Monday, 29 July 2013

ಅಮ್ಮಾ .......... 


ಅಲ್ಲೇ ಒಳಗೆ
ಅವಳ ಮಮತೆಯ
ಪ್ರೀತಿಯ ಗರ್ಭ ದ್ರವದೊಳಗೆ
ಜಗವ ನೋಡುವ
ಅವಳ ನೋಡುವ
ಭರವಸೆಯೊಡನೆ...
ಆಶಿಸಿದೆ
ನಾನು ಬೇಗ ಹೊರಬರಬೇಕೆಂದು ...
ಅವಳ ನೋಡಬೇಕೆಂದು..

ಅವಳ ಲಾಲಿಗಳು
ಆಗೊಮ್ಮೆ ಈಗೊಮ್ಮೆ
ಕಿವಿಗೆ ಬೀಳುವಾಗ...
ಅವಳ ಬಳೆಗಳ ಸದ್ದು ಕೇಳಿದಾಗ..
ಅವಳ ಕಾಲ್ಗ್ಗೆಜ್ಜೆಗಳ ದನಿಗೆ ನನ್ನ ಎದೆ ಹಾಡಿದಾಗ...
ಆಶಿಸಿದೆ
ನಾನು ಬೇಗ ಹೊರಬರಬೇಕೆಂದು ..
ಅವಳ ನೋಡಬೇಕೆಂದು..

ಅವಳ ಕೈಗಳು
ನನ್ನ ಮೇಲೆ ಹರಿದಾಡಿದಾಗ...
ಅವಳ ಉದರದೊಳಗಿನ ನನ್ನ ಮಿಡಿತಕ್ಕೆ ಅವಳು ಹಿಗ್ಗಿದಾಗ,..
ಅವಳ ಪ್ರೀತಿಯ ಉಸಿರು ನನ್ನೊಳಗೆ ಹರಿದಾಡಿದಾಗ...
ಆಶಿಸಿದೆ
ನಾನು ಬೇಗ ಹೊರಬರಬೇಕೆಂದು...
ಅವಳ ನೋಡಬೇಕೆಂದು....

ದುಗುಡದ ದನಿಗಳು ಕೇಳಿದಾಗ..
ಪಿಸುನುಡಿಗಳಾಗಿ ಬದಲಾದಾಗ
ಅವಳ ಬಿಕ್ಕಳಿಕೆಗೆ ನನ್ನುದರ ನಡುಗಿದಾಗ..
ಅವಳ ಕಣ್ಣೀರು ನನ್ನನ್ನು ಒಡಲೊಳಗೆ ತೊಯ್ಸಿದಾಗ...
ಕಣ್ಣೊರೆಸುವ ಆಸೆಯಾಗಿ..
ಆಶಿಸಿದೆ
ನಾನು ಬೇಗ ಹೊರಬರಬೇಕೆಂದು..
ಅವಳ ನೋಡಬೇಕೆಂದು..

ನನಗೆ 'ಕಳೆದುಕೊಳ್ಳೋ' ಮನಸಿಲ್ಲ..
ಎಂದೇನೋ ಕೇಳಿದಾಗ..
ಅವಳ ಅಳುವಿಗೆ ಕಾರಣ ನಾನೇ ಎಂದರಿತಾಗ...
ಅವಳು ನನ್ನ ಹೊರಹಾಕುತ್ತಾಳೆ ಎನಿಸಿದಾಗ...
ನನ್ನ ಕಣ್ಣು ತುಂಬಿ
ನನಗು ನಿನ್ನ ಬಿಡಲು ಇಷ್ಟವಿಲ್ಲ ನನ್ನ ಈಗಲೇ ಹೊರಹಾಕ ಬೇಡಮ್ಮ ಎಂದಾಗ...
ಮೊದಲ ಬಾರಿಗೆ .....
ಆಶಿಸಿದೆ
ನಾನು ಚಿಗುರಲೇ ಬಾರದದಿತ್ತೆಂದು..!!!!!!!!

(ಇದು ಒಂದು ಭ್ರೂಣದ ವ್ಯಥೆ.. )

'ತೇನ ವಿನಃ ಮಾಧವಾ'


'ತೇನ ವಿನಃ ಮಾಧವಾ' ಎಂದಳು ರಾಧೆ....
ರಾಧೆಯ ಕೊರಳಿಗೆ ಕೃಷ್ಣನ ಮುರಳಿ ಮಾರ್ದನಿಸಿತು ............
ಗೋಕುಲ ಬಿಟ್ಟು ಹೊರಟ ಕೃಷ್ಣನ ಬೀಳ್ಕೊಡಲು ಇಡಿ ನಂದನವೇ ಕಣ್ತುಂಬಿ ನಿಂತಿತ್ತು..... 

ಎಲ್ಲರ ನಡುವೆಯೂ 
ಕಣ್ಣಲ್ಲೇ ಬೆರೆತ ರಾಧಾಮಾಧವರ 
ಕಣ್ಣುಗಳಲ್ಲಿ ಕಂಡೂ ಕಾಣದ ಮಿಂಚು...
ತುಟಿಗಳಲ್ಲಿ ಇದ್ದೂ ಇರದ ನಗು .....
ಮನದ ಮೂಲೆಯಲ್ಲಿ ನೆನಪುಗಳ ಯಮುನೆ.... 
ನೆನಪು ಮುಗಿಯಲಿಲ್ಲ....
ಕಂಬನಿ ಆರಲಿಲ್ಲ....
ಅಂತಿಮ ಮಿಲನದ ಅಂತಿಮ ವಿದಾಯದ ......

ಏನು ಹೇಳದೆ ಎಲ್ಲ ಹೇಳಿದ ಕೃಷ್ಣ ಅವನ ದಾರಿ ಹಿಡಿದು ಹೊರಟೇಬಿಟ್ಟ ...
ಏನು ಕೇಳದೆ ಎಲ್ಲ ತಿಳಿದ ರಾಧೆ ಮಧುವನದಲ್ಲಿ ಉಳಿದು ಹೋದಳು .....
ಅವನ ಪ್ರೇಮದ ಕಣ್ಣೀರಿನ ಒಡತಿಯಾಗಿ ....
ಚಿರಪ್ರೇಮಿಯಾಗಿ....
ರಾಧೆಯಾಗಿ....

ಮತ್ತೆಂದೂ ಸಿಗಲೇ ಇಲ್ಲ
ಕೃಷ್ಣ ರಾಧೆಗೆ
ಮತ್ತೆಂದೂ ವಿದಾಯವಿರಲಿಲ್ಲ
ರಾಧೆಮುರಳಿಯ ರ ಪ್ರೀತಿಗೆ..:)))
ಬಹಳ ದಿನಗಳ ನಂತರ ಬ್ಲಾಗ್  ಕಡೆ ಮತ್ತೆ ಪಯಣ ....

ಹೀಗೊಂದು ಕಥೆ...ಕತೆಯಾಗದ ಕಥೆ ..


ಪ್ರಾಯಶ ೨೦ ವರ್ಷಗಳ ನಂತರ ಅಲ್ಲವೇ ನೀನು ಕರೆ ಮಾಡಿದ್ದು....."ಹಾಯ್" ಅಂದ ನಿನ್ನ ದನಿ ಸಂತಸದ ಅಲೆ ಎಬ್ಬಿಸಿದ್ದು ಸುಳ್ಳಲ್ಲ...ಭೂಮಿ ದುಂಡು ಅಲ್ಲವೇ ಎನಿಸಿತ್ತು...
ಮತ್ತೆಲ್ಲ computer ಯುಗಕ್ಕೆ ತಕ್ಕ ಹಾಗೆ ನಡೆದು ಹೋಗಿತ್ತು.....ಪ್ರತಿದಿನ messageಗಳ ವಿನಿಮಯ...ದಿನಕ್ಕೊಂದು ಫೋನ್ ಕರೆ......'sweet nothings".....ಅದೇನು ಮಾತಾಡಿಕೊಂಡೆವೋ...ಎಷ್ಟೆಲ್ಲಾ ಬ್ಯುಸಿ ಇದ್ದರು ಅದೇನು ಹಂಚಿಕೊಂಡೆವೋ ....ಸಮಯ ಹೊಂದಿಸಿ ಮಾತಾಡಲು ಎಷ್ಟೆಲ್ಲಾ ಕಸರತ್ತು ನಡೆಸಿದೆವೋ......ಎಲ್ಲವು ಸುಂದರ...ಬಹುಷಃ ಪ್ರೇಮಿಗಳು ಹೀಗೆ ಕಾತರಿಸಿರಲಾರರು ನಮ್ಮ ಹಾಗೆ ಮಾತಾನಾಡಲು....ನಿನ್ನ ಸಂಸಾರವ ನೀ ಪ್ರೀತಿಸಿದಷ್ಟು .......ನನ್ನ ಗಂಡ ಮಕ್ಕಳ ನಾ ಪ್ರೀತಿಸುವಷ್ಟು ...ಯಾರು ಪ್ರೀತಿಸಲಾರರೆನೋ .. ...ಆದರೂ...ನಮ್ಮಿಬ್ಬರದು ಅದೆಲ್ಲವ ಮೀರಿ ಬೆಳೆದ ಸ್ನೇಹ...ಪ್ರೀತಿ...ಪೂಜೆ...ಅರಳಿ ನಗುವ ಒಲುಮೆ...ಸಾಂಗತ್ಯ ಅಗತ್ಯ ಆಗದಂತೆ ....ಗೆಳೆತನ ಹೊರೆಯಾಗದಂತೆ.... ಮನಸಾಕ್ಷಿಗೆ ಉರುಳಾಗದಂತೆ .......... ಒಲವು ದೈಹಿಕವಾಗದೆ ದೈವಿಕವಾಗೆ ಉಳಿಯಲು ನಾವಿಬ್ಬರು ಬೇಟಿಯಾಗಲೇಬಾರದೆಂದು ನಿರ್ಧರಿಸಿಬಿಟ್ಟೆವಲ್ಲವೇ ...ನಿಜ ಗೆಳೆಯ...ಅರಳಿ ನಗುವ ಗೆಳೆತನ ಮುದುಡದೆ ಇರಲು....ನಿರ್ಮಲವಾಗಿ ಹರಿಯುತ್ತಿರುವ ನಿನ್ನ ನನ್ನ "ಬದುಕ ನದಿ " ..ಕದಡದಂತೆ ಇರಲು .....ಆ ನಿರ್ಧಾರದ ಅಗತ್ಯವಿತ್ತು.......
ನೆನಪಿದೆಯೇ ಗೆಳೆಯ...ಕೊನೆಯ ಬಾರಿ ನೀ ನನ್ನ ಅಂಗಳದಲ್ಲಿ ಬೇಟಿಯಾಗಿದ್ದು.೨೦ ವರ್ಷದ ಹಿಂದೆ.....!!!!..ಮಹಡಿಯ ಮೆಟ್ಟಿಲ ಮೊದಲ ಮೆಟ್ಟಿಲ ಬಳಿ ಅಲ್ಲವೇ ನಾವು ಮಾತನಾಡಿದ್ದು...ನನ್ನ ಕಾಲ ಬೆರಳು ಮೆಟ್ಟಿಲ ಮೇಲೆ ಬರೆದ ಚಿತ್ರಕ್ಕೆ ನೀನು ನಕ್ಕು ಬಿಟ್ಟೆದ್ದೆ ಅಲ್ಲವೇ ಗೆಳೆಯ....ಇಂದು ಅದೇ ಮೆಟ್ಟಿಲ ಮೇಲೆ ಕುಳಿತು ನಿನ್ನ ನಗೆಯ ನೆನಪಿಗೆ ತಂದುಕೊಂಡೆ .......ಇಷ್ಟು ಸಾಕು ಗೆಳೆಯ ಬದುಕಿಗೆ...ಎಲ್ಲೋ ನೀನು ನಗುವೇ.....ನಿನ್ನ ಇರುವಿಕೆ...ನಿನ್ನ ಒಲವಿದೆ ಬಲವಿದೆ ಎಂಬ ಭಾವ ಸಾಕು...ಮತ್ತೆ ನನಗೂ ಗೊತ್ತು...ನೀನು ಅದೇ ಭಾವದಿ ಬದುಕುವೆ ಎಂದು....ಬದುಕು ಎಷ್ಟು ಸುಂದರ ಅಲವೇ....ನೀನಲ್ಲಿ ನಾನಿಲ್ಲಿ...ನಮ್ಮವರೊಂದಿಗೆ...ನಮ್ಮನ್ನು ಪ್ರೀತಿಸುವವರೊಂದಿಗೆ...ನಾವು ಪ್ರೀತಿಸುತ್ತ...........ನಮ್ಮ ನಮ್ಮ ಪರಿಧಿಯಲ್ಲಿ...:))


ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...