷಗಳಿಂದ ಹಿಡಿದಿಟ್ಟ ಎಲ್ಲ ದುಖ ಮಗಳ ಮಾತಿಂದ ಮಳೆಯ ಜೊತೆ ಹರಿದು ಹೋದಂತೆ, ಮಗಳ ಬದುಕುಸಾವಿಗಾಗಿ ಹೆದರಿ ಕಾಯ್ದ ಆ ನೀಳರಾತ್ರಿಗಳ ನೋವು ಕರಗಿ ಹೋದಂತೆ ಅತ್ತಳು ರಾಧೆ...ಮುದ್ದು ಮಗಳ ಕೈ ಅಮ್ಮನ ಕಣ್ಣ ಒರೆಸುತ್ತಿತ್ತು...:))ಮುಂಬಾಗಿಲ ಬಳಿ ಅಪ್ಪ ಮಗ ಹನಿ ತುಂಬಿದ ಕಣ್ಣಿನೊಡನೆ ಮುಖದ ತುಂಬಾ ನಗುವಿನೊಡನೆ ನಿಂತಿದ್ದರು...:)))

1 comment:

  1. ಭೂಮಿ ತಾಯಿಗೆ ಹೆತ್ತಮ್ಮನನು ಹೋಲಿಸಿದ ಪುಟ್ಟಿಗೆ ಶತಮಾನಂ ಭವತಿ...

    ReplyDelete

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...