Saturday 3 August 2013

ಮಾದ್ರಿ....

ಧಗಧಗಿಸುವ ಚಿತೆ...
ಚಿತೆಯ ಮುಂದೆ ನಿಂತ ಮನದ ತುಂಬಾ 
ಹಾದುಬಂದ ಬದುಕ ಕವಲುಗಳ ನೆನಪಿನ ಧಾರೆ.... 

ಅಣ್ಣ ಅವನ ವಚನ ಬದ್ದ...
ಹಸ್ತಿನಾಪುರದ ರಾಣಿಯ ಪಟ್ಟ ನಿನಗೆ ಎಂದ ..
ಮನದ ತುಂಬಾ ಹೊಂಗಿರಣ....

ಕುಂತಿ ಒಪ್ಪುವಳೇ...?
ಅವಳು ಅರಮನೆಗೆ ಮಹಾರಾಣಿ ಅಂತೆ....
ನಾನು ಪಾಂಡುವಿಗೆ ಹೆಂಡತಿ ಅಂತೆ...
ಪ್ರತಿಸ್ಪರ್ಧಿಗಳೇ ಇಲ್ಲವಂತೆ ನನಗೆ...

ಎಲ್ಲವಿರುವ ಅರಮನೆ...
ಕುಂತಿ ನಗುತ್ತಲೇ ಬರಮಾಡಿಕೊಂಡಳು...
ತನ್ನವನನ್ನ ನನಗೆ ಧಾರೆ ಎರೆದು ಕೊಟ್ಟಳು...
ತನ್ನವ ಎನ್ನಲು ಅವಳಿಗೆ ಏನಿತ್ತು ಅವನಲ್ಲಿ(!!?)...
ಅವ ಶಾಪಗ್ರಸ್ತ .....
ಶಾಪ ಅವನದು....
ಅನುತಾಪ ನನ್ನ(ಮ್ಮ)ದು...
ಅವನೋ ಉರಿದು ಹೋದ ಕೆಂಡ..
ನಾನೋ ಒಳಗೆ ಉರಿಯುವ ಜ್ವಾಲಾಮುಖಿ...

ಕುಂತಿಯ ಕೃಪೆಯ ಫಲ...
ನಿಯೋಗದ ಬಲ
ಚಿನ್ನದ ಪುತ್ಹಳಿಗಳ ಹೆಡೆದೆ....
ಮಕ್ಕಳ ಚೆನ್ನಾಟದಲ್ಲಿ ಬಯಕೆ ಮರೆತೆ ...

ಸಂಜೆಯಾದೊಡನೆ ಅಶ್ವಿನಿ ದೇವತೆಗಳ ನೆನೆದೇನೆ...???!!!

ಅದೊಂದು ದಿನ ಅದು ನಡೆದೇ ಬಿಟ್ಟಿತು..
ಮಿಲನದ ಮೊದಲೇ ಅವನ ಪ್ರಾಣ ಹೊರಟೆ ಬಿಟ್ಟಿತು...
ಕಣ್ಣಲಿ ಹನಿ ನೀರು ಹುಟ್ಟದ ಮೇಲೆ ಅವನ ಸಾವಿಗೆ ನನ್ನಲ್ಲಿ ನೋವೆಲ್ಲಿಯದು..

ಕುಂತಿಗೋ ಮಕ್ಕಳ ಹೊಣೆಯಂತೆ...
ಅವಳು ಸಹಗಮನೆಯಾರಬಾರದಂತೆ...
ನಾನೇ ಅವನ ಹೃದಯ ರಾಣಿಯಂತೆ.....
ಸಹಗಮನದ ಹೊಣೆ ನನ್ನದಂತೆ...
ಈಗ ಭಯವೆನಿಸುತ್ತಿದೆ...

ಹಣತೆಯ ದೀಪ ಸುಟ್ಟರೆ ಬೆಣ್ಣೆ ಸವರಿದ ಅಮ್ಮನ ನೆನಪು ಮಾಸೇ ಇಲ್ಲದಿರುವಾಗ ..
ಒಡಲ ಬೆಂಕಿಯೇ ಆರದಿರುವಾಗ ...
ದೇಹವ ಬೆಂಕಿಗೆ ಒಡ್ದಬೇಕೇ .....
ಮುದ್ದು ಬೊಮ್ಮಟೆಗಳ ತೊರೆಯಬೇಕೆ...

ಧಗಧಗಿಸುವ ಚಿತೆಯಲ್ಲಿ ......
ಅವನೊಡನೆ ನಾನು...
ಬದುಕಿದ್ದಾಗ ಇರದ ಮಿಲನವ ಸಾವಲ್ಲಿ ಹುಡುಕ ಬೇಕೇ… ಬೇಕೇ…..

ಧಗಧಗಿಸುವ ಚಿತೆ...
ಚಿತೆಯ ಮುಂದೆ ನಿಂತ ಮನದ ತುಂಬಾ ..
ಹಾದುಬಂದ ಬದುಕ ಕವಲುಗಳ ಧಾರೆ....
ಕಣ್ಣ ತುಂಬಾ ಕಂಬನಿಯ ಧಾರೆ....
ಈ ಧಾರೆಗೆ ಚಿತೆ ಆರಬಾರದೆ............

ಇತಿ...
ಮಾದ್ರಿ....

2 comments:

  1. ಸುನೀತಾ....
    ಮಹಾಭಾರತದಲ್ಲಿ ಹಲವಾರು ನೊಂದ ಜೀವಿಗಳಿದ್ದರೂ ಸಹ.... ಕಥೆಯು ಕುಂತಿ, ಪಾಂಡವರು, ದ್ರೌಪದಿ, ಕೃಷ್ಣ-ಬಲರಾಮ, ಧೃತರಾಷ್ಟ್ರ, ಧುರ್ಯೋಧನ ಮುಂತಾದ ಕೆಲವೇ ಕೆಲವು ಪಾತ್ರಗಳ ಸುತ್ತ ಬೆಳೆಯುತ್ತದೆ...
    ಚಲನಚಿತ್ರವೊಂದರ ಪೋಷಕ ನಟ-ನಟಿಯರಂತೆ ಹಲವಾರು ಪಾತ್ರಗಳ ವೇದನೆ, ಸಂವೇದನೆಯತ್ತ ಯಾರೂ ಗಮನ ನೀಡುವದಿಲ್ಲ....

    ಪತಿಯನ್ನು ಕಳೆದುಕೊಂಡು ಸಹಗಮನ ಸಮಯದಿ ಮಾದ್ರಿಯ ಮನೋಗತವನ್ನು ಅತ್ಯಂತ ಆದ್ರವಾಗಿ ಚಿತ್ರಿಸಿದ್ದೀರಿ...
    ಅಭಿನಂದನೆಗಳು.... :)

    ReplyDelete

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...