Wednesday, 1 February 2017

ಮನೆ ಅಂದ ಮೇಲೆ ಮಾತು ಬರುತ್ತೆ ಹೋಗುತ್ತೆ . ಸಣ್ಣ ಮಾತುಗಳು ಅತ್ತೆ ಸೊಸೆಯರ ನಡುವೆ ಇದ್ದೆ ಇರುತ್ತದೆ ..ಅದಕ್ಕೆ ನಮ್ಮ ಮನೆಯೂ ಹೊರತಲ್ಲ...ಬಹಳಷ್ಟು ಸಾರಿ ನಾವು ಮೂರೂ ಜನ ಸೊಸೆಯಂದಿರು ಅಯ್ಯೋ ಅವರ ಬುದ್ದಿ ಗೊತ್ತಲ್ಲ ಮತ್ತ್ಯಾಕೆ ಹೆಚ್ಚು ತಲೆ ಕೆಡಿಸಿಕೊಳ್ಳೋದು ಅಂತ ಸುಮ್ಮನಾಗಿ ಬಿಡ್ತೀವಿ , ಆದ್ರೂ ಕೆಲವೊಮ್ಮೆ ಮನಸ್ಸಿನ ಪರಿಸ್ಥಿತಿಗೆ ಅನುಗುಣವಾಗಿ ಕೆಲವೊಮ್ಮೆ ವಯಸ್ಸಿಗೆ ಬಂದ ಮಕ್ಕಳಿರುವ ನಾವು ಅನಿಸಿಕೊಳ್ಳೋದಾ ಅನ್ನೋ ಸಿಟ್ಟಿಗೆ ಏನಾದ್ರು ಅಂದು ಬಿಡೋದು ಉಂಟು . ಮೊನ್ನೆ ಅತ್ತೆ ಬಂದಿದ್ರು ಏನೋ ಸಣ್ಣ ಪುಟ್ಟ ಮಾತುಗಳು ಬಂದ್ವು ಅಲ್ಲಿ ಅಂತ ಬೇಸರಗೊಂಡಿದ್ದರು.. ಅವರಮ್ಮನಿಗೆ ಒಂದಷ್ಟು ಸಮಾಧಾನ ಬುದ್ದಿ ಹೇಳಿದ ಮೇಲೆ , ಅತ್ತೆ ಮಲಗಲು ಹೋದ ಮೇಲೆ ಮಂಜು ಹೇಳಿದ್ರು "ಅವ್ರ ಕಥೆ ಗೊತ್ತಲ್ವ ಸುನಿ ನಿನಗೆ.. ೨೫ ವರ್ಷದಿಂದ ನೋಡ್ತಾನೆ ಬಂದಿದ್ದೀಯ, ನಿಮ್ಮ ಮೂರು ಜನರ(ವಾರಗಿತ್ತಿಯರು) ಬಗ್ಗೆ ಒಂದ್ ಮಾತು ಇಲ್ಲ .. ನಮಗೆಲ್ಲ ತಾಯಂದಿರು ನೀವು...'
ಹಾಗೆ ಮಾತಾಡ್ತಾ ಮಾತಾಡ್ತಾ .... 'ದಿನಾ ಅದೇ ಬಾವಿಯಲ್ಲಿ ನೀರ್ ತೆಗಿತಾ ಇದ್ರೆ ಬಾವಿಯ ಆಳ ಗೊತ್ತಿರುತ್ತದೆ ಕಣಮ್ಮ! ಹಗ್ಗ ಇಷ್ಟಕ್ಕೆ ನಿಂತರೆ ಬಿಂದಿಗೆ ಮುಳುಗುತ್ತೆ ,ನೀರು ಸಿಗ್ತದೆ ಅಂತ ! ಹೊಸದಾಗಿ ಬಾವಿ ಹತ್ರ ಬಂದವ್ರಿಗೆ ನೀರಿನ ಆಳ ತಿಳಿಯೋದಿಲ್ಲ ! ನೀನೂ ತಿಳ್ಕೋ ಬದುಕೋದು ಹೇಗೆ ಅಂತ !! ನಿನ್ ಮಕ್ಕಳು ನಿನ್ನನ್ನ ಹುಟ್ಟಿದಾಗಿಂದ ನೋಡಿರ್ತಾರೆ. ನೀ ಬೇಸರಗೊಂಡು ಮಾತಾಡಿದ್ರೆ ನಿನ್ ಮಕ್ಕಳಿಗೆ ನಮ್ಮಮ್ಮ ಹಿಂಗೆ ಅಂತ ಗೊತ್ತಿರುತ್ತೆ ಆದ್ರೆ ಸೊಸೆ ಅಥ್ವ ಅಳಿಯ ನಿನ್ನ ಆಗಷ್ಟೇ ನೋಡ್ತಾ ಇರ್ತಾರೆ, ಅವ್ರು ಬೇರೆ ಕಡೆಯಿಂದ ಬಂದು ನಿನ್ನ ಮನೆಗೆ ಸೇರ್ತಾರೆ... ಮಾತಾಡುವಾಗ ಸ್ವಲ್ಪ ತಡೆದು ಮಾತನಾಡು.. ಅಷ್ಟರಲ್ಲಿ ನಿನಗೇ ಗೊತ್ತಾಗಿರುತ್ತೆ ಆ ಮಾತು ಅಗತ್ಯನಾ ಇಲ್ವಾ ಅಂತ .. 'ನನ್ನ' ಮನೆ ಇದು 'ಹೀಗೆ' ಇರಬೇಕು ಅಂತ ಅನ್ಕೊಬೇಡ..!!! ನಿನ್ನ ಕಾಲ, ನಿನ್ನ ಬದುಕು, ನೀ ಬದುಕ ನೋಡೋ ರೀತಿಯಲ್ಲೇ ಎಲ್ಲಾರೂ ನೋಡಬೇಕು ಅಂದಾಗಲೇ ಇದೆಲ್ಲ ಬರೋದು.... ಅಂತೆಲ್ಲ ಹೇಳ್ತಾ ಹೋದ್ರು !!! "ಅಯ್ಯೋ ಶಿವ, ಒಂದ್ ಪುಸ್ತಕ ಓದೋದಿಲ್ಲ(ಓದಿಲ್ಲ) ಆದ್ರೂ ಈ ಪಾಟಿ ಬುದ್ದಿ ಎಲ್ಲಿರುತ್ತೋ ಕಾಣೆ'!!!
ಮನಸ್ಸು ಒಮ್ಮೆಮ್ಮೆ ಮಳೆಯ ನಂತರ ಮೂಡೋ ಕಾಮನಬಿಲ್ಲಿನ ಚಿತ್ತಾರದ ಬಾನಿನಂತೆ... ಪಾಠ ಕಲಿಯೊದಕ್ಕೆ ಪುಸ್ತಕವೇಕೆ ಇಂತಹ ಜೀವದ ಗೆಳೆಯನಿದ್ದರೆ ಅನ್ನೋ ಹಾಗೆ :))))

Monday, 14 November 2016

ಈವತ್ತು ಪೂರ ಖಾನದಾನ್ ಒಟ್ಟಿಗೆ ಸೇರೊದು ಅಂತ ಪ್ಲಾನ್ ಆಗಿತ್ತು . ಬೆಳಿಗ್ಗೆ ಬೆಳಿಗ್ಗೆ ಅತ್ತೆಗೆ ವಾರಗಿತ್ತಿಯರಿಗೆ ಕರೆ ಮಾಡಿ ಮಂಜು ಬರ್ತಾರೆ ಕರ್ಕೊಂಡ್ ಹೋಗೋಕೆ ರೆಡಿ ಆಗಿರಿ ಅಂತ ಹೇಳಿ ಮುಗಿಸಿದೆ . ಇದ್ದಬದ್ದ ಆಪೀಸ್ ಕೆಲಸ ಬೇಗ ಮುಗಿಸೋಣ ಅದಕ್ಕೆ ಮೊದಲು ಮಂಜುಗೆ ಕರೆ ಮಾಡಿಬಿಡೋಣ ಅಂತ ಮಾಡಿದೆ. ಮೊಬೈಲ್ ಅಲ್ಲಿ ಇರೋ ಅಂಕಿ, ಇನ್ನೇನು ನಂಬರ್ ಒತ್ತೊದಲ್ಲ ಏನಲ್ಲ ಅಂತ ಎಂದಿನಂತೆ ಕರೆ ಕೊಟ್ಟೆ. ಒಂದಷ್ಟು ರಿಂಗ್ ಆದ ನಂತರ 'ಹಲೋ ಹೇಳಿ' ಅಂತ ಹೇಳ್ತು ಒಂದು ಹೆಣ್ಣು ದನಿ . ಬೆಚ್ಚಿ ಬಿದ್ದ ಹಾಗೆ ಆಯ್ತು . ಒಂದು ಕ್ಷಣ ಏನೇನೋ ಯೋಚನೆ, ಯಾಕೆ ಏನಾಯ್ತು ಮಂಜುಗೆ ಅಂತೆಲ್ಲ.. ಮತ್ತೆ 'ಮಂಜು' ಅಂದೆ . 'ಯಾರು ಹೇಳಿ' ಅಂದ್ರು . ನಾನು ಸಾರೀ ಮಾ , ರಾಂಗ್ ನಂಬರ್ ಅನಿಸುತ್ತೆ ಸಾರಿ ' ಅಂತ ಕಟ್ ಮಾಡಿದೆ. ಎಲ್ಲೋ ಏನೋ ತಪ್ಪಾಗಿ ರಾಂಗ್ ನಂಬರ್ಗೆ ಹೋಗಿದೆ ಅಂತ ಹೇಳಿ ಮತ್ತೆ ಕರೆ ಮಾಡಿದೆ . ಮತ್ತೆ ಅದೇ ಹೆಣ್ಣು ದನಿ !!. 'ಏನ್ ಹೇಳಿ" ಅಂದ್ರು . ಯಾಕೋ ಸರಿ ಇಲ್ಲ ಅಂತ ಮತ್ತೆ ಕ್ಷಮೆ ಕೇಳಿ ಲ್ಯಾಂಡ್ಲೈನ್ ಇಂದ ಕರೆ ಮಾಡಿದೆ . ಮತ್ತೆ ಆ ಸಂಖ್ಯೆಗೇ ಹೋಗಬೇಕೆ ... ಅದೇ ಹೆಣ್ಣು ಮಗಳ ದನಿ... ನಾ ಮಾತಾಡಲೇ ಇಲ್ಲ ಮಾತಾಡಿದ್ರೆ ಎಲ್ಲಿ ಏನು ಆಟ ಆಡ್ತಾ ಇದ್ದಾರೆ ಅಂತ ತಿಳಿತಾರೋ ಅಂತ ಹಾಗೆ ಫೋನ್ ಕಟ್ ಮಾಡಿ ಸುಮ್ಮನಾಗಿಬಿಟ್ಟೆ . ಮಂಜುನೆ ಮಾಡಿದಾಗ ಮಾತಾಡಿದ್ರೆ ಆಯ್ತು ಬಿಡು ಅಂತ . ....
ಎಷ್ಟೋ ಸಾರಿ ನನಗೇ ಹಾಗೆ ಕೆಲವೊಮ್ಮೆ ಕರೆ ಬಂದಾಗ, ಅದೆಷ್ಟ್ ಸಾರಿ ಬೈಕೊಂಡಿದ್ದೆ . ಯಾವೋ ತರಲೆಗಳು ಬೇಕ್ಬೇಕಂತ ತಲೆ ತಿಂತಾವೆ ಅಂತೆಲ್ಲ ಬೈಕೊಳ್ತಾ ಇದ್ದೆ .. ಅಲ್ಲಾ , ಅಲ್ಪಸ್ವಲ್ಪ ತಿಳಿದಿರೋ ನನ್ನಿಂದ ಹಿಂಗೆಲ್ಲ ತಪ್ಪಾಗುತ್ತೆ ಅಂದ್ರೆ , ಪಾಪ ಏನೂ ತಿಳಿದೇ ಏನೋ ಅರ್ಜೆಂಟ್ ಅಂತ ಕರೆ ಮಾಡಿ ನನ್ನ ನಂಬರ್ಗೆ ಬಂದಿರಬಹುದೆಂದು ಅಂದುಕೊಳ್ಳದೆ 'ನೋಡ್ಕೊಂಡ್ ಫೋನ್ ಮಾಡೋದಲ್ವ' ಅಂತ ರೇಗಿದ್ದು ಕೂಡ ಇದೆ !!! ಅನುಭವಿಸಿದ್ರೆ ಮಾತ್ರ ಅರಿವಾಗೋದು ಅನ್ನೋದು ನಿಜವೇನೋ .....!!!!.

Tuesday, 25 October 2016

ಲಕ್ಷ್ಮಿ ತನ್ನ ಪೂಜೆಯಿಂದ ತುಂಬಾ ಪ್ರಸನ್ನಗೊಂಡಿದ್ದಳು. ಜೊತೆಗೆ ಒಂದಷ್ಟು ಅಹಂ, ಜಂಬ ಕೂಡ ... 
ಗಂಡನಿಗೆ ಹೇಳಿದ್ಳು 'ನೋಡಿದ್ರಾ, ನಾ ಅಂದ್ರೆ ಹೆಂಗೆ, ನಾನು ಅಂದ್ರೆ ಬೇಡ ಅನ್ನೋರೇ ಇಲ್ಲ, ಪೂಜೆ, ಸೇವೆ, ನೈವೇದ್ಯ ಎಲ್ಲಾ ನೋಡಿದ್ರಾ? ದೇವಾನುದೇವತೆಗಳಲ್ಲಿ ನಾನೇ ಶ್ರೇಷ್ಠಳು!' 
ವಿಷ್ಣು ನಕ್ಕ .. 
'ಅದ್ಯಾಕೆ ಆ ನಗು? ನನ್ನ ಮಾತಲ್ಲಿ ನಂಬಿಕೆ ಇಲ್ವಾ ?ಅಲ್ಲಿ ನೋಡಿ ಭೂಮಿಯಲ್ಲಿ' ಅಂದ್ಳು 
ಅವಳು ಹೇಳಿದ್ದು ಯಾವುದು ಸುಳ್ಳಿರಲಿಲ್ಲ . ಭೂಮಿ ತುಂಬಾ ಅವಳಿಗಾಗಿ ನೈವೇದ್ಯ, ಹರಕೆ, ವೈಭವ ಓಹ್ ... ಅವಳನ್ನ ಬೇಡ ಎನ್ನುವವರೇ ಇಲ್ಲ .. ವಿಷ್ಣು ಕೂಡ ಹೆಂಡತಿಯ ಕಡೆ ಅಭಿಮಾನದಿಂದ ನೋಡಿದ . 
ಆದ್ರೂ ಆ ಅಹಂ...
ಹೆಂಡತಿಗೆ ಅಲ್ಲೊಂದು ಕಡೆ ನೋಡಲು ಹೇಳಿದ . ಅಲ್ಲೊಬ್ಬ ವ್ಯಕ್ತಿ ಸತ್ತಿದ್ದ.. "ಇವನಿಗೂ ನಿನ್ನ ಅಗತ್ಯ ಇದೆಯೇ ಪ್ರಿಯೆ ?" ಎಂದ
ಲಕ್ಷ್ಮಿ ಒಂದು ಕ್ಷಣ ವಿಚಲಿತಳಾದಳು .. ಮತ್ತೆ ಸ್ತಬ್ದಳಾದಳು ...
"ನಾನು" ಇರೋವರೆಗೂ ಮಾತ್ರ ನಿನ್ನ ಅಗತ್ಯ ಲಕ್ಷ್ಮಿ .. 'ನಾನು' ಅಂದ್ರೆ ಒಳಗಿನ ಉಸಿರು , 'ನಾನು' ಅಂದ್ರೆ ಜೀವಾತ್ಮ ........ ಮತ್ತೆ 'ನಾನು' ಅಂದ್ರೆ ಸ್ವಾರ್ಥ ಕೂಡ!!ಅಂದ .
ನೆನ್ನೆ ಮನೆಗೆ ಬಂದ ಹಿರಿಯರೊಬ್ಬರು ಹೇಳಿದ ಕಥೆ ...
ಹಂಚಿಕೊಳ್ಳಬೇಕು ಅನಿಸ್ತು

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...