Thursday, 9 November 2017

ಮೊನ್ನೆ ಮೊನ್ನೆ ಒಂದ್ ದಿನ ಎಂದಿನಂತೆ ಪುಟ್ಟಿನ ಕಾಲೇಜಿಂದ ಕರ್ಕೊಂಡ್ ಬರೋಕೆ ಹೋಗಿದ್ದೆ . ಗಾಡಿ ಹತ್ತಿದ ಕೂಡ್ಲೆ ಎಂದಿನಂತೆ "ಕಥೆ" ಶುರು ಮಾಡಿದ್ಲು ."ಊಟ ಮಾಡ್ದ ಕುಳ್ಳಿಮಾ? " ಇನ್ನೂ ನಾ ಉತ್ತರಿಸಿಯೇ ಇರಲಿಲ್ಲ ಆಗ್ಲೇ 'ಮಾ, ಈವತ್ತು ನಮ್ ಕ್ಲಾಸ್ ಅಲ್ಲಿ ೮ ಜನ "ಸೀಸು" . ಪ್ರಿನ್ಸಿ ಪೇರೆಂಟ್ಸ್ ಕರೆಸಿದ್ರು ' ಅಂದ್ಲು . (ಇವಳು ಕಾಲೇಜ್ಗೆ ಹೋಗೋಕೆ ಶುರು ಮಾಡಿದ ಮೇಲೆ ನನ್ನ ಪದಭಂಡಾರಕ್ಕೆ ಸುಮಾರು ಹೊಸಹೊಸ ಪದಗಳನ್ನ ಸೇರಿಸಿದ್ದಾಳೆ!! ಅಂತಹದೇ ಇದೂ ಒಂದು ಸೀಸು -ಸಿಕ್ಕಿಹಾಕೊಳ್ಳೋದು) 'ಯಾಕ್ ಮಗ' ಅಂದೆ. ಮೊನ್ನೆ ಕ್ಲಾಸಿಂದ ಎಪಿಎಸ್(!!) ( ಅಂದ್ರೆ ಎಸ್ಕೇಪ್/ಚಕ್ಕರ್!!) ಆಗಿ ತಲಕಾಡಿಗೆ ಹೋಗಿದ್ರಂತೆ. ಸಿಕ್ಕಿಹಾಕಿಕೊಂಡು ಅವರ ಅಪ್ಪಅಮ್ಮನ್ನ ಕರೆಸಿದ್ರು. ಆಫೀಸ್ ಈವತ್ತು ರಣರಂಗ ಆಗೋಗಿತ್ತು " ಅಂತೆಲ್ಲ ಹೇಳಿದ್ಲು. 'ನೀ ಹೋಗಿರ್ಲಿಲ್ಲ ತಾನೇ ' ಅಂತ ಕಾಲೆಳೆದೆ. 'ನಾವ್ ಗೊತ್ತಲ್ಲ, ಹಂಗೆಲ್ಲಾ ಹೇಳ್ದೆ ಹೋಗೋ ಸೀನೇ ಇಲ್ಲ, ನಿನ್ನ "ಅಳಿಯನ"(!!!) ಜೊತೆ ಹೋದ್ರು ಹೇಳ್ಬಿಟ್ ಹೋಯ್ತಿನಿ ಬಿಡಮ್ಮ' ಅಂದ್ಲು .'ಕರ್ಮ ಮಾರಾಯ್ತಿ ನಿಂದು, ಅಮ್ಮ ಅನ್ನೋ ಭಯನೇ ಇಲ್ಲ ' ಅಂತ ಬೈಕೊಂಡು ಬಂದೆ . ಕಿಸಿಕಿಸಿ ನಗುತ್ತಾ ಬೆನ್ನಿಗೆ ಒರಗಿ "ಲವ್ ಯು ಮಾ' ಅಂದ್ಲು ..
ಒಂದೆರಡು ದಿನ ಆಗಿತ್ತು . ಸುಮಾರು ೨ ಗಂಟೆಯಲ್ಲಿ ಕಾಲೇಜಿಂದ ಕರೆ ಬಂತು . 'ನಾವು, ___ ಕಾಲೇಜಿಂದ" ಅಂದ್ರು. ಪುಟ್ಟಿ ಹೇಳಿದ್ದ ಮಾತುಗಳು ನೆನಪಿಗೆ ಬಂದು ಒಂದಷ್ಟು ಬೆಚ್ಚಿದಂತಾಗಿ "ಹೇಳಿ ' ಅಂದೆ . "ನೀವು ಕೃತಿ ಮಂಜುನಾಥ್ ಪೇರೆಂಟಾ"? ಅಂದ್ರು. 'ಹೌದು ಹೇಳಿ ' ಅಂದೆ . 'ಎರಡನೇ ಟರ್ಮ್ ಫೀಸ್ ಬಾಕಿ ಇದೆ ಮೇಡಂ' ಅಂದ್ರು. ಇಲ್ಲಾ, ಕಟ್ಟಿ receipt ಕೂಡ ಆಫೀಸಿಗೆ ಕಳಿಸಿದ್ದೀನಿ. ಆಗ್ಲೇ ೧೫ ದಿಂದ ಮೇಲಾಯ್ತು ಒಮ್ಮೆ ಚೆಕ್ ಮಾಡಿ' ಅಂದೆ . 'ಕಟ್ಟಿದ್ರೆ ಸರಿ ಮೇಡಂ, ಸಾರಿ ಮೇಡಂ ' ಅಂತ ಫೋನ್ ಇಟ್ರು.
ಮನಸ್ಸು ಅದೆಷ್ಟು ವಿಚಿತ್ರ ಅಲ್ವೇ ! ಕ್ಷಣಗಳಲ್ಲಿ ಎಲ್ಲಿಂದೆಲ್ಲಿಗೋ ಹೋಗಿಬಿಡುತ್ತದೆ . ಒಳಿತಿಗಿಂತ ಕೆಡುಕೇ ಅಥವಾ ಕೆಡುಕಿನ ಭಯವೇ ಮನಸ್ಸಿನ ಪದರದಲ್ಲಿ ಅವಿತಿರುತ್ತದೇನೋ ಅನಿಸುವಂತೆ ! ಅದೆಷ್ಟೇ ನಂಬಿಕೆಯಿದ್ದರೂ ಅಲ್ಲೆಲ್ಲೋ ಒಂದು ಸಣ್ಣ ಅಪನಂಬಿಕೆಯ ಎಳೆ ಹುದುಗಿ ಕುಳಿತಂತೆ.....
ಪುಟ್ಟಿಗೆ ಸಂಜೆ "ಹಿಂಗ್ ಹಿಂಗೇ ಮಗ , ಭಯ ಆಯ್ತು, ನೀ ಚಕ್ಕರ್ ಹಾಕಿ ಎಲ್ಲಾದ್ರೂ ಹೋಗಿದ್ಯೇನೋ ಅಂತ" ಅಂದೆ . "ಮೌ,ನಾ ಹೇಳಿಲ್ವ, ಹೋಗೋದಾದ್ರೆ ಹೇಳೇ ಹೋಗ್ತೀನಿ ನಿನ್ನಳಿಯನ ಜೊತೆ ಅಂತ , ಸುಮ್ನೆ ಟೆನ್ಶನ್ ಮಾಡ್ಕೋ ಬೇಡ ಸರಿನಾ.... ಈಗ ಒಂದಿನ್ನೂರು ಈ ಕಡೆ ತಳ್ಳು, ನಾಳೆ ನನ್ ಫ್ರೆಂಡ್ ಬರ್ತ್ಡೇ ಐತೆ !!!" ಅಂದ್ಳು ..
ಪುಣ್ಯ ಮಾಡಿ ಹೆತ್ತಿದ್ದೀನಿ ಇವಳನ್ನ ....))ಇವ್ಳು ಉದ್ದಾರ ಅಗೋ ಚಾನ್ಸ್ ಇಲ್ಲ ......
ಹೆಂಡತಿ ಕೊಟ್ಟ ಟೀ ಆಸ್ವಾದಿಸುತ್ತಾ ಆರಾಮವಾಗಿ ಟಿವಿ ನೋಡ್ತಾ ಇದ್ದ ಪತಿ ರಾಯ . ಫೋನ್ ಟ್ರಿಂಗುಟ್ಟಿತು . 
'ಹಲೋ'
'ಹಲೋ ಸಾರ್ ಮಂಜುನಾಥ್ ಆವ್ರಾ?'
ಹೆಣ್ಣು ದನಿ ಕೇಳುತ್ತಲೇ ಮೊಗ ಅರಳಿತು ದನಿ ಮೆದುವಾಯ್ತು ' ಹುಂ , ಹೇಳಿ ಮೇಡಂ'
'ಸಾರ್, ನಿಮಗೆ ಒಂದು ಬಹುಮಾನದ ಕೂಪನ್ ಇದೆ . ಸಂಜೆ ನಿಮ್ಮ "ಫ್ಯಾಮಿಲಿ" ಕರ್ಕೊಂಡ್ ಬಂದು ತೆಗೆದುಕೊಂಡು ಹೋಗಿ ಸಾರ್ "
ಹೆಂಡತಿ ಅಡುಗೆ ಮನೆಯಲ್ಲಿರುವುದನ್ನ ಖಚಿತಪಡಿಸಿಕೊಂಡು 'ಫ್ಯಾಮಿಲಿ ಅಂದ್ರೆ ?!'
"ಸಾರ್ ನಿಮ್ ವೈಫ್ ಸರ್ "
"ನನ್ ವೈಫು ಸಿಟ್ಕೊಂಡು ಅವರಮ್ಮನ ಮನೆಗೆ ಹೋಗಿದ್ದಾಳೆ, ಬೇರೆ ಯಾರನ್ನಾದ್ರೂ ಕರ್ಕೊಂಡ್ ಬರಬಹುದಾ ಮೇಡಂ? "
ಪಾಪ ಆ ಕಡೆ ಮಾತನಾಡುತ್ತಿದ್ದವರು ಸ್ವಲ್ಪ ಗೊಂದಲಗೊಂಡಿರಬೇಕು
'ಸಾರ್, ಬಂದ್ ಮೇಲೆ ಕರ್ಕೊಂಡ್ ಬನ್ನಿ ಪರ್ವಾಗಿಲ್ಲ "
'ಅವ್ಳು ಬರೋದಿಲ್ಲ ಕಣಮ್ಮ"
'ಹೋಗ್ಲಿ ಬಿಡಿ ಸಾರ್ !!!!!!"
'ಹೋಗ್ಲಿ ಬಿಡಿ ಅಂದ್ರೆ ಕರ್ಕೊಂಡ್ ಬರಬೇಡಿ ಅಂತಾನಾ ಅಥವಾ 'ಅವ್ಳು' ಹೋದ್ರೆ ಹೋಗ್ಲಿ ಅಂತಾನಾ?'
"........."
"ಹಲೋ"
"........."
"ಹಲೋ "
ಕುಡಿದ ಟೀ , ತಿಂದ ತಿಂಡಿ ಹೆಚ್ಚಾದ್ರೆ ಹಿಂಗೇನೆ .....cholesterolನ ಮಹಿಮೆ ...
ಇದೊಂದು ಹಳೆಯ ಸೀರೆ. ಸುಮಾರು ೨೫ ವರ್ಷ ಹಳೆಯದೇನೋ . ನನ್ನ ಮಗಳು ವೈದ್ಯೆಯಾಗಿ ಹೊರಬರುತ್ತಾಳೆ ಅನ್ನೋ ಖುಷಿಗೆ ಅಮ್ಮ (ಅದ್ಯಾರೋ ಅವರ ಗೆಳತಿ ವಿದೇಶಕ್ಕೆ ಹೋಗಿದ್ದಾಗ ತರಿಸಿ.. ಆಗೆಲ್ಲ ವಿದೇಶಿ ಸೀರೆ ಅನ್ನೋದು ಹಮ್ಮು!!!) ನನ್ನ ೨೨ ಹುಟ್ಟುಹಬ್ಬಕ್ಕೆ ಕೊಡಿಸಿದ್ದು. ಅದ್ಯಾಕೋ ಅದರ ಮೇಲಿರುವ ಬಳೆಗಳ ಚಿತ್ತಾರ ತುಂಬಾನೇ ಇಷ್ಟವಾಗಿತ್ತು. ಕೃತಿ ಹುಟ್ಟಿ ಒಂದೈದಾರು ವರ್ಷಗಳವರೆಗೂ ಆಸೆ ಪಟ್ಟು ಹಾಕಿಕೊಳ್ತಾ ಇದ್ದೆ. ಆಮೇಲೆ ಸೀರೆ ಚಿಕ್ಕದಾಗ್ತಾ (!!) ಹೋಯ್ತು  ಹಾಗೆ ಇಟ್ಟುಬಿಟ್ಟಿದ್ದೆ. ಈಗೊಂದಷ್ಟು ದಿನಗಳ ಹಿಂದೆ ಬೀರು ಜೋಡಿಸ್ತಾ ಇದ್ದೆ. ಇಬ್ರು ಹೈಕ್ಳು ಮೊಬೈಲ್ ಹಿಡ್ಕೊಂಡು ಹಾಸಿಗೆ ಮೇಲೆ ಬಿದ್ಕೊಂಡು ತಲೆ ಹರಟೆ ಮಾಡ್ತಾ ಕೂತಿದ್ವು. ಪುಟ್ಟಿ 'ಮಾ,ಈ ಸೀರೆ ನನಗೆ ಇಡು, ಇದು ನನಗೆ ಇಡು, ಆ ಡಬ್ಬ ಸೀರೆ ನಿನ್ನ ಸೊಸೆಗೆ ಕೊಟ್ಬಿಡು' ಅಂತೆಲ್ಲ ಮಗನನ್ನ ರೇಗಿಸ್ತಾ ಇದ್ಳು. ನಾನು ಇದು ಇಂತಹ ಸಮಯದಲ್ಲಿ ತಂದಿದ್ದು, ಇದು ಇಂತಹವರು ಕೊಡಿಸಿದ್ದು ಅಂತೆಲ್ಲ ಹೇಳ್ತಾ ಜೋಡಿಸ್ತಾ ಇದ್ದೆ. ಸರಿ ಈ ಸೀರೆ ನೋಡಿ ಹಿಂಗ್ಹಿಂಗೆ ಅಂತ ಹೇಳ್ತಾ ಇದ್ದೆ . ಈ ಸೀರೆ ಇಡುವಾಗ 'ಇದು ನನಗೆ ಕುಳ್ಳಿಮಾ' ಅಂದ್ಳು ಪುಟ್ಟಿ. ಮಗರಾಯನಿಗೆ ಅದ್ಯಾಕೆ ಈ ಸೀರೆ ಇಷ್ಟಾ ಆಯ್ತೋ ಗೊತ್ತಿಲ್ಲ 'ಲೇ, ಈ ಸೀರೆ ನನಗೆ ಬೇಕು' ಅಂತ ಎತ್ಕೊಂಡ. ಇಬ್ರೂ ಒಂದಷ್ಟು ಹೊತ್ತು ಕಿತ್ತಾಡಿಕೊಂಡ್ರು. ಆಮೇಲೆ ಅವ್ನು ಅದನ್ನ ಎತ್ತಿಕೊಂಡು ಹೋಗಿ ಪ್ಯಾಕ್ ಮಾಡಿ ಅವನ ಬೀರುಲಿ ಭದ್ರ ಮಾಡಿಕೊಂಡ !!
ಮೊನ್ನೆ ಮೊನ್ನೆ ಪುಟ್ಟಿ 'ಮಾ, ನನ್ನ ಮದುವೆಯಲ್ಲಿ ನಾ ಏನ್ ಕೇಳಿದ್ರು ಕಾರ್ತಿ ಕೊಡ್ತಾನೆ/ಕೊಡಿಸ್ತಾನೆ ಅಲ್ವ "? ಅಂದ್ಳು. 'ಹ್ಮ್, ಅವನಿಗೆ affordable ಆಗಿದ್ರೆ ಕೊಡಿಸ್ತಾನೆ ಮಗ, ನಿನಗಲ್ಲದೆ ಇನ್ಯಾರಿಗೆ ಕೊಡಿಸ್ತಾನೆ ಹೇಳು, ಆದರು ಅದೇನ್ ಬೇಕು ಹೇಳಿದ್ರೆ ಅಪ್ಪನೋ, ನಾನೋ ಕೊಡಿಸ್ತೀವೀ ಅಲ್ವ ? ಅವನ ಮೇಲ್ಯಾಕೆ ಕಣ್ಣು" ಅಂದೆ "ಮಾ, ನಿನ್ನ ಮಗನಿಗೇನು ಕಷ್ಟ ಕೊಡಲ್ಲ ಬಿಡು, ಆ ಸೀರೆ ಪ್ಯಾಕ್ ಮಾಡಿ ಬಚ್ಚಿಟ್ಟುಕೊಂಡಿದ್ದಾನಲ್ಲ ಅದನ್ನ ಕಿತ್ಕೋಬೇಕು ಅದ್ಕೆ!" ಅಂದ್ಲು ಮುಖ ಊದಿಸಿಕೊಂಡು..  
ಒಡವೆಗಳಿಗೆ, ಆಸ್ತಿಗೆ ಜಗಳ ಆಡೋ ಹೈಕ್ಳನ್ನ ನೋಡಿದ್ದೀನಿ.. ಉಟ್ಕೊಳ್ದೆ ಇಟ್ಟಿದ್ದ ಹಳೆ ಸೀರೆಗೆ ಈ ಮಟ್ಟಿಗೆ 'ಡೀಲ್' ಮಾಡೋ ಐಕ್ಳನ್ನ ನೋಡಿರ್ಲಿಲ್ಲ ))
ಆ ಸೀರೆ ಅವನ ಹೆಂಡ್ತಿ ಉಟ್ಕೊಳ್ತಾಳೋ ಇಲ್ವೋ, ಇಲ್ಲ ಪುಟ್ಟಿ ಉಟ್ಕೊಳ್ತಾಳೋ ಇಲ್ವೋ ಗೊತ್ತಿಲ್ಲ ....ಆದರೆ Feeling ಸುಂಸುಮ್ನೆ ಮುದ್ಮುದ್ದು ))))

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...