ಹುಡುಕಲೇಕೆ ಗೆಳೆಯ
ಯಾಕೆ ಹುಡುಕುತ್ತಿ ಗೆಳೆಯ
ಆ ಪುಟ್ಟ ಹುಡುಗಿಯನ್ನು....
ಅವಳೆಂದೋ ಕಳೆದುಹೋಗಿಹಳು ನನ್ನೊಳಗೆ...
ಪುಟ್ಟ ಲಂಗವ ತೊಟ್ಟು
ನಿನ್ನ ಹಿಂದೆ ಮುಂದೆ ಓಡಾಡಿದ ಅವಳು
ಈಗೊಂದು ಮನೆಯ ಹೊತ್ತಗೆಯ ಹೊದಿಕೆ...
ಯಾಕೆ ಹುಡುಕುತ್ತಿ ಗೆಳೆಯ
ಮುದ್ದು ಮೊಗದ ತುಂಟ ಬಾಲೆಯ
ಅವಳ ತುಂಟತನಗಳೆಲ್ಲ ಮುದುಡಿ ಹೋಗಿದೆ ನನ್ನೊಳಗೆ
ಈಗ ಅವಳು
ತುಂಟ ಪೋರರ ದಡ ಸೇರಿಸುತ್ತಿಹ ನಾವಿಕೆ....
ಯಾಕೆ ಹುಡುಕುತ್ತಿ ಗೆಳೆಯ
ರಂಗೋಲಿ ಇಡುತ್ತಿದ್ದ ಆ ಮುಗುದೆಯನ್ನ..
ವರುಷಗಳ ಮಳೆಗೆ ಮುಗ್ದತೆ ಕರಗಿ ಹೋಗಿ
ಈಗವಳು
ಮುದ್ದು ಮಗಳಿಗೆ
ರಂಗವಲ್ಲಿ ಹೇಳಿಕೊಡುವ ಮಾತೃಕೆ ....
ಯಾಕೆ ಹುಡುಕುತ್ತಿ ಗೆಳೆಯ
ಪುಟ್ಟ ಮಾತಿಗೆ ಸಿಟ್ಟಿಗೆದ್ದು
ಕಣ್ಣಲ್ಲಿ ಹನಿ ತುಂಬಿ ನಿಂತು
ಕ್ಷಣದಲ್ಲೇ ಅಳು ಮರೆತು ನಗುತಿದ್ದ ಪೋರಿಯನ್ನ...
ಸಿಟ್ಟಿಗೆ ಕಡಿವಾಣ ಬಿದ್ದು..
ಮಾತೆಲ್ಲ ಮೌನವಾಗಿ
ಓಟ ನೋಟಗಳೆಲ್ಲ ನೆನಪಿನ ಪುಟಗಳ ಸೇರಿ...
ಈಗವಳು
ಒಂದು ಸಂಸಾರದ ದೀಪಿಕೆ.........
ಮತ್ತ್ಯಾಕೆ ಹುಡುಕುತ್ತಿ ಗೆಳೆಯ
ಕಳೆದು ಹೋದವಳನ್ನ ....
ಸಿಕ್ಕಲಾರದವಳನ್ನ .....
ನೆನಪಿನ ಪುಟಗಳಲ್ಲಿ ಅಡಗಿಕೊಂಡವಳನ್ನು ..
ಹುಡುಕಲೇ ಬೇಕೆಂದಾದರೆ
ಒಮ್ಮೆ ನಿನ್ನ ನೀನು ಕೇಳಿಕೋ
"ನಾ ಬಿಟ್ಟು ಹೋದದ್ದೇಕೆ ಅವಳನ್ನು"...........:))))