Tuesday, 28 February 2017

ಸುನೀತ ಹೋಗ್ಬಿಟ್ಟಳಂತೆ
ಛೆ ಹೌದಾ ! ನೆನ್ನೆ ಮಾತಾಡಿಸಿದ್ದೆ .. ಚೆನ್ನಾಗಿದ್ರು , ಏನಾಗಿತ್ತಂತೆ
ಮಲ್ಗಿದ್ ಹಂಗೆ ಹೋಗ್ಬಿಟ್ಟಳಂತೆ
ಛೆ !!!
ಸುನೀತಕ್ಕ ಹೋಗ್ಬಿಟ್ಟಳಂತೆ
ಹೌದಾ ಚೆನ್ನಾಗೇ ಇದ್ಲಲ್ಲ
ಒಂಚೂರು ಅಹಂಕಾರ ಅನ್ನೋದ್ ಬಿಟ್ರೆ ಒಳ್ಳೆವಳೇ ... ಏನೋ ಆಯಸ್ಸು ಅಷ್ಟೇ ಬಿಡಿ!!
ಸುನಿ ಹೋಗ್ಬಿಟ್ಟಳಂತೆ
ಹೌದೇನ್ರೀ ? ಏನ್ ಆಗಿತ್ತೋ ಏನೋ  ಬಿಡಿ ಮುತೈದೆ ಸಾವು ಒಳ್ಳೇದಾಗ್ಲಿ!!!
ನಮ್ ಮಂಜ್ನ್ ಹೆಂಡ್ತಿ ಹೋಗ್ಬಿಟ್ಟಳಂತೆ
ಅದ್ಯಾಕಮ್ಮಿ ಏನಾಗಿತ್ತಂತೆ??  ನಮ್  ಮಂಜ ಏನ್ ಮಾಡ್ತಾನೋ ಕಾಣೆ ಹೆಡ್ತಿ ಅಂದ್ರೆ ಪ್ರಾಣ ಬುಡ್ತಿದ್ದ .!!
ಸುನಿ ಹೋಗ್ಬಿಟ್ಟಳಂತೆ
ಏನ್ ಹೇಳ್ತಾ ಇದ್ದೀರಾ
ನಿಜ , ನಾನೇ ಫೋನ್ ಮಾಡಿ confirm ಮಾಡ್ಕೊಂಡೆ
ಇನ್ನೊಂದ್ ೬-೭ ವರ್ಷ ಮಗಳ ಮದ್ವೆ ಮಾಡೋವರೆಗಾದ್ರೂ ಇದ್ದಿದ್ರೆ ಚೆನ್ನಾಗಿತ್ತು  ತುಂಬಾ ಆಸೆ ಇಟ್ಕೊಂದಿದ್ಲು ಬದುಕಿನ ಮೇಲೆ !!!
ಸುನೀತಾ ಹೋಗ್ಬಿಟ್ಟರಂತೆ
ಯಾರ್ ಹೇಳಿ ಸುನಿತಾ ಅಂದ್ರೆ
ಏ ಅದೇ ಫೇಸ್ಬುಕ್ ಅಲ್ಲಿ ಇದ್ರೂ . ಅದೂ ಇದೂ ಒಂಚೂರು ಬರ್ಕೊಳ್ತಾ ಇದ್ರೂ
ಓಹ್  ಹೌದಾ ನನ್ ಲಿಸ್ಟ್ ಅಲ್ಲಿ ಇರ್ಲಿಲ್ಲ ಬಿಡಿ !!
ಸುನಿ ಹೋಗ್ಬಿಟ್ಟಳಂತೆ
ಹೆಜ್ಜೆಗಳನ್ನ ಉಳಿಸಿಯೂ ಉಳಿಸದಂತೆ  ಹೋಗ್ಬಿಟ್ಟಳಂತೆ
ಹುಟ್ಟಿದವರು ಇಲ್ಲೇ ಇರೋಕಾಗ್ತದ ಬಿಡಿ ....!!!!!

Tuesday, 14 February 2017

ಈ ಫೇಸ್ಬುಕ್ ಗೆ ಬಂದ ಹೊಸದರಲ್ಲಿ ಸುಮಾರು ಒಂದು ವರ್ಷ ನನ್ನ ಚಿತ್ರ ಹಾಕಿರಲಿಲ್ಲ . ನನ್ನ ಬಗ್ಗೆ ನನಗೆ ಎಷ್ಟೇ ಆತ್ಮ ವಿಶ್ವಾಸವಿದ್ದರೂ , ವೃತ್ತಿ ಪ್ರವೃತ್ತಿಯ ಬಗ್ಗೆ ಹೆಮ್ಮೆ ಇದ್ದರೂ ನನ್ನ ಕತ್ತಿನಲ್ಲಿರೋ ಆ ಕಲೆಯ ಬಗ್ಗೆ ಒಂದು ಕಾಂಪ್ಲೆಕ್ಸ್ ಇತ್ತು . ಮನೆಯವರೆಲ್ಲ, ನನ್ನವರೆಲ್ಲಾ, ನನ್ನ ಗೆಳೆಯ ಗೆಳತಿಯರೆಲ್ಲ, ನನ್ನ ಮಕ್ಕಳೆಲ್ಲಾ ನನ್ನನ್ನ accept ಮಾಡಿಕೊಂಡಿದ್ದರೂ ಈ ಫೇಸ್ಬುಕ್ ಅನ್ನೋ ಮಾಯಾಪ್ರಪಂಚ ನನ್ನನ್ನ ಹೇಗೆ ಕಾಣುತ್ತದೋ ಅನ್ನುವ "ಭಯ"ವಿತ್ತು . ಬಂದ ಹೊಸದರಲ್ಲಿ ಗೆಳತಿಯೊಬ್ಬಳು ನಿನ್ನ ಚಿತ್ರ ಕಳಿಸು ಆಗ್ಲೇ ನೀನು ಹುಡುಗಿ ಅಂತ ನಂಬೋದು ನಿನ್ನ ಬಳಿ ಏನಾದ್ರು ಹಂಚಿಕೊಳ್ಳೋದು ಅಂದಾಗ ಒಂದ್ ತರ ಅನಿಸಿತ್ತು ...ಕಡೆಗೊಂದು ದಿನ ನನ್ನನ್ನ ನಾನಿರುವ ಹಾಗೆ accept ಮಾಡಿಕೊಳ್ಳುವವರಿದ್ರೆ ಗೆಳೆತನ ಉಳಿಯಲಿ.. ಇಲ್ಲ ಅಂದ್ರೆ ಅವರರವರ ಭಾವಕ್ಕೆ ಸೇರಿದ್ದು ಅಂತ ಚಿತ್ರ ಹಾಕಿದೆ...
ಪ್ರಾಪಂಚಿಕವಾಗಿ ತುಂಬಾ ಕಡಿಮೆ ಜನ ಸ೦ಪರ್ಕ ಹೊಂದಿದ್ದ ನನಗೆ ಈ ಫೇಸ್ಬುಕ್ ಒಂದಷ್ಟು ಪ್ರಪಂಚ ಜ್ಞಾನ ಕಲಿಸಿತು .. ರೂಪ, ಅಂತಸ್ತು, ವಯಸ್ಸು, ಉದ್ಯೋಗಗಳ ಎಲ್ಲೇ ಮೀರಿ ಪ್ರೀತಿ ಗೆಳೆತನ ನೀಡಿದ ಫೇಸ್ಬುಕ್ ಬಗ್ಗೆ ಧನ್ಯತೆ ಇದೆ... ಗೆಳೆಯ ಗೆಳತಿಯರ ಬಗ್ಗೆ ಪ್ರೀತಿ ಇದೆ ಗೌರವ ಇದೆ :))) ಅವರೂ ಕೂಡ ಅಷ್ಟೇ ವಿಶ್ವಾಸ ತೋರಿದ್ದಾರೆ ಪ್ರೀತಿಸಿದ್ದಾರೆ ...
ಗೆಳತಿಯೊಬ್ಬರು ನಿಮ್ಮ ಕತ್ತಿನಲ್ಲಿ ಕಲೆ ಕಾಣುವಂತೆ ಚಿತ್ರ ಹಾಕಬೇಡಿ ಅಂದ್ರು... ಅಂದಾಗಿದ್ರೆ ಏನೋ ಗೊತ್ತಿಲ್ಲ ... ಇಂದು ನಕ್ಕುಬಿಟ್ಟೆ ....
And I smile as ever....I am proud of myself for winning all what life gave me :)))
ಆ ಮರದ ಕೆಳಗಿನ 
ಆ ದೇವರ ನೋಡಿದೆಯ ಗೆಳೆಯ 
ಅದ್ಯಾರ ಮನೆಯಲ್ಲಿ 
ಅದೆಷ್ಟು ದಿನ 
ಅದೆಷ್ಟು ವಿಜೃಂಭಣೆಯಿಂದ 
ಪೂಜೆಗೊಳಗಾಗಿದ್ದನೋ
ಅದೆಷ್ಟು ವರ ನೀಡಿದ್ದನೋ
ಅದೆಷ್ಟು ನೈವೇದ್ಯ ತಿಂದಿದ್ದನೋ ಏನೋ
ಭಿನ್ನಗೊಂಡಿದ್ದಾನೆ ಎಂದು
ತಂದು ಇಲ್ಲಿ ಬಿಟ್ಟಿದ್ದಾರೆ ನೋಡು
ನಾವು ಜೋಪಾನವಾಗಿರಬೇಕೆನಿಸುತ್ತಿದೆ ಗೆಳೆಯ
ಭಿನ್ನವಾಗಿ ಬಿಟ್ರೆ
ನಮ್ಮ ಗತಿಯೂ ದೇವರದೇ ಗತಿ ಅಲ್ವೇ :)))))))

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...